ಅಂಕಣ

ಎತ್ತ ಸಾಗಿದೆ ಪಯಣ?  

        ನಾವೆಲ್ಲರೂ ಬಹಳ ಸಡಗರದಿಂದಲೇ ಹೊಸವರ್ಷವನ್ನು ಬರ ಮಾಡಿಕೊಳ್ಳಲು ತಯಾರಿ ಮಾಡಿಕೊಂಡಿದ್ದೆವು.ನನಸಾಗದ ಹಳೆಯ  ಕನಸುಗಳ ಜೊತೆ ಇನ್ನಷ್ಟು ಹೊಸ ಕನಸುಗಳ ಮೂಟೆಯನ್ನು ಹೊತ್ತು ರೆಡಿಯಾಗಿದ್ದೆವು.ಹೊಸ ವರ್ಷದ ಆರಂಭವೆಂದರೇ ಹಾಗೆ ಉತ್ಸಾಹವೆಂಬ ಪಾಸಿಟಿವ್ ಶಕ್ತಿಯಿಂದ ಫುಲ್ ಚಾರ್ಜ ಆಗಿ ಆತ್ಮವಿಶ್ವಾಸದೊಂದಿಗೆ ಹಳೆಯ ತಪ್ಪುಗಳನ್ನೆಲ್ಲಾ ಮರುಕಳಿಸಲು ಬಿಡಬಾರದೆಂಬ ಎಚ್ಚರಿಕೆಯಿಂದ ನಮ್ಮ ಗುರಿಯನ್ನು ಸೇರಬೇಕೆಂದುಕೊಂಡಿರುತ್ತೇವೆ.ಆದರೆ ಹೊಸವರ್ಷದ ಸ್ವಾಗತವೆಂಬ ಸಡಗರದಲ್ಲಿ ಕೆಲವರು ಮಾಡಿದ್ದೇನು? ನಮ್ಮ ಉನ್ನತಿಗೆ ಮಾರಕವಾಗುವ ,ನಮ್ಮನ್ನು ಅಧಃಪತನಕ್ಕೆ ಇಳಿಸುವ ಮದ್ಯಪಾನವೇ ಮೊದಲಾದ ಅಭಿರುಚಿಗಳ ಪ್ರದರ್ಶನ. ಆಧುನಿಕತೆಯ ಹೆಸರಲ್ಲಿ ದಿನಕಳೆದಂತೆ ಈ ಕೆಲವರು ಹಲವರಾಗಬಾರದಲ್ಲವೇ.ಅಂದು ಸೇರಿದವರಲ್ಲಿ ಬಹುತೇಕರು ಹೆಣ್ಣುಗಂಡೆಂಬ ಭೇದವಿಲ್ಲದೇ ಪಾನಮತ್ತರಾಗಿ ತಾವೇನು ಮಾಡುತ್ತಿದ್ದೇವೆಂಬುದನ್ನೂ ತಿಳಿಯದ ಸ್ಥಿತಿ ತಲುಪಿದ್ದರು. ಮದ್ಯಪಾನ ಮಾಡಿ ವಾಹನ ಚಲಾವಣೆ ಶಿಕ್ಷಾರ್ಹ ಅಪರಾಧ. ಯಾಕೆಂದರೆ ಅಂಥವರಿಂದ ಇತರರಿಗೇ ಹೆಚ್ಚು ತೊಂದರೆ. ಹಾಗಾದರೆ ವಾಹನ ಚಲಾಯಿಸದವ ಮದ್ಯಪಾನ ಮಾಡಿದರೆ ತಪ್ಪಲ್ಲವೇ? ಅದೂ ಸಹ ತಪ್ಪೇ.ಆದರೆ ಒಬ್ಬ ವ್ಯಕ್ತಿ  ತಾನೇ ತಾನಾಗಿ ಗೊತ್ತಿದ್ದೇ ಜೀವಕ್ಕೂ ಜೀವನಕ್ಕೂ ಮಾರಕವಾಗುವಂತಹ ವ್ಯಸನಕ್ಕೆ ಬೀಳುತ್ತಾನಾದಾಗ ಹೆಚ್ಚಾಗಿ ಯಾರೂ ಅದನ್ನು ವಿರೋಧಿಸುವುದಿಲ್ಲ.ವೈಯುಕ್ತಿಕ ವಿಷಯವೆಂಬ ಕಾರಣಕ್ಕಾಗಿ ಮತ್ತು ಚಿಕ್ಕಂದಿನಿಂದಲೂ ಕೊಟ್ಟಿರುವ ಶಿಕ್ಷಣ ಇಂತಹ ತಪ್ಪುಗಳನ್ನು ಗುರುತಿಸಿ ಸರಿದಾರಿಯಲ್ಲಿ ನಡೆಯಲು ಅತ್ಯವಶ್ಯಕವಾದ ವಿವೇಕದ ಅಭಿವೃದ್ಧಿಗಾಗಿಯೇ ಅಗಿತ್ತಲ್ಲವೇ?

