ಅಂಕಣ

ಬಣ್ಣದ ಚಿಟ್ಟೆ

“If you love a flower, don’t pick it up. Because if you pick it up it dies and it ceases to be what you love.

So if you love a flower, let it be.

Love is not about possession.

Love is about appreciation.”

-Osho

ಪ್ರೀತಿ ಸ್ವಾಧೀನತೆಯಲ್ಲಿಲ್ಲ!ಪ್ರೀತಿ ಪ್ರಶಂಸೆಯಲ್ಲಿದೆ!

-ಓಶೋ!”

ಸೋಮನಹಳ್ಳಿ ಈಗ ಮೊದಲಿನಂತಿಲ್ಲ. ಹಳ್ಳಿಯ ಕೆಳಗಿನ ಕೇರಿಯವರೆಗೂ ಡಾಂಬರಿನ ರಸ್ತೆಯಾಗಿದೆ. ಅಲ್ಲೆಲ್ಲೋ ಬೆಟ್ಟದ ಮೇಲೆ ಫೋನಿನ ಸಿಗ್ನಲ್ಲೂ ಸಹ ಸಿಗುತ್ತದೆ. ಯುವಕರೆಲ್ಲ ಪಟ್ಟಣದ ಹಾದಿ ಹಿಡಿದಿದ್ದರೆ,ಊರಿನಲ್ಲಿ ಬದುಕಿರುವವರೆಲ್ಲ ವಯಸ್ಸಾದವರೇ! ಸೋಮನಹಳ್ಳಿಯಲ್ಲಿ ಒಂದು ಕಾಲದಲ್ಲಿ ೧೦-೧೨ ಜನರು ವಾಸಿಸಲೆಂದು ಕಟ್ಟಿದ್ದ ದೊಡ್ಡ ದೊಡ್ಡ ಮನೆಗಳಲ್ಲಿ ಈಗ ವಾಸಿಸುವುದು, ಒಬ್ಬರೋ ಇಬ್ಬರೋ ಗ್ರಾಮದ ಕೊಟ್ಟಿಗೆಗಳೆಲ್ಲ ಬಚ್ಚಲ ಮನೆಗಳಾಗಿ ಪರಿವರ್ತನೆ ಹೊಂದಿವೆ, ದೇವಸ್ಥಾನಗಳ ಬಾಗಿಲುಗಳು ಮುಚ್ಚಿವೆ.

ಅಡಿಕೆ ಮರಗಳ ನಡುವೆ ಅಲ್ಲೆಲ್ಲೋ ಸಣ್ಣಕೆ ನಿಶ್ಚಲವಾಗಿ ನಿಂತಿರುವ ಕೆರೆಯೊಂದರಿಂದ ನೀರು ತುಂಬಿಕೊಂಡು ಸುಮಾರು ಎಪ್ಪತ್ತು ದಾಟಿದ ಮುದುಕಿಯೊಬ್ಬಳು ಮನೆ ಕಡೆಗೆ ಬಿರುಸಾಗಿ ನಡೆದುಕೊಂಡು ಬರುತ್ತಿದ್ದಾಳೆ. ಅವಳಿಗೆ ಈ ದಿನ ಬಹಳ ವಿಶೇಷವಾದುದು. ವರ್ಷವಿಡೀ ಒಬ್ಬನೇ ಮನೆಯಲ್ಲಿ ರಾಮಕೋಟಿ ಬರೆಯುತ್ತಾ ಕುಳಿತುಕೊಳ್ಳುವ ಮುದುಕಿಯ ಗಂಡನ ತಿಥಿ ಅಂದು. ದಿನವನ್ನು ‘ನಮ್ಮವರಿದ್ದಿದ್ದರೆ ಹೇಗಿರುತ್ತಿತ್ತೋ!?’ ಎಂದು ಕನಸು ಕಾಣುತ್ತಾ ತಳ್ಳುವುದು ಬಿಟ್ಟರೆ ಅವಳಿಗೆ ಈಗ ಜೀವನದಲ್ಲಿ ಬೇರೇನೂ ಇಲ್ಲ.ತಿಥಿಯ ನಿಮಿತ್ತ ಹೆತ್ತ ಮಕ್ಕಳು ದೂರದ ಊರುಗಳಿಂದ ಮನೆಗೆ ಬರುತ್ತಿದ್ದಾರೆ.ಮಕ್ಕಳು -ಮೊಮ್ಮಕ್ಕಳು ಹಾಗೂ ಸೊಸೆಯಂದಿರು,ಎಲ್ಲರನ್ನೂ ನೋಡುವ ತವಕ ಆ ಮುದುಕಿಗೆ. ಅವಳಿಗೆ ಇದಕ್ಕಿಂತ ಇನ್ನೇನಿದೆ ಸುಖ!? ಅದಕ್ಕಾಗಿಯೇ ಹಿಂದಿನ ದಿನ ರಾತ್ರಿ ಅವಳಿಗೆ ನಿದಿರೆಯೇ ಬಂದಿಲ್ಲ. ಬೆಳಿಗ್ಗೆ ಬೇಗ ಎದ್ದು ನೀರು ತೆಗೆದುಕೊಂಡು ಬರುತ್ತಿದ್ದಾಳೆ. ಮನೆಯನ್ನೆಲ್ಲ ಸ್ವಚ್ಛಗೊಳಿಸಿ,ಸ್ನಾನ ಮಾಡಿ,ದೇವರ ಪೂಜೆಯನ್ನೂ ಮಾಡಿ,ಮನೆಯ ಕಟ್ಟೆಯ ಮೇಲೆ ಮಕ್ಕಳಿಗಾಗಿ ಕಾಯುತ್ತಾ ಕುಳಿತುಕೊಳ್ಳುತ್ತಾಳೆ.

