ಅಂಕಣ

‘ವಾರ್ಧಾ’ ಚಂಡಮಾರುತ – ನಾನು ಕಂಡಂತೆ

ರವಿವಾರ ಮಧ್ಯಾಹ್ನ ಮೂರುವರೆ ಆಗಿರಬಹುದು. ಸೂಪರ್ ಮಾರ್ಕೆಟ್’ನಲ್ಲಿ ಸಾಮಾನು ಖರೀದಿ ಮಾಡುವಾಗ ಯಾರೋ ಹಿಂದಿನಿಂದ ಮಾತನಾಡಿಕೊಳ್ಳುತ್ತಿರುವುದು ಕೇಳಿಸಿತು –  ನಾಳೆ ಚಂಡಮಾರುತ ಬರುವುದಿದೆ, ಅದರ ಹೆಸರು ‘ವಾರ್ಧಾ’. ನನ್ನ ಕಿವಿಗೆ ಆ ಸುದ್ದಿ ಬಿದ್ದಿದ್ದಂತು ಹೌದು, ಆದರೆ ನಾನು ಆ ಮಾತನ್ನು ಕೊನೆಯ ತನಕ ನಿರ್ಲಕ್ಷ್ಯ ಮಾಡಿದೆ. ಕಳೆದ ಒಂದು ವಾರದ ಹಿಂದಷ್ಟೇ ‘ನಾಡಾ’ ಎಂಬ ಬಿರುಗಾಳಿ ಬೀಸುವುದು ಎಂಬ ಸುದ್ದಿ ಹಬ್ಬಿತ್ತು. ಆದರೆ ಆ ದಿನ ಮಳೆ ಆಗಿತ್ತೇ ಹೊರತು ಮತ್ತೇನು ತೊಂದರೆ ಆಗಿರಲಿಲ್ಲ. ಹೀಗಾಗಿ ಇದೂ ಅದರಂತೆ ಪುಸ್ ಆಗಬಹುದು ಎಂದೆಣಿಸಿ ನಾನು ವಿಷಯವನ್ನು ಹಗುರವಾಗಿ ಪರಿಗಣಿಸಿದೆ. ಮನೆಗೆ ಬಂದು ಚಹಾ ಕುಡಿದು ಮಾತುಕತೆ ಮುಗಿಯುವ ಹೊತ್ತಿಗೆ ಸಾಯಂಕಾಲ ಆರು ಘಂಟೆ. ಇನ್ನೇನು ಊಟಕ್ಕೆ ರೆಡಿ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ವಾಟ್ಸಾಪ್’ನಲ್ಲಿ ಒಂದು ಮೆಸೇಜ್ ಬಂತು – ‘ನಾಳೆ ಸೈಕ್ಲೋನ್ ಬರುವ ಸಾಧ್ಯತೆ ತುಂಬಾ ಇದೆ. ಹೀಗಾಗಿ ಸಣ್ಣ ಹಾಗೂ ದೊಡ್ಡ ಪ್ರಮಾಣದ ಕಂಪನಿಗಳಿಗೆ ರಜೆ ಕೊಡುವಂತೆ ಸೂಚಿಸಲಾಗಿದೆ.’ ಇದು ಸರ್ಕಾರದಿಂದ ಬಂದ ಸುತ್ತೋಲೆಯ ಫೋಟೊ ಆಗಿತ್ತು. ಇದನ್ನು ಕಡೆಗಣಿಸುವ ಹಾಗಿರಲಿಲ್ಲ. ಅಷ್ಟು ಹೊತ್ತಿಗಾಗಲೇ ವಾಟ್ಸಾಪ್’ನಲ್ಲಿ ಮೆಸೇಜ್’ಗಳ ಮಳೆ ಸುರಿಯಲಾರಂಭಿಸಿತ್ತು. ವಿಂಡ್ ಟಿವಿ ಡಾಟ್ ಕಾಮ್, ಅರ್ಥನಲ್ ಸ್ಕೂಲ್ ಡಾಟ್ ನೆಟ್ ಇಂತಹ ವೆಬ್ಸೈಟ್’ಗಳಲ್ಲಿ ಚಂಡಮಾರುತ ಬಂಗಾಳ ಕೊಲ್ಲಿಯಲ್ಲಿ ಕೇಂದ್ರಿಕೃತವಾಗಿರುವುದು ಕಾಣುತ್ತಿತ್ತು. ತಕ್ಷಣವೇ ಹೋಗಿ ಬೇಕಾದ ವಸ್ತುಗಳನ್ನು ಕೊಂಡು ಬಂದೆ. ಪಾನಿಕ್ ಸಿಚುಯೆಷನ್ ಎಲ್ಲವೂ ಮೊಬೈಲಿನಲಿ ಮಾತ್ರ, ಹೊರಗಡೆ ಹೋದರೆ ಏನೂ ಇಲ್ಲ. ಎಲ್ಲ ಕಡೆಯೂ ಶಾಂತ…ಮಳೆ ಇಲ್ಲ, ಗಾಳಿ ಇಲ್ಲ, ಗುಡುಗಿಲ್ಲ, ಮಿಂಚಿಲ್ಲ. ಚಂಡಮಾರುತ ಇಷ್ಟು ನಿಶ್ಯಬ್ಧವಾಗಿ ಬರಬಹುದು ಎಂದು ಯಾವತ್ತೂ ಎಣಿಸಿರಲಿಲ್ಲ!

