‘ಈ ಟಿವಿ’ ಒಂದು ಕಾಲಕ್ಕೆ ಕನ್ನಡದ ಸಾಹಿತ್ಯಾಸಕ್ತ ಸರಳ ಸಜ್ಜನರ ಆಯ್ಕೆಯಾಗಿತ್ತು. ಅದರಲ್ಲಿ ಬರುವ ಧಾರಾವಾಹಿಗಳು ಸಹ ಅಷ್ಟೇ ಅನನ್ಯ. ಅಲ್ಲಿ ಅತೀ ಎನಿಸುವ ಉದ್ಗಾರಗಳಿರಲಿಲ್ಲ. ‘ಈ ಟೀವಿ’ಯ ನಂತರದ ಕಾಲಘಟ್ಟದಲ್ಲಿ ಬಂದ ಧಾರಾವಾಹಿಗಳಲ್ಲಿ ಆ ಗುಣಮಟ್ಟವಿರಲಿಲ್ಲ ಎಂಬುದು ಬೇರೆಯ ಮಾತು. ಮುಕ್ತ, ಮನ್ವಂತರ, ಮೂಡಲಮನೆ, ಗೃಹಭಂಗ ಇಂಥ ಹಲವು ಧಾರಾವಾಹಿಗಳು ಬಂದ ಕಾಲದಲ್ಲಿ ಸದಭಿರುಚಿಯ ಪ್ರೇಕ್ಷಕರಿಗೆ ಇಷ್ಟವಾಗುತ್ತಾ ಹೋದವು. ನಿರ್ದೇಶಕರು ಕೂಡಾ ಆ್ಯಕ್ಷನ್ ಕಟ್ ಹೇಳುವುದಕ್ಕಷ್ಟೆ ಸೀಮಿತರಾಗಿರಲಿಲ್ಲ. ಟಿ.ಎನ್. ಸೀತಾರಾಮ , ಸೇತೂರಾಮ್, ಗಿರೀಶ್ ಕಾಸರವಳ್ಳಿ, ವೈಶಾಲಿ ಕಾಸರವಳ್ಳಿ ಸಾಹಿತ್ಯದ ಅರಿವಿದ್ದವರಾಗಿದ್ದರು. ಓದಿಕೊಂಡು ಬಂದ ವಿದ್ವಾಂಸರು ನಿರ್ದೇಶನಕ್ಕಿಳಿದಾಗ ಧಾರಾವಾಹಿ ಚೆನ್ನಾಗಿ ಮೂಡಿಬರುವುದರಲ್ಲಿ ಸಂಶಯವಿಲ್ಲ . ಕಥೆಗಷ್ಟೇ ಅಲ್ಲ ಶೀರ್ಷಿಕೆ ಗೀತೆಗೂ ಅಷ್ಟೇ ಒತ್ತುಕೊಡುವ ಕಾಲವದು. ಎಚ್ಚೆಸ್ವಿ, ಚಂದ್ರಶೇಖರ ಕಂಬಾರರಂಥವರು ಹಾಡುಗಳನ್ನು ಬರೆದರೆ ಸಿ.ಅಶ್ವಥ್ ಸಂಗೀತ ಸಂಯೋಜನೆ ಮತ್ತು ಗಾಯನ ನಿರ್ವಹಿಸುತ್ತಿದ್ದರು. ಗಾಯಕರು ಸಿ.ಅಶ್ವಥ್ ಒಬ್ಬರೇ ಅಲ್ಲ ರಾಜು ಅನಂತಸ್ವಾಮಿ, M.D.