ಅಂಕಣ

ಸಿಡಿಲಾಘಾತ ನೀಡುವ ಸಿ.ಡಿಗಳು

ಹತ್ತಾರು ಬಗೆಯ ನವನವೀನ ಆಯುಧ, ಹತ್ಯಾರ, ಅಸ್ತ್ರಗಳು ನಿರಂತರವಾಗಿ ಬಳಕೆಗೆ ಬರುತ್ತಿವೆ. ಕಲ್ಲು ಗುಂಡುಗಳ ಪ್ರಾಚೀನ ಕಾಲದಿಂದ ಆರಂಭವಾಗಿ ಮದ್ದುಗುಂಡುಗಳನ್ನೇ ತುಂಬಿಕೊಂಡಿರುವ ತರಹೇವಾರಿ ಶಸ್ತ್ರಗಳು ಹೇರಳವಾಗಿ ದೊರಕುವ ಆಧುನಿಕತೆಯ ಇಂದಿನವರೆಗೆ ಆಯುಧಗಳು ರೂಪಾಂತರ ಹೊಂದುತ್ತಲೇ ಸಾಗಿವೆ. ವೈರಿಗಳ ಎದೆಬಗೆಯಬಲ್ಲ ಬಗೆ ಬಗೆಯ ಆಯುಧಗಳ ಬಗ್ಗೆ ಬಲ್ಲವರೇ ಎಲ್ಲಾ. ಆದರೆ ಅರಿಗಳಿಗೆ ಏನೊಂದೂ ಅರಿವಾಗದೆ ಅರೆ ಘಳಿಗೆಯಲ್ಲೇ ಆಘಾತ ನೀಡಬಲ್ಲ ಇದೊಂದು ಅಸ್ತ್ರ ಈಗೀಗ ಭಾರೀ ಸಂಚಲನ ಮೂಡಿಸುತ್ತಿದೆ. ರಾಜಕೀಯವೆಂಬ ರಣರಂಗದಲ್ಲಿ ಈ ಅಸ್ತ್ರ ಹೂಡಲ್ಪಟ್ಟು ಕೆಲವರ ಸ್ಥಿತಿ ಅಸ್ತವ್ಯಸ್ತಗೊಂಡ ಮೇಲಷ್ಟೇ ಇದರ ಪ್ರಭಾವ ಅರಿವಿಗೆ ಬರುತ್ತಿರುವುದು. ಅದುವೇ ಸಿ.ಡಿಯೆಂಬ ಸಿಡಿಲಾಸ್ತ್ರ!! ಆದರೆ ಕೆಲವೊಮ್ಮೆ ಬೇರೆ ಬೇರೆ ಕಾರಣಗಳಿಗಾಗಿ ಈ ಸಿಡಿಲಾಸ್ತ್ರವೂ, ನೀರಿಗೆ ಬಿದ್ದ ಸಿಡಿಮದ್ದಿನಂತೆ ಸಿಡಿಯದೇ ಠುಸ್ಸೆನ್ನುವ ಸಡಿಲಾಸ್ತ್ರ ಆಗುವುದಿದೆ.

