ಅಂಕಣ

ಅನವಶ್ಯಕ ವಿಚಾರಗಳಲ್ಲಿ, ಅತೀ ಅವಶ್ಯಕ ವಿಚಾರವನ್ನೇ ಮರೆಯುತ್ತಿದ್ದೇವೆ….

ಮಾನವನು ಕೃತಕವಾಗಿ ನಿರ್ಮಿಸಲು ಸಾಧ್ಯವಾಗದ, ಹಲವು ಸಂಪನ್ಮೂಲಗಳಲ್ಲಿ ‘ನೀರು’ ಕೂಡ ಒಂದು. ಮನುಷ್ಯನ ದೇಹದಲ್ಲಿ ಸುಮಾರು 65% ನೀರಿದೆ. ಪ್ರತಿದಿನ ಬೆವರು, ಮೂತ್ರ, ಉಸಿರುಗಳ ಮೂಲಕ 5% ನೀರು ನಷ್ಟವಾಗುತ್ತದೆ.ನಂತರ ಅದನ್ನು ಕುಡಿಯುವ ನೀರಿನ ಮೂಲಕ ಸರಬರಾಜು ಮಾಡಿಕೊಳ್ಳಬೇಕಾಗುತ್ತದೆ. 15% ಗೂ ಹೆಚ್ಚು ನೀರು ದೇಹದಿಂದ ಕಳೆದು ಹೋದರೂ ಸಾವು ಖಂಡಿತ. ನಮ್ಮ ಜೀವನಕ್ಕೆ ಇಷ್ಟೊಂದು ಅಗತ್ಯವಿರುವ ನೀರಿಗೆ ಇಂದು ಬರಗಾಲ ಪ್ರಾರಂಭವಾಗಿ, ನಮ್ಮ ದೇಶದ ಹಲವು ಕಡೆ ಜನಜೀವನ ಅತೀ ಸಂಕಷ್ಟದಲ್ಲಿದೆ. ಹಿಂದೆ ಒಂದು ಹೆಣ್ಣಿನ ಸಲುವಾಗಿ ಮಹಾಭಾರತ, ರಾಮಾಯಣವೇ ನಡೆದು ಹೋಯಿತು. ಆದರೆ ಇಂದು ನೀರಿಗಾಗಿ ನಮ್ಮ ದೇಶದಲ್ಲಿ ಇನ್ನೊಂದು ಹೊಸ ರಾಮಾಯಣ, ಮಹಾಭಾರತ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. ಏಕೆಂದರೆ ನಮ್ಮ ದೇಶದಲ್ಲಿ ಇಂದು ನೀರಿನ ಸಮಸ್ಯೆಯ ತೀವ್ರತೆ ಅಷ್ಟಿದೆ. ಒಂದು ಕಡೆ ಬರಗಾಲವಾದರೆ, ಇನ್ನೊಂದು ಕಡೆ ಇರುವ ನೀರಿಗಾಗಿ ಎದ್ದಿರುವ ವಿವಾದಗಳು. ಇವುಗಳ ಕುರಿತು ಈ ಮುಂದೆ ನೀಡಲಿರುವ

ಅಂಕಿ-ಅಂಶಗಳನ್ನು ನೋಡಿದಾಗ ನಿಮಗೇ ತಿಳಿಯುತ್ತದೆ, ಸಮಸ್ಯೆಯ ತೀವೃತೆಯ ಬಗ್ಗೆ.
