Featured ಅಂಕಣ

​ಗಾಂಧೀಜಿ ಕನಸು ನನಸು ಮಾಡುತ್ತಿರುವ ಮೋದಿ ಸರ್ಕಾರ

ಬಹುಷಃ ನೂರಿಪ್ಪತ್ತೈದು ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ನೂರರಲ್ಲಿ ಒಬ್ಬರಿಗೆ ಕೂಡಾ ಖಾದಿ ಗ್ರಾಮೋದ್ಯೋಗ ಮಂಡಳಿ ಎನ್ನುವುದೊಂದಿದೆ ಮತ್ತು ಅದು ವರ್ಷಕ್ಕೊಮ್ಮೆ ಗಾಂಧೀಜಿಯ ಚಿತ್ರವಿರುವ ಕ್ಯಾಲೆಂಡರ್ ಬಿಡುಗಡೆ ಮಾಡುತ್ತದೆ ಎನ್ನುವ ವಿಷಯ ಗೊತ್ತಿದ್ದಿರಲಾರದು.ಆದರೆ ಯಾವಾಗ ಮಾಧ್ಯಮಗಳಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯ ಕ್ಯಾಲೆಂಡರ್ ನಲ್ಲಿ ಗಾಂಧಿಯವರ ಜಾಗದಲ್ಲಿ ಮೋದಿ ಕುಳಿತಿದ್ದಾರೆ ಎನ್ನುವ ಸುದ್ದಿ ಪ್ರಸಾರವಾಗತೊಡಗಿತೋ ಆಗ ಮಹಾತ್ಮಾ ಗಾಂಧೀ ಮಾರ್ಗದಲ್ಲಿ ಕುಡಿದು ವಾಲಾಡುತ್ತಿದ್ದವರೆಲ್ಲಾ ಇದು ಮಹಾತ್ಮಾ ಗಾಂಧಿಯವರಿಗೆ ಮಾಡಿದ ದೊಡ್ಡ ಅವಮಾನ ಎಂದು ಬೊಬ್ಬೆ ಹೊಡೆಯತೊಡಗಿದರು.

ಕೆಲವೇ ವರ್ಷಗಳ ಹಿಂದೆ ಬಹುತೇಕ ಔಟ್’ಡೇಟೆಡ್ ಎನಿಸಿಕೊಂಡಿದ್ದ ಖಾದಿ ಮತ್ತೆ ಹೊಸತನದೊಂದಿಗೆ ಕಂಗೊಳಿಸುವಂತೆ ಮಾಡುವಲ್ಲಿ ಮತ್ತು ಆ ಮೂಲಕ ಗಾಂಧೀಜಿಯವರ ಕನಸು ನನಸು ಮಾಡುವಲ್ಲಿ ಮೋದಿಯವರ ಪ್ರಭಾವವೆಷ್ಟಿದೆ,ಶ್ರಮವೆಷ್ಟಿದೆ ಎನ್ನುವುದು ಬಹುಷಃ ಅವರುಗಳಿಗೆ ಗೊತ್ತಿರಲಾರದು.ಅಥವಾ ನಿರಾಯಾಸವಾಗಿ ಮೋದಿಯವರನ್ನು ದೂಷಿಸಲು ಸಿಕ್ಕಿರುವ ಅಮೂಲ್ಯ ಅವಕಾಶವೊಂದನ್ನು ಕಳೆದುಕೊಳ್ಳಲು ಆ ಸಂಪ್ರದಾಯವಾದಿಗಳು ಸಿದ್ಧರಿಲ್ಲದಿರಬಹುದು.ಒಟ್ಟಿನಲ್ಲಿ ಈ ವಿಷಯವನ್ನಿಟ್ಟುಕೊಂಡು ನರೇಂದ್ರ ಮೋದಿಯವರಿಗೆ ದೇಶದಾದ್ಯಂತ ಸಹಸ್ರ ನಾಮಾರ್ಚನೆ ಮಾಡಲಾಗುತ್ತಿದೆ.

