ಅಂಕಣ

ನಿಮ್ಮ ಪಕ್ಕದ ಮನೆಯವರು ಯಾರು ಅಂತಾ ಗೊತ್ತಾ?

ಮನುಷ್ಯ ಸಂಘ ಜೀವಿ. ಮನುಷ್ಯ ಮೊದಲಿನಿಂದಲೂ ತನ್ನ ಸುತ್ತ ಮುತ್ತ ಸಮಾಜವನ್ನು ಕಟ್ಟಿಕೊಂಡು ಜನರೊಡನೆ ಬೆರತು ಬದುಕಿಕೊಂಡು ಬಂದಿದ್ದಾನೆ. ಭೂಮಿಯ ಈ ತುದಿಯಿಂದ ಆ ತುದಿಯ ತನಕ ಕಾಣುವ ವಾಸ್ತುಶಿಲ್ಪ ಶೈಲಿಯಲ್ಲಿ ಮನುಷ್ಯನ ಈ ಸ್ವಭಾವವನ್ನು ಕಾಣಬಹುದು. ಹಳೆಯಕಾಲದ ಮ‌ನೆ, ದೇವಸ್ಥಾನ, ಚರ್ಚ್, ಮಸೀದಿಗಳು, ಅರಮನೆ, ಛತ್ರ, ಕೋಟೆ, ಬೀದಿ‌, ಯಾವುದನ್ನೇ ನೋಡಿ ಜನರು ಒಬ್ಬರಿಗೊಬ್ಬರು ಬೆರತು ಬಾಳುವ ಹಾಗೆ ವಿನ್ಯಾಸ ಮಾಡಲಾಗಿದೆ. ದೇವಸ್ಥಾನದ ಗರ್ಭಗುಡಿಯನ್ನು ಬಿಟ್ಟರೆ ಮತ್ತೆಲ್ಲ ಪ್ರದೇಶದಲ್ಲಿ ಜನರ ಒಡನಾಡಟಕ್ಕೇ ಮಾಡಿದಂತಿದೆ. ಚರ್ಚ್ ಹಾಗೂ ಮಸೀದಿಗಳು ಕೂಡಾ ಹಾಗೆಯೇ. ಆವತ್ತು ಬೀದಿಗಳನ್ನು ಕೂಡ ಹೀಗೆಯೆ ವಿನ್ಯಾಸಗೊಳಿಸಲಾಗಿತ್ತು ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ಮನೆಯಂತೂ ಒಂದು ಅದ್ಭುತ ಉದಾಹರಣೆ. ಮನೆಯನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತಿತ್ತು ಅಂದರೆ ಮನೆಯವರೆಲ್ಲ ದಿನಕ್ಕೆ ಹತ್ತು ಬಾರಿಯಾದರೂ ಒಬ್ಬರಿಗೊಬ್ಬರು ಭೇಟಿ ಆಗಲೇ ಬೇಕಿತ್ತು. ಅಡುಗೆ ಮನೆಯಿಂದ, ಮಲಗುವ ಕೋಣೆಗೆ ಹೋಗಬೇಕು ಅಂದರೆ ಮನೆಯ ಮುಖ್ಯ ಕೋಣೆಯ ಮೂಲಕವೇ ಹೋಗಬೇಕಿತ್ತು. ಇದೊಂದೇ ಅಲ್ಲ, ಗಾಳಿ‌ ಬೆಳಕು ಕೂಡ ಮನೆಯ ಮೂಲೆ ಮೂಲೆಯನ್ನು ತಲುಪವ ಹಾಗೆ ವಿನ್ಯಾಸಗೊಳಿಸಲಾಗುತ್ತಿತ್ತು.‌ ಕಚೇರಿಗಳು ಕೂಡಾ ಹಾಗೆಯೇ, ಎಲ್ಲರೂ ಒಂದು ಕಡೆ ತೆರೆದ ಕೋಣೆಯಲ್ಲಿ ಕೂತು ಕೆಲಸ ಮಾಡುವ ಹಾಗೆ ವಿನ್ಯಾಸ ಮಾಡಲಾಗಿತ್ತು. ಇವತ್ತಿಗೂ ಯಾವುದೇ ಹಳೆಯ ಸರ್ಕಾರಿ ಕಚೇರಿಗಳಿಗೆ ಹೋಗಿ ನೋಡಿ ಇದನ್ನು ಕಾಣಬಹದು.

