ಉಹೂಂ.. ನನ್ನ ಬಳಿ ಇನ್ನೇನು ಉಳಿದಿಲ್ಲಾ.. ಎಲ್ಲವೂ ಅಲ್ಲೆ ಇದೆ ನೋಡು ನಿನ್ನ ಮನೆಯ ಮಾಡಿ ಕೆಳಗಿನ ಅಟ್ಟದ ಮೇಲೆ ನೀ ಕೂಡಿಟ್ಟ ರಾಶಿ ನನ್ನ ಕೈಕಾಲು, ಕೊಟ್ಟಿಗೆಯ ಹಾಸಿಗೆ ನನ್ನದೆ ಕುರುಹು, ಇಲ್ಲ ನನ್ನ ಬಳಿ ಅಳಲು ಕಣ್ಣೀರು ಇಲ್ಲದಷ್ಟು ಬತ್ತಿ ಹೋಗಿ ಕಣ್ಣುಗಳೆಲ್ಲಾ ಉಬ್ಬಿ ಹೋಗಿದೆ.. ನನ್ನ ಕಣ್ಣೀಗೀಗ ಕತ್ತಲೆಗಿಂತ ಹಗಲೇ ಮಬ್ಬಾಗಿ ಕಾಣಿಸುತ್ತಿದೆ.. ಬಿಟ್ಟು ಬಿಡು ನನ್ನ ಬದುಕಿಕೊಳ್ಳುತ್ತೇನೆ ಹತ್ತಾರು ದಿನ.
ಎಡ ಮಗುಲ ತೊಗಲು ನಿನ್ನ ಮನೆಯ ಒಲೆಯಲ್ಲಿ ಕಪ್ಪಗಿನ ಬೂದಿಯಾಗಿ ಧೂಳೆಬ್ಬಿಸುತ್ತಾ ಮಲಗಿದೆ ನೋಡು, ಕೆಂಪಗಿನ ಕೆಂಡಕ್ಕೆನೋ ಮಡಿಲಲ್ಲೆ ಮಲಗಿಸಿಕೊಂಡಿತು ಸುಡುತ್ತಿಲ್ಲಾ ಅದು, ನಿನ್ನ ಭಯ ಕಾಡದೇ ಇರದು, ಮೆಲ್ಲ ಕೈ ಸುಟ್ಟುಬಿಟ್ಟೀತು.. ಹೌದು ನನ್ನ ಅಡಿಯಿಂದ ಮುಡಿವರೆಗು ಎಲ್ಲಾ ನಿನ್ನ ಬಳಿಯೆ ಇದೆ ಈಗ.. ನನ್ನ ಅಸ್ಥಿಗೊಂದು ಕುರುಹಾದರು ಇಡುವೆಯಾ ಮರೆಯದೆ.
ನಿನ್ನ ತಾತನ ಸತ್ತ ದೇಹ ಕೊಳೆತು ನಾರಲಿಲ್ಲ, ಬೀದಿ ನಾಯಿಯ ಬಾಯಿಗೆ ಬೀಳಲಿಲ್ಲ ಸುಟ್ಟು ಬಿಟ್ಟೆ ನೀ ನನ್ನ ಕಳೆಬರಹದ ಮಡಿಲಲ್ಲಿ ಮಲಗಿಸಿ, ನಿನ್ನ ಮಗಳ ಖುಷಿಗೆ ಕಟ್ಟಿಕೊಟ್ಟ ಜೋಕಾಲಿ ಗಟ್ಟಿ ಹಿಡಿದದ್ದು ನನ್ನದೇ ಕೈಗಳು. ಹೌದು ನಾ ನನಗೇನು ಇಟ್ಟುಕೊಂಡೇ ಇಲ್ಲಾ ಎಲ್ಲವೂ ನಿನಗಾಗಿಯೆ..
ನಿನ್ನ ಮನೆಯ ಮಹಡಿ ಇನ್ನೂ ಉಳಿದಿದೆ ನೋಡು ಮಳೆ ಗಾಳಿಗೂ ಅಂಜದೇ ನನ್ನ ದೇಹದ ರಕ್ತ ಬಸಿಯುತ್ತಲೆ ಇದೆ ಅಲ್ಲಿ ಒಮ್ಮೇ ಕಣ್ಣು ಬಿಟ್ಟು ನೋಡು ಒಳಗಿನದು. ನೀ ಉಸಿರಾಡಿ ಬಿಟ್ಟ ಬೂದಿ ಮಿಶ್ರಿತ ಗಾಳಿಯೇ ನಾ ಕುಡಿದೆ. ನಾ… ನಿನಗೆ ಕೊಟ್ಟಿದ್ದು ಮಾತ್ರ ಜೀವಾನಿಲ. ಸ್ಮರಿಸಲಾಗದೇ ಹೋದೆಯಲ್ಲ..
ನಿಜಕ್ಕೂ ನಿನ್ನ ನೋಡಿದೊಡನೆ ಭಯ ನನಗೆ, ನಿನ್ನ ಕೈಯಲ್ಲಿನ ಕುಡುಗೋಲಿನ ಹಿಡಿಕೆಯೂ ನನ್ನ ಕೈಕಾಲೆ, ನನಗಿದು ಭ್ರಾಂತಿಯಷ್ಟೆ ನೀ ನನ್ನ ಬದುಕಲು ಬಿಡುವೆ ಎನ್ನುವುದು, ನನಗೇನು ಗೊತ್ತಿತ್ತು ನಾ ಕೊಟ್ಟ ಎಲ್ಲವೂ ನನ್ನನ್ನೇ ಸುಡುವುದೆಂದೂ..
