ಅಂಕಣ

ನಮ್ಮಲ್ಲಿನ ಬದಲಾವಣೆಯಿಂದ, ದೇಶದ ಬದಲಾವಣೆ ಸಾಧ್ಯ

  ನೀವು ಬಸ್ಸಿನಲ್ಲೋ ಅಥವಾ ರೈಲಿನಲ್ಲೋ ಕುಳಿತಿರುತ್ತೀರಿ. ಆಗ ಎಲ್ಲಿಂದಲೋ ಒಂದು ಹಾಡು ಕೇಳಿ ಬರುತ್ತದೆ, ಯಾರೆಂದು ನೋಡುವ ತನಕ ಆ ವ್ಯಕ್ತಿ ನಿಮ್ಮ ಮುಂದೆ ನಿಂತು ‘ದಾನ ಮಾಡಿ ನಿಮಗೆ ಪುಣ್ಯ ಬರತ್ತೆ ಸಾಮಿ, ನಿಮ್ಮ ಮನೆ-ಮಕ್ಕಳಿಗೆಲ್ಲಾ ಆ ದೇವರು ಒಳ್ಳೆದು ಮಾಡ್ತಾನೆ’ ಎಂದು ಹೇಳುತ್ತಾ, ನಿಮ್ಮ ಮುಂದೆ ಕೈ ಚಾಚಿರುತ್ತಾನೆ. ಇದು ಒಂದು ರೀತಿಯ ಭಿಕ್ಷೆ ಬೇಡುವ ಕ್ರಮವಾದರೆ, ಪುಟ್ ಪಾತ್’ನಲ್ಲಿ ನಡೆದು ಹೋಗುತ್ತಿದ್ದಾಗ, ಬದಿಯಲ್ಲಿ ಕುಳಿತು ಭಿಕ್ಷೆ ಬೇಡುವದು ಮತ್ತೊಂದು ಕ್ರಮ. ಇವಿಷ್ಟೇ ಅಲ್ಲ, ದೇವಸ್ಥಾನದ ಬದಿಯಲ್ಲಿ ಕುಳಿತು, ಜನರನ್ನು ಭಾವನಾತ್ಮಕವಾಗಿ ವಶಗೊಳಿಸಿ ಭಿಕ್ಷೆ ಬೇಡುವವರು ಹಲವಾರು ಮಂದಿಯಿದ್ದಾರೆ. ಕೆಲವರಿಗೆ ಮಾತು ಬರುವುದಿಲ್ಲ, ಕಿವಿ ಕೇಳುವುದಿಲ್ಲ, ಇನ್ನೂ ಕೆಲವು ಭಿಕ್ಷುಕರು ಯಾವುದಾದರೂ ರೋಗದಿಂದ ನರಳುತ್ತಿರುತ್ತಾರೆ. ಇನ್ನೂ ಕೆಲವರಿರುತ್ತಾರೆ, ಮಹಿಳೆಯರನ್ನು ಭಾವನಾತ್ಮಕವಾಗಿ ಮೋಸಗೊಳಿಸಿ ಅವರ ಹಣ-ಒಡವೆಗಳನ್ನು ದೋಚುವ ಭಿಕ್ಷುಕರೂ ಇರುತ್ತಾರೆ. ಇಂದು ನಮ್ಮ ದೇಶ ಇಂತಹ ಭಿಕ್ಷುಕರಿಂದ ತುಂಬಿ ಹೋಗಿದೆ. ಇದೊಂದು ಸಾಮಾಜಿಕ ಪಿಡುಗು, ಸಮಾಜಕ್ಕೆ ಅಂಟಿದ ವ್ಯಾಧಿ. ಹೌದು ಭಿಕ್ಷಾಟನೆ ಎಂಬುದು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಪರಿಣಾಮ ಬೀರುವುದಲ್ಲದೇ, ದೇಶದ ಸ್ವಾಸ್ಥ್ಯವನ್ನೂ ಕೆಡಿಸುತ್ತದೆ. ಮೊದಲು ಕೈಲಾಗದವರು, ವೃದ್ಧರು, ಅಂಗವಿಕಲರು, ಇಂತಹವರು ಮಾತ್ರ ಭಿಕ್ಷೆ ಬೇಡಿ ತಿನ್ನುತ್ತಿದ್ದರು. ಆದರೆ ಇಂದು ಅದೊಂದು ವೃತ್ತಿಯಾಗಿಬಿಟ್ಟಿದೆ. ಮಾನಸಿಕವಾಗಿ, ದೈಹಿಕವಾಗಿ ಸಧೃಢರಾಗಿರುವ ವ್ಯಕ್ತಿಗಳು, ಕಣ್ಣಿಲ್ಲ, ಕಿವಿಯಿಲ್ಲ, ಹಾಗೆ, ಹೀಗೆ ಎಂದು ನಟಿಸಿ ಜನರನ್ನು ಮೋಸಗೊಳಿಸಿ, ಭಿಕ್ಷೆ ಬೇಡುವವರು ಹೆಚ್ಚಾಗಿದ್ದಾರೆ. ಇದರೊಂದಿಗೆ ಚಿಕ್ಕ ಮಕ್ಕಳನ್ನು ಅಪಹರಿಸಿ, ಅವರನ್ನು ಅಂಗವಿಕಲರನ್ನಾಗಿ ಮಾಡಿ, ಭಿಕ್ಷೆ ಬೇಡುವವುದಕ್ಕೆ ಅಟ್ಟುವ ಒಂದು ಗುಂಪೂ ಇಂದು ದೊಡ್ಡ-ದೊಡ್ಡ ಶಹರಗಳಲ್ಲಿ ಕಂಡು ಬರುತ್ತಿದೆ. ಇದು ಭಿಕ್ಷೆ ಬೇಡುವ ಕ್ರಮವನ್ನು, ಹಾಗೂ ಜನರ ಮನಸ್ಥಿತಿಯನ್ನು ಬಂಡವಾಳವಾಗಿಸಿಕೊಂಡು, ತಮ್ಮ ಲಾಭಕ್ಕೋಸ್ಕರ ಸುಲಭದ ದಾರಿಯನ್ನು ಹುಡುಕುವ ಒಂದು ಕುತಂತ್ರ. ಹಾಗಾದರೆ ಇಂದು ಭಿಕ್ಷಾಟನೆ ಹೆಚ್ಚುತ್ತಿರುವುದಕ್ಕೆ ಕಾರಣವೇನು? ಇದಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೇ? ಎಂದು ಯೋಚಿಸಿದಾಗ, ಸಾಧ್ಯವಿದೆ ಎಂದು ಹೇಳಬಹುದು, ಬಿಕ್ಷಾಟನೆಯ ಮೂಲ ಕಾರಣವನ್ನು ಹುಡುಕಿ, ಅದಕ್ಕೆ ಸರಿಯಾದ ಪರಿಹಾರವನ್ನು ಒದಗಿಸುವುದು ಒಂದು ವಿಧವಾದರೆ, ಭಿಕ್ಷಾಟನೆಯ ನೆಪದಲ್ಲಿ ಜನರನ್ನು ಮೋಸಗೊಳಿಸುತ್ತಿರುವವರನ್ನು, ಮಕ್ಕಳನ್ನು ಅಪಹರಿಸಿ ಭಿಕ್ಷೆ ಬೇಡಲು ಕಳಿಸುತಿರುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವುದು ಇನ್ನೊಂದು ವಿಧ.

