ಅಂಕಣ

ಹೈದ್ರಾಬಾದ್ ವಿಲೀನ ಮತ್ತು ಆಫರೇಷನ್ ಪೋಲೋ

ರಜಾಕಾರರು ಊರಲ್ಲಿ ಬಂದರೂ ಎಂಬ ಸುದ್ದಿ ಕೇಳುತ್ತಿದ್ದಂತೆ ಎಲ್ಲರೂ ಅವಿತು ಕುಳಿತುಕೊಳ್ಳುತ್ತಿದ್ದರು. ಮನೆಯಲ್ಲಿರುವ ಸ್ತ್ರೀಯರನ್ನು ರಕ್ಷಿಸುವುದಿರಲಿ ಪುರುಷರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿತ್ತು. ನನಗೆ ಗೊತ್ತಿರುವಂತೆ ಈಗಿನ ಗುಲ್ಬರ್ಗ ಜಿಲ್ಲೆಯ ಜೇವರ್ಗಿ ತಾಲೂಕಿನ ಮಳ್ಳಿ ಎಂಬ ಗ್ರಾಮದಲ್ಲಿ ದೇಶಪಾಂಡೆ ಎಂಬ ಅಪ್ಪಟ ಹಿಂದು ಮನೆತನದ ಮೂರು ಜನ ಸಹೋದರರನ್ನು ಕಡಿದು ಹಾಕಿ ಇಡಿಯ ವಂಶವನ್ನೇ ನಿರ್ನಾಮ ಮಾಡಿದ ನರಹಂತಕರು ರಜಾಕಾರರು. ಇನ್ನೊಂದು ಮನೆಯ ಒಬ್ಬಳು ಗರ್ಭಿಣಿ ಸ್ತ್ರೀಯನ್ನು ತೊಂದರೆಯಾಗದಿರಲಿ ಅಂತ ದೂರದ ಊರಿಗೆ ಕಳುಹಿಸಿಕೊಡುತ್ತಾರೆ. ಅವಳು ಬೇರೆ ಯಾರೂ ಅಲ್ಲ ನನ್ನ ಅಜ್ಜಿ(ತಾಯಿಯ ಸೋದರತ್ತೆ). ಇಂಥ ಕಥೆಗಳನ್ನು ಈಗಿನ ಕರ್ನಾಟಕದ ಗುಲ್ಬರ್ಗ, ಯಾದಗೀರಿ, ರಾಯಚೂರು, ಬೀದರ ಜಿಲ್ಲೆಯ ಪ್ರತಿ ಕುಟುಂಬಗಳು ಹೇಳುತ್ತವೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಒಂದು ಗ್ರಾಮದಲ್ಲಿ ಒಂದೇ ಸಲ ೧೭೦ ಜನರನ್ನು ಕುರಿಯನ್ನು ಬಲಿಕೊಡುವ ರೀತಿಯಲ್ಲಿ ಕೊಚ್ಚಿ ಎಸೆದರು. ಹೀಗೆ ಉಳಿದವರಿಗೆ ನಿಟ್ಟುಸಿರು, ಸಿಕ್ಕವರಿಗೆ ಖಚಿತ ಮರಣ ಎಂಬಂತಿತ್ತು. ಅಕಾಸ್ಮಾತ್ ಪಟೇಲರು ಇದನ್ನು ಕಾಶ್ಮೀರದ ಹಾಗೆ ನೆಹರು ಕೈಗೆ ಒಪ್ಪಿಸಿ ತಟಸ್ಥರಾಗಿಬಿಟ್ಟಿದ್ದರೆ. ಭಾರತದ ಹೆಗಲ ಮೇಲೆ ಭಾರವಾದ ಪಾಕಿಸ್ತಾನದಂತ ಇನ್ನೊಂದು ಪಾಕಿಸ್ತಾನ ಭಾರತದದುರದಲ್ಲಿನ ಸಣ್ಣಕರುಳನ್ನು ಕೊರೆಯುವ ಹುಳುವಿನಂತೆ ನಿರ್ಮಾಣವಾಗುತ್ತಿತ್ತು. ಅದು ಬೇರೆಲ್ಲೂ ಅಲ್ಲ ಕರ್ನಾಟಕದ ಪಕ್ಕದಲ್ಲಿ! ಒಮ್ಮೆ ಆ ಹುಳು ನಿರ್ಮಾಣವಾಗಿಬಿಟ್ಟಿದ್ದರೆ ಇಡಿಯ ದಕ್ಷಿಣ ಭಾರತವನ್ನು ಉತ್ತರ ಭಾರತದ ಸಂಪರ್ಕದಿಂದ ಕಿತ್ತೆಸೆದು ಭಾರತ ಎಂಬ ಸುಂದರ ಸ್ವರೂಪಿ ರಾಷ್ಟ್ರವನ್ನು ರುಂಡ ಮುಂಡಗಳನ್ನಾಗಿ ವಿಭಜಿಸುತ್ತಿತ್ತು. ಆದರೆ ಪಟೇಲರು ಸುಮ್ಮನಿರಲಿಲ್ಲ.ತಮ್ಮ ಜೀವಿತಾವಧಿಯ ಕೊನೆಯ ಗುರಿ ಎಂಬಂತೆ ಅದನ್ನು ಪೂರ್ಣಗೊಳಿಸಿ ಹೊರಟುಹೋದರು. ಹೈದ್ರಾಬಾದ್ ವಿಮೋಚನೆಯ ಬಗ್ಗೆ “ಸರದಾರ” ಪುಸ್ತಕದಿಂದಲ್ಲದೇ ಕೆಲವು ಉತ್ತರ ಕರ್ನಾಟಕದವರ ಅಭಿಪ್ರಾಯ ಸಂಗ್ರಹಿಸಿ ಮತ್ತು ಇದಕ್ಕೆ ಸಂಬಂಧಿಸಿದ ಟಿವಿ ಕಾರ್ಯಕ್ರಮಗಳು , ಕೆಲವು

ಭಾಷಣಗಳನ್ನು ಆಧರಿಸಿ ನಿಮ್ಮ ಮುಂದಿಡುತ್ತಿದ್ದೇನೆ ಓದಿಕೊಳ್ಳಿ.

ಹೈದ್ರಾಬಾದ್’ಗೆ ಪಾಕಿಸ್ತಾನದ ಬೆಂಬಲವಿತ್ತು. ಸ್ವಾತಂತ್ರ್ಯಕ್ಕೂ ಮೊದಲೇ ೧೯೪೭ ಜೂನ್ ೧೨ ರಂದು ನಿಜಾಮ “ಬ್ರಿಟಿಷರು ಸದ್ಯದಲ್ಲೇ ಭಾರತವನ್ನು ತೊರೆಯುವುದರ ಅರ್ಥವೇನೆಂದರೆ ನಾನು ಸ್ವತಂತ್ರ ಸಾರ್ವಭೌಮ ರಾಜ್ಯವನ್ನು ಘೋಷಣೆ ಮಾಡಿಕೊಳ್ಳುವ ಹಕ್ಕು ಹೊಂದಿದ್ದೇನೆ.” ಹೇಳಿಕೆ ಕೊಟ್ಟಿದ್ದ. ಏತನ್’ಮಧ್ಯೆ ಗಾಂಧೀ ನಿಧನ, ಪಟೇಲರ ಅನಾರೋಗ್ಯದಿಂದ ಹೈದ್ರಾಬಾದ್ ವಿಲೀನ ಸ್ವಲ್ಪ ವಿಳಂಬವಾಗುತ್ತದೆ. ನಿಜಾಮ ೩ ತಿಂಗಳಿನ ಗಡುವು ಕೇಳಿರುತ್ತಾನೆ. ಅಕ್ಟೋಬರ್ ೧೧,೧೯೪೭ ರಂದು ಹೊಸದೊಂದು ಸ್ಟಾಂಡ್ ಸ್ಟಿಲ್ ಒಪ್ಪಂದದ ಕರಡನ್ನು ದೆಹಲಿಗೆ ಕಳುಹಿಸಿಕೊಡುತ್ತಾನೆ.  