ಪುರಾಣದ ಕಥೆಗಳಲ್ಲಿ ನಾವೆಲ್ಲರೂ ಚಕ್ರಾಯುಧದ ಬಗ್ಗೆ ಕೇಳಿದ್ದೇವೆ. ಅದರ ಆಧುನಿಕ ರೂಪವೇ ಚಕ್ರಾಕಾರದ ಈ ಸಿ.ಡಿಗಳಾಗಿರಬಹುದೇ? ಸಾಲದ್ದಕ್ಕೆ ಇದರಲ್ಲೂ ಕೈಗೆ ಸಿಕ್ಕಿಸಿಕೊಳ್ಳಲು ಅನುಕೂಲವಾಗುವಂತೆ ಮಧ್ಯದಲ್ಲಿ ಒಂದು ರಂಧ್ರವೂ ಇದೆ ನೋಡಿ! ಮತ್ತು ಯಾರ ವಿರುದ್ಧ ಪ್ರಯೋಗಿಸಲ್ಪಡುತ್ತದೋ ಅಂತವರನ್ನು ಈ ಸಿ.ಡಿ ಅಟ್ಟಾಡಿಸಿ ಕಾಡುವುದಲ್ಲದೇ ನೆಮ್ಮದಿಯನ್ನು ದಿಕ್ಕೆಡಿಸುವುದಂತೂ ನಿಕ್ಕಿ. ಸಿ.ಡಿ ಗಳು ಹುಟ್ಟು ಹಾಕುವ ಕಾವನ್ನು ಕಾಯ್ದು ಒಂದಷ್ಟು ತಿದಿಯೂದಿ ಅದರ ತೀವ್ರತೆಯನ್ನು ಹೆಚ್ಚಿಸುವ ಕಾಯಕವನ್ನು ಟಿ.ವಿ ಮಾಧ್ಯಮಗಳಂತೂ ಅಚ್ಚುಕಟ್ಟಾಗಿ ನಿಭಾಯಿಸುತ್ತಿವೆ. ಸಿ.ಡಿ ಸಿಡಿದರೆ ಟಿ.ಆರ್.ಪಿಯ ಕಡ್ಡಿ ನೆಟಿಗೆ ಮುರಿದು ಏರಲಿದೆ ಎನ್ನುವುದು ಅವರಿಗೂ ಗೊತ್ತು.

ಕ್ಯಾಸೆಟ್’ಗಳ ಜಾಗಕ್ಕೆ ಬಂದು ಕುಳಿತ ಸಿ.ಡಿಗಳು ಹಲವು ಅಯೋಗ್ಯರನ್ನು ಅಧಿಕಾರ ಸ್ಥಾನದಿಂದ ಜಾಗ ಖಾಲಿ ಮಾಡಿಸುವ ಜಾದೂ ಮಾಡಿವೆ. ಸಿ.ಡಿಯಲ್ಲಿ ಸೆರೆಯಾಗಿ ಸಮಾಜದ ಮುಂದೆ ವಿವಸ್ತ್ರಗೊಂಡ ನಾಯಕರ ಸ್ಥಿತಿ ಅಯೋಮಯ. ಸಿ.ಡಿಗಳೆಂಬ ಚಪ್ಪಟೆ ತಟ್ಟೆಗಳು ಹಲವು ಕಪಟಿಗಳ ಪಾಲಿಗೆ ಅಪ್ಪಟ ಸಿಡಿಲಾಘಾತ ನೀಡಿವೆ. ಸೇವೆ, ಸಹಾಯವೆಂದು ರೀಲು ಸುತ್ತುತ್ತಾ ತಮ್ಮ ಐಲು ಶೋಕಿ ಮೆರೆಯುವವರ ವರ್ತನೆಯಲ್ಲಿನ ಐಬಿನ ರಿಯಲ್ ಕಹಾನಿಗಳನ್ನು ಟ್ರ್ಯಾಪ್ ಮಾಡುವಲ್ಲಿ ರೀಲ್ ಇಲ್ಲದ ಸಿ.ಡಿಗಳದ್ದು ಟಾಪ್ ರೇಟೆಡ್ ಸಾಧನೆಯೇ ಸರಿ. ಸಡಿಲ ಕಚ್ಚೆಯವರ ಪಾಲಿಗೆ ಈ ಸಿ.ಡಿಯೇ ಸಿಡಿತಲೆ.