ಕಾನೂನು ಮಂತ್ರಾಲಯ ಭಾರತ ಸರ್ಕಾರದ ಸರ್ವೆಯ ಪ್ರಕಾರ, ನಮ್ಮ ಇಡೀ ದೇಶದಲ್ಲಿ, ಉಚ್ಛ ನ್ಯಾಯಾಲಯ, ಸರ್ವೋಚ್ಛ ನ್ಯಾಯಾಲಯ ಹಾಗೂ ಹಸಿರು ನ್ಯಾಯಪೀಠ ಈ ಎಲ್ಲಾ ನ್ಯಾಯಾಲಯಗಳಲ್ಲೂ ಸೇರಿ ಸುಮಾರು 133 ಇತ್ಯರ್ಥವಾಗದ ‘ನೀರಿನ ವಿವಾದ’ಕ್ಕೆ ಸಂಬಂದಿಸಿದ ಕೇಸುಗಳಿವೆ ಎಂದರೆ ಆಶ್ಚರ್ಯವಾಗುವುದು. ಅದರಲ್ಲಿ 8 ವಿವಾದಗಳು ಅತ್ಯಂತ ದೊಡ್ಡ ವಿವಾದವೆಂದು ಪರಿಗಣಿಸಿ ಅದಕ್ಕೆಂದು ಪ್ರತ್ಯೇಕ ಅಂತರ ರಾಜ್ಯ ನ್ಯಾಯ ಪೀಠದ ವ್ಯವಸ್ಥೆ ಮಾಡಲಾಗಿದೆ. ಇದಾವುದೂ ಇನ್ನೂ ಇತ್ಯರ್ಥವಾಗದೇ ಉಳಿದಿವೆ. ಇದರ ಕುರಿತು ಯಾವ ಸರ್ಕಾರವಾಗಲೀ, ರಾಜಕಾರಣಿಗಳಗಲೀ, ಮಾದ್ಯಮದವರಾಗಲೀ ತಲೆ ಕೆಡಿಸಿಕೊಂಡಿಲ್ಲ. ಅದು ಬಿಡಿ, 2015 ರಲ್ಲಿ ನಮ್ಮ ದೇಶದ 70% ಹಳ್ಳಿಗಳು ಬರಗಾಲ ಪೀಡಿತ ಹಳ್ಳಿಗಳೆಂದು ಘೋಷಣೆಯಾಗಿದೆ. ಇಷ್ಟಾದರೂ ಜನರಾಗಲೀ, ಮಾದ್ಯಮದವರಾಗಲೀ, ಸರ್ಕಾರವಾಗಲೀ, ಇದರ ಬಗ್ಗೆ ಗಂಭೀರವಾಗಿ ಆಲೋಚಿಸಿರುವಂತೆ ಕಾಣುವುದಿಲ್ಲ. ಇದು ನೀರಿನ ಬರಗಾಲದ ಕುರಿತಾದರೆ, ಇರುವ ನೀರಿನ ಸದ್ಭಳಕೆ ಹಾಗೂ ನೈರ್ಮಲ್ಯದ ಕುರಿತಾಗಿ ಹೇಳುತ್ತ ಹೋದರೆ ಸಮಸ್ಯೆಯ ಇನ್ನೊಂದು ಮುಖ ತೆರೆದುಕೊಳ್ಳುತ್ತದೆ. ನಮ್ಮ ದೇಶ ವಿಜ್ಞಾನದಲ್ಲಿ, ತಂತ್ರಜ್ಞಾನದಲ್ಲಿ, ಉಪಗ್ರಹ ಉಡಾವಣೆಯಲ್ಲಿ ಹೀಗೆ ಎಲ್ಲದರಲ್ಲೂ ಬಹುತೇಕ ಅಭಿವೃದ್ಧಿ ಹೊಂದಿದ ದೇಶವಾಗಿದೆ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ, ಭಾರತ ಇವತ್ತಿಗೂ ನೀರು ಹಾಗೂ ನೈರ್ಮಲ್ಯದ ವಿಚಾರದಲ್ಲಿ ಜಗತ್ತಿನ ಅತೀ ಹಿಂದುಳಿದ ದೇಶಗಳಲ್ಲಿ ಒಂದಾಗಿದೆ. ಇದರಿಂದಾಗಿ ಕಳೆದ ಹತ್ತು ವರ್ಷಗಳಲ್ಲಿ ಭಾರತ 16 ರೀತಿಯ ಸಾಂಕ್ರಾಮಿಕ ರೋಗಗಳಿಗೆ ಜನ್ಮ ನೀಡಿದೆ, ಅದರಲ್ಲೂ ಡಯೂರಿಯಾ ಹಾಗೂ ವೈರಲ್ ಫಿವರ್‍ನಂತಹ ರೋಗಗಳು ಕಲುಷಿತ ನೀರಿನಿಂದಲೇ ಬರುತ್ತಿದೆ ಎಂಬುದು ನಂಬಲು ಕಷ್ಟವಾದರೂ ನಿಜ. ಕೇವಲ ಇಷ್ಟೇ ಅಲ್ಲ, ನಮ್ಮ ದೇಶದಲ್ಲಿನ ಸ್ವಚ್ಛತೆಯ ಕೊರತೆಯಿಂದಾಗಿ, ಅಂತರ್ಜಲವೂ ಕಲುಷಿತಗೊಂಡು, ನೀರಿನಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚು ಫ್ಲೋರೈಡ್ ಅಂಶ ಸೇರಿ, ಸಂಧಿವಾತ, ಹಲ್ಲು ಸವೆತ, ಮೂಳೆ ಸವೆತ, ಕೊನೆಗೆ ಮಾನಸಿಕ ಅಸ್ವಸ್ಥತೆಯೂ ಸೇರಿದ “ಫ್ಲೋರೋಸಿಸ್” ಎನ್ನುವ ಭಯಾನಕ ಖಾಯಿಲೆಯಿಂದ ಅದೆಷ್ಟೋ ಜನರು ನರಳುತ್ತಿರುವುದು ಎಷ್ಟು ಜನರಿಗೆ ತಿಳಿದಿದೆ? ಎಷ್ಟು ಮಾದ್ಯಮಗಳು ಈ ಸಮಸ್ಯೆಯ ಗಂಭೀರತೆಯನ್ನು ವರದಿ ಮಾಡಿವೆ? ಯಾವುದೋ ಧರ್ಮದ ವಿಚಾರಕ್ಕಾಗಿಯೋ, ಯಾವುದೋ ಸಿನಿಮಾ ತಾರೆ ಅದೇನೋ ಹೇಳಿಕೆ ನೀಡಿದನೆಂದೋ, ಕೋಮುವಾದ,ಜಲ್ಲಿಕಟ್ಟು, ಅಲ್ಲೇಲ್ಲೋ ಒಬ್ಬ ಮಹಾತ್ಮನ ಮೂರ್ತಿ ಕಟ್ಟುವುದು ಹೇಗೆ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಹೀಗೆ ಅನವಶ್ಯಕ ಸುದ್ದಿಗಳನ್ನು ಬಿತ್ತರಿಸುತ್ತಾ ಕಾಲ ಕಳೆಯುತ್ತಿದ್ದಾರೆ. ಯಾವುದೋ ಹಬ್ಬದ ಆಚರಣೆಗಾಗಿ ಹೋರಾಟ ಮಾಡುವ, ಸರ್ಕಾರಕ್ಕೆ ಒತ್ತಡ ಹಾಕುವ ಜನ ನೀರಿನ ಇಂತಹ ಗಂಭೀರ ಸಮಸ್ಯೆಗಳ ಕುರಿತಾಗಿ ಇನ್ನೂ ಆಲೋಚಿಸದಿರುವುದೇ ವಿಷಾದನೀಯ ಸಂಗತಿ. ಎಲ್ಲೋ ವರ್ಷಕ್ಕೊಂದು ಸಲ ಕಾವೇರಿ ನೀರಿಗಾಗಿಯೋ, ಮಹದಾಯೀ ಹೋರಾಟವೆಂದೋ, ಹೋರಾಟ ಮಾಡಿ, ಆಮೇಲೆ ತೆಪ್ಪಗಾಗಿ, ಕುಳಿತರೆ, ಈ ಸಮಸ್ಯೆ ಬಗೆಹರಿಯಲು ಸಾಧ್ಯವೆ? ನೀರು ನಮಗೆ ಬೆಳಿಗ್ಗೆ ಎದ್ದಾಗಿನಿಂದ ಹಿಡಿದು, ರಾತ್ರಿ ಮಲಗುವವರೆಗೂ ಅತೀ ಅಗತ್ಯವಾಗಿ ಬೇಕಾಗಿರುವ ಸಂಪನ್ಮೂಲ. ಅಂದ ಮೇಲೆ ಇದರ ಕುರಿತು ನಾವು ಪ್ರತಿನಿತ್ಯ ಗಂಭೀರವಾಗಿ ಆಲೋಚಿಸಲೇಬೇಕಲ್ಲವೇ? ಅದರಲ್ಲೂ ಇಂದು ನೀರಿನ ಸಮಸ್ಯೆಯ ತೀವ್ರತೆ ಇಷ್ಟೊಂದು ಇರುವಾಗ, ಯಾವುದೋ ಅನವಶ್ಯಕ ಸುದ್ದಿಗಳಿಗೆ ನಮ್ಮ ಸಮಯ ಹಾಳು ಮಾಡುತ್ತಾ ಕುಳಿತುಕೊಳ್ಳುವ ಬದಲು, ನೀರಿನ ಸದ್ಭಳಕೆ ಹಾಗೂ ನೈರ್ಮಲ್ಯದ ಕುರಿತು ನಾವುಗಳೇ ಹೆಚ್ಚಿನ ಆಸ್ಥೆ ವಹಿಸಿದರೆ, ನಮ್ಮ ಜನರಲ್ಲೇ ಸರಿಯಾದ ಪ್ರಜ್ಞೆ ಬೆಳೆದರೆ, ನಾವೇ ನಿರ್ಮಿಸಿದ ಸರ್ಕಾರ ನಮಗೆ ತಲೆಬಾಗದೇ ಇರಲು ಸಾಧ್ಯವಿಲ್ಲ. ನಮ್ಮ ವಿಚಾರ ಸರಣಿಯೇ ಮೊದಲು ಬದಲಾಗಬೇಕಿದೆ.