ಹದಿನಾರು ತುಂಬುತ್ತಿದ್ದಂತೆಯೇ ಆ ಅಜ್ಜಿಗೆ ಗಂಡನ ಮನೆಗೆ ಸಾಗಹಾಕಿದರಂತೆ. ಒಟ್ಟೂ ೬ ಮಕ್ಕಳನ್ನು ಅವಳು ಹಡೆದಳು,ಅದು ಹೇಗೋ ಕೊನೆಯ ಎರಡು ಹೆಣ್ಣುಮಕ್ಕಳು ಹುಟ್ಟಿದ ಮೊದಲ ವಾರದಲ್ಲೇ ತೀರಿಹೋದವು. ಉಳಿದ ನಾಲ್ಕರಲ್ಲಿ ಮೂರು ಗಂಡು ಹಾಗೂ ಒಂದು ಹೆಣ್ಣು ಮಗು. ಅತ್ತೆ ಮಾವನ ಕಾಲು ಹಿಡಿದು ತೋಟದ ಕೆಲಸಕ್ಕೆ ಮಕ್ಕಳನ್ನು ನೂಕದೆ,ಅವರೆಷ್ಟು ಓದಬೇಕೆಂದಿದ್ದರೋ ಅಷ್ಟು ಓದಿಸಲು ಗಂಡನ ಮನವೊಲಿಸಿದಳು ಅವಳು. ಈಗ ಮೂರೂ ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿ ‘ದೊಡ್ಡ ವ್ಯಕ್ತಿ’ಗಳಾಗಿದ್ದಾರೆ. ಒಬ್ಬಳು ಮಗಳನ್ನು ಅಲ್ಲೇ ಕೊಂಚ ದೂರದ ಗೋಕರ್ಣಕ್ಕೆ ಕೊಡಲಾಗಿದೆ. ಮಕ್ಕಳ ಮದುವೆಯಾಗುತ್ತಿದ್ದಂತೆಯೇ ಮುದುಕಿಯ ಗಂಡ ಕೂಡ ತೀರಿಹೋದ,ಆವಾಗಿನಿಂದ ಮುದುಕಜ್ಜಿ ಆ ಮನೆಯಲ್ಲಿ ಏಕಾಂಗಿ. ಅವಳ ಮಾತಿಗೆ ಪ್ರತಿಧ್ವನಿಯೇ ಪ್ರತ್ಯುತ್ತರ;ನಿಟ್ಟುಸಿರೇ ಜತೆಗಾರ..!

