1999ರ ಏಪ್ರಿಲ್ 29ರಂದು ನಡೆದ ಘಟನೆ.
ದಕ್ಷಿಣ ದೆಹಲಿಯಲ್ಲಿ ರೆಸ್ಟಾರೆಂಟ್ ಒಂದರಲ್ಲಿ ಪರಿಚಾರಿಕೆಯಾಗಿದ್ದ ಜೆಸ್ಸಿಕಾ ಲಾಲ್ ಕೆಲಸ ಮುಗಿಸಿ ಮನೆಗೆ ಹೋಗುವ ಸಮಯ. ಅದೇ ಹೊತ್ತಿನಲ್ಲಿ ರೆಸ್ಟಾರೆಂಟ್ ಗೆ ಬಂದಿದ್ದ ಕೆಲ ರಾಜಕಾರಣಿಗಳ ಮಕ್ಕಳು ಮದ್ಯ ಸರಬರಾಜು ಬೇಕು ಎಂದು ಈ ಹುಡುಗಿಗೆ ಆದೇಶಿಸಿದರು. ಸಾರಿ ಸರ್, ಈಗಾಗಲೇ ಸಮಯ ಮೀರಿದೆ ನಮ್ಮಲ್ಲಿ ಮದ್ಯವೂ ಖಾಲಿಯಾಯಿತು. ರೆಸ್ಟೋರೆಂಟ್ ಬಾಗಿಲು ಹಾಕುವ ಸಮಯವಾಯಿತು. ಇನ್ನೇನಿದ್ದರೂ ಹೊರಡುವ ಸಮಯ. ನಾವು ಹೋಗುತ್ತಾ ಇದ್ದೇವೆ. ನೀವು ನಾಳೆ ಬನ್ನಿ. ದಯವಿಟ್ಟು ಕ್ಷಮಿಸಿ.
ಹೀಗೆ ನಯವಾಗಿ ಹೇಳಿದಾಕೆ ರೂಪದರ್ಶಿಯೂ ಆಗಿದ್ದ ಜೆಸ್ಸಿಕಾ.
ಆ ರೆಸ್ಟಾರೆಂಟ್ ಹೆಸರು ಟಾಮರಿಂಡ್ ಕೋರ್ಟ್ ರೆಸ್ಟಾರೆಂಟ್. ದೆಹಲಿಯ ಕುತುಬ್ ಮಿನಾರ್ ಪಕ್ಕದಲ್ಲೇ ಇದ್ದ ರೆಸ್ಟಾರೆಂಟಿನಲ್ಲಿ ಅಂದು ಮದ್ಯವೂ ಖಾಲಿಯಾಗಿತ್ತು. ರಾತ್ರಿ 12.30ರರ ವೇಳೆಯ ಬಳಿಕ ಆಗಮಿಸಿದಾತ ಮನು ಶರ್ಮಾ.
ಆತನೊಬ್ಬನೇ ಬಂದಿರಲಿಲ್ಲ. ಬರುವಾಗ ತನ್ನ ಪಟಾಲಂನೊಂದಿಗೆ ಬಂದು ಮದ್ಯ ಕೇಳಿದ. ಇಲ್ಲ ಎಂದು ಅಲ್ಲಿದ್ದ ಜೆಸಿಕಾ ಹೇಳಿದಾಗ ಒಂದು ಸಾವಿರ ರೂಪಾಯಿ ಕೊಡುತ್ತೇನೆ. ನೀನು ಡ್ರಿಂಕ್ಸ್ ಕೊಡಲೇಬೇಕು ಎಂದು ಹಠಹಿಡಿದ. ಜೆಸ್ಸಿಕಾ ಇಲ್ಲವೆಂದಳು.
ಕೂಡಲೇ ಶರ್ಮಾ ಪಿಸ್ತೂಲಿನಿಂದ ಹಾರಿದ ಗುಂಡು ಬಾರ್ ನಲ್ಲಿ ಪ್ರತಿಧ್ವನಿಸಿತು. ಇದು ಜೆಸ್ಸಿಕಾಗೆ ಆಜ್ಞೆಯಾಗಿತ್ತು. ಆದರೂ ಆಕೆ ನಕಾರ ಮನು ಶರ್ಮಾನನ್ನು ರೊಚ್ಚಿಗೆಬ್ಬಿಸಿತು. ಈ ಬಾರಿ ಶರ್ಮಾ ಪಿಸ್ತೂಲಿನಿಂದ ಹಾರಿದ ಗುಂಡು ನೇರ ಜೆಸ್ಸಿಕಾ ದೇಹ ಪ್ರವೇಶಿಸಿತ್ತು.