ಬೆಳಿಗ್ಗೆ ಮೂರು ಗಂಟೆಗೆ ಎಚ್ಚರವಾಯಿತು. ಹೇಗಿರಬಹುದು ತೂಫಾನ್ ಅಂತಾ ನೋಡುವ ತವಕ. ಏನೂ ಇಲ್ಲ. ಜಿಡಿ ಜಿಡಿ ಮಳೆ ಶುರುವಾಗಿತ್ತು ಅಷ್ಟೇ. ಮತ್ತೆ ಮಲಗಿದೆ. ಎದ್ದಾಗ ಏಳು ಗಂಟೆ. ದಿನಚರಿಯಂತೆ ವಾಕಿಂಗ್ ಮಾಡೋಣ ಅಂದರೆ ಹೊರಗೆ ಸಣ್ಣ ಮಳೆ. ಚಂಡಮಾರುತ ಬಂದು ಹೋಗಿರಬಹುದು, ಮನಸಿನಲ್ಲೇ,‌ ಅಂದುಕೊಂಡೆ. ಇಂಟರ್ನೆಟ್ ನಲ್ಲಿ ನೋಡಿದರೆ ಇನ್ನೂ ನೂರಾ ಐವತ್ತು ಕಿಮೀ ದೂರದಲ್ಲಿತ್ತು. ಗೆಳೆಯರಿಗೆ ಕಾಲ್ ಮಾಡಿ ಕೇಳಿದೆ, “ಇವತ್ತು ಆಫೀಸ್ ಇದೆಯಾ” ಅಂತ? ಕೆಲವು ಕಂಪನಿಗಳಲ್ಲಿ ಆಗಲೇ ರಜೆ ಘೋಷಿಸಲಾಗಿತ್ತು, ಇನ್ನು ಕೆಲವು ಕಂಪನಿಗಳು ದಿನದಂತೆ ಕೆಲಸ ಮಾಡುತ್ತಿದ್ದವು. ಕೆಲವು ಕಂಪನಿಗಳು ಸಿಟಿಯಿಂದ, ಅಂದರೆ ಸಮುದ್ರದ ದಡದಿಂದ ಸುಮಾರು ಐವತ್ತು ಕಿಮೀ ದೂರದಲ್ಲಿದೆ. ಹಿಂದಿನ ವರ್ಷ ಪ್ರವಾಹದ ಬಿಸಿ ಅರಿತವರು ಯಾರೂ ಕೆಲಸಕ್ಕೆ ಹೊರಡಲಿಲ್ಲ. ಎಲ್ಲಾ ಸ್ವಘೋಷಿತ ರಜೆ ಡಿಕ್ಲೇರ್ ಮಾಡಿಕೊಂಡರು. ಇನ್ನುಳಿದ ಕೆಲವರು ಮಾತ್ರ ಬಂದರು. ನನಗೇನು ಗೊತ್ತು, ನಾನು ಚೆನೈಗೆ ಹೊಸಬ. ನಾನೂ ಹೊರಟೆ. ಹೊರಗಡೆ ಸಣ್ಣ ಮಳೆ, ಸಣ್ಣ ಗಾಳಿ. ಇದು ಸಹಜ ಸಂಗತಿ ಎಂದುಕೊಂಡು ಸುಮ್ಮನಾದೆ. ಆಫೀಸಿಗೆ ಮುಟ್ಟಿದಾಗ ಗಂಟೆ ಒಂಬತ್ತಾಗಿರಬಹುದು. ಚೆನೈ ಸಿಟಿಯಲ್ಲಿರುವ ಸಹೋದ್ಯೋಗಿಗಳೊಬ್ಬರಿಗೆ ಕರೆ ಮಾಡಿ, ‘ಹೇಗಿದೆ ಪರಿಸ್ಥಿತಿ…ಅಲ್ಲಿ’ ಎಂದು ಕೇಳಿದೆ. “ಮಳೆ ಕಡಿಮೆ ಇದೆ ಆದರೆ ವಿಂಡ್ ಮಾತ್ರ ಸಿಕ್ಕಾಪಟ್ಟೆ ಇದೆ” ಎಂದರು. ಅವರ ಮಾತು ಅರ್ಥವಾಯಿತು ಆದರೆ ಅದರ ಗಂಭೀರತೆ ಅರಿವಾಗಲಿಲ್ಲ. ಹೊರಗಡೆ ನೋಡಿದೆ ಎಲ್ಲವೂ ಸಹಜ ಎನಿಸಿತು. ಮಳೆ ಬರುತ್ತದೆ, ಹೋಗುತ್ತದೆ…ಗಾಳಿ ಇದೆ. ದಿನದಂತೆ ಕೆಲಸ ಮುಂದುವರಿಯಿತು. ಸುಮಾರು ಹನ್ನೊಂದು ಗಂಟೆ …ಹೊರಗೆ ಬಂದು ನೋಡಿದರೆ ಗಿಡ ಮರಗಳೆಲ್ಲ ಅಲುಗಾಡತ್ತಿರುವುದು ಕಂಡಿತು. ಆದರೂ ಚಂಡಮಾರುತ ಇದೇನಾ? ಎನ್ನುವ ಪ್ರಶ್ನೆ. ವೆಬ್ಸೈಟ್ ನೋಡಿದೆ …ಚಂಡಮಾರುತದ ಸುಳಿ ಇನ್ನೇನು ಚೆನ್ನೈ ಪಟ್ಟಣವನ್ನು ಹಿಟ್ ಮಾಡಬೇಕು ಎನ್ನುವ ಹಾಗಿತ್ತು. ಯಾರೋ ಹೇಳಿದರು ಒಂದುವರೆ ಸುಮಾರಿಗೆ ನೆಲವನ್ನು ಅಪ್ಪಳಿಸುವುದಂತೆ ಎಂದು. ಇನ್ನು ಕೆಲವರು ತಮಾಷೆ ಮಾಡುತ್ತಾ ಹೇಳಿದರು …”ಮೀಡಿಯಾದವರು ಬೀಚ್‌’ನಲ್ಲಿ ಆಗಾಗಲೇ ಚಂಡಮಾರುತ ಬರುವುದನ್ನು ಕಾಯುತ್ತಾ ನಿಂತಿದ್ದಾರೆ” ಅಂತ. ಗಾಳಿಯ ವೇಗ ಹೆಚ್ಚುತ್ತಿತ್ತು…ಇಲ್ಲಿಯ ತನಕ ಮನಸ್ಸಿಗೆ ಇಂದು ಕಂಪನಿಗೆ ಬಂದು ತಪ್ಪು ಮಾಡಿದೆ ಎನಿಸಲಿಲ್ಲ. ಊಟ ಮಾಡಿ ಬಂದು ಸುಮಾರು ಒಂದು ಘಂಟೆಗೆ ಮೊಬೈಲ್ ನೋಡುತ್ತಿದ್ದೆ… ವಾಟ್ಸಪ್ನಲ್ಲಿ ನಾವು ದಿನವೂ ಬರುವ ದಾರಿಯಲ್ಲಿ ಮರಗಳು ಉರುಳಿ ಬಿದ್ದ ಫೋಟೊಗಳು! ಕಂಪನಿಯ ಕಾಂಪೌಂಡ್’ನಿಂದ ನಾಲ್ಕೈದು ಕಿಮೀ ದೂರದಲ್ಲಿ ಅಷ್ಟೇ! ಹೊರಗಡೆ ಬಂದು ನೋಡಿದೆ…ದೃಶ್ಯ ಬೇರೆಯೇ ಆಗಿತ್ತು!

ಮುಂಜಾನೆಯಿಂದ ಗಾಳಿಗೆ ತೂಗೂತ್ತಿದ್ದ ಬೃಹದಾಕಾರದ ಮರ ಬೀಸುವ ಗಾಳಿಯ ವೇಗಕ್ಕೆ ಸೋತು ಮುರಿದು ಬಿದ್ದಿತ್ತು, ಗಾಳಿಯು ಜೋರಾಗಿ ಗಾಜಿಗೆ ಬಡಿಯುತ್ತಿತ್ತು, ಹೊರಗಡೆ ಪಾರ್ಕಿಂಗ್’ನಲ್ಲಿದ್ದ ನ್ಯಾನೋ ಕಾರು ಚಾಲಕನಿಲ್ಲದೆ ಬದಿಗೆ ಸರಿದು ನಿಂತಿತ್ತು. ಇದೆಲ್ಲ ನಾನು ನೋಡು ನೋಡುತ್ತಿದ್ದಂತೆಯೇ ನಡೆದು ಹೋಯಿತು. ಗಾಜಿನ ಕಛೇರಿಯ ಒಳಗೆ ಕೂತರೆ ಹೊರಗಿನ ಪರಿವೆಯೇ ಇರುವುದಿಲ್ಲ, ಅಲ್ಲವೇ? ಕೆಳಗೆ ಬಂದು ನೋಡಿದರೆ, ಒಮ್ಮೆ ನನಗೆ ಏನೂ ಅರ್ಥವಾಗದ ಹಾಗೆನಿಸಿತು. ಯಾಕಪ್ಪಾ ಇಂದು ಆಫೀಸಿಗೆ ಬಂದೆ ಅಂದೆನಿಸಿತು. ಜೋರಾಗಿ ಮಳೆ ಬರುತ್ತಿದೆ…ಅತಿ ವೇಗದಲ್ಲಿ ಗಾಳಿ ಬೀಸುತ್ತಿದೆ. ಕಣ್ಣೆದುರಿಗೇ ಮರಗಳ ಬುಡ ಮೇಲಾಗುತ್ತಿದೆ. ವಾಟ್ಸಪ್ ತುಂಬಾ ನೋಡಿದರೆ, ಮರಗಳು ಬಿದ್ದು, ಕಂಬಗಳು ಬಿದ್ದು ರಸ್ತೆ ಬ್ಲಾಕ್ ಆದ ಫೋಟೊಗಳು . ಪಕ್ಕದಲ್ಲಿ ನಿಂತ ಮಹಾನುಭಾವ ಒಬ್ಬರು ಹೇಳುತ್ತಿದ್ದರು, “ನಾನು ಹೊರಗಡೆ ಹೋಗಿ ಊಟ ಮಾಡಿ ಬರುವಾಗ ಆಗುವ ಅನಾಹುತ ಜಸ್ಟ್ ಮಿಸ್ ಆಯಿತು…ಗಾಡಿ ಪಾಸಾಯಿತು…ಹಿಂದೆ ನೋಡಿದೆ ದೊಡ್ಡ ಮರವೊಂದು ರಸ್ತೆಯ ಮೇಲೆ ಬಿದ್ದಿತು” ಎಂದು. ಕೇಳುವಾಗಲೇ ಹೆದರಿಕೆ ಶುರುವಾಯಿತು. ದೂರದಿಂದ ಕಾಣುತ್ತಿದ್ದ ಮೇಲ್ಛಾವಣಿ ಕಿತ್ತು ಹಾರಿ ಹೋಯಿತು, ಎಲ್ಲಿ ಹೋಯಿತೋ ಕಾಣಲಿಲ್ಲ. ಇಷ್ಟಾದರೂ ನನ್ನ ದೇಹಕ್ಕೆ ಬಿರುಗಾಳಿಯ ಅರಿವಾಗಲಿಲ್ಲ. ಸೆಕ್ಯುರಿಟಿಯವನು ಹೊರಗೆ ಹೋಗಬೇಡ ಅಂದರೂ ಕೇಳದೆ ಹೊರಗೆ ಹೋದೆ ನೋಡಿ…ಇನ್ನೇನು ಆ ಗಾಳಿಯ ರಭಸ ನನ್ನನ್ನು ದೂಕಿ ಗೋಡೆಗೆ ಅಪ್ಪಳಿಸಬೇಕು ಅನ್ನುವಷ್ಟು ಸಮತೋಲನ ತಪ್ಪಿತು. ಈ ಚಂಡಮಾರುತ ಏನು ಎಂಬುದರ ಅರಿವಾಯಿತು, ಸುಮ್ಮನೆ ಎಲ್ಲವನ್ನೂ ಮುಚ್ಚಿಕೊಂಡು ಒಳಗೆ ಬಂದು ಸುಮ್ಮನೆ ಕೂತೆ. ಎದೆಯೊಳಗೆ ಬಿರುಗಾಳಿ ಬೀಸತೊಡಗಿತು, ಈಗ ಅರಿವಾಯಿತು ಚಂಡಮಾರುತ ಅಂದರೆ ಏನು ಅಂತ! ನಾನು ಕಂಡ ಬಿರುಗಾಳಿಯ ವೇಗ ಬರೀ ಅರವತ್ತು ಕಿಮೀ ಪ್ರತಿ ಗಂಟೆಗೆ …ಸಿಟಿಯಲ್ಲಿ ನೂರಾ ಹತ್ತು ಕಿಮೀ ಪ್ರತಿ ಘಂಟೆಯ ವೇಗ ತಲುಪಿತ್ತಂತೆ! ನೋಡು ನೋಡುತ್ತಿದಂತೆ ಗಾಳಿಯ ವೇಗ ಇನ್ನೂ ಹೆಚ್ಚ‌ತೊಡಗಿತು. ಗಾಜುಗಳು ಒಡೆದು ಹೋಗುತ್ತವೆಯೆನೋ ಎನ್ನುವಷ್ಟು ಜೋರಾಗಿ ಗಾಳಿ ಬಂದು ಗೋಡೆಗಳನ್ನು ಬಡಿಯುತ್ತಿತ್ತು. ದೂರ ದೂರ‌ ಏನೂ ಕಾಣುತ್ತಿಲ್ಲ…ಬರೀ ಮೋಡ…ಮಳೆ…ಹಾಗೂ ಅಲೆದಾಡುವ ಗಿಡ ಮರಗಳು. ಜಗತ್ ಪ್ರಳಯ ಆಗುತ್ತಿದೆಯೋ ಅನಿಸುವ ಹಾಗಿತ್ತು!

