ಅಂಕಣ

ಬೈಕ್ ಸವಾರರಿಗೊಂದು ಸವಾಲ್

ನಮಗೆ ಇಡೀ ವ್ಯವಸ್ಥೆಯೇ ಸರಿಯಿಲ್ಲ ಅನಿಸುತ್ತದೆ. ಸರ್ಕಾರವನ್ನೋ, ಆಡಳಿತವನ್ನೋ ದೂರುತ್ತಲೇ ಇರುತ್ತೇವೆ. ರಾಜಕಾರಣಿಗಳನ್ನು ದೂರುತ್ತೇವೆ. ಸರ್ಕಾರಿ ಅಧಿಕಾರಿಗಳನ್ನು ಬೈದುಕೊಳ್ಳುತ್ತೇವೆ. ಎಲ್ಲವೂ ಸರಿ. ನಮಗಾಗುವ ಅನ್ಯಾಯ, ತೊಡಕುಗಳ ವಿರುದ್ಧ ಪ್ರತಿಭಟನೆ, ಧಿಕ್ಕಾರ, ವ್ಯಂಗ ಎಲ್ಲವೂ ಸರಿಯೇ. ನ್ಯಾಯಕ್ಕಾಗಿ ಹೋರಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಇದ್ದೇ ಇದೆ. ನಾವು ಮತದಾರರಾಗಿ ಮಾಡಿದ ತಪ್ಪುಗಳು ನಮಗೆ ಕಾಣಿಸುವುದೇ ಇಲ್ಲ. ಇಂದು ಆಡಳಿತ ಸರಿ ಇಲ್ಲವೆಂದಾದರೆ ಪರೋಕ್ಷವಾಗಿ ಮುಖ್ಯ ಕಾರಣರೇ ನಾವು ಅಂದರೆ ಮತದಾರರು. ಎಲ್ಲೆಂದರಲ್ಲಿ ಯಾರನ್ನು ಬೇಕಾದರೂ ವಾಚಮಗೋಚರವಾಗಿ ದೂರುವಲ್ಲಿ ನಾವು ಶೂರರು. ಇದೇನು ತಪ್ಪೇನಲ್ಲ  ಹೊಂಡ ಬಿದ್ದ ರಸ್ತೆಗಳು, ಹಾಳುಬಿದ್ದ ಚರಂಡಿ, ಇಕ್ಕಟ್ಟಾದ ರಸ್ತೆ ಮೊದಲಾದ ನಿತ್ಯ ಅನುಭವಿಸುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ನಾವು ಪರದಾಡಬೇಕಾಗುತ್ತದೆ. ಆದರೆ ಈತನ್ಮಧ್ಯೆ ನಾವು ಕಾನೂನನ್ನು ಎಷ್ಟು ಪಾಲಿಸುತ್ತೇವೆಂಬುದು ಪ್ರಶ್ನೆ ನನಗೆ  ಮತ್ತೆ ಮತ್ತೆ ಕಾಡುತ್ತಲೇ ಇರುತ್ತದೆ. ಇವತ್ತಿನ ದಿನ ನಾವು ಈ ಪ್ರಶ್ನೆಯನ್ನು ನಮ್ಮಲ್ಲಿಯೆ ಕೇಳಿಕೊಳ್ಳಬೇಕಾದ ಅಗತ್ಯವಿದೆ.

