ಅಂಕಣ ವಾಸ್ತವ

ಜನರ ತಲುಪದ ಸಮಾರಂಭಗಳು

ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಎಂದರೆ ಜನರಿಗೆ ಅಸಡ್ಡೆಯೋ, ಅಥವಾ ಸಭೆ, ಸಮಾರಂಭ, ಉತ್ಸವ ಆಯೋಜನೆಯ ಪೂರ್ವಸಿದ್ಧತೆಯಲ್ಲಿ ಎಡವುತ್ತಿದ್ದಾರೋ?

ಇವತ್ತು ರಜೆ ಅಂದಾಗಲೇ ಯಾಕೆ ಎಂದು ಕೇಳುವ ಜನರು ನಮ್ಮಲ್ಲಿದ್ದಾರೆ. ಇಂಥ ಕಾಲಘಟ್ಟದಲ್ಲಿ ನಮ್ಮ ಪೂರ್ವಜರು, ಮಹಾಪುರುಷರ ಸ್ಮರಣೆ ಮಾಡುವುದು ಅಗತ್ಯವೂ ಹೌದು. ನಮ್ಮ ಸಂಸ್ಕೃತಿ, ಸಂಸ್ಕಾರ, ಆಚರಣೆಗಳನ್ನು ನಾವು ಮರೆಯಲೂ ಬಾರದು. ಇದೇ ಕಾರಣಕ್ಕಾಗಿ ಸರಕಾರ ದೇಶದ ಪ್ರತಿ ಭಾಗದಲ್ಲೂ ಉತ್ಸವಾಚರಣೆಗಳು, ಮಹಾತ್ಮರ ಜಯಂತಿಗಳನ್ನು ಮಾಡುತ್ತದೆ.  ದುರದೃಷ್ಟವಶಾತ್, ಇಂಥ ಜಯಂತಿ, ಉತ್ಸವ, ಆಚರಣೆ ಹಾಗೂ ಯೋಜನೆಗಳು ಬಹುಪಾಲು ಸಕ್ಸಸ್ ಆಗುವುದೇ ಇಲ್ಲ.

ಯಾಕೆ ಹೀಗೆ? ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ಪ್ರಾಮಾಣಿಕವಾಗಿ ಯೋಚಿಸಬೇಕಾದ ಕಾಲ ಬಂದಿದೆ.

ನಮ್ಮ ರಾಜ್ಯದಲ್ಲೇ ನೋಡಿ. ಪ್ರತಿಯೊಂದು ತಾಲೂಕಿನಲ್ಲೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಎಂದಿರುತ್ತದೆ. ಇದರ ಜೊತೆಗೆ ವಿವಿಧ ಜಯಂತಿಗಳು ನಮ್ಮಲ್ಲಿರುತ್ತವೆ. ಇವುಗಳ ಜವಾಬ್ದಾರಿಯನ್ನು ಆಯಾ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿ ಹೊರಬೇಕಾಗುತ್ತದೆ.

ಸಹಜವಾಗಿಯೇ ಸರಕಾರಿ ಕಚೇರಿಗಳ ಕಾರ್ಯಬಾಹುಳ್ಯ ಅಧಿಕ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿದ್ದರಂತೂ ವಿಪರೀತ ಟೆನ್ಶನ್. ಇದರ ಜೊತೆಗೆ ಹಬ್ಬಗಳ ಆಚರಣೆಯೂ ಇವರ ತಲೆಗೇ ಬೀಳುತ್ತದೆ. ಆಗ ಯಾರಾದರೂ ಏನು ಮಾಡುತ್ತಾರೆ? ಸರಕಾರ ಆಚರಣೆ ಮಾಡು ಎಂದಿದೆ, ಹೀಗಾಗಿ ಅಧಿಕಾರಿಗಳಿಗೆ ಬಿಡುವಂತಿಲ್ಲ, ಮಾಡಲೇಬೇಕು. ಅದಕ್ಕಾಗಿಯೇ ದೊಡ್ಡ ತಯಾರಿಗಳೇನೂ ಬೇಕಾಗಿಲ್ಲ, ಒಬ್ಬ ಅತಿಥಿ (ಕನಕ, ಅಂಬೇಡ್ಕರ್, ಬಸವ ಜಯಂತಿ ಇದ್ದರೆ ಆ ವಿಷಯದಲ್ಲಿ ಅನುಭವ ಇದ್ದವರು) ಬೇಕು. ಸ್ವಾಗತ, ಭಾಷಣ, ವಂದನೆ, ಚಹ ಸರಬರಾಜಾದ ಬಳಿಕ ಕಾರ್ಯಕ್ರಮ ಮುಗಿಯುತ್ತದೆ. ಸರಕಾರಕ್ಕೆ ವರದಿ ಹೋಗುತ್ತದೆ. ಪತ್ರಿಕೆಗಳಲ್ಲೂ ಸುದ್ದಿಗಳು ಬರುತ್ತವೆ. ಅಲ್ಲಿಗೆ ಆಚರಣೆ ಮುಕ್ತಾಯ.

ನಮ್ಮಲ್ಲಿ ನಡೆಯುವ ಬಹುಪಾಲು ಜಯಂತಿ, ಉತ್ಸವಗಳು ನಡೆಯುವುದು ಹೀಗೆ. ಕೆಲವೊಂದು ಯಾವಾಗ ಆರಂಭ, ಯಾವಾಗ ಮುಕ್ತಾಯಗೊಂಡಿತು ಎಂದೇ ಗೊತ್ತಾಗದಂತಿರುತ್ತದೆ. ಸಾರ್ವಜನಿಕರು ತಪ್ಪಿಯೂ ಅಲ್ಲಿಗೆ ಹೋಗುವುದಿಲ್ಲ. ಕೆಲವೊಮ್ಮೆ ಉತ್ತಮ ಭಾಷಣಕಾರರು ಇರುತ್ತಾರೆ. ಕೇಳಲು ಜನ ಇರುವುದಿಲ್ಲ. ಮತ್ತೆ ಯಾರಿಗಾಗಿ ಜಯಂತಿ, ಉತ್ಸವ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಸಭೆ, ಉತ್ಸವಗಳಿಗೆ ಅಧಿಕಾರಿಗಳು ಪೂರ್ವತಯಾರಿ ಇಲ್ಲದೆ ತರಾತುರಿಯ ಸಭೆಗಳು ನಡೆಯುವುದು ಸಾಮಾನ್ಯ ವಿಷಯ ಎಂಬಂತಾಗಿದೆ. ಅಲ್ಲಿ ಸರಕಾರದ್ದೋ ಅಥವಾ ಜನರದ್ದೋ ಹಣ ಪೋಲಾಗುತ್ತದೆ ಎಂಬುದು ತಿಳಿದಿರಲಿ.

ಳೆದ ಕೆಲವು ವರ್ಷಗಳಿಂದ ಅಧಿಕಾರಿಗಳಿಗೆ ಸರಕಾರಿ ಪ್ರಾಯೋಜಿತ ಕಾರ್ಯಕ್ರಮಗಳನ್ನು ಆಯೋಜಿಸುವುದೇ ಕೆಲಸ. ಯಾವುದಾದರೂ ಜಯಂತಿ, ಉತ್ಸವ, ಪ್ರಾದೇಶಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಜನಮುಟ್ಟುವಂತೆ ಆಯೋಜಿಸಬೇಕು ಎಂದು ಮೇಲಧಿಕಾರಿಗಳು ಫರ್ಮಾನು ಹೊರಡಿಸಿದ ಕೂಡಲೇ ಉಳಿದ ಕೆಲಸಗಳನ್ನೆಲ್ಲಾ ಹಾಗೆಯೇ ಬಿಟ್ಟು ಇದರಲ್ಲೇ ಮುಳುಗಿ ಹೋಗುತ್ತಾರೆ. ಯಾವುದೋ ಅಂಗಡಿ, ಮುಂಗಟ್ಟುಗಳಿಗೆ ಡೊನೇಶನ್ ಗೆ ಬಿಲ್ ಬರುತ್ತದೆ. ಅವರೂ ಗೊಣಗುತ್ತಲೇ ಹಣ ಪಾವತಿಸುತ್ತಾರೆ. ಯಾವುದಾದರೂ ಫೊಟೋಗ್ರಾಫರ್ ಇದ್ದರೆ ಸಾಕು, ಸ್ಟೇಜಿನಲ್ಲಿ ಕುಳಿತವರು ನಾಲ್ಕು ಮಾತನಾಡುತ್ತಾರೆ. ಕೇಳಲು ಯಾರೂ ಇರುವುದಿಲ್ಲ. ಚಹ, ತಿಂಡಿ ಸರಬರಾಜು ಆದ ಮೇಲೆ ಫೊಟೋ ಪತ್ರಿಕೆಗಳಿಗೆ ರವಾನೆಯಾಗುತ್ತದೆ. ಅಲ್ಲಿಗೆ ಕಾರ್ಯಕ್ರಮ ಸಕ್ಸಸ್!

