ಅಂಕಣ

ದೇಶ ಕಂಡ ಅಪ್ರತಿಮ ವೀರಯೋಧ

ಸುಭಾಷ್ ಚಂದ್ರ ಬೋಸ್…! ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ. ಹೆಸರಲ್ಲೇ ಯುವ ಜನಾಂಗದವರಲ್ಲಿ ದೇಶ ಪ್ರೇಮ ಮೂಡಿಸುವ ಭಿನ್ನ ವ್ಯಕ್ತಿತ್ವ.  “ ನೀವು ನನಗೆ ರಕ್ತ ಕೊಡಿ ನಾನು ನಿಮಗೆ ಸ್ವಾತಂತ್ರ್ಯ ಕೊಡಿಸುತ್ತೇನೆ ಎಂದು ಭಾರತವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಿಗೊಳಿಸಲು ಹೋರಾಡಿದ ಧೀರ ಯೋಧ.

ಅದು 1897 ಜನವರಿ 23. ಒರಿಸ್ಸಾದ ಕಟಕ್‍ನಲ್ಲಿ ಜಾನಕಿನಾಥ ಬೋಸ್ ಹಾಗೂ ಪ್ರಭಾವತಿ ದಂಪತಿಗಳ 9 ಮಕ್ಕಳಲ್ಲಿ ಆರನೇಯವರಾಗಿ ಸುಭಾಷರು ಜನಿಸಿದರು. ಓದಿನಲ್ಲಿ ಬಹಳ ಪ್ರತಿಭಾವಂತರಾಗಿದ್ದ ಇವರು ಆ ಕಾಲದಲ್ಲಿ ಇಂಡಿಯನ್ ಸಿವಿಲ್ ಸರ್ವಿಸ್(IಅS) ಪರೀಕ್ಷೆಯನ್ನು ನಾಲ್ಕನೇಯ ರ್ಯಾಂಕ್‍ನೊಂದಿಗೆ ಉತ್ತೀರ್ಣ ಮಾಡಿದವರು. ಉನ್ನತ ಹುದ್ದೆಯನ್ನು ಪಡೆದು ಕರ್ತವ್ಯ ನಿರ್ವಹಿಸಬಹುದಾಗಿತ್ತು. ಆದರೇ 1919 ಏಪ್ರಿಲ್ 13ರಂದು ಜಲಿಯನ್‍ವಾಲಬಾಗ್‍ನಲ್ಲಿ ಹೃದಯ ನುಚ್ಚುನೂರು ಎನಿಸಿದಂತಹ ಮಾರಣಹೋಮ ನಡೆದಾಗ ತಮಗೆ ಬರಸಿಡಿಲು ಬಡಿದಂತಾಗಿ ಆಗಲೇ ಬ್ರಿಟಿಷರ ವಿರುದ್ಧ ಹೋರಾಡಲು ನಿಶ್ಚಯಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ನಂತರದಲ್ಲಿ ನೇತಾಜಿ ಎಂದು ಖ್ಯಾತರಾಗಿ ಸ್ವಾಮಿ ವಿವೇಕಾನಂದರ ದಟ್ಟ ಪ್ರಭಾವ ಆವರಿಸಿತು. ತಮ್ಮ ನೈತಿಕ ಮನೋಭಾವನೆಯನ್ನು ಜಾಗೃತಗೊಳಿಸುವಲ್ಲಿ ಇವರಿಗೆ ವಿವೇಕಾನಂದರ ಪುಸ್ತಕಗಳು ಸ್ಪೂರ್ತಿಯ ಸೆಲೆಯಾದವು. ಸ್ವಭಾವತಃ ಗಂಭಿರ, ಮುಂದಾಲೋಚನಾ ಮನೋಭಾವ, ನೇರ ಮಾತುಗಳಿಂದ ಗಮನ ಸೆಳೆಯುತ್ತಿದ್ದ ಇವರು ಬಂಗಾಳದ ಚಿತ್ತರಂಜನ್‍ದಾಸ್‍ರವರನ್ನು ರಾಜಕೀಯ ಗುರುವನ್ನಾಗಿ ಮಾಡಿಕೊಂಡು ಆಲ್ ಬೆಂಗಾಲ್ ಯೂತ್ ಲೀಗ್ ಸ್ಥಾಪಿಸಿ ಕಾಂಗ್ರೇಸ್ ಪರವಾಗಿ ಹಲವಾರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದರಿಂದ 11 ಭಾರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂತು. ಸೆರೆವಾಸದಲ್ಲಿದ್ದಾಗ ಭವಿಷ್ಯದ ಭಾರತದ ಕಡೆಗಿನ ತಮ್ಮ ಚಿಂತನೆಗಳನ್ನು ಆಭಿವ್ಯಕ್ತಪಡಿಸುತ್ತಿದ್ದರು. ಮದರಾಸಿನ ಜೈಲಿನಲ್ಲಿದ್ದಾಗಲೇ “ ದಿ ಇಂಡಿಯನ್ ಸ್ಟ್ರಗಲ್ “ ಎಂಬ ಪುಸ್ತಕ ಬರೆಯಲು ಆರಂಭಿಸಿದ ಧಿಮಂತ ನಾಯಕ.

