ಅದೊಂದು ಕಾಲವಿತ್ತು ಕೃಷಿ ಪ್ರಥಮ,ವ್ಯಾಪಾರ ಮದ್ಯಮ ಹಾಗು ಉದ್ಯೋಗ ಕೊನೆಯ ಎಂಬ ಗಾದೆಯಿತ್ತು, ಆಗ ಬಹಳ ಮಂದಿ ಸರಕಾರಿ ಉದ್ಯೋಗ ಸಿಕ್ಕರೂ ಬಿಟ್ಟು ವ್ಯವಸಾಯ ಮಾಡಿಕೊಂಡಿದ್ದ ಬಹಳಾ ಉದಾಹರಣೆಗಳನ್ನ ನೋಡಿದ್ದೇವೆ. ಆದರೀಗ ಅದಕ್ಕೆ ತದ್ವಿರುದ್ದ ವ್ಯಾಪಾರ ಪ್ರಥಮ, ಉದ್ಯೋಗ ಮದ್ಯಮ ಹಾಗು ಕೃಷಿ ಕೊನೆಯ ಆಯ್ಕೆಯಾಗಿ ಬಂದು ಬಿಟ್ಟಿದೆ.
ನಗರೀಕರಣ,ಕೈಗಾರೀಕರಣ ಹಾಗು ಅಬಿವೃದ್ದಿಯ ಹೆಸರಲ್ಲಿ ಪರಿಸರ ಹಾಳಾಗಿ ಕಾಲಕಾಲಕ್ಕೆ ಮಳೆಯಾಗದೆ, 1500ಅಡಿ ಬೋರ್ ಕೊರೆಸಿದರು ನೀರು ಒಂದು ಇಂಚು ಸಿಕ್ಕರೆ ಅದೇ ಅದೃಷ್ಟ. ಹೀಗಾಗಿ ಕ್ರಮೇಣ ರೈತರು ಉದ್ಯೋಗ ಅರಸಿ ನಗರಗಳತ್ತ ಮುಖ ಮಾಡಿದ್ದಾರೆ. ಹೀಗೆ ಒಂದೋ ಎರೆಡೋ ಹಳ್ಳಿಗಲ್ಲಿ ಹಾಗಿದ್ದರೆ ಚಿಂತಿಸುವ ಅಗತ್ಯವಿರಲಿಲ್ಲ ಇಡೀ ದೇಶದ ಕಥೆ, ಅದರಲ್ಲೂ ಜೀವನದಿಗಳಿಲ್ಲದ ದಕ್ಷಿಣ ಭಾರತದವರಾದ ನಮ್ಮ ಕತೆಯೇನು? ಬಯಲುಸೀಮೆಗಳ ಕುಡಿಯುವ ನೀರಿಗೆ ಗತಿಯೇನು?
ನಮ್ಮ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ, ನನ್ನ ಸಿರಾ ತಾಲ್ಲೂಕಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಯಾವ ಜಲಾಶಯ ಯಾವ ನದಿಯಿದೆ? ಈಗಲೇ ಗ್ರಾಮೀಣ ಪ್ರದೇಶದಿಂದ ವಲಸೆ ಹೋಗಿ ಬೆಂಗಳೂರಿನಂತ ಆನೇಕ ನಗರಗಳು ಈ ದೇಶದಲ್ಲಿ ತುಂಬಿದ ತಕ್ಕಡಿಗಳಾಗಿವೆ. ಇದೊಂದೇ ಒಂದು ಮೂಲ ತೊಂದರೆಯಿಂದ ಅನೇಕ ತೊಂದರೆಗಳು(ನಿರುದ್ಯೋಗ,ಮೂಲಸೌಕರ್ಯಗಳ ಕೊರತೆ ಹಾಗು ಹಲವು).