ಇಂಥ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು ಜನರನ್ನು ತಲುಪದಿದ್ದರೆ ಮಾಡುವುದಾದರೂ ಯಾಕೆ?

ಹೀಗೆ ಪ್ರಶ್ನೆ ಮಾಡುವುದೇ ತಪ್ಪು ಎಂದು ಹೇಳಲು ತಂಡವೇ ಸಿದ್ಧವಾಗುತ್ತದೆ ನಮ್ಮ ಕಣ್ಣೆದುರು ನಡೆಯುವ ವ್ಯವಸ್ಥೆ ಹೀಗಿರುತ್ತದೆ.

ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳಿಗೆ ಎಷ್ಟು ಜನ ಬರುತ್ತಾರೆ, ಊಟಕ್ಕೆ ಎಷ್ಟು ಮಂದಿ ಕ್ಯೂ ನಿಲ್ಲುತ್ತಾರೆ, ಮಳಿಗೆಗಳಿಗೆ ಎಷ್ಟು ಮಂದಿ ಕಾಲಿಡುತ್ತಾರೆ, ಪುಸ್ತಕ ಖರೀದಿ ಎಷ್ಟು ಮಂದಿ ಮಾಡುತ್ತಾರೆ, ಅಂತಿಮವಾಗಿ ಅಲ್ಲಿ ಕೈಗೊಳ್ಳುವ ನಿರ್ಣಯಕ್ಕೆ ಎಷ್ಟು ಬೆಲೆ ಇರುತ್ತದೆ, ಎಷ್ಟು ಅನುಷ್ಠಾನ ಆಗುತ್ತದೆ ಎಂಬುದು ಗಮನಾರ್ಹ ವಿಚಾರ. ಏಕೆಂದರೆ ಇವು ಆಯೋಜಿಸಿದ ಉದ್ದೇಶವನ್ನು ಈಡೇರಿಸುವುದೇ ಇಲ್ಲ.

ಅದೇ ಖಾಸಗಿಯವರನ್ನು ನೋಡಿ.

ಮೂಡುಬಿದರೆ ಡಾ.ಎಂ. ಮೋಹನ ಆಳ್ವ ಆಯೋಜಿಸಿದ ಪ್ರತಿಯೊಂದು ಕಾರ್ಯಕ್ರಮಗಳೂ ಗ್ರಾಂಡ್ ಸಕ್ಸಸ್ ಆಗುತ್ತವೆ. ಪ್ರತಿ ತಾಲೂಕಿನಲ್ಲೂ ಆಳ್ವಾಸ್ ನುಡಿಸಿರಿಯ ಘಟಕಗಳು ನಡೆಸುವ ಕಾರ್ಯಕ್ರಮಗಳು ಹಾಗೂ ಅದಕ್ಕೆ ನಡೆಯುವ ಪೂರ್ವತಯಾರಿಗಳು ಎಲ್ಲರಿಗೂ ಮಾದರಿ. ಡಾ.ಆಳ್ವ ಅವರಿಗೆ ಸಾಧ್ಯ ಎಂದಾದರೆ ಇತರರಿಗೆ ಯಾಕೆ ಸಾಧ್ಯವಿಲ್ಲ?

ನಾನಿಲ್ಲಿ ಸರಕಾರಿ ಕಾರ್ಯಕ್ರಮಗಳೆಲ್ಲವೂ ವೇಸ್ಟ್ ಎಂದು ಹೇಳುತ್ತಿಲ್ಲ. ಆದರೆ ಪ್ರತಿಯೊಂದು ಕಾರ್ಯಕ್ರಮ ಆಯೋಜನೆಗೂ ಮುನ್ನ ಸಾಕಷ್ಟು ಪೂರ್ವತಯಾರಿ ನಡೆಸಿ. ಯಶಸ್ವಿ ಕಾರ್ಯಕ್ರಮ ಸಂಘಟಕರ ಸಲಹೆ ಕೇಳಿ. ಏಕೆಂದರೆ ನೀವು ಚಂದಾ ಎತ್ತಿ ಕಾರ್ಯಕ್ರಮ ಮಾಡುವುದಾದರೂ ಆ ದುಡ್ಡೂ ನಮ್ಮ ನಿಮ್ಮೆಲ್ಲರದ್ದು ಅಲ್ಲವೇ?

ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗಲಷ್ಟೇ ಇದು ಸಾಧ್ಯ.

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!