ಅಂಕಣ

ಜಟಕಾ ಬಂಡಿಯಿಂದ ಅಟೋರಿಕ್ಷಾ ವರೆಗಿನ ಕಥೆ…ವ್ಯಥೆ.!

‘ಅಟೋ…!’ ಎಂದು ಕೂಗಿದರೆ ಸಾಕು. ಕ್ಷಣಮಾತ್ರದಲ್ಲಿ ನಮ್ಮ ಮುಂದೆ ಹಾಜರಾಗುವವರು ಅಟೋ ಚಾಲಕರು. ನಾಲ್ಕು ದಶಕಗಳ ಹಿಂದೆ ರಸ್ತೆಗಿಳಿದಾಗ ಇದ್ದ ಸ್ಥಿತಿ ಈಗ ಇಲ್ಲದೇ ಇದ್ದರೂ ಈ ಅಟೋರಿಕ್ಷ ಇಂದಿಗೂ ಜನಪ್ರಿಯ ಮತ್ತು ಸುಲಭ ಸಂಚಾರ ವಾಹನವಾಗಿದೆ. ಅಟೋ ಚಾಲಕ ಮತ್ತು ಅಟೋ ರಿಕ್ಷಾ ಇವೆರಡೂ ಬಡವರ ಬಂಧು ಎಂದೇ ನಮ್ಮ ಮನದಲ್ಲಿ ಬಿಂಬಿತವಾಗಿದೆ. ಬಹುಶಃ ಬೇರಾವುದೇ ವಾಹನಗಳಿಗಿಂತ ಭಿನ್ನವಾಗಿ ಸಾಮಾನ್ಯ ಜನರ ಜೀವನೋಪಾಯದ ಮತ್ತು ಜೀವನದ ಅವಿಭಾಜ್ಯ ಅಂಗವಾಗಿರುವ, ಅಟೋ ಚಾಲಕರ ಮತ್ತು ಅವರು ಅನುಭವಿಸುವ ದಿನನಿತ್ಯದ ಬವಣೆಗಳನ್ನು, ಚಿತ್ರಾವಳಿಗಳನ್ನು ಅಕ್ಷರಗಳಲ್ಲಿ ಪೋಣಿಸುವುದು ಕಷ್ಟವೇ ಆದರೂ ಈ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ದುಡಿದು, ವಾಹನಗಳು ಉಗುಳುವ ವಿಷಗಾಳಿಯ ಸೇವನೆಯಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿರುವವರನ್ನು ತಪ್ಪಿಸಿ, ಅವರನ್ನು ಎಚ್ಚರಿಸುವ ಒಂದು ಸಣ್ಣ ಪ್ರಯತ್ನ ನಮ್ಮಿಂದ ಆಗಬೇಕಾಗಿದೆ.

1970ರ ದಶಕದ ಚಿತ್ರಣವನ್ನೊಮ್ಮೆ ಕಲ್ಪಿಸಿಕೊಂಡರೆ ನಮ್ಮ ದೇಶದ ಗ್ರಾಮೀಣ ಭಾಗದಲ್ಲಿ ಕಾಣ ಸಿಗುತ್ತಿದ್ದುದು ಮಣ್ಣಿನ ರಸ್ತೆಗಳು ಮತ್ತು ಜಟಕಾ ಬಂಡಿಗಳು. ಸಾಮಾನ್ಯ ಜನರು ತಮ್ಮ ಸುಖದುಃಖಗಳಲ್ಲಿಯೂ ಜಟಕಾ ಬಂಡಿಯನ್ನು ಅವಲಂಬಿಸಿದ್ದರೆ ಎಲ್ಲೋ ಅಲ್ಲೊಂದು ಇಲ್ಲೊಂದು ಕಡೆ ಊರಿನ ಶ್ರೀಮಂತರು ವಾಹನಗಳಲ್ಲಿ ಅಡ್ಡಾಡುತ್ತಿದ್ದರು. 3 ಚಕ್ರದ ಅಟೋ ರಿಕ್ಷಾಗಳು ರಸ್ತೆಗೆ ಇಳಿಯಲಾರಂಬಿಸಿದ ನಂತರದ ಎರಡು ದಶಕಗಳಲ್ಲಿ ಜಟಕಾ ಬಂಡಿಯನ್ನೇ ಮೂಲೆಗುಂಪು ಮಾಡುವಷ್ಟರ ಮಟ್ಟಿಗೆ ಈ ಅಟೋ ರಿಕ್ಷಾ ಪ್ರವರ್ಧಮಾನಕ್ಕೆ ಬೆಳೆದು ನಿಂತವು. ಸಾಮಾನ್ಯ ಜನರ ಸಂಚಾರಕ್ಕಿದ್ದ ಪ್ರಮುಖ ಸಾಧನವೇ ಜಟಕಾ ಬಂಡಿಯನ್ನು ಮಾನವನ ಬದುಕಿನೊಂದಿಗೆ ಹೋಲಿಸಿ ಡಿವಿಜಿಯವರು ಕವನವನ್ನು ರಚಿಸಿದ್ದರು. ಅಂತಹ ಜಟಕಾ ಬಂಡಿ ಕ್ರಮೇಣ ಜನಮಾನಸದಲ್ಲಿ ಕಲ್ಪನೆಗೂ ಸಿಗದ ರೀತಿಯಲ್ಲಿ ಮಾಯವಾಗಿದ್ದರೆ, ಆ ಜಾಗವನ್ನು ಇಂದು ಈ ಅಟೋರಿಕ್ಷಾಗಳು ತುಂಬಿವೆ.

