ಮೊನ್ನೆ ವಾಟ್ಸಪ್ನಲ್ಲಿ ಬಂದ ಜೋಕು : ಹೆದ್ದಾರಿಗಳಲ್ಲಿ ಬಾರ್ ಬೇಡವೆಂದ ಸುಪ್ರೀಂಕೋರ್ಟ್, ನಮ್ಮೂರಿಗೆ ಹೆದ್ದಾರಿಯೇ ಬೇಡವೆಂದ ಊರಿನ ಕುಡುಕರು. ಇಂತಹ ಕುಡುಕರ ಬಗೆಗಿನ ವಿಶಿಷ್ಟವಾದ ಸುದ್ದಿಯೊಂದಿದೆ.
ನವೆಂಬರ್ 8 ರ ರಾತ್ರಿ 8 ಘಂಟೆಗೆ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಮಾಡಿದ ಭಾಷಣ ದೇಶದಲ್ಲಿ ಹಲವಾರು ಬದಲಾವಣೆಗೆ ಸಾಕ್ಷಿಯಾಯಿತು. ಕೇವಲ ಕಪ್ಪುಹಣ ಮತ್ತು ಭ್ರಷ್ಟಾಚಾರ ತಡೆಯಲು ಮಾತ್ರ ನೋಟು ಅಪಮೌಲ್ಯಿಕರಣ ಮಾಡಲಾಗಿದೆ ಎಂದು ಜನರು ಅಂದುಕೊಂಡರೂ ಅವುಗಳನ್ನು ಹೊರತುಪಡಿಸಿ ಇನ್ನೂ ಹಲವು ಉಪಯೋಗಗಳಾಗಿವೆ. ಒಂದೇ ಕಲ್ಲಿನಲ್ಲಿ ಮೋದಿಯವರು ಹಲವಾರು ಹಕ್ಕಿಗಳನ್ನು ಹೊಡೆದುರುಳಿಸಿದ್ದಾರೆ. ನೋಟು ನಿಷೇಧದ ನಂತರ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಕಡಿವಾಣ ಬಿದ್ದು ಜೀವನಶೈಲಿ ಸಹಜ ಸ್ಥಿತಿಗೆ ಮರಳಿದೆ, ಉಗ್ರಗಾಮಿಗಳಿಗೆ ಹಣದ ಸರಬರಾಜು ನಿಂತಿದೆ, ದೇಶದಲ್ಲಿ ನಕ್ಸಲರ ಶರಣಾಗತಿ ಹಿಂದೆಂದಿಗಿಂತಲೂ ಹೆಚ್ಚಿದೆ, ಖೋಟಾ ನೋಟು ಹಾವಳಿಗೆ ಬ್ರೇಕ್ ಬಿದ್ದಿದೆ, ಮಾನವ ಕಳ್ಳ ಸಾಗಣೆ ಮತ್ತು ಡ್ರಗ್ಸ್ ಮಾಫಿಯಾಕ್ಕೆ ದೊಡ್ಡ ಹೊಡೆತಬಿದ್ದಿದೆ. ಕಪ್ಪು ಹಣದ ಹೊಳೆಯೇ ಹರಿಯುತ್ತಿದ್ದ ರಿಯಲ್ ಎಸ್ಟೇಟ್ ವ್ಯವಹಾರ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ, ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಿದೆ. ಇವೆಲ್ಲಾ ವಿಷಯಗಳಿಗಿಂತ ವಿಶೇಷ ಸುದ್ದಿಯೊಂದಿದೆ ಅದೇನೆಂದರೆ ಸರ್ಕಾರದ ಖಜಾನೆಗೆ ಹೆಚ್ಚಿನ ಪ್ರಮಾಣದ ಹಣ ತಾನಾಗಿಯೇ ಹರಿದು ಬರುತ್ತಿದೆ.
ಹಲವಾರು ವರ್ಷಗಳಿಂದ ಬಾಕಿಯುಳಿದ ವಿದ್ಯುತ್ ಬಿಲ್ಗಳು, ಆಸ್ತಿ ಕಂದಾಯ, ಮನೆ ಕಂದಾಯ, ಆದಾಯ ಮತ್ತಿತರ ತೆರಿಗೆಗಳು ಸರ್ಕಾರಿ ಮಾಲೀಕತ್ವದ ಮಳಿಗೆಗಳ ಬಾಡಿಗೆ ಪಾವತಿಯಾಗುತ್ತಿದೆ. ಜನ ತಮ್ಮ ಬಳಿಯಿದ್ದ ಹಣವನ್ನು ಹೇಗಾದರೂ ಮಾಡಿ ಖರ್ಚು ಮಾಡಬೇಕೆಂದು ನಿರ್ಧರಿಸಿದಂತಿದೆ, ಅಂತೆಯೇ ಕಳೆದ ನವೆಂಬರ್ 8 ರಿಂದ ರಾಜ್ಯದಲ್ಲಿ ಮದ್ಯ ಮಾರಾಟ ಹೆಚ್ಚಿಗೆಯಾಗಿದೆ. ನವೆಂಬರ್ 9 ರಿಂದ ಡಿಸೆಂಬರ್ 26 ರ ತನಕ ಒಟ್ಟು 2029 ಕೋಟಿಗಳ ಮದ್ಯ ವ್ಯವಹಾರ ನಡೆದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1725 ಕೋಟಿಯಷ್ಟು ವಹಿವಾಟು ನಡೆದಿತ್ತು, ಅಂದರೇ ಸುಮಾರು 300 ಕೋಟಿಯಷ್ಟು ಮದ್ಯ ಮಾರಾಟ ಏರಿಕೆ ಕಂಡಿದೆ. ನೋಟು ನಿಷೇಧವಾಗಿದ್ದಕ್ಕೆ ಕಪ್ಪು ಕುಳಗಳು ಮನನೊಂದು ಮದ್ಯಕ್ಕೆ ಮೊರೆಯೋಗಿದ್ದಾರೋ ಅಥವಾ ಹಣ ಖರ್ಚು ಮಾಡುವ ಸಲುವಾಗಿ ಸಾಮಾನ್ಯ ಜನ ಕೂಡ ಮದ್ಯ ಖರೀದಿಸಿದ್ದಾರೋ ದೇವರೇ ಬಲ್ಲ ! ಮದ್ಯ ಮಾರಾಟದಲ್ಲಿ ಏರಿಕೆ ಒಂದೇ ದಿನ ಕಂಡುಬಂದದ್ದಲ್ಲ. ಈ ವರ್ಷ ನವೆಂಬರ್ 9 ರಂದು 62 ಕೋಟಿ ವ್ಯವಹಾರ ನಡೆದಿದ್ದರೆ ಕಳೆದ ವರ್ಷ ನವೆಂಬರ್ 9 ರಂದು ಕೇವಲ 38 ಕೋಟಿಯಿತ್ತು. ಅಂದಿನಿಂದ ಶುರುವಾಗಿ ಡಿಸೆಂಬರ್ನಲ್ಲಿ ಸತತ ಏರಿಕೆ ಕಂಡಿದೆ ಅಂದರೇ ಡಿಸೆಂಬರ್ 9 ರಂದು 117 ಕೋಟಿ ಮತ್ತು ಡಿಸೆಂಬರ್ 23 ರಂದು 123 ಕೋಟಿ ವಹಿವಾಟು ನಡೆದಿದೆ. ಇದು ಕೇವಲ ಕರ್ನಾಟಕದ ಸ್ಥಿತಿಯಾದರೆ ಉಳಿದ ರಾಜ್ಯಗಳ ಮಾರಾಟ ಗಣನೆಗೆ ತೆಗೆದುಕೊಂಡರೆ ಅದರು ಸಾವಿರಾರು ಕೋಟಿಯಾಗುತ್ತದೆ.
ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಅಥವಾ ಹೊಸ ವರ್ಷದ ಸಮಯದಲ್ಲಿ ಹೆಚ್ಚಿಗೆಯಾಗುವ ಮದ್ಯ ಮಾರಾಟ ಈ ಬಾರಿ ಯಾವ ಹಬ್ಬವಿಲ್ಲದಿದ್ದರೂ ಭರ್ಜರಿಯಾಗಿ ನಡೆದಿದೆ. ಹಬ್ಬಗಳನ್ನು ಬಿಟ್ಟು ಬೇರೆ ದಿನಗಳಲ್ಲಿ ದಿನವೊಂದಕ್ಕೆ ನೂರು ಕೋಟಿ ವ್ಯವಹಾರ ನಡೆದಿದ್ದು ಇದೇ ಮೊದಲು. ಇದರಲ್ಲೂ ನಮ್ಮ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಅಂದರೇ ಸುಮಾರು 50% ಹೆಚ್ಚಿನ ಮದ್ಯ ಮಾರಾಟ ರಾಜಧಾನಿಯಲ್ಲಾಗಿದ್ದರೆ, ಇನ್ನುಳಿದ 50% ಉಳಿದ ಜಿಲ್ಲೆಗಳಲ್ಲಾಗಿದೆ. ಹೊಸ ವರ್ಷ ಬಂತೆಂದರೆ ಈ ಸಂದರ್ಭದಲ್ಲಿ ಬೇಕಾಬಿಟ್ಟಿ ಕುಡಿದು ತೂರಾಡಲು ಯುವಕ ಯುವತಿಯರು ತುದಿಗಾಲಲ್ಲಿ ನಿಂತಿರುತ್ತಾರೆ ಆದ್ದರಿಂದ ಮದ್ಯ ಮಾರಾಟ ಇನ್ನೂ ಹೆಚ್ಚಾಗಿ ದಾಖಲೆ ಬರೆಯುವ ಸಾಧ್ಯತೆಯಿದೆ. ಜೊತೆಗೆ ಡಿಸೆಂಬರ್ 31 ರ ರಾತ್ರಿ ಮತ್ತೊಮ್ಮೆ ಶ್ರೀ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರಂತೆ, ಈ ಬಾರಿ ಇನ್ಯಾರಿಗೆ ಗೂಟ ಬೀಳಲಿದೆಯೋ ಗೊತ್ತಿಲ್ಲ ! ಆದ್ದರಿಂದ ಗೂಟ ಬಿದ್ದವರೂ ಮದ್ಯಕ್ಕೆ ಮೊರೆ ಹೊಗುವುದರಿಂದ ಮದ್ಯದ ಬೇಡಿಕೆ ಇನ್ನೂ ಹೆಚ್ಚವುದು ಬಹುತೇಕ ಖಚಿತ !
ನೋಟು ನಿಷೇಧದಿಂದ ಸಾಮಾನ್ಯ ಜನರಿಗೆ ತೊಂದರೆಯಾಗಿದೆ ಎಂದು ವಿಪಕ್ಷಗಳು ಊಳಿಡುತ್ತಿದ್ದರೆ ಕುಡುಕರು ಮಾತ್ರ ತಮಗೆ ಯಾವುದೇ ಸಮಸ್ಯೆಯಾಗಿಲ್ಲವೆಂದು ಸಾಬೀತುಪಡಿಸಿದ್ದಾರೆ. ಅಲ್ಲದೇ ಹೊಸ ವರ್ಷದ ಸಂದರ್ಭದಲ್ಲಿ ಬಾರ್ಗಳಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಬಾರ್ಗಳು ಹೆಚ್ಚು ಹೆಚ್ಚು ಖರೀದಿಸಿ ಸಂಗ್ರಹಿಸುತ್ತಿದ್ದಾರೆ ಮತ್ತು ಬಾರ್ಗಳಲ್ಲಿ ನೂಕುನುಗ್ಗಲು ಉಂಟಾಗುವ ಸಂಭವ ಇರುವುದರಿಂದ ಮುಂಚಿತವಾಗಿಯೇ ಕುಡುಕರು ಕೂಡ ಮುಂಚಿತವಾಗಿ ಖರೀದಿಸುತ್ತಿದ್ದಾರೆ ಎನ್ನಲಾಗುತ್ತಿದೆ !