ಸೂರ್ಯ ನೆತ್ತಿಯ ಮೇಲೆ ಬರುವವೇಳೆಗೆ, ಒಂದರ ಹಿಂದೊಂದು ಕಾರುಗಳು ಮನೆಯ ಮುಂದೆ ಬಂದೆರಗಿದವು.ಇದ್ದದ್ದು ಒಂದೇ ಊರಿನಲ್ಲಾದರೂ ಅಣ್ಣ ತಮ್ಮಂದಿರು ಒಬ್ಬರನ್ನೊಬ್ಬರು ನೋಡುತ್ತಿರುವುದು ವರುಷದ ಬಳಿಕವೇ! ಅಪರಿಚಿತರಂತೆ ಮುಗುಳ್ನಗೆಗಳು ವಹಿವಾಟಾದವು. ರಂಗುಬಿರಂಗಿ ಬಟ್ಟೆಗಳನ್ನು ಧರಿಸಿದ್ದ ಸೊಸೆಯಂದಿರ ಮೈಮೇಲಿನ ಬಂಗಾರವನ್ನು ಪ್ರತಿಫಲಿಸಲೆಂದೇ ಆ ದಿನ ಸೂರ್ಯ ಇನ್ನಷ್ಟು ಪ್ರಖರವಾಗಿದ್ದನೇನೊ ಎಂದೆನಿಸುತ್ತಿತ್ತು. ಮೊಮ್ಮಕ್ಕಳೋ ಅಜ್ಜಿಗೆ ಅರ್ಥವಾಗದ ಅದ್ಯಾವುದೋ ಭಾಷೆಯಲ್ಲಿ ವ್ಯವಹರಿಸುತ್ತಿದ್ದರು. ಮಗಳೊಬ್ಬಳ ಮನೆಯಲ್ಲಿ ಆಕಳೊಂದು ಕರುವಿಗೆ ಜನ್ಮವಿತ್ತುದರಿಂದ ಅವಳಿಗೆ ತಿಥಿಗೆ ಬರಲಾಗುವುದಿಲ್ಲವೆಂಬ ಸುದ್ದಿಯನ್ನು ಮಕ್ಕಳು ಅವರೊಡನೆ ತಂದರು. ಮುದುಕಿಗೆ ಮಕ್ಕಳ ಅಪರೂಪದ ಮುಖಗಳನ್ನು ನೋಡಿದ ಕೂಡಲೇ ಕಣ್ಣಾಲಿಗಳು ಒದ್ದೆಯಾದವು. ಎಷ್ಟೇ ಆದರೂ ಹೆತ್ತ ಕರುಳಲ್ಲವೇ?!ಮತ್ತೆ ಮುದುಕಿಗೆ ಒಂಟಿಮನೆ ಚಿಗುರೊಡೆದಂತೆ ಭಾಸವಾಯಿತು..!ಮಕ್ಕಳು ಮುದುಕಿಯನ್ನು ನೋಡಿ ಕಾಲಿಗೆ ಬಿದ್ದ ಬಳಿಕ ವಿಶ್ರಮಿಸಿ ತಿಥಿಗೆ ಭಟ್ಟರನ್ನೂ ಹಾಗೂ ಜನರನ್ನೂ ಕರೆಯಲು ಹೊರಟು ನಿಂತರು.ಈ ದಿನ ಮುದುಕಿಗೆ ತನ್ನ ಹರೆಯ ಮರುಕಳಿಸದಂಥ ಭಾವ!ಮನೆಯಿಡಿ ಚಿಂಗಾರಿಯಂತೆ ಓಡಾಡಿಕೊಂಡಿದ್ದಾಳೆ ಮುದುಕಿ.