ಕೂಡಲೇ ಮನು ಶರ್ಮಾ, ಆತನ ಸ್ನೇಹಿತರಾದ ಅಮರ್ ದೀಪ್ ಸಿಂಗ್ ಗಿಲ್, ವಿಕಾಸ್ ಯಾದವ್, ಅಲೋಕ್ ಖನ್ನಾ ಜಾಗ ಖಾಲಿ ಮಾಡಿದರು. ಜೆಸ್ಸಿಕಾ ಸತ್ತಿದ್ದಳು.
ಹರ್ಯಾಣದ ಪ್ರಭಾವಿ ರಾಜಕಾರಣಿಗಳ ಮಕ್ಕಳಾದ ಇವರನ್ನು ಭಾರೀ ಒತ್ತಡದ ಬಳಿಕ ಬಂಧಿಸಿದ್ದೇನೋ ನಿಜ.ಆದರೆ ಜೆಸ್ಸಿಕಾಳ ಕೊಲೆಯ ಸಾಕ್ಷ್ಯ ಹುಡುಕಾಟಕ್ಕೆ ಭಾರೀ ಹೋರಾಟವನ್ನೇ ಮಾಡಬೇಕಾಯಿತು. ಮಾಧ್ಯಮ, ಜನರ ಒತ್ತಡದಿಂದ ಮನು ಶರ್ಮಾ ಬಂಧಿತನಾದ. ಸುದೀರ್ಘ ವಿಚಾರಣೆ ಬಳಿಕ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು.
ಜೆಸ್ಸಿಕಾ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದ್ದರೂ ಮದೋನ್ಮತ್ತ ಶ್ರೀಮಂತರಿಗೆ ಅದು ಪಾಠವಾಗಲಿಲ್ಲ. ತಪ್ಪು ಮಾಡಿಯೂ ಸಿಕ್ಕಿ ಬೀಳದಿದ್ದರಾಯಿತು ಎಂಬ ಹುಂಬತನದಿಂದ ದಿನ ಬಿಟ್ಟು ದಿನ ಎಂಬಂತೆ ಅಬಲರನ್ನು ಶೋಷಿಸುವ ಕಾರ್ಯ ಸಾಗುತ್ತಲೇ ಹೋಯಿತು. ಸಿನಿಮಾ ಟಿಕೆಟಿಗೆ ಕ್ಯೂ ನಿಲ್ಲಲು, ಏರ್ ಪೋರ್ಟಿನಲ್ಲಿ ಶಿಸ್ತಿನಿಂದ ನಿಂತುಕೊಳ್ಳಲು ಸಾಧ್ಯವಾಗುವ ನಮಗೆ ಹೋಟೆಲ್ಲಿಗೆ ಪ್ರವೇಶಿಸಿದರೆ ಎಲ್ಲಿಲ್ಲದ ಅರ್ಜೆಂಟ್. ಸಪ್ಲೈಯರ್ ಬರುವುದು ಅರ್ಧ ನಿಮಿಷ ತಡವಾದರೆ ಸಹಸ್ರನಾಮಾರ್ಚನೆ. ಹೀಗೆ ಮಾಡುವಾಗ ನಮ್ಮಲ್ಲೊಂದು ಸಣ್ಣ ಅಹಂ ಇರುತ್ತದೆ. ಅದೇನೆಂದರೆ ಆತ ಇರುವುದೇ ನಮ್ಮ ಸೇವೆಗಾಗಿ.
ಮದುವೆ ಸಮಾರಂಭಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸುವುದೂ ಹಾಗೆಯೇ. ಕೆಲವೊಂದು ಕಲಾಸಕ್ತಿಯಿಂದ ಇರಬಹುದು. ಆದರೆ ಕೆಲವಂತೂ ದೌಲತ್ತು ಪ್ರದರ್ಶನಕ್ಕೇ ಇರುತ್ತದೆ. ಯಾರೋ ಒಬ್ಬ ಹಾಡುತ್ತಾ ಇರುತ್ತಾನೆ. ಅದಕ್ಕೆ ಕೆಲವರು ಹೆಜ್ಜೆ ಹಾಕುತ್ತಾ ಇರುತ್ತಾರೆ. ನೋಡಿ, ಇಂಥ ದೊಡ್ಡ ನೃತ್ಯಗಾತಿಯರನ್ನು ನಾನು ಕರೆಸಿದ್ದೇನೆ ಎಂದು ಹೇಳುವ ಆಯೋಜಕ. ಕುಣಿಯುವವರನ್ನು ಎಲ್ಲರೂ ಕಲಾಸಕ್ತಿಯಿಂದ ನೋಡುವುದಿಲ್ಲ. ಕೆಲವರ ದೃಷ್ಟಿ ಬೇರೆಯೇ ಇರುತ್ತದೆ.
ಇದಕ್ಕೆ ಮೊನ್ನೆ ನಡೆದ ಘಟನೆಯೇ ಸಾಕ್ಷಿ.
ಕುಲ್ವಿಂದರ್ ಗೆ 24 ವರ್ಷಗಳಷ್ಟೇ. ತಂದೆ, ತಾಯಿ ಜೊತೆ ಅಣ್ಣನ ಮೂವರು ಮಕ್ಕಳ ಜವಾಬ್ದಾರಿಗಳೂ ಆಕೆಗಿತ್ತು. ಮನೆಯವರ ಪ್ರೀತಿಯ ಜಾನು ಈ ಕುಲ್ವಿಂದರ್. ತಂದೆ ಬಲದೇವಸಿಂಗ್ ಕೂಲಿ ಕಾರ್ಮಿಕ. ಅಣ್ಣ ಮೃತಪಟ್ಟಿದ್ದ.ಭತಿಂಡಾದ ಆರ್ಕೆಸ್ಟ್ರಾ ಗ್ರೂಪ್ಗಳಲ್ಲಿ ಕುಲ್ವಿಂದರ್ ನರ್ತಕಿ. ಮದುವೆ ಮನೆಗಳು, ಪಾರ್ಟಿಗಳಲ್ಲಿ ಆರ್ಕೆಸ್ಟ್ರಾ ಇದ್ದಾಗ ಅಲ್ಲಿ ತಂಡದೊಂದಿಗೆ ಹೋಗಿ ನರ್ತಿಸುತ್ತಿದ್ದ ಕುಲ್ವಿಂದರ್ ಗೆ ಅದೇ ಆದಾಯ.ಅಲ್ಲೆಲ್ಲ ಶ್ರೀಮಂತರ ಅಬ್ಬರ ಹೇಗಿರುತ್ತದೆ ಎಂದರೆ ಗನ್ ಗಳನ್ನು ಕೈಯಲ್ಲಿಟ್ಟುಕೊಂಡೇ ಹೋಗುತ್ತಾರೆ. ಉಳಿದವರು ತಾವು ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕು ಎಂಬ ಮನೋಭಾವ ಅವರದ್ದು.ಅಂಥದ್ದಕ್ಕೆಲ್ಲ ಬಡವರು ಒಗ್ಗಿ ಹೋಗಿದ್ದರು. ಹಾಗೆ ಕುಲ್ವಿದರ್ ಕೂಡ ನೃತ್ಯ ಸಮಾರಂಭಗಳಿಗೆ ಹೋಗುತ್ತಿದ್ದಳು.
ಹಾಗೆ ಕಳೆದ ವಾರ ಮೌರ್ ನಗರದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನೃತ್ಯ ಮಾಡ್ತಾ ಇದ್ದ ಕುಲ್ವಿಂದರ್ಗೆ ಪಾನಮತ್ತನೊಬ್ಬ ತನ್ನೊಡನೆ ಡ್ಯಾನ್ಸ್ ಮಾಡುವಂತೆ ಗಾಳಿಯಲ್ಲಿ ಗುಂಡು ಹಾರಿಸುತ್ತಲೇ ಹೇಳಿದ. ಅದನ್ನಾಕೆ ನಿರಾಕರಿಸಿದಳು. ಮತ್ತೊಂದು ಗುಂಡು ಆಕೆ ತಲೆ ಸೀಳಿತ್ತು!.
