ಅಂಕಣ

ಬೆಳಕಿನ ಉತ್ಸವದಲ್ಲಿ ಬೆಳಗಿದ ವಿಷಯಗಳೆಷ್ಟೋ..!!

‘ಮಾತು ಬಿಡದ ಮಂಜುನಾಥ’ನಿಗೆ ಲಕ್ಷದೀಪೋತ್ಸವದ ವೈಭವ ಪ್ರತಿವರ್ಷ ಧರ್ಮಸ್ಥಳದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಡೆದುಕೊಂಡು ಬರುತ್ತಿದೆ. ಎಲ್ಲೆಲ್ಲೂ ದೀಪಗಳ ಸಾಲು. ‘ಓಮ್ ನಮ: ಶಿವಾಯ’. . ಎಂದು ಶಿವ ಪಂಚಾಕ್ಷರಿ ಜಪಿಸುತ್ತಾ ಬರುವ ಭಕ್ತಾಧಿಗಳಿಗೆ ಮಂಜುನಾಥನ ಸನ್ನಿಧಿಯು ಆಪ್ತವೆನಿಸುತ್ತದೆ. ನಂಬಿದ ಭಕ್ತರ ಪೊರೆವ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ನಡೆಯುವ ಈ ಚೆಂದದ ಹಬ್ಬ ಈ ವರ್ಷವೂ ಅದ್ಧುರಿಯಾಗಿ ನಡೆಯಿತಲ್ಲದೇ ಲಕ್ಷಾಂತರ ಭಕ್ತರ ಭಕ್ತಿ ಪರವಶತೆಯನ್ನು ಹೆಚ್ಚಿಸಿತು.

ಧರ್ಮಸ್ಥಳದ ಲಕ್ಷದೀಪೋತ್ಸವ ಬರಿಯ ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿರುತ್ತಿದ್ದರೆ ಇಷ್ಟೊಂದು ಹೆಸರುವಾಸಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಉತ್ಸವದ ಜತೆ ಜತೆಗೆ ನಡೆಯುವ ‘ಸರ್ವಧರ್ಮ ಹಾಗೂ ಸಾಹಿತ್ಯ ಸಮ್ಮೇಳನ’, ವಸ್ತು ಪ್ರದರ್ಶನ, ಲಲಿತಕಲಾ ಗೋಷ್ಠಿಯಂತಹಾ ಜ್ಞಾನಾರ್ಜನೆಯ ಕಾರ್ಯಗಳಿಗೆ ಪೂಜ್ಯ ಖಾವಂದರರು ಬೆಳಕು ಚೆಲ್ಲಿದುದರ ಪರಿಣಾಮವಾಗಿ ಲಕ್ಷದೀಪೋತ್ಸವದ ಕಂಪು ದೇಶವ್ಯಾಪಿಯಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ.

ದೀಪೋತ್ಸವದಲ್ಲಿ ಉತ್ಸವೋತ್ಸಾಹ:

ದೇಗುಲದಲ್ಲಿ ರಾತ್ರಿ ಹೊತ್ತು ನಡೆಯುವ ಬಲಿಯ ನಂತರ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಮಂಜುನಾಥ ಸ್ವಾಮಿಯನ್ನು ಪಾಲಕ್ಕಿಯ ಮೂಲಕ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ವೇಳೆ ವಿವಿಧ ಬಗೆಯ ಮುಖ್ಯ ಆಕರ್ಷಣೆಗಳು ಭಕ್ತರಲ್ಲಿ ಇತಿಹಾಸದ ಪ್ರಜ್ಞೆ ಮೂಡಿಸುತ್ತವೆ. ಭಕ್ತಿ ಲಹರಿ ಒಡಮೂಡುತ್ತದೆ. ಮೆರವಣಿಗೆಯಲ್ಲಿ ಒಂದೆಡೆ ದೇವಳದ ಆನೆಗಳು ಮಂಜುನಾಥ ಸ್ವಾಮಿಗೆ ಚಾಮರ ಬೀಸಿ ಸ್ವಾಗತಿಸುತ್ತಾ ರಾಜಗಾಂಭೀರ್ಯದಿಂದ ಹೆಜ್ಜೆಯಿರಿಸಿದರೆ, ಮತ್ತೊಂದೆಡೆ ವಿವಿಧ ಪತಾಕೆಗಳು ಮೆರವಣಿಗೆಗೆ ಮೆರುಗು ನೀಡುತ್ತವೆ. ಸ್ವಾಮಿಯ ಎರಡೂ ಬದಿಗಳಲ್ಲಿ ಮಂಗಳ ದೀವಿಗೆ(ಬೆಂಕಿಯ ಪಂಜುಗಳು)ಯನ್ನು ಹಿಡಿದಿರುತ್ತಾರೆ. ಈ ಮೂಲಕ ಮಂಜುನಾಥ ಸ್ವಾಮಿಯನ್ನು ನೈಸರ್ಗಿಕ ಬೆಳಕಿನಲ್ಲಿ ನೋಡುವ ಭಾಗ್ಯ ಸಕಲ ಭಕ್ತರಿಗೆ ಲಭಿಸುತ್ತದೆ.

