ಅಂಕಣ

“ದೊಡ್ಡಣ್ಣ”ನನ್ನೇ ನಡುಗಿಸಿತು ಆ ಮಹಾಯುದ್ಧ..

“ವಿಯೆಟ್ನಾಂ” ಏಷ್ಯಾ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಏಷ್ಯಾದ ಹಾಗೂ ಜಗತ್ತಿನ ಅನೇಕ ದೇಶಗಳ ಹಾಗೆ ಪರಕೀಯರ ದಾಳಿಗೆ ತುತ್ತಾದಂತಹ ದೇಶ. ಅಮೇರಿಕಾ ಹಾಗೂ ಕಮ್ಯುನಿಸ್ಟ್ ರಾಷ್ಟ್ರಗಳ ನಡುವೆ ನಡೆದ, ಇನ್ನೂ ನಡೆಯುತ್ತಿರುವ ಶೀತಲ ಸಮರಕ್ಕೆ ಬಲಿಪಶುವಾದ ಎಷ್ಟೋ ರಾಷ್ಟ್ರಗಳ ಪೈಕಿ ವಿಯೆಟ್ನಾಂ ಸಹ ಒಂದು. ಸುಮಾರು ೧೫೦ ವರ್ಷಗಳ ಕಾಲ “ಫ್ರಾನ್ಸ್” ನ ಕಪಿಮುಷ್ಠಿಯಲ್ಲಿ ಸಿಲುಕಿ ನಂತರ ಬಂದ ಅಮೇರಿಕಾದ ಜೊತೆ ಹೋರಾಡಿ ತನ್ನ ಸ್ವಾತಂತ್ರ ಪಡೆದುಕೊಂಡಿದ್ದು ಒಂದು ರೋಚಕ ಇತಿಹಾಸ .

ಸುಮಾರು ೧೮ನೇ ಶತಮಾನದ ಹೊತ್ತಿಗಾಗಲೇ ಯೂರೋಪಿನ ಬಹಳಷ್ಟು ದೇಶಗಳು, ಬಹುಸಂಪದ್ಭರಿತ ಏಷ್ಯಾದ ರಾಷ್ಟ್ರಗಳ ಜೊತೆಗೆ ತನ್ನ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಿದ್ದವು. ಫ್ರಾನ್ಸ್ ದೇಶವು, ವಿಯೆಟ್ನಾಂ , ಕಾಂಬೋಡಿಯಾ ಪ್ರದೇಶದಿಂದ ಅಕ್ಕಿ, ರಬ್ಬರ್ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುತ್ತಿತ್ತ್ತು. ಕ್ರಮೇಣ ಆ ದೇಶಗಳ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಂಡಿತು . ವಿಯೆಟ್ನಾಂ,ಕಾಂಬೋಡಿಯಾ ಮತ್ತು ಲಾವೋಸ್ ದೇಶಗಳನ್ನು ಜೊತೆಗೂಡಿಸಿ “ಇಂಡೋಚೀನ” ಎಂಬ ಕಾಲೋನಿಯನ್ನು ಸ್ಥಾಪಿಸಿತು. ಇವರ ವಸಾಹತುಶಾಹಿ ಪದ್ಧತಿಯಿಂದ ತಮ್ಮದೇ ಸ್ವಂತ ಜಾಗದಲ್ಲಿ ಪರಕೀಯರಿಗೆ ಕಂದಾಯವನ್ನು ಪಾವತಿಸಬೇಕಾದ ಪರಿಸ್ಥಿತಿ ಬಂತು ಇದರಿಂದ ಬಹಳಷ್ಟು ರೈತರು ತಮ್ಮ ಜಮೀನನ್ನು ಕಳೆದುಕೊಂಡರು. ವಿಯೆಟ್ನಾಂ ಜನ ಇದಕ್ಕೆ ದನಿ ಎತ್ತಿದರೂ ಸಹ ಕೇಳುವ ಕಿವಿ ಫ್ರಾನ್ಸ್ ಆಡಳಿತಗಾರರಿಗಿರಲಿಲ್ಲ.

