ಹೊತ್ತು ಹುಟ್ಟಿ ನೆತ್ತಿ ಮೇಲೆ ಬಂದಾಯ್ತು. ನಮ್ಮನೆ ಸೋಂಬೇರಿಗಿನ್ನು ಹಾಸಿಗೆ ಬಿಡೋ ಹೊತ್ತಾಗಲಿಲ್ಲ ಅನ್ನೋ ಸಿಹಿ ತುಂಬಿದ ಬೈಗುಳ ನಮ್ಮನೆ ಶಾರದಮ್ಮನ ಬಾಯಿಂದ ಕೇಳಿದ ಮೇಲೇನೆ ಗೊತ್ತಾಗ್ತಿದ್ದಿದ್ದು, ನಿನ್ನೆ ಮರಳ ದಂಡೆಯ ಮೇಲೆ ಕುಳಿತು ಕೈ ಬೀಸಿ ಕಳಿಸಿಕೊಟ್ಟ ಭಾಸ್ಕರ ಮತ್ತೆ ಬಂದಿದ್ದಾನೆ ಬೆಳಗೋಕೆ ಅಂತ.
ಸಮುದ್ರದ ಆಚೆಗಿನ ತುದಿಯಲ್ಲಿ ಎಲ್ಲೋ ಮನೆ ಮಾಡಿ ನೆಮ್ಮದಿಯಾಗಿ ನಿದ್ರಿಸಿ ಬಹಳ ಬೇಗನೆ ಮರೆಯದೆ ಬಂದು ಬಿಟ್ಟಿದ್ದಾನೆ ಕತ್ತಲಿನ ಕಾರ್ಮೋಡ ಸರಿಸಿ ನನ್ನ ಮನೆ ಮನ ಬೆಳಗೋಕೆ. ಕೋಳಿ ಕೊಕ್ಕೊ ಅಂದಾಗೊಮ್ಮೆ, ಗೌರಿ ಅಂಬಾ ಅಂದಾಗೊಮ್ಮೆ, ಕಾಗೆಯು ನಡುಮನೆಯ ದೊಂಬೆ ಮೇಲೆ ಕುಳಿತು ಕೋಗಿಲೆಯಂತೆ ಹಾಡಲು ಪ್ರಯತ್ಸಿಸುತ್ತಿರುವಾಗೊಮ್ಮೆ ನೀ ಬಂದಂದ್ದು ಖಾತ್ರಿ.
ತುಳಸಿ ಕಟ್ಟೆಗೆ ನೀರೆರೆಯೋ, ಗೋಮಯ ಇನ್ನು ತಂದಿಲ್ಲಾ, ಆಚೆ ಮನೆ ಹುಡುಗರೆಲ್ಲಾ ಹೂ ಗಿಡ ಖಾಲಿ ಮಾಡಿದ್ದಾಯ್ತು, ತಮ್ಮ ಆಗಲೆ ಎದ್ದು ಮಲ್ಲಿಗೆ ಮೊಗ್ಗು ಕೊಯ್ಯುತ್ತಿದ್ದಾನೆ, ಎದ್ದೇಳು ಅಂತ ನಮ್ಮನೆ ಸೂತ್ರಧಾರ ಅತ್ತ ಬೈಯ್ಯಲೂ ಇಲ್ಲ, ಇತ್ತ ಮಲಗಲು ಬಿಡಲೂ ಇಲ್ಲ. ವಾತ್ಸಲ್ಯ ಪ್ರೇರಿತ ಮಾತುಗಳಿಂದ ಎಬ್ಬಿಸುತ್ತಲೇ ಇದ್ದ.
ಆಗಲೇ ಯಾಕೆ ಬಂದ ಇವನು, ಇನ್ನಷ್ಟು ಸಮಯ ನಿದ್ರಿಸಲಾಗದೆ ಬಂದಾಯ್ತು ನನ್ನ ನಿದ್ದೆ ಕೆಡಿಸೋಕೆ ಅಂತ ಅವನಿಗೆ ಬೈಯ್ಯದ ದಿನಗಳಿಲ್ಲಾ. ಹಾಗು ಹೀಗೂ ಅತ್ತಿಂದಿತ್ತಾ ಹೊರಳುತ್ತಾ ಮೈ ಕೊಡವಿ ಕಣ್ಣು ಉಜ್ಜುತ್ತಾ ರೆಪ್ಪೆ ತೆರೆದು ಗಡಿಯಾರ ನೋಡಿದರೆ ಸಮಯ ಏಳರ ಮೇಲೆ ಮೂರು ನಿಮಿಷ.
ಹೌದು, ನಿನಗೇನೊ ಕರ್ತವ್ಯ ಪ್ರಜ್ಞೆ, ನಿನ್ನ ನೋಡಿ ಒಂದಷ್ಟು ಹೊಟ್ಟೆ ಉರಿಯಲಿಲ್ಲ, ನನಗೆ ನಿನ್ನಂತಾಗಬೇಕು ಎಂದೆನಿಸಲೂ ಇಲ್ಲ. ಮನೆಯ ಹಿಂದೆ ಬಲ ಮೂಲೆಯಲ್ಲೆ ಕೊಟ್ಟಿಗೆ ನಮ್ಮದು, ಗೌರಿ ಕಾಯುತ್ತಲೆ ಇದ್ದಾಗೊಮ್ಮೆ ಬೆಳಗಿನ ಜಾವದ ಹಾಲು ಕರೆಯೊ ಅದ್ಭುತ ಕೆಲಸ ಅಮ್ಮನದು, ಚಿಕ್ಕವನಿದ್ದಾಗ ಕಣ್ಣು ಮಿಟುಕಿಸುತ್ತಾ ಅದನ್ನೇ ನೋಡುತ್ತಾ ಅಮ್ಮನ ಪಕ್ಕ ಕೂತಿರುತಿದ್ದೆ. ಕೈ ಬಳೆಯ ಜೊತೆಗೆ ನೊರೆ ಹಾಲಿನ ಸೂ… ಸೂ.. ಸದ್ದು , ಹಾಲು ತುಂಬುವ ಮೊದಲೊಂದು ನಾದ, ಹಾಲು ತುಂಬಿದ ಮೇಲೊಂದು ನಾದ.
ಆದರೆ ಈಗ, ಅಮ್ಮ ಹಾಲು ಕರೆಯೊ ಹೊತ್ತಿಗೆ ಅವ ಬಂದನೋ ಇಲ್ಲ ಅವ ಬಂದ ಮೇಲೆ ಅಮ್ಮ ಹಾಲು ಕರೆದಳೊ??
ಎಲ್ಲದಕ್ಕೂ ಅವನೇ ಕಾರಣ, ಹೌದು, ಭಾಸ್ಕರನ ಬೆಳಕಲ್ಲೊಂದು ಮಾಯೆ, ನಮ್ಮೂರ ದಾಂಡಿಗರು ಮಂಕರಿಕೆಯ ತುಂಬಾ ಗೊಬ್ಬರ ಹೊತ್ತು ಗದ್ದೆಯ ಬದುವಿನಲ್ಲಿ ಸಾಗುತಿದ್ದದ್ದು ಇವನ ಬೆಳಕಿನ ಕೆಳಗೇ….. ನಿನ್ನೆ ಮಾಡಿರದ ಮನೆಪಾಟ ಮತ್ತೆ ನೆನಪಾಗುತ್ತಿದ್ದದ್ದು, ನೀ ಬಂದು ಮನೆ ಮಾಡಿಯ ಹಂಚಿನ ತೂತಿನಿಂದ ಇಣುಕಿ ನನ್ನ ಅಕ್ಷಿಗೆ ಬಡಿದಾಗಲೇ. ನಿನ್ನ ಬೆಳಕೊಂದು ಘಂಟೆ ನನಗೆ, ಎಲ್ಲದಕ್ಕೂ ನೀನೆ ಕಾರಣವಾ?? ನೀನೆ ಬರದಿದ್ದರೆ ಇದಾವುದರ ಗೋಜೆ ಇರುತ್ತಿರಲಿಲ್ಲ ಅಂತನಿಸಿದ್ದೂ ಉಂಟು.
