ಅಂಕಣ

ಎಲ್ಲರೊಳಗಿರುವನೊಬ್ಬ !

  ಎಲ್ಲರೊಳಗೂ ಮತ್ತೊಬ್ಬನಿರುತ್ತಾನೆ. ಇದು ಕಟು ಸತ್ಯ. ಆದರೆ ನಮ್ಮಲ್ಲಿ ಯಾರೂ ಅವನಿಗೆ ಮಹತ್ವ ಕೊಡುವುದಿಲ್ಲ. ಕೆಲವೊಮ್ಮೆ ಪರಿಸ್ಥಿತಿಯ ಒತ್ತಡ , ಮತ್ತೊಮ್ಮೆ ಇನ್ನೊಬ್ಬರಿಗೆ ನೋವಾಗುವುದೇನೋ ಎನ್ನುವ ಕಾಳಜಿ, ಮಗದೊಮ್ಮೆ ಅದು ನಮಗೆ ಹಿತವಲ್ಲದ ನಿರ್ಣಯ. ಹೀಗೆ ಪ್ರತಿಬಾರಿಯೂ ಅವನ ದ್ವನಿಗೆ ನಮ್ಮಿಂದ ಸಾತು ನೀಡಲು ಸಾದ್ಯಾವಾಗದಿರುವ ಸಂದರ್ಭಗಳೇ ಹೆಚ್ಚು. ಹೀಗೆ ನಾವು ಪ್ರತಿ ಬಾರಿ ಅವನ ಕೂಗಿಗೆ ಕಿವಿಗೊಡದಿದ್ದಾಗ ಅವನಿಗಾಗುವ ನೋವನ್ನು ನಾವು ಲೆಕ್ಕಿಸುವುದೇ ಇಲ್ಲ. ಅವನು ಅಳುತ್ತಾನೆ, ಆದರೆ ನಾವು ಅವನ ಕಣ್ಣೀರನ್ನು ಅದುಮಿಡುತ್ತೇವೆ. ಅವನು ನಗುತ್ತಾನೆ, ಆದರೆ ಅವನ ನಗುವನ್ನು ಕಡೆಗಣಿಸುತ್ತೇವೆ. ಅವನಿಗೆ ಕೋಪ ಬರುತ್ತದೆ, ಆದರೆ ನಾವು ಏನೂ ಮಾಡದ ಅಸಹಾಯಕತೆ.. ಅವನು ಖಿನ್ನತೆಗೊಳಗಾಗುತ್ತಾನೆ, ಆದರೆ ನಾವು ಸ್ಪಂದಿಸಲು ಸಾದ್ಯಾವಾಗದ ಸಂಧರ್ಭ. ಅವನು ಅಪಾರವಾಗಿ ದುಃಖಿಸುತ್ತಾನೆ, ಆದರೆ ನಾವು ಅವನನ್ನು ಸಾಂತ್ವಾನಿಸಲಾಗದ ಹೇಡಿಗಳು. ಹೀಗೆ ನಮ್ಮ ಪ್ರತಿಯೊಂದು ಮಹತ್ತರ ಕ್ಷಣದಲ್ಲಿ ನಮ್ಮ ಜೊತೆ ಸದಾ ಇರುವವನು ಅವನೊಬ್ಬನೇ… ಆದರೆ ಅವನನ್ನು ಬಿಟ್ಟು ನಾವು ಉರೆಲ್ಲಾ ಹುಡುಕುತ್ತೇವೆ, ಜೊತೆಗಾರರಿಗಾಗಿ ಎಲ್ಲೆಲ್ಲೋ ಅರಸುತ್ತೇವೆ. ನಮ್ಮ ಭಾವನೆಗೆ ಸ್ಪಂದಿಸುವವರನ್ನು ಅವನು ಒಳಗಿಂದ ಕೂಗಿ ಹೇಳುತ್ತಿರುತ್ತಾನೆ. ನಾನಿರುವೆ ನಿನ್ನೊಂದಿಗೆ ಸದಾ ಸದಾ ಸದಾ…. ನಾವು ತಪ್ಪು ಮಾಡಿದರೆ ಬಲು ಕಟುವಾಗಿ ಅವನು ಖಂಡಿಸುತ್ತಾನೆ. ನಾವು ಮಾಡುವ ಪ್ರತಿಯೊಂದು ಪಾಪ ಪುಣ್ಯಗಳ ಬುತ್ತಿಯನ್ನು ನಮ್ಮೊಂದಿಗೆ ನಗುನಗುತ್ತಾ ಹೊರುತ್ತಾನೆ. ಇಡೀ ಪ್ರಪಂಚವೇ ನಮ್ಮ ವಿರುದ್ದವಾಗಿ ನಿಂತಾಗ ನಮ್ಮ ಪರ ನಿಲ್ಲುವವನು ಅವನೊಬ್ಬನೆ. ನಾವು ಎಡವಿದಾಗ ನಮ್ಮನ್ನು ಸಂಭಾಳಿಸುತ್ತಾನೆ. ನಾವು ದುಃಖಿಸಿದಾಗ ನಮ್ಮನ್ನು ಸಾಂತ್ವಾನಿಸುತ್ತಾನೆ. ನಾವು ಸೋತಾಗ, ಬಳಲಿದಾಗ, ಇನ್ನೂ ಆಗೋದೇ ಇಲ್ಲ ಎಂದಾಗ ಇನ್ನು ಒಂದೇ ಒಂದು ಹೆಜ್ಜೆ ಎಂದು ಪ್ರೋತ್ಸಾಹಿಸುತ್ತಾನೆ. ನಮಗೆ ಭಯ ಆದಾಗ ಧೈರ್ಯ ಹೇಳುತ್ತಾನೆ. ನಾವು ಗೆದ್ದಾಗ ಅವನು ಹುಚ್ಚೆದ್ದು ಕುಣಿಯುತ್ತಾನೆ. ನಮ್ಮ ಸಂತೋಷದಲ್ಲಿ ಅವನು ಸ್ವರ್ಗ ಸುಖ ಕಾಣುತ್ತಾನೆ. ನಾವು ನಮ್ಮ ಗೆಲುವಿನ ಶ್ರೇಯಸ್ಸನ್ನು ನಮ್ಮ ಎಲ್ಲಾ ಪ್ರೀತಿಪಾತ್ರರಿಗೆ ಹಂಚುತ್ತೇವೆ. ಆದರೆ ಸದಾ ನಮ್ಮೊಂದಿಗೆ, ನಮ್ಮೊಳಗೆ , ನಮ್ಮ ಜೊತೆಗೆ ಎಲ್ಲದರಲ್ಲೂ ಭಾಗಿಯಾಗಿದ್ದ ಅವನನ್ನು ಮರೆತಿರುತ್ತೇವೆ.