ಪಲ್ಲವಿಯಂಥ ಕಿರಿಯ ವಯಸ್ಸಿನ ಗಾಯಕರು ಮತ್ತು ಪ್ರವೀಣ್ ಗೋಡ್ಕಿಂಡಿಯವರ ಕೊಳಲು ವಾದನ ಎಲ್ಲವೂ ಸೇರಿ ಒಂದು ಶೀರ್ಷಿಕೆ ಗೀತೆ ತಯಾರಾಗುತ್ತಿತ್ತು. “ಮರಳಿ ಬಾ ಮನ್ವಂತರವೇ ಕಂಬನಿಗಳ ಬಳಿಗೆ”, “ರೆಂಬಿ ಕೊಂಬಿಯ ಮ್ಯಾಲ ಗೂಡು ಕಟ್ಟಿದಾವ ರೆಕ್ಕಿ ಬಲಿತ ಹಕ್ಕಿ “, “ಮಣ್ಣ ತಿಂದು ಸಿಹಿ ಹಣ್ಣು ಕೊಡುವ ಮರ ನೀಡಿ ನೀಡಿ ಮುಕ್ತ” ,” ಆರು ಹಿತವರು ನಿನಗೆ ಈ ಮೂವರೊಳಗೆ” ಇವತ್ತಿಗೂ ಈ ಹಾಡುಗಳು ನೆನಪಿವೆ. ತಾರಾಗಣವೂ ಅಷ್ಟೆ ಪರಕಾಯ ಪ್ರವೇಶಕ್ಕೆ ಇನ್ನೊಂದು ಹೆಸರಿನಂತಿದ್ದರು. ಬರೀ ಗಂಭೀರ ಧಾರಾವಾಹಿಗಳಷ್ಟೇ ಅಲ್ಲ “ಪಾಪಾ ಪಾಂಡು”, “ಸಿಲ್ಲಿ ಲಲ್ಲಿ”ಯಂಥ ಹಾಸ್ಯ ಧಾರಾವಾಹಿಗಳು ಇಷ್ಟವಾದವು.
ಇವು ಧಾರಾವಾಹಿಯ ವಿಷಯಗಳಾದರೆ ಇನ್ನು ಕಾರ್ಯಕ್ರಮದ ವಿಷಯಕ್ಕೆ ಬರುವುದಾದರೆ ಜಯಂತ್ ಕಾಯ್ಕಿಣಿ ನಡೆಸಿಕೊಡುತ್ತಿದ್ದ “ನಮಸ್ಕಾರ” ಕಾರ್ಯಕ್ರಮ, ಅಪರ್ಣಾ ನಡೆಸಿಕೊಡುತ್ತಿದ್ದ “ಈ ಪ್ಯಾಮಿಲಿ”, ರವಿ ಬೆಳಗೆರೆಯವರು ನಡೆಸಿಕೊಡುತ್ತಿದ್ದ “ಎಂದು ಮರೆಯದ ಹಾಡು” ಮತ್ತು “ಕ್ರೈಂ ಡೈರಿ”. ಎಸ್.ಪಿ. ಬಾಲ ಸುಬ್ರಹ್ಮಣ್ಯಂ ನಿರೂಪಕರೂ ಮತ್ತು ಜಡ್ಜ್ ಆಗಿ ನಡೆಸಿಕೊಡುತ್ತಿದ್ದ “ಎದೆ ತುಂಬಿ ಹಾಡುವೆನು.” ಇಂಥ ಹತ್ತು ಹಲವು ಕಾರ್ಯಕ್ರಮಗಳು ಸಂಸ್ಕೃತಸ್ಥ ಸಮಾಜದ ಗಮನ ಸೆಳೆದವು. ಎಲ್ಲಿಯೂ ಟಿ.ಆರ್.ಪಿ ದಾಹ ಕಾಣುತ್ತಿರಲಿಲ್ಲ. ಎಲ್ಲಿಯೂ ಅದ್ದೂರಿ ಅಬ್ಬರಗಳಿರಲಿಲ್ಲ. ವಿವಾದಗಳಿರಲಿಲ್ಲ. ಕಲೆರಹಿತ ಕಲಾ(art) ಪ್ರದರ್ಶನ ಅದಾಗಿತ್ತು. ಅದಕ್ಕೆ ಆ ಕಾರ್ಯಕ್ರಮಗಳು ಆಗಿ ಹೋಗಿ ಇಷ್ಟು ದಿನಗಳಾದರೂ ಜನಮಾನಸದಲ್ಲಿ ಬೇರೂರಿವೆ.
ಈ ಕಾರ್ಯಕ್ರಮಗಳಿಗೂ ಇತರ ಕಾರ್ಯಕ್ರಮಗಳಿಗೂ ತೌಲನಿಕವಾಗಿ ನೋಡಿದಾಗ ತಮಗೆ ದೊಡ್ಡ ವ್ಯತ್ಯಾಸ ಕಾಣಬಹುದು. ಕ್ವಿಜ್’ನಂತಹ ಕಾರ್ಯಕ್ರಮಗಳನ್ನಿಟ್ಟು ಅದರಲ್ಲಿ ಅರ್ಥಹೀನ ಪ್ರಶ್ನೆಗಳನ್ನು ಗಮನಿಸಬಹುದು. ಉತ್ತರ ಪ್ರಶ್ನೆಯಲ್ಲೇ ಇರುತ್ತೆ ಆದರೂ ಸ್ಪರ್ಧಾಳುಗಳು ಉತ್ತರ ಕೊಡಲು ಹೆಣಗಾಡುತ್ತಾರೆ.
ಬಿಗ್’ಬಾಸ್ ಅಂತಹ ಸ್ಪರ್ಧೆಗಳಲ್ಲಿನ ಅತಿರೇಕಗಳಿಂದ ಇಡಿಯ ಸಮಾಜ ರೋಸಿ ಹೋಗಿದೆ.ಜಡ್ಜ್’ಗಳ ವಿಚಾರವನ್ನು ಚರ್ಚಿಸಲೇಬೇಕು. ಇತ್ತೀಚೆಗೆ ಒಂದು ಚಾನೆಲ್ಲಿನ ಸಂಗೀತ ಸ್ಪರ್ಧೆಯಲ್ಲಿ ಐಂದ್ರಿತಾ ರೈ ಜಡ್ಜ್ ಆಗಿ ಬಂದಾಗ ಯಾವ ಅರ್ಹತೆಯ ಮೇಲೆ ಈ ಆಯ್ಕೆ ಎಂಬ ಗೊಂದಲ ಸೃಷ್ಟಿಯಾಗಿತ್ತು. ಒಬ್ಬ ಹುಡುಗ ಹಾಡಿ ಮುಗಿಸಿದ ನಂತರ ಅವರ ಕಾಸ್ಟ್ಯೂಮ್ ಬಗ್ಗೆ ಕಮೆಂಟ್ ಕೊಡುತ್ತಿದ್ದ ಸಂಗೀತದ ಗಂಧ ಗಾಳಿ ಗೊತ್ತಿರದ ಐಂದ್ರಿತಾ ಅದೇನು ಜಡ್ಜ್’ಮೆಂಟ್ ಕೊಡಲು ಸಾಧ್ಯ. ಮತ್ತೊಂದು ಕಡೆ “ನಚ್ ಬಲಿಯೇ” ಎಂಬ ಡ್ಯಾನ್ಸ್ ಕಾರ್ಯಕ್ರಮಕ್ಕೆ ಹೆಸರಾಂತ ಲೇಖಕ “ಚೇತನ್ ಭಗತ್” ಜಡ್ಜ್ ಆಗಿ ಬಂದಿದ್ದರು. ಅವರು ಅದೇನು ಜಡ್ಜ್’ಮೆಂಟ್ ಕೊಡಲು ಸಾಧ್ಯ. ಇದೇ ಈ ಟೀವಿಯ ಡ್ಯಾನ್ಸಿಂಗ್ ಸ್ಟಾರ್ ಎಂಬ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೋರಿಯೋಗ್ರಾಪರ್ “ಮಯೂರಿ”ಯವರು ಕೊಡುತ್ತಿದ್ದ ಜಡ್ಜ್’ಮೆಂಟಿಗೂ ರವಿಚಂದ್ರನ್ ಕೊಡುತ್ತಿದ್ದ ಜಡ್ಜ್’ಮೆಂಟಿಗೂ ತುಂಬಾ ವ್ಯತ್ಯಾಸವಿತ್ತು. ಅದನ್ನು ಸ್ವತಃ ರವಿಚಂದ್ರನ್ ಅವರೇ ಒಪ್ಪಿಕೊಂಡಿದ್ದರು. ಇನ್ನೂ ಪ್ರಿಯಾಮಣಿಯಂತೂ ‘ಕಟ್ ಕಾಪಿ ಪೇಸ್ಟಿ’ಗೆ ಸೀಮಿತರಾಗಿ ಹೋಗಿದ್ದರು. ಇದೇ ಕಾರ್ಯಕ್ರಮದ ಮೊದಲ ಸೀಸನ್’ನಲ್ಲಿ ಜಡ್ಜ್ ಆಗಿ ಕುಳಿತಿದ್ದ ನಿರ್ದೇಶಕ ಗುರುಪ್ರಸಾದ್ ಅವರಿಗೆ ನಿಮ್ಮಂತ ಸೃಜನಶೀಲ ನಿರ್ದೇಶಕರು ಇಲ್ಲಿ ಕಾಲಹರಣ ಮಾಡಬಾರದೆಂದು ರವಿಚಂದ್ರನ್ ಹೇಳಿದ್ದರು. ಅದು ಅವರು ಆ ವೇದಿಕೆಗೆ ಯೋಗ್ಯ ಜಡ್ಜ್ ಅಲ್ಲ ಎಂಬುದನ್ನು ಸೂಚಿಸುತ್ತದೆ. ಇನ್ನೂ ಧಾರಾವಾಹಿಯ ವಿಷಯಕ್ಕೆ ಬರುವುದಾದರೆ ಅವೆಲ್ಲಾ ಮನೆಮುರುಕ ಧಾರಾವಾಹಿಗಳು ಬರೀ ಹಗ್ಗ ಜಗ್ಗಾಟ. ಮುಗಿಯದ ಕಥೆಗಳು.
ಇವತ್ತು ನಾನು ವಿಶೇಷವಾಗಿ ಹೇಳಲು ಹೊರಟಿರುವುದು “ಎದೆ ತುಂಬಿ ಹಾಡುವೆನು.” ಸಂಗೀತ ಸ್ಪರ್ಧೆ ಎಂದರೆ ಏನೇನೆಲ್ಲಾ ಒಳಗೊಂಡಿರಬೇಕು ಎಂಬುದರ ಸ್ಪಷ್ಟ ಕಲ್ಪನೆ ಕಾರ್ಯಕ್ರಮದ ಆಯೋಜಕರಿಗಿತ್ತು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಸ್ವತಃ ಶ್ರೇಷ್ಟ ಗಾಯಕರಾಗಿದ್ದರಿಂದ ಅವರಿಗಿಂತ ವಿಶೇಷ ಜಡ್ಜ್ ಬೇಕಾಗಿರಲಿಲ್ಲ. ಕಾರ್ಯಕ್ರಮಕ್ಕೆ “ಹಿತಮಿತ”ವಾದ ನಿರೂಪಣೆಯನ್ನೂ ಅವರೇ ನಿರ್ವಹಿಸಿಕೊಂಡು ಹೋಗುತ್ತಿದ್ದ ಕಾರಣಕ್ಕೆ ವೆಚ್ಚ ಕಡಿಮೆಯಾಗಿ ನಿರೂಪಣೆಗೂ “ಗಾಂಭೀರ್ಯ” ಬೆರೆತ ಒಂದು