ನಾವು ಮೀರುತ್ತಿರುವ ನಿಯಮ ಮತ್ತು ಕಾನೂನುಗಳನ್ನು ಪಟ್ಟಿ ಮಾಡಲು ಹೊರಟರೆ ಭ್ರಷ್ಟಾಚಾರದ ಮೂಲವೇ ಇದೆಂಬುದು ಸಾಬೀತಾಗುತ್ತದೆ. ಎಲ್ಲವೂ ಬೇಡ, ಸಣ್ಣ ಉದಾಹರಣೆಯೆಂದರೆ ದಿನ ನಿತ್ಯ ನಮ್ಮೆಲ್ಲರ ಕಣ್ಣೆದುರಿಗೆ ಕಾಣುವ ರಸ್ತೆ ನಿಯಮಗಳ ಉಲ್ಲಂಘನೆ. ಬೇಕಾಬಿಟ್ಟಿ ವಾಹನ ಚಲಾಯಿಸುವುದು, ಅಜಾಗರೂಕತೆಯಿಂದ ಹಾಗೂ ಅತೀವೇಗವಾಗಿ ಚಲಾಯಿಸುವಿಕೆ, ಕುಡಿದು ವಾಹನ ಚಲಾಯಿಸುವುದು, ಎಲ್ಲೆಂದರಲ್ಲಿ ಗಾಡಿಯನ್ನು ನುಗ್ಗಿಸುವುದು ಸರ್ವೇಸಾಮಾನ್ಯವಾಗಿ ಬಿಟ್ಟಿರುವುದು ಚಿಂತಾಜನಕವೇ ಸರಿ. ಒಂದೆಡೆಯಲ್ಲಿ ಆಡಳಿತವನ್ನು ದೂರುತ್ತಿರುತ್ತೇವೆ ಇನ್ನೊಂದೆಡೆಯಲ್ಲಿ ನಾವೇ ನಿಯಮಗಳನ್ನು ಮೀರುತ್ತಿರುತ್ತೇವೆ. ರಸ್ತೆ ನಿಯಮಗಳೆಲ್ಲವೂ ನಮ್ಮ ಜೀವದ ಸುರಕ್ಷತೆಗೆ ಇರುವಂಥದ್ದಾದರೂ ನಾವದನ್ನು ಪಾಲಿಸುವುದಿಲ್ಲ. ಎಲ್ಲಾ ನಿಯಮಗಳನ್ನು ಬದಿಗೆ ತೂರಿ ಗಾಡಿ ಓಡಿಸುವುದರಲ್ಲಿ ನಾವು ನಿಸ್ಸೀಮರು. ನಮಗಿಂದು ಯಾವುದಕ್ಕೂ ಸಮಯವಿಲ್ಲ. ಎಲ್ಲವೂ ತತ್‍ಕ್ಷಣದಲ್ಲಿಯೇ ಆಗಬೇಕು. ಹಾಗಾಗಿ ನಮ್ಮ ಬೈಕೋ- ಕಾರೋ ನಿಧಾನವಾಗಿ ಚಲಿಸುವುದೇ ಇಲ್ಲ. ಬೇಗ ಹೊರಡುವ ಬಗ್ಗೆ ಯೋಚಿಸುವುದಿಲ್ಲ, ವೇಗವಾಗಿ ಹೋಗಿ ತಲುಪುವುದಷ್ಟೇ ನಮ್ಮ ಗುರಿ. ಆಗ ಈ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ. ಹಾಗಾಗಿ ಟ್ರಾಫಿಕ್ನಲ್ಲಿ ಎಗ್ಗಿಲ್ಲದೆ ಗಾಡಿಯನ್ನು ನುಗ್ಗಿಸಿ ಇನ್ನಷ್ಟು ಟ್ರಾಫಿಕ್ ಜಾಮ್ ಆಗುವಂತೆ ಮಾಡುತ್ತೇವೆ. ಮುಂದಿನ ಗಾಡಿ ಯಾಕೆ ನಿಧಾನ ಚಲಿಸುತ್ತಿದೆ ಎಂಬುದು ನಮಗೆ ಅಗತ್ಯವಿಲ್ಲ ನಾವು ಮುಂದೆ ಹೋಗಬೇಕೆಂದು ನುಗ್ಗುತ್ತೇವೆ. ಯಾವುದೇ ಮುನ್ಸೂಚನೆ ನೀಡದೆ ಏಡಕ್ಕೋ-ಬಲಕ್ಕೋ ತಿರುಗಿಸುತ್ತೇವೆ. ಇಂಡಿಕೇಟರನ್ನು ಹಾಕುವ ಅಭ್ಯಾಸ ಹಲವರಿಗೆ ಇಲ್ಲವೇ ಇಲ್ಲ. ಇದರಿಂದ ಕೆಲವೊಮ್ಮೆ ನಮಗೆ ಇನ್ನು ಕೆಲವೊಮ್ಮೆ ಹತ್ತಿರದ ಗಾಡಿಯವರಿಗೆ ಆಪತ್ತೊದಗಿ ಬರಬಹುದು. ಅಷ್ಟೇ ಅಲ್ಲ ಕರ್ಣಕರ್ಕಶವಾದ ಹಾರ್ನ್ ಅಮುಕುವುದರಲ್ಲೂ ನಮ್ಮದು ಎತ್ತಿದ ಕೈ. ಕೆಲವು ಬೈಕ್‍ಗಳಲ್ಲಿ ಲಾರಿಯ ಹಾರ್ನ್ನಗಳಿರುತ್ತವೆ, ಟ್ರಾಪಿಕ್ ಜಾಮ್ ಆಗುತ್ತಿದ್ದಂತೆ ಶಬ್ಧಮಾಲಿನ್ಯ ಆರಂಭವಾಗುತ್ತದೆ. ನಮಗೆ ವ್ಯವಧಾನ ಎನ್ನುವದು ಎಳ್ಳಷ್ಟೂ ಇಲ್ಲ. ಸುನಾಮಿಯಿಂದ ತಪ್ಪಿಸಿಕೊಂಡು ಓಡುತ್ತಿರುವಂತೆ ಮಾಡುತ್ತೇವೆ. ಕೆಲವು ಗಾಡಿಗಳು ಮೈಮೇಲೇ ಹರಿದುಬಿಡುವ ರೀತಿಯಲ್ಲಿ ಬರುತ್ತಿರುತ್ತವೆ. ಒಂದು ಅಂಕಿ-ಅಂಶಗಳ ಪ್ರಕಾರ ರಸ್ತೆ ನಿಯಮಗಳ ಉಲ್ಲಂಘನೆಯಿಂದಾಗಿಯೇ ಶೇಕಡ 97 ರಷ್ಟು ಅಪಘಾತ ಸಂಭವಿಸುತ್ತದೆ. ನಾವು ಮಾಡುವ ಅಜಾಗರುಕತೆಯಿಂದಾಗಿ ಹಲವಾರು ದಾರಿಹೋಕರು ಪ್ರಾಣತೆತ್ತ ಉದಾಹರಣೆಗಳು ಕಣ್ಮುಂದಿದ್ದರೂ ನಾವು ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಗಾಡಿ-ನನ್ನದೇ ರಸ್ತೆಯೆಂಬಂತೆ ವರ್ತಿಸುತ್ತೇವೆ.