 

  ಒಬ್ಬ ತಾಯಿಯನ್ನು ವೃದ್ದಾಶ್ರಮಕ್ಕೆ ದೂಡುವ ಮಗನಲ್ಲೂ ಅವನು ಇರುತ್ತಾನೆ. ಅವನು ಸಂಕಟದಿಂದ ನೋವಿನಲ್ಲಿ ಬೇಯುತ್ತಿರುತ್ತಾನೆ. ಕೂಗಿ ಬೇಡುತ್ತಿರುತ್ತಾನೆ. ಆದರೆ ಮಗನು ಅದನ್ನು ಕೇಳುವುದಿಲ್ಲ. ಒಬ್ಬ ಪೊಲೀಸ್ ಕಳ್ಳನನ್ನು ಲಂಚದ ಆಸೆಗೊ, ಪ್ರಮೋಷನ್ ಆಸೆಗೂ ಕಾನೂನು ಬಾಹಿರವಾಗಿ ಸ್ವತಂತ್ರ ಪಡಿಸುವಾಗ ಅವನಲ್ಲಿರುವ ಆ ಅವನು ಬೈಯಯುತ್ತಿರುತ್ತಾನೆ. ನಿನ್ನ ವೃತ್ತಿಗೆ, ನಿನ್ನ ದೇಶಕ್ಕೆ ನೀನು ಮಾಡುತ್ತಿರುವುಧು ದ್ರೋಹ ಎಂದು ಕೂಗುತ್ತಿರುತ್ತಾನೆ. ಆದರೆ ಅವನಿಗೆ ಆ ಕೂಗು ಬೇಕಿಲ್ಲ. ಒಬ್ಬ ವೈದ್ಯನನ್ನು ಪ್ರಾಣ ಉಳಿಸೋ ದೇವರು ಎಂದು ನಂಬಿ ತಮ್ಮ ಜೀವವನ್ನೇ ಅವರ ಕೈಯಲ್ಲಿಡುವ ಆ ರೋಗಿಗೆ ಇಲ್ಲ ಸಲ್ಲದ ರೋಗವಿದೆ ಎಂದು ಹೆದರಿಸಿ ಅವನನ್ನು ಮನುಷ್ಯನಲ್ಲ, ಹಣ ಕೊಡುವ ಯಂತ್ರ ಎಂಬಂತೆ ಅವನ ರಕ್ತವನ್ನು ಹೀರುವ ಆ ನರ ರೂಪದ ರಾಕ್ಷಸನೊಳಗೂ ಆ ಅವನು ವಿರೋಧಿಸುತ್ತಾನೆ. ಇದು ತಪ್ಪು ನ್ಯಾಯವಾಗಿ ಬಾಳು, ಮಾನವೀಯತೆಯನ್ನು ಕೊಲ್ಲಬೇಡ ಎಂದು ಪರಿಪರಿಯಾಗಿ ಅಂಗಲಾಚುತ್ತಿರುತ್ತಾನೆ. ಆದರೆ ಅವನ ಆ ಕೂಗು ವೈದ್ಯನಾದ ಇವನ ಕರ್ಣಗಳಿಗೆ ತಲುಪುವುದೇ ಇಲ್ಲ.