ತೂಕವಿರುತ್ತಿತ್ತು. ಅವರ ಸ್ಪಷ್ಟ ಕನ್ನಡ ಮತ್ತು ಕನ್ನಡಾಭಿಮಾನವನ್ನು ಎಲ್ಲರಿಗೂ ಅನುಕರಣೀಯ. ಕಾರ್ಯಕ್ರಮದ ಜಡ್ಜ್ ಕುಳಿತುಕೊಳ್ಳುವ ಪ್ಯಾನಲ್’ನಲ್ಲಿ ಸಂಗೀತದಲ್ಲಿ ಸಾಧನೆಗೈದವರಷ್ಟೇ ವಿಶೇಷ ಅತಿಥಿಯಾಗಿ ಬರುತ್ತಿದ್ದರು. ಯಾವತ್ತಿಗೂ ವೇದಿಕೆಯನ್ನು ಅನಾವಶ್ಯಕ ಪ್ರಹಸನಗಳಿಗಾಗಲಿ ಫಿಲ್ಮ್ ಪ್ರಮೋಷನ್’ಗಳಿಗಾಗಲಿ ಬಳಸಿಕೊಳ್ಳಲಿಲ್ಲ. ಸಂಗೀತದ ಹೊರತು ಮತ್ತೊಂದರ ಚರ್ಚೆಗಳಾಗುತ್ತಿರಲಿಲ್ಲ. ಕಾರ್ಯಕ್ರಮದಲ್ಲಿ ಬಂದ ಸ್ಪರ್ಧಾಳುಗಳ ಆರ್ಥಿಕ ಹಿನ್ನೆಲೆ, ಅಂಗ ವೈಕಲ್ಯ ಮತ್ತು ಜಾತಿ(!)ಗಳ ಬಗ್ಗೆ ಎಂದಿಗೂ ಚರ್ಚೆಯಾಗಲಿಲ್ಲ. ಅದಲ್ಲದೆ ಸ್ಪರ್ಧಾಳುವಿನ ಗಾಯನಕ್ಕೆ ಅಂಕಗಳೇ ಹೊರತು ಕಾಸ್ಟ್ಯೂಮ್ ಬಗ್ಗೆ ಚರ್ಚೆ ಆಗುತ್ತಿರಲಿಲ್ಲ.
ಅಲ್ಲಿ ಮಾತು ಕಡಿಮೆ ಇದ್ದು ಸ್ಪರ್ಧಾಳುವಿನ ಪ್ರತಿಭೆಯೇ ಮಾತಾಡುತ್ತಿತ್ತು. ಸ್ಪರ್ಧಾಳುಗಳು ಮಾತ್ರ ವೇದಿಕೆ ಇರುತ್ತಿತ್ತೇ ಹೊರತು ಯಾವುದೇ ಆಕರ್ಷಣೆಗೆ ಮತ್ತು ಪ್ರಚಾರದ ಕಾರಣಕ್ಕೆ ಮತ್ತೊಬ್ಬರಿಗೆ “ಆದ್ಯ”ತೆ ಕೊಡುತ್ತಿರಲಿಲ್ಲ. ಮುಂದೆ ಇದೇ “ಎದೆ ತುಂಬಿ ಹಾಡುವೆನು” ವೇದಿಕೆಯಲ್ಲಿ ಜಡ್ಜ್ ಆಗಿ ಬಂದದ್ದು ಜಯಂತ್ ಕಾಯ್ಕಿಣಿ ಮತ್ತು ಹಂಸಲೇಖ. ಇಬ್ಬರಿಗೂ ಸಾಹಿತ್ಯ ಮತ್ತು ಸಂಗೀತದ ಕುರಿತು ಪಾಂಡಿತ್ಯವಿದೆ. ಆ ಕ್ಷೇತ್ರದಲ್ಲಿ ತಪಸ್ವಿಯಂತೆ ದುಡಿದು ಯಶಸ್ಸು ಕಂಡವರಾಗಿದ್ದರು.