 

ಆದರೆ ಇವತ್ತು ಏನಾಗಿದೆ? ಮನೆ, ಕಛೇರಿ, ಪಾರ್ಕ್ ಯಾವುದೇ ಆಗಲಿ ಅದರಲ್ಲಿ ಒಂದು ತರಹದ ಪ್ರತ್ಯೇಕೀಕರಣ ಕಾಣುತ್ತಿದೆ. ಉದಾಹರಣೆಗೆ ಅಪಾರ್ಟ್ಮೆಂಟ್ ತಗೆದುಕೊಂಡು ನೋಡಿದರೆ, ಅಕ್ಕ ಪಕ್ಕದ ಮನೆಯವರು ಒಬ್ಬರೊಬ್ಬರು ನೋಡುವುದೂ ಇಲ್ಲ. ಮಾತನಾಡುವುದು, ಒಬ್ಬರಿಗೊಬ್ಬರು ಪರಿಚಯ ಮಾಡಿಕೊಳ್ಳುವುದು ಹಾಗಿರಲಿ ಅಕ್ಕ ಪಕ್ಕದಲ್ಲಿ ಯಾರು ಇರುತ್ತಾರೆ ಎಂಬುದನ್ನು ಕೂಡಾ ಅರಿಯುವ ಗೋಜಿಗೆ ಹೋಗುವುದಿಲ್ಲ. ಪಕ್ಕದ ಮನೆಯಲ್ಲಿ ಭಯೋತ್ಪಾದಕರೇ ಇರಬಹುದು ಅಥವಾ ಯಾವುದೋ ಒಬ್ಬ ಖ್ಯಾತ ಸಿನೆಮಾ ನಟ ಇರಬಹುದು. ಅದೂ ಕೆಲವರಿಗೆ ಗೊತ್ತಿರುವುದಿಲ್ಲ. ಯಾಕೆಂದರೆ ಅಪಾರ್ಟ್ಮೆಂಟ್ ಕಟ್ಟಿದ ರೀತಿಯೇ ಹಾಗಿದೆ. ಒಂದೊಂದು ಇಂಚನ್ನು ಖರೀದಿ ಮಾಡುವ ಲೆಕ್ಕಾಚಾರದಲ್ಲಿ, ನಿಂತು ಮಾತನಾಡಲಿಕ್ಕೆ ಜಾಗ ಯಾಕೆ ಬಿಡಬೇಕು ಎನ್ನುವುದು ಕೆಲವರ ವಿಚಾರ. ಒಂದು ಮಹಡಿಯಿಂದ ಇನ್ನೊಂದು ಮಹಡಿಗೆ ಇಡೀ ಜೀವನದಲ್ಲಿ ಅವರು ಹೋಗುವುದಿಲ್ಲ. ಅದನ್ನು ಹೇಗೆ ಕಟ್ಟುತ್ತಾರೆ ಅಂದರೆ ಅಲ್ಲಿಯವರಿಗೆ ಇಲ್ಲಿಯವರು ಕಾಣುವುದಿಲ್ಲ…ಇಲ್ಲಿಯವರಿಗೆ ಅಲ್ಲಿಯವರು ಕಾಣುವುದಿಲ್ಲ. ಇನ್ನು ಸ್ವತಃ ಕಟ್ಟುವ ಬೇರೆ ಬೇರೆ ಮನೆಯಗಳನ್ನು (ರೋ ಹೌಸಸ್ಸ್) ನೋಡಿದರೆ ಮುಗಿದು ಹೋಯಿತು. ಮನೆ ಮನೆಯ ನಡುವೆ ಸೊಳ್ಳೆ ದಾಟಲೂ ಜಾಗವಿರುವುದಿಲ್ಲ ಅಷ್ಟು ಹತ್ತಿರ ಕಟ್ಟುತ್ತಾರೆ. ಅಷ್ಟು ಹತ್ತಿರ ಆದರೆ ಪಕ್ಕದವರ ಹತ್ತಿರ ಮಾತನಾಡುವ ಹಾಗಿರುವುದಿಲ್ಲ. ಯಾಕೆ ಅಂದರೆ, ಅದೇ ವಿನ್ಯಾಸದ ವಿಷಯ. ಮನೆಯ ಪಕ್ಕ ಸೆಂಟ್ರಲ್ ಜೈಲಿಗಿಂತ ಉದ್ದನೆಯ ಕಂಪೌಂಡ್ ವಾಲ್, ಗೇಟಿನ ತುದಿಯ ತನಕ ಮನೆಯ ಗೋಡೆ. ಹೊರಗೆ ಬಿದ್ದರೆ ಸೀದಾ ರೋಡಿಗೆ ಬರಬೇಕು ಹಾಗಿರುತ್ತದೆ. ಮನೆಯ ಒಳಗೆ ಕೂಡ ಹಾಗೆಯೇ ಗಾಳಿ ಬರುವುದಿಲ್ಲ, ಬೆಳಕು ಇಣುಕಿ ನೋಡುವುದಿಲ್ಲ. ಮನೆ ಕಟ್ಟುವಾಗಲೇ ಬಾಡಿಗೆಯ ಚಿಂತೆ! ಇದನ್ನೆಲ್ಲಾ ಮಾಡಿ ಸಾಧನೆ ಮಾಡುವುದೇನು. ಏಕಾಂಗಿಯಾಗಿ ಬದುಕಿ ಪ್ರಯೋಜನವೇನು?