ಬಿರುಗಾಳಿಯ ಅಬ್ಬರ ಇನ್ನೂ ಜಾಸ್ತಿಯಾಯಿತು. ಈಗಾಗಲೇ ಚಂಡಮಾರುತ ಚೆನೈ ಪಟ್ಟಣವನ್ನು ಅಪ್ಪಿಯಾಗಿತ್ತು. ಒಂದಾದ ಮೇಲೊಂದು ಗಿಡಗಳು ಉರುಳುತ್ತಿದ್ದವು, ಗಾಡಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಾಣಿಸಿತು. ದೂರದಿಂದಲೇ ನನ್ನ ಕಾರು ಸುರಕ್ಷಿತವಾಗಿರುವುದನ್ನು ಕಂಡು ನಿಟ್ಟುಸಿರು ಬಿಟ್ಟೆ. ಹೊರಗಡೆ ಗಾಳಿ ಇಷ್ಟು ತೀವ್ರವಾಗಿತ್ತು ಅಂದರೆ ಮನೆಗೆ ಹೋಗುವ ಹಾಗೂ ಇರಲಿಲ್ಲ. ರೈಲುಗಳ ಓಡಾಟ ನಿಂತಿದೆ, ರಸ್ತೆಯೆಲ್ಲಾ ಟ್ರಾಫಿಕ್’ನಿಂದ ತುಂಬಿ ಹೋಗಿದೆ, ಇನ್ನೊಂದೆಡೆ ನೀರು ತುಂಬಿ ತುಂಬಿ ರಸ್ತೆಯ ಮೇಲೆ ಬಂದು ನಿಂತಿದೆ. ಮುಂದೇನು ಮಾಡಬೇಕು ಎನ್ನುವುದೇ ತೋಚುತ್ತಿಲ್ಲ! ಎಲ್ಲರಿಗೂ ಮನೆಯಿಂದ ಫೋನಿನ ಮೇಲೆ ಫೋನು. ಅಲ್ಲಿರುವ ಅವರ ಚಿಂತೆ ಮಾಡಬೇಕೋ ಅಥವಾ ಇಲ್ಲಿ ಸಿಕ್ಕಿ ಹಾಕಿಕೊಂಡಿರುವ ತನ್ನ ಬಗ್ಗೆ ವಿಚಾರ ಮಾಡಬೇಕೋ ತಿಳಿಯದ ಪರಿಸ್ಥಿತಿ. ಕ್ಯಾಂಟೀನ್’ನಲ್ಲಿ ತಿಂಡಿ ಚಹಾ ಖಾಲಿಯಾಗುತ್ತಿದೆ, ಕಿಸೆಯಲ್ಲಿ ನೋಟು ಇಲ್ಲ, ಮೊಬೈಲಿನಲ್ಲಿ ನೆಟವರ್ಕ್ ಇಲ್ಲ. ಎಲ್ಲವೂ ಒಟ್ಟಿಗೆ ಪ್ಲಾನ್ ಮಾಡಿಕೊಂಡು ಬಂದಿರುವ ಹಾಗಿದೆ. ಸರ್ವರ್‌ಗಳು ಸತ್ತು ಹೋಗಿವೆ. ಜನರು ಚೆಲ್ಲಾಪಿಲ್ಲಿಯಾಗಿದ್ದಾರೆ. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ. ಕೆಲಸ ಯಾರೂ ಮಾಡುತ್ತಿಲ್ಲ. ಇದರ ಬದಲು ಕಂಪನಿ ರಜೆ ಕೊಟ್ಟಿದ್ದರೆ ಮನೆಯಲ್ಲಿ ಫ್ಯಾಮಿಲಿ ಜೊತೆ ಒಟ್ಟಾಗಿ ಒಬ್ಬರಿಗೊಬ್ಬರು ಧೈರ್ಯವಾಗಿ ಇರಬಹುದಿತ್ತು ಅನಿಸಿತು. ಇದು ನನಗೊಬ್ಬನಿಗೇ ಅನಿಸಿರುವುದಲ್ಲ, ಪ್ರತಿಯೊಬ್ಬನ ಬಾಯಿಯಲ್ಲೂ ಇದೇ ಮಾತು. ಕೆಲವು ಕಂಪನಿಗಳ ಕಥೆ ಇನ್ನೂ ವರ್ಸ್ಟ್ ! ಅರ್ಧ ದಿನ ರಜೆ ಘೋಷಿಸಿ ಜನರನ್ನು ಮನೆಗೆ ಕಳುಹಿಸಿ ಬಿಟ್ಟಿದ್ದಾರೆ…ಅವರು ಆ ಕಡೆ ಕಂಪನಿಯಲ್ಲೂ ಇಲ್ಲ …ಈ ಕಡೆ ಮನೆ ತಲುಪುವ ಹಾಗೂ ಇಲ್ಲ …ತ್ರಿಶಂಕು ಅವಸ್ಥೆ! (ಕೊನೆಗೆ ತಿಳಿದು ಬಂದಿದ್ದು ಏನೆಂದರೆ ಅವರೆಲ್ಲ ಮನೆ ತಲುಪಿದ್ದು ಮಧ್ಯರಾತ್ರಿ ಒಂದು ಗಂಟೆಗೆ!)

