೧೯೯೩ರಲ್ಲಿ ರಾಜಕುಮಾರ್ ಸಂತೋಷಿ ನಿರ್ದೇಶನದಲ್ಲಿ ಮೂಡಿಬಂದ ಹಿಂದಿ ಚಿತ್ರ ಧಾಮಿನಿ. ಮೀನಾಕ್ಷಿ ಶೇಷಾದ್ರಿ ಈ ಚಿತ್ರದ ನಾಯಕಿ.
ಧಾಮಿನಿ ಎಂಬ ನೇರ ಹಾಗೂ ಮುಗ್ದ ಹುಡುಗಿಯ ಬದುಕಿನ ಚಿತ್ರಣವೇ ಧಾಮಿನಿ. ಚಿತ್ರದ ನಾಯಕ ಶೇಖರ್ (ರಿಷಿ ಕಪೂರ್) ನಾಯಕಿಯನ್ನು ಒಂದು ಸಿನಿಮಾ ಥಿಯೇಟರ್ ಬಳಿ ನೋಡುತ್ತಾನೆ ಮೊದಲ ನೋಟದಲ್ಲೇ ಧಾಮಿನಿ ಅವನಿಗೆ ಹಿಡಿಸುತ್ತಲೇ, ಅವಳ ರೂಪಕ್ಕಿಂತ ಅವಳ ನೇರವಾದ ಮಾತು ಅವನಿಗೆ ಬಹಳ ಹಿಡಿಸುತ್ತದೆ, ಆಗರ್ಭ ಶ್ರೀಮಂತ ಕುಟುಂಬದಲ್ಲಿ ವ್ಯತಿರಿಕ್ತ ಅಭಿರುಚಿ ಹೊಂದಿರುವ ನಾಯಕ ತನ್ನ ತಮ್ಮನ ಮದುವೆಯಾದರು ತನ್ನ ಅಭಿರುಚಿಗಳಿಗೆ ಹೊಂದದ ಹುಡುಗಿ ಸಿಗದೇ ಮದುವೆಯಾಗದೆ ಉಳಿದಿರುತ್ತಾನೆ, ಧಾಮಿನಿಯನ್ನು ಕಂಡ ನಂತರ ತಾನು ಧಾಮಿನಿಯನ್ನು ಮದುವೆಯಾಗುವುದಾಗಿ ಹೇಳುತ್ತಾನೆ, ಮನೆಯವರಿಗೂ ತಮ್ಮ ಮಗ ಮಧ್ಯಮ ವರ್ಗದ ಹುಡುಗಿಯನ್ನು ಮದುವೆಯಾಗುವುದು ಇಷ್ಟವಾಗುವುದಿಲ್ಲ ಆದರೂ ಮಗ ಮತ್ತೆಲ್ಲಿ ಮನಸ್ಸು ಬದಲಿಸಿಬಿಡುತ್ತಾನೋ ಎಂಬ ಭಯದಿಂದ ಒಪ್ಪುತ್ತಾರೆ, ನಾಯಕನ ತಂದೆ ಕೇಳುತ್ತಾರೆ ಅಂಥದ್ದೇನಿದೆ ಆ ಹುಡುಗಿಯಲ್ಲಿ ಎಂದು ನಾಯಕ “ನೀವೇ ಬಂದು ನೋಡಿ” ಎನ್ನುತ್ತಾನೆ, ಅದರಂತೆ ತಂದೆ ಮಗ ಇಬ್ಬರು ಧಾಮಿನಿಯನ್ನು ನೋಡಲು ಬರುತ್ತಾರೆ, ಈ ಮಧ್ಯೆ ಧಾಮಿನಿಯ ಅಕ್ಕ ಎದುರು ಮನೆಯ ವ್ಯಕ್ತಿಯೊಂದಿಗೆ ಓಡಿಹೋಗಿರುತ್ತಾಳೆ , ಧಾಮಿನಿಯ ತಂದೆ ತಾಯಿಗೆ ಈ ಬಗ್ಗೆ ವರನ ಕಡೆಯವರಿಗೆ ತಿಳಿಯುವುದು ಇಷ್ಟವಿಲ್ಲ, ಅವರು ಧಾಮಿನಿಗೆ ನಿನ್ನಕ್ಕ ಕೆಲಸಕ್ಕಾಗಿ ಮುಂಬೈಗೆ ಹೋಗಿರುವುದಾಗಿ ಹೇಳು ಅಂತ ಹೇಳಿಕೊಡ್ತಾರೆ.
ಆದರೆ ಧಾಮಿನಿ ಮಾತ್ರ ನೇರವಾಗಿ ನಾಯಕನ ತಂದೆಗೆ ತನ್ನ ಅಕ್ಕನ ಬಗ್ಗೆ ಸತ್ಯ ಹೇಳಿಬಿಡುತ್ತಾಳೆ. ಒಂದು ಕ್ಷಣ ಅಪ್ಪ ಮಗ ತಬ್ಬಿಬ್ಬಾದರು ಚೇತರಿಸಿಕೊಂಡು ಧಾಮಿನಿಯ ಸಜ್ಜನಿಕೆಗೆ ತಲೆದೂಗುತ್ತಾರೆ, ಆಗ ನಾಯಕ ತಂದೆಯೊಂದಿಗೆ ಹೇಳುತ್ತಾನೆ, “ಅಪ್ಪ ಇವಾಗ ಗೊತ್ತಾಯ್ತ ಧಾಮಿನಿಯಲ್ಲಿ ಅಂತದ್ದೇನಿದೆ ಅಂತ “.
ಧಾಮಿನಿ ಮತ್ತು ಶೇಖರ್ ದಂಪತಿಗಳಾಗುತ್ತಾರೆ, ಹೀಗಿರುವಾಗೊಮ್ಮೆ ಮನೆಯಲ್ಲಿ ಹೋಳಿ ಹುಣ್ಣಿಮೆ ಸಂಭ್ರಮ ಎಲ್ಲರೂ ಬಣ್ಣದೋಕುಳಿಯಲ್ಲಿ ಆಡುತ್ತಿರುತ್ತಾರೆ ಈ ಸಮಯದಲ್ಲಿ ಮನೆಗೆ ಧಾಮಿನಿಯ ಭಾಮೈದ ಹಾಗೂ ಆತನ ಸ್ನೇಹಿತರು ಸೇರಿ ಧಾಮಿನಿಯ ಎದುರೇ ಮನೆಗೆಲಸದವಳಾದ ಊರ್ಮಿ ಎಂಬ ಹೆಂಗಸಿನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗುತ್ತಾರೆ, ಇದನ್ನು ತಡೆಯಲು ಧಾಮಿನಿ ಹಾಗೂ ಶೇಖರ್ ಇಬ್ಬರು ಪ್ರಯತ್ನಿಸುತ್ತಾರೆ ಕಾಲ ಮಿಂಚಿ ಹೋಗಿರುತ್ತಾರೆ, ಅತ್ಯಾಚಾರ ಎಸಗಿದ ಕಿಡಿಗೇಡಿಗಳು ಊರ್ಮಿಯನ್ನು ಕಸದ ತೊಟ್ಟಿಯ ಪಕ್ಕ ಎಸೆದು ಓಡಿ ಹೋಗುತ್ತಾರೆ, ಈ ಘಟನೆ ಧಾಮಿನಿಯನ್ನು ಬಹುವಾಗಿ ಕಾಡುತ್ತದೆ, ಮನೆಯವರೆಲ್ಲ ಗಂಡನನ್ನು ಸೇರಿ ಆಕೆಗೆ ಸುಳ್ಳು ಹೇಳುವಂತೆ ಪ್ರೇರೇಪಿಸುತ್ತಾರೆ, ಎಂದು ಸುಳ್ಳು ಹೇಳದ ಧಾಮಿನಿ ಅಂದು ಪೋಲೀಸರ ಮುಂದೆ ಸುಳ್ಳು ಹೇಳುತ್ತಾಳೆ, ಆದರೆ ಅವಳ ಒಂದೇ ಹಠ ಊರ್ಮಿಯನ್ನು ನೋಡಬೇಕು ಅವಳಿಗೆ ಸಹಾಯ ಮಾಡಬೇಕು, ಇದಕ್ಕೆ ಮನೆಯವರ ಒಪ್ಪಿಗೆ ಇಲ್ಲ, ಕೊನೆಗೆ ಎಲ್ಲರ ಮಾತನ್ನು ಮೀರಿ ಊರ್ಮಿಯನ್ನು ನೋಡಲು ಆಸ್ಪತ್ರೆಗೆ ಹೋಗುತ್ತಾಳೆ, ಅಲ್ಲಿ ಆಕೆಯ ಸ್ಥಿತಿಯನ್ನು ಕಂಡು ಅವಳ ಮನಸ್ಸು ತಡೆಯುವುದಿಲ್ಲ ಪೊಲೀಸರಿಗೆ ನಿಜ ಹೇಳುತ್ತಾಳೆ, ಆದರೆ ಪೋಲೀಸರ ಭ್ರಷ್ಟಾಚಾರ ನೀತಿ, ದೊಡ್ಡವರ ರಾಜಕೀಯ ಗಾಳಕ್ಕೆ ಸಿಕ್ಕು ಅವಳನ್ನು ಹುಚ್ಚಿ ಎಂದು ಹುಚ್ಚ್ಚಾಸ್ಪತ್ರೆಗೆ ಸೇರಿಸಲಾಗುತ್ತದೆ, ಅಲ್ಲದೆ ಅವಳನ್ನು ಕೊಲ್ಲಲು ಪ್ರಯತ್ನಿಸುತ್ತಾರೆ ಅಲ್ಲಿಂದ ತಪ್ಪಿಸಿಕೊಂಡು ಬರುವುದರಲ್ಲಿ ಇತ್ತ ಊರ್ಮಿಯನ್ನು ಆಸ್ಪತ್ರೆಯಲ್ಲಿ ಕೊಲೆ ಮಾಡಿ ಆತ್ಮಹತ್ಯೆ ಎಂದು ಮುಚ್ಚಿ ಹಾಕಲಾಗುತ್ತದೆ, ಈ ಅನ್ಯಾಯವನ್ನು ಸಹಿಸದ ಧಾಮಿನಿ ಹೇಗೆ ಇದರ ವಿರುದ್ಧ ಹೋರಾಡುತ್ತಾಳೆ ,
ಹೇಗೆ ನೊಂದ ಊರ್ಮಿಗೆ ನ್ಯಾಯ ಕೊಡಿಸುತ್ತಾಳೆನ್ನುವುದೇ ಚಿತ್ರದ ಕಥೆ. ಒಂದು ಹೆಣ್ಣಿನ ಮತ್ತೊಂದು ಹೆಣ್ಣಿನ ಅಂತರಾಳ ಸ್ಪಂದಿಸುವ ರೀತಿ, ಅತ್ಯಾಚಾರವನ್ನು ಸಮಾಜದ ಅನೈತಿಕತೆ ಎಷ್ಟು ಹಗುರವಾಗಿ ಪರಿಗಣಿಸುತ್ತದೆ, ಇಂತ ಅನ್ಯಾಯಗಳಿಗೆ ಸಹಾಯ ಮಾಡುವ ಸಾಮಾಜಿಕ ಅನೀತಿಯನ್ನು ಉತ್ತಮ ರೀತಿಯಲ್ಲಿ ತೋರಿಸಲಾಗಿದೆ. ಮುಖ್ಯವಾಗಿ ಅತ್ಯಾಚಾರಕ್ಕೆ ಗುರಿಯಾದ ಹೆಣ್ಣನ್ನು ಆಕೆಗೆ ಸಹಾಯ ಮಾಡುವವರನ್ನು ಯಾವ ರೀತಿ ಚಿತ್ತವದೆ ಮಾಡಲಾಗುತ್ತದೆ ಎಂಬುದನ್ನು ಮುಕ್ತವಾಗಿ ತೋರಿಸಿದ್ದಾರೆ. ಅನ್ಯಾಯ ಮಾಡಿದವರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲೇ ಬೇಕು ಎನ್ನುವ ಧಾಮಿನಿಯ ಜೀವಂತ ಪಾತ್ರ ನಿಜಕ್ಕೂ ಅಧ್ಬುತವಾಗಿದೆ. ಸಿನಿಮಾ ಬಂದದ್ದು ೨೦ನೇ ಶತಮಾನದಲ್ಲಾದರೂ ೨೧ನೇ ಶತಮಾನಕ್ಕೂ ಸಮಾಜದಲ್ಲಿರುವುದು ಅದೇ ಸನ್ನಿವೇಶವೇ ಎಂಬುದು ವಿಷಾದಕರ ಸಂಗತಿ.