ಅಂಕಣ

ವೇಶ್ಯಾವೃತ್ತಿ, ಕೇಳುವವರಿಲ್ಲ ಮಹಿಳೆಯರ ದುಃಸ್ಥಿತಿ     

 ಅವಳ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಜೊತೆಗೆ ಎರಡು ಪುಟ್ಟ ಮಕ್ಕಳ ಸಂಸಾರ ಬೇರೆ. ಗಂಡನೋ ಮಹಾನ್ ಕುಡುಕ. ಹಾಗಾಗಿ ಮನೆಯಲ್ಲಿ ಒಂದು ಹೊತ್ತಿನ ಊಟವಿದ್ದರೆ, ಒಂದು ಹೊತ್ತು ಇರುತ್ತಿರಲಿಲ್ಲ. ಗಂಡ ದುಡಿದದ್ದೆಲ್ಲವನ್ನು ಕುಡಿದು ಹಾಳು ಮಾಡುತ್ತಿದ್ದ. ಹಾಗಾಗಿ ಇವಳೇ ಅವರಿವರ ಮನೆಯ ಮುಸುರೆ ತಿಕ್ಕಿ ಮಕ್ಕಳನ್ನು ಸಾಕುತ್ತಿದ್ದಳು. ಆದರೂ ಕೆಲವೊಮ್ಮೆ ಅವಳ ದುಡಿತ ಆ ಮಕ್ಕಳ ಹೊಟ್ಟೆ ತುಂಬಿಸುವಲ್ಲಿ ವಿಫಲವಾಗುತ್ತಿತ್ತು. ಇಷ್ಟೆಲ್ಲಾ ಬಡತನವಿದ್ದರೂ, ಅವಳ ಸೌಂದರ್ಯಕ್ಕೆ ಬಡತನವಿರಲಿಲ್ಲ. ಬೀದಿ ಕಾಮುಕರ ಕಣ್ಣೆಲ್ಲಾ ಇವಳ ಮೇಲೇಯೆ. “ನಿನ್ನ ಆ ಕುಡುಕ ಗಂಡನ ಜೊತೆ ಏನು ಸುಖ ಸಿಗತ್ತೆ, ನನ್ನ ಜೊತೆ ಬಾ ನಿನಗೆ ಬೇಕಾದಷ್ಷು ದುಡ್ಡು, ಸುಖ ಎಲ್ಲಾ ಕೊಡ್ತೀನಿ”.ಎಂದು ಅವಳನ್ನು ಕೇಳಿದ ಶ್ರೀಮಂತ ಕಾಮುಕರಿಗೇನೂ ಕಮ್ಮಿ ಇರಲಿಲ್ಲ. ಮೊದ ಮೊದಲು ಅವಳು ಇದಕ್ಕೆಲ್ಲಾ ಮಣೆ ಹಾಕಲಿಲ್ಲ, ಕೊನೆಗೆ ತನ್ನ ಮನೆ ಪರಿಸ್ಥಿತಿ, ಕೈಲಾಗದ ಕುಡುಕ ಗಂಡ, ಹಸಿದ ಮಕ್ಕಳು, ಇವನ್ನೆಲ್ಲಾ ನೋಡಿದಾಗ, ಕೇವಲ ಮುಸುರೆ ತಿಕ್ಕುವುದರಿಂದ ತನ್ನ ಮನೆಯ ಪರಿಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ, ಮಕ್ಕಳಿಗೆ ಉಪವಾಸವೇ ಗತಿ ಎಂದು, ಶ್ರೀಮಂತ ಕಾಮುಕರಿಗೆ ಶರಣಾಗುತ್ತಾಳೆ. ಮೊದ ಮೊದಲು ಸ್ವಲ್ಪ ಕಷ್ಟವೆನಿಸಿದರೂ, ಕ್ರಮೇಣ ಅದೇ ಅಭ್ಯಾಸವಾಗಿ, ಅದೇ ವೃತ್ತಿಯಾಯಿತು. ಮುಂದೆ ದೇಶದಲ್ಲಿರುವ ಹಲವಾರು ವೇಶ್ಯೆಯರಲ್ಲಿ ಅವಳೂ ಒಬ್ಬಳಾದಳು.