 

 ಹೀಗೆ ಪ್ರತಿಯೊಬ್ಬ ಡಾಕ್ಟರ್, ಇಂಜಿನಿಯರ್, ಸರ್ಕಾರಿ ನೌಕರ, ಶಿಕ್ಷಕ, ಸಿವಿಲ್ ಕಂಟ್ರಾಕ್ಟರ್, ಅಧಿಕಾರಿ, ರಾಜಕಾರಣಿ, ಮಂತ್ರಿ, ವಿಜ್ಞಾನಿ, ಪೊಲೀಸ್ ಇಷ್ಟೇ ಯಾಕೆ ತನಗೆ ಹುಟ್ಟಿರುವುದು ಹೆಣ್ಣು ಮಗು ಎಂದು ಹಸುಳೆಯನ್ನು ಜೀವಂತವಾಗಿ ದಹನ ಮಾಡುವ ನರರೂಪದ ರಾಕ್ಷಸರಲ್ಲೂ , ತಾನು ಒಂದು ಹೆಣ್ಣಿನ ಹೊಟ್ಟೆಯಲ್ಲಿ ಹುಟ್ಟಿರುವುದು ಎಂಬುದನ್ನು ಮರೆತು ಮತ್ತೊಂದು ಹೆಣ್ಣನ್ನು ತಮ್ಮ ಆಸೆ ತೀರಿಸಿಕೊಳ್ಳುವ ಭೋಗದ ವಸ್ತುವಂತೆ ಕಾಣುವ ಕಿರಾತಕರಲ್ಲೂ ತಮ್ಮನ್ನು ನಂಬಿ ಇಡೀ ರಾಜ್ಯವನ್ನು ತಮ್ಮ ಕೈಯಲ್ಲಿತ್ತಿರುವ ಕೋಟ್ಯಾಂತರ ಮತದಾರರ ನಂಬಿಕೆಗೆ ದ್ರೋಹ ಬಗೆದು ಸಾಕು ಸಾಕೆನ್ನುವಷ್ಟು ತಿಂದು ತೇಗಿ ನಾಳೆ ನಮ್ಮ ಮಕ್ಕಳಿಗೂ ಆಗಲಿ ಮೊಮ್ಮಕ್ಕಳಿಗೂ ಆಗಲಿ ಎಂದು ತಲೆಮಾರಿಗಾಗುವಷ್ಟು ಲೂಟಿ ಹೊಡೆಯುವ ಪ್ರತಿಯೊಬ್ಬ ಬಕಾಸುರನಲ್ಲಿಯೂ, ದೇವರಿಗೆ ತಾನೊಬ್ಬನೇ ಹತ್ತಿರ ಭೂಮಿಯ ಮೇಲಿನ ಮುಕ್ಕೋಟಿ ದೇವರುಗಳೂ,, ನವಗ್ರಹಗಳೂ, ಅಷ್ಟದಿಕ್ಪಾಲಕರು ಮತ್ತು ಸರ್ವವೂ ನನ್ನ ಅಧೀನದಲ್ಲೇ ಇರುವುದು, ನಿಮಗೆ ಬೇಕಾದದ್ದು ನಾನು ಮಾಡಿಕೊಡುತ್ತೇನೆ ನನ್ನನ್ನು ಸಂಪೂರ್ಣವಾಗಿ ನಂಬಿ ಎಂದು ಕೋಟ್ಯಂತರ ಮುಗ್ಧ ಜನರನ್ನು ನಂಬಿಸಿ ಪಂಗನಾಮ ಹಾಕುವ, ಹಾಕುತ್ತಿರುವ ಎಲ್ಲಾ ಆಧಮರಲ್ಲೂ ಇರುವ ಆ ಅವನು ದಿನಕ್ಕೆ ಅದೆಷ್ಟೋ ಬಾರಿ ಅತ್ತಿರುತ್ತಾನೆ. ಬೇದಿರುತ್ತಾನೆ. ಕುಪಿತಗೊಂಡಿರುತ್ತಾನೆ. ಅಂಗಲಾಚಿರುತ್ತಾನೆ. ಇಷ್ಟು ದ್ರೋಹ ಬಗೆಯುತ್ತಿದ್ದಾರಲ್ಲ ಎಂದು ಅದೆಷ್ಟು ಮರುಗಿರುತ್ತಾನೆ. ಅದರ ಲೆಕ್ಕವೇ ಇಲ್ಲ. ಉಹೆಗೂ ಮೀರಿದ ದುಃಖದ ಮಡುವಿನಲ್ಲಿರುವವನು ಆ ಅವನು.  ದಿನವೂ ಅದೆಷ್ಟು ಗೊಂದಲ ನಿಮಗೆ, ಅದೆಷ್ಟು ವಿಮರ್ಶೆ ನಿಮಗೆ, ಅದೆಷ್ಟು ತರ್ಕಗಳು, ಯುದ್ದಗಳು ನಿಮ್ಮಲ್ಲಿ, ಇದೆಲ್ಲಾ ಯಾಕೆ ಎಂದು ಒಮ್ಮೆ ಯೋಸಿಸಿ. ಉತ್ತರ ಏನು ಗೊತ್ತಾ? ನಿಮ್ಮೊಳಗೆ ಇರುವ ಆ ಅವನು ಹೇಳುವುದನ್ನು ಒಮ್ಮೆ ಕಿವಿಗೊಟ್ಟು ಕೇಳಿ!