ರಾಜಕೀಯದಂಗಳದಲ್ಲಿ ಸಿ.ಡಿ ಆಗಿಂದಾಗ್ಗೆ ಸೌಂಡ್ ಮಾಡುತ್ತಿರುತ್ತದೆ. ನಮ್ಮ ರಾಜ್ಯದ ಮಟ್ಟಿಗಂತೂ ಅದು ಮಳೆಗಟ್ಟಿದ ಕಪ್ಪು ಆಗಸದಲ್ಲಿ ಆಗಾಗ ಎರಗುವ ಸಿಡಿಲಿನಂತೆ. ಇನ್ನು ಸಿ.ಡಿ ಬಿಡುಗಡೆಯ ಪ್ರಹಸನ ಆಗಾಗ ಜನರಿಗೆ ಪುಕ್ಕಟೆ ಮನರಂಜನೆ ನೀಡುವುದೂ ಇದೆ. ಸಿ.ಡಿಗೆ ಸಿ.ಡಿಯೇ ಪ್ರತ್ಯಾಸ್ತ್ರವಾಗಿ ಪ್ರಯೋಗಿಸಲ್ಪಟ್ಟು, ಹಲವಾರು ಸಿ.ಡಿಗಳು ಸರಣಿಯಲ್ಲಿ ಬಿಡುಗಡೆಗೊಂಡಿದ್ದ ಸಿ.ಡಿ ಯುದ್ಧಕ್ಕೆ ಈ ನಾಡು ಹಿಂದೊಮ್ಮೆ ಸಾಕ್ಷಿಯಾಗಿತ್ತು. ಜನರ ಕುತೂಹಲವನ್ನು ಕೆರಳಿಸುವಲ್ಲಿ ‘ಸಿ.ಡಿ ಬಿಡುಗಡೆ’ ಯಾವ ಮಲ್ಟಿ ಸ್ಟಾರರ್ ಮೂವಿಯ ಬಿಡುಗಡೆಗಿಂತ ಕಡಿಮೆಯೇನಿಲ್ಲ. ಕೆಲವೊಮ್ಮೆ ಈ ಸಿ.ಡಿಗಳು ಹಾವಿಲ್ಲದ ಹಾವಾಡಿಗನ ಬುಟ್ಟಿಯಂತೆ ಆಗುವುದಿದೆ. ಉದಾಹರಣೆಗೆ ಕೆಲವರು ಖಾಲಿ ಸಿ.ಡಿಯನ್ನು ಝಳಪಿಸುತ್ತಾರೆ. ಏನೇನೂ ಕಾಣಿಸದ ಬ್ಲರ್ ಸಿ.ಡಿಯನ್ನು ಹಿಡಿದುಕೊಂಡು ಬೆದರಿಸುತ್ತಾರೆ. ಏನೇ ಆದರೂ ನಮ್ಮ ರಾಜಕಾರಣಿಗಳು ‘ಸಿ.ಡಿ’ ಎಂಬ ಪದ ಕಿವಿಗೆ ಬೀಳುತ್ತಲೇ ಸಿಡಿಮಿಡಿಗೊಳ್ಳುತ್ತಿರುವುದಂತೂ ಸುಳ್ಳಲ್ಲ. ಸಿ.ಡಿಯಲ್ಲಿ ಸಿಕ್ಕಿಕೊಂಡರೆ ಬೆನ್ನು ಬೀಳುವ ಸಾಡೇಸಾತ್ ಅಷ್ಟು ಸುಲಭಕ್ಕೆ ವಿಮೋಚನೆಯಾಗದು ಎನ್ನುವುದು ಅವರಿಗೂ ತಿಳಿದಿದೆ.

ಓವರ್ ಡೋಸ್: ಎಚ್ಚರಿಕೆ ತಪ್ಪಿ ವರ್ತಿಸಿದರೆ, ಐದೈದು ಸಿ.ಡಿಗಳಲ್ಲಿ ತುಂಬಿಸಿಡುವಷ್ಟಿರುವ, ವ್ಯಕ್ತಿಯೋರ್ವನ ಸಾಧನೆ, ಜನಪ್ರಿಯತೆಗಳು ಕೇವಲ ಎರಡೋ ಮೂರೋ ನಿಮಿಷದ ಸಿ.ಡಿಯಿಂದ ನಿಮಿಷಾರ್ಧದಲ್ಲಿ ಮಣ್ಣುಪಾಲಾಗುತ್ತದೆ.

– ಸಂದೇಶ್. ಎಚ್. ನಾಯ್ಕ್, ಹಕ್ಲಾಡಿ

ಕುಂದಾಪುರ

naiksh2@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!