ಅಂಕಣ

ಕಸದ ವಿಲೇವಾರಿ ಮತ್ತು ಮರುಬಳಕೆ, ಜನರಿಗೇ ಬೇಕು ಪ್ರಜ್ಞೆಯ ಗಳಿಕೆ…

  ಅವಳು ತನ್ನ ಮಗುವಿನ ಬಟ್ಟೆಯನ್ನು ಹೊಲಿಯುತ್ತಿದ್ದಳು. ಇದ್ದಕ್ಕಿದ್ದಂತೆ ಅವಳು ಹೊಲಿಯುತ್ತಿರುವ ಸೂಜಿಯ ತುದಿ ಮೊಂಡಾಯಿತೆನಿಸಿ, ಅವಳು ಆ ಸೂಜಿಯನ್ನು ಮುಲಾಜಿಲ್ಲದೇ ಎಸೆದುಬಿಟ್ಟಳು. ಅವಳ ಈ ಕ್ರೀಯೆಯನ್ನು ಗಮನಿಸಿದ ಅವಳ ಗಂಡ, “ಆ ಸೂಜಿಯನ್ನೇಕೆ ಎಸೆದೆ?” ಎಂದು ಪ್ರಶ್ನಿಸಿದ. ಅದಕ್ಕೆ ಅವಳು, “ಅದರ ತುದಿ ಮೊಂಡಾಯಿತು, ಹೊಲಿಗೆ ಮಾಡಲು ಸಾಧ್ಯವಿಲ್ಲ ಎಸೆದೆ, ಬೇರೆ ಸೂಜಿಯಿದೆಯಲ್ಲ ತೊಂದರೆಯಿಲ್ಲ” ಎಂದು ಸಲೀಸಾಗಿ ಹೇಳಿದಳು. ಇದಕ್ಕೆ ಅವಳ ಗಂಡ ಮುಗುಳು ನಗುತ್ತಾ ಹೇಳಿದ ಮಾತು ತುಂಬಾ ಮಾರ್ಮಿಕವಾಗಿತ್ತು. “ನೀನು ಒಂದು ಸಣ್ಣ ಸೂಜಿ ಎಂದು ಅಲಕ್ಷ ಮಾಡಿದೆಯಲ್ಲ, ಅದು ಹೇಗೆ ತಯಾರಾಗುತ್ತದೆ, ಅದರ ಹಿಂದೆ ಎಷ್ಟೊಂದು ಜನರ ಪರಿಶ್ರಮವಿದೆಯೆಂಬುದು ಗೊತ್ತಾ?” ಎಂದು ಕೇಳಲು, ಅವಳು ಸ್ಥಬ್ದಳಾಗಿ ಗಂಡನ ಮುಖವನ್ನೆ ನೋಡತೊಡಗಿದಳು. ಅವನು ಮತ್ತೆ ಮಾತು ಮುಂದುವರಿಸಿದ. “ಈ ಸೂಜಿ ತಯಾರಿಕೆಯ ಹಿಂದಿನ ಕಥೆಯನ್ನೊಮ್ಮೆ ಕೇಳು, ಪ್ರಪ್ರಥಮವಾಗಿ, ಗಣಿ ಮತ್ತು ಭೂ ವಿಜ್ಞಾನ ಸಂಸ್ಥೆಯವರು ಗಣಿಗಾರಿಕೆ ಸಲುವಾಗಿ ಸರ್ವೆ ಮಾಡಿ ಅದಿರಿನಿ ನಿಕ್ಷೇಪವನ್ನು ಪತ್ತೆ ಮಾಡಿದ ನಂತರ ಸರ್ಕಾರವು ಅದಿರನ್ನು ತೆಗೆಯಲು ಹೊರ ಗುತ್ತಿಗೆ ನೀಡುತ್ತದೆ. ಆಗ ಅದಿರನ್ನು ತೆಗೆಯುವ ಕಾರ್ಯದಲ್ಲಿ ಸಾವಿರಾರು ಗಣಿ ಕಾರ್ಮಿಕರು ಹಗಲು ರಾತ್ರಿಯೆನ್ನದೇ ಆಳವಾದ ಕಂದಕದಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಾರೆ. ಹೀಗೆ ದುಡಿಯುವ ಬಹುತೇಕ ಕಾರ್ಮಿಕರು ಬಡವರಾಗಿದ್ದು, ಮಗಳ ಮದುವೆಗೋ, ಹೆಂಡತಿಯ ಆಸ್ಪತ್ರೆ ಖರ್ಚಿಗೋ ಹೀಗೆ ಯಾವುದೋ ಒಂದು ಉದ್ದೇಶಕ್ಕಾಗಿ, ಆ ಗಣಿಯ ಧೂಳನ್ನೂ ಲೆಕ್ಕಿಸದೇ, ಅದರಿಂದಾಗುವ ಆರೋಗ್ಯ ಹಾನಿಯನ್ನೂ ಮರೆತು ಶ್ರಮವಹಿಸಿ ಕೆಲಸ ಮಾಡುತ್ತಾರೆ. ಇಲ್ಲಿಂದ ತೆಗೆದ ಅದಿರನ್ನು ದೊಡ್ಡ-ದೊಡ್ಡ ಲಾರಿಗಳಲ್ಲಿ ತುಂಬಿಸುತ್ತಾರೆ. ಅದನ್ನು ಕಾರ್ಖಾನೆಗೆ ತಲುಪಿಸಲು ನೂರಾರು ಕಿ.ಮೀ ದೂರವನ್ನು ಸುರಕ್ಷಿತವಾಗಿ ಚಾಲನೆ ಮಾಡಿಕೊಂಡು ಹೋಗುವ ಚಾಲಕನ ಶ್ರಮದ ಹಿಂದೆಯೂ ಅದೆಷ್ಟೋ ಕಷ್ಟಗಳಿರುತ್ತದೆ. ನಂತರ ಕಾರ್ಖಾನೆಗಳಲ್ಲಿ ಶುದ್ಧಗೊಳಿಸಿ, ಕರಗಿಸಲಾಗತ್ತದೆ, ನಂತರ ಸೂಜಿಯನ್ನೊಳಗೊಂಡಂತೆ ಹಲವಾರು ವಸ್ತುಗಳನ್ನು ತಯಾರಿಸಲಾಗುತ್ತದೆ. ಇಲ್ಲೂ ಸಹ ಹಲವಾರು ಕಾರ್ಮಿಕರ ಶ್ರಮ ಅಡಗಿರುತ್ತದೆ. ನಂತರ ಅವನ್ನೆಲ್ಲಾ ವಿವಿಧ ಮಾರುಕಟ್ಟೆಗಳಿಗೆ ರವಾನಿಸಲಾಗುತ್ತದೆ. ಹಾಗೇ ದೊಡ್ಡ ಮಾರುಕಟ್ಟೆಗಳಿಗೆ ಬಂದ ಸೂಜಿ, ಮತ್ತಿತರ ವಸ್ತುಗಳನ್ನು ಕಷ್ಟಪಟ್ಟು ಖರೀದಿಸಿ ತರುವ ಸ್ಥಳೀಯ ಸಣ್ಣ ಮಾರುಕಟ್ಟೆದಾರರ ಶ್ರಮದಿಂದ ನಮಗೆ ಸುಲಭದಲ್ಲಿ ವಸ್ತುಗಳು ದೊರೆಯುತ್ತದೆ. ಆ ವಸ್ತು ತಯಾರಿಕೆಯ ಹಿಂದಿರುವ ಶ್ರಮದ ಅರಿವು ಕೊಂಡುಕೊಳ್ಳುವ ವ್ಯಕ್ತಿಯಲ್ಲಿರುವುದಿಲ್ಲ, ಅದರ ಪರಿಣಾಮವೇ ಈಗ ನೀನು ಮಾಡಿದ ಕೆಲಸ” ಎಂದು ಹೇಳಿದ. ಹಾಗಾಗಿ ಒಂದು ವಸ್ತುವನ್ನು ನಿರುಪಯುಕ್ತ ಎಂದು ಎಸೆಯುವ ಮುನ್ನ ಅದರ ಹಿಂದಿರುವ ಶ್ರಮವನ್ನು ಅರಿತುಕೊಂಡು ಅದರ ಮರುಬಳಕೆ ಮತ್ತು ಮರು ಉತ್ಪನ್ನಕ್ಕೆ ಪ್ರಯತ್ನಿಸಿ.

