Featured ಅಂಕಣ

ಜಲ್ಲಿಕಟ್ಟು- ಸೆಕ್ಯುಲರ್ ಗಳಿಗೆ ನುಂಗಲಾರದ ತುತ್ತು.

ಜಲ್ಲಿಕಟ್ಟಿನ ಪೊಲಿಟಿಕಲ್ ಹೈ ಡ್ರಾಮಾದಲ್ಲಿ ಎಡಪಂಥೀಯರು, ಬುದ್ಧಿಜೀವಿಗಳು(ಇತ್ಯಾದಿ ಸೆಕ್ಯುಲರ್ ಬಳಗಗಳು) ತೊಡಕಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆ, ಇವರ ಮುಖವಾಣಿಗಳಾದ ಮಾಧ್ಯಮಗಳು ಜಲ್ಲಿಕಟ್ಟಿನ ವಿರುದ್ಧ ಮುಗಿಬೀಳಲು ಇನ್ನಿಲ್ಲದಷ್ಟು ಸಾಹಸ ಪಡುತ್ತಿವೆ. ಜಲ್ಲಿಕಟ್ಟಿನ ವಿವಾದದ ಶುರುವಿನಿಂದ ಇಲ್ಲಿಯತನಕ ನಡೆದ ಘಟನಾವಳಿಗಳನ್ನು ಬುದ್ಧಿಜೀವಿಗಳ ಹೇಳಿಕೆಗಳನ್ನು, ನಡೆಗಳನ್ನು ಸೂಕ್ಶ್ಮವಾಗಿ ಗಮನಿಸಿದರೆ, ಎಲ್ಲೊ ಏನೊ ತಾಳ ತಪ್ಪಿದೆ ಎನಿಸದಿರದು. ತಳ ಸಮುದಾಯದ ಗುತ್ತಿಗೆ ತೆಗೆದುಕೊಂಡವರು ತಾವೆ ಎಂದು ವರ್ತಿಸುತ್ತಿದ್ದ ಕಮ್ಯುನಿಷ್ಟರು, ಆರ್ಯ ದ್ರಾವಿಡ ಎಂಬ ಸುಳ್ಳು ಇತಿಹಾಸವನ್ನು ಸೃಷ್ಟಿಸಿ ದ್ರಾವಿಡರ ಪರ ನಿಂತ ಕಮ್ಯುನಿಷ್ಟರು ಇಂದ್ಯಾಕೆ ’ದ್ರಾವಿಡ ಸಂಸ್ಕೃತಿ’ಯೆಂಬಂತೆ ಬಿಂಬಿಸಲ್ಪಟ್ಟ ಜಲ್ಲಿಕಟ್ಟನ್ನು ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ? ಹೆಚ್ಚೆಂದರೆ ಕ್ಷೀಣ ದನಿಯಲ್ಲಿ ಜಲ್ಲಿಕಟ್ಟನ್ನು ಬೆಂಬಲಿಸುವ ಮಾತನಾಡುತ್ತಿದ್ದಾರೆಯೆ ಹೊರತೂ, ಗೋಮಾಂಸ ಭಕ್ಷಣೆಯನ್ನು ಆಹಾರದ ಹಕ್ಕೆಂದು ಬೆಂಬಲಿಸಿ ಹೋರಾಟ ನಡೆಸಿದಂತೆ ಈಗ್ಯಾಕೆ ಉಗ್ರ ಹೋರಾಟ ಮಾಡುತ್ತಿಲ್ಲ? ಕಮ್ಯುನಿಷ್ಟರ, ಬುದ್ದಿಜೀವಿಗಳ  ಉಭಯ ನೀತಿಗಳು, ಸಿದ್ಧಾಂತ ವಿರೋಧಾಭಾಸಗಳು, ಅವಕಾಶವಾದಿ ನಡೆಗಳು  ಸರ್ವೆ ಸಾಮಾನ್ಯವಾದರೂ ಜಲ್ಲಿಕಟ್ಟಿನ ವಿಷಯದಲ್ಲಿ  ತಮ್ಮ ಅಭಿಪ್ರಾಯವನ್ನು ಅಡಗಿಸಿಟ್ಟುಕೊಳ್ಳುವಷ್ಟು ನುಂಗಲಾರದ ತುಪ್ಪವಾಗಿದೆ. ಇದೊಂದು ತರ ತಾನು ತೋಡಿದ ಕಂದಕದಲ್ಲಿ ತಾನೆ ಬಿದ್ದ ಹಾಗೆ ಎನ್ನುವ ಸ್ಥಿತಿ.