ಈ ಕರಡು ಪ್ರತಿಯಲ್ಲಿ ವಿದೇಶಿ ವಹಿವಾಟಿನ ಬಗೆಗಿನ ಉಲ್ಲೇಖ ಪಟೇಲರಿಗೆ ಸರಿ ಅನಿಸೊಲ್ಲ. ಅದನ್ನು ಮೌಂಟ್ ಬ್ಯಾಟನ್ ಕಡೆಯಿಂದ ತಿದ್ದುಪಡಿ ಮಾಡಿಸಿ ಕಳಿಸುತ್ತಾನೆ. ನಿಜಾಮ ಅದನ್ನು ಒಪ್ಪಕೊಳ್ಳುತ್ತಾನೆ. ಆದರೆ ಸಹಿ ಹಾಕಲು ವಿಳಂಬ ಮಾಡುತ್ತಾನೆ. ಇದರಲ್ಲಿ Instrument of accessionದಲ್ಲಿರುವ ಮೂರು ಅಂಶಗಳ ಉಲ್ಲೇಖವಿರುತ್ತವೆ. ನವೆಂಬರ್ ೨೯, ೧೯೪೭ರಂದು ಕೊನೆಗೂ ಒಪ್ಪಿಕೊಂಡು ಸಹಿ ಹಾಕುತ್ತಾನೆ. ಕಾಸಿಂ ರಜ್ವಿ ಒಳಗೊಳಗೇ ನಿಜಾಮನಿಗೆ ರಣವೀಳ್ಯ ಕೊಡುತ್ತಿರುತ್ತಾನೆ. ಕಾಶ್ಮೀರದ ಸ್ಥಿತ್ಯಂತರಗಳನ್ನು ಉದಾಹರಿಸುತ್ತಾ ಇನ್ನೂ ಹೆಚ್ಚಿನ ಸೌಲಭ್ಯ ಉಳ್ಳ ಒಪ್ಪಂದಕ್ಕೆ ನಿವೇದಿಸುತ್ತಿರುತ್ತಾನೆ. ಒಂದು ವರ್ಷದ ಒಪ್ಪಂದದ ಶಾಯಿ ಆರುವ ಮುನ್ನವೇ ಆ ಒಪ್ಪಂದದ ಎಲ್ಲ ನಿಯಮಗಳನ್ನು ರಾಜಾರೋಷವಾಗಿ ಮುರಿದುಬಿಟ್ಟಿರುತ್ತಾರೆ. ಪಾಕಿಸ್ತಾನಕ್ಕೆ ಹದಿನೈದು ಮಿಲಿಯನ್ ಪೌಂಡ್ ಸಾಲ ಹೈದ್ರಾಬಾದ್  ಕೊಡುತ್ತದೆ ಮತ್ತು ಸಣ್ಣ ಪುಟ್ಟ ಸೇನೆಗೆ ಸಂಬಂಧಿಸಿದ ಚಟುವಟಿಕೆಗಳು ಇಬ್ಬರ ಮಧ್ಯೆ ನಡೆಯುತ್ತಿರುತ್ತವೆ.  ಆಗ ಭಾರತವೂ ಕೂಡಾ ತನ್ನ ಹೈದ್ರಾಬಾದ್ ಪಾಕಿಸ್ತಾನದ ನಡುವೆ ದೆಹಲಿಯ ಗಮನಕ್ಕೆ ಬರದಂತೆ ಸೇತುವಾದ ಮುಂಬಯಿ ಮಾರ್ಗದ ಮೇಲೆ ಕಣ್ಣಿಡುತ್ತದೆ.