“ಮೀಟ್ ಯುವರ್ ನ್ಯೂ ಫ್ರೆಂಡ್ಸ್”,ಅಣ್ಣ ರಾಮನ ಮಗಳು ಹಾಗೂ ತಮ್ಮ ಮಂಜುನಾಥನ ಮಗನನ್ನು ತೋರಿಸಿ ಶಿವ ತನ್ನ ಮಗನಿಗೆ ಹೇಳಿದ. ಆ ಚಿಕ್ಕ ಮಕ್ಕಳು ಪಿಳಿಪಿಳಿಗುಟ್ಟುವ ಕಣ್ಗಳೊಂದಿಗೆ ಎಲ್ಲವನ್ನೂ ಗಮನಿಸುತ್ತಿದ್ದವು. ಮುದುಕಿ ರಾಮನ ಮಗಳನ್ನು ಎತ್ತಿಕೊಂಡು,” ನೀ ಎಲ್ಲಿ ಬಂದಿದ್ದೀಯಾ ಹೇಳು ಪುಟ್ಟ!?” ಎಂದು ಕೇಳಿದೊಡನೆಯೇ ರಾಮನ ಮಗಳು ಜೋರಾಗಿ ಅಳು ಶುರುವಿಟ್ಟುಕೊಂಡಳು.”ಹೋಯ್,ಅದು ನಿನ್ನೆಯ ಪೇಪರ್ರು” ಎಂದು ಶಿವ ಹೇಳುತ್ತಲೇ ಪೇಪರ್ರನ್ನು ತಿಂದು ಬಿಡುವಂತೆ ಓದುತ್ತಿದ್ದ ಮಂಜನಿಗೆ ಪೇಪರ್ರಿನ‌‌ ಮೇಲಿನ ಆಸಕ್ತಿಯೆಲ್ಲಾ ನೀರುಪಾಲಾಯ್ತು. ಇನ್ನು ಸೊಸೆಯಂದಿರೋ ತಮ್ಮ ತಮ್ಮ ಮಕ್ಕಳಿಗೆ ಮೊದಲು ಸ್ನಾನ ಮಾಡಿಸಬೇಕೆಂದು ಬಚ್ಚಲ ಮುಂದೆ ಪೈಪೋಟಿ ಶುರುಮಾಡಿಕೊಂಡರು.ಭಟ್ಟರು ಬಂದರು,ಮಂತ್ರ ಉಸುರಿದರು!ಮಕ್ಕಳು ಹಾಜರಾದರು. ಜನಿವಾರವನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಮಾಡಿಕೊಳ್ಳುವುದರಲ್ಲಿ ಅವರು ಬಿಜಿಯಾದರು. ಅಡುಗೆ ಮಾಡಲು ಬರದ ಸೊಸೆಯಂದಿರು ಅಡುಗೆಯವರು ಮಾಡಿದುದನ್ನು ಬಡಿಸುವ ಪುಣ್ಯ ಪಡೆದುಕೊಂಡರು. ಭಟ್ಟರೂ ಸೇರಿದಂತೆ ಜನರೂ ತಿಥಿ ಊಟ ಸೇವಿಸಿ ನಿರ್ಗಮಿಸಿದರು. ಮನೆಯವರೆಲ್ಲ ಉಂಡು ಮಲಗಿದರು.ಇವೆಲ್ಲದರ ಮಧ್ಯೆ ಮುದುಕಿಯ ಗಂಡನ ಸಣ್ಣ ನೆನಪೂ ಸಹ ಯಾರನ್ನೂ ಕಾಡಲಿಲ್ಲ. ಸಂಜೆ ಹೊರಗೆ ಸೂರ್ಯ ತಣ್ಣಗಾಗುತ್ತಲೇ ಮನೆಯೊಳಗಣ ಪರಿಸ್ಥಿತಿ ಕಾವೇರಿತು.

ಮನೆಮಂದಿಯೆಲ್ಲರೂ ಒಟ್ಟಾಗಿ ಕುಳಿತರು. ಅದು ಇದು ಎಂದು ಮಾತನಾಡಿ ಆಡಿ ಕೊನೆಗೂ ಮಕ್ಕಳು ಬೇಸತ್ತರು. ಅವರು ನಿಜವಾಗಿಯೂ ಏಕೆ ಇಷ್ಟು ಮನಸ್ಸಿನಿಂದ ಮನೆ ಕಡೆ ಮುಖ ಹಾಕಿದರು ಎಂದು ಮುದುಕಿಗೆ ಗೊತ್ತಾಗಲಿಲ್ಲ. ಅಲ್ಲಿ ಒಂದು ಮೂಲೆಯಿಂದ ಒಂದು ಧ್ವನಿ ಕೇಳಿಸಿತು.

“ಅತ್ತೆ, ನಿಮಗೆ ತುಂಬ ವಯಸ್ಸಾಗಿದೆ,ಈಗಲಾದರೂ ಸ್ವಲ್ಪ ಶ್ರಮ ಕಡಿಮೆ ಮಾಡಿಕೊಳ್ಳಿ..” ಮಂಜನ ಹೆಂಡತಿ ಸಣ್ಣಕೆ ಉಸುರಿದಳು.