02

ನಂಬಿದ ಭಕ್ತರ ಪೊರೆವ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸಾನಿಧ್ಯದ ಲಕ್ಷದೀಪೋತ್ಸವದ ಪ್ರಯುಕ್ತ ಧರ್ಮಸ್ಥಳದಲ್ಲಿ ಪ್ರತಿ ವರ್ಷವೂ ದೈವಿಕ ಉತ್ಸವಗಳು ನಡೆಯುತ್ತವೆ. ಅವುಗಳಲ್ಲಿ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಗೌರಿಮಾರುಕಟ್ಟೆ ಉತ್ಸವ, ಕಂಚಿಮಾರುಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವಗಳು ಪ್ರಮುಖವಾದವು. ಹೊಸಕಟ್ಟೆ ಉತ್ಸವ ವಸಂತಮಹಲ್‍ನ ಗುಡಿಯಲ್ಲಿ, ಕೆರೆಕಟ್ಟೆ ಉತ್ಸವ ಕ್ಷೇತ್ರದ ಕೆರೆಯ ಮುಂಭಾಗದ ಕಟ್ಟೆಯಲ್ಲಿ, ದೇವಳದ ಎಡಪಾರ್ಶ್ವದ ಉದ್ಯಾನವನದಲ್ಲಿ ಲಲಿತೋದ್ಯಾನ ಉತ್ಸವ, ಗೌರಿಮಾರುಕಟ್ಟೆ, ಕಂಚಿಮಾರುಕಟ್ಟೆ ಉತ್ಸವ ಹೀಗೆ ದಿನಕ್ಕೊಂದು ಸ್ಥಳದಲ್ಲಿ ಉತ್ಸವಗಳು ನಡೆಯುತ್ತವೆ. ಒಂದು ದಿನ ಪಾಲಕ್ಕಿಯಲ್ಲಿ ಸ್ವಾಮಿಯನ್ನು ಕರೆದೊಯ್ದರೆ ಮತ್ತೊಂದು ದಿನ ಅರ್ಚಕರು ಹೊತ್ತೊಯ್ಯುತ್ತಾರೆ. ಕೆರೆಕಟ್ಟೆ ಉತ್ಸವದಲ್ಲಿ ದೇವಳದ ಕೆರೆಯಲ್ಲಿ ಸ್ವಾಮಿಯ ಬಲಿಪೂಜೆ ನಡೆಯುತ್ತದೆ. ಈ ಎಲ್ಲಾ ಉತ್ಸವಗಳಲ್ಲೂ ಸಂಗೀತ ಸೇವೆ, ವಾದ್ಯ ಸೇವೆ, ಶಂಖ ಸೇವೆಯಂಥಾ ವಿಶೇಷ ಸೇವೆಗಳನ್ನು ಮಂಜುನಾಥ ಸ್ವಾಮಿಗೆ ಅರ್ಪಿಸಲಾಗುತ್ತದೆ.

