ಅಂಕಣ

ಸಂಸ್ಕಾರವಿಲ್ಲದ ಶಿಕ್ಷಣದಿಂದ ಸಮಾಜೋದ್ಧಾರ ಸಾಧ್ಯವೇ..?

  “ಸಾಫ್ಟ್’ವೇರ್ ಇಂಜಿನಿಯರ್’ನಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ”, “ಪ್ರಿಯತಮನ ಜೊತೆ ಸೇರಿ ಭಾವಿ ಪತಿಯನ್ನೇ ಕೊಂದ ಮೆಡಿಕಲ್ ವಿದ್ಯಾರ್ಥಿನಿ”. “ದೇಶದ್ರೋಹದ ಕೇಸ್’ನಲ್ಲಿ ಎಂಬಿಎ ಪದವೀಧರನ ಬಂಧನ”, “ಕುಡಿದ ಮತ್ತಿನಲ್ಲಿ, ಯುವಕ-ಯುವತಿಯರಿಂದ ಟ್ರಾಫಿಕ್ ಪೋಲೀಸ್ ಮೇಲೆ ಹಲ್ಲೆ”. ದಿನ ಬೆಳಗಾದರೆ ಪತ್ರಿಕೆಗಳಲ್ಲಿ,  ಸುದ್ದಿ ವಾಹಿನಿಗಳಲ್ಲಿ ಇಂತಹುದೇ ಸುದ್ದಿಯನ್ನು ಕೇಳಿ,ಕೇಳಿ ಬೆಸತ್ತು ಯಾಕಪ್ಪ ಈ ವಿದ್ಯಾವಂತ ಯುವ ಸಮಾಜ ಹೀಗಾಗುತ್ತಿದೆ ಎಂದು ಗೊಣಗಿಕೊಂಡು, ನಮ್ಮ ದಿನಚರಿಯಲ್ಲಿ ವ್ಯಸ್ತರಾಗಿ ಬಿಡುತ್ತೇವೆ. ಆದರೆ ಎಂದಾದರೂ ಇದಕ್ಕೆಲ್ಲಾ ಮೂಲ ಕಾರಣವನ್ನು ಹುಡುಕಿದ್ದೇವೆಯೇ…? ಯುವ ಜನಾಂಗದ ಈ ಸಮಾಜ ವಿರೋಧಿ ವರ್ತನೆಯ ಕಾರಣವನ್ನು ಅವಲೋಕಿಸಿದ್ದೇವೆಯೇ ? ಇಲ್ಲಾ ಅಲ್ಲವೇ. ಇಂದು ಯುವ ಜನತೆ ದಾರಿ ತಪ್ಪುತಿರುವುದಕ್ಕೆ ಪ್ರತ್ಯಕ್ಷ ಕಾರಣ ನಾವು ನಮ್ಮ ಮಕ್ಕಳಿಗೆ ಕಲಿಸುತಿರುವ ಪಾಶ್ಚಾತ್ಯ ಶಿಕ್ಷಣ ಮತ್ತು ಅವರು ಅನುಸರಿಸುತ್ತಿರುವ ಪಾಶ್ಚಾತ್ಯ ಸಂಸ್ಕೃತಿ. ಪರೋಕ್ಷ ಕಾರಣ, ಅವರು ಏನು ಕಲಿಯುತ್ತಿದ್ದಾರೆಂದು ಕೂಡ ನೋಡದ ನಾವುಗಳು.  ನಿಜವಾಗಲೂ ಗುರುಕುಲ ಅಥವಾ ಭಾರತೀಯ ಶಿಕ್ಷಣ ಪದ್ಧತಿಯಿದ್ದಾಗ ವಿದ್ಯಾವಂತ ಯುವ ಸಮಾಜ ಇಷ್ಟೆಲ್ಲಾ ದಾರಿ ತಪ್ಪಿದ ಉದಾಹರಣೆಗಳೇ ಇರಲಿಲ್ಲ. ಅಷ್ಟಕ್ಕೂ ಈ ಪಾಶ್ಚಿಮಾತ್ಯ ಶಿಕ್ಷಣವೆಂಬುದು ಜನಿಸುವ ಮೊದಲೇ ಭಾರತದಲ್ಲಿ ಲಕ್ಷದ ಮೂವತ್ತು ಸಾವಿರ ಗುರುಕುಲಗಳಿದ್ದವೆಂದರೆ ನಂಬಲೇ ಬೇಕು. ನಮ್ಮ ತಕ್ಷ -ಶಿಲಾ ವಿಶ್ವವಿದ್ಯಾಲಯವೇ ಜಗತ್ತಿನ ಮೊದಲ ಮತ್ತು ಪ್ರಾಚೀನ ವಿಶ್ವವಿದ್ಯಾಲಯ ಎಂಬುದು ಮತ್ತೊಂದು ಹೆಮ್ಮೆ. ಹಾಗಾದರೆ ನಮ್ಮನ್ನು ಈ ಪಾಶ್ಚಿಮಾತ್ಯ  ಶಿಕ್ಷಣ ಮತ್ತು ಸಂಸ್ಕೃತಿ ಆವರಿಸಿಕೊಂಡದ್ದಾದರು ಎಂದು ?ಮತ್ತು ಹೇಗೆ ? ಇದನ್ನು ತಿಳಿಯಬೇಕೆಂದರೆ ಮೊದಲು ಪಾಶ್ಚಿಮಾತ್ಯರು ಭಾರತಕ್ಕೆ ಹೇಗೆ ಬಂದರು ಎಂಬುದನ್ನು ತಿಳಿಯಬೇಕು. ಅದಕ್ಕೆ 500 ವರ್ಷಗಳ ನಿಜವಾದ ಇತಿಹಾಸವನ್ನೇ ಕೆದಕಬೇಕು.