                      ಈ ಮದ್ಯವು ಸುಶಿಕ್ಷಿತ, ಅಶಿಕ್ಷಿತ ಎಂಬ ಭೇದವಿಲ್ಲದೆ ಎಲ್ಲರನ್ನೂ ಅವಿವೆಕದ ಕಾರ್ಯಕ್ಕೆ ಪ್ರಚೋದಿಸುತ್ತದೆ. ಪಾನಮತ್ತರಾಗಿ ಸಂಭ್ರಮದಲ್ಲಿ ಪಾಲ್ಗೊಂಡವರಿಂದ ಅವರು ಹೆಣ್ಣೇ ಅಗಿದ್ದರೂ ಸಹ ಒಳ್ಳೆಯ ನಡತೆಯನ್ನು ಹೇಗೆ ನಿರೀಕ್ಷಿಸಲು ಸಾಧ್ಯ.ಒಳ್ಳೆಯ ಸಂಸ್ಕಾರವಂತರಾಗಿದ್ದರೆ ಇಂತಹ ಸ್ಥಳಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.ಹೆಣ್ಣನ್ನು ಸಹೋದರಿ ,ತಾಯಿಯಾಗಿ ಗೌರವಿಸುವ,ಪೂಜಿಸುವ ಹುಟ್ಟಿದ ಮಣ್ಣನ್ನೂ ತಾಯಿಯ ರೂಪದಲ್ಲೇ ಆರಾಧಿಸುವ ಸಂಸ್ಕೃತಿಯವರು ನಾವು.ಇಂತಹ ಸಂಸ್ಕೃತಿಯೊಂದಿಗೆ ಭದ್ರವಾದ ಅಡಿಪಾಯದೊಂದಿಗೆ ಮುಂದಿನ ಪೀಳಿಗೆಯವರನ್ನು ಬೆಳೆಸುತ್ತಿದ್ದ ಈ ನೆಲದಲ್ಲಿ ಹೆಣ್ಣಿಗೆ ಸಹೋದರರಂತಿರಬೇಕಾಗಿದ್ದ ಕೆಲವರು ಅಸುರರಂತಾಗಿದ್ದು ನಿಜಕ್ಕೂ ಖೇದಕರ.ಇದಕ್ಕೆ ಏಕಮುಖವಾಗಿ ಆರೋಪ ಮಾಡುವಂತಿಲ್ಲ ಬಿಡಿ.ತನ್ನ ದೇಹ ಪ್ರದರ್ಶನದ ವಸ್ತುವಲ್ಲ ಎನ್ನುವುದನ್ನೂ ಸಹ ಇಂದು LKGಯಿಂದಲೇ ಕಲಿಸಿಕೊಡಬೇಕಾದ ಅನಿವಾರ್ಯತೆಯಿದೆ.ನೂರರಲ್ಲೊಂದು ಅಪವಾದ ಇದ್ದೇ ಇರುತ್ತದೆ.ಆದರೆ ಅಂದು ಕುಡಿದು ಕುಪ್ಪಳಿಸಲೆಂದೇ ಎಲ್ಲರೂ ಸೇರುತ್ತಾರೆಂದು ತಿಳಿದೂ ಅಷ್ಟೊಂದು ಸಂಖ್ಯಯಲ್ಲಿ ಜನ ಸೇರುತ್ತಾರೆಂದರೆ ಇವರೆಲ್ಲರ ಮನಸ್ದು ಯಾವ ಮಟ್ಟಕ್ಕೆ ಇಳಿದಿದೆಯೆಂದು ನಾವು ಊಹಿಸಬಹುದಾಗಿದೆ.