ಡ್ರಾಮಾದ ಮೂಲಕ ನೂರಾರು ಪ್ರೇಕ್ಷಕರ ಮನ ಗೆದ್ದಿರುವ ಈ ಪುಟಾಣಿಗೆ ಕೇವಲ ಐದು ವರುಷ! ತನ್ನ ವಯಸ್ಸಿಗೆ ಮೀರಿದ ಅದ್ಭುತ ನಟನೆ ಆಕೆಯದು ಎಂದರೆ ತಪ್ಪಾಗಲಾರದು. ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್ ಎಂಬ ರಿಯಾಲಿಟಿ ಶೋನಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ ಮುದ್ದು ಹುಡುಗಿಯ ಹೆಸರು ಚಿತ್ರಾಲಿ.
ಮಂಗಳೂರು ಬೋಳಾರ್ ತೇಜ್ ಪಾಲ್ ಸುವರ್ಣ ಮತ್ತು ವೈಶಾಲಿ ತೇಜ್ ಪಾಲ್ ಸುವರ್ಣ ದಂಪತಿಯ ಮಗಳು ಚಿತ್ರಾಲಿ ತನ್ನ ಮನೋಜ್ಞ ಅಭಿನಯದಿಂದ ಜನರ ಮನ ಸೆಳೆದಿರುವುದು ಮಾತ್ರವಲ್ಲ ತನ್ನದೇ ಆದ ಅಭಿಮಾನಿಗಳನ್ನು ಪಡೆದಿದ್ದಾಳೆ. ಅದೂ ಇಷ್ಟು ಕಿರಿ ವಯಸ್ಸಿನಲ್ಲಿ!
ನಾಗಿಣಿ, ನಾಗವಲ್ಲಿ, ಕಲ್ಪನಾ, ಅಜ್ಜಿ, ಶಾಲಾ ಹುಡುಗಿ, ಹನುಮಂತ ಹೀಗೆ ಯಾವುದೇ ಪಾತ್ರವಾಗಲೀ ಅದನ್ನು ಸಲೀಸಾಗಿ ನಿಭಾಯಿಸುವ ಚಿತ್ರಾಲಿ ಮೊದಲ ಬಾರಿ ದೊಡ್ಡ ವೇದಿಕೆ ಎಂದರೆ ಡ್ರಾಮಾ ಜ್ಯೂನಿಯರ್ಸ್ ವೇದಿಕೆ. ಈ ಮೊದಲು ಜಿಲ್ಲಾ ಮಟ್ಟದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವೀತಿಯ ಬಹುಮಾನ ಪಡೆದ ಈ ಕಂದಮ್ಮ ಬೇರೆ ಯಾವ ಸ್ಟೇಜ್ ಹತ್ತಿದ್ದೂ ಇಲ್ಲ. ಚಿತ್ರಾಲಿಯ ಒಳಗೆ ಹುದುಗಿದ್ದ ಪ್ರತಿಭೆ ಹೊರಗೆ ಬಂದದ್ದು ಡ್ರಾಮಾ ಜ್ಯೂನಿಯರ್ಸ್ ಆಡಿಶನ್’ನಲ್ಲಿ. ಅಲ್ಲಿಯ ತನಕ ಅವಳಲ್ಲಿ ಅಂತಹ ಟ್ಯಾಲೆಂಟ್ ಇದೆ ಎಂದು ಯಾರಿಗೂ ತಿಳಿದಿರಲಿಲ್ಲ. ಮನೆಯಲ್ಲಿ ಟಿವಿ ನೋಡುತ್ತಾ ಅದರಲ್ಲಿ ಬರುವ ಡೈಲಾಗ್’ಗಳನ್ನು ಹಾಗೆ ರಿಪೀಟ್ ಮಾಡುತ್ತಿದ್ದಳು. ಅದು ಈ ಪ್ರಾಯದ ಮಕ್ಕಳಲ್ಲಿ ಇರುವ ಸಾಮಾನ್ಯ ಪ್ರತಿಭೆ ಎಂದು ಅವಳ ಅಪ್ಪ ಅಮ್ಮ ಭಾವಿಸಿದರು. ಆದರೆ ಅದುವೇ ನಮ್ಮ ಮುದ್ದು ಮಗಳ ವಿಶೇಷ ಪ್ರತಿಭೆ ಎಂದು ಮನದಟ್ಟು ಮಾಡಿದ್ದು ಡ್ರಾಮಾ ವೇದಿಕೆ.
ಆಡಿಶನ್ ದಿನ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಸಿನಿಮಾದ ಯಾವನೋ ನೀನು ಎಂಬ ಡೈಲಾಗ್ ಹೇಳಿ ಜಡ್ಜ್’ಗಳ ಮನಗೆದ್ದ ಈ ಪೋರಿಗೆ ಯಶ್ ಅಂದ್ರೆ ಪ್ರಾಣ. ಸುಮಾರು 10 ಸಲ ಈ ಸಿನಿಮಾವನ್ನು ನೋಡಿರುವ ಚಿತ್ರಾಲಿಗೆ ಅದು ಇಷ್ಟದ ಡೈಲಾಗ್. ಇನ್ನು ನಾಟಕದಲ್ಲಿ ಮುಖ್ಯವಾಗಿ ಇರುವುದು ಡೈಲಾಗ್ ಮತ್ತು ಎಕ್ಸ್’ಪ್ರೆಶನ್. ಚಿಕ್ಕ ಮಕ್ಕಳಿಗೆ ಅದನ್ನು ಹೇಳಿಕೊಡುವುದು ತುಂಬಾನೇ ಕಷ್ಟ. ಆದರೆ ಚಿತ್ರಾಲಿಗೆ ಹಾಗಿಲ್ಲ. ನಾಟಕದ ಡೈಲಾಗ್’ಗಳನ್ನು ಅಮ್ಮ ಮೊದಲು ಕಥೆಯ ರೂಪದಲ್ಲಿ ಅವಳಿಗೆ ಹೇಳಿದರೆ ಅಪ್ಪ ಎಕ್ಸ್’ಪ್ರೆಶನ್ ಹೇಳಿ ಕೊಡುತ್ತಾರೆ. ಇದರಿಂದ ಅವಳು ಬಹು ಬೇಗನೇ ಕಲಿತು ಬಿಡುತ್ತಾಳೆ.
ಇಂತಿಪ್ಪ ಚಿತ್ರಾಲಿ ಕಿರುತೆರೆಗೆ ಕಾಲಿಟ್ಟಿದ್ದಾಳೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಿಚ್ಚ ಸುದೀಪ್ ನಿರ್ಮಾಣದ ವಾರಸ್ದಾರ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಮಿಂಚುತ್ತಿದ್ದಾಳೆ ಚಿತ್ರಾಲಿ. ಚಿತ್ರಾಲಿಯ ಅದ್ಭುತವಾದ ಅಭಿನಯಕ್ಕೆ ಮಾರು ಹೋದ ಸುದೀಪ್ ಅವಳನ್ನು ಲೀಡ್ ರೋಲ್’ಗೆ ಆಯ್ಕೆ ಮಾಡಿದ್ದಾರೆ. ಮಂಗಳೂರಿನ ಪ್ರಿಯದರ್ಶಿನಿ ಸ್ಕೂಲ್’ನಲ್ಲಿ ಯುಕೆಜಿ ಓದುತ್ತಿರುವ ಚಿತ್ರಾಲಿ ಸದ್ಯಕ್ಕೆ ಶೂಟಿಂಗ್ ನಲ್ಲಿ ಬ್ಯುಸಿ.