04

ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು :

            ದೀಪೋತ್ಸವದ ಮುಖ್ಯ ಆಕರ್ಷಣೆ ‘ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನಗಳು’. ಹೆಗ್ಗಡೆಯವರ ಆಶಯದಂತೆ, ಶ್ರೀ ಕ್ಷೇತ್ರವು ಬರೀ ಒಂದು ಧರ್ಮಕ್ಕೆ ಅಂಟಿಕೊಳ್ಳದೆ ಸಮನ್ವಯತೆಯನ್ನು ದೇಶದುದ್ದಗಲಕ್ಕೂ ಪಸರಿಸುವಂತಾಗಬೇಕು ಎಂಬ ನಿಟ್ಟಿನಲ್ಲಿ  ಪ್ರತೀ ವರ್ಷದಂತೆ ಈ ವರ್ಷವೂ ಸರ್ವಧರ್ಮ ಸಮ್ಮೇಳನದ 84ನೇ ಅಧಿವೇಶನ ನಡೆಯಿತು.

            ರಾಷ್ಟ್ರಧ್ವಜದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳು ಧ್ವನಿಸುವ ಭಾವೈಕ್ಯತೆಯ ವೈಶಿಷ್ಠ್ಯತೆ ತಿಳಿದುಕೊಂಡು ಜೀವನವನ್ನು ಹಸನಾಗಿಸಿಕೊಳ್ಳಬೇಕೆಂದು ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಮನ್ಮಹರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿ ಹೇಳಿದರು.

ಸರ್ವಧರ್ಮ ಸಮ್ಮೇಳನದಲ್ಲಿ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಮನ್ಮಹರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ .

ಸರ್ವಧರ್ಮ ಸಮ್ಮೇಳನದಲ್ಲಿ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಮನ್ಮಹರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ .

            ದ್ವೇಷ, ಅಸೂಯೆ ಮತಾಂಧತೆಯನ್ನು ನಿರ್ಮಿಸುತ್ತದೆ. ಈ ಅಂಧತ್ವ ಧಾರ್ಮಿಕ ನೆಲೆಯಲ್ಲಿ ಸಂಘರ್ಷ ಹುಟ್ಟು ಹಾಕುತ್ತದೆ.  ಸಂಘರ್ಷದ ಹಾದಿಯನ್ನು ಬಿಟ್ಟು ಕ್ಷಮೆ, ಪ್ರೀತಿ, ಕರುಣೆಯ ಮೌಲ್ಯಗಳನ್ನು ಅನುಸರಿಸಬೇಕು ಎಂದರು. ಹಸಿರು ಬಣ್ಣ ಸಮೃದ್ಧಿಯ ಸಂಕೇತ. ಹಸಿರಿದ್ದರೆ ಬೆಳೆ. ಹಸಿರಿದ್ದರೆ ಮನುಷ್ಯನೂ ಸೇರಿದಂತೆ ಜೀವಜಗತ್ತಿನ ಉಳಿವು. ಕೃಷಿರಂಗದ ಅಸ್ತಿತ್ವ ಹಸಿರಿದ್ದಾಗ ಮಾತ್ರ ನಿರಂತರವಾಗಿರುತ್ತದೆ. ಅಷ್ಟೇ ಅಲ್ಲ ಮನುಕುಲದ ಉಳಿವು ಹಸಿರಿನೊಂದಿಗೇ ತಳುಕು ಹಾಕಿಕೊಂಡಿದೆ. ರಾಷ್ಟ್ರಧ್ವಜದ ಬಣ್ಣಗಳು ಧ್ವನಿಸುವ ವೈವಿಧ್ಯತೆಯ ಮೌಲ್ಯಕ್ಕೆ ತಕ್ಕಂತೆ ರಾಷ್ಟ್ರ ರೂಪುಗೊಳ್ಳಬೇಕು ಎಂದು ಹೇಳಿದರು. ಭಾವೈಕ್ಯತೆಯನ್ನು ಬಿಂಬಿಸುವ ಬಣ್ಣಗಳು ನಮ್ಮ ಜೀವನದಲ್ಲಿ ಬಿಟ್ಟಿರಲಾರದ ಬಂಧಗಳನ್ನು ಹೇಳುತ್ತವೆ. ಎಲ್ಲ ಧರ್ಮಗಳನ್ನು ಒಂದೆಡೆ ಸೇರಿಸಿ ಸರ್ವಧರ್ಮಗಳ ಸಮನ್ವಯ ಸಾರವನ್ನು ಧರ್ಮಸ್ಥಳದಲ್ಲಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಸರ್ವಧರ್ಮ ಸಮ್ಮೇಳನಗಳಿಂದ ಸಮನ್ವಯತೆ ಸಾಧ್ಯ ಎಂದರು.