ಅದು ಆರ್ಯ-ದ್ರಾವಿಡ ಎನ್ನುವ ಸುಳ್ಳು ಇತಿಹಾಸದ ಸೃಷ್ಟಿಯಾಗಿರಬಹುದು, ಭಾಷಾಂಧತೆಯನ್ನು ಹುಟ್ಟು ಹಾಕುವ ಪ್ರಯತ್ನವಾಗಿರಬಹುದು, ಜಾತ್ಯಾತೀತತೆಯ ಸೋಗಿನಲ್ಲಿ ನಡೆಸಿದ ವಿವಾದಗಳಿರಬಹುದು, ಇವೆಲ್ಲವೂ ರಾಜಕೀಯ ಪ್ರೇರಿತ ಹುಟ್ಟು ಎನ್ನುವದರಲ್ಲಿ ಸಂಶಯವಿಲ್ಲ. ಹೀಗೆಯೆ ಹುಟ್ಟು ಹಾಕಿದ ಅನೇಕ ನಾಟಕಗಳಲ್ಲಿ ತಮಿಳುನಾಡಿನ ರಾಜಕೀಯದಲ್ಲಿ ಹೆಚ್ಚು ಪ್ರಭಾವ ಬೀರಿದ್ದು ಕಮ್ಯುನಿಷ್ಟರಿಂದ ಸೃಷ್ಟಿಸಲ್ಪಟ್ಟ ಆರ್ಯ-ದ್ರಾವಿಡ ಇತಿಹಾಸ. ಈ ಇತಿಹಾಸ ತಮಿಳುನಾಡನ್ನು ಎಷ್ಟು ಪ್ರಭಾವಿಸಿದೆಯೆಂದರೆ, ’ದ್ರಾವಿಡ’ ಎನ್ನುವ ಮಿಥ್ಯಾ ಆಸ್ಮಿತೆಯನ್ನು ಇಂದಿನ ಅಲ್ಲಿನ ಜನತೆ ಹೆಮ್ಮೆಯಿಂದ ಒಪ್ಪಿಕೊಂಡಿದೆ ಹಾಗೂ ಅಲ್ಲಿನ ನಿರ್ವಿವಾದಿತ ರಾಜಕೀಯ ಧ್ಯೇಯವಾಗಿದೆ.  ಈ ದ್ರಾವಿಡ ಆಸ್ಮಿತೆಯ ರಾಜಕೀಯ ಲಾಭ ಲಭಿಸಿದಂತೆ ’ದ್ರಾವಿಡ ಸಂಸ್ಕೃತಿಯ’ ಆಸ್ಮಿತೆಯನ್ನು ಓಲೈಸುವದೂ ಅಲ್ಲಿನ ರಾಜಕಾರಣಿಗಳಿಗೆ ಅನಿವಾರ್ಯವಾಯಿತು. ಹೀಗಿದ್ದಾಗಲೂ ಜಲ್ಲಿಕಟ್ಟುವಿನ ವಿಷಯದಲ್ಲಿ ತಾನೆ ಸೃಷ್ಟಿಸಿದ ’ದ್ರಾವಿಡ’ ಆಸ್ಮಿತೆಯ ಪರ ಬ್ಯಾಟಿಂಗ್ ಮಾಡಲು ಈಸಲ ಕಮ್ಯುನಿಷ್ಟರಾಗಲೀ ಅಥವಾ ಬುದ್ಧಿಜಿವಿಗಳು ಧಾವಿಸಲಿಲ್ಲ, ಇದು ದ್ರಾವಿಡರ  ಶೋಷಣೆಯೆಂದು ಹೋರಾಡಲಿಲ್ಲ, ’ಕಲ್ಚರಲ್ ಡೈವರ್ಸಿಟಿ’ ಎಂದು ಯಾವ ಲಿಬರಲ್ಲುಗಳೂ ಜಲ್ಲಿಕಟ್ಟಿನ ಸಹಾಯಕ್ಕೆ ನಿಂತಿಲ್ಲ.

ಯಾಕೆಂದರೆ…..