      ಈ ಮೇಲಿನ ಕಥೆ, ಇಂದು ನಮ್ಮ ದೇಶದಲ್ಲಿ ವೇಶ್ಯಾವೃತ್ತಿ ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು. ಈ ಮೇಲಿನ ಕಥೆಯಂತಹ ಹಲವಾರು ಘಟನೆಗಳನ್ನು ಇಂದು ನಾವು ದೇಶದ ಬಹಳ ಕಡೆ ಕಾಣಬಹುದು. ಕೇವಲ ಇದೊಂದೇ ಕಾರಣವಲ್ಲ, ಗಂಡ ಕುಡುಕನಾಗಿದ್ದು, ಕುಡಿತಕ್ಕೋಸ್ಕರ ಹೆಂಡತಿಯನ್ನೇ ವೇಶ್ಯಾವಾಟಿಕೆಗೆ ಕಳಿಸುವುದು, ತಂದೆಯಾದವ ಮಗಳನ್ನೇ ದಂಧೆಗೆ ದೂಡುವುದು ಇಂತಹ ಹೇಯ ಕೃತ್ಯಗಳು ನಮ್ಮ ದೇಶದ ಮೂಲೆ-ಮೂಲೆಯಲ್ಲಿ ಪ್ರತಿನಿತ್ಯ ಜರುಗುತ್ತಲೇ ಇರುತ್ತವೆ. ಇದರಿಂದಾಗಿ ಇಂದು ನಮ್ಮ ದೇಶದಲ್ಲಿ ವೇಶ್ಯಾವಾಟಿಕೆ ತೀವೃತರವಾಗಿ ಕಾಂಗ್ರೇಸ್ ಗಿಡದಂತೆ ಬೆಳೆಯುತ್ತಲೇ ಇದೆ. ಹಾಗೇ ಇತಿಹಾಸದ ಪುಟವನ್ನೊಮ್ಮೆ ತಿರುವಿ ಹಾಕಿದರೆ, ಪುರಾತನ ಕಾಲದಿಂದಲೂ ನಮ್ಮ ದೇಶದಲ್ಲಿ ವೇಶ್ಯಾವೃತ್ತಿ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಅಂದು ದೇವದಾಸಿ ಪದ್ಧತಿ ಜಾರಿಯಲ್ಲಿತ್ತು. ಇಂದು ಜಗತ್ತು ತೀರ ಮುಂದುವರಿದ ಕಾರಣ ಅದೇ ಒಂದು ವೃತ್ತಿಯಾಗಿ, ಅಂತಹವರಿಗಾಗಿಯೇ ಪ್ರತೈಕ ಸ್ಥಳಗಳೂ ಹುಟ್ಟಿಕೊಂಡಿವೆ. ಬೆಂಗಳೂರು, ಮುಂಬೈಗಳಂತಹ ಮಹಾನಗರಗಳಲ್ಲಿ ಇದಕ್ಕೆ “ರೆಡ್ ಲೈಟ್” ಏರಿಯಾ ಎಂದೇ ಕರೆಯುತ್ತಾರೆ. ಇಂತಹ ಸ್ಥಳಗಳಲ್ಲಿ ವೇಶ್ಯೆಯರ ಒಂದು ಜಾಲವೇ ಇರುತ್ತದೆ. ಇಂತಹ ವೇಶ್ಯೆಯರನ್ನು ನಮ್ಮ ಸಮಾಜ ಅತ್ಯಂತ ತುಚ್ಛವಾಗಿ ಕಾಣುತ್ತದೆ. ಸುಸಂಸ್ಕತ ಜನರು ಅವರನ್ನು ಕಂಡರೆ ಮೂಗು ಮುರಿಯುತ್ತಾರೆ. ಅವರ ಕಷ್ಟವನ್ನು ಕೇಳುವವರು ಯಾರೂ ಇಲ್ಲ. ಹಾಗೆ ನೋಡಿದರೆ ಅಲ್ಲಿರುವ ಬಹುತೇಕ ವೇಶ್ಯೆಯರು, ತಿಳಿದೂ ತಿಳಿಯದ ವಯಸ್ಸಿನಲ್ಲಿಯೋ, ಬಲವಂತವಾಗಿಯೋ ಅಥವಾ ಅತಿಯಾದ ಆರ್ಥಿಕ ಸಂಕಷ್ಟದಿಂದಲೋ ಬಂದವರಾಗಿದ್ದಾರೆಯೇ ಹೊರತು ಇಷ್ಟಪಟ್ಟು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬಂದವರು ಕಡಿಮೆಯೇ. ಇದರ ಕುರಿತು ಇನ್ನೂ ಹೆಚ್ಚು ಸ್ಪಷ್ಟವಾಗಬೇಕಾದರೆ ಕೆಲವು ಅಂಕಿ-ಅಂಶಗಳನ್ನು ಅವಲೋಕನ ಮಾಡಿದಾಗ ತಿಳಿಯುತ್ತದೆ.

       ಭಾರತವು ಏಷ್ಯಾದಲ್ಲೇ ಅತೀ ದೊಡ್ಡ ವೇಶ್ಯಾವೃತ್ತಿ ಜಾಲವನ್ನು ಹೊಂದಿದೆ. ಮಾನವ ಹಕ್ಕು ಆಯೋಗದ ಸರ್ವೆಯ ಪ್ರಕಾರ ಭಾರತದಲ್ಲಿ 20ಮಿಲಿಯನ್‍ಗಿಂತ ಹೆಚ್ಚು ವೇಶ್ಯೆಯರಿದ್ದಾರೆ. ಇದರಲ್ಲಿ ಸುಮಾರು 35% ವೇಶ್ಯೆಯರು 18ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹಾಗೂ ಮುಂಬೈ ನಗರವೊಂದರಲ್ಲೇ 2 ಲಕ್ಷದಷ್ಟು ವೇಶ್ಯಯರನ್ನು ಕಾಣಬಹುದು ಎಂದು ಈ ಸರ್ವೆ ತಿಳಿಸುತ್ತದೆ. ಈ ಅಂಕಿ-ಅಂಶವನ್ನು ನೋಡಿದಾಗ ನಮಗೆ ತಿಳಿಯುವುದೇನೆಂದರೆ, ನಮ್ಮ ದೇಶದಲ್ಲಿ ವೇಶ್ಯಾ ವೃತ್ತಿ ಎಂಬುದು ಎಷ್ಟೊಂದು ವ್ಯಾಪಕವಾಗಿ ಹಬ್ಬಿಕೊಂಡಿದೆ ಎಂಬುದು. ಹಾಗಾದರೆ ಇದಕ್ಕೆಲ್ಲಾ ಕಾರಣಗಳನ್ನು ಹುಡುಕುತ್ತಾ ಹೋದಾಗ ಕಾರಣಗಳ ಪುಟ ತೆರೆದುಕೊಳ್ಳುತ್ತ ಸಾಗುತ್ತದೆ. ಡಾ|| ಗಿಲಾಡೀಸ್ ಪೇಪರ್ ಆನ್ “ಪರ್ಸಪೆಕ್ಟಿವ್ಸ್ ಎಂಡ್ ಪೋಸಿಶನಲ್ ಪ್ರಾಬ್ಲಮ್ಸ್ ಆಫ್ ಸೋಶಿಯಲ್ ಇಂಟರ್‍ವೆನ್ಶನ್” ಸರ್ವೆ ಪ್ರಕಾರ 70% ಮಹಿಳೆಯರು ಬಲವಂತವಾಗಿ ವೇಶ್ಯಾವೃತ್ತಿಗೆ ತಳ್ಳಲ್ಪಟ್ಟಿದ್ದಾರೆ. ಅಂದರೆ ಹೆಚ್ಚಿನ ಮಹಿಳೆಯರು ಮನೆಯಲ್ಲಿನ ಗಂಡನ ಬಲವಂತಕ್ಕೋ ಅಥವಾ ತಂದೆಯ ಬಲವಂತದಿಂದಲೋ ಅಥವಾ ತಾಯಿಯ ಬಲವಂತದಿಂದಲೋ ವೇಶ್ಯಾ ವೃತ್ತಿಯಂತಹ ಹೀನ ವೃತ್ತಿಗೆ ಇಳಿದಿದ್ದಾರೆ.