ಅಷ್ಟರಲ್ಲಿ ಹೈದ್ರಾಬಾದ್ ತನ್ನ ತಯಾರಿಗಳನ್ನು ನಡೆಸಿತ್ತು. ರಜಾಕಾರರ ಮುಖ್ಯಸ್ಥ ಕಾಸಿಂ ರಜ್ವಿ ೨೦೦೦೦ ಜನರ ಪಡೆಯನ್ನು ಕಟ್ಟಿಕೊಂಡಿದ್ದ. ಪಾಕಿಸ್ತಾನದ ನಂಟಿರುವ ಮೀರ್ ಲಾಯಕ್ ಅಲಿ ನವಾಬನ ಮಂತ್ರಿಯಾದ. ೨೦ ಕೋಟಿ ರೂಪಾಯಿಯ ಶಸ್ತ್ರಾಸ್ತ್ರ ಪಾಕಿಸ್ತಾನದಿಂದ ಬಂದಿಳಿಯಿತು.ಅದನ್ನು ಸ್ಥಳೀಯ ಉಗ್ರಪಡೆಗೆ ಹಂಚಲಾಯ್ತು. ಬಾಂಗ್ಲಾದೇಶದಿಂದಲೂ ಸೇನೆ ಬಂದಿಳಿಯಿತು. ಅರಬ್, ರೊಹಿಲ್ಲಾ, ಉತ್ತರಪ್ರದೇಶ ಹೀಗೆ ಎಲ್ಲ ಕಡೆಯ ಮುಸ್ಲಿಂರನ್ನು ಹೈದ್ರಾಬಾದ್ ಕಡೆಗೆ ಸೆಳೆಯಲಾಯಿತು. ಒಂದೆಡೆ ಮುಸ್ಲಿಂರ ಸಂಖ್ಯೆ ಅಧಿಕವಾಗುತ್ತಿದ್ದಂತೆ ಒಳಗಿನ ಹಿಂದುಗಳ ಮೇಲೆ ಅತ್ಯಾಚಾರ, ಕೊಲೆಗಳು ಮತ್ತು ಮತಾಂತರ ಗಣನೀಯವಾಗಿ ನಡೆದುಹೋಗುತ್ತಿದ್ದವು. ಇಷ್ಟಾದರೂ ನೆಹರೂ ಶಾಂತಿ ಮಂತ್ರ ಜಪಿಸುತ್ತಿದ್ದರು. ಒಪ್ಪಂದದ ಮೊರೆ ಹೋಗಲು ನಿರ್ಧರಿಸಿದರು ಅಷ್ಟಲ್ಲದೇ ಪತ್ರಗಳ ಮೂಲಕ ನಿಜಾಮನ ಮನವೊಲಿಸಲು ಪ್ರಯತ್ನಿಸಿದ. ಪಟೇಲರಿಗೆ ಏನನ್ನು ಮಾಡಲಾಗದ ಸಂದಿಗ್ಧ.

ನಂತರ ಭಾರತ ಸರ್ಕಾರದ ಪ್ರತಿನಿಧಿಯಾಗಿದ್ದ K.M. ಮುನ್ಷಿ ಹೈದ್ರಾಬಾದ್ ಅಲಿ ಜೊತೆ ಮಾತುಕತೆ ಮಾಡಿಸಿ ರಾಜ್ಯ ಕಾರ್ಯದರ್ಶಿ ವ್ಹಿ.ಪಿ.ಮೆನನ್ ಮೂಲಕ ಎಚ್ಚರಿಕೆ ಕೊಡಲಾಯಿತು. ಬ್ಯಾಟನ್ ದೇಶ ತೊರೆಯುವ ಮುಂಚೆ ಒಂದು ವ್ಯವಸ್ಥೆ ಮಾಡಿ ಹೋಗಬೇಕೆಂಬ ಇಚ್ಛೆ ಇತ್ತು.ಇದರ ಬಗ್ಗೆ ಬ್ಯಾಟನ್ ಮಾತಿಗಿಳಿದಾಗ ಪಟೇಲರು  “ಎಷ್ಟು ದಿನವಾದರೂ ಗಡುವು ಕೊಡಿ ಆದರೆ ಹೈದ್ರಾಬಾದ್ ಭಾರತದ ಸೊತ್ತು” ಎಂದಿದ್ದರು. ಹೀಗಿರುವಾಗ ರಜ್ವಿ ದೆಹಲಿಗೆ ನವೆಂಬರ್ ೧೯೪೭ ರ ಆಸುಪಾಸಿನಲ್ಲಿ ಬಂದು ಪಟೇಲರಿಗೆ ಧಮಕಿ ಕೊಡುತ್ತಾನೆ. “ಭಾರತದ ಸೈನ್ಯ ಹೈದ್ರಾಬಾದ್’ಗೆ ಬಂದರೆ ಕೊನೆಯ ವ್ಯಕ್ತಿ ಇರುವವರೆಗೆ ನಾವು ಹೋರಾಡಿ ಮಡಿಯುತ್ತೇವೆ.” ಎನ್ನುತ್ತಾನೆ. “ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆಂದು ನಿರ್ಧರಿಸಿದ್ದರೆ ನಿಮ್ಮನ್ನು ಯಾರು ತಡೆಯಬಲ್ಲರು? ಹೇಳಿ” ಎಂದು ಪಟೇಲರು ಚಾವಟಿ ಬೀಸಿದರು. ಹೈದ್ರಾಬಾದ್’ಗೆ ಕೊಟ್ಟ ಗಡುವಿನ ದಿನಗಳಲ್ಲಿ ಪಟೇಲರು ಸುಮ್ಮನಿರಲಿಲ್ಲ ಓರಿಸ್ಸಾದ ೨೬ ಸಣ್ಣರಾಜ್ಯಗಳನ್ನು ತೆಕ್ಕೆಗೆ ಹಾಕಿಕೊಂಡರು. ಹೈದ್ರಾಬಾದ್’ನ ಕೆಲವು ಭಾಗಗಳು ಭಾರತದೊಂದಿಗೆ ವಿಲೀನವಾದವು. ನಿಜಾಮನಿಗೆ ನಿಷ್ಠರಾಗಿದ್ದ ಕೆಲವು ಪ್ರಜೆಗಳಿಂದ ದಂಗೆಯಾದವು. ಹಲವಾರು ಹಿಂದೂಗಳನ್ನು ಕೊಲ್ಲಲಾಯಿತು. ಪಟೇಲರು ಹೈದ್ರಾಬಾದ್’ಗೆ ದಾಳಿ ಮಾಡಿಸಿ ರಜಾಕರ ಹತ್ಯೆ ಮಾಡಿಸಿದರು. ನೆಹರೂ ಇದಕ್ಕೆ ಪ್ರತಿಯಾಗಿ ಸಂಸತ್ತಿನಲ್ಲಿ  “ಪಟೇಲರೆ ನೀವು ಕೋಮುವಾದಿ ನಿಮ್ಮ ನಿರ್ಧಾರವನ್ನು ನಾನು ಸಮ್ಮತಿಸಲಾರೆ. ” ಎಂದು ಹೇಳಿದರು. ತಕ್ಷಣ ಪಟೇಲರು ಕ್ಯಾಬಿನೆಟ್’ನಿಂದ ಹೊರನಡೆದರು. ಸಿ.ರಾಜಗೋಪಾಲಾಚಾರಿಯವರ ಮನವೊಲಿಕೆಯ ಪರಿಣಾಮವಾಗಿ ಪಟೇಲರು ಮತ್ತೊಮ್ಮೆ ಅಖಾಡಕ್ಕೆ ಇಳಿದರು. ಹೈದ್ರಾಬಾದ್’ನ್ನು ಭಾರತದಲ್ಲಿ ಹಾಗೆಯೇ ಉಳಿಯಲು ಬಿಟ್ಟರೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬರುವುದಾಗಿ ಪಟೇಲರು ಸಮರ್ಥನೆ ಕೊಟ್ಟರು. ಅದು ನಿಜವೂ ಆಗಿತ್ತು ಹೈದ್ರಾಬಾದಿನಲ್ಲಿ ಈಗಿನ ಕರ್ನಾಟಕ, ಆಂದ್ರಪ್ರದೇಶ ,ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸಗಢದ ಹಲವು ಜಿಲ್ಲೆಗಳು ಒಳಗೊಂಡಿದ್ದವು. ವಿಸ್ತೀರ್ಣದ ಆಧಾರದ ಮೇಲೆ ಅದು ಗ್ರೇಟ್ ಬ್ರಿಟನ್’ಗೆ ಸರಿಸಮವಾಗಿತ್ತು. ಅದೆಷ್ಟು ಪ್ರಬಲ ರಾಜ್ಯ ಎಂಬುದನ್ನು ನೀವೇ ಊಹಿಸಿಕೊಳ್ಳಿ.