ಇನ್ನು ಆಫೀಸಿನಲ್ಲಿ ಅದೇ ಕಥೆ. ಕ್ಯಾಬಿನೆಟ್, ಕ್ಯುಬಿಕಲ್ ಇತ್ಯಾದಿ ಇತ್ಯಾದಿ. ಒಬ್ಬರ ಮುಖ ಇನ್ನೊಬ್ಬರು ನೋಡುವುದಿಲ್ಲ. ಪಕ್ಕದಲ್ಲೇ ಇದ್ದರೂ ಇ-ಮೇಲ್ ಮಾಡುವ ಕೆಟ್ಟ ಚಾಳಿ ಹುಟ್ಟಿಕೊಂಡಿದೆ. ಹಳೆಯ ಯಾವುದೇ ಬ್ಯಾಂಕ್ ಕಟ್ಟಡವನ್ನು ನೋಡಿ, ಅಥವಾ ಶಿಕ್ಷಕರ ಕೊಠಡಿಯನ್ನು ನೋಡಿ ಹೇಗೆ ತೆರೆದಿತ್ತು ಎಂದು. ಇಂದು ಪ್ರತೀ ಶಿಕ್ಷಕರಿಗೆ ಪ್ರತ್ಯೇಕವಾದ ಕೋಣೆ, ಬ್ಯಾಂಕಿನಲ್ಲಿ ಪ್ರತಿಯೊಬ್ಬರಿಗೂ ಕ್ಯುಬಿಕಲ್! ಈ ವಿನ್ಯಾಸದಿಂದ ಒಂದು ವೈಯಕ್ತಿಕ ಬಾಂಧವ್ಯ ಎನ್ನುವುದು ಹುಟ್ಟುವುದೇ ಇಲ್ಲ. ಇವತ್ತು ಸ್ಕೂಲಿನಲ್ಲಿ ಮಕ್ಕಳು ಬೇರೆ ಬೇರೆ ಡೆಸ್ಕಿನಲ್ಲಿ ಕೂತು ಅಭ್ಯಾಸ ಮಾಡುತ್ತಾರೆ. ಮೊದಲಿನ ಹಾಗೆ ಒಂದೇ ಬೇಂಚಿನಲ್ಲಿ ಮೂರು ಮಂದಿ ಕೂತು ಅಭ್ಯಾಸವನ್ನು ಮಾಡುವ ರೂಢಿ ಇಲ್ಲವಾಗಿದೆ. ನಾವು ಹೇಗೆ, ‘ಇವನು ನನ್ನ ಬೇಂಚ್ ಮೇಟ್’ ಎನ್ನುತ್ತೇವೋ ಹಾಗೆ ಮುಂದೆ ಮಕ್ಕಳು ಹೇಳಲು ಆಗುವುದಿಲ್ಲ. ಇನ್ನೂ ಶಾಲೆಯಲ್ಲಿ ಕ್ಯುಬಿಕಲ್ ತಂದರೆ?