 ಅದೊಂದು ದೊಡ್ಡ ಪಟ್ಟಣ, ಅಲ್ಲಿಂದ ಕೇವಲ ಹತ್ತು ಕಿ.ಮೀ ದೂರದಲ್ಲಿ ಒಂದು ಹಳ್ಳಿ. ಅಲ್ಲೊಬ್ಬಳು ತಾಯಿಗೆ 10 ವರ್ಷದ ಒಬ್ಬಳೇ ಮಗಳು. ಆಟ-ಪಾಠಗಳಲ್ಲಿ ಬಹಳ ಚೂಟಿಯಾಗಿದ್ದಳು, ಉತ್ಸಾಹದಿಂದ ಓಡಾಡಿಕೊಂಡಿದ್ದವಳು, ಇದ್ದಕ್ಕಿದ್ದಂತೆ ಒಮ್ಮೆಲೆ ಮಲೇರಿಯಾದಿಂದ ಹಾಸಿಗೆ ಹಿಡಿದು ಬಿಟ್ಟಳು. ಅತಿಯಾದ ಜ್ವರದಿಂದ 2-3 ದಿನ ಪ್ರಜ್ಞೆಯಿಲ್ಲದೇ ಆಸ್ಪತ್ರೆಯಲ್ಲಿ ಮಲಗಿದ್ದಳು. ಹಾಗೇ ಕೆಲವು ದಿನಗಳ ನರಳಾಟದ ನಂತರ ಸ್ವಲ್ಪ ಚೇತರಿಸಿಕೊಂಡ ಆ ಪುಟ್ಟ ಹುಡುಗಿಗೆ ಸರಿಯಾಗಿ ಪ್ರಜ್ಞೆ ಬರಲು,ಆ ತಾಯಿ ಮನಸ್ಸು ಖುಷಿಯಿಂದ ಮಗಳನ್ನು ಮಾತಾಡಿಸಲು ಮಗಳ ಬಳಿಗೆ ತೆರಳಿದಳು. ಆಗ ಆ ಪುಟ್ಟ ಬಾಲೆ ತನ್ನ ಅಮ್ಮನನ್ನುದ್ದೇಶಿಸಿ, “ಅಮ್ಮಾ ನನಗೆ ಹೀಗೆ ಮಲೇರಿಯಾ ಬಂದು ಈ ರೀತಿ ಸಂಕಟ ಅನುಭವಿಸಲು ನೀನೇ ಕಾರಣ” ಎಂದು ಅತಿಯಾದ ದುಃಖದಿಂದ ಹೇಳಿದಳು. ದಿಗ್ಬ್ರಮೆಗೊಂಡ ತಾಯಿ, “ನಾನು ಹೇಗೆ ಕಾರಣವಾಗಲು ಸಾಧ್ಯ?” ಎಂದು ಮಗಳನ್ನು ಪ್ರಶ್ನಿಸಲು, ಆ ಬಾಲೆ  “ನಮ್ಮ ಮನೆಯ ಮುಂದಿರುವ ಚರಂಡಿಯಲ್ಲಿ ನೀನು ಪ್ರತಿ ನಿತ್ಯವೂ ಕಸವನ್ನು ಚೆಲ್ಲುತ್ತಿದ್ದೆ, ಇದನ್ನು ನೋಡಿದ ಅಕ್ಕ-ಪಕ್ಕದ ಮನೆಯವರೂ ಅಲ್ಲೇ ಕಸವನ್ನು ತಂದು ಹಾಕಿದರು. ಪರಿಣಾಮ ಕಸದ ರಾಶಿಯಿಂದಾಗಿ ಚರಂಡಿಯಲ್ಲಿ ನೀರು ಹರಿದು ಹೋಗಲಾರದೇ ಅಲ್ಲೇ ನಿಂತು, ಕಸವೆಲ್ಲಾ ಅಲ್ಲೇ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗುವುದಕ್ಕೆ ಪ್ರಶಸ್ತ ಜಾಗವಾಯಿತು. ಅದರ ಪರಿಣಾಮ ನನ್ನ ಇಂದಿನ ಪರಿಸ್ಥಿತಿ”. ಎಂದಳು. ಆದ್ದರಿಂದ ಕಸವನ್ನು ಎಲ್ಲೆಂದರಲ್ಲಿ ಮನಬಂದಂತೆ ಎಸೆಯುವ ಮುನ್ನ ಅದರ ದುಷ್ಪರಿಣಾಮದ ಕುರಿತು ಸ್ವಲ್ಪ ವಿಚಾರ ಮಾಡಿ, ಪರಿಸರ ಸ್ವಚ್ಛವಾಗಿದ್ದರೆ, ನಾವು-ನೀವುಗಳೂ ಆರೋಗ್ಯದಿಂದಿರಲು ಸಾಧ್ಯ.