ಆಗ ನಿಮಗೆ ಗೊತ್ತಿಲ್ಲದೆ ನಿಮ್ಮ ಜೀವನ ತುಂಬಾ ಸರಳವಾಗುತ್ತೆ. ನಿಮಗೆ ಆಶ್ಚರ್ಯ ಎನಿಸುವಷ್ಟು ಸುಸೂತ್ರವಾಗಿ ಹೋಗುತ್ತೆ. ನನ್ನ ಜೀವನ ಹೀಗೂ ಇರಬಹುದ ಎಂಬ sweet surprise ನಿಮಗೆ ಆಗುತ್ತೆ. ಎಲ್ಲವನ್ನು ಇದ್ದ ಹಾಗೆ ಸ್ವೀಕರಿಸಿ ಬಿಡಿ. ಯಾರ ಮಾತಿಗೂ ನಿಮ್ಮ Assumption ಬೇಡ. ನಿಮ್ಮ ಮನಸ್ಸಿನಲ್ಲಿರುವುದನ್ನು ಇದ್ದ ಹಾಗೆ ಹೇಳಿ ಬಿಡಿ. ಯಾವ ಅಡೆತಡೆ ಬೇಡ. ಸತ್ಯ, ನ್ಯಾಯ, ಧರ್ಮ, ಒಂದಷ್ಟು ಪ್ರೀತಿ, ಸ್ವಲ್ಪ ಮಾನವೀಯತೆ, ಇದಷ್ಟೆ ಅವನಿಗೆ ನೀವು ಕೊಡಬೇಕಾಗಿರುವುದು. ಅದಕ್ಕೆ ಅವನು ತನ್ನ ಕೃತಜ್ಞತೆ ಸಲ್ಲಿಸುವ ಬಗೆಗೆ ಒಂದು ಅದ್ಭುತವಾದ ಬಹುಮಾನ ಕೊಡುತ್ತಾನೆ. ಅದೇನು ಅಂದರೆ ನೆಮ್ಮದಿ, ಶಾಂತಿ, ಹೃದಯದ ಆಳದಿಂದ ಹೊಮ್ಮುವ ಸಂತೋಷ ಇದೆಲ್ಲ ಕೋಟಿ ದುಡಿದರೂ ಸಿಗದು. ಹಗಲು ರಾತ್ರಿ ಶ್ರಮಿಸಿದರು ಇಲ್ಲ. ಅಷ್ಟು ಅತ್ಯಮೂಲ್ಯವಾದ ಸಂಬಂಧ ನಿಮ್ಮ ಮತ್ತು ನಿಮ್ಮೊಳಗೆ ಇರುವ ಅವನ ಜೊತೆ ಇರುವುದು. ಬಣ್ಣಿಸಲು ವರ್ಣಿಸಲು, ಹೇಳಿಕೊಡಲು ತೋರಿಸಲು ಅಸಾದ್ಯ. ಆದರೆ ನಿಮ್ಮ ಜೊತೆ ಜೊತೆಯಲಿ ನಿಮ್ಮ ಶರೀರದಲ್ಲಿ ಶ್ವಾಸ, ನಿಮ್ಮ ಮನಸ್ಸಿನಲ್ಲಿ ವಿಶ್ವಾಸ ಇರುವವರೆಗೂ ಇರುವವನು ಅವನೊಬ್ಬನೇ. ಅವನನ್ನು ಗೌರವಿಸಿ, ಪ್ರೀತಿಸಿ, ಒಮ್ಮೆ ಅವನ ಕೂಗನ್ನು ಆಲಿಸಿ.

-ಅನುಷ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!