ನಾವು, ನೀವು ಸೇರಿದಂತೆ ಇಂದಿನ ಪೀಳಿಗೆಯ ಮಕ್ಕಳು ಸಹ ನಮ್ಮ ಇತಿಹಾಸದಲ್ಲಿ ಓದುವುದು, ವಾಸ್ಕೋಡಗಾಮ, ಎಂಬ ಪೋರ್ಚಗೀಸ್ ವ್ಯಾಪಾರಿ  ಭಾರತಕ್ಕೆ ಸಮುದ್ರ ಮಾರ್ಗವನ್ನು ಬಹಳ ಕಷ್ಟ ಪಟ್ಟು ಕಂಡು ಹಿಡಿದ ಎಂದು. ಆದರೆ ಸತ್ಯ ಬೇರೆಯೇ ಇದೆ. ವಾಸ್ಕೋಡಗಾಮ ತಾನಾಗೇ ಭಾರತವನ್ನು ಅರಸಿ ಹೊರಡಲಿಲ್ಲ. 1490ರ ದಶಕದಲ್ಲಿ ಆಫ್ರಿಕಾದಲ್ಲಿ ತನ್ನ ವ್ಯಾಪಾರ ನಿಮಿತ್ತ ಬಂದಿದ್ದ ವಾಸ್ಕೋಡಗಾಮ ಆಫ್ರಿಕಾದ ಸಮುದ್ರದಲ್ಲಿ ತನ್ನ ಬಳಿಯಿದ್ದ ಹಡಗಿಗಿಂತ ಮೂರು ಪಟ್ಟು ದೊಡ್ಡ ಹಡಗನ್ನು ನೋಡಿ ಅವಕ್ಕಾಗುತ್ತಾನೆ. ಅಷ್ಟು ದೊಡ್ಡ ಹಡಗನ್ನು ಅದುವರೆಗೂ ಅವನು ಇಡೀ ಜಗತ್ತಿನಲ್ಲಿಯೇ ನೋಡಿರುವುದಿಲ್ಲ.  ಆ ಹಡಗಿನ ಮಾಲೀಕನನ್ನು ಹುಡುಕಿ ಭೇಟಿಯಾದಾಗ ತಿಳಿಯುತ್ತದೆ, ಆ ಹಡಗು  ಆಫ್ರಿಕಾಕ್ಕೆ ತೇಗ, ದೇವದಾರು ಮರಗಳ ಜೊತೆಗೆ ಸಾಂಭಾರ ಪದಾರ್ಥಗಳನ್ನು ಮಾರಲು ಬಂದ, ಭಾರತದ ಚಂದನ್ ಎಂಬ ವ್ಯಾಪಾರಿಗೆ ಸೇರಿದುದ್ದೆಂದು. ಚಂದನ್ ಬಾಯಲ್ಲಿ ಭಾರತದ ಭವ್ಯತೆಯನ್ನು ಕೇಳಿದ ವಾಸ್ಕೋಡಗಾಮ ತನ್ನ ವ್ಯಾಪಾರ-ವಹಿವಾಟನ್ನು  ವಿಸ್ತರಿಸಲು ಭಾರತವೇ ಸರಿಯಾದ ಸ್ಥಳವೆಂದರಿತು,  ಚಂದನ್’ನ ಹಡಗನ್ನು ಹಿಂಬಾಲಿಸುತ್ತಾ ಅಂದಿನ ಕಲ್ಲಿಕೋಟೆಗೆ, ಇಂದಿನ ಕ್ಯಾಲಿಕಟ್’ಗೆ ಬಂದಿಳಿಯುತ್ತಾನೆ. ಹಾಗೆ ಬಂದಿಳಿದವನು ಭಾರತವನ್ನು ನೋಡಿ ಅಕ್ಷರಶ: ಧಿಗ್ಭ್ರಾಂತನಾಗುತ್ತಾನೆ. ಕೇವಲ ಸಂಪತ್ತಿನಲ್ಲಲ್ಲದೇ , ವೈದ್ಯಕೀಯ, ವಿಜ್ಞಾನ, ಸಂಸ್ಕ್ರತಿ   ಹೀಗೆ ಎಲ್ಲಾ ವಿಭಾಗಗಳಲ್ಲೂ ಭಾರತ ಅದಾಗಲೇ ಪಾಶ್ಚಿಮಾತ್ಯ ದೇಶಗಳಿಗಿಂತ ಬಹಳ ಮುಂದಿರುತ್ತದೆ.

ವಾಸ್ಕೋಡಗಾಮ ಭಾರತಕ್ಕೆ ಕಾಲಿಡುವ ಮೊದಲು ನಮ್ಮ ದೇಶ ಯಾವ ಮಟ್ಟಿಗೆ ಉಳಿದೆಲ್ಲಾ ದೇಶಗಳಿಗಿಂತ ನೂರಾರು ವರ್ಷ ಮುಂದಿರುತ್ತದೆಂದರೆ, ಜಗತ್ತಿನ ಉಳಿದ ದೇಶಗಳು ರೋಗಗಳಿಗಿನ್ನು  ಹೆಸರು ಹುಡುಕುತ್ತಿರುವಾಗ, ಭಾರತದ ಆಯುರ್ವೇದ ಎಲ್ಲಾ ರೋಗಗಳಿಗೂ ಔಷಧ ಕಂಡುಹಿಡಿದಿತ್ತು. ಪಾಶ್ಚಿಮಾತ್ಯ ದೇಶಗಳು ಭೂಮಿಯನ್ನು ಬಿಟ್ಟು ಬೇರೆಯ ಗ್ರಹಗಳು ಇವೆ ಎಂಬುದನ್ನು ಅರಿಯುವ ಮೊದಲೇ , ಭಾರತೀಯರು ಗ್ರಹಗಳಿಗೆಲ್ಲ ಹೆಸರಿಟ್ಟು, ನವಗ್ರಹಗಳಿಗೆ ಪೂಜೆಸಲ್ಲಿಸಲು ಪ್ರಾರಂಭಿಸಿದ್ದರು. ಜಗತ್ತಿನಲ್ಲಿ ಮೊದಲ ಪಶು-ವೈದ್ಯಶಾಲೆ ಕಟ್ಟಿಸಿದ್ದು ನಮ್ಮ ಅಶೋಕ. 18ನೇ ಶತಮಾನದಲ್ಲಿ ಬ್ರೆಜಿಲ್ ನಲ್ಲಿ ವಜ್ರಗಳು ದೊರಕುವವರೆಗು, ಇಡೀ ಜಗತ್ತಿಗೆ ವಜ್ರವನ್ನು ಪೂರೈಸುತ್ತಿದ್ದ ಏಕೈಕ ರಾಷ್ಟ್ರ ಭಾರತ.  