ಲೇಖಕರು: ಎಂ.ಗೋಪಾಲಕೃಷ್ಣ ಅಡಿಗ
ಪ್ರಕಾಶಕರು: ಅಭಿನವ, 17/18-2, ಮೊದಲನೆಯ ಮುಖ್ಯ ರಸ್ತೆ, ಮಾರೇನಹಳ್ಳಿ,
ವಿಜಯನಗರ, ಬೆಂಗಳೂರು-040
ಎರಡನೆಯ ಮುದ್ರಣ: 2013, ಪುಟಗಳು: 64, ಬೆಲೆ: ರೂ.50-00
`ಅಭಿನವ’ ಪ್ರಕಾಶನವು `ಸರಸ್ವತಿ ನೆನಪು’ ಮಾಲಿಕೆಯಲ್ಲಿ ವರಕವಿ ಬೇಂದ್ರೆಯವರ ಮೇಲೆ ಒಟ್ಟೂ 14 ಕಿರು ಪುಸ್ತಕಗಳನ್ನು ತಂದಿದ್ದು, ಇದು ಮಾಲಿಕೆಯ ಮೊದಲನೆಯ ಕೃತಿ. ಪ್ರಸ್ತುತ `ಬೇಂದ್ರೆಯವರ ಕಾವ್ಯ’ ಪುಸ್ತಕದಲ್ಲಿ ಎರಡು ಲೇಖನಗಳಿವೆ; ಇವೆರಡೂ ಕನ್ನಡದ ಬೇರೆ ಬೇರೆ ಸಾಹಿತ್ಯಸಂಸ್ಕತಿಯ ಸಂದರ್ಭಗಳಲ್ಲಿ ಬಂದ ಲೇಖನಗಳು. ಮೊದಲನೆಯ ಲೇಖನ `ಬೇಂದ್ರೆಯವರ ಕಾವ್ಯ’ ಅಡಿಗರೇ ಸಂಪಾದಿಸುತ್ತಿದ್ದ `ಸಾಕ್ಷಿ’ ಪತ್ರಿಕೆಯಲ್ಲಿ ಬಂದದ್ದು. ಎರಡನೆಯ ಲೇಖನ `ಬೇಂದ್ರೆಯವರ ಉಯ್ಯಾಲೆ’. ಇದು `ಉಯ್ಯಾಲೆ’ ಸಂಕಲನಕ್ಕೆ ಬೇಂದ್ರೆಯವರ ಕೋರಿಕೆಯಂತೆ ಅಡಿಗರು ಬರೆದ ಮುನ್ನುಡಿ.
ಮೊದಲನೆಯ ಲೇಖನ `ಬೇಂದ್ರೆಯವರ ಕಾವ್ಯ’ವನ್ನು ಒಂದು ನೋವಿನ ನೆನಪಿನಲ್ಲಲ್ಲದೆ ಓದಲಾಗುವುದಿಲ್ಲ. ಕನ್ನಡದ ನವ್ಯಕಾವ್ಯ ಶುರುವಾದಾಗ ವಿಮರ್ಶೆಯ ಹೊಸ ಅರಿವು ಕೂಡ ಅದರ ಜೊತೆಗೇ ಹುಟ್ಟಿಕೊಂಡಿತು. ವಿಮರ್ಶೆ ಕೃತಿನಿಷ್ಠವಾಗಿರಬೇಕು, ವ್ಯಕ್ತಿನಿಷ್ಠವಾಗಿರಬಾರದು ಎನ್ನುವ ತೀರ್ಮಾನಕ್ಕೆ ಬಂದಿದ್ದ ಅಂದಿನ ಬರಹಗಾರರಲ್ಲಿ ಕೆಲವರು ಕೆಲವೇ ವರ್ಷಗಳಲ್ಲಿ ಬೇಂದ್ರೆಯವರ ಕವಿತೆಗಳ ಪ್ರತಿ ಪದವನ್ನೂ ಹಿಂಜಿ ಬೇಂದ್ರೆ ಸಮಾಜವಾದಿಯೋ ಸಂಪ್ರದಾಯವಾದಿಯೋ ಬರೀ ಪದಲೀಲೆಯ ಕುಶಲರೋ ಎಂದೆಲ್ಲ ತೂಕ ಹಾಕುತ್ತ ಅವರ ಕವಿತೆಗಳ ಶ್ರೇಷ್ಠತೆಯನ್ನು ಲೇವಡಿ ಮಾಡಿದರು. ಇದು ಬೇಂದ್ರೆಯವರ ಮೇಲೆ ನಡೆದ ಅಸಹಿಷ್ಣುತೆಯ ದಾಳಿಯಾಗಿತ್ತೆ ಹೊರತಾಗಿ ಸಾಹಿತ್ಯ ವಿಮರ್ಶೆಯಾಗಿರಲಿಲ್ಲ. ಆಗ ಈ ಲೇಖನವನ್ನು ಅಡಿಗರು ಬರೆದು ಖಾರವಾಗಿಯೇ ಪ್ರತಿಕ್ರಿಯಿಸಿಬೇಕಾಯಿತು. ಇದೆಲ್ಲ ಜರುಗಿದ್ದು ವರಕವಿ ಬೇಂದ್ರೆಯವರ ಬದುಕಿನ ಸಂಧ್ಯಾಕಾಲದಲ್ಲಿ. ಅಡಿಗರಂತೆ ಮತ್ತೂ ಅನೇಕ ಓದುಗರು ಸಾಹಿತ್ಯ ಕ್ಷೇತ್ರದ ಈ ಅನಪೇಕ್ಷಿತ ವಿದ್ಯಮಾನಗಳಿಂದ ನೊಂದುಕೊಂಡಿದ್ದರು. ಆ ಎಲ್ಲ ಟೀಕೆಗಳಿಗೆ ಉತ್ತರವಾಗಿ ಅಡಿಗರು ಈ ಲೇಖನವನ್ನು ಬರೆದು ತಮ್ಮ `ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಕನ್ನಡ ಸಾಹಿತ್ಯದಲ್ಲಿ ಬೇಂದ್ರೆಯವರ ಸ್ಥಾನ ಏನು ಎನ್ನುವುದನ್ನು ಅಂತಿಮವಾಗಿ ಸ್ಪಷ್ಟಗೊಳಿಸುತ್ತದೆ ಈ ಲೇಖನ. ಆದರೆ ಗೋಪಾಲಕೃಷ್ಣ ಅಡಿಗರು ಬೇಂದ್ರೆಕಾವ್ಯ ವಿಮರ್ಶಾತೀತವಾಗಿರಬೇಕು ಎಂದು ಎಲ್ಲೂ ವಾದಿಸುವುದಿಲ್ಲ. ಅವರ ದೃಷ್ಟಿಯಲ್ಲಿ ಸಾಹಿತ್ಯದ ಯಾವುದೇ ಚಟುವಟಿಕೆ ಸಾಹಿತ್ಯಸಂಸ್ಕತಿಯ ಘನತೆಗೆ ತಕ್ಕುದಾಗಿರಬೇಕು ಎನ್ನುವುದು. ಲೇಖನದ ಹೆಚ್ಚಿನ ಭಾಗವೆಲ್ಲ ಬೇಂದ್ರೆಯವರ ಪ್ರತಿಭೆಯನ್ನು ಗ್ರಹಿಸಲು ಬೇಕಾದ ಮಾನದಂಡದ ಕುರಿತಾಗಿದೆ. ಅಡಿಗರ ಇಡೀ ಪ್ರಬಂಧದ ಮೂಲಧಾತು ಇದು; “ಕನ್ನಡದ ಕವಿಗಳಲ್ಲಿ ಪಂಪ ನಾರಣಪ್ಪರ ತರುವಾಯ ಕನ್ನಡದ ಜೀವಾಳವನ್ನೇ ಹಿಡಿದು ….. ಕಾವ್ಯ ರಚನೆ ಮಾಡಿದ ಕವಿ ನಮ್ಮಲ್ಲಿ ಬೇಂದ್ರೆಯವರಲ್ಲದೆ ಬೇರೆ ಯಾರೂ ಇಲ್ಲ.” ಈ ಮಾತಿನ ವಿಸ್ತರಣೆಯೆ ಈ ಪ್ರಬಂಧ. ಕನ್ನಡದ ನವ್ಯಸಾಹಿತ್ಯದ ಚಳುವಳಿಗೆ ನವೋದಯಕಾಲದ ಸಾಹಿತ್ಯದ ಬಗ್ಗೆ ಸಾರಾಸಗಟಾಗಿ ತಾತ್ಸಾರವಿತ್ತು ಎನ್ನುವ ತಪ್ಪು ಗ್ರಹಿಕೆಯನ್ನು ಅಡಿಗರ ಈ ಪ್ರಬಂಧ ದೂರ ಮಾಡುತ್ತದೆ.
