ಅವಳು ಫಲವತ್ತಾದ ಭೂಮಿತಾಯಿ.ಸಹಸ್ರಾರು ದೀಪವಾರಿ ಹೋದ ಮನೆಗಳ(ಗೋರಿಗಳ) ನಡುವೆ ತನ್ನ ಮನೆಯ ಜ್ಯೋತಿ ಹೊತ್ತಿಸಿದವಳು. ಕಾಯಕವೇ ಕೈಲಾಸವೆನ್ನುವ ಬಸವಣ್ಣನ ವಚನದಂತೆ ಮಸಣದಲಿ ಮಣ್ಣ ಎತ್ತುವ ಕಾಯಕದಿ ಸಗ್ಗ ಕಾಣುತಿರುವವಳು.ಬದುಕಿನ ಜಟಕಾ ಬಂಡಿಯ ಕೀಲು ಕಳಚಿ ಬಿದ್ದವರಿಗೆ ಮುಕ್ತಿಯಿಯುವ ಪವಿತ್ರ ಕಾರ್ಯ ಇವಳದು.ಮನೆಗೆ ಬಂದವರಿಗೆ “ಪುನಃ ಬನ್ನಿ” ಎಂದು ಹೇಳಲು ಅವಳ ಗಂಟಲು ಕಟ್ಟಿಕೊಳ್ಳುವುದು.ಅದೆಷ್ಟೋ ಪಾಪಕರ್ಮಗಳ ಮಾಡಿ ಭೂಗರ್ಭ ಸೇರಿದ ಮನುಷ್ಯನ ಕೊಳೆತ ದೇಹದ ದುರ್ವಾಸನೆಯೊಡನೆ ಮೂಗು ಮುಚ್ಚಿ ಮುಖ ಸಿಂಡರಿಸದೆ ಪಿಕಾಸಿ ಮತ್ತು ಹಾರೆಗೋಲುಗಳೊಡನೆ ವ್ಯವಹರಿಸುವ ಗೀಳು ಇವಳದು.ಟಿವಿಯಲಿ ತೋರಿಸುವ ರಾತ್ರಿಯ ಗಾಳಿಗ ಉದುರಿದ ಎಲೆಗಳು ಗೋರಿಯ ಕಟ್ಟೆಯ ಮೇಲೆ ಪರಪರನೆ ಸದ್ದು ಮಾಡಿದರೆ ಪಂಚೇಂದ್ರಿಯಗಳನು ಮುಚ್ಚಿಕೊಳ್ಳುವಂತೆ ಭಯವನ್ನು ಬಿಂಬಿಸುವ ರೀಲು ಪ್ರಪಂಚದ ರೀಯಲ್ ಕಥೆ ಈ ಸ್ಮಶಾನ ದೇವತೆ ನೀಲಮ್ಮಳದು.
“ರೀ ಯಾರ್ರೀ ಹೇಳಿದ್ದು, ಸ್ಮಶಾನದಲ್ಲಿ ದೆವ್ವ-ಭೂತ ಅವೆ ಅಂತಾ? ಅವೆಲ್ಲ ಬರೀ ಸುಳ್ಳು, ದೆವ್ವಾನೂ ಇಲ್ಲಾ, ಪಿಶಾಚಿನೂ ಇಲ್ಲ..ಎಲ್ಲ ರೀಲು” ಎಂದು ಹಾರುನಗೆ ಚೆಲ್ಲುವ ನೀಲಮ್ಮನ ಜೀವನೋತ್ಸಾಹ ನೋಡಿ ನಿಬ್ಬೆರಗಾಗುವುದು ಸಹಜ.ಅವಳು ಅರಮನೆ ನಗರಿ ಮೈಸೂರಿನ ವಿದ್ಯಾರಣ್ಯಪುರಮ್ನಲ್ಲಿರುವ “ವೀರಶೈವ ರುದ್ರಭೂಮಿ”ಯ ಮನೆಯೊಡತಿ.ಸುಮಾರು ೨೫ ವರ್ಷಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚಿನ ಆರಡಿ-ಮೂರಡಿ ಗುಂಡಿ ತೋಡಿದ ಶ್ರೇಯ ಅವರದು.ನೀಲಮ್ಮನದು ಗಂಡನಿಲ್ಲದಿದ್ದರೂ ಇಬ್ಬರು ಗಂಡು ಮಕ್ಕಳೊಂದಿಗಿನ ತುಂಬು ಕುಟುಂಬ.ವಿಪರ್ಯಾಸವೆಂದರೆ ಅವರ ಮೊಮ್ಮಗಳಿನ ಆಟದ ಮೈದಾನ ಇದೇ ಮಸಣದ ಗೋರಿಗಳ ನಡುವಿನ ಚಿಕ್ಕ ಪುಟ್ಟ ಓಣಿಗಳು.