ನೋಡಿ, ನಮ್ಮ ಕರ್ನಾಟಕ ರಾಜ್ಯವನ್ನು ತೆಗೆದುಕೊಂಡರೂ, ಅದರಲ್ಲೂ ಮಲೆನಾಡು ಪ್ರದೇಶಗಳನ್ನು ತೆಗೆದುಕೊಂಡರೂ, ಈ ಮೊದಲು ನೀರಿನ ಸಮಸ್ಯೆ ಇರಲಿಲ್ಲ, ಆದರೆ ಕಳೆದೆರಡು ವರ್ಷಗಳಿಂದ ಸಂಪದ್ಭರಿತವಾದ ಮಲೆನಾಡಿನಲ್ಲೂ ಕೂಡ ನೀರಿನ ಬರಗಾಲ ಎದ್ದು ಕಾಣುತ್ತಿದೆ. ಇನ್ನು ನಮ್ಮ ಇಡೀ ದೇಶದ ಕಥೆಯೇನು ಎಂಬುದನ್ನು ನೀವೆ ವಿಚಾರ ಮಾಡಿ. ಇತ್ತೀಚೆಗೆ ನನಗೆ ಪ್ರಸಿದ್ಧ ಲೇಖಕರಾದ ನಾಗೇಶ ಹೆಗಡೆಯವರು ಭೇಟಿಯಾದಾಗ ಹೇಳಿದ ಮಾತಿದು, ಈಗ ಅದು ಪ್ರಸ್ತುತವೆಂದು ಅನಿಸುತ್ತಿದೆ, ಕೇಳಿ. “ನಮ್ಮ ದೇಶದಲ್ಲಿ ಮಂಗಳ ಗ್ರಹದಲ್ಲಿ ಮೀಥೇನ್ ಇದೆಯೆಂದು, ಅದನ್ನು ಪತ್ತೆ ಹಚ್ಚಲು ಕೋಟ್ಯಾಂತರ ರೂ ಖರ್ಚು ಮಾಡಿ, ಅದಕ್ಕೆ ಸಂಬಂಧಿಸಿದ ಉಪಗ್ರಹ ಉಢಾವಣೆ ಮಾಡಿದರು, ವಿಚಿತ್ರ ನೋಡಿ, ಒಳ ಚರಂಡಿಯಲ್ಲಿ ಮೀಥೇನ್ ಪ್ರಮಾಣ ಅಧಿಕವಾಗಿದ್ದು, ಅದರ ಪ್ರಮಾಣ ಪತ್ತೆ ಹಚ್ಚಲು, ಕೇವಲ 50ರೂ ಗಳಿಗೆ ಸಿಗುವ ಸಾಧನವೊಂದಿದೆ. ಅದನ್ನು ನಗರ ಪಾಲಿಯವರು ಚರಂಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನೀಡುತ್ತಿಲ್ಲ. ಇದರಿಂದ ಸ್ವಚ್ಛತೆಗಾಗಿ ಒಳಚರಂಡಿಗಿಳಿದ ಅದೆಷ್ಟೋ ಕಾರ್ಮಿಕರು ಅಧಿಕ ಮೀಥೇನ್’ನಿಂದಾಗಿ ಸತ್ತಿದ್ದುಂಟು. ಎಲ್ಲೋ ಮಂಗಳ ಗ್ರಹದಲ್ಲಿರುವ ಮೀಥೇನ್ ಪತ್ತೆ ಮಾಡಲು, ಕೋಟ್ಯಾಂತರ ಖರ್ಚು ಮಾಡುವ ಸರ್ಕಾರ, ನಮ್ಮಲ್ಲೇ ಮೀಥೇನ್ ನಿಂದಾಗಿ ಸಾವನ್ನಪ್ಪುತ್ತಿರುವವರಿಗೆ 50ರೂ ಖರ್ಚು ಮಾಡಲು ತಯಾರಿಲ್ಲ”. ಎಂದು ಅವರು ಹೇಳಿದ ಮಾತು ಅತಿಯಾದ ಭಾವನೆಗಳಿಗೆ ಸಮಯ ವ್ಯರ್ಥ ಮಾಡುತ್ತಾ, ನಮ್ಮ ಕಾಲ ಬುಡದಲ್ಲೇ ಇರುವ ನೀರಿನ ಸಮಸ್ಯೆಯಂತಹ ದೊಡ್ಡ ಸಮಸ್ಯೆಯನ್ನು ನಿರ್ಲಕ್ಷಿಸುತ್ತಿದ್ದೇವೆ ಎಂದು ಅನಿಸುವಂತೆ ಮಾಡಿದ್ದಂತೂ ಸುಳ್ಳಲ್ಲ..

-ಮನು ವೈದ್ಯ
manus.vaidya@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!