ಅಂಕಣ

ನಮ್ಮೊಳಗಿನ ಅತ್ಯಾಧುನಿಕ – ವಸುಧೇಂದ್ರರ ‘ಮೋಹನಸ್ವಾಮಿ’

 ‘ಮೋಹನಸ್ವಾಮಿ’   – (ಕತೆಗಳು)

 ಲೇಖಕರು: ವಸುಧೇಂದ್ರ

 ಪ್ರಕಾಶಕರು: ಛಂದ ಪುಸ್ತಕ, ಐ-004, ಮಂತ್ರಿ ಪ್ಯಾರಾಡೈಸ್, ಬನ್ನೇರುಘಟ್ಟ ರಸ್ತೆ, ಬೆಂಗಳೂರು-76,

 ಪ್ರಕಟಣೆಯ ವರ್ಷ: 2013, ಪುಟಗಳು: 272, ಬೆಲೆ:ರೂ.180-00

ಕನ್ನಡದ ಶ್ರೇಷ್ಠ ಕತೆಗಾರರಲ್ಲಿ ಒಬ್ಬರಾದ ವಸುಧೇಂದ್ರರ ಕಥಾಸಂಕಲನ ‘ಮೋಹನಸ್ವಾಮಿ’ 2013ರಲ್ಲಿಯೇ ಬಂದಿದೆ. ಇದರಲ್ಲಿ ಹನ್ನೊಂದು ಕತೆಗಳಿವೆ. ವಸುಧೇಂದ್ರರ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಕನ್ನಡದಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿದ ಪ್ರಬಂಧಕೃತಿ. ಇದಲ್ಲದೆ ಇವರ ‘ಮನೀಷೆ’, ‘ಯುಗಾದಿ’, ಚೇಳು’, ಮತ್ತು ‘ಹಂಪಿ ಎಕ್ಸ್‍ಪ್ರೆಸ್’ ಕಥಾಸಂಕಲನಗಳು ಕೂಡ ಪ್ರಸಿದ್ಧ ಕೃತಿಗಳೇ. ಇವುಗಳಲ್ಲಿ ಒಂದೊಂದೂ ಕನ್ನಡ ಕಥಾಸಾಹಿತ್ಯದಲ್ಲಿ ಒಂದೊಂದು ಮೈಲಿಗಲ್ಲು. ಸುಮಂಗಲಾ, ನಾಗರಾಜ ವಸ್ತಾರೆ, ಎಂ.ಎಸ್.ಶ್ರೀರಾಮ, ಅಮರೇಶ ನುಗಡೋಣಿ, ಕಣಾದ ರಾಘವ, ಶ್ರೀಧರ ಬಳಗಾರ, ಜೋಗಿ, ಕೆ.ಸತ್ಯನಾರಾಯಣ, ಗುರುಪ್ರಸಾದ ಕಾಗಿನೆಲೆ, ಮೊಗಳ್ಳಿ ಗಣೇಶ, ವಿವೇಕ ಶಾನಭಾಗ, ಜಯಂತ -ಈ ಯಾವ ಕತೆಗಾರರ ಜೊತೆಗೂ ಹೋಲಿಕೆಗೆ ನಿಲ್ಲಿಸಲಾಗದ ವಸುಧೇಂದ್ರ ಕನ್ನಡದಲ್ಲಿ ಕಥನಕಲೆಯ ಹೊಸ ಸಾಧ್ಯತೆಗಳ ಹುಡುಕಾಟದಲ್ಲಿರುವ ಅತ್ಯಾಧುನಿಕರು.

ಇವರನ್ನು ಅತ್ಯಾಧುನಿಕರೆಂದು ನಾನು ಕರೆಯುವಲ್ಲಿ ಯಾವುದೇ ವ್ಯಂಗ್ಯವಿಲ್ಲ. ಸಾಫ್ಟವೇರ್ ಎಂಜಿನಿಯರ್ ಆಗಿದ್ದ ವಸುಧೇಂದ್ರ  ತನ್ನ ಉದ್ಯೋಗಕ್ಕೆ ವಿದಾಯ ಹೇಳಿ ಸಾಹಿತ್ಯಕ್ಷೇತ್ರದಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ, ಕನ್ನಡದ ಕಥನಕಲೆಯನ್ನು ಅದರ ಸಾಂಪ್ರದಾಯಿಕ ನೆಲೆಯಲ್ಲಿಯೇ ಗಟ್ಟಿಗೊಳಿಸುವ ಧೈರ್ಯ ತೋರುತ್ತಿದ್ದಾರೆ. ಇವರು ಕಥಾವಸ್ತುವಿನ ಆಯ್ಕೆಯಲ್ಲಿ ಹೊಸತನವಿದೆ. ಪೂರಾ ನಿರ್ಲಕ್ಷಿತ ಹಾಗೂ ಬಹಿಷ್ಕಾರವಾದಂತಿದ್ದ ಕಥಾವಸ್ತು ಇತ್ತೀಚೆಗೆ ಇವರ ಆಯ್ಕೆಯಾಗಿದೆ. ‘ಮೋಹನಸ್ವಾಮಿ’ಯಲ್ಲಿರುವ ಮೊದಲ ಆರು ಕತೆಗಳನ್ನೇ ನೋಡಿ.  ‘ತುತ್ತತುದಿಯಲಿ ಮೊತ್ತಮೊದಲು’, ಕಗ್ಗಂಟು’, ‘ಕಾಶೀವೀರರು’, ‘ತಗಣಿ’- ಈ ಕತೆಗಳಲ್ಲಿ ‘ಗೇ’ ( ‘ಸಲಿಂಗಕಾಮಿ’ ಎನ್ನುವ ಅರ್ಥವೇ ಇದಕ್ಕೆ?) ಎಂದು ಗುರುತಿಸಬಹುದಾದ ಓರ್ವ ವ್ಯಕ್ತಿಯ ಮನೋರಂಗದ ಚಿತ್ರಣವಿದೆ. ಈ ವಸ್ತು ಕನ್ನಡಸಾಹಿತ್ಯದಲ್ಲಿ ಮೊಟ್ಟಮೊದಲು ಕಾಣಿಸಿಕೊಂಡದ್ದು ಇಲ್ಲಿ ಎಂದು ಹೇಳಬಲ್ಲೆನಾದರೂ ಇದು ನನ್ನ ಓದಿನ ಮಿತಿಯಲ್ಲಿ ಹೇಳಿದ್ದಷ್ಟೆ. ಆದರೆ ಈ ಬಗೆಯ ವ್ಯಕ್ತಿಗಳಿಗೆ ಸಾಮಾಜಿಕವಾಗಿ ಮಾನ್ಯತೆಯನ್ನು ತಂದುಕೊಡುವ ಉದ್ದೇಶ ವಸುಧೇಂದ್ರರದ್ದಲ್ಲ. ಇಂತಹ ವ್ಯಕ್ತಿಗಳ ನೋವು, ಅನಾಥಪ್ರಜ್ಞೆ, ಸಾಮಾಜಿಕ ವ್ಯವಹಾರಗಳಲ್ಲಿಯ ಹಿಂಜರಿತ ಮುಂತಾದವನ್ನು ಚಿತ್ರಿಸುತ್ತಲೇ ಕತೆಗಾರ ಇಂಥ ವ್ಯಕ್ತಿಗಳ ಮನೋಭೂಮಿಕೆಯನ್ನು ಸಹಾನುಭೂತಿಯಿಂದ ತಿಳಿಯುವ ಹೃದಯವೈಶಾಲ್ಯವನ್ನು ಓದುಗರಿಂದ ನಿರೀಕ್ಷಿಸುತ್ತಾರೆ. ಈ ಸಂಕಲನದ ‘ಕಿಲಿಮಂಜಾರೋ’ ಮತ್ತು ‘ಒಲ್ಲದ ತಾಂಬೂಲ’ಗಳಲ್ಲಿಯೂ ಇದೇ ಹಿನ್ನೆಲೆಯ ಕಥಾನಾಯಕರ ಚಿತ್ರಣಗಳಿದ್ದಾವೆ. ಈ ತನಕ ಸಾಹಿತ್ಯದಲ್ಲಿ ಬಹಿಷ್ಕಾರಕ್ಕೆ ಒಳಗಾದಂತಿದ್ದ ಈ ಕಥಾವಸ್ತು ವಸುಧೇಂದ್ರರಿಂದಾಗಿ ಓದುಗರ ಮಡಿವಂತಿಕೆಯನ್ನು ಮುರಿದು ಮುನ್ನೆಲೆಗೆ ಬರುತ್ತಿದೆ.

