ಈ 24×7 ಸುದ್ದಿವಾಹಿನಿಗಳು ಮೂರ್ಖರ ಪೆಟ್ಟಿಗೆಯ ಮೂಲಕ ಮೂರು ಲೋಕವನ್ನು ಆವರಿಸಿಕೊಂಡು ಜನರಿಗೆ ನ್ಯೂಸ್ ಪಾಸ್ ಮಾಡಲು ಆರಂಭಿಸಿದ ಮೇಲೆ ಎಲ್ಲವೂ ತಳಕಂಬಳಕ. ಸಮಾಜದ ನಾಲ್ಕನೆಯ ಅಂಗವಾದ ಮಾಧ್ಯಮಗಳೇ ಸೌಹಾರ್ದತೆಗೆ ಭಂಗ ತರುವಂತಿವೆ. ಮಾಧ್ಯಮ ಅಧಮ ಸ್ಥಿತಿ ತಲುಪಿದರೆ ಏನಾಗುತ್ತದೆ ಎನ್ನುವುದಕ್ಕೆ ಇಂತಹ ಕೆಲವು ವಾಹಿನಿಗಳೇ ಸಾಕ್ಷಿ! ತಮ್ಮ ಠೀವಿಯನ್ನು ಕಳೆದುಕೊಂಡಿರುವ ಟಿ.ವಿ ಮಾಧ್ಯಮಗಳೆಡೆಗೆ ಕಣ್ಣು, ಕಿವಿ ಹಾಯಿಸಿದರೆ ಹಳೆಯ ಹುಣ್ಣಿಗೆ ತಿವಿದಂತಾಗುತ್ತದೆ. ಸುದ್ಧಿಗಳನ್ನು ತಿರುಚುವುದು ಹಾಗೂ ವಾಚಕರು ಅನಗತ್ಯವಾಗಿ ಕಿರುಚುವುದು ಇಂದಿನ ಸುದ್ಧಿವಾಹಿನಿಗಳ ಮೂಲಮಂತ್ರವಾಗಿದೆ. ಇವುಗಳ ಗುಣಮಟ್ಟ ಹಾಗೂ ಮಹತ್ವವನ್ನು ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ‘ಈ ನ್ಯೂಸ್ ಚಾನೆಲ್ಲುಗಳನ್ನು ವೀಕ್ಷಿಸದಿದ್ದರೆ ಲಾಸ್ ಏನಿಲ್ಲ’!!
ದಿನಕ್ಕೊಂದು ಟಿ.ವಿ ಮಾಧ್ಯಮ ಜನ್ಮ ತಳೆಯುತ್ತಿದೆ. ಕಾಸಿದ್ದವರೆಲ್ಲ ನ್ಯೂಸ್ ಲೋಕದಲ್ಲಿ ಒಂದು ಕೈ ನೋಡುವವರೇ! ಪೈಪೋಟಿಯ ನಿತ್ಯ ಫೈಟಿಂಗಿನಲ್ಲಿ ‘ಟಿ.ಆರ್.ಪಿ ರೇಟ್’ನ ಹೈಟನ್ನು ಹೆಚ್ಚಿಸಿಕೊಳ್ಳಲು ಸಫಲವಾದರಷ್ಟೇ ವಾಹಿನಿಯವರ ‘ಪೇಟ್’ ತುಂಬುತ್ತದೆ. ಇಲ್ಲವೆಂದಾದರೆ ಇದೆಲ್ಲಾ ನಮ್ಮ ‘ಫೇಟ್’ ಎಂದು ಪಡಿಪಾಟಲು ಪಡುವುದು ಅನಿವಾರ್ಯ ಕರ್ಮ. ಕೊನೆಗೆ ವಾಹಿನಿಯ ಧಣಿಯ ದೂಷಣೆಗೆ ದಣಿದು ಹಣೆ ಹಣೆ ಚಚ್ಚಿಕೊಳ್ಳಬೇಕಷ್ಟೇ! ಹೆಚ್ಚು ಟಿ.ಆರ್.ಪಿ ಪಡೆಯುವ ಹವಣಿಕೆಯಲ್ಲಿ ಗೆದ್ದು, ಒಡೆಯನ ಖಜಾನೆಗೆ ಹಣ ಹರಿದು ಬರುವಂತೆ ಮಾಡಿದರಷ್ಟೇ ಹಣೆಬರಹ ನೆಟ್ಟಗಿರುತ್ತದೆ. ಇಂತಹ ಹಣಾಹಣಿಯಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ತಮ್ಮ ಹೊಣೆಗಾರಿಕೆಯೇ ಮರೆತು ಹೋದರೂ ಅಚ್ಚರಿಯೇನಿಲ್ಲ ಬಿಡಿ! ಹೀಗೆ ಸುದ್ಧಿ ನಿತ್ಯ ನಿರಂತರವಾಗಿದೆ ಆದರೆ ಅವುಗಳ ಗುಣಮಟ್ಟ ಹಾಗೂ ವೈಖರಿ ಮಾತ್ರ ನಿಂತ ನೀರಾಗಿದೆ.