ಇಷ್ಟಕ್ಕೆ ನಿಂತರೆ ಪರವಾಗಿಲ್ಲ ಇದೇ ರೀತಿ ಮುಂದುವರೆದು ಹೀಗೆ ರೈತರ ಸಂಖ್ಯೆ ತೀರ ಕಡಿಮೆಯಾದರೆ ಈಗಲೇ ಆಹಾರದ ಕೊರತೆ ಎದುರಿಸುತ್ತಿರುವ ನಮ್ಮ ದೇಶದ ಗತಿಯೇನು? ವೆನಿಜುವೆಲಾ ಥರ ನಮ್ಮ ದೇಶಕ್ಕೆ ಆಹಾರದ ಕೊರತೆ ಬಂದರೆ? (ಸಾಕಷ್ಟು ದುಡ್ಡಿದ್ದರೂ ಆಹಾರ ಪದಾರ್ಥ ಖರೀದಿಸಲು ವಾರಗಟ್ಟಲೆ ಸರದಿ ಸಾಲಲ್ಲಿ ಮಾಲ್’ಗಳ ಮುಂದೆ 10-15 ಕಿಲೋಮೀಟರ್ ದೂರ ನಿಂತರೂ ಒಂದು ಚಿಕ್ಕ ಬಿಸ್ಕೆಟ್ ಪ್ಯಾಕೆಟ್ ಕೂಡ ಅಲ್ಲಿ ಸಿಕ್ಕಿರಲ್ಲಿಲ್ಲ) ಇನ್ನು ATM ಮುಂದೆ ಅರ್ಧ ಗಂಟೆ ನಿಲ್ಲದ ನಮ್ಮವರು!
* ಇದಕ್ಕೆಲಾ ಸೂಕ್ತ ಪರಿಹಾರವೇನು?
ದೇಶದ ಮುಂದಿನ ಭವಿಷ್ಯದ ಸ್ಥಿತಿ ಮನದಲ್ಲಿಟ್ಟುಕೊಂಡು ನಮ್ಮ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಒಂದು ಕ್ರಾಂತಿಕಾರಿ ಯೋಜನೆ ರೂಪಿಸಿದ್ದರು. ಅದು ಅವರ ಕನಸಿನ ಯೋಜನೆ ಅಂತಲೂ ಅಂದುಕೊಂಡಿದ್ದರು. ಅದೇ “ಗಂಗಾ-ಕಾವೇರಿ” ನದಿ ಜೋಡಣೆ. ಇದರ ಅರ್ಥ ಸಮುದ್ರದ ಪಾಲಾಗುತ್ತಿರುವ ಗಂಗಾ ನೀರನ್ನು ಬಳಸುವುದು. ಬರಿಯ ಗಂಗಾ ಕಾವೇರಿ ನದಿಗಳ ಜೋಡಣೆಯಲ್ಲ ಉತ್ತರದಿಂದ ದಕ್ಷಿಣದ ಎಲ್ಲಾ ನದಿಗಳನ್ನು ಜೋಡಿಸುವುದು ಹಾಗು ಆಯಾ ನದಿಗಳಿಂದ ದೊಡ್ಡ ದೊಡ್ಡ ಕೆರೆಗಳಲ್ಲಿ ನೀರಿನ ಸಂಗ್ರಹಣೆ ಮಾಡುವುದು. ಇದರಿಂದ ಅಂತರ್ಜಲ ಮಟ್ಟ ತಾನಾಗಿ ತಾನೇ ಹೆಚ್ಚಾಗುತ್ತದೆ ಹಾಗು ನಮ್ಮ ದೇಶದ ರೈತರಿಗೆ ನೀರಿನ ಯಾವುದೇ ತೊಂದರೆ ಇಲ್ಲವಾದಾಗ ಆತ ಕೃಷಿ ಬಿಟ್ಟು ನಗರಗಳಿಗೆ ಹೊಲಸೇ ಹೋಗುವುದು ತಪ್ಪುತ್ತದೆ,ಇದರಿಂದ ದೇಶದ ಆಹಾರ ಸಮಸ್ಯೆಯು ಬಗೆಹರಿಯುತ್ತದೆ, ಅಂತರಾಜ್ಯ ನದಿ ವಿವಾದಗಳಿಗೆ ತಿಲಾಂಜಲಿ ಹಾಡಿ ನ್ಯಾಯಾಲಯ ಖುಷಿ ಪಡುತ್ತದೆ, ಕೃಷಿ ಉತ್ಪನ್ನಗಳ ಹೆಚ್ಚು ಹೆಚ್ಚು ರಫ್ತಿನಿಂದ ದೇಶದ ಆರ್ಥಿಕ ಸ್ತಿತಿಯು ಅಬಿವೃದ್ದಿ ಆಗುತ್ತದೆ(ಅನಾದಿ ಕಾಲದಿಂದಲೂ ಭಾರತದ ಹಲವು ಕೃಷಿ ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇದ್ದೆ ಇದೆ) ಇದನ್ನೆಲ್ಲಾ ಯೋಚಿಸಿದ್ದ ನಮ್ಮ ಮಾಜಿ ಪ್ರದಾನಿ ಭಾರತ ರತ್ನ ಅಟಲ್ ಜಿ ಯವರಿಗೆ ಕೋಟಿ ಕೋಟಿ ನಮನ.
