`ಕಾರಂತ ಚಿಂತನ’—ಕಡಲಾಚೆಯ ಕನ್ನಡಿಗರಿಂದ
ಸಂಪಾದಕರು; ನಾಗ ಐತಾಳ (ಆಹಿತಾನಲ)
ಪ್ರಕಾಶಕರು: ಅಕ್ಷರ ಪ್ರಕಾಶನ, ಹೆಗ್ಗೋಡು, ಸಾಗರ-577 417
ಪ್ರಕಟಣೆಯ ವರ್ಷ: 2000, ಪುಟಗಳು: 252, ಬೆಲೆ: ರೂ.150-00
ಹದಿನೈದು ವರ್ಷಗಳಷ್ಟು ಹಿಂದೆ ಪ್ರಕಟವಾದ ಈ ಪುಸ್ತಕ ಎಲ್ಲೂ ಅಷ್ಟೊಂದು ಚರ್ಚೆಗೊಂಡಿಲ್ಲ. ಶಿವರಾಮ ಕಾರಂತರು ಕಾಲವಾಗಿ ಕೆಲವೇ ದಿನಗಳಲ್ಲಿ ಅಮೇರಿಕೆಯಲ್ಲಿರುವ ಕನ್ನಡಿಗರ ಒಂದು ಚಿಕ್ಕ ಗುಂಪು ಶ್ರೀ ನಾಗ ಐತಾಳರ ಮನೆಯಲ್ಲಿ ಸೇರಿ ಕಾರಂತರ ಸಾಹಿತ್ಯದ ಕುರಿತು ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ಆಗ ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಕನ್ನಡದ ಹೆಸರಾಂತ ವಿಮರ್ಶಕ ಹಾಗೂ ಸಂಸ್ಕøತಿ ಚಿಂತಕ ಡಿ.ಆರ್.ನಾಗರಾಜ್ ಕೂಡ ಭಾಗವಹಿಸಿದ್ದರು. ನಾಗರಾಜರ ಉಪಸ್ಥಿತಿಯಿಂದಾಗಿ ಅದೊಂದು ಗಂಭೀರವಾದ ಗೋಷ್ಠಿಯಾಗಿ ಮಾರ್ಪಟ್ಟಿತ್ತು. ಅಂದು ಅಲ್ಲಿ ಸೇರಿ ಮಾತನಾಡಿದ ಸುಮಾರು ಇಪ್ಪತ್ತು-ಇಪ್ಪತ್ತೈದು ಜನರ ಚಿಂತನೆಗಳೇ ವರ್ಷದೊಳಗೆ `ಕಾರಂತ ಚಿಂತನ’ ಹೆಸರಿನಲ್ಲಿ ಪ್ರಕಟವಾಗಿವೆ. ಶಿವರಾಮ ಕಾರಂತರ ಸಾಹಿತ್ಯವನ್ನು ಕುರಿತು ತಾವು ಗ್ರಹಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಎದುರಿಗೆ ಇಡುವ ಪ್ರಯತ್ನ ಈ ಲೇಖನಗಳಲ್ಲಿದೆ. ಈ ಬರಹಗಳಲ್ಲಿ ಕಾರಂತರ ಕುರಿತ ಪ್ರೀತಿ ಮತ್ತು ಅಭಿಮಾನದ ನಿವೇದನೆಯಿದೆ. ಸಂಪಾದಕರಾದ ನಾಗ ಐತಾಳರು ಕಾರಂತರ ಕೋಟ ಊರಿನವರು ಎನ್ನುವುದಷ್ಟೇ ಈ ಕೃತಿ ಪ್ರಕಟವಾಗಲು ಕಾರಣವಲ್ಲ. ಕಾರಂತರು ದಕ್ಷಿಣ ಕನ್ನಡದ ಕಡಲತಡಿಯಲ್ಲಿ ನಿಂತು ನಮ್ಮ ಬದುಕಿನ ಗಹನವಾದ ಪ್ರಶ್ನೆಗಳನ್ನು ತಮ್ಮ ಕೃತಿಗಳಲ್ಲಿ ನಿರೂಪಿಸಿ ತೋರಿಸಿರುವುದು ಹೊರನಾಡ ಈ ಕನ್ನಡಿಗರನ್ನು ಬೆರಗು ಗೊಳಿಸಿದೆ. ಈ ಅಚ್ಚರಿಯಲ್ಲಿ ಹುಟ್ಟಿದ ಅಭಿಮಾನವೇ ಇದಕ್ಕೆ ನಿಜವಾದ ಕಾರಣ. ವ್ಯಕ್ತಿಯಾಗಿಯೂ ಕಾರಂತರು ಇವರನ್ನು ಪ್ರಭಾವಿಸಿದ್ದಾರೆ ಎಂದು ಇಲ್ಲಿರುವ ಹಲವು ಲೇಖನಗಳಿಂದ ವ್ಯಕ್ತವಾಗುತ್ತದೆ. ಆದ್ದರಿಂದ ಈ ಲೇಖನಗಳು ಕಾರಂತರ ವ್ಯಕ್ತಿತ್ವದ ಪರಾಮರ್ಶೆಯೂ ಆಗಿವೆ.