ನಿಯಮಿತ ಪ್ರಸಾರದ ಸೀಮಿತ ವಾಹಿನಿಗಳಿದ್ದ ಕಾಲದಲ್ಲಿ ಸುದ್ಧಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಕೆಲವನ್ನಷ್ಟೇ ಬಿತ್ತರಿಸಲಾಗುತ್ತಿತ್ತು. 24×7 ಜಮಾನಾದ ಈ ಕಾಲದಲ್ಲಿ ಅಸಂಖ್ಯ ವಾಹಿನಿಗಳ ಹೊಟ್ಟೆ ತುಂಬಿಸಲು ಎಷ್ಟೊಂದು ಸುದ್ಧಿಯಿದ್ದರೂ ಅದು ಅರೆಕಾಸಿನ ಮಜ್ಜಿಗೆಯಷ್ಟೇ! ಕೇವಲ ಒಂದು ವಾಕ್ಯದ ಸುದ್ದಿಯನ್ನು ಒಂದು ಘಂಟೆ ಪೂರ್ತಿ ಪ್ರಸಾರ ಮಾಡುವ ವಿಚಿತ್ರ ಕಲೆ ಸಿದ್ದಿಸಿರುವುದು ನಮ್ಮ ಸುದ್ಧಿವಾಹಿನಿಗಳಿಗೆ ಮಾತ್ರ. ಆಡಿದ್ದನ್ನೇ ಆಡುವ ಆಧುನಿಕ ಕಿಸಬಾಯಿ ದಾಸರೆಂದರೆ ಈ ವಾಹಿನಿಗಳ ನಿರೂಪಕರು. ವಾಹಿನಿಗಳ ಈ ಪ್ರತಿಭೆ ಅದೆಷ್ಟು ಕುಪ್ರಸಿದ್ಧವೆಂದರೆ, ಹೇಳಿದ್ದನ್ನೇ ಹೇಳುವವರನ್ನು ಸುದ್ದಿ ವಾಹಿನಿಗಳಿಗೆ ಹೋಲಿಸುವುದಿದೆ. ಅಷ್ಟರಮಟ್ಟಿಗೆ ತಮ್ಮ ಛಾಪು ಮೂಡಿಸಿವೆ. ಶಬ್ದಮಾಲಿನ್ಯದ ಕಾರಣಗಳ ಪೈಕಿ ಸುದ್ಧಿವಾಹಿನಿಗಳು ನಡೆಸುವ ಪ್ರೈಮ್ ಟೈಮ್ ಡಿಬೇಟುಗಳನ್ನು ಇನ್ನೂ ಸೇರಿಸದಿರುವುದು ಸೋಜಿಗವೇ ಸರಿ!
ಅಗುಳೊಂದನ್ನು ಕಂಡರೆ ತನ್ನ ಬಳಗವನ್ನೆಲ್ಲಾ ಕರೆಯುವುದು ಕಾಗೆಗಳ ಗುಣವಾದರೆ, ಸುದ್ಧಿ ಸಿಕ್ಕಿದಾಕ್ಷಣ ಇತರ ವಾಹಿನಿಗಳ ಗಮನಕ್ಕೆ ಬರುವುದರೊಳಗೆ ಕವರ್ ಮಾಡಿ ಪ್ರಸಾರ ಮಾಡಬೇಕೆನ್ನುವುದು ಎಲ್ಲಾ 24×7 ನ್ಯೂಸ್ ಚಾನೆಲ್ ಗಳ ಪರಮೋಚ್ಛ ಧ್ಯೇಯ. ತಾವೇ ಮೊದಲು ‘ನ್ಯೂಸ್’ ಕೊಡಬೇಕೆಂಬ ಅವಸರಕ್ಕೆ ಬೀಳುವ ಮಾಧ್ಯಮಗಳು ಸೃಷ್ಟಿಸುವ ನ್ಯೂಸನ್ಸ್ ಒಂದೆರಡಲ್ಲ. ಎಷ್ಟೋ ಬಾರಿ ಸೆನ್ಸೇಷನಲ್ ಸುದ್ಧಿಯ ಬೆನ್ನ ಹಿಂದೆ ಬೀಳುವ ವಾಹಿನಿಗಳು ಅದನ್ನು ಅರಸಿ, ಆರಿಸಿ, ಪ್ರಸಾರ ಮಾಡುವಾಗ ಕೊಂಚವೂ ಸೆನ್ಸ್ ಬಳಸದೇ, ವೀಕ್ಷಕರಿಂದ ನಾನ್ ಸೆನ್ಸ್ ಎಂದು ಕರೆಸಿಕೊಂಡು ನಗೆಪಾಟಲಿಗೀಡಾಗುವುದಿದೆ. ಸ್ಪಷ್ಟತೆ ಎನ್ನುವುದು ನಮ್ಮ ನ್ಯೂಸ್ ಚಾನೆಲ್ ಗಳ ಜಾಯಮಾನದಲ್ಲೇ ಇಲ್ಲ. ಹಾಗಾಗಿ ಅವುಗಳು ಎಷ್ಟೇ ದೋಷಪೂರಿತ ಸುದ್ಧಿ ಬಿತ್ತರಿಸಿದರೂ ಕನಿಷ್ಟ ಸ್ಪಷ್ಟೀಕರಣವನ್ನೂ ಹಾಕುವುದಿಲ್ಲ ನೋಡಿ!!
ಓವರ್ ಡೋಸ್: ಸತ್ತವರನ್ನು ಮರುಕ್ಷಣವೇ ಬದುಕಿಸುವ, ಬದುಕಿದ್ದವರನ್ನು ಏಕಾಏಕಿ ಸಾಯಿಸುವ ಮಾಂತ್ರಿಕ ಶಕ್ತಿಯೇನಾದರೂ ಇದ್ದರೆ ಅದು ಸುದ್ದಿವಾಹಿನಿಗಳಿಗೆ ಮಾತ್ರ!!