   ಇಂದು ಭಿಕ್ಷಾಟನೆ ವೃತ್ತಿ ವ್ಯಾಪಕವಾಗಿ ಜೇಡರ ಬಲೆಯಂತೆ ಹಬ್ಬುತ್ತಿರುವುದಕ್ಕೆ ಕಾರಣಗಳು ಹಲವಾರು. ಮೊದಲನೆಯದಾಗಿ ಅತಿಯಾದ ಬಡತನ, ಅನಕ್ಷರತೆ, ಅಂಗವಿಕಲತೆ, ಇನ್ನು ಮುಂತಾದ ಕಾರಣಗಳನ್ನು ನಾವು ಕೊಡಬಹುದು. ಮತ್ತೊಂದು ಮುಖ್ಯವಾದ ಕಾರಣವೆಂದರೆ, ಎಲ್ಲೋ ಬೀದಿಯಲ್ಲಿ ಬಿದ್ದು ಅನಾಥವಾಗಿ ಬೆಳೆದ ಹಲವಾರು ಮಕ್ಕಳು ಇಂದು, ಭಿಕ್ಷೆ ಬೇಡುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಇದಕ್ಕೂ ಕಾರಣವಿಲ್ಲದಿಲ್ಲ, ಇಂತಹ ಮಕ್ಕಳನ್ನು, ನಿರ್ಲಕ್ಷಿಸುತ್ತಿರುತ್ತಿರುವುದರ ಪರಿಣಾಮ, ಹಾಗೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯ ಇಂತಹ ಕಾರಣಗಳು ಅವರನ್ನು ಅನಿವಾರ್ಯವಾಗಿ ಭಿಕ್ಷಾಟನೆಗೆ ತಳ್ಳುತ್ತಿದೆ. ಹಾಗೆಯೇ ಪ್ರಾಚೀನ ಕಾಲದಲ್ಲಿ ಋಷಿ ಮುನಿಗಳು ಭಿಕ್ಷೆ ಬೇಡಿ ತಿನ್ನುತ್ತಿದ್ದರು, ಭಿಕ್ಷೆ ಬೇಡುವುದು ಶ್ರೇಷ್ಠ ಎಂಬ ಪರಿಕಲ್ಪನೆ ಇಂದು ನಮ್ಮ ಬಾರತೀಯರಲ್ಲಿ ಇದೆ, ಇದೂ ಕೂಡ ಒಂದು ಕಾರಣ ಎಂದು ಹೇಳಬಹುದು. ಒಟ್ಟಿನಲ್ಲಿ ಹೇಳಬೇಕೆಂದರೆ ಬಡತನ, ಅನಕ್ಷರತೆ ಮುಖ್ಯ ಕಾರಣವಾಗಿ ಕಂಡು ಬರುತ್ತದೆ. ಇದರ ಜೊತೆಗೆ ಭಿಕ್ಷಾಟನೆಯನ್ನೇ ತಮ್ಮ ಬಂಡವಾಳವಾಗಿ ಮಾಡಿಕೊಂಡು, ಕಾನೂನೂಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರೂ ಕಂಡು ಬರುತ್ತಾರೆ. ಅದಕ್ಕಾಗಿ ಸರ್ಕಾರ ಇಳಿದು ಭಿಕ್ಷಾಟನೆ ಮಾಡುವುದು ಅಪರಾಧ ಎಂದು ಕಾನೂನೂ ಸಹಿತ ಮಾಡಿದೆ, ಅದರಲ್ಲೂ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಧೃಢವಾಗಿರುವ ವ್ಯಕ್ತಿಗಳು ಭಿಕ್ಷೆ ಬೇಡುವುದು ಅಪರಾಧ ಎಂಬ ಕಾನೂನನ್ನೇ ನಮ್ಮ ದೇಶದಲ್ಲಿ ಮಾಡಿದ್ದಾರೆ. ಇದಿಷ್ಟೇ ಅಲ್ಲ, 1959 ರ “ಬಾಂಬೆ ಪ್ರಿವೆನ್ಶನ್ ಆಫ್ ಬೆಗ್ಗಿಂಗ್ ಆಕ್ಟ್” ಪ್ರಕಾರ ಭಿಕ್ಷೆ ಬೇಡುವುದು ಒಂದು ಅಪರಾಧವಾಗಿದ್ದು, ಅಂಥವರನ್ನು ಬಂದಿಸಬಹುದೆಂಬ ನಿಯಮ ನಮ್ಮ ಕಾನೂನಿನಲ್ಲಿದೆ. ಇದರ ಜೊತೆಗೆ, ಕೆಲವು ಖಾಸಗಿ ಸಂಸ್ಥೆಗಳು ಭಿಕ್ಷಾಟನೆಯನ್ನು ನಿಯಂತ್ರಿಸಲು “ಭಿಕ್ಷುಕರ ಪುನರ್ವಸತಿ ಕೇಂದ್ರ”ಗಳನ್ನೂ ಸಹ ಸ್ಥಾಪಿಸಿವೆ. ಇಷ್ಟಾದರೂ ಈ ಭಿಕ್ಷಾಟನೆ ಎಂಬುದು ಇಂದಿಗೂ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಎಲ್ಲೆಂದರಲ್ಲಿ ಭಿಕ್ಷೆ ಬೇಡುವವರು ನಮಗೆ ದಿನ ನಿತ್ಯ ಕಂಡು ಬರುತ್ತಲೇ ಇರುತ್ತಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ನಾವು ಎಲ್ಲೋ ಒಂದು ಕಡೆ ತಪ್ಪುತ್ತಿದ್ದೇವೆ, ಭಿಕ್ಷಾಟನೆಯನ್ನು ನಿಯಂತ್ರಿಸಲು ನಾವು ಹಾಕಿಕೊಂಡ ಕ್ರಮ, ನಿಯಮಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅನಿಸದೇ ಇರದು. ಹಾಗಾದರೆ ನಿಜವಾದ ಸಮಸ್ಯೆ ಇರುವುದೆಲ್ಲಿ? ಸರ್ಕಾರದಲ್ಲೋ ಅಥವಾ ಸರ್ಕಾರವನ್ನು ರಚಿಸಿದ ಜನರಲ್ಲೋ?. ಸರಿಯಾಗಿ ಅವಲೋಕಿಸಿದಾಗ ನಮಗೆ ತಿಳಿಯುವುದು ನಿಜವಾದ ಸಮಸ್ಯೆ ಇರುವುದು ಸರ್ಕಾರದಲ್ಲಲ್ಲ, ಜನರಲ್ಲಿ. ನಮ್ಮ ದೇಶದ ಜನರ ಮನಸ್ಥಿತಿಯಲ್ಲಿ. ಯಾಕೆಂದರೆ ಇಮದು ನಮ್ಮ ದೇಶದಲ್ಲಿ ಬಡವರು ಇನ್ನಷ್ಟು ಬಡವರಾಗುತ್ತಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ದೇಶದಲ್ಲಿ ದೊಡ್ಡವರು, ಶ್ರೀಮಂತರೆನಿಸಿಕೊಂಡವರು ಬಡವರ ಮೇಲೆ ಮಾಡುತ್ತಿರುವ ದಬ್ಬಾಳಿಕೆ. ಶ್ರೀಮಂತರಿಗೊಂದು ನ್ಯಾಯ, ಬಡವರಿಗೊಂದು ನ್ಯಾಯ. ಇದರ ಪರಿಣಾಮ ಅಪರಾಧ ಕೃತ್ಯಗಳು ನಡೆಯುವುದು, ಅದರಲ್ಲಿ ಈ ಭಿಕ್ಷಾಟನೆಯೂ ಒಂದು ಎಂದು ಹೇಳಬಹುದು. ಇವನ್ನೆಲ್ಲಾ ನೋಡುತ್ತಿದ್ದರೆ ಭಿಕ್ಷುಕರನ್ನು ಸೃಷ್ಟಿಸುವವರು ಶ್ರೀಮಂತರೇ ಎಂದು ಹೇಳಬಹುದು. ಯಾಕೆಂದರೆ ಹಣವಿರುವ ವ್ಯಕ್ತಿ ಮತ್ತಷ್ಟು ಹಣ ಗಳಿಸಲು, ಎಂಥ ಧೌರ್ಜನ್ನವನ್ನೂ ಮಾಡಲು ಸಿದ್ಧರಿರುವ ನಮ್ಮ ದೇಶದಲ್ಲಿ, ಹಣವಿಲ್ಲದೇ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿ, ಎಲ್ಲಿಯೂ ನ್ಯಾಯ ಸಿಗದೇ, ಇರುವುದನ್ನೂ ಕಳೆದುಕೊಂಡು ಬೀದಿಗೆ ಬಂದರೆ ಅವನಿಗೆ ಭಿಕ್ಷೆ ಬೇಡದೇ ಬೇರೆ ದಾರಿ ಏನಿದೆ ಅಲ್ಲವೇ ? ಹಾಗಾಗಿ ನಮ್ಮ ದೇಶದಲ್ಲಿರುವ ಇಂತಹ ವ್ಯವಸ್ಥೆಗಳು ಬದಲಾಗದ ಹೊರತು, ಭಿಕ್ಷಾಟನೆಯಂತಹ ಅವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿಲ್ಲ.