ಸಂಜೆ ಐದೂವರೆ ಸಮಯ, ಬಿರುಗಾಳಿ ನಿಲ್ಲುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಬಿದ್ದ ಮರಗಳನ್ನು ಮತ್ತೆ ಎದ್ದು‌ ನಿಲ್ಲಿಸುವ ಜೋಷ್’ನಲ್ಲಿ ಬೀಸುತ್ತಿದೆ. ಇನ್ನು ಕೆಲವು ಹೊತ್ತು ಕಳೆದರೂ ಕತ್ತಲು ಆವರಿಸುತ್ತದೆ. ಹೀಗಾಗಿ ಕತ್ತಲಾಗುವ ಮುಂಚೆ ಮನೆ ತಲುಪಲೇ ಬೇಕು ಎಂದು ನಾವು ನಾಲ್ಕೈದು ಗೆಳೆಯರು ನಿರ್ಧಾರ ಮಾಡಿ ಹೊರೆಟೆವು. ದೂರ ದೂರ‌ ಹೋಗುವವರು, ಇಲ್ಲೇ ಹತ್ತಿರವಿರುವವರ ಮನೆಯಲ್ಲಿಯೇ ತಂಗುವ ನಿರ್ಧಾರ ಮಾಡಿದರು. ಎಲ್ಲರ ಮನೆಯಲ್ಲೂ ಹೆಂಡತಿ ಹಾಗೂ ಮಕ್ಕಳು ಕಾಯುತ್ತಿದ್ದಾರೆ, ಅಲ್ಲಿ ಪವರ್ ಕೂಡಾ ಇಲ್ಲ. ಹೋಗುವುದಾದರೂ ಹೇಗೆ? ಯಾರೋ ಹೇಳಿದರು, ಪ್ರವೇಶ ಗೇಟಿನ ಎದುರಿಗೆ ಮರ ಬಿದ್ದಿದೆ ಎಂದು. ಎಷ್ಟು ಸುಳ್ಳೋ, ಎಷ್ಟು ನಿಜವೋ ದೇವರಿಗೆ ಗೊತ್ತು! ಸುದ್ದಿ ಕೇಳಿಯೂ ನಾವು ನಾಲ್ಕು ಮಂದಿ ಹೊರಗೆ ಬರುವ ಧೈರ್ಯ ಮಾಡಿದೆವು. ಹೊರಗೆ ಪರಿಸ್ಥಿತಿ ಹೇಗಿದೆ ಅಂದರೆ ಅಲ್ಲಿ ನಿಲ್ಲುವ ಹಾಗೂ ಇಲ್ಲ! ಒಂದೇ ಸವನೆ ಗಾಳಿ ಬೀಸುತ್ತಿದೆ. ಯಾವುದೋ ಪುಣ್ಯಾತ್ಮ …ಎದುರು ಕಾರು ತಗೆದು ನಿಂತಿದ್ದ. ಅವನ ಹತ್ತಿರ “ಪಾರ್ಕಿಂಗ್ ತನಕ ಬಿಡಪ್ಪಾ” ಅಂತ ಕೇಳಿಕೊಂಡೆವು. ಅವನು ಅಲ್ಲಿ‌ ಇರಲಿಲ್ಲ ಅಂದರೆ ಪೂರ್ಣವಾಗಿ ನೆನೆದುಕೊಂಡು ಮನೆಗೆ ಹೋಗಬೇಕಿತ್ತು! ಅವನ ಕೃಪೆಯಿಂದ ಅಂತೂ ಇಂತೂ ನಮ್ಮ ನಮ್ಮ ಕಾರಿಗೆ ಬಂದೆವು. ಅಲ್ಲಿಂದ ಶುರುವಾಯಿತು ನಮ್ಮ ಪ್ರಯಾಣ. ಒಂದೆಡೆ ಮುಂದೆ ರಸ್ತೆ ಇದೆಯೋ ಇಲ್ಲವೋ ಎಂಬ ಅನಿಶ್ಚಿತತೆ, ಇನ್ನೊಂದೆಡೆ ಜೋರಾಗಿ ಬೀಸುತ್ತಿರುವ ಗಾಳಿ-ಮಳೆ. ದಾರಿಯುದ್ದಕ್ಕೂ ಗಿಡಗಳು ಹೆಣವಾಗಿ ಉರುಳಿ ಬಿದ್ದಿದ್ದವು. ದೊಡ್ಡ ದೊಡ್ಡ ಮರಗಳು ಬಿರುಗಾಳಿಯ ರಭಸ ‌ತಾಳಲಾಗದೆ ಬೇರು ಮೇಲಾಗಿ ಬಿದ್ದಿದ್ದವು. ಆ ಹಸಿರು ಹೆಣಗಳನ್ನು ಹಾಸಿ ಹೇಗೋ ಕಾರನ್ನು ಡ್ರೈವ್ ಮಾಡುತ್ತಾ ಮುಂದೆ ಹೋಗ ತೊಡಗಿದೆವು. ಮಾರು ಮಾರಿಗೆ ಟ್ರಾಫಿಕ್ ಜಾಮ್. ಕಾರಿನ ಕಿಟಕಿಯನ್ನೂ ತೆಗೆಯುವ ಹಾಗಿಲ್ಲ ಅಷ್ಟು ವೇಗದಲ್ಲಿ ಗಾಳಿ ಬೀಸುತ್ತಿದೆ. ಅದರ ಜೊತೆ ಜೋರಾಗಿ ಮಳೆ. ಎಂತಹ ಡೆಡ್ಲಿ ಕಾಂಬಿನೆಷನ್ ಇದು!