ಅದೇನೇ ಇದ್ದರೂ ನೀಲಮ್ಮನ ಅನುಭವದ ಮಾತುಗಳು ಒಮ್ಮೊಮ್ಮೆ ನುರಿತ ತತ್ವಜ್ಞಾನಿಯನ್ನು ನೆನಪಿಸುತ್ತದೆ.”ಅದ್ಯಾಕೆ ಜನ ದುಡ್ಡು,ಬಂಗಾರ ಅಂತಾ ಗೋಳಾಡ್ತಾರೋ, ಅಂತಾ?ಎಷ್ಟೇ ಮಡಗಿದ್ದರೂ ಕೊನೆಗೆ ಒಂದಿನ ಇಲ್ಲಿಗೇ ಬರ್ಬೇಕು” ಎನ್ನುವ ನೀಲಮ್ಮನ ಮಾತುಗಳು ಲೌಕಿಕ ಜೀವನದ ಆಡಂಬರಗಳನ್ನೆಲ್ಲಾ ಒಮ್ಮೆಲೆ ಕಡೆಗಣಿಸುತ್ತಾ ಸಹಜತೆಗೆ ನಾವೆಲ್ಲಾ ಮುಖ ಮಾಡಿದರೆ ಒಳಿತು ಎನ್ನುವ ಸನ್ನೆ ಮಾಡಿದಂತೆ ಭಾಸವಾಗುತ್ತಿತ್ತು.ಅವಳು ಇಷ್ಟಪಟ್ಟು ಸಂಪಾದಿಸಿದ ಹುದ್ದೆಯೇನಲ್ಲ ಈ ಗುಂಡಿ ತೋಡುವ ಕೈಂಕರ್ಯ.ತನ್ನ ಪತಿ ಮಹದೇವಪ್ಪನವರೊಡನೆ ದಿನಾಲೂ ಈ ಕಾಯಕದಲ್ಲಿ ಸಹಕರಿಸುತ್ತಿದ್ದರು. ಮುತ್ತೈದೆ ನೀಲಮ್ಮನ ಮನಸ್ಸು ಹಠಾತ್ತನೆ ಕುಸಿಯುವಂತೆ ಮಹದೇವಪ್ಪನವರು ಅಸುನೀಗಿದಾಗ ಉಂಟಾದ ನೋವಿನ ಜ್ವಾಲೆ ಹೊತ್ತಿಸಿದ ಕಿಚ್ಚು ಇದು.”ನನಗೆ ಉಣ್ಣಾಕೆ ದುಡ್ಡು, ಆಸ್ತಿ ಎನಾರ ಇದ್ದಿದ್ರ, ನಾನು ಈ ಕೆಲಸಕ್ಕ ಮುಂದುವರಿತಿದ್ನ ಇಲ್ಲ, ಆದ್ರ ಪರಿಸ್ಥಿತಿ ನನಗೆ ಈ ಕೆಲಸನ ಕೊಡಿಸಿ ಬಿಡ್ತು” ಎಂದು ನಮ್ರವಾಗಿ ಹೇಳುವ ನೀಲಮ್ಮನ ಗಟ್ಟಿತನಕ್ಕೊಂದು ಸಲಾಮ್.
ಒಮ್ಮೆ ಒಂದೇ ದಿನ ೪ ಶವಗಳು ದಿಢೀರ್ ಆಗಿ ಭೇಟಿ ಕೊಟ್ಟಾಗ ನೀಲಮ್ಮ ಅವರ ಅತಿಥಿ ಸತ್ಕಾರಕ್ಕೆ ೪ ಆರಡಿ-ಮೂರಡಿ ಗುಂಡಿ ತೆಗೆದ ಅನುಭವವನ್ನು ಮೆಲಕು ಹಾಕುತ್ತಾ, ಸುಮಾರು ೭ ಎಕರೆಯ ರುದ್ರಭೂಮಿ ಇದೀಗಲೇ ಮುಕ್ಕಾಲು ಭಾಗ ತುಂಬಿದೆ ಎಂದು ನಸುನಗುತ್ತಾಳೆ.ಗುಂಡಿಯೊಂದಕ್ಕೆ ೫೦೦ರೂನಷ್ಟು ಶುಲ್ಕ ವಿಧಿಸುವ ನೀಲಮ್ಮ, ಹಲವಾರು ಬಡ ಮತ್ತು ಅನಾಥ ಶವಗಳಿಗೆ ಉಚಿತ ಮುಕ್ತಿ ನೀಡಿ ಮಾನವೀಯತೆ ಮೆರೆದ ನೀಲಮ್ಮ ಒಂದು ಅನನ್ವಯ ವ್ಯಕ್ತಿತ್ವ.ಸಾಮಾನ್ಯವಾಗಿ ಮಹಿಳೆಯರು ದೈಹಿಕವಾಗಿ ಪುರುಷರಿಗಿಂತ ದುರ್ಬಲರು. ಆದರೆ ನೀಲಮ್ಮ ಮಾತ್ರ ಇದಕ್ಕೆ ತದ್ವಿರುದ್ಧ ಸಾಕ್ಷಿ.ಒಂದು ಗುಂಡಿ ತೆಗೆಯಲು ಸುಮಾರು ೨ಗಂಟೆ ತೆಗೆದುಕೊಳ್ಳುತಿದ್ದ ನೀಲಮ್ಮ ಈಗ ೩ಗಂಟೆ ತೆಗೆದುಕೊಳ್ಳುತ್ತೇನೆ ಅಷ್ಟೇ ಎಂದು ಜೀವನೋತ್ಸಾಹದ ಕಿರುನಗೆ ಬೀರುತ್ತಾಳೆ.