ಬೀಜಗಣಿತ, ರೇಖಾಗಣಿತ ಮತ್ತು ತ್ರಿಕೋನಮಿತಿ ಮತ್ತು ಕ್ಯಾಲ್ಕುಲಸ್ ಪರಿಕಲ್ಪನೆಗಳನ್ನು ಜಗತ್ತಿಗೆ  ಪರಿಚಯಿಸಿದ್ದೇ ಭಾರತ. ಹತ್ತಿಯ ಉತ್ಪಾದನೆ ಮತ್ತು ಬಳಕೆ, ಶ್ಯಾಂಪೂವಿನ ಬಳಕೆಯನ್ನು ಪರಿಚಯಿಸಿದ್ದು ಕೂಡ ಭಾರತವೆ. ಇನ್ನು ಚಂದ್ರನ ಮೇಲೆ ನೀರಿನ ಅಂಶವಿರುವುದನ್ನು ಮೊದಲು ಗುರುತಿಸಿದ್ದು ಕೂಡ ನನ್ನ ದೇಶವೇ . ಜಗತ್ತಿನ ಮೊದಲ  ವೈದ್ಯಕೀಯ ವಿಶ್ವಕೋಶವನ್ನು ಬರೆದದ್ದು ನಮ್ಮ ಮಹರ್ಷಿ ಸುಸ್ರೂತರು, ಜಗತ್ತಿಗೆ ಶಸ್ತ್ರ ಚಿಕಿತ್ಸೆಯನ್ನು ಪರಿಚಯಿಸಿದ್ದು ಕೂಡ ಇವರೇ. ಇಂದು ಇಡೀ ಜಗತ್ತೆ ಹಿಂದೆ ಬಿದ್ದಿರುವ ಯೋಗ ಕೂಡ ನಮ್ಮದೇ ..ಗುರುತ್ವಾಕರ್ಷಣೆಯ ಪಾಠವನ್ನು ಗೆಲಿಲಿಯೋ ಜಗತ್ತಿಗೆ ಮಾಡುವ ನೂರಾರು ವರ್ಷಗಳ ಮೊದಲೇ ಭಾಸ್ಕರಾಚಾರ್ಯರು ತಮ್ಮ “ಸಿದ್ಧಾಂತ ಶಿರೋಮಣಿ” ಪುಸ್ತಕದಲ್ಲಿ ಭೂಮಿಯ ಗುರುತ್ವಾಕರ್ಷಣೆಯ ಬಗ್ಗೆ ವಿಸ್ಕೃತವಾಗಿ ವಿವರಿಸಿದ್ದರು.  ಹನ್ನೆರೆಡು ವರ್ಷಕ್ಕೊಮ್ಮೆ ನಮ್ಮ ದೇಶದಲ್ಲಿ ನಡೆಯುವ ಕುಂಭಮೇಳ  ಪ್ರಪಂಚದ ಅತಿ ದೊಡ್ಡ ಉತ್ಸವ. ಜಗತ್ತಿನಲ್ಲಿ ನಗರಗಳಿಗೆ ಒಳ ಚರಂಡಿ ವ್ಯವಸ್ಥೆಯನ್ನು ಅಳವಡಿಸಿದ ಮೊದಲ ನಾಗರೀಕತೆ ನಮ್ಮದು, ಭೂಮಿಯಿಂದ ಸೂರ್ಯನಿಗಿರುವ ಅಂತರವನ್ನು ಜಗತ್ತು ಲೆಕ್ಕ ಹಾಕುವ ಮೊದಲೇ ನಮ್ಮ ಹನುಮಾನ್ ಚಾಲಿಸ,  ಸೂರ್ಯನಿಂದ ಭೂಮಿಗಿರುವ ದೂರವನ್ನು ” ಯುಗ್ ಸಹಸ್ರ ಯೋಜನ್ ಪರ್ ಭಾನು ” ಎಂದು ಹೇಳಿ ಮುಗಿಸಿರುತ್ತದೆ. ಒಂದು ಯುಗ ಎಂದರೆ ಹನ್ನೆರಡು ಸಾವಿರ ವರ್ಷ,  ಸಹಸ್ರ ಎಂದರೆ ಸಾವಿರ, ಒಂದು ಯೋಜನ ಎಂದರೆ ಎಂಟು ಮೈಲಿ. ಯುಗ # ಸಹಸ್ರ#ಯೋಜನಾ = ಭಾನು [ಸೂರ್ಯ] ಅಂದರೆ 12000 *1000*8 = 96000000ಮೈಲಿಗಳು. ಇದು ಭೂಮಿಯಿಂದ ಸೂರ್ಯನಿಗಿರುವ ದೂರ. ಇದನ್ನು ಲೆಕ್ಕ ಹಾಕಲು ಪಾಶ್ಚಿಮಾತ್ಯರು ತೆಗೆದುಕೊಂಡದ್ದು ಸಹಸ್ರ ವರುಷಗಳು. ಇನ್ನೇನು ಬೇಕು ಸ್ವಾಮಿ ಭಾರತದ ಭವ್ಯ ಪರಂಪರೆಯನ್ನು ಗುರುತಿಸಲು?.  