ಕೊನೆಗೆ ಬ್ಯಾಟನ್ ಹೋಗುವ ಮುನ್ನ ಮತ್ತೊಂದು ಕರಡು ತಯಾರಾಗುತ್ತದೆ. ಅದರ ಪ್ರಕಾರ ಹೈದ್ರಾಬಾದ್ ತನ್ನ ಸ್ವಂತ ಕಾನೂನನ್ನು ಹೊಂದಬಹುದು. ಅದಲ್ಲದೆ ೨೦೦೦೦ ದವರೆಗೆ ಸೈನ್ಯ ಹೊಂದಬಹುದು. ಆಂತರಿಕ ಭದ್ರತೆ ಸಿಗದ ಸಂದರ್ಭದಲ್ಲಿ ಭಾರತ ದಾಳಿ ಮಾಡುವ ಹಕ್ಕಿದೆ. ಅದಲ್ಲದೆ ರಜಾಕಾರರನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು. ಇದೆಲ್ಲದಕ್ಕೂ ಪಟೇಲರು ಸಹಿ ಹಾಕುತ್ತಾರೆ. ರಜಾಕರ ವಿಷಯಕ್ಕೆ ಹೈದ್ರಾಬಾದ್ ಒಪ್ಪಲ್ಲ ಎಂಬುದನ್ನು ಅವರು ಅರಿತಿರುತ್ತಾರೆ. ಅವರು ಅಂದುಕೊಂಡಂತೆ ಆಗುತ್ತದೆ. ಹೈದ್ರಾಬಾದ್ ಈ ಒಪ್ಪಂದ ನಿರಾಕರಿಸಿ ತಮಗೆ ಸಂಪೂರ್ಣ ಸ್ವಾತಂತ್ರ್ಯಕ್ಕೆ ಆಗ್ರಹಿಸುತ್ತದೆ. “ಇದಕ್ಕಿಂತ ಹೆಚ್ಚಿನ ರಿಯಾಯಿತಿ ಕೊಡಲಾಗದು. ಹೈದ್ರಾಬಾದಿನೊಂದಿಗಿನ ನಮ್ಮ ಎಲ್ಲಾ ಮಾತುಕತೆ ಮುಗಿದಾಗಿದೆ.” ಎಂದು ನೆಹರು ಪತ್ರಿಕಾ ಪ್ರತಿನಿಧಿಗಳಿಗೆ ಹೇಳುತ್ತಾರೆ. ಆಗ ಲಾಯಕ್ ಅಲಿ ಈ ವಿಷಯ ಯುನೈಟೆಡ್ ನೇಷನ್ ತನಕ ಒಯ್ಯುವ ಮಾತಾಡುತ್ತಾನೆ. ಡೆಹ್ರಾಡೂನಿನಲ್ಲಿ ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದ ಪಟೇಲರು ಕೂಡಲೆ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ನೆಹರೂಗೆ ಪತ್ರ ಬರೆಯುತ್ತಾರೆ.