ತೀರಾ ಇತ್ತಿಚಿನ ದಿನಗಳಲ್ಲಿ ಬೈಕ್ ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಬೈಕ್‍ಗಳಿಂದು ಕೇವಲ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಬಹುದಾದ ಲಘು ವಾಹನವಾಗಷ್ಟೇ ಉಳಿದಿಲ್ಲ. ಬಗೆ ಬಗೆಯ ಬೈಕ್‍ಗಳು ಮಾರುಕಟ್ಟೆಗೆ ಬರುತ್ತಿವೆ. ಅವುಗಳಲ್ಲಿ ಸುರಕ್ಷೆಗಿಂತಲೂ ಹೆಚ್ಚು ಫ್ಯಾಷನ್ನಿಗೆ ಒತ್ತು ಕೊಟ್ಟಂತವು ಹಲವು. ಈಗಿನ ಯುವಕರಿಗೆ ಅಂತಹ ಬೈಕುಗಳೆಂದರೆ ತುಂಬಾ ವ್ಯಾಮೋಹ, ಅದನ್ನು ಹತ್ತಿ ಕುಳಿತರೆಂದರೆ ಅವರಿಗೆ ಬೇರೇನು ಕಾಣಿಸುವುದಿಲ್ಲ. ಅತೀವೇಗವಾಗಿ ಹೋಗುವುದೊಂದೇ ಅವರ ಧ್ಯೇಯ. ಹಲವು ಸಾರಿ ಇದನ್ನು ನೋಡಿದ ನಾವು-ನೀವೆಲ್ಲ ‘ಯಾಕಪ್ಪಾ ಇಷ್ತೊಂದು ವೇಗವಾಗಿ ಹೋಗುತ್ತಾರೆ..…ಛೆ!’ ಎಂದು ಉದ್ಗರಿಸಿದ್ದಿದೆ. ಮೂವರನ್ನು ಬೈಕಲ್ಲಿ ಕೂರಿಸಿಕೊಂಡು ಹೋಗುತ್ತೇವೆ. ವೇಗದ ಮಿತಿಯ ಫಲಕಗಳಾಗಲಿ, ಶಾಲೆಯನ್ನು ಸೂಚಿಸುವ ಫಲಕಗಳಾಗಲಿ ತಮಗೆ ಸಂಬಂಧಿಸಿದ್ದೇ ಅಲ್ಲ ಎನ್ನುವ ರೀತಿಯಲ್ಲಿ ಬೈಕ್ ಹೊರ್ನ್ ಹೊಡೆಯುತ್ತ ಸಾಗುತ್ತದೆ. ಪೋಲೀಸರು ನಿಲ್ಲಿಸಿದರೂ ಹೆದರುವುದಿಲ್ಲ. ಅವರಿಗೆ ಲಂಚ ಕೊಟ್ಟು ತಪ್ಪಿಸಿಕೊಂಡು ಬಿಡುವಷ್ಟು ಜಾಣರು. ಇನ್ನು ಇತ್ತೀಚಿಗಷ್ಟೆ ಖಡ್ಡಾಯಗೊಳಿಸಿದ ಹೆಲ್ಮೆಟ್ ಬಳಕೆ ನಮ್ಮ ಬೈಕ್ ಸವಾರರಿಗೆ ಮಹಾನ್ ಕಿರಿಕಿರಿ. ಹೆಲ್ಮೆಟ್ ಹಾಕಿ ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿರೆಂದು ಹೇಳಿದರೂ ಊಹುಂ..ನಾವದಕ್ಕೆ ಕಿವಿಗೊಡುವುದಿಲ್ಲ. ಮೊದಮೊದಲು ದಂಡದ ಮೊತ್ತ ಕಡಿಮೆ ಇದ್ದಾಗ ದಂಡವನ್ನಾದರೂ ತೆರುತ್ತಿದರೇ ಹೊರತು ಹೆಲ್ಮೆಟ್ ಧರಿಸುತ್ತಿರಲಿಲ್ಲ. ಈ ದಂಡದ ಮೊತ್ತ ಯಾವಾಗ ಹೆಲ್ಮೆಟ್ ದರಕ್ಕಿಂತ ಜಾಸ್ತಿಯಾಯಿತೋ ಆಗ ಹೆಲ್ಮೆಟ್ ಹೆಚ್ಚಿನ ಬೈಕಿಗಳಲ್ಲಿ ಕಂಡು ಬಂದವು. ಆದಾಗ್ಯೂ ಅದನ್ನು ಧರಿಸುವುದು ಮಾತ್ರ ಪೋಲೀಸರನ್ನು ಕಂಡಾಗ ಮಾತ್ರ. ಬೈಕ್ ಅಫಘಾತದಲ್ಲಿ ಮರಣಹೊಂದಿದವರಲ್ಲಿ 98.6% ರಷ್ಟು ಸಾವಿಗೆ ಹೆಲ್ಮಟ್ ಧರಿಸದೇ ಇದ್ದುದೇ ಕಾರಣ. ಹೆಲ್ಮೆಟ್ ಇದ್ದರೂ ಧರಿಸುವ ಬುದ್ಧಿ ಇನ್ನೂ ಬಂದಿಲ್ಲ. ಹೆಲ್ಮೆಟನ್ನು ಬೈಕಿನ ಮೇಲೋ ಅಥವಾ ಕೈಗೆ ಸಿಕ್ಕಿಸಿಯೋ ಹೋಗುವಷ್ಟು ಅಹಂಕಾರ ನಮಗೆ.