1938ರ ಫೆಬ್ರವರಿ 19ರಂದು ಹರಿಪುರದಲ್ಲಿ ಕಾಂಗ್ರೇಸ್‍ನ 51ನೇ ಅಧಿವೇಶನಕ್ಕೆ ಸುಭಾಷರು ಅಧ್ಯಕ್ಷರಾದಾಗ ಮುಂದೆ ಭಾರತ ವಿಭಜನೆಯಾಗುವ ಸಾಧ್ಯತೆಯಿದೆ ಎಂದು ದೂರದೃಷ್ಟಿ ಬೀರಿದ್ದರು . ಅದರಂತೆ 1947ರಲ್ಲಿ ಭಾರತ ಎರಡು ಬಾಗವಾಗಿ ಒಡೆದು ಹೋಗಿತ್ತು..  ನೇತಾಜಿ ಭಾರತಕ್ಕೆ ಸಂಪೂರ್ಣ ಸ್ವರಾಜ್ಯ ಬೇಕು ಎಂದು ವಾದಿಸಿದರೆ ಅತ್ತ ಗಾಂಧೀಜಿ ಮತ್ತು ನೆಹರು ಕೃಪಾಪೋಷಿತ ಕಾಂಗ್ರೇಸ್ ಹಂತಹಂತವಾಗಿ ಸಿಗಲಿ ಎಂದೂ ವಾದಿಸುತ್ತಿದ್ದವೂ. ತಮಗಿಂತಲೂ ಪ್ರಸಿದ್ಧರಾಗಿ ಯಾರೂ ಕೂಡ ಬೆಳೆಯಬಾರದೆಂಬ ಧೃಡ ನಿಲುವು ಈ ಎಬ್ಬರು ನಾಯಕರಲ್ಲಿತ್ತು. 1939ರಲ್ಲಿ ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ಬೋಸರು ಸ್ಪರ್ಧಿಸಿದಾಗ ಸಂಕುಚಿತ ಮನೋಭಾವದವರಾದ ಗಾಂಧೀಜಿ ತಮ್ಮ ಆಪ್ತ ಪಟ್ಟಾಭಿ ಸೀತಾರಾಮಶಾಸ್ತ್ರಿಯನ್ನು ಕೂಡ ನಿಲ್ಲಿಸಿದರು. ಆದರೇ ಗೆಲುವು ಸುಭಾಷರದಾಗಿತ್ತು. ಆದರೇ ಬ್ರಿಟಿಷರನ್ನು ಎಚ್ಚರಿಸುವ ಯಾವುದೇ ಗೊತ್ತುವಳಿ ಮಂಡಿಸಿದಾಗಲೂ ಮಾಹಾತ್ಮರು ವಿರೋಧ ಮಾಡುತ್ತಿದ್ದರು.. ಇದರಿಂದ ಬೇಸತ್ತ ನೇತಾಜಿ ಕಾಂಗ್ರೇಸ್ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆಯನ್ನು ಸಲ್ಲಿಸಿದರು..

2ನೇ ಮಹಾಯದ್ಧದ ಸಂಧರ್ಭದಲ್ಲಿ ಭಾರತವೂ ಕದನದಲ್ಲಿ ಭಾಗಿಯಾಗುವುದಿಲ್ಲವೆಂದು ಬೋಸರು ಘೋಷಿಸಿದಾಗ ಬ್ರಿಟಿಷರು ಅದನ್ನು ಒಪ್ಪದೆ ಅವರನ್ನು ಬಂಧಿಸಿ ಕೊಲ್ಕತ್ತಾದ ಅವರ ನಿವಾಸದಲ್ಲೇ ಗೃಹಬಂಧನದಲ್ಲಿರಿಸಿದ್ದರು.. ಸುತ್ತಲೂ ಪೋಲಿಸರ ಸರ್ಪಗಾವಲಿದ್ದರೂ ಕೂಡ ನಿಗೂಢವಾಗಿ ಕಣ್ಮರೆಯಾಗಿ ಮಿತ್ರರಾದ ಡಾ. ಆಶೋಕ್‍ನಾಥ್ ಅವರ ಸಹಾಯ ಪಡೆದು ಮೊಹಮ್ಮದ್ ಜಿಯಾವುದ್ದಿನ್ ಎಂದು ಹೆಸರು ಬದಲಾಯಿಸಿ ಜರ್ಮನಿಗೆ ಪ್ರಯಾಣಿಸಿದರು. ಅಲ್ಲಿನ ಸರಕಾರಕ್ಕೆ ಪತ್ರ ಬರೆದು ಕೆಲವೊಂದು ಬೇಡಿಕೆಗಳನಿಟ್ಟು ಅವರ ಸಹಾಯದಿಂದ ಇಂಡಿಯಾ ಸೆಂಟರ್, ಫ್ರೀ ಇಂಡಿಯಾ ರೇಡಿಯೋ ಕೇಂದ್ರ ಸ್ಥಾಪಿಸಿ ಜೈ ಹಿಂದ್ ಎಂಬ ಘೋಷಣೆ ಹೊರಡಿಸಿದರು. ಸ್ವತಂತ್ರ ಭಾರತದ ಹಂಗಾಮಿ ಸರಕಾರ ರಚಿಸಿ ಜನಗಣಮನವನ್ನು ರಾಷ್ಟ್ರೀಯ ಗೀತೆಯನ್ನಾಗಿ ಮಾಡಿಕೊಂಡಾಗ ಬೋಸರ ಮೊಗದಲ್ಲಿ ಸಂತಸ ಮನೆಮಾಡಿತ್ತು. ಹಿಟ್ಲರ್‍ನ್ನು ಭೇಟಿಯಾಗಿ ಅವರು ಜ್ಯೂಗಳ ಬಗ್ಗೆ ತಳೆದಿದ್ದ ನಿಲುವನ್ನು ಬಹಿರಂಗವಾಗಿ ಟೀಕಿಸಿದ್ದು ನೇತಾಜಿಯವರ ಗಂಭೀರ ವ್ಯಕ್ತಿತ್ವಕ್ಕೊಂದು ಮೇರುಗನ್ನಡಿ.

1943ರಲ್ಲಿ ಭಾರತೀಯ ರಾಷ್ಟ್ರೀಯ ಸೇನೆ ಕಟ್ಟಿ(Iಓಂ) ಯುದ್ಧ ಕೈದಿಗಳೆನಿಸಿದ 35,000ಕ್ಕೂ ಹೆಚ್ಚು ಜನರನ್ನು ಸೈನಿಕರನ್ನಾಗಿ ಮಾಡುವುದರ ಜೊತೆಗೆ, ಇಡಿ ಏಷ್ಯಾದಲ್ಲೇ ಪ್ರಥಮವಾಗಿ ಮಿಲಿಟರಿಯಲ್ಲಿ ಮಹಿಳಾ ಪಡೆ ಆರಂಭಿಸಿದ ಖ್ಯಾತಿ ಸುಭಾಷರದ್ದು. ಇತ್ತ ಹಿಟ್ಲರ್ ಕೂಡ ಬೋಸರ ಧೃಡ ನಿಲುವನ್ನು ಮೆಚ್ಚಿದ್ದರು..ಹಂಗಾಮಿ ಸರಕಾರ ಬಂದ ತಕ್ಷಣ ಅಮೇರಿಕಾ, ಇಂಗ್ಲೇಂಡ್ ವಿರುದ್ದ ಯುದ್ಧ ಘೋಷಿಸಿದರಲ್ಲದೆ, ಜಪಾನ್ ಸರಕಾರದಿಂದ ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಪಡೆಯಲು ಯಶಸ್ವಿಯಾಗಿ ಮೊದಲ ಸ್ವಾತಂತ್ರ್ಯದ ಸವಿಯುಂಡರು. ಎರಡು ದ್ವೀಪಗಳಿಗೂ ಸ್ವರಾಜ್- ಶಾಹಿದ್ ಎಂದು ನಾಮಕರಣ ಮಾಡಿ ನಂತರದಲ್ಲಿ ಭಾರತದ ಗಡಿ ಪ್ರದೇಶವಾದ ಕೊಹಿಮಾವನ್ನು ವಶಪಡಿಸಿಕೊಂಡರು.

ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಲು ರಷ್ಯಾದ ಸಹಾಯ ಪಡೆಯಲು ಮುಂದಾಗಿ 1945 ಆಗಸ್ಟ್ 17ರಂದು ಸೈಗಾನಿನಿಂದ ತೈಪೆ ಮೂಲಕ ಮಂಚೂರಿಯಾದ ದಾಯಿರೆನ್‍ಗೆ ಪ್ರಯಾಣ ಮಾಡಬೇಕಿತ್ತು.. 18ರಂದು ತೈಪೆ ತಲುಪಿ ಅಲ್ಲಿಂದ ಮಂಚೂರಿಯಾಕ್ಕೆ ಹೋಗಲು ನಿರ್ಧರಿಸಲಾಗಿತ್ತು.. ಆದರೇ ಅಂದು ನಡೆದ ವಿಮಾನ ಅಪಘಾತದಲ್ಲಿ ಸುಭಾಷರು ದುರ್ಮರಣವನ್ನಪ್ಪಿದರು ಎಂದು ಸಂಸತ್ತಿನಲ್ಲಿ ಘೋಷಣೆ ಮಾಡಲಾಯಿತು ..ಇಲ್ಲಿಂದಲೇ ಅನುಮಾನಗಳ ಹುತ್ತ ಬೆಳೆಯಲಾರಂಭಿಸಿತು. ಅಂದು ನಿಜವಾಗಲೂ ಮೃತಪಟ್ಟರೆ, ಅಥವಾ ಹಾಗೆಂದೂ ಬಿಂಬಿಸಲಾಯಿತೆ ? 2ನೇ ಮಹಾಯದ್ಧದ ನಂತರವೂ ನೇತಾಜಿ ರಷ್ಯಾದ ಜೈಲಿನಲ್ಲಿದ್ದರು ಎಂಬ ಹೇಳಿಕೆಗಳು, ತೈವಾನ್ ಆಂತರಿಕ ಭದ್ರತಾ ಸಚಿವಾಲಯ ಮತ್ತು ತೈಪೆ ಮೇಯರ್ 1945 ಆಗಸ್ಟ್ 18ರಂದು ಯಾವುದೇ ಅಪಘಾತಗಳು ಸಂಭವಿಸಿದ ವರದಿಯಾಗಿಲ್ಲ ಎಂದು ಹೇಳಿದ್ದು, 1960 ರಲ್ಲಿ ಉತ್ತರ ಪ್ರದೇಶದ ಫೈಜಾಬಾದ್ ಬಳಿಯಿದ್ದ ಗುಮ್ಮಾಮಿ ಬಾಬಾರ ನಡವಳಿಕೆಗಳು ನೇತಾಜಿಯನ್ನೆ ಹೋಲುತ್ತಿದ್ದದ್ದು , ಹಲವು ಕಡತಗಳು ಕಾಣೇಯಾಗಿದ್ದು ,ಎಲ್ಲವೂ ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟವು.