ಹದಿನೈದನೆಯ ಶತಮಾನದಲ್ಲಿ ಗೆಲಿಲಿಯೋ ಸೂರ್ಯ ಸ್ಥಿರ,  ಭೂಮಿ ಸೂರ್ಯನ ಸುತ್ತ ಸುತ್ತುತದೆ, ಆದ್ದರಿಂದಲೇ ಹಗಲು ರಾತ್ರಿಯಾಗುತ್ತದೆಂಬ ಸತ್ಯವನ್ನು ಜಗತ್ತಿಗೆ ಹೇಳುವ ಸಹಸ್ರ ವರುಷಗಳ ಮೊದಲೇ ಈ ನೆಲದಲ್ಲಿ ಆರ್ಯಭಟ ಎಂಬ ವಿಜ್ಞಾನಿ ಆ ಸತ್ಯವನ್ನು ಹೇಳಿ ಮುಗಿಸಿರುತ್ತಾನೆ. ಭೂಮಿ ತನ್ನ ಅಕ್ಷದಲ್ಲಿ ಒಂದು ಸುತ್ತು ಸುತ್ತಿದಾಗ ಒಂದು ದಿನವಾಗುತ್ತದೆ, ಹಾಗೆ ಸುತ್ತುವಾಗ ಭೂಮಿ ತನ್ನ ಅಕ್ಷದಿಂದ ಚಲಿಸುತ್ತದೆ. ಹೀಗೆ ಚಲಿಸುತ್ತ ಚಲಿಸುತ್ತ ಸೂರ್ಯನಿಗೆ ಒಂದು ಸುತ್ತು ಬರುವಾಗ ಒಂದು ಸಂವತ್ಸರ ಅಥವಾ ಒಂದು ವರ್ಷವಾಗುತ್ತದೆ. ಹೀಗೆ ಸೂರ್ಯನ ಸುತ್ತ ಭೂಮಿ ಸುತ್ತಲು ತೆಗೆದುಕೊಳ್ಳುವ ಸಮಯ 365.2587756484 ದಿನಗಳು ಎಂಬುದನ್ನು ಸ್ಮಾರ್ಟ್ ಗಿಂತ ನೂರಾರು ವರುಷಗಳಿಗೆ ಮುಂಚೆ ನಿಖರವಾಗಿ ಲೆಕ್ಕ ಹಾಕಿ ಹೇಳಿರುತ್ತಾರೆ ಭಾಸ್ಕರಾಚಾರ್ಯರು. ಭಾರತದ ಅಂದಿನ ವೈಭವವನ್ನು, ಸಾಧನೆಯನ್ನು ಹೇಳುತ್ತಾ ಹೋದರೆ ಪದಗಳಿಗೆ ಬರ ಬರಬಹುದು. ಆ ಕಾಲಕ್ಕೆ ಭಾರತ ಇಡೀ ವಿಶ್ವಕ್ಕೆ ಪಾಠ ಮಾಡುವಷ್ಟು ಶಕ್ತವಾಗಿರುತ್ತದೆ.

    ಹೀಗೆ ಭಾರತದ ವೈಭವವನ್ನು ಕಣ್ಣಾರೆ ಕಂಡ ವಾಸ್ಕೋಡಗಾಮನಿಗೆ  ಕಾಣ ಸಿಕ್ಕ ಒಂದೇ ಒಂದು ಕೆಟ್ಟ ಅಂಶವೆಂದರೆ ಭಾರತೀಯ ರಾಜರುಗಳ ಒಳಜಗಳ. ಅವನ ನಂತರ ಬಂದ ಉಳಿದ ದೇಶದ ವ್ಯಾಪಾರಿಗಳು ಆ ಒಳ ಜಗಳವನ್ನೇ ಬಂಡವಾಳ ಮಾಡಿಕೊಂಡು, ಭಾರತವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಅವರಿಗೆ ಅಡ್ಡಗಾಲಾಗಿದ್ದು ನಮ್ಮ ಸಂಸ್ಕೃತಿ.  ಸನಾತನ ಸಂಸ್ಕೃತಿ ಭಾರತದಲ್ಲಿರುವವವರೆಗೂ, ಭಾರತವನ್ನು ಕೈ ವಶ ಮಾಡಿಕೊಳ್ಳುವುದು ಕಷ್ಟವೆಂದರಿತ ವಿದೇಶಿಗರು ಮಾಡಿದ ಮೊದಲ ಕೆಲಸವೆಂದರೆ , ಯೋಗ, ವಿಜ್ಞಾನ, ವೇದ-ಉಪನಿಷದ್ , ಆಯುರ್ವೆದದ ಸಹಾಯದಿಂದ ಜಗತ್ತಿನ ಎಲ್ಲಾ ರಾಷ್ಟ್ರಗಳನ್ನು ಹಿಂದಿಕ್ಕಿ ವಿಶ್ವಗುರುವಾಗುವತ್ತ ನಾಗಾಲೋಟದಿಂದ ಓಡುತ್ತಿದ್ದ ಭಾರತೀಯ ಸಂಸ್ಕ್ರತಿಯ ಮೇಲಿನ ಆಕ್ರಮಣ. ತಮ್ಮ ಮೋಜಿನ ಜೀವನ ಶೈಲಿಯಿಂದ ಯುವಜನಗಳನ್ನು ಸೆಳೆಯಲಾರಂಭಿಸಿತ್ತಾರೆ, ಅಂದಿನ ಕಾಲಕ್ಕೆ ಕಷ್ಟವೆನ್ನಿಸುತ್ತಿದ್ದ ಗುರುಕುಲದ ಸಂಸ್ಕಾರಯುತ ಸಂಸ್ಕೃತ ಶಿಕ್ಷಣದ ಬದಲು, ಕಲಿಯಲು ಸುಲಭವಾಗಿದ್ದ ಸತ್ವವಿಲ್ಲದ ಪಾಶ್ಚಿಮಾತ್ಯ ಶಿಕ್ಷಣ ಪದ್ಧತಿಯನ್ನು ಹೇರುತ್ತಾರೆ. ಮೊದಲೇ ಬರೆದಿಟ್ಟಿದ್ದ ಭಾರತದ ಭವ್ಯ ಇತಿಹಾಸವನ್ನು ತಿರುಚಿ , ತಮಗೆ ಬೇಕಾದ ಹಾಗೆ ಬರೆಯುತ್ತಾರೆ.  ಆ ತಿರುಚಿದ ಇತಿಹಾಸವನ್ನೇ ಇಂದಿಗೂ ನಮ್ಮ ಮಕ್ಕಳು ಓದುತ್ತಿರುವುದು.