ನಾವೇಕೆ ಹೀಗೆ? ಯಾಕೆ ನಾವು ಬದಲಾಗುವುದಿಲ್ಲ? ಎಂಬ ಪ್ರಶ್ನೆಗಳು ಹುಟ್ಟುತ್ತಲೇ ಇರುತ್ತವೆಯೇ ಹೊರತು ಅದರಿಂದಾಗಬೇಕಾದುದು ಏನು ಇಲ್ಲವೆಂಬುದೇ ನಮ್ಮ ಭಾವನೆ. ಇದಕ್ಕೆಲ್ಲಾ ಕಾರಣ ನಾವೇ ಮತ್ತು ನಮ್ಮ ಬೇಜವಾಬ್ದಾದರಿತನ. ನಮಗೆ ಕುಟುಂಬ ಬೇಕು ಜವಾಬ್ದಾರಿ ಬೇಡ. ನಮಗೆ ಸಮಾಜ ಬೇಕು, ಅಲ್ಲಿನ ಜವಾಬ್ದಾರಿ ಬೇಡವೇ ಬೇಡ. ಅಜಾಗರುಕತೆ ಮತ್ತು ಅತೀವೇಗದಿಂದಾಗಿ ಕುಟುಂಬದ ಆಸರೆಯಾಗಿದ್ದ ಮಗನನ್ನೋ, ಗಂಡನನ್ನೋ, ಸಹೋದರರನ್ನೋ ಕಳಕೊಂಡ ನೋವಿನ ಕತೆಗಳು ಕಣ್ಣೆದುರಿಗೇ ಇದ್ದರೂ ನಾವು ಅವೆಲ್ಲದರಿಂದ ಹೊರಗಿದ್ದಂತೆ ವರ್ತಿಸುತ್ತೇವೆ. ಪತ್ರಿಕೆ, ಫೇಸ್‍ಬುಕ್, ವಾಟ್ಸ್ ಆಪ್ ಗಳಲ್ಲಿ ಅದೆಷ್ಟೋ ಜಾಗೃತಿಯ ಸಂಗತಿಗಳು ಹರಿದಾಡಿದ್ದರೂ ನಾವದನ್ನು ಲೈಕ್, ಶೇರ್, ಫಾರ್ವರ್ಡ್ ಮಾಡುತ್ತೇವೆಯೇ ಹೊರತು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ‘ಹೊಸದಾಗಿ ಕೊಂಡ ಮೊಬೈಲಿಗೆ ಗೋರಿಲ್ಲಾ ಗ್ಲಾಸ್ ಹಾಕಿ ರಕ್ಷಿಸಿಕೊಳ್ಳಲು ಮುಂದಾಗುತ್ತೇವೆ ಆದರೆ ಹೆಲ್ಮೆಟ್ ಧರಿಸಲು ಮುಂದಾಗುವುದಿಲ್ಲ ಎಂಬ ಮೆಸೇಜ್ ತಮಾಷೆಯ ರೂಪದಲ್ಲಿ ವಾಟ್ಸಪ್‍ನಲ್ಲಿ ಹರಿದಾಡಿತ್ತಾದರೂ ಅದನ್ನು ಓದಿದವರು ಗಂಭೀರವಾಗಿ ತೆಗೆದುಕೊಂಡಂತಿಲ್ಲ. ಇದಕ್ಕೆ ಸೀದಾಸಾದಾ ಉದಾಹರಣೆಯೆಂದರೆ ಮೊನ್ನೆ ಮೊನ್ನೆ ನಡೆದ ಘಟನೆ. ನನ್ನ ಮಿತ್ರರೊಬ್ಬರು