ಗಾಂಧೀಜಿಯವರ ಕನಸು ನನಸು ಮಾಡಲು ಬೇಕಾಗಿರುವುದು ಪ್ರಬಲ ಇಚ್ಛಾಶಕ್ತಿಯೇ ಹೊರತೂ ಕೇವಲ ಅವರ ಚಿತ್ರವಲ್ಲ ಎನ್ನುವುದು ಈ ದೇಶದ ಜನಸಾಮಾನ್ಯರ ಅಭಿಪ್ರಾಯ.ವಿಪರ್ಯಾಸವೆಂದರೆ ಮಹಾತ್ಮಾ ಗಾಂಧಿಯ ಹೆಸರಿನಲ್ಲೇ ಇರುವ ರಸ್ತೆಗಳಲ್ಲಿ ಬಾರುಗಳಿಗೆ,ಪಬ್ಬುಗಳಿಗೆ ಅನುಮತಿ ನೀಡಿ ಮುನ್ನೂರರವತ್ನಾಲ್ಕು ದಿನಗಳೂ ಅಲ್ಲಿ ಕುಡಿದು ತೂರಾಡಲು ಅವಕಾಶ ಮಾಡಿಕೊಟ್ಟಾಗ ಅದು ಗಾಂಧೀಜಿಯವರಿಗೆ ಮಾಡುತ್ತಿರುವ ಅವಮಾನ ಎಂದು ಈಗ ವಿರೋಧಿಸುತ್ತಿರುವ ಯಾರಿಗೂ ಅನ್ನಿಸದಿರುವುದು.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಖಾದಿ ಉದ್ಯಮದಲ್ಲಿ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಏನೆಲ್ಲಾ ಬದಲಾವಣೆಗಳಾಗಿವೆ ಎನ್ನುವ ಒಂದಷ್ಟು ಮಾಹಿತಿಗಳು ಇಲ್ಲಿವೆ.ದಯವಿಟ್ಟು ಸಮಯ ಮಾಡಿಕೊಂಡು ಓದಿ.

******

​ಗಾಂಧಿ ಕಾಲದ ಖಾದಿ ಹೊಸತನ ಪಡೆದುಕೊಳ್ಳುವುದಿಲ್ಲವೇ? ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇತ್ತು. ಖಾದಿ ಹಳೆ ತಲೆಮಾರಿನ ಫ್ಯಾಷನ್ ಎಂಬುದು ಕೆಲವರ ನಂಬಿಕೆಯಾಗಿತ್ತು.ಆದರೀಗ ಟ್ರೆಂಡ್ ಬದಲಾಗುತ್ತಿದ್ದು, ಖಾದಿಗೂ ಅಚ್ಛೇ ದಿನ್ ಬರಲಾರಂಭಿಸಿದೆ. ವಸ್ತ್ರ ವಿನ್ಯಾಸಕಾರರು ಖಾದಿಗೆ ಮನ್ನಣೆ ನೀಡುತ್ತಿದ್ದರೆ ಕೇಂದ್ರ ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗವು ಖಾದಿಯ ಜನಪ್ರಿಯತೆಯನ್ನು ಸಪ್ತಸಾಗರಗಳಾಚೆ ತಲುಪಿಸಲು ಮುಂದಾಗಿದೆ.

ಹಳೆ ಬಗೆಯ ವಿನ್ಯಾಸ, ಶೈಲಿಯಿಂದ ಹೊರಬಂದು ಖಾದಿ ಈಗ ಟ್ರೆಂಡಿ ಆಗುತ್ತಿದೆ. ಖಾದಿ ಎಂದರೆ ಹಳೆ ಫ್ಯಾಷನ್ ಎಂದು ಜರಿಯುತ್ತಿದ್ದ ಯುವಕ/ಯುವತಿಯರೇ ಈಗ ಖಾದಿ ಜುಬ್ಬ, ಜಾಕೆಟ್ ಹಾಕಿ ಮಿಂಚುತ್ತಿದ್ದಾರೆ. ಖಾದಿ ವಸ್ತ್ರ ತೊಟ್ಟು ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಫ್ಯಾಷನ್ ಡಿಸೈನರ್​ಗಳು ಖಾದಿಯ ಬ್ರಾಂಡ್​ನ್ನು ಜನಪ್ರಿಯಗೊಳಿಸುತ್ತಿದ್ದು, ವಸ್ತ್ರ ವಿನ್ಯಾಸದಲ್ಲಿ ಹೊಸ ಪ್ರಯೋಗ, ಸೃಜನಶೀಲತೆಯನ್ನು ಅಳವಡಿಸಿ ಜನರನ್ನು ಹತ್ತಿರವಾಗಿಸುತ್ತಿದ್ದಾರೆ.ಅತ್ತ ರಾಷ್ಟ್ರೀಯ ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗವೂ ಹಳೆ ಕಾರ್ಯಶೈಲಿಯಿಂದ ಹೊರಬಂದು ಹೊಸತನದತ್ತ ಹೊರಳಿಕೊಂಡಿದೆ. ಖಾದಿಯ ಖದರ್​ನ್ನು ಹೆಚ್ಚಿಸಲು ಹಲವು ಕ್ರಮಗಳಿಗೆ ಮುಂದಾಗಿದೆ. ಪರಿಣಾಮ, ಪ್ರಸಕ್ತ ಆಯೋಗದ ವಹಿವಾಟು ದುಪ್ಪಟ್ಟುಗೊಳ್ಳಲಿದೆ. ಖಾದಿಯ ಒಟ್ಟು ವಹಿವಾಟು ಈ ಬಾರಿ 2 ಸಾವಿರ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ.

