`ನನ್ನಿ’–(ಕಾದಂಬರಿ)
ಲೇಖಕ: ಕರಣಂ ಪವನ್ ಪ್ರಸಾದ್
ಪ್ರಕಾಶಕರು; ಕೊಂಕೇವ್ ಮೀಡಿಯಾ ಕಂಪನಿ, ಬೆಂಗಳೂರು-78
ಪ್ರಕಟಣೆಯ ವರ್ಷ; 2015, ಪುಟಗಳು: 188, ಬೆಲೆ: ರೂ.150-00
ಕ್ರಿಶ್ಚಿಯನ್ ನನ್ ಒಬ್ಬಳು (ಆಕೆಯನ್ನು ಕಾದಂಬರಿಯ ಉದ್ದಕ್ಕೂ ಕೆಲವೊಮ್ಮೆ ಸಿ.ರೋಣ ಎಂದೂ ಕೆಲವೊಮ್ಮೆ ಸಿಸ್ಟರ್ ರೋಣ ಎಂದೂ ಕರೆಯಲಾಗಿದೆ) ಬದುಕಿನ ವಾಸ್ತವಾಂಶಗಳ ಚೌಕಟ್ಟಿನಲ್ಲಿ ಧಾರ್ಮಿಕ ಸಂಘಟನೆಯೊಂದರ ಚಟುವಟಿಕೆಗಳ ಸತ್ಯಾನ್ವೇಷಣೆ ನಡೆಸುವುದು ಈ ಕಾದಂಬರಿಯ ಕೇಂದ್ರ ವಸ್ತು. ಇದು ಕಾದಂಬರಿಯ ಮೇಲ್ನೋಟ ಮಾತ್ರ. ಈ ಕಾದಂಬರಿಯ ಉದ್ದೇಶದಲ್ಲಿ ಮನುಷ್ಯನ ಮೂಲ ಪ್ರವೃತ್ತಿಗಳ ಹುಡುಕಾಟವೂ ಮುಖ್ಯವಾಗಿದೆ. ಕಾದಂಬರಿಯ ಅನ್ವೇಷಣೆಯ ಕುತೂಹಲ ಇನ್ನೂ ವಿಶಾಲವಾದದ್ದು. ಕ್ರಿಸ್ತಸ್ವಾಮಿಯ ಹೆಸರನ್ನು ನಿರಂತರವಾಗಿ ಜಪಿಸುವ ಹಾಗೂ ತನ್ನ ಎಲ್ಲಾ ಸಫಲ-ವಿಫಲ ಕೆಲಸಗಳಿಗೆ ಕ್ರಿಸ್ತನನ್ನೇ ಹೊಣೆ ಮಾಡುವ ಕಲ್ಕತ್ತಾ ಮೂಲದ ಮದರ್ ಎಲೆಸಾ ಇಲ್ಲಿ ಕ್ರೈಸ್ತ ಧರ್ಮವನ್ನು ಪ್ರತಿನಿಧಿüಸುವಾಕೆ. ಮದರ್ ಎಲೆಸಾ ಇಂದಿನ ಎಲ್ಲಾ ಧಾರ್ಮಿಕ ಚಟುವಟಿಕೆಗಳ ನೈಜ ಸ್ವರೂಪವನ್ನು ಕಾಣಿಸುವ ಕಿಟಕಿಯಂತೆ ಕಾದಂಬರಿಯ ಉದ್ದಕ್ಕೂ ಪ್ರಸ್ತುತವಾಗಿರುತ್ತಾಳೆ. ಧರ್ಮಕ್ಕೆ ನಿಕಟವಾಗಿರುವ ಮನುಷ್ಯ ತನ್ನ ಅರ್ಥ ಮತ್ತು ಕಾಮಗಳನ್ನು ನಿರ್ವಹಿಸುವಾಗ ಇಬ್ಬಂದಿಯಾಗುತ್ತಾನೆ ಎನ್ನುವುದು ಕಾದಂಬರಿಯ ಆಶಯ. ಕ್ರಿಶ್ಚಿಯಾನಿಟಿ ಕ್ರಿಸ್ತನ ಆಶಯದಂತೆ ಇರಬೇಕು, ಕ್ರಿಸ್ತನ ಮೂಲ ಆಶಯವನ್ನು ಚರ್ಚು ವ್ಯಾಖ್ಯಾನಿಸಬಾರದು ಎನ್ನುವುದು ಕಾದಂಬರಿಯ ಕೇಂದ್ರ ಪಾತ್ರವಾದ ಸಿಸ್ಟರ್ ರೋಣಳ ನಿಲುವು. ಆದ್ದರಿಂದ ಕ್ರಿಸ್ತನ ಆಶಯಕ್ಕೆ ಅನುಗುಣವಾಗಿಲ್ಲದ ಚರ್ಚಿನ ವರ್ತನೆಯನ್ನು ಆಕೆ ವಿರೋಧಿಸುತ್ತಾಳೆ. ಕ್ರಿಸ್ತನ ಹೆಸರಿನಲ್ಲಿ ಹಾಗೂ ಸೇವೆಯ ನೆಪದಲ್ಲಿ ನಡೆಯುವ ಲೇವಾದೇವಿ ಕೂಡ ಇಲ್ಲಿ ವಿಮರ್ಶೆಗೆ ಒಳಗಾಗುತ್ತದೆ. ಆದರೆ ಕೊನೆಗೂ ಇಲ್ಲಿ ಗೆಲ್ಲುವುದು ಬದುಕಿನ ಕ್ರೂರ ವಾಸ್ತವಗಳೇ. ಧರ್ಮದೊಳಗಿನ ಮಾನವೀಯತೆಯ ಮರ್ಮವನ್ನು ಹುಡುಕಲು ಹೊರಟ ನನ್ ತಾನೇ ಬಿಗಿದುಕೊಂಡ ಧರ್ಮದ ಪಾಶಕ್ಕೆ ಬಲಿಯಾಗುತ್ತಾಳೆ. ಆಕೆಯ ಅನ್ವೇಷಣೆಯ ಸೆಳೆತವೇ `ನನ್ನಿ’. ಧರ್ಮದ ತಿರುಳು ಇರುವುದು ಅದನ್ನು ಕುರಿತ ಮಾತುಗಳಲ್ಲಲ್ಲ, ಧರ್ಮದ ನಿಷ್ಕಪಟವಾದ ಆಚರಣೆಯಲ್ಲಿ ಎನ್ನುವುದೇ `ನನ್ನಿ’. `ನನ್ನಿ’ ಕಾದಂಬರಿಯು ಜಗತ್ತಿನಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಎಲ್ಲಾ ಪ್ರದರ್ಶನಗಳನ್ನು ಸಂದೇಹದಿಂದ ನೋಡುತ್ತದೆ ಎಂದು ನಾನು ಪ್ರಸ್ತುತ ಜಗತ್ತಿನ ವಿದ್ಯಮಾನಗಳಿಗೆ ಅನ್ವಯಿಸುವಂತೆ ಓದಬಯಸುತ್ತೇನೆ. ಆದರೆ ಕಾದಂಬರಿಯಲ್ಲಿ ಮಾತ್ರ ಇದೊಂದು ರೂಪಕಾತ್ಮಕ ಬರವಣಿಗೆ ಎನ್ನುವ ಧ್ವನಿಸೂಚಕಗಳಿಲ್ಲ. ಆದರೂ ಸಹ ಓದುಗ ಇಂತಹ ಧ್ವನಿಯನ್ನು ಆರೋಪಿಸಿಕೊಂಡರೆ (ಆರೋಪಿಸಿಕೊಂಡು ಓದುವುದು ತಪ್ಪೇ!) ಕೃತಿ ಹೆಚ್ಚು ಆತ್ಮೀಯವಾಗಬಲ್ಲದು.
`ನನ್ನಿ’ ಹಠಾತ್ ಸೃಷ್ಟಿಯಾದ ಕೃತಿಯಲ್ಲ. ಇದರ ಹಿಂದೆ ಲೇಖಕರ ಆಳವಾದ ಓದು, ಸಂಶೋಧನೆ, ಹಾಗೂ ಕ್ಷೇತ್ರಕಾರ್ಯಗಳ ಸಿದ್ಧತೆಯಿದೆ. ವರ್ತಮಾನವು ಒಳಗೊಂಡಿರುವ ಚಾರಿತ್ರಿಕ ಅಂಶಗಳನ್ನು ಲೇಖಕರು ಬಹಳ ಜಾಗರೂಕತೆಯಿಂದ ಆರಿಸಿಕೊಂಡಿದ್ದಾರೆ. ಇಂತಹ ಆಯ್ಕೆ ಯಾವುದೇ ಲೇಖಕನೊಬ್ಬನ ಜವಾಬ್ದಾರಿ ಕೂಡ ಆಗಿದೆ. ಧಾರ್ಮಿಕ ವಸ್ತುವೊಂದನ್ನು ಆಯ್ಕೆ ಮಾಡಿಕೊಂಡು ಕಾದಂಬರಿಯ ಮಾಧ್ಯಮದಿಂದ ಧರ್ಮದ ವೈಚಾರಿಕತೆಯನ್ನು ಪರೀಕ್ಷೆಗೆ ಒಡ್ಡುವಾಗಿನ ರಿಸ್ಕ್ ಏನೆಂಬುದು ಲೇಖಕರಿಗೆ ತಿಳಿದಿರುವುದರಿಂದ ಅವರು ಹೆಜ್ಜೆಹೆಜ್ಜೆಗು ಎಚ್ಚರ ವಹಿಸಿರುವುದು ಸ್ಪಷ್ಟವಾಗಿದೆ. ಮೇಲ್ನೋಟದ ಓದಿನಿಂದ ಈ ಕಾದಂಬರಿಯು ಚರ್ಚುಗಳಲ್ಲಿ ನಡೆಯುವ ಅನೈತಿಕವಾದ ಹಾಗೂ ಅಮಾನವೀಯವಾದ ಚಟುವಟಿಕೆಗಳ ಚಿತ್ರಣದಂತೆ ವರದಿಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಎಲ್ಲಾ ಧಾರ್ಮಿಕ ಶ್ರದ್ಧೆಯ ಕೇಂದ್ರಗಳಿಗೂ ಕೂಡ ರೂಪಕದಂತೆ ಈ ಕಾದಂಬರಿ ಕಾಣಿಸಿಕೊಳ್ಳುವಂತಹುದು. ಈ ರೂಪಕದ ಕಲ್ಪನೆ ಓದುಗನಿಗೆ ಇಲ್ಲವಾದರೆ `ನನ್ನಿ’ಯಿಂದ ಒಂದಷ್ಟು ಸುನಾಮಿ ಅಲೆಗಳು ಸಮಾಜದಲ್ಲಿ ಕಾಣಿಸಿಕೊಳ್ಳಬಹುದು. ಈ ಕಾದಂಬರಿಯ ಧ್ವನಿ ಓದುಗರ ಗಮನಕ್ಕೆ ಬರುವಂತಾದರೆ ಕಾದಂಬರಿ ಗೆದ್ದಂತೆ. ಕಾದಂಬರಿ ಓದುಗನನ್ನು ಆತ್ಮಾವಲೋಕನಕ್ಕೆ ಪ್ರೇರೇಪಿಸುವಂತಿದೆ. `ನನ್ನಿ’ ಮನುಷ್ಯನ ಧಾರ್ಮಿಕ ಮುಖವನ್ನು ಕಾಣಿಸುವ ಕನ್ನಡಿ ಕೂಡ. `ನನ್ನಿ’ ಪದದ ಅರ್ಥವಂತಿಕೆ ಕೂಡ ಕಾದಂಬರಿಯಲ್ಲಿ ನಡೆಯುವ ಅನ್ವೇಷಣೆಗೆ ಸಾರ್ಥಕತೆಯನ್ನು ತಂದುಕೊಡುವುದಾಗಿದೆ. ಸಿಸ್ಟರ್ ರೋಣಳ ಅನ್ವೇಷಣೆಯ ಹಿಂದಿನ ಋಜು ಮನಸ್ಸು ಸಮರ್ಥವಾಗಿ ಚಿತ್ರಣಗೊಂಡಿರದಿದ್ದರೆ ಇಡೀ ಕಾದಂಬರಿ ಒಂದು ನೆಗೇಟಿವ್ ಥಿಂಕಿಂಗ್ ಆಗಿ ಬಿಡುವ ಅಪಾಯ ಎದುರಾಗುತ್ತಿತ್ತು.