ಇದೊಂದೆ ಅಲ್ಲ ಸಹಜವಾಗಿ ನಾವು ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ಮೋಸ, ಅತ್ಯಾಚಾರ, ಹಲ್ಲೆ,ನಿಷ್ಠಾವಂತ ಅಧಿಕಾರಿಗೆ ಎತ್ತಂಗಡಿ ಭಾಗ್ಯ,ಕಂಪನಿಯ ಉದ್ಯೋಗಿಗಳಿಗೆ ಕಿರುಕುಳ,ಕೆಲ ಬ್ಯಾಂಕ್ ಅಧಿಕಾರಿಗಳ ಬ್ಲ್ಯಾಕ್ ದಂಧೆ,ಹೀಗೆ ಹೇಳುತ್ತಾ ಹೋದರೆ ಕೊನೆಯೇ ಇಲ್ಲ.ಯಾಕೆ ಇವರಿಗೆಲ್ಲಾ ಮೋಸ ,ಅನ್ಯಾಯ,ತಪ್ಪು ಇವೇ ಆಪ್ತವಾಗಿಬಿಟ್ಟಿವೆ?.ಹಿಂದೆ ಇವೆಲ್ಲಾ ಇರಲೇ ಇಲ್ಲವೆಂದು ನಾನು ಹೇಳುತ್ತಿಲ್ಲಾ.ಆದರೆ ಇಂದು ಕೆಸರನ್ನೇ‌ ಮೈದುಂಬಿಕೊಂಡು ಭೋರ್ಗರೆಯುವ ಮಳೆಗಾಲದ ಜಲಪಾತದಂತಾಗಿ ಬಿಟ್ಟಿದೆಯಲ್ಲಾ . ಯಾಕೆ ಹೀಗೆ?ನಮ್ಮ ಪ್ರಯಾಣ ದಾರಿ ತಪ್ಪುತ್ತಿದೆಯಾ ಎಂದು ಯೋಚಿಸುತ್ತಿದ್ದರೆ ಸುಭಾಷಿತವೊಂದು_ನೆನಪಾಗುತ್ತದೆ. “ಚಿತ್ರಕರ್ಮಯಥಾನೆಕೈರಂಗೈರುನ್ಮೀಲ್ಯತೆ ಶನೈಃ.   ಮಾನುಷ್ಯಮಪಿ ತದ್ವತ್ಸ್ಯಾತ್ ಸಂಸ್ಕಾರೈರ್ವಿಧಿಪೂರ್ವಕೈಃ “ಅಂದರೆ ಒಂದು ಚಿತ್ರಪಟವು ಹೇಗೆ ಅನೇಕ ಸುಂದರವಾದ ಬಣ್ಣಗಳಿಂದ ತುಂಬಲ್ಪಟ್ಟಾಗ ಹೇಗೆ ಸುಂದರವಾಗಿ ಕಾಣುತ್ತದೋ ಹಾಗೆಯೇ ಸರಿಯಾಗಿ ಬಣ್ಣಗಳಿಂದ ತುಂಬಲ್ಪಡದಿದ್ದಾಗ ಅಷ್ಟೇ ಘೊರವಾಗುತ್ತದೆ.ಹೀಗೆ ಮನುಷ್ಯನೂ ಸಹ ಉತ್ತಮ ಸಂಸ್ಕಾರಗಳಿಂದ ಬೆಳೆಸಲ್ಪಟ್ಟಾಗ ಸಮಾಜವೇ ಗೌರವಿಸುವಂತಹ ಮೌಲ್ಯಯುತ ವ್ಯಕ್ತಿಯಾಗುತ್ತಾನೆ.