ರೈಲಿನ ಎಸಿ ದರ್ಜೆಯ ಪ್ರಯಾಣಿಕರಿಗೆ ನೀಡಲಾಗುವ ಹೊದಿಕೆ, ಬೆಡ್​ಶೀಟ್, ತಲೆದಿಂಬಿನ ಕವರ್ ಇವೆಲ್ಲವೂ ಇನ್ನು ಮುಂದೆ ಅಪ್ಪಟ ಖಾದಿಯದ್ದಾಗಿರಲಿವೆ. ಈ ನಿಟ್ಟಿನಲ್ಲಿ ರೈಲ್ವೆ ಬೋರ್ಡ್ ಈಗಾಗಲೇ ಖಾದಿ ಆಯೋಗದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ 6 ಲಕ್ಷ ಬೆಡ್​ಶೀಟ್, 8 ಲಕ್ಷ ತಲೆದಿಂಬು ಕವರ್​ಗಳಿಗೆ ಆರ್ಡರ್ ಕೊಡಲಾಗಿದೆ.ರೈಲ್ವೆ ಇಲಾಖೆಯಲ್ಲಿ ಪ್ರತಿನಿತ್ಯ ಸರಿಸುಮಾರು 3.5 ಲಕ್ಷ ನ್ಯಾಪ್ಕಿನ್ ಬಳಕೆಯಾಗುತ್ತಿವೆ. ಈ ಪೈಕಿ ಶೇಕಡ 60ರಷ್ಟು ನ್ಯಾಪ್ಕಿನ್​ಗಳು ಒಂದು ಬಾರಿ ಉಪಯೋಗಿಸಿದ ನಂತರ ಮತ್ತೆ ಬಳಕೆಯಾಗುವುದಿಲ್ಲ. ನ್ಯಾಪ್ಕಿನ್ ಒಂದರ ಬೆಲೆ 20 ರೂಪಾಯಿ ಇದ್ದು, ಸ್ವಚ್ಛತೆಗಾಗಿ ಪ್ರತ್ಯೇಕ 5 ರೂ. ಖರ್ಚಾಗುತ್ತದೆ. ಹಾಗಾಗಿ, ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ನ್ಯಾಪ್ಕಿನ್ ಒದಗಿಸುವ ಪ್ರಸ್ತಾವನೆಯನ್ನು ಆಯೋಗ ರೈಲ್ವೆ ಇಲಾಖೆ ಮುಂದಿಟ್ಟಿದೆ. ಅಲ್ಲದೆ, ರೈಲ್ವೆ ಇಲಾಖೆಯ ಸಿಬ್ಬಂದಿಯ ಸಮವಸ್ತ್ರವನ್ನು ಖಾದಿಯದ್ದಾಗಿಸಲು ಚಿಂತನೆ ನಡೆದಿದೆ.ರೈಲ್ವೆ ಇಲಾಖೆ ಮಾತ್ರವಲ್ಲದೆ ಸರ್ಕಾರದ ಬೇರೆ ಬೇರೆ ವಿಭಾಗಗಳಿಂದಲೂ ಖಾದಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ.​ಏರ್ ಇಂಡಿಯಾ ಹಾಗೂ ಕೆಲ ಕಾಪೋರೇಟ್ ಕಂಪನಿಗಳೂ ಆಯೋಗಕ್ಕೆ ಖಾದಿ ಉತ್ಪನ್ನಗಳಿಗಾಗಿ ಬೇಡಿಕೆ ಸಲ್ಲಿಸಿವೆ. ಏರ್ ಇಂಡಿಯಾ ಈಗಾಗಲೇ 9.5​ ಕೋಟಿ ರೂ.ಗಳಿಗೂ ಹೆಚ್ಚುಮೌಲ್ಯದ ಉತ್ಪನ್ನಗಳಿಗಾಗಿ ಬೇಡಿಕೆ ಸಲ್ಲಿಸಿದೆ.ಖಾಸಗಿ ವಿಮಾನಯಾನ ಸಂಸ್ಥೆಗಳು ಹಾಗೂ ಬ್ಯಾಂಕ್​ಗಳೊಂದಿಗೆ ಹೊಸ ಡೀಲ್​ಗಳಿಗಾಗಿ ಆಯೋಗ ಮಾತುಕತೆ ನಡೆಸುತ್ತಿದೆ. ಖಾದಿ ಉತ್ಪನ್ನಗಳ ಬಗ್ಗೆ ಬಹುಜನರಿಗೆ ಆಕರ್ಷಣೆ ಹಾಗೂ ಆಸಕ್ತಿ ಇದೆ. ಆದರೆ, ಅದನ್ನು ಉತ್ತಮ ಗುಣಮಟ್ಟ ಹಾಗೂ ಹೊಸ ಶೈಲಿಯಲ್ಲಿ ಜನರಿಗೆ ತಲುಪಿಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಆಯೋಗ ಕೆಲಸ ಮಾಡುತ್ತಿದೆ.

ಭಾರತದ ಫ್ಯಾಷನ್ ಉದ್ಯಮ ಸಮೂಹವು ಇದೀಗ ಖಾದಿಗಿರುವ ವಿವಿಧ ಸಾಧ್ಯತೆಗಳನ್ನು ಮನದಟ್ಟು ಮಾಡಿಕೊಂಡಿದೆ. ಹಾಗಾಗಿ, ಖಾದಿಗೆ ಫ್ಯಾಷನ್ ಟಚ್ ನೀಡಲು ರೂಪದರ್ಶಿಗಳನ್ನು ಬಳಸಿಕೊಳ್ಳುತ್ತಿದೆ. ಅವರಿಂದ ಖಾದಿ ರ‍್ಯಾಂಪ್ ವಾಕ್ ಗಳನ್ನೂ ಆಯೋಜಿಸುತ್ತಿದೆ. ಖಾದಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ನೇಕಾರರ ಜೀವನಕ್ಕೂ ಬಲ ಬಂದಿದೆ. ಆಧುನಿಕತೆಯ ಅಟ್ಟಹಾಸದಲ್ಲಿ ನೇಕಾರಿಕೆ ಹಾಗೂ ಈ ವೃತ್ತಿಯನ್ನು ನಂಬಿಕೊಂಡವರು ನಲುಗಿ ಹೋಗಿದ್ದರು. ಬೇರೆ ಕೆಲಸ ಮಾಡಲು ಗೊತ್ತಿಲ್ಲದೆ, ನೇಕಾರಿಕೆ ತೊರೆಯಲೂ ಆಗದೆ ಪರದಾಡುತ್ತಿದ್ದರು. ಆದರೀಗ, ಕೈತುಂಬ ಕೆಲಸ ಸಿಗುತ್ತಿರುವ ಪರಿಣಾಮ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಮುಂಚೆ ನೇಕಾರರ ದಿನದ ಆದಾಯ 150-200 ರೂಪಾಯಿಯಾಗಿತ್ತು. ಈಗ ಇದು 300-350 ರೂಪಾಯಿಗಳಿಗೆ ಏರಿಕೆಯಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದ ನೇಕಾರರಿಗೆ ಈ ಮುಂಚೆ ದಿನಕ್ಕೆ 3-4 ಗಂಟೆಯಷ್ಟೇ ಕೆಲಸ ಸಿಗುತ್ತಿತ್ತು. ಈಗೀದು 7-8 ಗಂಟೆಗೆ ಏರಿಕೆಯಾಗಿದೆ. ನಿರುದ್ಯೋಗಿ ಯುವಕರನ್ನು ಖಾದಿ ಉದ್ಯಮಕ್ಕೆ ತೊಡಗಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮೌಂಟ್​ ಅಬುನಲ್ಲಿ ವಿಶೇಷ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು,3,200 ಯುವಕರು ಪ್ರಸಕ್ತ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಹೊಸದಾಗಿ ನಿರ್ವಣಗೊಳ್ಳಲಿರುವ ‘ಖಾದಿ ಪ್ಲಾಜಾ’ದಲ್ಲೂ ನಿರುದ್ಯೋಗಿ ಯುವಕರಿಗಾಗಿ 2 ತಿಂಗಳ ಅವಧಿಯ ತರಬೇತಿ ನೀಡಲು ನಿರ್ಧರಿಸಲಾಗಿದೆ. ತರಬೇತಿ ಬಳಿಕ ಯುವಕರು ಸ್ವಉದ್ಯೋಗ ಆರಂಭಿಸಿ, ಸ್ವಾವಲಂಬಿ ಬದುಕು ಸಾಗಿಸಬಹುದಾಗಿದೆ.