” ಹೌದೌದು,ಇನ್ನೂ ಏನಿದೆ ಅಮ್ಮ,ಆರಾಮಾಗಿರು..ಬಂದುಬಿಡು ಬೆಂಗಳೂರಿಗೆ ಹೇಳ್ತೀನಿ ನಾನು” ಮಂಜ ದನಿಗೂಡಿಸಿದ.

“ಹಾಗಾದರೆ..ನೋಡು ಅಮ್ಮ,ಈ ಆಸ್ತಿಯನ್ನು ಈಗಲೇ ಪಾಲುಮಾಡಿದರೆ ಹೇಗೆ?” ರಾಮ ಹೇಳಿದ.

“ನಿಜ..ನಿಜ..ಆಮೇಲೆ ನಿನಗೇನಾದರೂ ಹೆಚ್ಚು ಕಡಿಮೆ ಆದರೆ ಸುಮ್ಮನೆ ಅದು ಇದು ತಗಾದೆ ಎಲ್ಲಾ ಏಕೆ?!ಇಲ್ಲಿರುವ ಆಸ್ತಿಯನ್ನೆಲ್ಲ ಪಾಲುಮಾಡಿಕೊಂಡು ಬಿಡೋಣ. ಆಮೇಲೆ ನೀನು ನಮ್ಮೊಡನೆ ಆರಾಮಾಗಿ ಇರಬಹುದು”ಮಂಜ ಹೇಳಿದ.

” ನೋಡಪ್ಪ..ಆಸ್ತಿ ಎಲ್ಲಾ ಒಂದು ವಿಷಯವ..ಇಂದಲ್ಲ ನಾಳೆ ಎಲ್ಲಾರೂ ಸಾಯೋದೆ ಅಲ್ಲವಾ” ಮುದುಕಿ ಹೇಳಿದಳು.

“ಅಮ್ಮ, ಒಂದು ವಿಷಯ ಹೇಳಲಾ?ಈ ಜಗತ್ತಿನಲ್ಲಿ ಇರೋರೆಲ್ಲರೂ ನಾವು ಶಾಶ್ವತವಾಗಿ ಬದುಕ್ತೀವಿ ಅಂತ ಅಂದ್ಕೊಂಡಿರ್ಲಿಲ್ಲ ಅಂದಿದ್ರೆ,ಈ ಜಗತ್ತಲ್ಲಿ ಮನುಷ್ಯ ಜಾತಿನೇ ಇರ್ತಿರ್ಲಿಲ್ಲ” ಶಿವ ಹೀಗೆ ಹೇಳಿದ ಮೇಲೆ ಮುದುಕಿಗೆ ತಮ್ಮ ಮಕ್ಕಳ ಇಚ್ಛೆಯ ಬಗ್ಗೆ ಕಲ್ಪನೆ ಮೂಡತೊಡಗಿತು.ಮುದುಕಿಗೇನಿದೆ? ಸಂತೋಷವೇ..!ಏನಿದ್ದರೂ ಇವೆಲ್ಲ ಮಕ್ಕಳುಂಡು ತೇಗಲು ತಾನೇ ಮಾಡಿದ್ದು?ಮುದುಕಿ ಸಂತೋಷವಾಗಿ ಹೂಗುಟ್ಟಿದಳು. ತಾನು ಈಗಲಾದರೂ ನೆಮ್ಮದಿಯಿಂದ ಶಿವನ ಪಾದ ಸೇರಬಹುದು,ಕೊನೆಯ ಕರ್ತವ್ಯವೊಂದನ್ನು ಮರೆತೆ ಬಿಟ್ಟಿದ್ದೆನಲ್ಲ ಎಂದುಕೊಂಡಳು ಮುದುಕಿ. ಅತ್ತ ಮನೆ,ತೋಟ,ಗದ್ದೆಯ ವಿಚಾರ ಬರುತ್ತಲೇ ಜಗಳ ಮೊದಲಿಟ್ಟಿತು.