ಇದನ್ನು ಆಧಾರವಾಗಿಟ್ಟುಕೊಂಡು ಸಂಕಲನದ ಲೇಖನಗಳನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲನೆಯ ಭಾಗದಲ್ಲಿ ಹೆಚ್ಚಾಗಿ ಕಾರಂತರ ವ್ಯಕ್ತಿತ್ವದ ಕುರಿತ, ಅವರಿಂದ ತಮ್ಮ ಮೇಲಾದ ಪ್ರಭಾವಗಳ ಕುರಿತ ಲೇಖನಗಳಿವೆ. ಈ ಭಾಗದಲ್ಲಿ ಒಟ್ಟು ಹದಿಮೂರು ಬರಹಗಳಿದ್ದು `ಕಾರಂತರ ಕಣ್ಣಲ್ಲಿ ಇತರರು’ ಎನ್ನುವ ಬಹಳ ಮಹತ್ವವನ್ನು ಪಡೆಯಬೇಕಾಗಿದ್ದ ಲೇಖನವೊಂದಿದೆ. ಎಚ್.ವೈ.ರಾಜಗೋಪಾಲ್ ಬರೆದ ಈ ಲೇಖನ ಕನ್ನಡದ ಇನ್ನಾರೂ ಬರೆಯಲಾಗದ್ದು. ಕಾರಂತರ ಮೊಮ್ಮಕ್ಕಳಾದ ವಿಜಯಲಕ್ಷ್ಮಿ ಕೃಷ್ಣಮೂರ್ತಿ, ಮಾಲಾ ಉಲ್ಲಾಸ್, ಹಾಗೂ ವೃಂದ ಕೇಶವ ಐತಾಳ ಇವರು ತಮ್ಮ ಚಿಕ್ಕ ಬರಹಗಳಲ್ಲಿ ಅಜ್ಜ ಕಾರಂತರ ನೆನಪುಗಳನ್ನು ಮಾಡಿಕೊಂಡಿದ್ದಾರೆ. ಕಾರಂತರು ತಮ್ಮ ಬದುಕಿನುದ್ದಕ್ಕೂ ನಿರೀಶ್ವರವಾದಿಯಾಗಿದ್ದವರು. ವಸುಧಾ ಕೃಷ್ಣಮೂರ್ತಿಯವರು ದೇವರಿಗೂ ಕಾರಂತರಿಗೂ ನಡುವೆ ಒಂದು ಕಾಲ್ಪನಿಕ ಭೆಟ್ಟಿ ಮಾಡಿಸಿ ಕಾರಂತರ ಸ್ವಭಾವ ವೈಶಿಷ್ಟ್ಯವನ್ನು ಅನಾವರಣ ಮಾಡಿದ್ದು ತುಂಬ ಸೊಗಸಾಗಿದೆ. ಒಟ್ಟಿನಲ್ಲಿ ಕಾರಂತರನ್ನು ಓರ್ವ ವ್ಯಕ್ತಿಯನ್ನಾಗಿ ಅರಿಯುವ ಪ್ರಯತ್ನ ಈ ಭಾಗದಲ್ಲಿ ಮುಖ್ಯವಾಗಿದೆ. ಎರಡನೆಯ ಭಾಗ ಕಾರಂತರ ಕಾದಂಬರಿಗಳ ಕುರಿತಿದೆ. ಇದರಲ್ಲಿ ಹದಿನೈದು ಬರಹಗಳಿದ್ದು ಕಾರಂತರ ಕಾದಂಬರಿಗಳಾದ ದೇವದೂತರು, ಚೋಮನ ದುಡಿ, ಮರಳಿ ಮಣ್ಣಿಗೆ, ಔದಾರ್ಯದ ಉರುಳಲ್ಲಿ, ಕುಡಿಯರ ಕೂಸು, ಅಳಿದ ಮೇಲೆ, ಒಂಟಿ ದನಿ, ಇನ್ನೊಂದೇ ದಾರಿ, ಮೂಕಜ್ಜಿಯ ಕನಸುಗಳು, ಮೈಮನಗಳ ಸುಳಿಯಲ್ಲಿ, ಕೇವಲ ಮನುಷ್ಯರು, ಧರ್ಮರಾಯನ ಸಂಸಾರ, ಕಣ್ಣಿದ್ದೂ ಕಾಣರು ಹಾಗೂ, ಅಂಟಿದ ಅಪರಂಜಿ ಕೃತಿಗಳ ಸಮೀಕ್ಷೆಗಳಿವೆ.