ಕತ್ತಲೆಯ ಮಡಿಲಲ್ಲಿ ಮಗುವಂತೆ ಕನಸು ಕಾಣುತ್ತಾ ದೀಪದ ಬೆಳಕಲ್ಲೆ ಜಗವನ್ನೇ ಬೆಳಗುವನೆಂಬ ಹುಚ್ಚು ವಿಶ್ವಾಸ ನಂದು. ಹುಳುವೊಂದು ಬೆನ್ನಿಗೆ ಲಾಟಿನೆ ಕಟ್ಟಿಕೊಂಡು ಹೊರಟಂತೆ, ಅಂಧಮತಿಯಾಗಿ ಬಿದ್ದಲ್ಲೆ ಬಡಾಯಿ ಕೊಚ್ಚುತ್ತಾ, ಗುಟುರು ಹೊಡೆಯುತ್ತಿದ್ದೇನೆ. ನೀನೊ ಪ್ರಕೃತಿಯ ಕತ್ತಲು ಸರಿಸಿ ಬೆಳಕಿನ ಸಿಹಿ ಊಟ ಉಣಿಸೋಕೆ ಬಂದೆ, ಮನವೆಲ್ಲಾ ಕುಷ್ಠದಂತೆ ಅಂಟಿಕೊಂಡ ಅಂಧಕಾರವನ್ಯಾರು ಓಡಿಸೋದು??
” ತಮಸೋಮ ಜೋತಿರ್ಗಮಯ” ಅಂದಿದ್ದೊಂದೆ ಬಂತು, ಬೆಳಕು ಕಣ್ಣಿಗೆ ಬಡಿದು ಕಣ್ಣು ಬಿಡಲು ಕಷ್ಟಪಡುತ್ತಿದ್ದೇನೆ. ಅಷ್ಟೊಂದು ದಿನವಾಗಿದೆ ನಾ ಬೆಳಕ ನೋಡಿ ನನ್ನೊಳಗೆ.
ಕತ್ತಲೇನು ಒಂದೆ ಇಲ್ಲಾ, ಅದರ ಹಿಂಡು ಹಿಂಡೇ ನನ್ನನ್ನ ಆವರಿಸಿ ಬಿಟ್ಟಿದೆ. ಅಜ್ಞಾನ, ಅಹಂ, ಸ್ವಾರ್ಥ, ಕಲ್ಮಷ, ದಾರಿದ್ರ್ಯ, ಸೊಕ್ಕು ಹೀಗೆ ಅದರ ಹತ್ತಾರು ಮುಖಗಳು ಒಂದಕ್ಕೊಂದು ಜಿದ್ದಿಗೆ ಬಿದ್ದವರಂತೆ ನನ್ನೊಳಗೆ ಮನೆಮಾಡಿ ನಗುತ್ತಲೆ ಸಂಸಾರ ಹೂಡಿಬಿಟ್ಟಿದ್ದಾರೆ.
ನೀನೋ ಬಂದವನೆ ಕೆಲಸ ಮುಗಿಸಿ ಹೊರಟೇ ಬಿಟ್ಟೆ, ಹಕ್ಕಿಗಳ ಕಲರವಕ್ಕೆ ಇಂಬು ಕೊಟ್ಟೆ, ಮರಗಿಡದ ಮುಖಕ್ಕೆ ಕಳೆ ಕೊಟ್ಟೆ ಬೀದಿ ಬೀದಿಯಲ್ಲಿ ಕಂಡು ಕಾಣದಂತೆ ನಾನು ಮತ್ತು ನನ್ನಂತವರು ಮಾಡುವುದನ್ನೆಲ್ಲಾ ನೋಡುತ್ತಾ ಕುಳಿತ ಶಿವನ ಮುಖಕ್ಕೆ ಬೆಳಕಿನ ಅಭಿಷೇಕ ಮಾಡಿದೆ.
ನಾಕಾಣೆ!! ನಿನಗ್ಯಾಕೋ ನನ್ನ ಮೇಲೆ ದಯೆ.