“ಛೇ!ಛೇ!ಬರಿ ಕಲ್ಲು ಬೆಳೆಯುವ ಆ ಮೂಲೆಯ ಜಾಗವಿಟ್ಟುಕೊಂಡು ನಾನೇನು ಮಾಡಲಿ?”ರಾಮ ಗುಡುಗಿದ.

“ಏಯ್,ನಿಂಗಾದ್ರೆ ಮೂರು ಸಾಗವಾನಿ ಗಿಡ ಬರುತ್ತೆ,ನಾನೀ ಕಾಂಗ್ರೆಸ್ ಗಿಡಗಳನ್ನ ಕಿತ್ಕೊಂಡು ಮನೆ ಮುಂದೆ ನೆಟ್ಕೊಳ್ಲಾ?”ಮಂಜನೂ ಸುಮ್ಮನೆ ಉಳಿಯಲಿಲ್ಲ. ಇದನ್ನೆಲ್ಲ ನೋಡಿಕೊಂಡು ಸುಮ್ಮನಿದ್ದ ಶಿವನ ಕಂಡು ಅವನ ಹೆಂಡತಿ ಅವನ ಬೆನ್ನು ಚಿವುಟಿದಳು.” ಲೇ,ಅಮ್ಮ ಆರಾಮಿಲ್ದೆ ಬಿದ್ದಾಗ ಇದ್ದಿದ್ದು ನಮ್ಮನೇಲೆ,ಅವಳ ಎಲ್ಲಾ ಚಾಕ್ರಿನೂ ನನ್ ಹೆಂಡತಿನೇ ಮಾಡಿದ್ದು.ಈಗ ಆಸ್ತಿ ಪಾಲಲ್ಲಿ ಮಾತ್ರ ನಂಗೆ ಧಿಮಾಕು ತೋರಿಸ್ತೀರಾ?”ಶಿವ ತಾನು ತಾಯಿಗೆ ತೋರಿಸಿದ ಪ್ರೀತಿಯನ್ನೂ ಆಸ್ತಿಗಾಗಿ ಅಡವಿಟ್ಟ. ಹೀಗೆಯೇ ಜಗಳ ಮುಂದುವರೆಯಿತು. ಈ ಎಲ್ಲವನ್ನೂ ನೋಡಿಕೊಂಡು ಮುದುಕಿ ಕಣ್ಣೀರಿಟ್ಟಳು. ಅಜ್ಜಿಗೆ ತಾನು ಒಬ್ಬಳೇ ತನಗಿಷ್ಟವಾದ ಮನೆಯಲ್ಲಿ ತನ್ನವರ ನೆನಪಿನಲ್ಲಿ ಬದುಕುವುದೇ ಮೇಲು ಎನ್ನಿಸತೊಡಗಿತು. ತಾನು ಹೆತ್ತ ಮಕ್ಕಳು ಹೀಗೆ ಕಚ್ಚಾಡುತ್ತಿರುವದನ್ನೂ ಪಕ್ಕದಲ್ಲೇ ಬಿದ್ದಿದ್ದ ರಾಮಕೋಟಿಯ ಪುಸ್ತಕವನ್ನೂ ಕಂಡಳು. ಬಹುಶಃ ಆಗಲೇ ಅವಳು ತನಗೆ ಮುಂದೆ ದಿಕ್ಕು ಯಾರೆಂದು ಕಂಡುಕೊಂಡಿದ್ದಿರಬೇಕು.