ಮೊನ್ನೆ ಹೊಸದಾಗಿ ನಿರ್ಮಿಸದ ಒಂದು ದೇವಸ್ಥಾನಕ್ಕೆ ಹೋಗಿದ್ದೆ. ದೇವಸ್ಥಾನವನ್ನು ಹೇಗೆ ಕಟ್ಟಿದ್ದಾರೆ ಅಂದರೆ ಒಳಗೆ ಹೋದರೆ ಉಸಿರು ಕಟ್ಟುವ ಹಾಗಿದೆ. ಹೊರಗೆ ಬಂದರೆ ಅಲ್ಲಿರುವ ಜನರೊಡನೆ ಬೆರೆಯುವ ಮನಸ್ಸೇ ಆಗುತ್ತಿಲ್ಲ. ಹೊಸ ಟ್ರೆಂಡ್ ಆಗಿರುವ ಮಾಲ್’ಗಳ ವಿಷಯವೂ ಹಾಗೆಯೇ. ಇಂದು ಬೀದಿ ಎನ್ನುವುದಕ್ಕೆ ಜಾಗವೇ ಇಲ್ಲ. ಮಾಲ್’ಗಳಲ್ಲಿ ಇರುವ ಒಪನ್ ಜಾಗದಲ್ಲಿ ಮತ್ತೆ ಅಂಗಡಿಗಳನ್ನು ಹಾಕಿ ಜನರಿಗೆ ಓಡಾಡಲೂ ಜಾಗವಿರುವುದಿಲ್ಲ. ಹಣ ಕೊಡಲು ಸಾಲಿನಲ್ಲಿ ನಿಂತಿರುವಾಗಲಾದರೂ ಮಾತನಾಡಬಹುದು ಆದರೆ ಅಕ್ಕ ಪಕ್ಕ ಚಾಕಲೇಟು, ಐಸ್ ಕ್ರೀಂ ಅದು ಇದು ಎನ್ನುತ್ತಾ ಜನರನ್ನು ನೋಡುವ ಬದಲು ಇತರೆ ಕಡೆಗೆ ಲಕ್ಷ್ಯ ಹೋಗುವ ಹಾಗೆ ವಿನ್ಯಾಸ ಮಾಡಲಾಗುತ್ತದೆ. ಇನ್ನೊಂದು ಆಶ್ಚರ್ಯ ಅಂದರೆ ಪೋಲಿಸ್ ಸ್ಟೆಷನ್. ಅದಂತು ಊರಿನ ಯಾವುದೋ ಮೂಲೆಯಲ್ಲಿ ಇರುತ್ತದೆ. ಹೆಚ್ಚು ಜನರು ಸೇರುವ ಕಡೆ ಪೋಲಿಸ್ ಸ್ಟೆಷನ್ ಇರುವುದೇ ಕಡಿಮೆ, ಅಥವಾ ಪೋಲಿಸ್ ಸ್ಟೆಷನ್ ಇರುವ ಕಡೆ ಜನರು ಹೆಚ್ಚಾಗಿ ಸೇರುವುದು ಕಡಿಮೆ. ಇದಕ್ಕೆ ಕಾರಣ ಪೋಲಿಸ್ ಸ್ಟೆಷನ್ ಇರುವ ಜಾಗ ಹಾಗೂ ವಿನ್ಯಾಸ. ನಮಗೆ ಪೋಲೀಸರು ಅಂದರೆ ಸಮಾಜದಲ್ಲಿ ಅವರೂ ಒಬ್ಬರು ಎನ್ನುವ ಭಾವನೆಯೇ ಮರೆತು ಹೋಗಿದೆ. ಒಂದಲ್ಲ ಎರಡಲ್ಲ, ಪ್ರತಿ ಕಡೆಯೂ ಇದೇ ಉದಾಹರಣೆ. ಈ ಆಧುನಿಕ ವಾಸ್ತುಶಿಲ್ಪದ ವಿನ್ಯಾಸದಿಂದ ನಾವು ನಮ್ಮ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತಿದ್ದೇವೆ. ಮನುಷ್ಯ ಒಂಟಿಯಾಗಿ ಬದುಕಲಾರ!