ಅಂದಿನ ಭಾರತೀಯ ಸಂಸ್ಕೃತಿಯ ಇನ್ನೊಂದು ವಿಶೇಷತೆ ಎಂದರೆ, ಸ್ಥಳ ಮಹಿಮೆಗಳನ್ನಾಧರಿಸಿ ಊರುಗಳಿಗೆ, ನಗರಗಳಿಗೆ ಹೆಸರಿಡುತ್ತಿದ್ದದ್ದು.  ಆದರೆ ಮೊದಲೇ ಹೇಳಿದ ಹಾಗೆ, ಪಾಶ್ಚಿಮಾತ್ಯರಿಗೆ ನಾಲಿಗೆ ಹೊರಳದೆ, ಉಚ್ಚರಿಸಲು ಕಷ್ಟವೆನಿಸಿದ ಹೆಸರುಗಳನೆಲ್ಲ ಬದಲಾಯಿಸಿ ತಮಗೆ ಅನುಕೂಲವಾಗುವಂತೆ ಕರೆಯಲಾರಂಭಿಸುತ್ತಾರೆ.  ಕಾಳಿಮಾತೆಯ ಶಕ್ತಿ ಪೀಠವಾಗಿದ್ದ  ಕಾಳಿಖಂಡ್ ಅವರ ಬಾಯಲ್ಲಿ ಕೊಲ್ಕತ್ತ ಆಗುತ್ತದೆ. ಸಾಗರಮಾತ ಮೌಂಟ್ ಎವರೆಸ್ಟ್ ಆಗುತ್ತದೆ.,ಭಾರತೀಗರ ಹೆಮ್ಮೆಯ  ಗೌರಿ ಶಂಕರ ಅಥವಾ ಕಾಂಚನ ಗಂಗಾ,  ಕೆ2 ಆಗುತ್ತದೆ. ಮನ್ಮಥನನ್ನು ವಧೆ ಮಾಡಿದ ಶಿವ, ಲಿಂಗ ರೂಪದಲ್ಲಿ ದುರ್ಜಯಲಿಂಗನಾಗಿ ನೆಲೆ ನಿಂತ ದುರ್ಜಯ ಲಿಂಗ ಬ್ರಿಟೀಷರಿಗೆ ಉಚ್ಚರಿಸಲು ಬಾರದ ಕಾರಣಕ್ಕೆ ಡಾರ್ಜಿಲಿಂಗ್ ಆಗುತ್ತದೆ . ಕೊಡಗು ಕೂರ್ಗ್ ಆಗುತ್ತದೆ. ಹಿಮಾಲಯದ ದ್ರೋಣಧಾರ ಡೆಹ್ರಾಡೂನ್ ಆಯಿತು.. ಶ್ರೀರಾಮನ ಮಗ ಲವನ ರಾಜಾಧಾನಿ ಲವಪುರ , ಲಾಹೋರ್ ಆಯಿತು. ಹೇಳುತ್ತಾ ಹೋದರೆ ಹೆಸರುಗಳ ಮೇಲೆ ಪಾಸ್ಚ್ಯಾತ್ಯರು ಮಾಡಿದ ದಾಳಿಯದೇ ಒಂದು ಪುಸ್ತಕವಾಗಿ ಬಿಡುತ್ತದೆ.

ಹೀಗೆ ಭಾರತೀಯತೆಯನ್ನು ತುಳಿಯುತ್ತಾ , ನಮ್ಮತನವನ್ನು ಅಳಿಸುತ್ತಾ ಪಾಶ್ಚಿಮಾತ್ಯತೆಯನ್ನು ನಮ್ಮ ಮೇಲೆ ಹೇರಿ, ಅವರಿಗಿಂತ ಬಹಳ ಮುಂದುವರಿದಿದ್ದ ಭಾರತವನ್ನು ಸಹ ಪಾಶ್ಚಿಮಾತ್ಯ ದೇಶಗಳ ಸಾಲಿಗೆ ತಂದು ನಿಲ್ಲಿಸಿದ  ಡಚ್ಚರು, ಪೋರ್ಚಗೀಸರು , ಬ್ರಿಟೀಷರು ,ಮುಸ್ಲಿಂ ಬಂಡುಕೋರರು ನಮ್ಮನ್ನಾಳಿದ್ದು ಈಗ ಇತಿಹಾಸ. ಹೀಗೆ ಪಾಶ್ಚಿಮಾತ್ಯರು ಮತ್ತು ಪಾಶ್ಚಿಮಾತ್ಯತೆ ಭಾರತಕ್ಕೆ ಬಂದದ್ದು . ನಮ್ಮ ಇತಿಹಾಸ ಹೇಳಿದ ಹಾಗೆ ಅಲ್ಲ. ಅಲ್ಲಿಂದಾಚೆಗೆ ದೇಶದ ಭವಿಷ್ಯವನ್ನು ತಿರುಚುವುದರ ಜೊತೆ, ಭಾರತದ ಇತಿಹಾಸವನ್ನು ಸಹ ಪ್ರತಿ-ಹಂತದಲ್ಲೂ ತಿರುಚುತ್ತಾ ಹೋಗುತ್ತಾರೆ ವಿದೇಶಿಗರು. ಅದಕ್ಕೆ ಜ್ವಲಂತ ಉದಾಹರಣೆ , ವಿದೇಶಿಗರ ವಿರುದ್ಧ ದಂಗೆಯೆದ್ದ ಅದೆಷ್ಟೋ ಕ್ರಾಂತಿಕಾರಿಗಳ ಹೆಸರು ಇಂದಿಗೂ ನಮ್ಮ ಇತಿಹಾಸದಲ್ಲಿಲ್ಲದೆ ಇರುವುದು. ಸ್ವತಂತ್ರ್ಯ ಬಂದ ನಂತರ ಮತ್ತೆ ನಮ್ಮ ನಿಜವಾದ ಇತಿಹಾಸವನ್ನು ಬರೆದು ದಾಖಲಿಸುವ ಎಲ್ಲಾ ಅವಕಾಶಗಳು ಅಧಿಕಾರಕ್ಕೆ ಬಂದ ಸರಕಾರಕ್ಕಿದ್ದರು , ಬ್ರೀಟೀಷರು ಉಳಿಸಿ ಹೋಗಿದ್ದ ಅಲ್ಪ-ಸ್ವಲ್ಪ ಸಂಪತ್ತನ್ನು ಲೂಟಿ ಮಾಡುವಲ್ಲಿಯೇ ನಿರತರಾದ್ದರಿಂದ ನಮ್ಮ ಮಕ್ಕಳು ಓದುತ್ತಿರುವ ಪಠ್ಯ-ಪುಸ್ತಕಗಳಲೆಲ್ಲೂ ಭಾರತದ ವೈಭವತೆಯ ಉಲ್ಲೇಖವಿಲ್ಲ.  ನಾವುಗಳು ಸಹ  ನಮ್ಮ  ಯುವ ಪೀಳಿಗೆಗೆ ಈ ಸತ್ಯಗಳನ್ನು ತಿಳಿಸುವ ಕೆಲಸ ಮಾಡುತ್ತಿಲ್ಲ. ದೇಶದ ಬಗ್ಗೆ ಸರಿಯಾಗಿ ಗೊತ್ತಿಲ್ಲದವರು ದೇಶವನ್ನು ಪ್ರೀತಿಸಲು  ಹೇಗೆ ತಾನೇ ಸಾಧ್ಯ ?