ಅತ್ತ ಅಜ್ಜಿಯ ಮೊಮ್ಮಕ್ಕಳೆಲ್ಲರೂ ‘ಆಡಿಕೋ ಹೋಗಿ’ ಎಂದು ಹೊರದಬ್ಬಲ್ಲಪಟ್ಟಿದ್ದರು. ಅವರೆಲ್ಲರೂ ಜೊತೆಯಲ್ಲಿ ಸರಿಯಾಗಿ ಬೆರೆತು,ಹೊಸದಾಗಿ ಕಂಡಂಥ ಹಳ್ಳಿಯ ಸೊಗಡನ್ನು ಬೆರಗುಗಣ್ಣಿಂದ ಕಂಡರು. ಅಲ್ಲಿಯೇ ಒಂದು ಬಣ್ಣದ ಚಿಟ್ಟೆಯೊಂದು ಹಾರುತ್ತಾ ಬಂತು. ಅದರ ಸ್ವಚ್ಛಂದವಾದ ಹಾರಾಟ ಮಕ್ಕಳ ಕಣ್ಕುಕ್ಕಿತು. ಮಕ್ಕಳು ದೊಡ್ಡವರಿಗಿಂತ ಹೆಚ್ಚು ಪ್ರೌಢಿಮೆ ಹೊಂದಿದ್ದರೋ ಏನೋ! ಇವರು ಇಷ್ಟವಾದ ಚಿಟ್ಟೆಯನ್ನು ಹಿಡಿಯಲು ಪ್ರಯತ್ನಿಸದೆ ಅದರ ಹಾರಾಟವನ್ನು ಆಸ್ವಾದಿಸಿದರು. ಅದು ಹಾರಿದಲ್ಲೆಲ್ಲ ಇವರು ಹಿಂಬಾಲಿಸಿದರು. ಕೊನೆಗೆ ಎಲ್ಲೂ ನೋಡಿರದಂಥ ಸುಂದರವಾದ ಹೂದೋಟವೊಂದನ್ನು ತಲುಪಿದರು;ನಲಿದರು.ಹೊಸದಾದ ಅನುಭವದೊಂದಿಗೆ‌‌ ಮನೆಗೆ ಮರಳಿದರು.

ಕೊಂಚ ಸಮಯದಲ್ಲೇ ಇತ್ತ ಅಜ್ಜಿಯ ಮಕ್ಕಳು ಹೊರಟು ನಿಂತರು. ಎಲ್ಲರೂ ತಮ್ಮ ತಮ್ಮ ಮಕ್ಕಳನ್ನು ಕಾರಿನೊಳಗೆ ತುರುಕಿಕೊಂಡರು. ಎಲ್ಲರ ಮುಖದಲ್ಲೂ ಅಸಮಾಧಾನ,ಯಾರೊಬ್ಬರೂ ಇನ್ನೊಬ್ಬರ ಕಣ್ಣನ್ನು ನೋಡುತ್ತಾ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಅಜ್ಜಿಯು ಅವರನ್ನು ಹಿಂಬಾಲಿಸುತ್ತಿದ್ದಂತೆಯೆ ಅವರ ಗಾಡಿಗಳು ಒಂದರ ಹಿಂದೆ ಒಂದರಂತೆ ಧೂಳೆಬ್ಬಿಸಿಕೊಂಡು ರಭಸದಿಂದ ಮುನ್ನುಗಿದವು. ಮಕ್ಕಳು ಕಿಟಕಿಯಿಂದ ಮುಖವನ್ನು ಹೊರಚಾಚಿ ಹಿಂತಿರುಗಿ ನೋಡುತ್ತಿದ್ದಂತೆ ಅಜ್ಜಿ ದೂರವಾಗುತ್ತ ಹೋದಳು. ಇತ್ತ ಅಜ್ಜಿ ಅಲ್ಲೇ ನಿಂತುಕೊಂಡು ಮೌನವಾದಳು. ಇನ್ನು ಅಜ್ಜಿಯ ಪಾಲಿಗೆ ಅದೇ ಏಕಾಂತ. ಆದರೆ ಈ ಬಾರಿ ಇದರಲ್ಲಿಯೇ ಏನೋ ಒಂದು ರೀತಿಯ ನೆಮ್ಮದಿ ಸಿಕ್ಕಂಥ ಅನುಭವ ಆ ಮುದುಕಿಗೆ. ಸೀದಾ ಮನೆಯ ಕಟ್ಟೆಯ ಮೇಲೆ ಕುಳಿತುಕೊಂಡು ರಾಮಕೋಟಿಯ ಪುಸ್ತಕವನ್ನು ಕೈಗೆತ್ತಿಕೊಳ್ಳುತ್ತಾಳೆ. ಬಣ್ಣಗಳ ಕಾಣಲು ಕಣ್ತೆರೆಯುತ್ತಾಳೆ.

 

ಚಿತ್ರಕೃಪೆ: Orko Sarkar(internet)

-ಪ್ರಸಾದ ಸಿದ್ಧೇಶ್ವರ

prasadsiddheshwar@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!