ಸರ್ವಧರ್ಮ ಸಮ್ಮೇಳವನ್ನುದ್ಧೇಶಿಸಿ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಮನ್ಮಹರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿ ಮಾತನಾಡುತ್ತಿರುವುದು.

ಸರ್ವಧರ್ಮ ಸಮ್ಮೇಳವನ್ನುದ್ಧೇಶಿಸಿ ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಶ್ರೀ ಮನ್ಮಹರಾಜ ನಿರಂಜನ ಶ್ರೀ ಜಗದ್ಗುರು ಫಕೀರ ಸಿದ್ಧರಾಮ ಮಹಾಸ್ವಾಮಿ ಮಾತನಾಡುತ್ತಿರುವುದು.

            ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಫಕೀರ ಸ್ವಾಮಿಗಳನ್ನು ತಬ್ಬಿಕೊಳ್ಳುವ ಮೂಲಕ ಧರ್ಮ ಸಮನ್ವಯತೆಯ ಪರಿಕಲ್ಪನೆ ಮೂಡಿಸಿದರು. ಇನ್ನುಳಿದಂತೆ ರಾಜ್ಯ ಪ್ರಶಸ್ತಿ ಪುರಸ್ಕತ ಯಕ್ಷಗಾನ ಕಲಾವಿದ ಜಬ್ಬರ್ ಸಮೊ, ಎಂದು ನವದೆಹಲಿಯ ಶ್ರೀ ಲಾಲ್‍ಬಹುದ್ದೂರು ಶಾಸ್ತ್ರಿ ರಾಷ್ಟ್ರೀಯ ಸಂಸ್ಕತ ವಿದ್ಯಾಪೀಠದ ಪ್ರಾಕೃತ ವಿಭಾಗದ ಮುಖ್ಯಸ್ಥರಾದ ಡಾ. ಜಯಕುಮಾರ್ ಎನ್. ಉಪಾಧ್ಯ, ನಿವೃತ್ತ ನ್ಯಾಯಾಮೂರ್ತಿ ವಿ. ಗೋಪಾಲಗೌಡ ಮಾತನಾಡಿದರು.

ಸಾಹಿತ್ಯ ಸಮ್ಮೇಳನಗಳು:

            ಸರ್ವಧರ್ಮ ಸಮ್ಮೇಳನಗಳು ಧರ್ಮ ಸಮನ್ವಯತೆಗೆ ಸಾಕ್ಷಿಯಾದಂತೆ ಸಾಹಿತ್ಯ ಸಮ್ಮೇಳನಗಳು ಜ್ಞಾನದ ಮೂಲಶಕ್ತಿಯಾಗಿ ಸಾವಿರಾರು ಮನಸುಗಳನ್ನು ತೃಪ್ತಿಪಡಿಸುತ್ತವೆ. ಪ್ರಸ್ತುತ ಸಾಹಿತ್ಯ ಲೋಕದ ಧನಾತ್ಮಕ ಋಣಾತ್ಮಕ ಅಂಶಗಳ ವಿಮರ್ಶೆ ಇಲ್ಲಿ ನಡೆಯುತ್ತದೆ. ಹಲವಾರು ನೂತನ ವಿಷಯ ವಿಶೇಷಣಗಳಿಂದ ಹಾಗೂ ಗಣ್ಯರ ಸಂವೇದನಾತ್ಮಕ ಮಾತುಗಳಿಂದ ಸಾಹಿತ್ಯಾಸಕ್ತರನ್ನು ಸೆಳೆಯುತ್ತದೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ .

ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ .

            ಈ ಬಾರಿಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್ ಮಾತನಾಡಿ, ಸೂಕ್ಷ್ಮ ಗ್ರಹಿಕೆ, ಪರಂಪರೆಯ ಅವಲೋಕನ ಮತ್ತು ವಾಸ್ತವದ ಸಮರ್ಥ ಬಿಂಬಿಸುವಿಕೆಯ ಕೊರತೆಯ ಕಾರಣದಿಂದ ಇಂದಿನ ಕಾವ್ಯ ನಾಶವಾಗುತ್ತಿದೆ ಎಂದರು. ಕಾವ್ಯವು ಸಾಹಿತ್ಯಕ ಸತ್ವವನ್ನು ಕಳೆದುಕೊಂಡು ಕೇವಲ ಜನಪ್ರಿಯತೆಯ ಹಪಾಹಪಿಯಿಂದ ಸೃಷ್ಟಿಯಾಗುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸಾಲುಗಳನ್ನು ಮನಸೋ ಇಚ್ಛೆ ಕೆಟ್ಟದಾಗಿ ತುಂಡರಿಸಿದ ಮಾತ್ರಕ್ಕೆ ಕಾವ್ಯವಾಗುವುದಿಲ್ಲ. ಇಂದಿನ ಪೀಳಿಗೆಯ ಕಾವ್ಯದಲ್ಲಿ ಸ್ವಗತ ಸಂಯಮ ಇಲ್ಲವಾಗಿದೆ. ಕವಿತೆಗಳು ಸಂಭಾಷಣೆ, ಭಾಷಣಗಳನ್ನು ಒಳಗೊಳ್ಳುತ್ತಿವೆ. ಹೀಗಾದರೆ ಕಾವ್ಯದ ಸತ್ವ ಉಳಿಯುವುದು ಸಂಶಯ. ಸ್ವಗತದ ಸಂಯಮದಲ್ಲಿ ಕವಿತೆ ಪಕ್ವವಾಗಬೇಕು. ಇಲ್ಲವಾದಲ್ಲಿ ಅದು ಪ್ರಭಾವಿಸಲು ಯೋಗ್ಯವಲ್ಲ ಎಂದರು. ಲೋಕಾನುಭವವನ್ನು ಕಾವ್ಯಾನುಭವವಾಗಿ ಬದಲಾಯಿಸುವ ಅಪರಿಮಿತ ಶಕ್ತಿ ಕವಿಯದ್ದು. ಸಾಹಿತ್ಯ ಜನಜೀವನಕ್ಕೆ ಸಮೀಪವಾದದ್ದು ಅಲ್ಲದೇ ಇದಕ್ಕೆ ಅಕ್ಷರ ರೂಪ ನೀಡಿ ಬೆಳಗಿಸಬೇಕಾದ್ದು ಸಾಹಿತಿಗಳ ಕರ್ತವ್ಯ. ಸ್ವಪ್ರಚಾರಕ್ಕಾಗಿ ಸಾಹಿತ್ಯವನ್ನು ಕೆಡಿಸುವ ಕಾರ್ಯ ನಡೆಯಬಾರದು ಎಂದರು.

ಸಾಹಿತ್ಯ ಸಮ್ಮೇಳನುದ್ಧೇಶಿಸಿ ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್  ಮಾತನಾಡುತ್ತಿರುವುದು.

ಸಾಹಿತ್ಯ ಸಮ್ಮೇಳನುದ್ಧೇಶಿಸಿ ಖ್ಯಾತ ಸಾಹಿತಿ ಎಂ.ಎನ್.ವ್ಯಾಸರಾವ್ ಮಾತನಾಡುತ್ತಿರುವುದು.

            ಈ ಬಾರಿಯ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ವಿಜಯವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮನು ಬಳಿಗಾರ್, ಬರಹಗಾರ ವಸುಧೇಂದ್ರ, ಸುಳ್ಯದ ಸ್ತ್ರೀ ರೋಗ ತಜ್ಞೆ ಡಾ.ವೀಣಾ ಉಪಸ್ಥಿತರಿದ್ದು ವಿಶೇಷ ಉಪನ್ಯಾಸಗಳನ್ನು ನೀಡಿದರು.