ಲೇಖಕ ಕರಣಂ ಪವನ್ ಪ್ರಸಾದ್ ಮೂಲತಃ ರಂಗಭೂಮಿಯಲ್ಲಿ ಆಸಕ್ತರು. ಆದರೆ ಕಾದಂಬರಿ ಪ್ರಕಾರದಲ್ಲಿ ಕೂಡ ಇವರು ಈಗಾಗಲೆ ಹೆಸರು ಮಾಡಿದ್ದಾರೆ. 2014ರಲ್ಲಿ ಇವರು ಬರೆದ ಕಾದಂಬರಿ `ಕರ್ಮ’ ಓದುಗರನ್ನು ಗೆದ್ದಿದೆ; ವರ್ಷದೊಳಗೆ ಮೂರು ಬಾರಿ ಮುದ್ರಣಗೊಂಡು ದಾಖಲೆ ಮಾರಾಟವನ್ನು ಕಂಡಿರುವುದಷ್ಟೇ ಅಲ್ಲ, ಇಂಗ್ಲಿಷಿಗೆ ಕೂಡ ಈಗಾಗಲೆ ಅನುವಾದಗೊಂಡಿದೆ.( ಇಂಗ್ಲಿಷ್‍ಗೆ ಅನುವಾದಿಸಿದವರು ಇದೇ ಜಿಲ್ಲೆಯ ನವೀನ ಗಂಗೋತ್ರಿ) ನನ್ನ ಅನಿಸಿಕೆಯಂತೆ ಈ ಕಾದಂಬರಿಕಾರ ಸೃಜನಶೀಲತೆಯಲ್ಲಿ ಶ್ರೀ ಎಸ್.ಎಲ್.ಭೈರಪ್ಪನವರ ಮಾರ್ಗವನ್ನು ತುಳಿದಿದ್ದಾರೆ; ವಸ್ತು, ಭಾಷೆ, ಅಧ್ಯಯನ ಹಾಗೂ ಕಾದಂಬರಿ ಪ್ರಕಾರದಲ್ಲಿ ಇವರಿಗಿರುವ ನಂಬುಗೆಯಲ್ಲಿ ಮತ್ತು ಯಶಸ್ಸಿನ ಮಾನದಂಡದಲ್ಲಿ ಕೂಡ -ಹಾಗೊಂದು ಮಾರ್ಗವಿದೆಯೆಂದಾದರೆ- ಇವರು ತುಳಿದಿರುವ ಮಾರ್ಗ ಅದೇ. ಪಾತ್ರಗಳ ಮನೋರಂಗದ ಸೂಕ್ಷ್ಮಾತಿಸೂಕ್ಷ್ಮ ಅಲೆಗಳನ್ನು ಕೂಡ ತಮ್ಮ ಪ್ರತಿಭೆಯಿಂದ ದಾಖಲಿಸಬಲ್ಲೆ ಎಂದು ಇವರು ತೋರಿಸಿಕೊಟ್ಟಿದ್ದಾರೆ. ಆದರೆ ಇವರ ಭಾಷೆ/ಶೈಲಿ ಕನ್ನಡದಲ್ಲಿ ಅನನ್ಯ ಎನ್ನಿಸುವುದಿಲ್ಲ. ಅದು ಮುಖ್ಯವಲ್ಲ ಎನ್ನುವಂತೆ ಇವರು ಕಾದಂಬರಿಯ ವಸ್ತು, ವಿವರ ಹಾಗು ತಂತ್ರಗಳಿಂದಲೇ ಎಲ್ಲವನ್ನೂ ಸಾಧಿಸುತ್ತಾರೆ. ಇವರ ಮೊದಲನೆಯ ಕಾದಂಬರಿ `ಕರ್ಮ’ ಈ ದೃಷ್ಟಿಯಿಂದ ಅಪೂರ್ವವಾದದ್ದು.
`ನನ್ನಿ’ಯಲ್ಲಿ ಕೊನೆಗೆ ಬರುವ ಕೋಮುಗಲಭೆ ಅವಾಸ್ತವಿಕವಲ್ಲದಿದ್ದರೂ ಕೂಡ ಅನಿರೀಕ್ಷಿತವೆನಿಸುತ್ತದೆ. ಕಾದಂಬರಿಯಲ್ಲಿ ಮತಾಂತರದ ಘಟನೆಗಳ ಪ್ರಸ್ತಾಪವಿದೆಯಾದರೂ ದೊಡ್ಡ ಕೋಮು ಭಾವನೆಯ ಸಂಚಲನಕ್ಕೆ ಕಾದಂಬರಿಯಲ್ಲಿ ತಕ್ಕ ಬೀಜಾಂಕುರವಾಗಿರುವುದಿಲ್ಲ. ಆದರೂ ಕಾದಂಬರಿಯು ಸೃಷ್ಟಿಸುವ ಏಕಾಗ್ರತೆಯ ಓದಿನಲ್ಲಿ ಈ ಅನಿರೀಕ್ಷಿತ ವಿದ್ಯಮಾನದ ಅನೌಚಿತ್ಯ ಗಮನಕ್ಕೆ ಬರುವುದಿಲ್ಲ. ಒಟ್ಟಿನಲ್ಲಿ `ನನ್ನಿ’ ಗಂಭೀರವಾಗಿ ಓದಿಸಿಕೊಳ್ಳುವ ಕಾದಂಬರಿ. ಕಾದಂಬರಿ ವ್ಯಾಪಕವಾಗಿ ಚರ್ಚೆಗೊಂಡರೆ ಆಶ್ಚರ್ಯವಿಲ್ಲ; ಚರ್ಚೆಗೆ ಒಳಗಾಗಬೇಕಾಗಿರುವುದು ಇಂದಿನ ಅಗತ್ಯವೂ ಹೌದು.