ಹೆಲ್ಮೆಟ್ ಇದ್ದರೂ ಸಹ ಅದನ್ನು ಧರಿಸದೆ ಬೈಕ್ ಚಲಾಯಿಸುತ್ತಿದ್ದಾಗ ಕಣ್ಣಿನೊಳಗೆ ಕಸವೊಂದು ಹೋಗಿ ಕಣ್ಣು ಬಾತುಕೊಂಡಿದ್ದಲ್ಲದೆ, ಎರಡು ದಿನ ನೋವನ್ನು ಅನುಭವಿಸುವುದರ ಜೊತೆಗೆ ಅದರ ಚಿಕಿತ್ಸೆಗೆ ಒಂದು ಹೆಲ್ಮೇಟಿನ ದರಕ್ಕಿಂತಲೂ ಜಾಸ್ತಿ ಹಣವನ್ನು ಆಸ್ಪತ್ರೆಗೆ ತೆತ್ತು ಬರಬೇಕಾಯಿತು. ಇವತ್ತಿಗೂ ಹೆಲ್ಮೆಟ್ ಇಲ್ಲದೆ, ಇದ್ದರೂ ಕೈಯಲ್ಲಿ ಸಿಕ್ಕಿಸಿ ಬೈಕ್ ಚಲಾಯಿಸುವವರು ನಿತ್ಯ ಸಿಗುತ್ತಾರೆ. ಅಂಥವರನ್ನು ದೇವರೇ ಕಾಪಾಡಲಿ. ರಸ್ತೆಕರವನ್ನು ಕಟ್ಟಿದ ತಕ್ಷಣ ರಸ್ತೆ ನಮ್ಮದಾಗುವುದಿಲ್ಲ. ರಸ್ತೆ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಇದು ಸ್ಮಾರ್ಟ್‍ಯುಗ, ವೇಗವಾಗಿ ಹೋಗುತ್ತಿರುವ ಯುಗದಲ್ಲಿ ನಾವು ಅಪ್ಡೇಟ್ ಆದರೆ ಸಾಕು..ವೇಗವಾಗಿ ಹೋಗುವುದು ಬೇಡ. ನಮ್ಮ ಜೀವ ನಮ್ಮ ಕೈಯಲ್ಲಿದೆ, ಸ್ವಯಂ ರಕ್ಷಿಸಿಕೊಳ್ಳೋಣ. ಅಲ್ಲದೆ ನಮ್ಮ ತಪ್ಪಿಂದ ಬೇರೆಯವರಿಗೆ ಆಘಾತವಾಗುವುದು ಬೇಡ. ಜಾಗೃತರಾಗಿರೋಣ. ರಸ್ತೆಯ ನಿಯಮಗಳನ್ನು ಸವಾಲಾಗಿ ಸ್ವಿಕರಿಸಿ-ಪಾಲಿಸೋಣ. ನಿಯಮಗಳನ್ನು ಪಾಲಿಸದಿರುವುದೂ ಒಂದು ಬಗೆಯ ಅನ್ಯಾಯವೇ. ನ್ಯಾಯಯುತವಾಗಿ ಬಾಳಿ ಅನ್ಯಾಯದ ವಿರುದ್ಧ ತಲೆ ಎತ್ತೋಣ.

ಹೊಸ್ಮನೆ ವಿಷ್ಣು ಭಟ್ಟ

vishnubhat.h@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!