ಸುಭಾಷರ ನಿಧನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದಾಗ ಸ್ವತಂತ್ರ ಭಾರತದ ಸರ್ಕಾರ ಹಲವಾರು ಸಮಿತಿಗಳನ್ನು ರಚಿಸಿ ತನಿಖೆಗೆ ಆದೇಶಿಸಿತು. ಆದರೇ ಎಲ್ಲಾ ಸಮಿತಿಗಳೂ ಕೂಡ ಅವಸರದ ವರದಿ ನೀಡಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದು ನಿಜವೆಂದೂ ಸಾರಲಾಯಿತು. ಬ್ರಿಟನ್ ಸರಕಾರ ಕೂಡ 2022ರವರೆಗೆ ಅವರ ಸಾವಿನ ಕುರಿತ ರಹಸ್ಯ ವರದಿಗಳನ್ನು, ಮಿಲಿಟರಿ ಗುಪ್ತಚರ ವಿಭಾಗದ ದಾಖಲೆಗಳನ್ನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ, ಸುಭಾಷರಿಗೆ ಸಂಬಂಧಿಸಿದ 100 ರಹಸ್ಯ ಡಿಜಿಟಲ್ ಕಡತಗಳನ್ನು ಬಿಡುಗಡೆ ಮಾಡಿ ನಂತರ ಪ್ರತಿ ತಿಂಗಳು 25 ಕಡತಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು. ಆದರೇ ಅವರ ಜನ್ಮ ದಿನ ಕಳೆದ ನಂತರ ಯಾವ ಕಡತವೂ ಬಿಡುಗಡೆಯಾಗಲಿಲ್ಲ.. ರಾಷ್ಟ್ರೀಯ ಪತ್ರಗಾರದಲ್ಲಿ ಹಲವಾರು ಕಡತಗಳು ಇದ್ದರೂ ಕೇಂದ್ರ ಸರ್ಕಾರ ರಹಸ್ಯ ಮಾಹಿತಿ ಬಿಡುಗಡೆ ಮಾಡುವ ಕುರಿತಾಗಿ ಅಂತರ್ ಸಚಿವಾಲಯ  ಸಮಿತಿಯೊಂದನ್ನು ರಚಿಸಿತ್ತು.. ಆದರೆ ಪ್ರಯೋಜನ ಮಾತ್ರ ಶೂನ್ಯ. ಬ್ರಿಟಿಷ್ ಫಾರೆನ್ಸಿಕ್ ಮ್ಯಾಪಿಂಗ್ ವರದಿ ಪ್ರಕಾರ, 1966ರ ಭಾರತ- ಪಾಕಿಸ್ತಾನ ನಡುವೆ ರಷ್ಯಾದಲ್ಲಿ ನಡೆದ ತಾಷ್ಕೆಂಟ್ ಒಪ್ಪಂದಕ್ಕೆ ನೇತಾಜಿಯವರು ಸಾಕ್ಷಿಯಾಗಿದ್ದರು ಎಂದಿದೆ. ಒಟ್ಟಾರೆ ರಾಷ್ಟ್ರೀಯವಾದಿಯಾಗಿ, ತೀವ್ರಗಾಮಿ ಎನಿಸಿಕೊಂಡು ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ವಿರೋಧ ವ್ಯಕ್ತಪಡಿಸಿ ತಮ್ಮದೆ ರೀತಿಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬರಲು ಕಾರಣರಾದ ನೇತಾಜಿಯವರ ಬದುಕಿಗೆ ಇನ್ನು ಸ್ಪಷ್ಟ ಅಂತ್ಯ ಸಿಗದೆ ಇರುವುದು ಸೋಜಿಗವೇ ಸರಿ..

 

ಮಿಥುನ್ ಮೊಗೇರ

 ಮಡಿಕೇರಿ

www.mithumogera@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!