“ಹುಳು ಹುಟ್ಟಿ ಸಾಯುತಿರೆ, ನೆಲ ಕರಗಿ ಸವೆಯುತಿರೆ, ಕಡಲೊಳೆತ್ತಲೋ ಹೊಸ ದ್ವೀಪವೇಳುವುದು ” ಎಂಬ ಕಗ್ಗದ ವಾಣಿಯಂತೆ, ದಾಸ್ಯದಲ್ಲಿ ಸಿಲುಕಿದ್ದ ವಿಯೆಟ್ನಾಂಗೆ ಆಶಾಕಿರಣದಂತೆ ಬಂದದ್ದು “ಹೋ ಚಿ ಮಿನ್”. ಕೇವಲ ೪ ಅಡಿ ೧೧ ಅಂಗುಲ ಸುಮಾರು ೪೫ ಕೆಜಿ ಅಷ್ಟು ತೂಕವಿದ್ದ ‘ಹೋ’ ಹುಟ್ಟಿದ್ದು ೧೮೯೦ರ ಮೇ ೧೯ರಂದು. ಹುಟ್ಟುತ್ತಲ್ಲೇ ತಾಯಿಯನ್ನು ಕಳೆದುಕೊಂಡ. ತಂದೆ ಫ್ರೆಂಚರ ಆಡಳಿತದಲ್ಲಿ ಮ್ಯಾಂಡರಿನ್ ( ಸ್ಥಳೀಯ ಅಧಿಕಾರಿ ) ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಸ್ಥಿತಿವಂತ ಕುಟುಂಬದಿಂದ ಬಂದಿದ್ದ “ಹೋ ಚಿ ಮಿನ್ ”ಗೆ “ನ್ಯಾಷನಲ್ ಅಕಾಡಮಿ” ಯಲ್ಲಿ ಓದಲು ಅವಕಾಶ ಸಿಕ್ಕಿತ್ತು . ೧೯೦೭ ಸುಮಾರಿಗೆ “ಹೋ” ೧೭ ವರ್ಷದವನಿರುವಾಗ ಒಂದು ರೈತ ಹೋರಾಟವನ್ನು ಗಮನಿಸಿ, ಅವರ ಹೋರಾಟದ ಆಶಯವನ್ನು ಫ್ರೆಂಚ್’ನಲ್ಲಿ ಬರೆದು ಸರ್ಕಾರಕ್ಕೆ ತಲುಪಿಸಿದ. ಆದರೆ ಉದ್ಧಟತನ ಮೆರೆದ ಫ್ರೆಂಚ್ ಅಧಿಕಾರಿಗಳು “ಹೋ” ನನ್ನು ಶಾಲೆಯಿಂದ ಕಿತ್ತೊಗೆದರು. ಆ ಸಮಯದಿ೦ದ “ಹೋ” ಗೆ ತನ್ನ ದೇಶಕ್ಕೆ ಸ್ವಾತಂತ್ರ್ಯ ಕೊಡಿಸಬೇಕು, ತನ್ನ ಜನರನ್ನು ದಾಸ್ಯಮುಕ್ತರನ್ನಾಗಿ ಮಾಡಬೇಕೆಂಬ ಹಂಬಲ ಹೆಚ್ಚಾಯಿತು.