ವಸ್ತು ಪ್ರದರ್ಶನ :

ದಕ್ಷಿಣ ಕನ್ನಡ ಜಿಲ್ಲಾ ಪಂಜಾಯಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು ಅವರಿಂದ ಚಾಲನೆ ಕಂಡ ಧರ್ಮಸ್ಥಳ ಲಕ್ಷದೀಪೋತ್ಸವದ ಮುಖ್ಯ ಆಕರ್ಷಣೆ ‘ವಸ್ತು ಪ್ರದರ್ಶನ’ ಹಲವರ ಗಮನ ಸೆಳೆಯಿತು. ಯಂತ್ರೋಪಕರಣಗಳು, ಬೀಜೋತ್ಪನ್ನಗಳು, ರುಡ್ ಸೆಟ್ ಸಂಸ್ಥೆಯ ಹಲವಾರು ಜನೋಪಯೋಗಿ ವಸ್ತುಗಳು, ವಿವಿಧ ಪುಸ್ತಕಗಳು, ಮನರಂಜನೆಯ ಆಟಿಕೆಗಳು, ಸಸಿತೋಪುಗಳು ಪ್ರದರ್ಶನಗೊಂಡು ಮಾರಾಟಗೊಂಡವು. ಅಂಚೆ, ತೋಟಗಾರಿಕೆ, ಅರಣ್ಯ, ಶಿಕ್ಷಣ, ಕೃಷಿ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ, ಕೆ.ಎಂ.ಎಫ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಗಳು ಸಾವಿರಾರು ಜನರಿಗೆ ತಲುಪವಲ್ಲಿ ‘ವಸ್ತುಪ್ರದರ್ಶನ’ ಮುಖ್ಯ ಪಾತ್ರವಹಿಸಿತು.

ವಸ್ತುಪ್ರದರ್ಶನದ ಪಕ್ಷಿನೋಟ

ವಸ್ತುಪ್ರದರ್ಶನದ ಪಕ್ಷಿನೋಟ

ವಸ್ತು ಪ್ರದರ್ಶನದಲ್ಲಿ ಕೇವಲ ಮನರಂಜನೆ ಹಾಗೂ ಅಹಾರ ಮಳಿಗೆಗಳ ಪ್ರದರ್ಶನ ಮಧ್ಯೆ ಸರ್ಕಾರದ ನಿಯೋಜಿತ ಇಲಾಖೆಗಳಿಂದ ಜನ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ಅರಿವಿನ ಭಿತ್ತಿಪತ್ರಗಳ ಮೂಲಕ ಸಾಮಾಜಿಕ ಕಳಕಳಿಯ ಸಂವೇದನೆ ಒಡಮೂಡಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನೌಕರರು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು ತಯಾರಿಸಿದ ಉಪ್ಪಿನ ಕಾಯಿ, ಕೇಶ ತೈಲಗಳು ಪ್ರದರ್ಶನಕ್ಕಿದ್ದವು. ರಾಜ್ಯದ ಎಲ್.ಐ.ಸಿ, ಕರ್ನಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಕಾರ್ಪೋರೇಷನ್  ಬ್ಯಾಂಕ್‍ಗಳ ಮಳಿಗೆಗಳೂ ಇದ್ದವು. ಬ್ಯಾಂಕ್ ಖಾತೆ, ಠೇವಣಿ ಬಗೆಗಿನ ಪೂರಕ ಮಾಹಿತಿ ನೀಡಲಾಯಿತು.

ರತ್ನ ಮಾನಸ ವಿದ್ಯಾರ್ಥಿ ನಿಲಯದಲ್ಲಿ ಬೆಳೆದ ತರಕಾರಿಗಳು, ಸಸಿತೋಪುಗಳ ಜತೆಗೆ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳ ಜೀವನದ  ಸಾಕ್ಷ್ಯಚಿತ್ರ ಪ್ರದರ್ಶನವೂ ನೋಡುಗರ ಗಮನ ಸೆಳೆಯಿತು. ವಸ್ತುಪ್ರದರ್ಶನ ಆವರಣದ ಮುಖ್ಯ ಆಕರ್ಷಣೆಯಾಗಿದ್ದ ‘ಕೃಷಿತೇಜಧಾಮ’ದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರೂಪುರೇಷಗಳು, ಧರ್ಮಸ್ಥಳದ ಬೃಹತ್ ‘ಶುದ್ಧಗಂಗಾ’ ಯೋಜನೆಯ ಸಮಗ್ರ ಮಾಹಿತಿಗಳು, ಕರಕುಶಲ ವಸ್ತುಗಳು, ಕುಂಬಾರಿಕೆ ಮುಂತಾದವುಗಳು ಎಲ್ಲರ ಗಮನಸೆಳೆದವು.

ಶ್ರೀಕ್ಷೇತ್ರ ಧರ್ಮಸ್ಥಳ ಸಿರಿ ಗ್ರಾಮೀಣಾಭಿವೃದ್ದಿಯ ಉತ್ಪನ್ನಗಳಿಗೆ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಬೇಡಿಕೆ ಕಂಡುಬಂದಿತು. ಬಟ್ಟೆ, ರುಚಿಕರ ವಸ್ತುಗಳು, ಮನೆಬಳಕೆ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು  ವಸ್ತು ಪ್ರದರ್ಶನದ ವ್ಯವಸ್ಥಾಪಕರಾದ ಎಂ. ಕೃಷ್ಣಶೆಟ್ಟಿ ತಿಳಿಸಿದರು. ಎಸ್.ಡಿ.ಎಮ್ ಅಂಗಸಂಸ್ಥೆಗಳಾದ ರುಡ್‍ಸೆಟ್, ಸಿರಿ ಗ್ರಾಮೋದ್ಯೋಗ, ರತ್ನ ಮಾನಸ, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ, ಧರ್ಮೋತ್ಥಾನ ಟ್ರಸ್ಟ್, ಸಿದ್ದವನ ನರ್ಸರಿ ಸೇರಿದಂತೆ ಶಿಕ್ಷಣ ಸಂಸ್ಥೆಗಳೂ ಭಾಗವಹಿಸಿದ್ದವು.

03

ಈ ಎಲ್ಲಾ ಮುಖ್ಯ ಆಕರ್ಷಣೆಗಳ ಹಿಂದಿನ ಶಕ್ತಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು. ಈ ಎಲ್ಲಾ ಕಾರ್ಯಕ್ರಮಗಳೂ ಶಿಸ್ತಿನಿಂದ ಕಾರ್ಯರೂಪಕ್ಕೆ ಬರುವಲ್ಲಿ ಮುಖ್ಯ ಪಾತ್ರ ವಹಿಸುವವರು ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಅವರು. ಹೀಗೆ ಶ್ರೀ ಕ್ಷೇತ್ರವು ಬರಿಯ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲಾಗದೇ ‘ಲಕ್ಷದೀಪೋತ್ಸವದ’ಲ್ಲಿ ‘ದೀಪ ಸಮನ್ವಯ’, ‘ಧರ್ಮ ಸಮನ್ವಯ’ ಮತ್ತು ‘ಜ್ಞಾನ ಸಮನ್ವಯ’ ಎಂಬ ಸಮನ್ವಯಗಳ ಬೆಳಕನ್ನು ಲೋಕಕ್ಕೇ ಚೆಲ್ಲುವುದರ ಮೂಲಕ ಈ ವರ್ಷದ ಮಂಜುನಾಥ ಸ್ವಾಮಿಯ ವೈಭವದ ಲಕ್ಷದೀಪೋತ್ಸವ ಸಮಾಪನಗೊಂಡಿತು.

*******

ವರದಿ:

ಕೃಷ್ಣ ಪ್ರಶಾಂತ್ ವಿ. ಗೇರುಕಟ್ಟೆ

ದ್ವಿತೀಯ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗ

ಎಸ್.ಡಿ.ಎಮ್ ಕಾಲೇಜು , ಉಜಿರೆ

ಚಿತ್ರಗಳು: ಕೃಷ್ಣಪ್ರಶಾಂತ್.ವಿ ಮತ್ತು ಚೈತನ್ಯ ಕುಡಿನಲ್ಲಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!