       ಇದೆಲ್ಲವನ್ನೂ ನೋಡಿದಾಗ ಒಂದು ವಿಷಯವಂತೂ ಸ್ಪಷ್ಟವಾಗುತ್ತದೆ. ಇಂದು ನಮ್ಮ ದೇಶದಲ್ಲಿ ವೇಶ್ಯಾವೃತ್ತಿ ಹೆಚ್ಚುತ್ತಿರಲು ಹೊರಗಿನವರಿಗಿಂತ ಮಹಿಳೆಗೆ ಹತ್ತಿರದವರೇ ಹೆಚ್ಚು ಕಾರಣರಾಗಿದ್ದಾರೆ ಎಂದು ಹೇಳಬಹುದು. ಅಲಹಾಬಾದ್’ನ ಮೀರಗಂಜ್ ಅತ್ಯಂತ ಅಪಾಯಕಾರಿ ವೇಶ್ಯಾವೃತ್ತಿ ನಡೆಯುವ ಸ್ಥಳಗಳಲ್ಲಿ ಒಂದು ಹೇಳಲಾಗುತ್ತದೆ. ಇಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗಿಯರನ್ನು ತಂದು ಮಾರಲಾಗುತ್ತದೆ. ಇನ್ನೂ ಇಂತಹ ಹಲವಾರು ವೇಶ್ಯೆಯರ ತಾಣಗಳನ್ನು ನಮ್ಮ ದೇಶದಲ್ಲಿ ಕಾಣಬಹುದು. ವಾರಣಾಸಿಯ ಶಿವದಾಸಪುರ, ಮಹಾರಾಷ್ಟ್ರದ ಗಂಗಾ-ಜಮುನಾ ನಗರ, ಪುಣೆಯ ಬುದವಾರ ಪೇಟೆ, ಕಾಮಾಟೀಪುರ ಮುಂಬೈ. ಹೀಗೆ ಈ ಎಲ್ಲಾ ಪ್ರದೇಶಗಳೂ ವೇಶ್ಯಾವಾಟಿಕೆಯ ಅತೀ ದೊಡ್ಡ ಜಾಲವನ್ನು ಹೊಂದಿದೆ. ಇಲ್ಲಿ ಬರುವ ಅತೀ ಹೆಚ್ಚು ಮಹಿಳೆಯರು ಒಂದೋ ಅಪ್ರಾಪ್ತ ವಯಸ್ಸಿನಲ್ಲಿ ತಂದು ಮಾರಾಟ ಮಾಡಲ್ಪಟ್ಟವರು ಅಥವಾ ಬಲವಂತದಿಂದ ದೂಡಲ್ಪಟ್ಟವರೇ ಆಗಿದ್ದಾರೆ. ಇಂತಹ ವೇಶ್ಯಾವೃತ್ತಿಯಿಂದ ಏಡ್ಸ್’ನಂತಹ ಅಪಾಯಕಾರಿ ರೋಗಗಳು ಹರಡುತ್ತಿವೆ, ಇಂದು ನಮ್ಮ ದೇಶದಲ್ಲಿ ಏಡ್ಸ್’ನಿಂದ ಸಾಯುತ್ತಿರುವವರಲ್ಲಿ ಹೆಚ್ಚಿನ ಜನರು ಇಂತಹ ಅನೈತಿಕ ಸಂಬಂಧವನ್ನು ಹೊಂದಿದವರೇ ಆಗಿದ್ದಾರೆ.