ಅದರೆ ಏನು ಮಾಡೋದು ಆ ಕನಸುಗಾರನ ಕನಸು ಪ್ರಾರಂಬಿಸುವ ಮೊದಲೇ ಅಧಿಕಾರ ಮುಕ್ತಾಯವಾಯಿತು.
ಇನ್ನೂ ಕಾಲ ಮಿಂಚಿಲ್ಲ. ಅಟಲ್ ಜಿ ಮಾರ್ಗದಲ್ಲೇ ನಡೆಯುತ್ತಿರುವ ನಮ್ಮ ಈಗಿನ ಪ್ರದಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಆದಷ್ಟು ಬೇಗ ಈ “ಗಂಗಾ-ಕಾವೇರಿ” ಯೋಜನೆಯನ್ನು ಪ್ರಾರಂಬಿಸಬೇಕು, ಈ ಯೋಜನೆಯಿಂದ ಕೆಲ ಸಣ್ಣ ಪುಟ್ಟ ತೊಂದರೆಗಳಾಗುವುದು ನಿಜವಾದರೂ ಮುಂದಿನ ದೇಶದ ಭವಿಷ್ಯಕ್ಕಾಗಿ ಈ ಯೋಜನೆ ಅತ್ಯಗತ್ಯ, ಈ ಯೋಜನೆ ಪೂರ್ಣಗೊಂಡರೆ ರೈತರ ಸಾಲ ಮನ್ನಗಳಂತಹ ಕಣ್ಣೊರೆಸುವ ಯೋಜನೆಗಳ ಅಗತ್ಯವಿರುವುದಿಲ್ಲ ಅಗತ್ಯವಿದ್ದರೆ ರೈತರೇ ಸರಕಾರಕ್ಕೆ ಸಾಲ ಕೊಡುವಂತಾಗುತ್ತಾರೆ.
ಇದರ ಜೊತೆ ಕೃಷಿಕರ ಜನ್-ದನ್ ಯೋಜನೆಯ ಬ್ಯಾಂಕ್ ಖಾತೆಗಳಿಗೆ ಕ್ರೆಡಿಟ್ ಕಾರ್ಡ್ ಸೌಲಬ್ಯ ಕೊಟ್ಟು ಅದನ್ನು ಬರಿಯ ಬಿತ್ತನೆ ಬೀಜ ,ಗೊಬ್ಬರ ಹಾಗು ಕೃಷಿ ಸಾಮಗ್ರಿಗಳ ಖರೀದಿಗೆ ನಿಯಂತ್ರಿಸಿ ಮೀಸಲಿರಿಸಿ, ಬೆಳೆ ಮಾರಾಟ ಮಾಡಿ ಬಂದ ಹಣ ಖಾತೆಗೆ ಜಮಾ ಮಾಡುವುದರಿಂದ ಅತೀ ಕಡಿಮೆ ಬಡ್ಡಿ ಅಥವಾ ಬಡ್ಡಿ ರಹಿತ ಸಾಲ ಜಮಾ ಮಾಡಿಕೊಂಡು ಉಳಿದ ಮೊತ್ತವನ್ನು ರೈತನಿಗೆ ಕೊಡುವುದು ಒಂದು ವೇಳೆ ಬೆಳೆ ನಷ್ಟವಾದಾಗ ಬೆಳೆ ಪರಿಹಾರದಂತಹ ಪರಿಹಾರಗಳು ಹಾಗು ಬೆಳೆ ವಿಮೆ ಬರುವುದರಿಂದ ರೈತರ ಆಯಾ ಬೆಳೆಯ ಸಾಲ ಅಲ್ಲೇ ತೀರುವುದು. ಇಂತಹ ವ್ಯವಸ್ಥೆಯಿಂದ ಕೃಷಿಕರು ಬಿತ್ತನೆ ಸಮಯದಲ್ಲಿ ಹೆಚ್ಚು ಹೆಚ್ಚು ಬಡ್ಡಿಗೆ ಸಾಲ ತಂದು ಬಿತ್ತನೆ ಮಾಡಿ ಮಾರಾಟ ಮಾಡಿದ ಹಣವನ್ನ ಬರಿಯ ಬಡ್ಡಿಗೆ ತುಂಬಿಸಿ ತನ್ನ ಮಡದಿ ಮಕ್ಕಳಿಗೆ ಊಟಕ್ಕೂ ಯೋಚನೆ ಮಾಡುವಂತೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದು ಸ್ವಲ್ಪವಾದರೂ ಕಡಿಮೆಯಾಗುತ್ತೆ.