ಇಂತವರನ್ನೇ ಹೆಚ್ಚಾಗಿ ಹೊಂದಿರುವ ಸಮಾಜವೂ ವಿಶ್ವದಿಂದಲೇ ಗೌರವಿಸಲ್ಪಡುತ್ತದೆ. ಇದಕ್ಕನುಗುಣವಾಗಿ ವಿದೇಶಿಯರು ನಮ್ಮ ಸಮಾಜ ಸಂಸ್ಕೃತಿಯೆಡೆಗೆ ಗೌರವದಿಂದ ಆಕರ್ಷಿತರಾಗುತ್ತಿರುವುದನ್ನು ನೋಡುತ್ತಿದ್ದೇವೆ. ಆದರೆ ನಾವು ನಮ್ಮ ಅತಿಯಾದ ಆಧುನಿಕತೆಯ ಮೋಹದಿಂದಾಗಿ ಆ ಗೌರವವನ್ನು ಕಳೆದುಕೊಳ್ಳುತ್ತಿದ್ದೇವೆ ಎನ್ನುವುದು ಬಹಳ ಖೇದಕರ ಸಂಗತಿಯಾಗಿದೆ.

                       ಮನುಷ್ಯನನ್ನು ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುವಂತೆ ಮಾಡುವುದೇ ಆತನ ಯೋಚನಾಶಕ್ತಿ.ಸರಿ ತಪ್ಪುಗಳನ್ನು ವಿಮರ್ಶಿಸುವ ವಿವೇಕ. ಓರ್ವ ಮನುಷ್ಯ ಸರಿಯಾದ ರೀತಿಯಲ್ಲಿ ಯೋಚಿಸಲು,ಸರಿ ತಪ್ಪುಗಳನ್ನು ವಿವೇಚಿಸಲು “ಬೆಳೆಯುವ ಸಿರಿ ಮೊಳಕೆಯಲ್ಲಿ   ” ಎನ್ನುವಂತೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರಗಳೊಂದಿಗೆ ಆತ ಬೆಳೆದಿರಬೇಕು.ಕಲಿಕೆಗೆಂದೇ ಮಿಸಲಾಗಿರಿಸಬೇಕಾಗಿದ್ದ ಶಾಲಾ ಕಾಲೇಜಿನ ಅಮೂಲ್ಯ ದಿನಗಳನ್ನು ಇಂದು ಕೆಲವರು ಮೋಜು ಮಸ್ತಿಗೆಂದೇ ಭಾವಿಸಿಬಿಟ್ಟಿದ್ದಾರೆ . ಅದಕ್ಕೆ ಸರಿಯಾಗಿ ಕೆಲ ಪಾಲಕರೂ ಸಹ ನಾ ಕಷ್ಟ ಅನುಭವಿಸಿದ್ದು ಸಾಕು ಮಗ ಸಂತೋಷವಾಗಿರಬೇಕೆಂಬ ಆಸೆಯಲ್ಲಿ ,ಒಂದೇ ಮಗುವೆಂಬ ಮಮಕಾರದಲ್ಲಿ ಮಕ್ಕಳ ತಪ್ಪುಗಳನ್ನು ಖಂಡಿಸದೇ  ಮುಂದೆ ಸರಿ ಹೋಗುತ್ತಾನೆ ಬಿಡು ಎನ್ನುವ ಪ್ರೀತಿಯ ಭರದಲ್ಲಿ ಮಾಡುವ ಬೇಜವಾಬ್ದಾರಿಯುತ ಆರೈಕೆಗಳೇ ಇಂದಿನ ಕೆಲ ಅನಾಹುತಗಳಿಗೆ ಪ್ರತ್ಯಕ್ಷ ಕಾರಣಗಳು.