ಈ ಮೊದಲು ಖಾದಿ ವಸ್ತ್ರ ಹಾಗೂ ಇತರೆ ಉತ್ಪನ್ನಗಳನ್ನು ಖರೀದಿಸಬೇಕಾದರೆ ನಿಗದಿತ ಮಳಿಗೆಗೆ ಹೋಗಬೇಕಿತ್ತು. ಇಂಥ ಮಳಿಗೆಗಳ ಸಂಖ್ಯೆಯೂ ಕಮ್ಮಿ. ಹಾಗಾಗಿ ಖಾದಿ ಉತ್ಪನ್ನಗಳನ್ನು ಜನರ ಬಳಿಗೆ ಕೊಂಡೊಯ್ಯಲು ಆಯೋಗ ಇ-ಕಾಮರ್ಸ್ ಕಂಪನಿಗಳಿಗೂ ಲಗ್ಗೆ ಇಟ್ಟಿದೆ. ಫ್ಲಿಪ್​ಕಾರ್ಟ್, ಸ್ನಾಪ್​ಡೀಲ್ ಸೇರಿದಂತೆ ದೊಡ್ಡ ಇ-ಕಾಮರ್ಸ್ ತಾಣಗಳಲ್ಲಿ ಖಾದಿ ವಸ್ತ್ರಗಳು ಲಭ್ಯವಿದ್ದು, ಜನರಿಂದ ಉತ್ತಮ ಬೇಡಿಕೆ ಇದೆ. ಖಾದಿಯ ಪ್ಯಾಂಟ್, ಶರ್ಟ್, ಜುಬ್ಬಾ, ಸೀರೆ, ಧೋತಿ ಇದೆಲ್ಲವೂ ಈ ತಾಣಗಳಲ್ಲಿ ಲಭ್ಯ. ಗಮನ ಸೆಳೆಯುವ ವಿನ್ಯಾಸ: ಈಗಿನ ಟ್ರೆಂಡ್​ಗೆ ಅನುಗುಣವಾಗಿ ಖಾದಿ ವಸ್ತ್ರಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ವಿಭಿನ್ನ ಬಣ್ಣಗಳು, ಬೇರೆ-ಬೇರೆ ರೀತಿಯ ಕಾಲರ್, ಡಿಸೈನಡ್ ವರ್ಕ್​ಗಳಿಂದ ಬಟ್ಟೆಗಳು ಗಮನ ಸೆಳೆಯುತ್ತಿವೆ. ಜುಬ್ಬಾ, ಶರ್ಟ್, ಸೀರೆಗಳಿಗಂತೂ ವ್ಯಾಪಕ ಬೇಡಿಕೆ ಇದೆ. ಇದನ್ನು ಕಂಡು ಇತರೆ ಇ-ಕಾಮರ್ಸ್ ತಾಣಗಳು ಕೂಡ ಖಾದಿ ಉತ್ಪನ್ನಗಳತ್ತ ಒಲವು ತೋರಿವೆ.

ವಿದೇಶಗಳಲ್ಲಿ ಮಳಿಗೆ: ವಿದೇಶಗಳಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವುದು ಹಾಗೂ ವಿದೇಶಿಗರೂ ಭಾರತೀಯ ಉಡುಗೆ-ತೊಡುಗೆಗಳನ್ನು ಇಷ್ಟಪಡುತ್ತಿರುವುದನ್ನು ಗಮನಿಸಿ ಖಾದಿ ಆಯೋಗ ಇತರೆ ರಾಷ್ಟ್ರಗಳಲ್ಲಿ ತನ್ನ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ. ಮೊದಲ ಹಂತದಲ್ಲಿ, ಅಮೆರಿಕ ಹಾಗೂ ಬ್ರಿಟನ್​ನಲ್ಲಿ ಮಳಿಗೆ ತೆರೆಯಲು ನಿರ್ಧರಿಸಲಾಗಿದ್ದು, ಎರಡನೇ ಹಂತದಲ್ಲಿ ಸಿಂಗಾಪುರ, ಮಾರಿಷಸ್​ನಲ್ಲಿ ಮಳಿಗೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ಮೂಲಕ ಖಾದಿ ಉತ್ಪನ್ನಗಳು ದೇಶದ ಗಡಿದಾಟಿ ಹೊರರಾಷ್ಟ್ರಗಳಿಗೂ ತಲುಪಲಿದ್ದು, ಮಾರುಕಟ್ಟೆ ವಿಸ್ತಾರಗೊಳ್ಳಲಿದೆ.