ಇವತ್ತು ನಮ್ಮ ಆಧುನಿಕ ವಾಸ್ತುಶಿಲ್ಪ ಶೈಲಿ ಬದಲಾಗಬೇಕು. ಆರ್ಕಿಟೆಕ್ಚರ್ ಎನ್ನುವುದು ಜನರನ್ನು ಹತ್ತಿರ ತರುವ ಹಾಗೆ ಇರಬೇಕು. ಗೂಗಲ್ ಆಫೀಸ್ ಫೋಟೋ ಅವಾಗ ಇವಾಗ ಇಂಟರ್ನೆಟ್ ನಲ್ಲಿ ಬರುತ್ತಿರುತ್ತದೆ. ಅದು ಹೊಸತೇನಲ್ಲ ಆದರೆ ಅದು ನಾವು ಮರೆತ ಹಳೆಯ ವಿನ್ಯಾಸ. ಯಾವುದೋ ಒಂದು ಲೇಖನ ಓದುತ್ತಿರುವಾಗ ಕಂಡಿದ್ದು, ಆ್ಯಪಲ್ ಕಂಪನಿ ತನ್ನ ಆಫೀಸನ್ನು ಜನರು ಹೆಚ್ಚು ಒಬ್ಬರಿಗೊಬ್ಬರು ಪರಸ್ಪರ ಸಂಪರ್ಕಕ್ಕೆ ಬರುವ ಹಾಗೆ ನಿರ್ಮಿಸುತ್ತಿದ್ದಾರಂತೆ. ಅಮೇರಿಕಾದ ಒಬ್ಬ ಲೇಡಿ ಆರ್ಕಿಟೆಕ್ಟ್ ಒಂದು ವಿಡಿಯೋದಲ್ಲಿ ತೋರಿಸುತ್ತಿದ್ದಳು, ಅವಳು ವಿನ್ಯಾಸಗೊಳಿಸಿದ ಅಪಾರ್ಟ್ಮೆಂಟ್ ಹೊರಛಾವಣಿಯಲ್ಲಿ ಜನರು ಒಬ್ಬರಿಗೊಬ್ಬರು ಭೇಟಿ ಆಗುವ ಹಾಗೆ, ಒಬ್ಬರನ್ನೊಬ್ಬರು ನೋಡುವ ಹಾಗೆ ಕಟ್ಟಲಾಗಿದೆಯಂತೆ. ಈ ಕ್ಷೇತ್ರದಲ್ಲಿ ಜನರು ಎಚ್ಚೆತ್ತುಕೊಂಡಿದ್ದಾರೆ ಎನ್ನಲು ಮತ್ತೊಂದು ಉದಾಹರಣೆ ಅಂದರೆ ಪೋಲಿಸರು ಹಾಗೂ ಸಾರ್ವಜನಿಕರ ಸಂಬಂಧಕ್ಕೆ ಕುರಿತಾದ ಒಂದು ಸಂಶೋಧನೆ ಕೂಡಾ ನಡೆದಿದೆ. ಏನೆಂದರೆ ಒಂದು ಸಣ್ಣ ಫುಟ್ಬಾಲ್ ಕ್ರೀಡಾಂಗಣದ ಪಕ್ಕದಲ್ಲೇ ಪೋಲಿಸ್ ಸ್ಟೇಷನ್ ಕಟ್ಟಿದರಂತೆ. ಅಲ್ಲಿ ಸ್ಟೇಷನ್ ಕಟ್ಟಿದಾಗಿನಿಂದ ಹೆಚ್ಚು ಹೆಚ್ಚು‌ ಜನರು ಆಡಲಿಕ್ಕೆ ಬರುತ್ತಿದ್ದಾರಂತೆ. ಇನ್ನೊಂದು ಕಡೆ ಪಾರ್ಕಿನ ಒಳಗೆ ಪೋಲಿಸ್ ಸ್ಟೆಷನ್ ಕಟ್ಟಿದಾಗಿನಿಂದ ಜನರು ಹೆಚ್ಚು ಹೆಚ್ಚು ಪಾರ್ಕಿಗೆ ಬರುತ್ತಿದ್ದಾರಂತೆ. ಅಷ್ಟೇ ಅಲ್ಲ ಸಿವಿಲಿಯನ್ಸ್ ಹಾಗೂ ಪೋಲಿಸರ ನಡುವೆ ಸೌಹಾರ್ದತೆ ಕೂಡಾ ಹೆಚ್ಚಿದೆಯಂತೆ. ಇವತ್ತು ನಮ್ಮ ಸಮಾಜದಲ್ಲಿ ಎಲ್ಲವೂ ಇದ್ದೂ ಕೂಡಾ ಏಕಾಂಗಿಯಾಗಿದ್ದೇವೆ. ಮನೆಯಲ್ಲಿ ಹತ್ತು ಕಡೆ ಬೀಗ ಬಡಿದರೂ ಮನಸ್ಸಿನಲ್ಲಿ ಹೆದರಿಕೆ, ಲಕ್ಷಗಟ್ಟಲೆ ಫೀಸ್ ಕೊಟ್ಟು ಮಕ್ಕಳಿಗೆ ಕಲಿಸಿದರೂ ಕಲಿಯುತ್ತಾರೋ ಇಲ್ಲವೋ ಎಂಬ ಚಿಂತೆ, ಆಫೀಸಿನಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು ಅಷ್ಟು ಸೆಣೆಸಾಟ, ತಾಂತ್ರಿಕ ಕ್ಷೇತ್ರದಲ್ಲಿ, ಎಷ್ಟೇ ತರಬೇತಿ ಕೊಟ್ಟರೂ, ಕ್ರಿಯಾಶೀಲತೆ ಹೆಚ್ಚುತ್ತಿಲ್ಲ ಎನ್ನುವ ಕೊರಗು. ಮನೆಯಲ್ಲಿ ಗಂಡ, ಹೆಂಡತಿ, ಮಕ್ಕಳು ವಾರಕ್ಕೊಮ್ಮೆ ಕೂಡ ಒಟ್ಟಿಗೆ ಕೂತು ಊಟ ಮಾಡುತ್ತ ಹರಟೆ ಹೊಡೆಯುವುದಿಲ್ಲ, ಪ್ರತಿಯೊಬ್ಬರ ಕೈಯಲ್ಲೂ ಒಂದು ಮೊಬೈಲ್, ಪ್ರತೀ ಕೋಣೆಯಲ್ಲೂ ಒಂದೊಂದು ಟಿವಿ ಇದೆಲ್ಲ ನಮ್ಮನ್ನು ಯಾವ ಕಡೆ ಕರೆದೊಯ್ಯುತಿದೆ? ನಾವು ಆಧುನಿಕತೆಯ ಹೆಸರಿನಲ್ಲಿ ನಮ್ಮ ಜೀವನದ ಮೂಲಭೂತ ತತ್ವಗಳನ್ನು ಮರೆಯಬಾರದು. ನಾವು ಸಂಘಜೀವಿಗಳು. ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ನಮ್ಮ ಜೀವನ ಒಂದು ಅಥವಾ ಎರಡು ದಶಕಗಳಲ್ಲಿ ಬದಲಾಗದು. ಬದಲಾದರೆ ಚಿಂತೆಯಿಲ್ಲ. ಆದರೆ ಆ ಬದಲಾವಣೆ ಮಾನವ ಕುಲಕ್ಕೆ ಮಾರಕವಾಗಬಾರದು. ನಮ್ಮ ಆಧುನಿಕ ವಾಸ್ತುಶಿಲ್ಪ ಬದಲಾಗಿ ಪುರಾತನ ವಿನ್ಯಾಸವನ್ನು ಸ್ವೀಕರಿಸಬೇಕು. ನೀವು ಮನೆ ಕಟ್ಟುತ್ತಿದ್ದೀರಾ ಅಂದರೆ ಈ ಮಾತು ನೆನಪಿರಲಿ. ನಿಮಗೆ ಪರಿಚಯವಿರುವ ಆರ್ಕಿಟೆಕ್ಟ್ ಅಥವಾ ಇಂಜಿನಿಯರ್ ಇದ್ದರೆ ಅವರಿಗೂ ಈ ಮಾಹಿತಿ ತಲುಪಲಿ. ಮಾಲ್’ನಲ್ಲಿ, ಶಾಲೆಯಲ್ಲಿ, ಆಫೀಸಿನಲ್ಲಿ, ದೇವಸ್ಥಾನದ, ಚರ್ಚು, ಮಸೀದಿಯಲ್ಲಿ, ಬೀದಿಯಲ್ಲಿ, ಎಲ್ಲಕಡೆಯೂ ಜನರು ಒಬ್ಬರನ್ನೊಬ್ಬರು ನೋಡಿ ಮಾತನಾಡುವ ಹಾಗಾಗಲಿ !

ಚಿತ್ರಕೃಪೆ: ಇಂಟರ್’ನೆಟ್

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!