ಆಧುನಿಕತೆಯ ಮದದಲ್ಲಿ ಹಿಂದಿನ ಸಂಪ್ರದಾಯಗಳನ್ನು ತಿರಸ್ಕರಿಸುತ್ತಿರುವ ನಮಗಿಂತ ಚೆನ್ನಾಗಿ ನಮ್ಮ ಪೂರ್ವಜರು ಇಂತಹ ಸಂಸ್ಕಾರಗಳ ಕಲಿಕೆಯ ಅವಶ್ಯಕತೆಯನ್ನು ಅರಿತಿದ್ದರು. ಕಾಯಾ ವಾಚಾ ಮನಸಾ ನಮ್ಮನ್ನು ಪರಿಶುಧ್ದವಾಗಿಡುವುದೇ ಸಂಸ್ಕಾರ. ಮೊದಲೆಲ್ಲಾ ಅವಿಭಕ್ತ ಕುಟುಂಬದಿಂದಾಗಿ ಅದಾಗಲೇ ಹೊರಗಿನ ಪ್ರಪಂಚದೊಂದಿಗೆ ಸಂಬಂಧ ಬೆಸೆದುಕೊಳ್ಳುತ್ತಿರುವ ಮಕ್ಕಳಿಗೆ ವಿಶೇಷ ಸಂಸ್ಕಾರಗಳು  ಸಾಮಾನ್ಯವಾಗಿ ದೊರೆಯುತ್ತಿತ್ತು.ಅದರ ರೀತಿ ನೀತಿಗಳಿಂದಾಗಿ ಹಿರಿಯರನ್ನು ಗೌರವಿಸುವುದೂ,ಜೊತೆಗೆ ಅವರೊಂದಿಗೆ ಸಲುಗೆಯಿಂದಿರುವುದೂ ,ತಪ್ಪು ಮಾಡಿದಾಗ ಬೈಯಿಸಿಕೊಳ್ಳುವುದೂ ಒಳ್ಳೆಯ ನಡತೆಗೆ ಪ್ರಶಂಸೆಗೊಳಪಡುವುದೂ ಹೀಗೆ ಪಠ್ಯಪುಸ್ತಕದ ಹೊರತಾದ ಕಲಿಕೆಗಳು ಸುಲಭವಾಗಿ ಸರಿಯಾದ ಸಮಯದಲ್ಲಿ ಆಗುತ್ತಿತ್ತು. ಹಿರಿಯರ ಕಣ್ಣು ತಪ್ಪಿಸಿ ತಪ್ಪು ಮಾಡಬೇಕೆಂದುಕೊಳ್ಳುವುದು ಮಕ್ಕಳ ಸಹಜ ಗುಣ.ಆದರೆ ತುಂಬಿದ ಕುಟುಂಬದಲ್ಲಿ ಒಬ್ಬರಲ್ಲಾ ಇನ್ನೊಬ್ಬರ ಕಣ್ಣಿಗೆ ಸಿಕ್ಕಿ ಬಿದ್ದು ಮುಂದೆಂದೂ ಅಂತಹ ತಪ್ಪನ್ನು ಮಾಡದಿರುವಂತಹ  ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಆದರೆ ಇಂದು ನಮ್ಮ ಕಲ್ಪನೆಯ ಉನ್ನತ ಜೀವನಕ್ಕಾಗಿ ಅವಿಭಕ್ತ ಕುಟುಂಬದಿಂದ ಪಟ್ಟಣಗಳತ್ತ ಚದುರಿ ಪುರುಸೊತ್ತಿಲ್ಲದೇ ಗಂಡ-ಹೆಂಡಿರಿಬ್ಬರೂ ದುಡಿಯುತ್ತಿರುವಾಗ ಮಕ್ಕಳು ಅಜ್ಜ ಅಜ್ಜಿಯರಿಂದಲೂ ಕುಟುಂಬದ ಇತರ ಸದಸ್ಯರ ಭಾವನಾತ್ಮಕ ಸಂಬಂಧಗಳಿಂದಲೂ ,ಅವರೊಂದಿಗಿನ ಕಲಿಕೆಯಿಂದಲೂ ,ತಪ್ಪನ್ನು ತಿದ್ದಿಕೊಳ್ಳಬೇಕಾದ  ಸಂದರ್ಭಗಳೆಲ್ಲದರಿಂದ ವಂಚಿತರಾಗಿತ್ತದ್ದಾರೆ. ದುಡಿತವೇ ಸರ್ವಸ್ವಾಗಿರುವ ಅಪ್ಪ ಅಮ್ಮನೊಂದಿಗಿನ ಪ್ರೀತಿಯ ವಿಶ್ವಾಸದ ಭಾವನಾತ್ಮಕ ಬೆಸುಗೆಯನ್ನೇ ಹೊಂದದೆ ಬೆಳೆದ ಮಕ್ಕಳು ಮುಂದೆ ವಯಸ್ಸಾದ ತಂದೆ ತಾಯಿಯನ್ನು ವೃಧ್ದಾಶ್ರಮಕ್ಕೆ ಸೇರಿಸದೇ ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಬಯಸಿದರೆ  ಸಾಧ್ಯವಾಗದು.ಬಿತ್ತಿದ್ದನ್ನೇ ಬೆಳೆಯಬೇಕಾದ್ದು ಪ್ರಕೃತಿ ನಿಯಮವಲ್ಲವೇ?ಆದ್ರಿಂದ ಮುಂದಿನ  ಉತ್ತಮ ಸಮಾಜಕ್ಕಾಗಿ ಮತ್ತು ನಮ್ಮ ಉತ್ತಮ ಬದುಕಿಗಾಗಿ ಮಕ್ಕಳನ್ನು ಭಾರತೀಯ ಸಂಸ್ಕೃತಿ ಯೊಂದಿಗೆ ಬೆಳೆಸಬೇಕಾಗಿದೆ.

           ಅನಾಗರೀಕತೆಯೊಂದಿಗೆ ಹೊಸ ವರ್ಷವನ್ನು ಆಚರಿಸಿದವರ ಆ ಮನಸ್ಥಿತಿಗೆ ಮೊಬೈಲ್, ಮಿತ್ರರ ಸಂಗ ಕಾರಣವಾಗಿರಬಹುದು.ಆದರೆ ಅವುಗಳನ್ನೂ ತನ್ನ ಭವಿಷ್ಯಕ್ಕೆ ಕೆಡುಕೆಂದು ತಿಳಿದು ಅಂತಹ ವ್ಯಸನ ,ಹವ್ಯಾಸಗಳಿಗೆ ದಾಸನಾಗದೇ ಸರಿದಾರಿಯಲ್ಲಿ ನಡೆಯಲು ಬೇಕಾದ ದೃಢಮನಸ್ಕತೆಗೆ ಪೋಷಕರಿಂದ ಸಂಸ್ಕಾರಗಳ ಪೋಷಣೆ ದೊರೆತಿಲ್ಲವೆಂಬುದೂ ಅಷ್ಟೇ ಮುಖ್ಯ ಕಾರಣ.  ಎನೂ ಗೊತ್ತಿರದ ಮಣ್ಣಿನ ಮುದ್ದೆಯಂತೆ ನಮ್ಮ ಪ್ರಭಾವದಿಂದ ಯಾವ ರೂಪಕ್ಕೂ ಬದಲಾಗುವ ಮಕ್ಕಳನ್ನು ಬೆಳಗಿನ ಜಾವ ಎಬ್ಬಿಸುವುದರಿಂದ ಆರಂಬಿಸಿ ಮಲಗುವವರೆಗಿನ ವಿಶಿಷ್ಟವಾದ ನಿಯಮಗಳ ಮೂಲಕ ಈ ಮಹಾನ್ ಸಂಸ್ಕೃತಿಯೊಂದಿಗೆ , ಪೌರಾಣಿಕ ಕಥೆಗಳ ಮೂಲಕ ಉತ್ತಮ ಸಾಮಾಜಿಕ ಮೌಲ್ಯಗಳೊಂದಿಗೆ ಬೆಳೆಸುವ ಆ ಅಪರೂಪದ ಜೀವನ ಕ್ರಮಕ್ಕೆ ನಿಜಕ್ಕೂ ತಲೆಬಾಗಲೇಬೇಕು. ಮಕ್ಕಳಿಗೆ ಬುಧ್ದಿ ಬರುವ ಹೊತ್ತಿಗೆ ಸತ್ಯದ ಪಾಲನೆಯನ್ನು ಹರಿಶ್ಚಂದ್ರನ ಕಥೆಯಿಂದ,ತಂದೆ ತಾಯಿಗೆ ಗೌರವ ರಾಮಾಯಣದಿಂದ ,ಮಿತ್ರತ್ವವನ್ನು ಕೃಷ್ಣ ಸುಧಾಮನ ಕಥೆಯಿಂದ ಹೀಗೆ ಅನೇಕ ಮೌಲ್ಯಗಳು ನಮಗೆ ಮನೆಯಿಂದಲೇ ಕಾಣಿಕೆಯಾಗಿ ಬಂದಿರುತ್ತಿದ್ದವು.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎನ್ನುವಂತೆ  ಚಿಕ್ಕಂದಿನಿಂದಲೇ ಉತ್ತಮ ಸಾಮಾಜಿಕ ಮೌಲ್ಯಗಳೊಂದಿಗೆ ಬೆಳೆಸಿ ಉತ್ತಮ ವ್ಯಕ್ತಿಯನ್ನು ಸಮಾಜಕ್ಕೆ ನೀಡುವ ಅದ್ಭುತ ಪ್ರಯತ್ನ ಅಂದಿನ ನಮ್ಮ ಹಿರಿಯರದಾಗಿತ್ತು.ಆದರೆ ನಮ್ಮ  ಇಂದಿನ ಓಡುವ ಜೀವನ ವಿಧಾನದಲ್ಲಿ ಈ ವಿಶೇಷಗಳನ್ನೆಲ್ಲಾ ಎಷ್ಟು ಉಳಿಸಿಕೊಂಡಿದ್ದೇವೆ?ನಮ್ಮದೇ ಸಮಾಜದ ಭಾವೀ ಪ್ರಜೆಗಳನ್ನು ಪ್ರಜ್ಞಾವಂತರನ್ನಾಗಿಸಲು ನಾವು ಶಿಕ್ಷಣದೊಂದಿಗೆ ಎಂತಹ ಸಂಸ್ಕಾರಗಳನ್ನು ಕೊಡುತ್ತಿದ್ದೇವೆ?ತನ್ಮೂಲಕ ಸಮಾಜಕ್ಕೆ ನಮ್ಮ  ಕೊಡುಗೆಯೇನು?ಎನ್ನುವ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರವಾಗಿ ಬದುಕಲು ನಮ್ಮ ಜೀವನ ಶೈಲಿಯಲ್ಲಿ ಕೆಲವೊಂದು ಬದಲಾವಣೆಗಳತ್ತ ಪಯಣಿಸಬೇಕಾದ ಅನಿವಾರ್ಯತೆ ಇದೆಯಲ್ಲವೇ?

-ರಾಜೇಶ.ಡಿ.ಭಟ್ಟ

ಪ್ರಾಧ್ಯಾಪಕರು,ವೇದ ಪಾಠಶಾಲೆ

ಕಲ್ಗದ್ದೆ,ಯಲ್ಲಾಪುರ.

rajukalgadde@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!