ನನ್ನ ಹುಟ್ಟಿಸಿ ಬಿಟ್ಟವನ ಬಳಿ ತಪಸ್ಸಾದರು ಗೈದು ಅಜರಾಮರನಾಗೋಣ ಅಂದರೇ ಮಾತೆ ಕೊಡಲಿಲ್ಲ ಅವ ನನಗೇ.. ದೇವರ ಹುಂಡಿಗೆ ದುಡ್ಡು ಹಾಕಿ ಮಾಡಿದ ಪಾಪಗಳ ಬದಲಿಗೆ ಲಂಚ ನೀಡಿ ಕೈ ತೊಳೆದುಕೊಳ್ಳೊ ನೀನು ನನ್ನ ಕೈಗಳೇ ಉಳಿಸಿಲ್ಲ.
ಈಗ ನೀರನ್ನರಸಿ ಭೂತಾಯಿಯ ಒಡಲ ಬಗೆದು ಆಳಕ್ಕಿಳಿಯುವ ತಾಕತ್ತೂ ಇಲ್ಲವಾಗಿದೆ ನನಗೆ, ಮೈ ಎಲ್ಲಾ ಮಾಸದ ಗಾಯಗಳು, ಜೋತು ಬಿದ್ದಿರುವ ದೇಹದ ಬಣ್ಣ ಮಾಸಿ ಮೈಯೆಲ್ಲಾ ಕಣ್ಣಾಗಿ ನಿನ್ನ ಹೆಜ್ಜೆ ಗುರುತೆ ಕಾಣುತ್ತಿರುವೆ ಭಯವಾಗಿ. ನೀ ಮತ್ತೆ ಬರದಿದ್ದರೆ ಸಾಕೆಂದು..
ಉಳಿದದ್ದು ಉಸಿರೊಂದೇ, ಬದಿಯಲ್ಲಿ ಬೆಳೆಯುತ್ತಿದೆ ನಾ ಬಿತ್ತಿದ ಬೀಜವೋಂದು ಸುಡು ಬಿಸಿಲ ತಾಪಕ್ಕೆ ನೆರಳಾಗೊ ಭರದಲ್ಲಿ ಮರೆತೆ ಹೋದೆ ನಾ ಕಳೆದುಕೊಂಡ ನನ್ನ ದೇಹದ ಅರ್ಧ ಭಾಗವನ್ನ. ಆಸೆಯೇನೂ ಇಲ್ಲದಿರೋ ನನ್ನನ್ಯಾಕೆ ಬದುಕೋಕೆ ಬಿಡಲಾರೆ ನೀ ನಿನ್ನ ಆಸೆಗಳ ತೀರಿಸಿದ ತಪ್ಪಿಗೇನೂ??
ಉಯ್ಯಾಲೆ ಕಟ್ಟಿ ಆಡಿದ್ದು ಮರೆತೆ ನೀ.. ಒಂದೇ ಹಣ್ಣಿಗೆ ನೀ ಎಸೆದ ಕಲ್ಲುಗಳಿಗೆ ನಾ ಲೆಕ್ಕವೇ ಇಟ್ಟಿಲ್ಲ, ನನಗೆ ಗೊತ್ತು ಹಣ್ಣು ಸಿಕ್ಕ ಖುಷಿಗೆ ನೀ ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಈಗ ನನ್ನ ಬಳಿ ಹಣ್ಣೂ ಇಲ್ಲಾ ನಿನ್ನ ಮನ ತಣಿಸಲು ನನಗೀಗ ನೆಲೆಯೂ ಇಲ್ಲ ನಾನಾಗೇ ಉಳಿಯಲು..
ನಿನಗೆ ಕಾಂಕ್ರೀಟ್ ಕಾಡಿನ ಆಸೆ, ಸಂಪಾದನೆಯ ಅಮಲಿನಲ್ಲಿ ಮೈಮರೆತು ತೊಗಲೆಲ್ಲಾ ಕಾಸಿನ ಕಾಮಲೆ ಏರಿದ ನಿನ್ನ ನಶೆ ಇಳಿಸಲು ನನ್ನ ಬಳಿ ಏನೂ ಇಲ್ಲಾ..
ಸಾಕು… ಇನ್ನೆಷ್ಟು ದಿನ?? ಈಗಲೆ ಅಲುಗಾಡುತ್ತಿವೆ ಎಲುಬುಗಳು ನನ್ನದು.. ರಸವೆಲ್ಲಾ ಹೀರಿ ಸುಕ್ಕುಗಟ್ಟಿದ ಚರ್ಮದ ಹೊದಿಕೆಯೊಡನೆ ದಿನಗಳ ಎಣಿಸುತ್ತಿರುವೆ.. ಬಿಟ್ಟುಬಿಡು ನನ್ನ..
ನನ್ನ ಬಳಿ ಇನ್ನೇನೂ ಉಳಿದಿಲ್ಲಾ ಮಗು.. ಕ್ಷಮೆಯೊಂದ ಬಿಟ್ಟು..
?