   ಇದನ್ನು ಸರಿಪಡಿಸಲು ಇರುವ ಏಕಮೇವ ದಾರಿಯೆಂದರೆ, ಸಮಾನತೆ. ಹಣವಿರುವವರು, ಅದರಲ್ಲೂ ಕಪ್ಪು ಹಣ ಸಂಗ್ರಹಿಸಿ ಇಡುತ್ತಿರುವವರು, ಹಣವಿಲ್ಲದೆ, ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಅನೇಕ ಬಡವರಿಗೆ ಸಹಾಯ ಮಾಡಿದರೆ, ಅವರು ಅವರ ಕಾಲ ಮೇಲೆ ನಿಂತುಕೊಳ್ಳಲು ಸಹಕರಿಸಿದರೆ ಭಿಕ್ಷಾಟನೆಯಂತಹ ಸಾಮಾಜಿಕ ಅನಿಷ್ಟವನ್ನು ನಮ್ಮ ದೇಶದಿಂದ ದೂರ ಮಾಡಬಹುದು. ಇಂತಹ ಬದಲಾವಣೆ ಅಷ್ಟು ಸುಲಭದಲ್ಲಿ ಬರುವುದಿಲ್ಲ ನಿಜ, ಸರ್ಕಾರದಿಂದ ಬಲವಚಿತವಾಗಿಯೂ ಇಂತಹ ಬದಲಾವಣೆ ತರುವುದು ಕಷ್ಟ, ಆದರೆ, ಸಾಮಾನ್ಯ ಪ್ರಜೆಗಳು, ಅದರಲ್ಲೂ ಹಣವಿರುವ, ಒಬ್ಬೊಬ್ಬ ವ್ಯಕ್ತಿ, ತಮ್ಮಲ್ಲೇ ಬದಲಾವಣೆ ತಂದುಕೊಂಡು, ಸಹಾಯ ಮಾಡುವ ಗುಣ ಬೆಳೆಸಿಕೊಂಡರೆ, ಬದಲಾವಣೆ ಸಾಧ್ಯ. ತಮ್ಮೊಬ್ಬರಿಂದ ಏನು ಬದಲಾವಣೆ ಸಾಧ್ಯ ಎಂಬ ಮನಸ್ಥಿತಿಯಿಂದ ಹೊರಬಂದು, ಹನಿ-ಹನಿ ಸೇರಿದರೆ ಹಳ್ಳ ಎಂಬ ಮಾತನ್ನು ಅರ್ಥ ಮಾಡಿಕೊಂಡರೆ ಎಂತಹ ಬದಲಾವಣೆಯೂ ಸಾಧ್ಯ. ಯಾವ ಸರ್ಕಾರಿಂದಲೂ, ರಾಜಕೀಯ ಪಕ್ಷಗಳಿಂದಲೂ ಸಾಧ್ಯವಾಗದ ದೇಶದ ಬದಲಾವಣೆ ನಮ್ಮೊಳಗಿನ ಬದಲಾವಣೆಯಿಂದ ಖಂಡಿತ ಸಾಧ್ಯ.

     -ಮನು ವೈದ್ಯ.

manus.vaidya@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!