ಹೇಗೆ ಪಾಶ್ಚಾತ್ಯ ಶಿಕ್ಷಣ ಮತ್ತು ಸಂಸ್ಕೃತಿ ನಮ್ಮನ್ನು ಐವತ್ತು -ನೂರು ವರುಷಗಳಷ್ಟು ಕಾಲ ಹಿಂದೆ ತಳ್ಳುತ್ತಿವೆ ಎಂಬುದಕ್ಕೆ ಒಂದು ಸರಳ ಉದಾಹರಣೆ ಕೊಡುತ್ತೇನೆ ಕೇಳಿ. ನಿಮಗೆಲ್ಲಾ ನೆನಪಿರುವಂತೆ ನಮ್ಮ ತಾತ ಮುತ್ತಾತ್ತಂದಿರು ಹಲ್ಲುಜ್ಜಲು ಬಳಸುತ್ತಿದ್ದದ್ದು ಉಪ್ಪು, ಬೇವಿನಕಡ್ಡಿ ಮತ್ತು ಇದ್ದಿಲನ್ನು. ನಮ್ಮ ಪಾಶ್ಚಿಮಾತ್ಯ ವೈದ್ಯಕೀಯ ಪದ್ದತಿ,  ಉಪ್ಪು, ಬೇವು, ಇದ್ದಿಲೆಲ್ಲ ಆರೋಗ್ಯಕ್ಕೆ ಮತ್ತು ಹಲ್ಲಿಗೆ ಒಳ್ಳೆಯದಲ್ಲವೆಂದು ಅದಾಗಲೇ ಪಾಶ್ಚಿಮಾತ್ಯ ಶಿಕ್ಷಣವನ್ನು ಪಡೆಯಲಾರಂಭಿಸಿದ್ದ ಭಾರತೀಯರ ತಲೆ ನೇವರಿಸುತ್ತದೆ.. ಪರಿಣಾಮ ಭಾರತೀಯರ ಮನೆ-ಮನೆಯ ಬಚ್ಚಲಲ್ಲಿ  ಟೂತ್ ಪೇಸ್ಟ್, ಟೂತ್-ಬ್ರಷ್’ಗಳು ರಾರಾಜಿಸಿದವು. ಎಲ್ಲರಿಗೂ ಏನೋ ಹೆಮ್ಮೆ, ಆಧುನಿಕತೆಯ ಹರಿಕಾರರುಗಳು ನಾವು ಎಂಬಂತೆ. ಕಾಲ ಬದಲಾಯಿತು, ಇಂದು ಅದೇ ಪಾಶ್ಚಿಮಾತ್ಯ ವೈದ್ಯಕೀಯ ಪದ್ಧತಿ ದಂತಕ್ಷಯ, ದಂತಕುಳಿಗಳಂತಹ ಸಮಸ್ಯೆಗಳಿಗೆ ಉಪ್ಪು, ಬೇವು ರಾಮಬಾಣ, ನಿಮ್ಮ ಟೂತ್-ಪೇಸ್ಟ್ ನಲ್ಲಿ ಉಪ್ಪು ಇದೆಯೇ, ನಿಮ್ಮ ಟೂತ್-ಪೇಸ್ಟ್ ನಲ್ಲಿ ಬೇವು ಇದೆಯೇ ಎಂದು ಕೇಳುತ್ತಿವೆ. ಟೂತ್ ಪೇಸ್ಟ್ ನಲ್ಲಿ ಇದ್ದಿಲು ಹೊಸ ಸೇರ್ಪಡೆ. ಹಾಗಾದರೆ ನಮ್ಮ ಪೂರ್ವಜರಿಗೆ ಮೊದಲೇ ಉಪ್ಪು, ಬೇವು ಮತ್ತು ಇದ್ದಿಲ ಉಪಯೋಗ ತಿಳಿದಿತ್ತೆಂದಾಗಲಿಲ್ಲವೇ..? ಅವರು ನಮಗಿಂತ ಬುದ್ದಿವಂತರಾಗಿದ್ದರೆಂದಾಗಲಿಲ್ಲವೇ? ಇಷ್ಟೇ ಸ್ವಾಮಿ ನಮ್ಮ ಸಂಸ್ಕೃತಿಗೂ ಅವರ ಸಂಸ್ಕೃತಿಗೂ ಇರುವ ವ್ಯತ್ಯಾಸ. ನಮ್ಮ ಪ್ರತಿಯೊಂದು ಆಚರಣೆಗಳ ಹಿಂದೆಯೂ ಒಂದೊಂದು ವೈಜ್ಞಾನಿಕ ಹಿನ್ನಲೆಯಿದೆ. ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ಅರಿತಿದ್ದ ಸತ್ಯವನ್ನು ಪಾಶ್ಚಿಮಾತ್ಯ ಜಗತ್ತು ಈಗ ಅನ್ವೇಷಿಸುತ್ತಿದೆ ಎಂದರೆ , ಯಾರದ್ದು  ಆಧುನಿಕ ಸಂಸ್ಕೃತಿ ? ನಮ್ಮದೋ ಅಥವಾ ಪಾಶ್ಚಿಮಾತ್ಯರದ್ದೋ..? . ಹೇಳುತ್ತಾ ಹೋದರೆ ಪುಟಗಟ್ಟಲೆ ಇಂತಹ ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಇನ್ನು ಸಂಸ್ಕಾರ , ಸಾಮಾಜಿಕ ಕಳಕಳಿಯ ಬಗ್ಗೆ ನೋಡುವುದಾದರೇ , ಮೊದಲೆಲ್ಲಾ ಶಿಕ್ಷಣದಲ್ಲಿ ವಿಧ್ಯಾಭ್ಯಾಸದ ಜೊತೆ ನೀತಿಪಾಠಗಳು