ಭವ ಜಗತ್ತಿನ ಜಂಜಾಟದಲ್ಲಿ ಮುಳುಗಿರುವ ನಮ್ಮಂತವರಿಗೆ ಸತ್ತವರ ಪಯಣದ ನಿಲ್ದಾಣವೊಂದರ(ಸ್ಮಶಾನ) ಆಗುಹೋಗುಗಳು ಅರಿವಿಲ್ಲದಿರುವುದು ಸಹಜ.ಆದರೆ ನೀಲಮ್ಮ ಬಿಚ್ಚಿಟ್ಟ ಒಂದಿಷ್ಟು ಕಥೆಗಳು ಬಹುಜನರಿಗೆ ಅಪರಿಚಿತವಾಗಿದ್ದ, ಕೇವಲ ಟಿವಿಗಳಲ್ಲಿ ಸಿನಿಮಾಗಳಲ್ಲಿ ಬಿಂಬಿತವಾಗಿದ್ದ ನಕಲಿ ಭಯಾನಕ ಜಗತ್ತಿನ ಅನಾವರಣಗೊಳಿಸುತ್ತಿದ್ದವು.ಅಯ್ಯೋ!! ಆ ಹೆಂಗಸು ಗುಂಡಿ ತೆಗಿತಾಳಂತೆ, ಬೇರೆ ಕೆಲಸಾ ಇಲ್ಲ ಅವಳಿಗೆ ಎಂದು ತಾತ್ಸಾರದ ನಗು ನಕ್ಕವರು ಇಂದು ನೀಲಮ್ಮನ ನಿಸ್ವಾರ್ಥ ಕಾಯಕವನ್ನು ಮೆಚ್ಚಿ ಸನ್ಮಾಸುತ್ತಿರುವ ಸುದ್ದಿ ಕೇಳಿ ಮೂಗಿನ ಮೇಲೆ ಬೆರಳಿಸಿದ್ದರೆಂದು ನೀಲಮ್ಮ ಸಂತ್ರಪ್ತಿಯಿಂದಾ ಹೇಳುತ್ತಾಳೆ.ಇವೆಲ್ಲದರ ನಡುವೆ ನೀಲಮ್ಮ ಗೋರಿ ಕಟ್ಟುವ ಸಂಸ್ಕೃತಿಯನ್ನು ಅಲ್ಲಗಳೆಯುತ್ತಾ, ಸತ್ತವರ ಸಮಾಧಿಯ ಸ್ಥಾನದಲ್ಲಿ ಒಂದೊಂದು ಗಿಡ ನೆಟ್ಟರೆ ಒಳಿತು ಎಂಬುದಾಗಿ ತನ್ನಲ್ಲೇ ಗೊಣಗಿಕೊಳ್ಳುತ್ತಾ ತನ್ನ ಪತಿಯ ಹೆಸರಲ್ಲಿ ನೆಟ್ಟಿದ್ದ ತೆಂಗಿನ ಸಸಿಯನ್ನು ತೋರಿಸುತ್ತಾ ಸಂತಸ ಪಡುತ್ತಾಳೆ.
ಈ ನೀಲಮ್ಮನ ನೈಜಕಥೆ ಜೀವನದ ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುವ ಎಲ್ಲ ಮನುಕುಲದ ದುರ್ಬಲರಿಗೂ ಸ್ಪೂರ್ತಿ ಆಗಲಿ.
–