ನಮಗೆ ಎಲ್ಲದಕ್ಕಿಂತ ಬೇಸರವಾಗಿದ್ದು ಏನು ಗೊತ್ತಾ? ಆಫೀಸ್ ಬಾಯ್ಸ್, ಸೆಕ್ಯುರಿಟಿ, ಕಸ ತೆಗೆಯುವವರು, ‌ಕಾರ್ಮಿಕರು …ಇವರ ಹತ್ತಿರ ಕಾರು ಇರಲಿಲ್ಲ. ಪಾಪ…ಆ ಬೀಸುವ ಬಿರುಗಾಳಿಗೆ ಮೈಯೊಡ್ಡಿ ಮುಂದೆ ಹೋಗುತ್ತಿದ್ದರು. ಎಷ್ಟೋ ಹೆಂಗಸರು ಸಂಪೂರ್ಣವಾಗಿ ಒದ್ದೆಯಾಗಿದ್ದರು, ಆದರೂ ಅವರು ಮನೆ ತಲುಪಲು ಮೈಲುಗಟ್ಟಲೆ ಮುಂದೆ ನಡೆಯ ಬೇಕಿತ್ತು. ನಾವು ಹೋಗುವ ದಾರಿ ಬೇರೆ, ಅವರ ದಾರಿ ಬೇರೆ ಹೀಗಾಗಿ ನಾವೂ ಕೂಡ ಸಹಾಯ ಮಾಡುವ ಹಾಗಿರಲಿಲ್ಲ. ನಿಜವಾಗಿಯೂ ಇದನ್ನು ನೋಡಿ ತುಂಬಾ ಬೇಸರವಾಯಿತು. ಅವರಿಗೂ ಮನೆ, ಮಕ್ಕಳ ಬಗ್ಗೆ ಚಿಂತೆಯಾಗಿ ಆದಷ್ಟು ಬೇಗೆ ಮನೆ ತಲುಪಬೇಕೆಂಬ ಆಸೆ ಇರದೆ ಹೋಗುತ್ತದೆಯೆ? ” ಓ ದೇವರೆ ಇಷ್ಟು ಅಸಮಾನತೆಯನ್ನು ಯಾಕಾದರೂ ಹುಟ್ಟಿ ಹಾಕಿದೆ” ಎಂದು ಮನಸ್ಸು ಚಡಪಡಿಸಿತು! ಇದು ಮನುಷ್ಯರ ಕಥೆ‌ ಆಗಿದ್ದರೆ ಇನ್ನು ಪ್ರಾಣಿ, ಪಕ್ಷಿಗಳ ನೋವು ಯಾರಿಗೂ ಗೊತ್ತಿಲ್ಲ. ಎಲ್ಲಿ ಹೋದವೋ? ಎಲ್ಲಿ ಬಂದವೋ?‌ಎಷ್ಟು ಉಳಿದಿವೆ, ಎಷ್ಟು ಸತ್ತಿವೆ? ಆ ದೇವರಿಗೆ ಗೊತ್ತು!

ಅಂತೂ ಇಂತು ಮನೆಯ ಹತ್ತಿರ ಹೋಗಲಾರಂಭಿಸಿದೆವು. ಎಲ್ಲೆಲ್ಲೂ ಉರುಳಿ ಬಿದ್ದ ಮರಗಳೆ. ಕೆಲವೊಂದೆಡೆ ರಸ್ತೆ ನೀರಿನಿಂದ ತುಂಬಿ ಹೋಗಿದೆ. ಕೆಲವೊಂದು ರಸ್ತೆಯು ಮರಗಳು ಬಿದ್ದು ಬ್ಲಾಕ್ ಆಗಿವೆ. ಹೊರಗಡೆ ಯಾರೂ ಕಾಣುತ್ತಿಲ್ಲ – ಬರೀ ಮಳೆ, ಕಾರಿನ ಕಿಟಕಿಗೆ ಜೋರಾಗಿ ಬಡಿಯುತ್ತಿರುವ ಬಿರುಗಾಳಿ, ಆ ‌ಬಿರುಗಾಳಿಗೆ ಮೈಯ್ಯೊಡ್ಡಿ ನಿಂತು ಸುಸ್ತಾಗಿ ಹೋದ ಗಿಡಗಳು ಅಷ್ಟೇ! ಕಾರು, ಮನೆ ಎದುರಿಗೆ ಬಂದು ನಿಂತಿದೆ. ಆದರೆ ಬಾಗಿಲು ತೆಗೆದರೆ ನಾನು ಹಾರಿ ಹೋಗಬಹುದು ಎನ್ನುವಷ್ಟು ಗಾಳಿ. ನಾನೇನೋ ಪಾರ್ಕ್ ಮಾಡಿ ಹೊರಗೆ ಬಂದೆ, ಇನ್ನೊಬ್ಬ ಹೊರಗೆ ಬರಲಾರದೆ ತಾಸುಗಟ್ಟಲೆ ಕಾರಿನಲ್ಲೇ ಕೂತಿದ್ದನಂತೆ. ಇನ್ನೊಂದಿಷ್ಟು