ಸಮುದ್ರದ ಬದಿಯ ವ್ಯಾಪಾರಿಗಳ ಜೊತೆ ಸಂಪರ್ಕ ಬೆಳೆಸಿ ಹಡಗುಗಳಲ್ಲಿ ಅಡುಗೆ ಸಹಾಯಕನಾಗಿ ಕೆಲಸಕ್ಕೆ ಸೇರಿದ. ಇದರಿಂದ “ಹೋ” ಗೆ ಪ್ರಪಂಚದ ಮೂಲೆ ಮೂಲೆ ತಿರುಗುವ ಅಲ್ಲಿನ ಜನಜೀವನ ಗಮನಿಸುವ ಅವಕಾಶ ಸಿಕ್ಕಿತು. ಹೀಗೆ ಸುತ್ತುತ್ತಾ ೧೯೧೧ರ ಸುಮಾರಿಗೆ ಅಮೇರಿಕಾಗೆ ಬಂದು,. ಅಲ್ಲಿನ “ನ್ಯೂಯಾರ್ಕ್“ನ “ಚೀನಾ ಟೌನ್” ನಲ್ಲಿ ಕೆಲಸಕ್ಕೆ ಸೇರಿದ. ಅಲ್ಲಿ ಕೂಲಿ ಕಾರ್ಮಿಕನಿಗೂ ಸಹ ಚುನಾವಣೆಗೆ ಮತ ಚಲಾಯಿಸುವ ಅವಕಾಶವಿರುವುದನ್ನು ಕಂಡು ಅವನಿಗೆ ಆಶ್ಚರ್ಯವೆನಿಸಿತು. ನಂತರ “ಇಂಗ್ಲೆಂಡ್” ಗೆ ಹೊರಟ “ಹೋ”, ಅಲ್ಲಿನ ಕೆಲವು ಭಾರತೀಯರ ಜೊತೆ ಸೇರಿ ರಾಷ್ಟ್ರೀಯವಾದದ ಚಿಂತನೆಗಳನ್ನು ಅವನಲ್ಲಿ ಬೆಳೆಸಿಕೊಂಡ. ಇಂಗ್ಲೆಂಡ್’ನಿಂದ ನೇರವಾಗಿ “ಪ್ಯಾರಿಸ್”ಗೆ ಬಂದಿಳಿದ. ಅಲ್ಲಿ “ಪೇಸ್ಟ್ರೀ” ತಯಾರಿಸುವ ಕೆಲಸದ ಜೊತೆಗೆ, ಪತ್ರಿಕೆಗಳಲ್ಲಿ ಚಲನಚಿತ್ರ ವಿಮರ್ಶೆಗಳನ್ನು ಬರೆಯತೊಡಗಿದ. ಪ್ಯಾರಿಸ್’ನಲ್ಲಿ “ವಿಯೆಟ್ನಾಂ”ನ ರಾಷ್ಟ್ರೀಯವಾದಿಗಳ ಗುಂಪೊಂದಕ್ಕೆ ಸೇರಿಕೊಂಡು, “ಗ್ಯುಯೆನ್ ದಿ ಪೆಟ್ರಿಯೋಟಿ” ಎಂಬ ಹೆಸರಿನಲ್ಲಿ ತನ್ನ ದೇಶ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆ ಬರಹಗಳನ್ನು ಬರೆದ. ೧೯೧೯ರಲ್ಲಿ ಪ್ಯಾರಿಸ್ ನಲ್ಲಿ ಶಾಂತಿ ಸಮಾವೇಶ ನಡೆಯಿತು. ಆಗ ಅಲ್ಲಿಗೆ ಬಂದಿದ್ದ ಅಮೇರಿಕಾದ ಅಧ್ಯಕ್ಷ ವಿಲ್ಸನ್ ಗೆ ತನ್ನ ದೇಶದ ಸ್ಥಿತಿಯ ಬಗ್ಗೆ ಪತ್ರ ಬರೆದು ತಿಳಿಸಲು ಪ್ರಯತ್ನಿಸುತ್ತಾನೆ. ಆದರೆ ಇದು ಅವರ ಗಮನಕ್ಕೆ ಬರದೆ ‘ಹೋ’ನ ಪ್ರಯತ್ನ ಸಫಲವಾಗುವುದಿಲ್ಲ. ರಷ್ಯಾದ ವ್ಲಾದಿಮಿರ್ ಲೆನಿನ್’ನಿಂದ ಪ್ರೇರಿತಗೊಂಡು ಪ್ಯಾರಿಸ್ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸುತ್ತಾನೆ. ರಷ್ಯಾದ ಪ್ರಕಾರ ಕಮ್ಯುನಿಸ್ಟ್ ಸಿದ್ಧಾಂತವನ್ನು ಜಗತ್ತಿಗೆ ಹರಡುವ ಏಕೈಕ ವಿಧಾನವೆಂದರೆ ವಸಾಹತುಶಾಹಿ ಪದ್ಧತಿಯನ್ನು ವಿರೋಧಿಸಲು ಪ್ರಯತ್ನಿಸುವುದು. “ಹೋ” ಗೆ ಇದೇ ಕಾರಣಕ್ಕಾಗಿ ರಷ್ಯಾದಲ್ಲಿ ನಡೆದ ಕಮ್ಯುನಿಸ್ಟ್ ಸಮಾವೇಶದಿಂದ ಕರೆ ಬಂದಿತು. ರಾತೋರಾತ್ರಿ ಪ್ಯಾರಿಸ್ ನಿಂದ ಮಾಸ್ಕೋ ಗೆ ತೆರಳಿದ. ಸಮಾವೇಶದಲ್ಲಿ ಕಮ್ಯುನಿಸ್ಟ್ ಚಿಂತನೆಗಳ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಂಡ. ನಂತರ ಅಲ್ಲಿಂದ ಥೈಲ್ಯಾಂಡ್ ಮಾರ್ಗವಾಗಿ ತನ್ನ ದೇಶ ವಿಯೆಟ್ನಾಂಗೆ ವಾಪಸಾದ. ಅಷ್ಟರಲ್ಲಾಗಲ್ಲೇ “ಹೋ” ವಿಯೆಟ್ನಾಂ ತೊರೆದು ೩೦ ವರ್ಷಗಳಾಗಿತ್ತು.

ವಿಯೆಟ್ನಾಂನಲ್ಲಿ ತನ್ನ ಹೋರಾಟ ಮುಂದುವರಿಸಲು ಅಲ್ಲಿನ ಜನರನ್ನು ಒಗ್ಗೂಡಿಸಬೇಕಿತ್ತು. ಮನೆ ಮನೆಗೆ ತೆರಳಿ ಅವರಲ್ಲಿ ರಾಷ್ಟ್ರೀಯತೆಯ ಕಿಚ್ಚನ್ನು ಹಚ್ಚುತ್ತಾ, “ವಿಯೆಟ್ ಮಿನ್” ಎಂಬ ಗೆರಿಲ್ಲಾ ಸೈನ್ಯವನ್ನು “ಹೋ” ಕಟ್ಟಿದ. ಅದು ಎರಡನೇ ಮಹಾಯುದ್ಧದ ಪ್ರಾರಂಭ ಕಾಲ. ಜಪಾನ್ “ಪರ್ಲ್ ಹಾರ್ಬರ್” ಮೇಲೆ ಬಾಂಬ್ ದಾಳಿ ಮಾಡಿತ್ತು. ಸಿಂಗಾಪೂರ್ , ಮಲೇಷಿಯಾ ದೇಶಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತು. ಅಮೇರಿಕಾದ ಗುಪ್ತಚರ ಇಲಾಖೆ “ಹೋ” ನ ಸಹಾಯ ಪಡೆಯಲು ಮುಂದಾಯಿತು. ಇದರಿಂದ “ಹೋ” ಗೂ ಸಹ ಮಿಲಿಟರಿ ಸಹಾಯ ದೊರೆಯಿತು, ಹಾಗೆ ತನ್ನ ಸೈನ್ಯವನ್ನು ಇನ್ನಷ್ಟು ಪ್ರಬಲಗೊಳಿಸಿಕೊಂಡ. ೧೯೪೫ರ ಸೆಪ್ಟೆಂಬರ್ ನಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ, “ಹೋ”, ವಿಯೆಟ್ನಾಂ ಅನ್ನು ಸ್ವತಂತ್ರ ದೇಶವೆಂದು ಘೋಷಿಸಿದ. ಉತ್ತರ ವಿಯೆಟ್ನಾಂನಲ್ಲಿ ಅವರು ಸಂಪೂರ್ಣ ಪ್ರಾತಿನಿಧ್ಯ ಸಾಧಿಸಿದ್ದರು. ಆದರೆ ದಕ್ಷಿಣದಲ್ಲಿ ಫ್ರಾನ್ಸ್ ನ ಆಡಳಿತ ಇನ್ನೂ ಹಾಗೆ ಮುಂದುವರೆದಿತ್ತು. ೧೯೪೬ರಲ್ಲಿ ಫ್ರಾನ್ಸ್ ನ ಜೊತೆಗೆ ನಡೆದ ಮಾತುಕತೆ ಸಫಲವಾಗಲಿಲ್ಲ. ಫ್ರೆಂಚರು ಉತ್ತರ ವಿಯೆಟ್ನಾಂ ಮೇಲೆ ಯುದ್ಧ ಸಾರಿದರು. ಹಿಂದೆ “ಹೋ” ಗೆ ಸಹಾಯ ಮಾಡಿದ್ದ ಅಮೆರಿಕಾ ಈಗ ಫ್ರಾನ್ಸ್ ಗೆ ತನ್ನ ಸಹಾಯಹಸ್ತ ಚಾಚಿತ್ತು. ಇದಕ್ಕೆ ಕಾರಣ ಅಮೇರಿಕಾದ ತಲೆಗೆ ಹೊಕ್ಕಿದ್ದ “ಡಾಮಿನೋ ಸಿದ್ಧಾಂತ” ಅಂದರೆ, ಒಂದು ದೇಶ ಕಮ್ಯುನಿಸ್ಟ್ ದೇಶವಾದರೆ ಅದು ವೈರಸ್ ತರಹ ತನ್ನ ಸುತ್ತಮುತ್ತಲಿನ ದೇಶಕ್ಕೂ ಹರಡಲಿದೆ ಎನ್ನುವುದು. ಉತ್ತರದಲ್ಲಿ “ಹೋ” ಕಮ್ಯುನಿಸ್ಟ್ ಸಿದ್ಧಾಂತವನ್ನು ಮೈಗೂಡಿಸಿಕೊಂಡಿದ್ದರಿಂದ, ಅಮೇರಿಕಾ ದಕ್ಷಿಣದ ಫ್ರೆಂಚರಿಗೆ ತನ್ನ ಹಣ ಮತ್ತು ಮಿಲಿಟರಿ ಸಹಾಯವನ್ನು ಒದಗಿಸಿತು. ಉತ್ತರದ “ವಿಯೆಟ್ ಮಿನ್” ಸೇನೆಯು “ಟಾಂಕಿನ್ಗ್ ಕೊಲ್ಲಿ”ಯಲ್ಲಿದ್ದ ಅಮೆರಿಕಾದ ಹಡಗು “ಮ್ಯಾಡ್ ಡಾಕ್ಸ್” ಅನ್ನು ಹೊಡೆದುರುಳಿಸಿತು. ಇದರಿಂದ ಕುಪಿತಗೊಂಡ ಅಮೇರಿಕಾ ಸಂಪೂರ್ಣವಾಗಿ ವಿಯೆಟ್ನಾಂ ಯುದ್ಧದಲ್ಲಿ ಉತ್ತರ ವಿಯೆಟ್ನಾಂ ವಿರುದ್ಧ ಸೆಣಸಲು ಸಿದ್ಧವಾಯಿತು. ಆದರೆ ಅಷ್ಟರಲ್ಲಿ “ವಿಯೆಟ್ ಮಿನ್” ಗೆರಿಲ್ಲಾ ಪಡೆಗೆ ಸಂಪೂರ್ಣವಾಗಿ ಸೋತಿದ್ದ ಫ್ರಾನ್ಸ್ ತನ್ನ ೧೫,೦೦೦ ಸೈನಿಕರನ್ನು ಬಲಿಕೊಡಬೇಕಾಯಿತು. ಯುದ್ಧದಿಂದ ಹಿಂದೆ ಸರಿದು, ಶಾಂತಿ ಮಾತುಕತೆಗೆ ಮುಂದಾಯಿತು. ಜಿನೇವಾದಲ್ಲಿ ನಡೆದ ಶಾಂತಿ ಮಾತುಕತೆ “ಹೋ ಚಿ ಮಿನ್” ಗೆ ಅಷ್ಟು ಸಹಾಯಕವಾಗಿರಲಿಲ್ಲ. ಹೋ ಆಡಳಿತದಲ್ಲಿ ಕಮ್ಯುನಿಸ್ಟ್ ಸಿದ್ಧಾಂತವನ್ನು ತರದಿರಲು ತೀರ್ಮಾನಿಸಿದ್ದ. ಉತ್ತರ ವಿಯೆಟ್ನಾಂ ಮತ್ತು ದಕ್ಷಿಣ ವಿಯೆಟ್ನಾಂ ಅನ್ನು ಒಂದುಗೂಡಿಸುವುದು ಮತ್ತು ವಿಯೆಟ್ನಾಂನಲ್ಲಿ ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಸ್ಥಾಪನೆ ಮಾಡುವುದು “ಹೋ” ನ ಪ್ರಮುಖ ಬೇಡಿಕೆಯಾಗಿತ್ತು. “ಹೋ ಚಿ ಮಿನ್” ಗೆ ಇದ್ದ ಜನಪ್ರಿಯತೆಯಿಂದ ಅವನು ಖಂಡಿತ ಆ ಚುನಾವಣೆಯನ್ನು ಗೆಲ್ಲುತ್ತಿದ್ದ.ಇದನ್ನರಿತ ಅಮೇರಿಕಾ ಮತ್ತೆ ಕಮ್ಯುನಿಸ್ಟ್ ಸರ್ಕಾರ ಬರಬಹುದೆಂಬ ಭಯದಿಂದ ತನ್ನ ಕುತಂತ್ರವನ್ನು ನಿಲ್ಲಿಸಲಿಲ್ಲ. ಒಪ್ಪಂದಕ್ಕೆ ಸಹಿ ಹಾಕದೆ, ಪರಿಸ್ಥಿತಿ ತಿಳಿಯಾದ ಮೇಲೆ ಚುನಾವಣೆ ನಡೆಸಲಾಗುವುದು ಹಾಗೂ ಅಲ್ಲಿಯವರೆಗೆ ೧೭ಡಿಗ್ರಿ ಸಮಾನಾಂತರ ರೇಖೆಯಲ್ಲಿ ದೇಶವನ್ನು ವಿಭಜಿಸುವ ನಿರ್ಧಾರ ಹೇರಿತು. ಅಮೇರಿಕಾ ದಕ್ಷಿಣದಲ್ಲಿ ತನ್ನದೇ ಸರ್ಕಾರ ಸ್ಥಾಪಿಸಿತು. ಉತ್ತರಕ್ಕೆ “ಹನೋಯ್” ರಾಜಧಾನಿಯಾಯಿತು, ದಕ್ಷಿಣಕ್ಕೆ “ಸೈಗೊನ್”.

ಅಮೆರಿಕಾದಿಂದ ಸಂಧಾನವಂತೂ ಸಾಧ್ಯವಾಗಲಿಲ್ಲ, ಆದರೆ ಅವರಿಂದ ಯುದ್ಧವನ್ನು ಮುಂದುವರೆಸಲೂ ಸಾಧ್ಯವಾಗಲಿಲ್ಲ. “ವಿಯೆಟ್ ಮಿನ್” ನ ಬಹಳಷ್ಟು ಆಕ್ರಮಣಗಳು ಕಾಡಿನಲ್ಲಿ ನಡೆಯುತ್ತಿತ್ತು. ಆದರೆ ಅಮೇರಿಕಾದ ಸೈನಿಕರಿಗೆ ವಿಯೆಟ್ನಾಂನ ಕಾಡಿನ ಹಾದಿಗಳು ಅಷ್ಟೊಂದು ಪರಿಚಿತವಿರಲಿಲ್ಲ. ಇದರಿಂದ ಅಮೇರಿಕಾ ಬಹಳಷ್ಟು ಸೈನಿಕರನ್ನು