ನೀವೆ ಯೋಚನೆ ಮಾಡಿ “ಇತ್ತೀಚಿನ ಬೆಳವಣಿಗೆ”ಯನ್ನು ಗಮನಿಸಿದಾಗ ಈ ಟಿವಿ ಮತ್ತು ಅದರಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳು ಇವತ್ತಿಗೂ ಬೇಕು ಅನ್ನಿಸುವುದಿಲ್ಲವೇ? ಎದೆ ತುಂಬಿ ಹಾಡುವೆನು ಅಂತೂ ಇವತ್ತಿಗೇ ಇನ್ನೂ ಅವಶ್ಯಕ ಯಾವುದೇ ಗೊಂದಲಗಳಿಲ್ಲದೇ ಸಂಗೀತ ಸಾಧಕರು ಕುಳಿತು ಹೊಸ ಸಾಧಕರಿಗೆ ವೇದಿಕೆ ಮಾಡಿಕೊಡುತ್ತಿದ್ದದ್ದು ಎಷ್ಟೊಂದು ಅತ್ಯುತ್ತಮ ಕೆಲಸ. ಇತ್ತೀಚೆಗೆ ಅದೇ ಕಾರ್ಯಕ್ರಮದ ಪ್ರಸಾರವಾಗುತ್ತಿದ್ದದ್ದನ್ನು ನೋಡಿ ಖುಷಿಯಾಯಿತು. ಅದರಲ್ಲಿ ಹಾಡಿದ ಗಾಯಕರು ಕೂಡಾ ಸಂಗೀತದಲ್ಲಿ ಕೆಲವು ಮಜಲುಗಳನ್ನು ಮುಟ್ಟಿದ್ದಾರೆ. ಕಾರ್ಯಕ್ರಮದಲ್ಲಿ ನಡೆದ ತಪ್ಪುಗಳಿಗೆ ವೀಕ್ಷಕರು ಪತ್ರ ಬರೆದಾಗ ಅದನ್ನು ಓದಿ ತಿದ್ದುಪಡಿ ಮಾಡಿಕೊಳ್ಳುತ್ತಿದ್ದ ಸೌಜನ್ಯವೂ ಇವತ್ತು ಕಾಣುವುದು ವಿರಳ.
ಕಾರ್ಯಕ್ರಮದ ಆರಂಭದ ಹಂತದಲ್ಲಿ ಎಸ್.ಪಿ.ಬಿ ಗಾಯನ ನಂತರ ಆಹ್ವಾನಿತ ಅತಿಥಿಗಳ ಪರಿಚಯ, ಸ್ಪರ್ಧಾಳುಗಳು ತಮ್ಮ ಪರಿಚಯ ಮಾಡಿಕೊಂಡು ಹಾಡು ಶುರುವಾಗುತ್ತಿತ್ತು. ಅದರ ನಂತರ ಜಡ್ಜ್’ಮೆಂಟ್ ಮತ್ತು ಹಾಡಿನ ಬಗೆಗಿನ ಸ್ವಾರಸ್ಯಕರವೆನಿಸುವ ಮಾಹಿತಿಗಳು ಕೊನೆಗೆ ಎಸ್.ಪಿ.ಬಿ ಎಂಬ ಸಹೃದಯಿ ಗಾಯಕನ ಮುಕ್ತ ಕಂಠ ಮುಗ್ಧ ಮನಸ್ಸಿನಿಂದ “ಸರ್ವೇ ಜನ ಸುಖಿನೋಭವಂತು” ಎಂಬ ಮಾತು. ಇವತ್ತು ಸರ್ವೇ ಜನ ಸುಖಿನೋಭವಂತು ಎಂಬ ಆಶಯ ಇರುವವರು ತುಂಬಾ ಕಡಿಮೆಯೇ ಅನ್ನಿ. ಗೊಂದಲ ಸೃಷ್ಟಿಗೆ ಹೆಚ್ಚಿನ ಪ್ರಾಧಾನ್ಯತೆ ಕೊಡುತ್ತಿರುವ ಈ ಕಾಲದಲ್ಲಿ ಅಂಥ ಕಾರ್ಯಕ್ರಮಗಳು ಮರುಕಳಿಸಲಿ…..