 ಈ ಮೇಲಿನ ಎರಡೂ ಕಥೆಗಳೂ ಕೇವಲ ಸಾಂದರ್ಭಿಕ ಚಿತ್ರಣವಷ್ಟೆ. ಕೋಟ್ಯಾಂತರ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ ಮೇಲೆ ಹೇಳಿದ ಕಥೆಯಂತಹ ಘಟನೆಗಳು, ಬೇರೆ-ಬೇರೆ ಭಾಗಗಳಲ್ಲಿ ನಡೆಯುತ್ತಲೇ ಇರುತ್ತದೆ. ನಾವುಗಳು ಮಾಡುವ ಒಂದು ತಪ್ಪಿನ ಪರಿಣಾಮ ಏನಾಗಬಹುದೆಂಬುದನ್ನು ತಿಳಿಸಲು ಈ ಕಥೆ ಒಂದು ಉದಾಹರಣೆ. ಒಂದು ವಸ್ತುವನ್ನು ಅದು ದೊಡ್ಡದಿರಲಿ, ಸಣ್ಣದಿರಲಿ ಅದನ್ನು ನಿರುಪಯುಕ್ತ ಎಂದು ಬಿಸಾಡುವಾಗ ಅದರ ಹಿಂದೆ ಮೇಲೆ ಹೇಳಿದ ಸೂಜಿಯ ಕಥೆಯಂತಹ ಒಂದು ಪರಿಶ್ರಮದ ಕಥೆಯಿದೆ ಎಂಬ ಅರಿವು, ಹಾಗೆಯೇ ಅಂತಹ ಕಸವನ್ನು ಎಲ್ಲೆಂದರಲ್ಲಿ ಚೆಲ್ಲಾಡುವುದರಿಂದಾಗುವ ನಮ್ಮ ಕುಟುಂಬಕ್ಕಾಗುವ ವ್ಯಥೆಯ ಬಗ್ಗೆ ಜಾಗೃತಿ. ಹೀಗೆ ಮಾಡುವುದರಿಂದ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದರ ಜೊತೆಗೆ, ಕಸದ ಮರುಬಳಕೆಯೂ ಸಾಧ್ಯ. ಇಂದು ಹಲವಾರು ವಸ್ತುಗಳ ಅಭಾವವಿದೆ, ಹಾಗಾಗಿ ನಾವು ಯಾವುದೇ ವಸ್ತುವನ್ನು ಉಪಯೋಗಿಸಿದ ನಂತರ ಅದರ ಮರುಬಳಕೆ ಅಥವಾ ಮರು ಉತ್ಪನ್ನ ಮಾಡುವುದರಿಂದ ದೇಶದ ಸಂಪನ್ಮೂಲಗಳನ್ನು ಕಾಪಾಡಿದಂತಾಗುತ್ತದೆ. ಇಂದು ನಾವು ಬಳಸುತ್ತಿರುವ ಪ್ಲಾಸ್ಟಿಕ್, ಗಾಜು, ಪೇಪರ್, ಖನಿಜ ಸಂಪನ್ಮೂಲಗಳು ಇತ್ಯಾದಿ ವಸ್ತುಗಳ ಸರಿಯಾದ ಮರು ಬಳಕೆಯಾದರೆ ವಸ್ತುಗಳ ಅಭಾವ ಮತ್ತು ಎಲ್ಲೆಂದರಲ್ಲಿ ಕಸ ಬೀಳುವುದು ತಪ್ಪುತ್ತದೆ. ಇದರ ಜೊತೆಗೆ ಕಬ್ಬಿಣ ಮತ್ತು ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಮರುಬಳಕೆ ಮಾಡುವುದರಿಂದ, ಇಂದು ಹೆಚ್ಚುತ್ತಿರುವ ಗಣಿಗಾರಿಕೆಯನ್ನು ತಡೆಯಬಹುದು. ಅದೇ ರೀತಿ ಇಂದು ಅದೆಷ್ಟೋ ಜನ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯ ಇಂತಹ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಸುತ್ತ-ಮುತ್ತಲಿನ ಪರಿಸರವನ್ನು ಕಸವನ್ನು ಎಸೆದು ಗಲೀಜು ಮಾಡಿರುವುದು, ಇದರಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಹಲವಾರು ಖಾಯಿಲೆಗಳಿಗೆ ನಾವು ಒಳಗಾಗುತ್ತಿರುವುದು. ನಾವು ಸೇವಿಸುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಎಲ್ಲವೂ ಸ್ವಚ್ಛವಾಗಿದ್ದರೆ ರೋಗದ ಭಯವೆಲ್ಲಿರುತ್ತದೆ ಅಲ್ಲವಾ? ಅಷ್ಟಾದರೆ ಅದೇ ಬದಲಾವಣೆ. ಈ ಸ್ವಚ್ಛತೆಯ ಬಗ್ಗೆ ಸರ್ಕಾರವೂ ಇಂದು ಬಹಳಷ್ಟು ಕೆಲಸ ಮಾಡುತ್ತಿದೆ, ಆದರೆ ಸ್ವಚ್ಛ ಭಾರತ ಅಭಿಯಾನ ಎಂದು ಮುಖ್ಯ ಬೀದಿಗಳಲ್ಲಿ ಪೊರಕೆ ಹಿಡಿದು ಕಸ ಗುಡಿಸುತ್ತಿರುವಂತೆ ಫೋಟೋ ತೆಗೆಸಿಕೊಂಡು, ಮಾದ್ಯಮಗಳಲ್ಲಿ ಪ್ರಸಾರ ಮಾಡಿದರೆ ಮಾತ್ರ ನಮ್ಮ ದೇಶವಾಗಲೀ, ನಮ್ಮ ಬೀದಿಗಳಲ್ಲಿ ಸ್ವಚ್ಛತೆಯಾಗಿ ಬಿಡುವುದಿಲ್ಲ. ಅದಕ್ಕೂ ಮೀರಿದ ನಿಜವಾದ ಪ್ರಜ್ಞೆ ನಮ್ಮ-ನಿಮ್ಮಲ್ಲಿ ಬಂದಾಗ, ಪ್ರತಿಯೊಂದು ಬೀದಿ, ಗಲ್ಲಿಗಳು, ಎಲ್ಲೆಡೆಯೂ ಸ್ವಚ್ಛತೆಯನ್ನು ಕಾಣಲು ಸಾಧ್ಯ.

ಅದಕ್ಕಾಗಿ ಜನರಿಗೇ ಸರಿಯಾದ ಪ್ರಜ್ಞೆ ಬರದ ಹೊರತು ಸರ್ಕಾರ ಏನೇ ಮಾಡಿದರೂ ಸಂಪೂರ್ಣ ಬದಲಾವಣೆ ಅಸಾಧ್ಯ. ಇಂದು ಪರಿಸರ ಇಷ್ಟೊಂದು ಮಲಿನವಾಗುತ್ತಿರುವುದಕ್ಕೆ, ಹೊಸ ಹೊಸ ಕಾಯಿಲೆಗಳು ಬರುತ್ತಿರುವುದಕ್ಕೆ, ನಾವುಗಳು ಮಾಡುತ್ತಿರುವ ಇಂತಹ ತಪ್ಪುಗಳೇ ಕಾರಣ ನೆನಪಿರಲಿ. ನಾಗರೀಕರೆನಿಸಿಕೊಂಡು ಅನಾಗರೀಕರಂತೆ ವರ್ತಿಸುತ್ತಿರುವ ಈ ಪರಿ ನಿಜವಾಗಿಯೂ ನಾಚಿಕೆಗೇಡು.

 

  -ಮನು ವೈದ್ಯ

manus.vaidya@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!