ಭಟಿಂಡಾದಂಥ ಊರುಗಳಲ್ಲಿ ಶ್ರೀಮಂತರು ಮದುವೆ ಸಮಾರಂಭಗಳಲ್ಲಿ ಬಂದೂಕನ್ನು ಆಟಿಕೆಯಂತೆ ಬಳಸ್ತಾರೆ. ಹೊಟ್ಟೆಪಾಡಿಗಾಗಿ ನರ್ತಿಸುವವರತ್ತ ಗುಂಡು ಹಾರಿಸುತ್ತ ತಮಾಷೆ ನೋಡುತ್ತಾರೆ. ಇಂಥದ್ದೊಂದು ಅಹಂಕಾರಕ್ಕೆ ಬಡಪಾಯಿ ಕುಲ್ವಿಂದರ್ ಬಲಿಯಾಗಿದ್ದಾಳೆ.
1999ರ ಜೆಸ್ಸಿಕಾ ಲಾಲ್ ಹತ್ಯೆಗೂ 2016ರ ಕುಲ್ವಿಂದರ್ ಹತ್ಯೆಗೂ ಸಾಮ್ಯತೆ ಇದೆಯಾ?
ಇದೆ ಎಂದಾದರೆ ಜೆಸ್ಸಿಕಾನನ್ನು ಕೊಂದ ಪಾತಕಿ ಮನಸ್ಸುಗಳು ಇಂದಿಗೂ ಜೀವಂತವಾಗಿವೆ ಎಂದಾಯಿತು. ಜೆಸ್ಸಿಕಾಳನ್ನು ಕೊಂದಾತ ನೇಣುಗಂಬ ಏರಲಿಲ್ಲ ಎಂಬುದು ಹಗಲಿನಷ್ಟೇ ಸತ್ಯ. ಕುಲ್ವಿಂದರ್ ಕೊಂದ ಆರೋಪದಲ್ಲಿ ನಾಲ್ವರು ಅರೆಸ್ಟ್ ಆಗಿದ್ದಾರೆ. ಯಾವುದೋ ಒಂದು ದಿನ ಬೈಲ್ ನಲ್ಲಿ ಹೊರಬರುತ್ತಾರೆ.
ನಮ್ಮಲ್ಲಿ ಕೆಲವರು ಉತ್ತಮ ಜೀವನ ಸಾಗಿಸುತ್ತಾರೆ. ಅತ್ಯುತ್ತಮ ಬಡಾವಣೆಯಲ್ಲಿ ಜೀವಿಸುತ್ತಾರೆ. ಒಳ್ಳೆಯ ಮಾತುಗಳನ್ನೇ ಕೇಳುತ್ತಾರೆ, ಒಳ್ಳೆಯ ವಿಚಾರಗಳನ್ನೇ ಓದುತ್ತಾರೆ. ಹಾಗೆಯೇ ಜಗತ್ತೂ ಒಳ್ಳೆಯದು ಎಂದು ಭಾವಿಸುತ್ತಾರೆ. ಇಲ್ಲೇನೂ ಸಮಸ್ಯೆ ಇಲ್ಲ, ಯಾಕೆ ನೀವು ಜಗತ್ತಿನಲ್ಲಿ ಹಾಗಿದೆ, ಹೀಗಿದೆ ಎನ್ನುತ್ತೀರಿ ಎಂದು ಪ್ರಶ್ನಿಸುತ್ತಾರೆ. ಹೌದು. ನಾವು ಜಗತ್ತು ಒಳ್ಳೆಯದಾಗಿದೆ ಎಂದೇ ಭಾವಿಸಬೇಕು. ಆದರೆ ವಾಸ್ತವವೇ ಬೇರೆ.
ನಾವು ಸತ್ ಚಿಂತನೆ, ಸದಾಚಾರಗಳನ್ನು ಪಾಲಿಸುತ್ತಾ ಬರುವುದು ಬಹಳ ಮುಖ್ಯ. ಜಗತ್ತಿಗೆ ಉತ್ತಮ ಸಂದೇಶ ಸಾರುವುದೂ ಅತ್ಯಗತ್ಯ. ಆದರೆ ಯಾರಿಗೆ ಈ ಸಂದೇಶಗಳು ತಲುಪಬೇಕೋ ಅಲ್ಲಿಗೆ ತಲುಪುವುದಿಲ್ಲ.