ಜನ ಮನುಷ್ಯ ಸರಪಳಿ ಮಾಡಿಕೊಂಡು ಹೊರಟರು. ಅದರಲ್ಲಿ ಒಬ್ಬನ ಕೈಲಿದ್ದ ಬ್ಯಾಗ್ ಹಾರಿ ಹೋಗಬೇಕೆ? ನಾನೊಬ್ಬನೇ ಹೊರಗೆ ಬಂದು ನಡೆಯುತ್ತಾ ಹೋದೆ. ಹೇಗೆ ಮನೆಯ ಹತ್ತಿರ ಬಂದು ತಲುಪಿದೆನೋ ಗೊತ್ತಿಲ್ಲ. ಕತ್ತಲು ಆಗತಾನೇ ಕವಿದಿತ್ತು, ದೀಪವಿಲ್ಲ. ಲಿಫ್ಟ್ ಬೇರೆ ಇಲ್ಲ, ಪಕ್ಕದಲ್ಲಿದ್ದ ಮೆಟ್ಟಿಲನ್ನು ಹುಡುಕುತ್ತಾ …ಮೆಟ್ಟಿಲು ಇರುವ ಜಾಗದ ಬಾಗಿಲು ತೆಗೆದೆ. ಅಲ್ಲಿಂದ ಒಂದು ನಾಯಿ ಹೊರಕ್ಕೆ ಬಂತು. “ಅಯ್ಯೋ …ನಾಯಿಯೇ ಎಲ್ಲಿ ಹೋಗುತ್ತಿಯಾ ..ಒಳಗೆ ಬಾ…ಹೊರಗಡೆ ಜೋರಾಗಿ ಗಾಳಿ ಬೀಸುತ್ತಿದೆ” ಎಂದರೆ ಅದಕ್ಕೆ ಅರ್ಥವಾಗಬೇಕಲ್ಲ. ಎಷ್ಟು ಹೊತ್ತಿನಿಂದ ಒಳಗಡೆ ಇತ್ತೋ ಗೊತ್ತಿಲ್ಲ, ನಾನು ಬಾಗಿಲನ್ನು ತೆರೆದಾಕ್ಷಣ ಹೊರಕ್ಕೆ ಬಿದ್ದು ಓಡಿ ಹೋಯಿತು. ಎಲ್ಲಿ ಹೋಯಿತು? ಏನಾಯಿತು? ಗೊತ್ತಿಲ್ಲ. ಮನೆಗೆ ಹೋಗಿ ಮುಟ್ಟಿದೆ, ಎತ್ತರಕ್ಕೆ ಹೋದ ಹಾಗೆ ಇನ್ನೂ‌ ಜೋರಾಗಿದೆ ಬಿರುಗಾಳಿಯ ರೋಷ! ಎಲ್ಲೆಲ್ಲೂ ಕತ್ತಲು, ಹೊರಗಡೆ ಜೋರಾಗಿ ಬೀಸುತ್ತಿರುವ ಗಾಳಿ‌-ಮಳೆಯ ಸದ್ದು. ಊಟ ಮಾಡಿ ಕೂತೆ, ಎಲ್ಲವೂ ಕಡಿಮೆ ಆದ ಹಾಗೆ ಅನಿಸಿತು. ಗಾಳಿಯ ಸದ್ದಿಲ್ಲ, ಮಳೆ ‌ನಿಂತ ಹಾಗಿದೆ. ಕೆಳಗಡೆ ಜನರ ಮಾತಿನ ಶಬ್ಧವೂ ಕೇಳುತ್ತಿದೆ. ನಿಶ್ಚಿಂತೆಯಿಂದ ಮಲಗಿದೆ. ಅದೇನಾಯಿತೋ ಗೊತ್ತಿಲ್ಲ… ಮಧ್ಯರಾತ್ರಿ ಮತ್ತೆ ಎಚ್ಚರವಾಯಿತು…ಹೊರಗಡೆ ನೋಡಿದರೆ… ಮನಸ್ಸು ದಿಗಿಲು‌ಗೆಟ್ಟು ಹೋಯಿತು! ಹಗಲಿನಲ್ಲಿ ಏನು ನೋಡಿದ್ದೆವೋ ಆ ಗಾಳಿ ಮಳೆಗಿಂತ …ಎರಡು ಪಟ್ಟು ಹೆಚ್ಚಿದೆ  ಅನಿಸಿತು. ವಿಚಲಿತನಾದರೂ ಯಾರಿಗೂ ಏನೂ ಹೇಳದೆ ಸುಮ್ಮನೆ ಮಲಗಿದೆ. ಇಷ್ಟು ವೇಗದಲ್ಲಿ ಹೀಗೆಯೇ ರಾತ್ರಿಯಿಡಿ ಚಂಡಮಾರುತದ ತಾಂಡವ ನಡೆದರೆ…ಇಂದೇ ಕೊನೆಯೆನಿಸಿತು! ದೇವರನ್ನು ನೆನೆಯುತ್ತಾ…ಕಣ್ಮುಚ್ಚಿದೆ. ಬೆಳಿಗ್ಗೆ ಎದ್ದಾಗ ಆರು ಘಂಟೆ.