ಇತ್ತೀಚಿನ ಕತೆಗಾರರ ಕೈಯ್ಯಲ್ಲಿ ಪರಿಪೂರ್ಣವಾಗಿ ನಿರ್ಲಕ್ಷಿತವಾದ ಗುಂಪೆಂದರೆ ಬ್ರಾಹ್ಮಣ ಸಮುದಾಯ. ಆದರೆ ವಸುಧೇಂದ್ರರ ಈ ಕತೆಗಳಲ್ಲಿ ಈ ಸಮುದಾಯದ ಯಥಾವತ್ ಚಿತ್ರಣ ಕೊಡುವ ದಿಟ್ಟತನವಿದೆ. ಈ ದಿಟ್ಟತನದ ಹಿಂದೆ  ಬ್ರಾಹ್ಮಣ ಸಮುದಾಯವನ್ನು ಬೆಂಬಲಿಸುವ ಯಾವುದೇ ಅಜೆಂಡಾ ಇಲ್ಲ. ಈ ಸಮುದಾಯದಲ್ಲಿ ಕೂಡ ಮಾನವಜನಾಂಗದ ತಿಳಿವಳಿಕೆಗೆ ಅಗತ್ಯವಾದ ಕಥಾವಸ್ತುವಿದೆಯೇ  ಎಂದು ಶೋಧಿಸಿ ನೋಡುವ ಕುತೂಹಲ ಇಲ್ಲಿದೆ. ಈ ಸಂಕಲನದ ‘ಇವತ್ತು ಬೇರೆ’ ಮತ್ತು ‘ಭಗವಂತ, ಭಕ್ತ ಮತ್ತು ರಕ್ತ’ ಕತೆಗಳಲ್ಲಿ  ಇದನ್ನು ಗಮನಿಸಬಹುದಾಗಿದೆ. ವಸುಧೇಂದ್ರರ  ‘ಯುಗಾದಿ’ ಸಂಕಲನದ ಕೆಲವು ಕತೆಗಳಲ್ಲಿ  ಹಾಗೂ ‘ಹರಿಚಿತ್ತ ಸತ್ಯ’ ಕಾದಂಬರಿಯಲ್ಲಿ ಕೂಡ ಇದೇ ಸಾಮಾಜಿಕ ಚಿತ್ರಣವಿದೆ. ಈ ಸಮುದಾಯದ ಬದುಕಿನಲ್ಲಿಯೂ ಮನುಷ್ಯರೆಲ್ಲರಿಗೆ ಬರಬಹುದಾದ   ಕಷ್ಟ-ಕಾರ್ಪಣ್ಯಗಳಿವೆ ಹಾಗೂ ಜೀವನಾನುಭವಗಳಿವೆ ಎನ್ನುವುದನ್ನು ಲೇಖಕ ತೋರಿಸಿಕೊಡುವಂತಿದೆ. ಆದರೆ, ವಸುಧೇಂದ್ರರ ಆದ್ಯತೆ ಇರುವುದು ಮಾನವೀಯತೆಯ ಶೋಧನೆಗೆ. ಈ ಸಂಕಲನದ ‘ದುರ್ಭಿಕ್ಷ ಕಾಲ’, ‘ಪೂರ್ಣಾಹುತಿ’, ‘ದ್ರೌಪದಮ್ಮನ ಕಥಿ’, ‘ಇವತ್ತು ಬೇರೆ’-ಕತೆಗಳು ಮನುಷ್ಯನ ಅಂತಃಕರಣವನ್ನು ಬಡಿದೆಬ್ಬಿಸುವ ಕತೆಗಳು. ‘ದುರ್ಭಿಕ್ಷ ಕಾಲ’ ಸಾಫ್ಟ್‍ವೇರ್ ಕಂಪನಿಗಳಲ್ಲಿಯೂ ಮಿಡಿಯುವ ಮಾನವೀಯತೆಯ ಕತೆ. ಹೀಗೆ ನಿರ್ಲಕ್ಷಿತವಾದ ಕಥಾವಸ್ತುವನ್ನು ಕೈಗೆತ್ತಿಕೊಳ್ಳುವ ಲೇಖಕ ತಾನು ಈ ಕಾಲಕ್ಕಾಗಿ ಮಾತ್ರ ಬರೆಯಬೇಕಾಗಿದೆ ಎಂದು ತಿಳಿದವನಲ್ಲ. ಸದ್ಯಕ್ಕೆ ಮಾತ್ರ ಒದಗಿದರೆ ಸಾಕೆಂದು ಬರೆಯುವ ಲೇಖಕ ಎಷ್ಟೇ ಉಜ್ವಲವಾಗಿ ಬರೆದರೂ ಅದೊಂದು ರಾಜಕೀಯ ಅಗತ್ಯದ ಬರವಣಿಗೆಯಾಗಿ ಕೊನೆಗೊಳ್ಳಬಹುದು. ಲೇಖಕ ತನ್ನ ಸಮುದಾಯಕ್ಕೆ ಸಾಕ್ಷಿಯಾಗಿ ಬರೆದಾಗ ಅಂತಹ ಕಥಾಸಾಹಿತ್ಯವೆಲ್ಲ ಸೇರಿ ಮುಂದೊಂದು ದಿನ ಚಾರಿತ್ರಿಕವಾದ ಪ್ರಮಾಣವಾಗಿಯೂ ನಿಲ್ಲಬಲ್ಲದು. ಹಾಗೂ, ಎಲ್ಲಾ ಸಮುದಾಯಗಳ ಸಾಂಸ್ಕøತಿಕ ಚಿತ್ರಣಗಳು ಒಂದೆಡೆಯಾಗಿ, ಆ ಸಮಾಜದ ಕಾಲಕಥನವನ್ನು ಮಾಡುವಂತಾದರೆ ಸಾಹಿತ್ಯದ ಉಪಯುಕ್ತತೆ ಇಮ್ಮಡಿಸುತ್ತದೆ.  ಇಪ್ಪತ್ತನೆಯ ಶತಮಾನದ ಉತ್ತರಾರ್ಧದಿಂದ ಬರೆಯತೊಡಗಿದ ಕನ್ನಡದ ಬರಹಗಾರರಲ್ಲಿ ಅನೇಕ ಜನ ಸಮಾನತೆಯ ಆಶಯವನ್ನು ಎತ್ತಿ ಹಿಡಿಯುವವರೇ. ಆದರೆ ಅವರು ಒಂದು ಸಮುದಾಯದ ವಕ್ತಾರರಂತೆ ಬರೆಯುತ್ತ ಅದರಲ್ಲಿಯೇ ತಮ್ಮ  ಕ್ಷೇಮವನ್ನು ಕಾಣುವವರು. ಇದಕ್ಕೆ ಅಪವಾದದಂತಿರುವ ವಸುಧೇಂದ್ರ ಎಲ್ಲ ಸಮುದಾಯಗಳಲ್ಲಿಯೂ ಕತೆಗಳಿರುತ್ತವೆ, ಜೀವನಾನುಭವಗಳಿವೆ, ಎಂದು ತೋರಿಸುತ್ತಾರೆ. ಆದ್ದರಿಂದ ವಸುಧೇಂದ್ರ ನಮ್ಮ ಬರಹಗಾರರ ನಡುವಿನ ಅತ್ಯಾಧುನಿಕ ಮನಸ್ಸು.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!