`ಕಾರಂತ ಚಿಂತನ’ಕ್ಕೆ ಯು.ಆರ್.ಅನಂತಮೂತಿಯವರು ಬರೆದ ಮುನ್ನುಡಿಯೊಂದಿದ್ದು ಇದರಲ್ಲಿ ಕಾರಂತರನ್ನು ಒಟ್ಟಾರೆಯಾಗಿ ತಿಳಿಯಬೇಕಾದ ನಮ್ಮ ಪ್ರಯತ್ನಗಳು ಇಂದು ಹೇಗಿದ್ದರೆ ಸರಿ ಎನ್ನುವ ಚಿಂತನೆಯನ್ನು ಮುಂದಿಡಲಾಗಿದೆ. ಅವರು ಬರೆದ `ಕಾರಂತರ ಅಥೆಂಟಿಕ್ ಪ್ರಪಂಚ’ದಷ್ಟೇ ಈ ಮುನ್ನುಡಿ ಕೂಡ ಗಮನ ಸೆಳೆಯಬೇಕಾದ್ದು ಎಂದು ನನ್ನ ಅನಿಸಿಕೆ. ಕರ್ನಾಟಕದೊಳಗಿನ ಕನ್ನಡ ಬರಹಗಾರರ ಮನಸ್ಥಿತಿಯನ್ನು ತಿಳಿದವರಿಗೆ ಅಮೇರಿಕೆಯಲ್ಲಿರುವ ನಮ್ಮ ಕನ್ನಡಿಗರ ಈ ಪ್ರಯತ್ನ ಎಷ್ಟು ಪ್ರಾಂಜಲವಾದ್ದು ಎಂದು ಬೇರೆ ವಿವರಿಸಬೇಕಾಗುವುದಿಲ್ಲ. ಇವರೆಲ್ಲರ ಉತ್ಕಟವಾದ ಕನ್ನಡ ಪ್ರಿತಿಯಿಂದ ನಾವು ತುಂಬಾ ಕಲಿಯಬೇಕಾಗಿದೆ. ಇವರಲ್ಲಿ ಒಂದಿಬ್ಬರು ಮಾತ್ರ ಸಾಹಿತ್ಯವನ್ನು ಬೋಧಿಸುವ ವೃತ್ತಿಯವರು ಎನ್ನುವುದೂ ಇಲ್ಲಿ ಮುಖ್ಯ. ಪುಸ್ತಕದ ಉದ್ದಕ್ಕೂ ಕನ್ನಡಪ್ರೀತಿಯೆನ್ನುವ ಮನದಾಳದ ಭಾವನೆ ಹಾಸುಹೊಕ್ಕಾಗಿರುವುದು ಕೂಡ ಈ ಪ್ರಯತ್ನಕ್ಕೆ ಶೋಭೆ ತಂದಿದೆ. ಯಾವ ಮಾತೂ ಇಲ್ಲಿ ದೇಶಾವರಿ ಎನ್ನಿಸುವುದಿಲ್ಲ. ನಾಗ ಐತಾಳರ ಮನದಾಳದ ಈ ಮಾತುಗಳನ್ನು ಗಮನಿಸಿ; “ಇಲ್ಲಿನ ವ್ಯವಹಾರಗಳಿಗೆ ಹೊಂದಿಕೊಂಡು ನಮ್ಮ ಬಾಹ್ಯ ದೃಷ್ಟಿಯು ಸ್ವಲ್ಪ ಬೇರೆಯಾಗಿ ಕಂಡರೂ, ಅಂತರಂಗದಲ್ಲಿ ಇಂದಿಗೂ, ದೇಶಬಿಟ್ಟು ಎರಡು ಮೂರು ದಶಕಗಳಾದರೂ, ನಮ್ಮ ಕನ್ನಡತನವನ್ನು ಉಳಿಸಿಕೊಂಡೇ ಬಂದಿದ್ದೇವೆ.” ಎಲ್ಲಾದರೂ ಇರುತ್ತೇವೆ, ಆದರೆ ಕನ್ನಡವಾಗಿರುತ್ತೇವೆ ಎನ್ನುವ ಈ ಮಾತೃಭಾಷೆಯ ಆರಾಧನೆ ಸದ್ಯ ಕರ್ನಾಟಕದ ಒಳಗಂತೂ ತೆಳುವಾಗಿದೆ.