ಇಂದಿಗೂ ಯುವಜನರ ಕಣ್ಣಿನ ಆರಾಧ್ಯ ದೇವರು ಯಾವುದೋ ಭೂಗತ ದೊರೆಯೋ ಅಥವಾ ಹತ್ತು ಜನರನ್ನು ಹೊಡೆದುರುಳಿಸುವ ದೃಶ್ಯದಲ್ಲಿ ಕಾಣಿಸುವ ಸಿನಿಮಾ ಹೀರೋ ಆಗಿರುತ್ತಾನೆಯೇ ಹೊರತು, ನೋಡಿ, ನೀವು ಒಳ್ಳೆಯವರಾಗಿ ಬಾಳಿ ಎನ್ನುವವರಲ್ಲ
ಕಳೆದ ಕೆಲ ವರ್ಷಗಳಿಂದ ರಿಯಲ್ ಎಸ್ಟೇಟ್ ವಿಜೃಂಭಣೆಯ ಕಾಲದಲ್ಲಿ ಪಿಯುಸಿ ಮುಗಿಸಿ ಡಿಗ್ರಿ ಓದಲು ಬರುವ ಹಲವರ ಕಣ್ಣಲ್ಲಿ ತಮ್ಮ ಮುಂದೆಯೇ ದಿನಬೆಳಗಾದರೆ ಶ್ರೀಮಂತರಾಗಿ ಶೋಕಿ ಜೀವನ ಸಾಗಿಸುವವರೇ ಆದರ್ಶ ವ್ಯಕ್ತಿಗಳಾಗುತ್ತಿದ್ದರು. ಅವರು ಮಾತನಾಡಿದ್ದೆಲ್ಲವೂ ವೇದವಾಕ್ಯ ಎಂಬಂತಿತ್ತು.ಹೌದು. ಜಗತ್ತು ಸುಂದರವಾಗಿದೆ. ನಾವು ಅದನ್ನು ನೋಡಲು ವಿಫಲರಾಗಿದ್ದೇವೆ. ಏಕೆಂದರೆ ಈ ಸುಂದರ ಜಗತ್ತಿನಲ್ಲಿ ವಿಕೃತಿಗಳೂ ಇವೆ. ಇವನ್ನು ಎತ್ತಿಹಿಡಿಯುವ ಹಾಗೂ ಹೊಸಕಿ ಹಾಕುವ ಕೆಲಸವೂ ನಮ್ಮದೇ. ದುಷ್ಟಬುದ್ಧಿಯವರು ಇಲ್ಲ ಎನ್ನುವಿರಾ? ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿಗಳೇ ಇದಕ್ಕೆ ಸಾಕ್ಷಿ.
ತನ್ನಲ್ಲಿ ಹೇರಳವಾದ ಧನಸಂಪತ್ತಿದೆ ಎಂಬ ಗರ್ವ ಮನುಷ್ಯನನ್ನು ಮೃಗವನ್ನಾಗಿಸುತ್ತದೆ ಎಂಬುದಕ್ಕೆ ಹಲವು ದೃಷ್ಟಾಂತಗಳು ಸಿಗುತ್ತವೆ. ಏನನ್ನಾದರೂ ಕೊಳ್ಳಬಹುದು ಹಾಗೂ ಎಲ್ಲರೂ ತಾನು ಹೇಳಿದ್ದನ್ನೇ ಒಪ್ಪಬೇಕು ಎಂಬ ವಾದ ಮತ್ತಷ್ಟು ಕ್ರೂರಿಯಾಗಿಸುತ್ತದೆ.
ಇಂಥ ಕಾಲಘಟ್ಟದಲ್ಲಿ ಶ್ರೀಮಂತ ದುರಹಂಕಾರಿಗಳಿಗೆ ನೈತಿಕತೆಯ ಅರಿವು ಮೂಡಿಸುವ ಕಾರ್ಯ ಜಗತ್ತು ಸುಂದರವಾಗಿದೆ ಎಂದು ಉಪದೇಶಿಸುವವರಿಂದ ಆಗಬೇಕು.ಆಗ ಮಾತ್ರ ಜೆಸ್ಸಿಕಾಳಂಥವರ ಆತ್ಮಕ್ಕ ಶಾಂತಿ ಸಿಗಬಹುದು.ಇಲ್ಲವಾದರೆ ಮತ್ತೊಂದು ವರದಿಯನ್ನು ನೋಡಬೇಕಷ್ಟೇ.