ಸೇರಿ, ಯುವ ಸಮೂಹ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಹೇಳಿಕೊಡುತಿತ್ತು. ಅನಕ್ಷರಸ್ತರು ಮಾತ್ರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಸರಿ ತಪ್ಪುಗಳ ವಿವೇಚನ ಶಕ್ತಿಯನ್ನು ಭಾರತೀಯ ಶಿಕ್ಷಣ ಹೇಳಿಕೊಡುತಿತ್ತು. ಆದರೀಗ ಪರಿಸ್ಥಿತಿ ಬದಲಾಗಿದೆ..ದೊಡ್ಡ ದೊಡ್ಡ ಅಪರಾಧಗಳಲ್ಲಿ ಕೇಳಿಬರುತ್ತಿರುವುದು ಡಾಕ್ಟರ್ ಇಂಜಿನಿಯರ್’ಗಳ ಹೆಸರುಗಳು. ಯಾಕೆಂದರೆ ಇಂದಿನ ಶಿಕ್ಷಣ ಕೆಲಸಗಿಟ್ಟಿಸುವುದು ಹೇಗೆಂದು ಹೇಳಿಕೊಡುವುದನ್ನು ಬಿಟ್ಟರೆ ಮತ್ತಿನೇನನ್ನು ಹೇಳಿ ಕೊಡುತ್ತಿಲ್ಲ. ಶಿಕ್ಷಣ ವ್ಯಾಪಾರೀಕರಣವಾಗುತ್ತ ಹೋದಂತೆಲ್ಲ, ಶಿಕ್ಷಣದಿಂದ ಸಂಸ್ಕಾರ ಹೊರದೂಡಲ್ಪಟ್ಟಿದೆ. ಇಂತಹ ಸಂಸ್ಕಾರವಿಲ್ಲದ ಶಿಕ್ಷಣ ಕಲಿತ ಮಕ್ಕಳು ಕೆಲಸವನ್ನೇನೋ ಗಿಟ್ಟಿಸಿತ್ತಾರೆ, ಆದರೆ ಸಂಸ್ಕಾರ ಮತ್ತು ಸಾಮಾಜಿಕ ಕಳಕಳಿಯಿಲ್ಲದ , ನಮ್ಮ ಸಂಸ್ಕೃತಿಯ ಪರಿಚಯವೇ ಇಲ್ಲದ ಯುವಸಮೂಹ , ಸ್ವೇಚಾಚಾರವನ್ನೇ ಸ್ವತಂತ್ರವೆಂದು ಕೊಂಡು ಸಮಾಜಕ್ಕೆ ಮಾರಕವಾಗುತ್ತಿದ್ದಾರೆ. ತಪ್ಪು ಅವರದಲ್ಲ, ಸಂಸ್ಕೃತಿಯ ಬಗ್ಗೆ, ಸಮಾಜದ ಬಗ್ಗೆ, ದೇಶದ ಬಗ್ಗೆ ಹೇಳಿ ಕೊಡದ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಮಕ್ಕಳನ್ನು ಅಡ್ಡಾ-ದಿಡ್ಡಿ ಬೆಳೆಸುತ್ತಿರುವ ಪೋಷಕರದ್ದು.

ಭಾರತದ ಅವಿಭಾಜ್ಯ ಅಂಗವಾಗಿರುವ ಕಾಶ್ಮೀರವನ್ನು ” ಭಾರತ ಆಕ್ರಮಿತ ಪ್ರದೇಶ”ವೆಂದು ಹೇಳಿ ಕೊಡುವ ಪಠ್ಯ ಪುಸ್ತಕಗಳು, ಡೊನೇಶನ್’ನಿಂದ, ಡೊನೇಶನ್’ಗಾಗಿ, ಡೊನೇಶನ್’ನಿಂದಲೇ ನಡೆಯುತ್ತಿರುವ ವಿದ್ಯಾ-ಸಂಸ್ಥೆಗಳು ಖಂಡಿತ ನಮ್ಮ ಯುವ ಸಮೂಹಕ್ಕೆ ನಮ್ಮ ದೇಶದ ಬಗ್ಗೆ, ನಮ್ಮ ಸಂಸ್ಕೃತಿಯ ಬಗ್ಗೆ ,ಎಂದಿಗೂ ಹೇಳಿಕೊಡುವುದಿಲ್ಲ. ಹೌದು ಶಿಕ್ಷಣ ನೀತಿಯನ್ನು ಬದಲಾಯಿಸುವ ತುರ್ತು ಅವಶ್ಯಕತೆಯಿದೆ, ಅದಕ್ಕಾಗಿ ಸಮಾಜದ ಪ್ರತಿಯೊಬ್ಬರು ಜಾಗರೂಕರಾಗಬೇಕಿದೆ. ಅದಕ್ಕಿಂತ ಮೊದಲು ಮನೆಯಲ್ಲಿ ಸಂಸ್ಕಾರದ ಪಾಠಗಳು ಪ್ರಾರಂಭವಾಗಬೇಕಿದೆ.