ಜಗತ್ತು ಇದೆಯೋ ಅಥವಾ ಮುಳುಗಿ ಸರ್ವನಾಶವಾಗಿದೆಯೋ ಗೊತ್ತಿಲ್ಲ. ಮೊದಲು ಆಕಾಶವ ನೋಡಿದೆ. ಎಲ್ಲೂ ನಿನ್ನೆ ಇಂತಹ ರುದ್ರ ಅವತಾರ ನಡೆದಿದೆ ಎನ್ನುವ ಹಾಗಿಲ್ಲ. ಚಂಡಮಾರುತದ ನಂತರ ಏನಾಗಿರಬಹುದು ಎನ್ನುವ ಕುತೂಹಲ ತಾಳಲಾರದೆ ಮಹಡಿಯ ಮೇಲೆ ಓಡಿ ಹೋಗಿ ನೋಡಿದೆ, ನೀಲಿಯ ಆಕಾಶ. ಆದರೆ ನೆಲವನ್ನು ನೋಡಿದರೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಮರ ಗಿಡಗಳು ಸರ್ವನಾಶವಾಗಿದ್ದವು. ಡಿಶ್ ಟಿವಿಯ ಕೊಡೆ ಎಲ್ಲೆಲ್ಲೋ ಹಾರಿ ಹೋಗಿ ಬಿದ್ದಿದ್ದವು. ಪಾರ್ಕಿಂಗ್ ಜಾಗದ ಮೇಲೆ ಹಾಸಿದ್ದ ತಗಡುಗಳು ದೂರ ದೂರ ಹಾರಿ ಹೋಗಿದ್ದು ಕಾಣಿಸುತ್ತಿತ್ತು. ಯಾರ ಮನೆ ಚಂಡಮಾರುತ ಬೀಸುವ ದಿಕ್ಕಿನಲ್ಲಿದೆಯೋ ಅವರೆಲ್ಲ‌ ರಾತ್ರಿಯಿಡಿ ನೀರನ್ನು ತೆಗೆದು ಸುಸ್ತಾಗಿ ಮಲಗಿದ್ದರು, ಕೆಲವರ ಕಿಡಕಿಯ ಗಾಜು ಒಡೆದಿತ್ತು, ಫ್ರೆಂಚ್ ವಿಂಡೋಸ್ ಕಿತ್ತು ಬಂದಿತ್ತು.‌ ನನಗೊಬ್ಬನಿಗೇ ಇದೆಲ್ಲ ಹೊಸತಲ್ಲ, ಅಲ್ಲಿದ್ದ ಎಲ್ಲರಿಗೂ ಇದು ಹೊಸತು! ಮೂವತ್ತು ವರ್ಷದ ಹಿಂದೆ ಈ ತರಹದ ಚಂಡಮಾರುತ ಚೆನ್ನೈನಲ್ಲಿ ಬಂದಿತ್ತಂತೆ. ಕೆಲವರು ವಿಜಯವಾಡಾದ ಅನುಭವ ಹಂಚಿಕೊಳ್ಳುತ್ತಿದ್ದರು, ಅದರ ಮುಂದೆ ಇದು ಏನು ಅಲ್ಲ ಎಂಬಂತೆ. ಆದರೆ ನಮಗೆಲ್ಲ …ಕಂಡಿದ್ದು ಒಂದೇ – ಮಾಯುದೇವನ ತಾಂಡವ ನೃತ್ಯ!

ಸಾವಕಾಶವಾಗಿ ಜನರು ಹೊರ ಬರಲಾರಂಭಿಸಿದರು. ಶವವಾಗಿ ಮಲಗಿದ ಮರಗಳ ಜೊತೆ ಸೆಲ್ಫಿ ತೆಗೆದುಕೊಳ್ಳುವ ಕಾರ್ಯಕ್ರಮಗಳು ಶುರುವಾಗಿತ್ತು. ಯುದ್ಧದಲ್ಲಿ ಸತ್ತ ಯೋಧರನ್ನು ನೋಡಲು ಕುದುರೆಯ ಮೇಲೆ ಕೂತು ಹೋಗುವ ರಾಜನಂತೆ ಕೆಲವರು ತಮ್ಮ ತಮ್ಮ ಕಾರುಗಳಲ್ಲಿ ಹೊರಟರು. ಇನ್ನು ಮುಂದೆ ಬರುವುದು ಬರೀ ಚಂಡಮಾರುತವೇ ಎಂಬಂತೆ ಭಯಪಟ್ಟು ಜನ ಅಂಗಡಿಗಳ ಮುಂದೆ ಸಾಲು ಸಾಲಾಗಿ ನಿಂತರು. ತನ್ನ ಕೆಲಸ ಮುಗಿಸಿ ಚಂಡಮಾರುತ ಮುನ್ನಡೆದಿತ್ತು, ಬೆಳಗಾಗುವುದರೊಳಗೆ ಹಕ್ಕಿ ಪಕ್ಕಿ ಪ್ರಾಣಿಗಳು ತಮ್ಮ ದಿನಚರಿ ಶುರುಮಾಡಿದ್ದವು. ದನ, ಕರ, ಕುರಿಗಳು ರಾತ್ರಿ ಎಲ್ಲದ್ದವೋ …ಎಲ್ಲವೂ ಹೊರಗಡೆ ಬಂದು ದಿನದಂತೆ ಮೇಯುವುನ್ನು ಕಾಣಬಹುದಿತ್ತು. ಎಲ್ಲವನ್ನೂ ನೋಡುತ್ತಿದ್ದ ನನಗೆ ಅನಿಸಿದ್ದು ಒಂದೇ – ಮನುಷ್ಯನಿಗೆ ಮಾತ್ರ ಈ ಮಳೆ, ಗಾಳಿ, ಚಂಡಮಾರುತ, ತೊಂದರೆ, ತಾಪತ್ರಯಗಳು. ಉಳಿದವಕ್ಕೆಲ್ಲ ಇದು ಸಹಜ! ಈ ಮನುಷ್ಯ ಜೀವಿ ಮುಂದುವರಿದಿದ್ದಾನೆ ಎನ್ನುವ ಕಾರಣಕ್ಕೆ ಯಾವ ಚಂಡಮಾರುತವೂ ನಿಲ್ಲುವುದಿಲ್ಲ. ಮನುಷ್ಯ ಹೆದರುವಷ್ಟು ಯಾವ ಪ್ರಾಣಿ, ಪಕ್ಷಿಗಳೂ ಹೆದರುವುದಿಲ್ಲ. ಮನುಷ್ಯ ತಾನು ಬುದ್ಧಿಜೀವಿ ಅಂದುಕೊಂಡಿದ್ದಾನೆ ಅಷ್ಟೇ… ಅವನೊಬ್ಬ ದಡ್ದ ಜೀವಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!