ಪ್ರತೀ ಕುಟುಂಬದ ಸದಸ್ಯ ವಾರದಲ್ಲಿ ಒಂದು ದಿನವಾದರೂ ಖಾದಿ ಬಟ್ಟೆ ಧರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದ ಮೂಲಕ ಮನವಿ ಮಾಡಿದ್ದರು. ಅದರಂತೆ, ಕೇಂದ್ರ ಸರ್ಕಾರಿ ನೌಕರರಿಗೆ ಪ್ರತಿ ಶುಕ್ರವಾರ ಖಾದಿ ಸಮವಸ್ತ್ರ ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆದಿದೆ. ಆದರೆ, ರಾಜಸ್ಥಾನ ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಕ್ರಮ ಕೈಗೊಂಡಿದ್ದು ಪಾಲಿಕೆ, ಪಂಚಾಯತ್, ಪೊಲೀಸ್ ಇಲಾಖೆಗಳಲ್ಲಿ ವಾರಕ್ಕೊಮ್ಮೆ ಖಾದಿ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮೋದಿ ಕರೆ ನೀಡಿದ ಬಳಿಕ ದೇಶದ ಮಹಾನಗರಗಳಲ್ಲಿ ಖಾದಿ ಖರೀದಿ ಪ್ರಮಾಣ ಹೆಚ್ಚಿದೆ. ಖಾದಿ ಜಾಕೆಟ್​ಗಳಿಗೆ ಭಾರಿ ಬೇಡಿಕೆಯಿದ್ದು, ದೆಹಲಿ ಹಾಗೂ ಗುಜರಾತಿನಲ್ಲಿ ತಯಾರಿಸಲಾಗುತ್ತಿರುವ ಈ ಜಾಕೆಟ್​ಗಳು ದೇಶದ ಬೇರೆ-ಬೇರೆ ರಾಜ್ಯಗಳಿಗೆ ರಫ್ತಾಗುತ್ತಿವೆ. ಖಾದಿ ಉದ್ಯಮ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು ಈ ಬಾರಿ 19.5 ಲಕ್ಷ ಜನರಿಗೆ ಕೆಲಸ ಸಿಗಲಿದೆ ಎನ್ನಲಾಗುತ್ತಿದೆ.

ಅಧುನಿಕತೆ, ಬಹುರಾಷ್ಟ್ರೀಯ ಕಂಪನಿಗಳ ಅಬ್ಬರ ಹೆಚ್ಚಾಗುತ್ತಿದ್ದಂತೆ ಖಾದಿ ಹೊಳಪು ಕಳೆದುಕೊಳ್ಳಲಾರಂಭಿಸಿತು. ನೋಡನೋಡುತ್ತಿದ್ದಂತೆ ಖಾದಿ ಉದ್ಯಮ ಮೂಲೆಗುಂಪಾಯಿತು. ಈ ಉದ್ಯಮವನ್ನು ನೆಚ್ಚಿಕೊಂಡವರು ಇನ್ನಿಲ್ಲದಂತೆ ಪರದಾಡಬೇಕಾಯಿತು. ಉದ್ಯಮಕ್ಕೆ ಹೊಸ ಸ್ವರೂಪ ನೀಡಬೇಕು ಎಂಬ ಬೇಡಿಕೆ ವ್ಯಾಪಕವಾಗಿ ಕೇಳಿ ಬಂದರೂ ಅದು ಈಡೇರಿರಲಿಲ್ಲ. ಆದರೀಗ ಮತ್ತೆ ಖಾದಿ ಉದ್ಯಮ ಮೈಕೊಡವಿಕೊಂಡು ನಿಂತಿದ್ದು, ಹೊಸತನಕ್ಕೆ ತೆರೆದುಕೊಂಡಿದೆ.

ಮಾಹಿತಿ ಕೃಪೆ​:​  ವಿಜಯವಾಣಿ,​timesofindia,hindustantimes.com and ​ vic.org.in

ಚಿತ್ರ ಕೃಪೆ: The Indian Express


ಪ್ರವೀಣ್ ಕುಮಾರ್ ಮಾವಿನಕಾಡು

mkpraveen79@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!