ಎರಡನೆಯ ಲೇಖನ, ಬೇಂದ್ರೆಯವರ `ಉಯ್ಯಾಲೆ’ ಕವನ ಸಂಕಲನಕ್ಕೆ ಅಡಿಗರು 1952ರಷ್ಟು ಹಿಂದೆಯೇ ಬರೆದಿದ್ದ ಮುನ್ನುಡಿ. ಆಗ ಅಡಿಗರು ಇನ್ನೂ ತನ್ನನ್ನು ನವೋದಯದೊಂದಿಗೆ ಗುರುತಿಸಿಕೊಳ್ಳುತ್ತಿದ್ದರು. ಅವರು `ಚಂಡೆ ಮದ್ದಳೆ’ ಸಂಕಲನವನ್ನು ಪ್ರಕಟಿಸುತ್ತ ತನ್ನ ನವ್ಯ ಕಾವ್ಯಮಾರ್ಗದ ಕುರಿತು ಘೋಷಿಸಿಕೊಂಡದ್ದು 1954 ರಲ್ಲಿ. ಬೇಂದ್ರೆಯವರ ಕವಿತೆಗಳಿಗೆ ಅವರಿಗಿಂತ ತಲೆಮಾರು ಕಿರಿಯರಾದ ಅಡಿಗರು ಮುನ್ನುಡಿ ಬರೆಯುವುದು ಹಾಗೂ, ಅಡಿಗರ `ಭೂಮಿಗೀತ’ಕ್ಕೆ ಅವರಿಗಿಂತ ಸುಮಾರು 14 ವರ್ಷ ಕಿರಿಯರಾದ ಅನಂತಮೂರ್ತಿ ಮುನ್ನುಡಿ ಬರೆಯುವುದು-ಎರಡೂ ನನಗೆ ದೊಡ್ಡ ಸೋಜಿಗವಾಗಿದೆ. ಸಾಹಿತ್ಯದಲ್ಲಿ ಸಾಮಾನ್ಯವಾಗಿ ಹಿರಿಯರನ್ನು ಕಿರಿಯರಾಗಲೀ ಕಿರಿಯರನ್ನು ಹಿರಿಯರಾಗಲೀ ಒಪ್ಪಿಕೊಳ್ಳುವುದು ಕಡಿಮೆ. ವಿಶೇಷವಾಗಿ ಇಬ್ಬರ ನಡುವೆ ತಲೆಮಾರಿನಷ್ಟು ಅಂತರವಿರುವಾಗ. ಆದರೆ ಸುಮಾರು ಎರಡು ದಶಕಗಳ ನಂತರ ಅಡಿಗರು ಮತ್ತೆ ಬೇಂದ್ರೆಕಾವ್ಯಕ್ಕೆ ಮರಳಿ ಓರ್ವ ಸಹೃದಯ ವಿಮರ್ಶಕನಾಗಿ ಸ್ಪಂದಿಸತೊಡಗುತ್ತಾರೆ. ಬೇಂದ್ರೆಯವರ ಕುರಿತು “ಇನ್ನೂ ಬರೆಯಬೇಕಿತ್ತು, ಬರೆಯಲಾಗಲಿಲ್ಲ” ಎಂದು ಅಡಿಗರು ತಮ್ಮ ಕೊನೆಗಾಲದಲ್ಲಿ ಉದ್ಗಾರವೆತ್ತಿದ್ದಾರೆ. . `ಉಯ್ಯಾಲೆ’ಗೆ ಬರೆದ ಮುನ್ನುಡಿಗೆ ಅಡಿಗರು ಒಂದು ಸುದೀರ್ಘವಾದ ಪ್ರಸ್ತಾವನೆಯನ್ನು ಹಾಕಿಕೊಂಡು, ಕೊನೆಗೆ “ಹೀಗೆ ಆಧುನಿಕ ಯುಗದ ಕಾವ್ಯವಾಣಿಯನ್ನು ರೂಪುಗೊಳಿಸಿದ್ದು ಮಾತ್ರವಲ್ಲ, ಈ ಯುಗದ ವಾಣಿಯೂ ಆದರು ಬೇಂದ್ರೆ” (ಪು.27) ಎನ್ನುತ್ತಾರೆ. ಬಹುಶಃ ಈ ಗ್ರಹಿಕೆಯೇ ವಿವರವಾಗಿ `ಉಯ್ಯಾಲೆ’ಗೆ ಬರೆದ ಈ ಮುನ್ನುಡಿಯಾಗಿದೆ. ಬೇಂದ್ರೆಯವರ `ಉಯ್ಯಾಲೆ’ ಕವನಸಂಕಲನದಲ್ಲಿ ನಾಲ್ಕು ಮುಖ್ಯ ಭಾಗಗಳಿವೆ : `ಉಯ್ಯಾಲೆ’, `ತರಂಗ’, `ಏರಿಳಿತ’, ಹಾಗೂ `ಕರುಳಿನ ವಚನಗಳು’. ಅಡಿಗರು ಈ ನಾಲ್ಕೂ ಗುಂಪಿನ ಕವಿತೆಗಳನ್ನು ಪ್ರತ್ಯೇಕವಾಗಿ ವಿಮರ್ಶಿಸುತ್ತ ಸಾನೆಟ್ಗಳಲ್ಲಿ, ಚೌಪದದ ಕಟ್ಟುಗಳಲ್ಲಿ, ಹಾಡು ಹಾಗೂ ವಚನ ಕವನಗಳಲ್ಲಿ ಬೇಂದ್ರೆ ತೋರಿದ ಅಸಾಧಾರಣವಾದ ಸಾಧನೆಯ ವಿಶ್ಲೇಷಣೆ ಮಾಡಿ ಅವುಗಳಲ್ಲಿರುವ ಶ್ರೇಷ್ಠ ಕಾವ್ಯಗುಣವನ್ನು ಗುರುತಿಸುವ ಪ್ರಯತ್ನ ಮಾಡುತ್ತಾರೆ. ಇಲ್ಲಿರುವ ಕವನಗಳು ಶ್ರೇಷ್ಠವಾಗಿವೆ ಎನ್ನುವುದು ಮಾತ್ರವಲ್ಲ, ಇಡೀ `ಉಯ್ಯಾಲೆ’ಯಲ್ಲಿ “ಹೊಸಗನ್ನಡಭಾಷೆಯ ಪರಿಪಾಕದ ಕಾರ್ಯ” ನಡೆದಿದೆ ಎನ್ನುವ ಅನುಭವ ಗೋಪಾಲಕೃಷ್ಣ ಅಡಿಗರದಾಗಿದೆ. ಅವರು ಬೇಂದ್ರೆಕಾವ್ಯವನ್ನು ವಿಶ್ಲೇಷಿಸುವ ಈ ರೀತಿ ಕವಿತೆಗಳನ್ನು ಓದಲು ಬೇಕಾದ ಮಾರ್ಗವನ್ನು ನಿರ್ಮಿಸುತ್ತದೆ.