      ಮುಂಬೈ ರೆಡ್ ಲೈಟ್ ಏರಿಯಾದಲ್ಲಿ “ಇಂಡಿಯನ್ ಹೆಲ್ತ್ ಆರ್ಗನೈಸೇಶನ್” ನ ಸರ್ವೆಯ ಪ್ರಕಾರ ಇನ್ನಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಅವರ ಪ್ರಕಾರ 1 ಲಕ್ಷದಲ್ಲಿ 20% ವೇಶ್ಯೆಯರು ಅಪ್ರಾಪ್ತರಾಗಿದ್ದಾರೆ, ಹಾಗೇ 25% ಮಕ್ಕಳು ಅಪಹರಿಸಿ ಮಾರಲ್ಪಟ್ಟವರಾಗಿದ್ದಾರೆ, ಅದರಲ್ಲಿ ಶೇಕಡಾ 6 ರಷ್ಟು ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮಾರಾಟ ಮಾಡಲಾಗಿದೆ. ಹಾಗೆಯೇ 8%ರಷ್ಟು ಮಹಿಳೆಯರು ಅವರ ತಂದೆಯಿಂದಲೇ ಮಾರಲ್ಪಟ್ಟಿದ್ದರೆ, 15% ಮಹಿಳೆಯರು ತಮ್ಮ ಗಂಡಂದಿರಿಂದಲೇ ಮಾರಾಟ ಮಾಡಲ್ಪಟ್ಟಿದ್ದಾರೆ. 2ಲಕ್ಷ ಅಪ್ರಾಪ್ತ ಹುಡುಗಿಯರು 9ರಿಂದ 20 ವರ್ಷ ಒಳಗಿನವರು ಪ್ರತೀ ವರ್ಷ ನೇಪಾಳದಿಂದ ಭಾರತಕ್ಕೆ ಮಾರಾಟ ಮಾಡಲ್ಪಡುತ್ತಿದ್ದಾರೆ. ಇಷ್ಟೆಲ್ಲಾ ಪ್ರತೀ ವರ್ಷ ಸದ್ದಿಲ್ಲದೇ ನಡೆದು ಹೋಗುತ್ತಿದೆ ಎಂದರೆ ನಂಬುವುದು ಕಷ್ಟ. ಆದರೂ ಇವೆಲ್ಲವೂ ನಿಜ. ಇನ್ನೂ ಅದೆಷ್ಟೋ ಬಣ್ಣ ಬಣ್ಣದ ಕನಸುಗಳನ್ನು ಕಾಣುತ್ತಾ ಅರಳುವ ಹೂವಿನಂತಿರುವ ಅದೆಷ್ಟೋ ಮಕ್ಕಳ ಭವಿಷ್ಯ ಇಲ್ಲಿ ನುಚ್ಚು ನೂರಾಗುತ್ತಿದೆ. ಇಂತಹ ಮಕ್ಕಳನ್ನು ರಕ್ಷಿಸಲು ಹಲವಾರು ಸರ್ಕಾರೇತರ ಸಂಸ್ಥೆಗಳು ನಮ್ಮ ದೇಶದಲ್ಲಿ ಹುಟ್ಟಿಕೊಂಡಿವೆ. ಆದರೂ ಸಹಿತ ಇವರ ಕಣ್ಣು ತಪ್ಪಿಸಿ ಅದೆಷ್ಟೋ ಮಕ್ಕಳು ಹೀಗೆ ಇಂತಹ ವಿಷದ ಜಾಲಕ್ಕೆ ತಳ್ಳಲ್ಪಡುತ್ತಿದ್ದಾರೆ. ವೇಶ್ಯೆಯರು ಎಂದ ಕೂಡಲೇ ಅಸಹ್ಯಪಟ್ಟುಕೊಳ್ಳುವ ಬದಲು, ಅವರ ಇಂತಹ ಪರಿಸ್ಥಿತಿಯ ಕುರಿತು ಆಲೋಚಿಸಿದಾಗ ಅಸಹ್ಯದ ಬದಲು ಅನುಕಂಪ ಮೂಡುತ್ತದೆ.

   ಇಂದು ಈ ವೇಶ್ಯಾವೃತ್ತಿಯನ್ನು ಕಾನೂನುಬದ್ಧಗೊಳಿಸಬೇಕು, ಇದರಿಂದ ಅತ್ಯಾಚಾರಗಳ ಸಂಖ್ಯೆ ಇಳಿಮುಖವಾಗುತ್ತದೆ ಎಂಬ ಮಾತುಗಳು ಕೆಲವೆಡೆ ಕೇಳಿ ಬರುತ್ತಿದೆ. ಅತ್ಯಾಚಾರದಂತಹ ಮನಸ್ಥಿತಿ ಉಳ್ಳವರಿಗೆ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೂ ಅಷ್ಟೆ, ಕಾನೂನುಬದ್ಧಗೊಳಿಸದಿದ್ದರೂ ಅಷ್ಟೆ, ಅವರ ಅತ್ಯಾಚಾರದ ಕೃತ್ಯಗಳೇನೂ ಕಡಿಮೆಯಾಗುವುದಿಲ್ಲ. ಇದರ ಬದಲು ವೇಶ್ಯಾವಾಟಿಕೆಯ ಪ್ರಮುಖ ಕಾರಣಗಳು, ಸಮಸ್ಯೆಗಳನ್ನು ತಿಳಿದುಕೊಂಡು ಅದಕ್ಕೆ ಸರಿಯಾದ ಪರಿಹಾರವನ್ನು ಕಂಡು ಹಿಡಿದರೆ ಇದಕ್ಕೆ ಸ್ವಲ್ಪ ಕಡಿವಾಣ ಹಾಕಬಹುದೇನೋ..ಮುಖ್ಯವಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳು ಇದರ ಬಲೆಯಲ್ಲಿ ಸಿಲುಕದಂತೆ ನೋಡಿಕೊಂಡರೆ ವೇಶ್ಯಾವೃತ್ತಿಗೆ ಅರ್ಧ ಕಡಿವಾಣ ಹಾಕಿದಂತೆಯೇ. ಯಾರೂ ಈ ವೃತ್ತಿಗೆ ಇಷ್ಟಪಟ್ಟು ಬಂದು ಸೇರುವುದಿಲ್ಲ, ಅವರ ಜೀವನ ಪರಿಸ್ಥಿತಿಗಳು, ಕಷ್ಟಗಳು, ಅತ್ಯಾಚಾರದಂತಹ ವಾಸಿಯಾಗದ ನೋವುಗಳು ಅವರನ್ನು ಇಂತಹ ವೃತ್ತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಇಳಿಯುವಂತೆ ಮಾಡಿ ಬಿಡುತ್ತದೆ. ಅವರ ದೇಹ ಸುಖಕ್ಕೆ ಹಾತೊರೆಯುವ ಅನೇಕ ಕಾಮುಕರಿಗೆ ಅವರ ಒಳ ಮನಸ್ಸಿನ ನೋವು ತಿಳಿಯುವುದೇ ಇಲ್ಲ. ಮಹಿಳೆಯರ ನೋವಿಗೆ ಸರಿಯಾಗಿ ಸ್ಪಂದಿಸುವವರಿದ್ದಿದ್ದರೆ ಬಹುಶಃ ಈ ವೇಶ್ಯಾವೃತ್ತಿ ಎನ್ನುವ ಜಾಲ ಇಷ್ಟರ ಮಟ್ಟಿಗೆ ಹಬ್ಬುತ್ತಿರಲಿಲ್ಲವೋ ಏನೋ…?

ಚಿತ್ರ: ಇಂಟರ್’ನೆಟ್

  ಮನು ವೈದ್ಯ,

manus.vaidya@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!