ಕಾರ್ಯಾಚರಣೆಗೆ ಒಂದು ದಿನ ಮೊದಲು ಮೌಲಾನಾ,ಮೇನನ್, ಪಟೇಲರು ,ನೆಹರೂ ಮತ್ತು ೩ ಸೇನಾ ತುಕಡಿಯ ಮುಖ್ಯಸ್ಥರು ಸಭೆ ಸೇರಿದರು. ನೆಹರೂ ಮತ್ತು ಪಟೇಲರಿಗೂ ವಾಗ್ವಾದವಾಯಿತು. ಪಟೇಲರು ಸಭೆಯನ್ನು ವಿಸರ್ಜಿಸಿದರು.ಕ್ಯಾಬಿನೆಟಿನಲ್ಲಿ ಪಟೇಲರು ಎಲ್ಲರ ಸಹಮತ ಪಡೆಯುತ್ತಾರೆ. ಅಂಬೇಡ್ಕರ್ “ನೀವು ಮಿಲಿಟರಿ ಆಪ್ರೇಷನ್ ಮಾಡಿ ಆದರೆ ಹೊರಗಡೆ ಪೊಲೀಸ್ ಆ್ಯಕ್ಷನ್ ಅಂತ ಹೇಳಿ. ” ಎನ್ನುತ್ತಾರೆ. ಕಾರಣ ನಮ್ಮ ದೇಶದ ಒಂದು ಭಾಗದ ಮೇಲೆ ಮಿಲಿಟರಿ ಆಫರೆಷನ್ ಮಾಡಿದರೆ ಹೊರ ದೇಶಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ದೂರಾಲೋಚನೆ ಅವರದು. ಅದಕ್ಕೆ ಆಫರೆಷನ್ ಫೋಲೋ ಎಂಬ ಹೆಸರಿಡಲಾಯಿತು.೧೯೪೮ ಸೆ ೧೩ ರಂದು ಆಫರೇಷನ್ ಪೋಲೋ ಪ್ರಾರಂಭವಾಯಿತು. ಅರಬ್ಬ, ರೋಹಿಲ್ಲಾ ಉತ್ತರ ಪ್ರದೇಶದ ಮುಸ್ಲಿಂರು ಜೊತೆಗೆ ರಜ್ವಿ ಕಟ್ಟಿದ್ದ ೨೦ ಸಾವಿರ ಜನರ ರಜಾಕ್ ಸೇನೆಯನ್ನು ಭಾರತದ ಒಂದು ಸೇನಾ ತುಕುಡಿ ಬಗ್ಗು ಬಡಿಯಿತು. ಒಟ್ಟಿನಲ್ಲಿ ಸತ್ತು ಹೋದ ಜನ ಸುಮಾರು ೩೦ ಸಾವಿರ. ೪ ದಿನಗಳಲ್ಲಿ ಮೇಜರ್ ಜನರಲ್ ಚೌಧರಿ ನೇತೃತ್ವದಲ್ಲಿ ಹೈದ್ರಾಬಾದ್ ೧೯೪೮ ಸೆ ೨೭ಕ್ಕೆ ಭಾರತಕ್ಕೆ ವಿಲೀನವಾಯಿತು. ಒಂದು ವರ್ಷ ಒಂದು ತಿಂಗಳಿನ ಮೇಲೆ ಒಂದು ದೊಡ್ಡದಾದ ಭೂಭಾಗ ಭಾರತಕ್ಕೆ ಸೇರ್ಪಡೆಯಾಯಿತು.

      ಹೀಗೆ ಚೂರುಚೂರಾದ ಭಾರತವನ್ನು ಸುಂದರ ಸ್ವರೂಪಿ ರಾಷ್ಟ್ರ ಮಾಡಿದ ಪಟೇಲರನ್ನು ಕೃತಘ್ನರಾದ ನಾವುಗಳು ಮರೆತು ಬಿಟ್ಟಿದ್ದೇವೆ. ಈ ಮಹಾಪುರುಷನ ಕಡೆಗೆ  ಸರಕಾರಗಳು ತೋರಿದ ದಿವ್ಯನಿರ್ಲಕ್ಷ್ಯವನ್ನು ಮುಂದಿನ ಭಾಗದಲ್ಲಿ ನೋಡೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!