ಜಲ್ಲಿಕಟ್ಟನ್ನು ಬೆಂಬಲಿಸುವದರಿಂದ ಕಮ್ಯುನಿಷ್ಟರಿಗಾಗಲೀ, ರಾಜಕೀಯ ಪ್ರೇರಿತ ಬುದ್ಧಿಜೀವಿಗಳಿಗಾಗಲೀ ಯಾವ ರಾಜಕೀಯ ಲಾಭವೂ ಇಲ್ಲ, ಇನ್ನೊಂದರ್ಥದಲ್ಲಿ ನಷ್ಟವೆ ಹೆಚ್ಚು. ಒಂದು ವೇಳೆ ಸುಪ್ರೀಂ ಕೋರ್ಟ್ ಹೋರಾಟಕ್ಕೆ ಮಣಿದು ತನ್ನ ತೀರ್ಮಾನವನ್ನು ಬದಲಿಸಿ ಜಲ್ಲಿಕಟ್ಟುವಿನ ನಿಷೇಧವನ್ನು ತೆಗೆದು ಹಾಕಿದರೆ ಪನೀರಸೆಲ್ವಂ ತಮಿಳಿಗರ ಕಣ್ಮಣಿಯಾಗುತ್ತಾರೆ,  ಹಾಗೂ ಇದು ಮೋದಿ ಮತ್ತು  ಪನೀರಸೆಲ್ವಂರ ಮೈತ್ರಿಗೆ ನಾಂದಿ ಹಾಡುತ್ತದೆ. ಇವೆರಡೂ ಕಮ್ಯುನಿಷ್ಟರಿಗೆ ಏನೂ ಗಿಟ್ಟಿಸಿಕೊಡದ ಘಟನಾವಳಿಗಳು. ಅಲ್ಲದೆ ಜಲ್ಲಿಕಟ್ಟುವಿನ ವಿರುದ್ಧ ಮಾತನಾಡಿದರೂ ತಾವೆ ಸಾಕಿದ ದ್ರಾವಿಡ ಆಸ್ಮಿತೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಅವಕಾಶವಾದಿತನ ಜಾಹೀರಾಗುತ್ತದೆ. ಹಾಗಾಗಿ ಇತ್ತ ಕಡೆ ವಿರೋಧಿಸಲೂ ಆಗದೆ, ಪರ ವಹಿಸಲೂ ಆಗದೆ ಸೆಕ್ಯುಲರ್ ಬ್ರಿಗೇಡ್ ಸಂಕೀರ್ಣ ಸ್ಥಿತಿಯಲ್ಲಿದೆ. ಅಲ್ಲದೆ,  ಜಲ್ಲಿಕಟ್ಟು ನಿಷೇಧ ಆಗಲು ಕಾರಣ ಕಾಂಗ್ರೆಸ್’ನ ಜೈರಾಮ್ ರಮೇಶ್. ಒಂದು ವೇಳೆ ಬಿಜೆಪಿ ಅಥವಾ ಆರ್ ಎಸ್ ಎಸ್ ಇಂದು ಜಲ್ಲಿಕಟ್ಟುವಿನ ವಿರುದ್ಧ ದನಿಯೆತ್ತಿದ್ದರೆ ಏನಾಗುತ್ತಿತ್ತು ಎಂದು ಊಹಿಸುವದು ಅಷ್ಟೆ ಸುಲಭ. ಕಮ್ಯುನಿಷ್ಟರ, ಬುದ್ಧಿಜೀವಿಗಳ ಹಾಗೂ ಮಾಧ್ಯಮದವರ ವರಸೆ ಇಂದಿಗಿಂತ ವಿರುದ್ಧವಾಗಿಯೆ ಇರುತ್ತಿತ್ತು, ಬಿಜೆಪಿ ಹಾಗೂ ಸಂಘ ಪರಿವಾರವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದರು. ದ್ರಾವಿಡರ ಶೋಷಣೆ ನಡೆಯುತ್ತಿದೆ ಎಂದು ಕಣ್ಣೀರಿಡುತ್ತಿದ್ದರು. ಆದರೆ ಮೋದಿ ಜಲ್ಲಿಕಟ್ಟುವಿನ ಪರ ನಿಂತಿದ್ದು ಹಾಗೂ ತಾವು ಜಲ್ಲಿಕಟ್ಟುವಿನ ಪರ ನಿಲ್ಲುವದು ಬಿಜೆಪಿಗಷ್ಟೆ ಲಾಭ ತಂದುಕೊಡುವದೆಂದರಿತು ಬುದ್ಧಿಜೀವಿಗಳು ಅಸಹಾಯಕರಾಗಿದ್ದಾರೆ.