ಕಳೆದುಕೊಳ್ಳಬೇಕಾಯಿತು. ಆದರೂ ಸೋಲೊಪ್ಪದ ಅಮೆರಿಕಾ , ವಿಯೆಟ್ನಾಂಗೆ ಮತ್ತಷ್ಟು ಸೇನಾ ತುಕಡಿಗಳನ್ನು ಕಳಿಸಿತು. ೧೯೬೫ರಲ್ಲಿ ೧,೫೪,೦೦೦ವಿದ್ದ ಸೈನಿಕರ ಸಂಖ್ಯೆ ೧೯೬೮ರ ಸಮಯದಲ್ಲಿ ಒಟ್ಟು ೫ಲಕ್ಷ ಮುಟ್ಟಿತ್ತು ಎಂಬುದು ಆಶ್ಚರ್ಯವೆನಿಸಿದರೂ ಸತ್ಯ. ಆದರೆ ವಿನಾಕಾರಣ ಸೈನಿಕರ ಮರಣದಿಂದ ಇತ್ತ ಅಮೇರಿಕಾದಲ್ಲಿ, ಜನ, ಸರ್ಕಾರ ವಿರುದ್ಧ ತಿರುಗಿ ನಿಂತರು. ಸಂಸತ್ತಿನಲ್ಲೂ ಸರ್ಕಾರ ವಿರೋಧವನ್ನು ಎದುರಿಸಬೇಕಾಯಿತು. ಇದರಿಂದ ಬೇಸತ್ತ ಅಮೇರಿಕಾ ಸರ್ಕಾರ ಉತ್ತರ ವಿಯೆಟ್ನಾಂ ಜೊತೆ ಮತ್ತೊಂದು ಮಾತುಕತೆಗೆ ಮುಂದಾಯಿತು. ಆದರೆ ಉತ್ತರ ವಿಯೆಟ್ನಾಂ, ದಕ್ಷಿಣದಲ್ಲಿರುವ ಸರ್ಕಾರವನ್ನು ಕೆಳಗಿಳಿಸುವವರೆಗೂ ನಾವು ಮಾತುಕತೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿಯಿತು. ಇದರಿಂದ ಕುಪಿತಗೊಂಡ ಅಮೇರಿಕಾ ಅಧ್ಯಕ್ಷ ರಿಚರ್ಡ್ ನಿಕ್ಸನ್, ದಕ್ಷಿಣ ವಿಯೆಟ್ನಾಂಗೆ ಇನ್ನಷ್ಟು ಮಿಲಿಟರಿ ಸಹಾಯ ನೀಡಲು ಮುಂದಾದನು. “ಯುದ್ಧ ಎಷ್ಟು ವರ್ಷಗಳ ಕಾಲ ಬೇಕಾದರೂ ನಡೆಯಲಿ. ಉತ್ತರ ವಿಯೆಟ್ನಾಂನ ಒಂದೊಂದು ದಾಳಿಗೂ, ಪ್ರತಿ ದಾಳಿ ಮಾಡಲು ಅನುಕೂಲವಾಗುವಂಥ ಎಲ್ಲಾ ಯುದ್ಧ ಸಾಮಗ್ರಿಗಳನ್ನು ಕಳಿಸುತ್ತೇವೆ” ಎಂದು ನಿಕ್ಸನ್ ತೀರ್ಮಾನ ಮಾಡಿದ. ಆದರೆ ಕೆಲವೇ ಸಮಯದಲ್ಲಿ “ವಾಟರ್ ಗೇಟ್” ಎಂಬ ಹಗರಣದಿಂದ, ಅವನು ರಾಜೀನಾಮೆ ನೀಡಬೇಕಾಯಿತು. ನಂತರ ಬಂದ ಸರ್ಕಾರ ಸಂಸತ್ತಿನಲ್ಲಿ ಸಹಾಯ ಮುಂದುವರೆಸುವ ಬಗ್ಗೆ ಪ್ರಸ್ತಾಪಿಸಿದರೂ ಬಹಳಷ್ಟು ಕಾಂಗ್ರೆಸ್ ನ ಮಂದಿ ಅದಕ್ಕೆ ಒಪ್ಪಲಿಲ್ಲ. ನಾಗರಿಕರೂ ಸಹ ವಿರೋಧ ವ್ಯಕ್ತಪಡಿಸಿದ್ದರಿಂದ, ದಕ್ಷಿಣ ವಿಯೆಟ್ನಾಂಗೆ ನೀಡುತ್ತಿದ್ದ ಸಹಾಯವನ್ನು ಮುಂದುವರೆಸಲಿಲ್ಲ. ಇದರಿಂದ ದಕ್ಷಿಣದ ಬಲ ಕ್ರಮೇಣ ಕುಗ್ಗಿ, ಉತ್ತರ ವಿಯೆಟ್ನಾಂ ಸೇನೆ ಅದನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿತು. ೧೯೭೫ ರಲ್ಲಿ ಅಖಂಡ ವಿಯೆಟ್ನಾಂ ಅನ್ನು ಮರು ಸ್ಥಾಪಿಸಿತು. ಆದರೆ ಈ ಜಯವನ್ನು ಸಂಭ್ರಮಿಸಲು “ಹೋ ಚಿ ಮಿನ್ ” ಬದುಕಿರಲಿಲ್ಲ. ೧೯೬೯ ರಲ್ಲಿ ತನ್ನ ೭೯ನೆೇ ವಯಸ್ಸಿನಲ್ಲಿ “ಹೋ” ಸಾವನ್ನಪ್ಪಿದ್ದ. ವಿಯೆಟ್ನಾಂ ಸರ್ಕಾರ “ಹನೋಯ್” ಅನ್ನು ರಾಜಧಾನಿಯನ್ನಾಗಿ ಮಾಡಿ, ದಕ್ಷಿಣದ “ಸೈಗೊನ್” ಗೆ “ಹೋ ಚಿ ಮಿನ್ ಸಿಟಿ” ಎಂದು ಮರು ನಾಮಕರಣ ಮಾಡಿತು.

೧೯೫೫ ರಿಂದ ೧೯೭೫ರ ವರೆಗೆ ಸುಮಾರು ೨೦ ವರ್ಷಗಳ ಕಾಲ ನಡೆದ “ವಿಯೆಟ್ನಾಂ ಯುದ್ಧ”ದಲ್ಲಿ ಅಮೆರಿಕಾಗೆ ಸಂಪೂರ್ಣ ಮುಖಭಂಗವಾಗಿತ್ತು.ಅಮೇರಿಕಾ ತನ್ನ ೫೮,೦೦೦ ಯೋಧರನ್ನು ಬಳಿ ಕೊಟ್ಟಿತು. ವಸಾಹತು ಶಾಹಿ ಪದ್ಧತಿಯನ್ನು ವಿರೋಧಿಸಿ, ಯುದ್ಧದ ಮುಲಕ ಗೆದ್ದ ಏಕೈಕ ದೇಶ ಎಂಬ ಖ್ಯಾತಿ ವಿಯೆಟ್ನಾಂ ಗೆ ಸೇರುತ್ತದೆ. ವಿಯೆಟ್ನಾಂ ಈಗ ಕಮ್ಯುನಿಸ್ಟ್ ದೇಶವೆನಿಸಿಕೊಂಡರೂ, ಕಮ್ಯುನಿಸ್ಟ್ ಆಚಾರ-ವಿಚಾರಗಳನ್ನು ದೂರವಿರಿಸಿದೆ. ಇಷ್ಟಾದರೂ ಸಹ ಅಮೆರಿಕಾ ಬೇರೆ ದೇಶಗಳ ವಿಚಾರ ದಲ್ಲಿ ಮೂಗು ತೂರಿಸುವ ಕೆಲಸ ಇನ್ನೂ ಬಿಟ್ಟಿಲ್ಲ. ಅಮೇರಿಕಾದ ಶೀತಲ ಸಮರಕ್ಕೆ ಇನ್ನೆಷ್ಟು ದೇಶಗಳು ಬಲಿಯಾಗಬೇಕೆಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

-ಕಾರ್ತಿಕೇಯ ಭಟ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!