ಆ ಕೆಲಸವಾಗಬೇಕಿರುವುದು ಪೋಷಕರಿಂದ. ಶಿಕ್ಷಣದಲ್ಲಿ ಸಿಗದಿರುವ ಸಂಸ್ಕಾರವನ್ನು ಮನೆಯಲ್ಲಿ ಹೇಳಿಕೊಡಬೇಕಾಗಿದೆ. ಸ್ನೇಹ ಸಂಬಂಧಗಳ ಪಾಠವಾಗಬೇಕಿದೆ. ಸರಿ-ತಪ್ಪುಗಳ ವಿಮರ್ಷೆಯಾಗಬೇಕಿದೆ . ಸಾಮಾಜಿಕ ನಡವಳಿಕೆಗಳ ಬಗ್ಗೆ ನೀತಿ ಹೇಳಬೇಕಾಗಿದೆ. ದೇಶ ಭಕ್ತಿಯ ಭೋಧನೆಯಾಗಬೇಕಿದೆ. ಗಂಡಿಗೆ ಹೆಣ್ಣಿನ,  ಹೆಣ್ಣಿಗೆ ಗಂಡಿನಪ್ರಾಮುಖ್ಯತೆ ಯನ್ನು ತಿಳಿಸಿ ಹೇಳುವ ಅವಶ್ಯಕತೆಯಿದೆ. ಚಿಕ್ಕಂದಿನಿಂದಲೇ ಒಬ್ಬರೊನ್ನೊಬ್ಬರು ಗೌರವಿಸುವುವುದನ್ನು ಕಲಿತರೆ ಅತ್ಯಾಚಾರ, ವರದಕ್ಷಿಣೆಯಂತಹ ಮಹಾನ್ ಸಾಮಾಜಿಕ ಪಿಡುಗುಗಳು ಹೇಳಹೆಸರಿಲ್ಲದೆ ಮಾಯವಾಗುತ್ತದ್ದೆ. ಭಾರತೀಯ ಪರಂಪರೆ ಮತ್ತು ಭವ್ಯತೆಯನ್ನು ಕೇಳಿ ಬೆಳೆದ ಯಾವ ಮಗು ಕೂಡ ದೇಶದ್ರೋಹಿಯಾಗಲು ಸಾಧ್ಯವಿಲ್ಲ. ಮನೆಯೇ ಮೊದಲ ಪಾಠ ಶಾಲೆಯಾಗಬೇಕಿದೆ. ನಮ್ಮ ಮಕ್ಕಳಿಗೆ ಆದರ್ಶವಾಗಬೇಕಿರುವುದು, ಸ್ವೇಚಾಚಾರವನ್ನೇ ಸ್ವಾತಂತ್ರ್ಯವೆಂದುಕೊಂಡಿರುವ ಮೈ ಚಾಯ್ಸ್ ನ ದೀಪಿಕಾ ಪಡುಕೋಣೆ ಅಥವಾ ಜೆ.ಎನ್.ಯು ನ ಕನ್ಹಯ್ಯಾ ಕುಮಾರ್ ಅಲ್ಲ. ಸ್ಪೂರ್ತಿ, ಆದರ್ಶವಾಗಬೇಕಿರುವುದು ಮೊದಲ ಮಹಿಳಾ ಐ.ಪಿ.ಎಸ್ ಕಿರಣ್ ಬೇಡಿ ಅಥವಾ ಅಬ್ದುಲ್ ಕಲಾಂರಂತಹವರು. ವಿಖ್ಯಾತಿಗೂ ಕುಖ್ಯಾತಿಗೂ ಬಹಳ ವ್ಯತ್ಯಾಸವಿದೆ ನೆನಪಿರಲಿ.

ನಿಮ್ಮ ಮಕ್ಕಳನ್ನು ಸಂಜೆ ಆರು ಗಂಟೆಗೆ ತಯಾರು ಮಾಡಿ ಪಬ್ಬು-ಕ್ಲಬ್ಬುಗಳಿಗೆ ಕರೆದುಕೊಂಡು ಹೋಗುವ ಬದಲು. ಬೆಳಗ್ಗೆ ಆರು ಗಂಟೆಗೆ ಎಬ್ಬಿಸಿ, ಮೈದಾನಕ್ಕೋ , ಕಲಾ ಶಾಲೆಗಳಿಗೋ ಕರೆದುಕೊಂಡು ಹೋಗಿ. ಕನಿಷ್ಠ ಭಾರತಕ್ಕೆ ಮತ್ತೊಬ್ಬ ಸಚಿನ್ ಅಥವಾ ಎಂ.ಎಸ್. ಸುಬ್ಬಲಕ್ಷ್ಮಿಯಾದರೂ ಸಿಗಲಿ. ಶಾಲಾ-ಕಾಲೇಜುಗಳಲ್ಲಿ ಅರ್ಥವಿಲ್ಲದ ಆಚರಣೆಗಳ ಬದಲು, ದೇಶಭಕ್ತಿ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ನೆಡೆಸಿ, ಭಾಷಣಕಾರರನ್ನು ಕರೆಯಿಸಿ ಮಕ್ಕಳಿಗೆ ಅರಿವು ಮೂಡಿಸಿ. ನಾಳಿನ ಸಶಕ್ತ ಭಾರತವನ್ನು ಕಟ್ಟುವಲ್ಲಿ ನಮ್ಮ ಪಾತ್ರವೂ ಬಹಳಷ್ಟಿದೆ ಮರೆಯದಿರಿ.

ಎಂದು ನಮ್ಮ ಯುವಶಕ್ತಿಗೆ ನಮ್ಮ ಮಣ್ಣಿನ ಮಹಿಮೆ, ಹಿರಿಮೆ, ಗರಿಮೆ ಮತ್ತು ಪಾವಿತ್ರತ್ಯೆಯ ಬಗ್ಗೆ ತಿಳಿಯಿತ್ತದೋ ಅಂದು ಮತ್ತೆ ಭಾರತದ ಗತಕಾಲದ ವೈಭವ ಮರುಕಳಿಸುತ್ತದೆ,  ಅಂದು ಖಂಡಿತ ಭಾರತ ಮತ್ತೆ ವಿಶ್ವ ಗುರುವಾಗುತ್ತದೆ.

ಅರ್ಜುನ್ ದೇವಾಲದಕೆರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!