ಜಲ್ಲಿಕಟ್ಟು ಅಮಾನವೀಯ ಎಂದು ತೀರ್ಮಾನಿಸಲು ರಾಜಕೀಯ ಲಾಭದ ಜೊತೆ ವಸಾಹತು ಮನಸ್ಥಿತಿಯೂ ಪಾತ್ರ ವಹಿಸಿದೆ. ಅದನ್ನೆ ಮಾಧ್ಯಮಗಳೂ ಬಿತ್ತರಿಸುತ್ತಿವೆ. ನಮ್ಮ ಸಮಾಜದ ಮನಸ್ಥಿತಿಯನ್ನು ನಮ್ಮದಲ್ಲದ ಚೌಕಟ್ಟಿನಿಂದ ನೋಡಿದಾಗ ಆಗುವ ಅನಾಹುತಕ್ಕೆ ಇದೊಂದು ಉತ್ತಮ ಉದಾರಣೆ. ಆಹಾರದ ಹಕ್ಕು ಎಂದು ಅನುಸರಿಸುವ ಪ್ರಾಣಿ ಹಿಂಸೆ ಸರಿ, ಆದರೆ ಜಲ್ಲಿಕಟ್ಟುವಿನಂತಹ ಪ್ರಾಣಿಗಳ ಕ್ರೀಡೆ ತಪ್ಪು, ಕಾನೂನು ರೀತ್ಯಾ ನಡೆಸುವ ಕುದುರೆ ರೇಸ್ ಸರಿ ಎನ್ನುವಂತಹ ಅನೇಕ ವಿರೋಧಾಭಾಸಗಳನ್ನು ಒಳಗೊಂಡ ಅಸಂಬದ್ಧ ವಾದಗಳನ್ನೂ ಸಮಾಜ ವೈಚಾರಿಕತೆ ಎಂದು ಒಪ್ಪಿಕೊಂಡಿರುವದು ದುರಂತ. ಮಾಧ್ಯಮಗಳು ಸ್ಥಾಪಿತ ವೈಚಾರಿಕ ನಿಲುವುಗಳಲ್ಲಿರುವ ಅವೈಜ್ಞಾನಿಕ ಅಂಶಗಳ ಬಗ್ಗೆ ವಸ್ತುನಿಷ್ಟವಾಗಿ ಚರ್ಚೆ ಮಾಡಲಾರವು. ಬದಲಾಗಿ ಸ್ಥಾಪಿತ ವೈಚಾರಿಕ ನಿಲುವುಗಳನ್ನು ಪ್ರತಿನಿಧಿಸುವ ಕೆಲಸ ಮಾತ್ರ ಮಾಡುತ್ತಿವೆ. ಇಂತಹ ವಾದಗಳನ್ನು ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುವ ಮೊದಲು ವೈಜ್ಞಾನಿಕ ಪರಿಷ್ಕರಣೆಗೆ ಒಳಪಡಿಸಬೇಕು, ಸಮಾಜಶಾಸ್ತ್ರದ ವಿವರಣೆಯನ್ನು ಒಳಗೊಂಡಿರಬೇಕು. ನಮ್ಮ ಕಾನೂನುಗಳು ನಮ್ಮ ಸಮಾಜದ ಭಾವನೆಗಳಿಗೆ ಪೂರಕವಾಗಿರಬೇಕೆ ಹೊರತೂ ಪಾಶ್ಚಾತ್ಯ ದುರ್ಬೀನಿನಿಂದ ಪ್ರಮಾಣೀಕರಿಸುವದನ್ನು ನಿಲ್ಲಿಸಬೇಕು. ಜಲ್ಲಿಕಟ್ಟು ಎಂಬ ಸಾಂಪ್ರದಾಯಿಕ ಕ್ರೀಡೆ ’ಪ್ರಾಣಿ ಹಿಂಸೆಯ ಪ್ರತೀಕ’ ಎಂದು ನಿಷೇಧಿಸುವದು ಎಷ್ಟು ಮೂರ್ಖತನವೊ, ಇದು ಒಂದು ಆಸ್ಮಿತೆಯ(ಜನಾಂಗ, ಜಾತಿ, ಮತ ಇತ್ಯಾದಿ) ಪ್ರಶ್ನೆ ಎಂಬ ಕಾರಣಕ್ಕಾಗಿ ಸಮರ್ಥಿಸುವದೂ ಅಷ್ಟೆ ಮೂರ್ಖತನದ್ದು. ಯಾಕೆಂದರೆ  ಸ್ವಾತಂತ್ರ್ಯಾ ನಂತರ ರೂಪುಗೊಂಡ ಪ್ರತಿಯೊಂದು ಆಸ್ಮಿತೆಯೂ ರಾಜಕೀಯ ದೊಂಬರಾಟಕ್ಕೆ ಸಿಕ್ಕಿ ಹುಟ್ಟಿಕೊಂಡಿದ್ದು, ಗೊಂದಲದಲ್ಲಿ ಸಿಕ್ಕಿಕೊಂಡಿದ್ದು. ಹಾಗಾಗಿ ರಾಜಕೀಯ ನಾಟಕಗಳಿಗೆ ಜಲ್ಲಿಕಟ್ಟುವನ್ನು ಬಳಸಿಕೊಳ್ಳುವದಕ್ಕಿಂತಲೂ, ದೇಸಿ ತಳಿ ಸಂರಕ್ಷಣೆಯಲ್ಲಿ ಇದರ ಪಾತ್ರ ಹಾಗೂ ಸಂಸ್ಕೃತಿಯ ಭಾಗ ಎಂಬ ಕಾರಣಕ್ಕೆ ಜಲ್ಲಿಕಟ್ಟುವಿನ ನಿಷೇಧವನ್ನು ತಡೆಯಬೇಕು ಎನ್ನುವದು ಹೆಚ್ಚು ಸರಿ ಎನಿಸುತ್ತದೆ.

 

-ಬಾಲಚಂದ್ರ ಭಟ್

balachandrabhat86@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!