ಏನೇ ಆಗಲೀ ಮೋದಿಯವರು ಕೇಳಿದ್ದ 50 ದಿನಗಳು ಮುಗಿದೆವೆ, ಬ್ಯಾಂಕ್ ಮತ್ತು ಎಟಿಎಮ್ಗಳಲ್ಲಿ ಸರತಿ ಸಾಲುಗಳು ಕೊನೆಯಾಗಿವೆ, ಹೊಸ 500 ಮತ್ತು 2000 ಮುಖಬೆಲೆಯ ನೋಟುಗಳು ಎಲ್ಲಾ ಕಡೆಯೂ ದೊರೆಯುತ್ತಿವೆ. ನಗದು ಕಟ್ಟಲು, ಬಿಡಿಸಲು, ವರ್ಗಾಯಿಸಲು ಇದ್ದ ನಿಯಮಗಳು ಸಡಿಲಗೊಂಡಿವೆ. ದೇಶದಲ್ಲಿ ನಗದು ರಹಿತ ವ್ಯವಹಾರ ಹಿಂದೆಂದಿಗಿಂತಲೂ ಹೇರಳವಾಗಿ ಸುರಕ್ಷಿತವಾಗಿ ನಡೆಯುತ್ತಿದೆ. ಬೀದಿ ಬದಿ ವ್ಯಾಪರಿಗಳಿಂದ ಹಿಡಿದೂ ದೊಡ್ಡ ದೊಡ್ಡ ಮಾಲ್ಗಳವರೆಗೂ ಆನ್ಲೈನ್ ವ್ಯವಹಾರ, ಪೇಟಿಎಮ್ ಮತ್ತು ಎಸ್ಬಿಐ ಈ ಬಡಿ ಅಂತಹ ಮೊಬೈಲ್ ಆಪ್ಗಳ ಮೂಲಕ ಹಣ ವರ್ಗಾವಣೆ, ಯುಪಿಐ ಮೂಲಕ ಸ್ಮಾರ್ಟ್ಫೋನ್ ಇಲ್ಲದಿದ್ದರೂ ಹಣ ಪಾವತಿ ನಡೆಯುತ್ತಿದೆ. ನವೆಂಬರ್ ಒಂದೇ ತಿಂಗಳಲ್ಲಿ ಕೇಂದ್ರಕ್ಕೆ ಒಟ್ಟು
67,358 ಕೋಟಿ ರೂಪಾಯಿ ಪರೋಕ್ಷ ತೆರಿಗೆ ಪಾವತಿಯಾಗಿದೆ(ಶೇ 23 ಏರಿಕೆ), ಮುಂಗಡ ತೆರಿಗೆಯೂ ಶೇ 14 ರಷ್ಟು ಏರಿಕೆ ಕಂಡಿದೆ.
ಈ 50 ದಿನಗಳ ಕಾಲಾವಾಧಿಯಲ್ಲಿ ನಮ್ಮ ದೇಶದ ಜನ ಮೋದಿಯವರಿಗೆ ಕೊಟ್ಟ ಸಹಕಾರ ನಿಜಕ್ಕೂ ಶ್ಲಾಘನೀಯ ಏಕೆಂದರೆ ಹಲವಾರು ದೇಶಗಳು ನೋಟು ನಿಷೇಧ ಮಾಡಿ ಕೈ ಸುಟ್ಟುಕೊಂಡಿವೆ, ಜನರು ವಿರೋಧಿಸಿ ಬೀದಿಗಿಳಿದಿದ್ದರು. ಆದರೇ ನಮ್ಮಲ್ಲಿ ಕಪ್ಪುಹಣದ ವಿರುದ್ಧ ಪ್ರಧಾನಿಯವರ ಹೋರಾಟ ಕಂಡು ಜನ ಬೆಂಬಲಿಸಿದ್ದಾರೆ ಅಷ್ಟೇ ಅಲ್ಲದೇ ನೋಟು ನಿಷೇಧದ ನಂತರ ಹಲವಾರು ಕಡೆ ಬಿಜೆಪಿ ಚುನಾವಣೆ ಗೆದ್ದಿರುವುದು ಇದಕ್ಕೆ ಸಾಕ್ಷಿ. ಒಂದರ್ಥದಲ್ಲಿ ನಿಜವಾಗಿಯೂ ದೇಶಕ್ಕೆ #ಅಚ್ಚೇದಿನ್ ಬಂದಿದೆ ಎನ್ನಬಹುದು.
–
ಸಿದ್ದಲಿಂಗ ಸ್ವಾಮಿ,
swamyjrs@gmail.com