ಹಿಂದೆ ಜನರು ತಮ್ಮ ಸಾಮಾನು ಸರಂಜಾಮುಗಳನ್ನು ಸಾಗಿಸಲು, ಮಹತ್ತರ ಪಾತ್ರ ವಹಿಸಿದ ಲಾಂಬಿ ಮಾಡೆಲ್‍ನ ರಿಕ್ಷಾಗಳು ಡಾಮರಿನ ಮುಖ ಕಾಣದ ರಸ್ತೆಗಳಲ್ಲಿ ಸಾಗುತ್ತಿದ್ದರೆ ಅದೇ ಒಂದು ಚೆಂದ. ಆ ಕಾಲದಲ್ಲಿ ಕನಿಷ್ಟ ಬಾಡಿಗೆ ಕೊಡುವುದು ಕಷ್ಟವಾದರೂ ಸಾಮಾನ್ಯ ಜನರ ಕೈಗೆಟಕುವ ದರದಲ್ಲಿ ಇದ್ದ ಬಡವರ ಆಪತ್ಬಾಂಧವನೆಂದೇ ಕರೆಯಿಸಿಕೊಂಡ ಏಕಮಾತ್ರ ವಾಹನ ಇದಾಗಿತ್ತು. ಅಂಬುಲೆನ್ಸ್ ಸೌಲಭ್ಯವಿರದ ಕಾಲದಲ್ಲಿ ಪರಿಸ್ಥಿತಿ ಹೇಗಿತ್ತೆಂದರೆ ಅನಾರೋಗ್ಯಕ್ಕೆ ತುತ್ತಾದ ವ್ಯಕ್ತಿ, ತುಂಬು ಬಸುರಿ ಅಥವಾ ಬಾಣಂತಿ, ಸಣ್ಣ ಮಕ್ಕಳು ಇರುವ ಮನೆಯ ಬಳಿಯಲ್ಲಿ ಅಟೋರಿಕ್ಷಾದ ಸೇವೆ ಇದ್ದರೆ, ಏನೇ ಹೆಚ್ಚು ಕಮ್ಮಿಯಾದರೂ ಚಿಕಿತ್ಸೆಗೆ ಹೋಗಲು ವಾಹನವಿದೆ ಎಂಬ ಧೈರ್ಯ ಮನೆಯವರಿಗೆ ನೆಮ್ಮದಿಯ ನಿದ್ದೆ ಕೊಡುತ್ತಿತ್ತು. ಧಾರಕಾರವಾಗಿ ಸುರಿಯುವ ಮಳೆಯಿರಲಿ, ಸುಡು ಬಿಸಿಲೇ ಇರಲಿ ಅಥವಾ ಮೈಕೊರೆವ ಚಳಿಯೇ ಇರಲಿ, ಜನರ ಸೇವೆಯೇ ಪ್ರಮುಖ ಧ್ಯೇಯವಾಗಿಟ್ಟುಕೊಂಡು, ಹಗಲು ರಾತ್ರಿ ಎನ್ನದೆ, ಸಂತಸ- ಸಂಭ್ರಮ, ಹುಟ್ಟು-ಸಾವು, ಅನಾರೋಗ್ಯ-ಆಪತ್ತು, ಹೀಗೆ ಎಲ್ಲಾ ಸಂದರ್ಭದಲ್ಲಿಯೂ ನಮ್ಮೊಟ್ಟಿಗೆ ಈ ಅಟೋರಿಕ್ಷಾದ ಪಯಣ ಸಾಗುತ್ತಲೇ ಇದೆ. ನಗರೀಕರಣವಾದಂತೆ ಅನೇಕ ರೀತಿಯ ವಾಹನಗಳು ಸಂಚಾರ ಸೇವೆಗೆ ಲಭ್ಯವಿದ್ದರೂ ಯಾಕೋ ಈ ಅಟೋರಿಕ್ಷಾ ಮಾತ್ರ ಜನರ ಬದುಕಿನ ಒಂದು ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಸಾಮಾನ್ಯ ಮತ್ತು ಮಧ್ಯಮವರ್ಗದವರ ಪೇವರೀಟ್ ಆಗಿರುವ ಈ ಅಟೋ ರಿಕ್ಷಾ ಯಾವತ್ತೂ ಪ್ರತಿಷ್ಠೆಯ ಸಂಕೇತವಾಗಿರಲಿಲ್ಲ. ಪಟ್ಟಣದಿಂದ ಬರುವವರಿಗೋ, ಪ್ರವಾಸಿಗರಿಗೋ ಅಥವಾ ನೆಂಟರಿಷ್ಟರನ್ನು ಹುಡುಕಿಕೊಂಡು ಬರುವ ಬಂಧು ಜನರಿಗೆ ವಿಳಾಸ ಹುಡುಕಲು ಪ್ರಮುಖವಾಗಿ ನೆರವಾಗುವವರು ಅಟೋ ಚಾಲಕರು.

ಇತ್ತೀಚಿನ ಹೊಸ ಮಾಡೆಲ್‍ಗಳು ಬಂದ ನಂತರ ಚಾಲಕರಿಗೆ ಸ್ವಲ್ಪ ದೈಹಿಕ ಶ್ರಮ ಕಡಿಮೆ ಎಂದೇ ಹೇಳಬಹುದು. ಆದರೆ ಲಾಂಬಿ ರಿಕ್ಷಾದಲ್ಲಿ ಮದ್ಯಾಹ್ನದ ಸುಡು ಬಿಸಿಲಲ್ಲಿ ರಿಕ್ಷಾ ಚಾಲು ಮಾಡುವುದೇ ತ್ರಾಸದಾಯಕವಾಗಿತ್ತು. ಕಾಲಿನಲ್ಲಿ ಕಿಕ್ ಹೊಡೆದು ಹೊಡೆದು ಚಾಲಕನ ಮೈಯೆಲ್ಲಾ ಬೆವರಿಳಿದರೆ, ಸಂಜೆ ಹೊತ್ತು ಕಾಲು ನೋವಿನಿಂದ ನೋವುಣ್ಣುವುದು ನಿತ್ಯದ ಬವಣೆಯಾಗಿತ್ತು. ಕೆಲವೊಮ್ಮೆ ಪ್ರಯಾಣಿಕರು ವಾಹನದಲ್ಲಿ ಕುಳಿತ ನಂತರ ಇದ್ದಕ್ಕಿದ್ದಂತೆ ವಾಹನ ಬಂದ್ ಬಿದ್ದರಂತು ಚಾಲಕನ ಪಾಡು ದೇವರಿಗೇ ಪ್ರೀತಿ. ಪ್ರಾಯಾಣಿಕರೆದುರು ವಾಹನ ಚಾಲು ಆಗದೇ, ಕಡೆಗೆ ಅವರಿಂದಲೇ ಸ್ವಲ ದೂರ ವಾಹನ ದೂಡಿಸಿಕೊಂಡು ಹೂಗುವುದು ಸಾಮಾನ್ಯವಾಗಿತ್ತು. ಕೆಲವು ಪ್ರಯಾಣಿಕರು ಎದುರುಗಡೇ ಏನು ಹೇಳದಿದ್ದರೂ ಕೆಲ ಪ್ರಯಾಣಿಕರು ಮನಸ್ಸಿನೊಳಗೆ ಕೋಪದಿಂದ ಚಾಲಕನತ್ತ ದುರುಗುಟ್ಟಿ ಹಿಡಿಶಾಪ ಹಾಕುತ್ತಿದ್ದರೆ, ಚಾಲಕನಾದರೂ ‘ಬೆಳಿಗ್ಗೆ ಬೆಳಿಗ್ಗೆ ಯಾರು ಮುಖ ನೋಡಿದೆಯಪ್ಪಾ ?’ ಎಂದು ಮನಸ್ಸಿನಲ್ಲಿ ತನ್ನ ಅದೃಷ್ಟವನ್ನು ಹಳಿಯುತ್ತಿದ್ದನು. ಮಳೆಗಾಲದಲ್ಲಿ ಈ ಚಾಲಕರ ಪಾಡು ಅತ್ಯಂತ ಶೋಚನೀಯ. ಮಳೆ ಬಂತೆಂದರೆ ಅವತ್ತಿನ ಕಲೆಕ್ಷನ್ ಡಲ್ ಎಂಬ ಚಿಂತೆಯಾದರೆ ಸುರಿವ ಮಳೆಯಿಂದಾಗಿ ವಾಹನ ಎಲ್ಲಿ ಕೆಟ್ಟು ಹೋಗುವುದೋ ಎಂಬ ಚಿಂತೆ ಇನ್ನೊಂದೆಡೆ. ಕೆಲವೊಂದು ಸಾರಿ ಮಧ್ಯಾಹ್ನವಾದರೂ ಬೋಣಿಯಾಗದೇ ನಾಳಿನ ಕಥೆ ಎಂತದು ಎಂಬ ಯೋಚನೆ. ಬೆಳಿಗ್ಗೆ ಬೆಳಿಗ್ಗೆ ದೂರದೂರಿಗೆ ದೊಡ್ಡ ಬಾಡಿಗೆ ದೊರೆತರೆ, ಎಲ್ಲಾ ನೋವನ್ನು ಮರೆತು ಇಮ್ಮಡಿ ಉತ್ಸಾಹದಿಂದ ಕಳೆದ ದಿನಗಳೂ ಇವೆ. ಊರಿನ ಯಾವುದೇ ರಸ್ತೆಗಳಿರಲಿ ಯಾವುದೇ ಮೂಲೆಗಾದರೂ ಸರಿ, ನಾವು ಹೇಳಿದ ಜಾಗಕ್ಕೆ ನಮ್ಮನ್ನು ಕರೆದೊಯ್ಯುವ ಅಟೋ ಚಾಲಕರು ಒಳ್ಳೆಯ ಬಾಡಿಗೆಗಾಗಿ ಮದುವೆ ಸೀಸನ್, ಜಾತ್ರೆ ಸೀಸನ್ ಅಂತ ಕಾಯ ಬೇಕಿತ್ತು. ಸೀಸನ್‍ನಲ್ಲಿ ಒಳ್ಳೆಯ ಬಾಡಿಗೆ ದೊರೆತರೆ ವರ್ಷಕ್ಕೊಮ್ಮೆ ವಾಹನಕ್ಕೆ ಬಣ್ಣ ರಿಪೇರಿ ಭಾಗ್ಯ ಇಲ್ಲದಿದ್ದರೆ ಇಲ್ಲ ಎಂಬ ಪರಿಸ್ಥಿತಿ.

ಹಿಂದೆಲ್ಲಾ ರಿಕ್ಷಾಗಳು ಸ್ಟ್ಯಾಂಡ್‍ನಲ್ಲಿ ಮಾತ್ರ ಬಾಡಿಗೆ ಮಾಡುತ್ತಿದ್ದರೆ, ಈಗ ಬದಲಾದ ಕಾಲದಲ್ಲಿ ಮೊಬೈಲ್ ಮೂಲಕ ಬಾಡಿಗೆ ನಡೆಯುತ್ತಿದೆ. ಆಗ ಊರಿನಲ್ಲಿ 2 ರಿಂದ 3 ಅಟೋಗಳಿದ್ದರೆ ಈಗ ಬೀದಿಗೊಂದು ಎಂಬಂಥಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಚಾಲಕರು ಖಾಯಂ ಬಾಡಿಗೆಗಾಗಿ ಶಾಲಾ ವಿದ್ಯಾರ್ಥಿಗಳ ಟ್ರಿಪ್ ಮಾಡುವ ಮೂಲಕ ಕನಿಷ್ಟ ದುಡಿಮೆಗೆ ದಾರಿ ಕಂಡುಕೊಂಡಿದ್ದಾರೆ. ಬಾಡಿಗೆ ವಾಹನಗಳ ಸಂಖ್ಯೆ ಜಾಸ್ತಿ ಆದಂತೆ, ಆದಾಯವೂ ಗಣನೀಯವಾಗಿ ಕಡಿಮೆ ಆದ ಪರಿಣಾಮವೋ ಕೆಲವೊಂದೆಡೆ, ದರ ವಸೂಲಿಯಲ್ಲಿ ಮೋಸ, ವಂಚನೆಯ ಪ್ರಕರಣಗಳು ಕಂಡು ಬಂದದ್ದುಂಟು. ಆದರೆ ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ದುಡಿಯುತ್ತಿರುವ ಅದೆಷ್ಟೋ ಚಾಲಕರು ನಮ್ಮ ನಡುವೆ ಅಲ್ಲೊಮ್ಮೆ ಇಲ್ಲೊಮ್ಮೆ ಸುದ್ಧಿಯಾಗುತ್ತಾ ಇರುತ್ತಾರೆ. ಪ್ರಾಮಾಣಿಕವಾಗಿ ದುಡಿಯುತ್ತಾ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಆರೋಗ್ಯ ಅಲ್ಲದೇ ಮಕ್ಕಳ ಮದುವೆಯನ್ನು ನಿಭಾಯಿಸಿದವರು ಬಹಳಷ್ಟು ಮಂದಿ ಇದ್ದಾರೆ. ಅಟೋ ಚಾಲಕನ ಮಗಳೊಬ್ಬಳು ಲೆಕ್ಕಪರಿಶೋಧಕಳಂತಹ ಉನ್ನತ ವ್ಯಾಸಾಂಗ ಪಡೆದ ಉದಾಹರಣೆ ಇದೆ. ಅದೆಷ್ಟೋ ಕುಟುಂಬಗಳ ಪಾಲಿಗೆ ಈ ಅಟೋರಿಕ್ಷಾ ಭಾಗ್ಯಲಕ್ಷ್ಮೀ. ಈ ವೃತ್ತಿಯಲ್ಲಿ ಜೀವನವನ್ನು ಗೆದ್ದವರು ತಮ್ಮ ಅಭಿಮಾನವನ್ನು, ಕೃತಜ್ಞತೆಯನ್ನು ವಿವಿಧ ಬರಹಗಳನ್ನು ತಮ್ಮ ವಾಹನದಲ್ಲಿ ಬರೆಯಿಸುವ ಮೂಲಕ ತೋರಿದರೆ, ಇನ್ನು ಕೆಲವರು ತಮ್ಮ ಇಷ್ಟ ದೇವರ ಹೆಸರನ್ನು, ಇನ್ನ ಕೆಲವರು ಜೀವನದ ಆದರ್ಶಗಳನ್ನು ಬರೆಸುವ ಮೂಲಕ ವ್ಯಕ್ತಪಡಿಸುತ್ತಾರೆ.

ಈ ಅಟೋರಿಕ್ಷಾ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರೆ ತಪ್ಪಾಗಲಾರದು. ನಮ್ಮ ಊರಿನ ಜಾತ್ರೆ, ಅಥವಾ ಯಾವುದೇ ಧಾರ್ಮಿಕ ಕಾರ್ಯಕ್ರಮವಿರಲಿ, ಹೊರೆಕಾಣಿಕೆಯಂತಹ ಸಂದರ್ಭದಲ್ಲಿ ಈ ಅಟೋರಿಕ್ಷಾಗಳೂ ಮುಂಚೂಣಿಯಲ್ಲಿ ಇದ್ದರೇನೇ ಆ ಮೆರವಣಿಗೆಗೆ ಒಂದು ವೈಭವ. ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಕರೆತರಲು ರಾಜಕೀಯ ಪಕ್ಷಗಳಿಗೆ ಮತಗಟ್ಟೆಗಳಲ್ಲಿ ಈ ವಾಹನದ ಸೇವೆ ಅಗತ್ಯ ಬೇಕು. ಯಾವುದೇ ಅವಘಡ ಸಂಭವಿಸಿದರೂ ಅಂಬುಲೆನ್ಸ್’ಗಿಂತ ಮೊದಲು ನೆರವಿಗೆ ಬರುವುದು ಅಟೋ ಚಾಲಕರು. ಸಮಯಕ್ಕೆ ಸರಿಯಾಗಿ ಪರೀಕ್ಷೆ, ಸಂದರ್ಶನ, ತರಭೇತಿಗಳಿಗೆ ಹಾಜರಾಗಬೇಕಾದಾರೆ ಮೊದಲು ನಾವು ಕೈ ಬೀಸುವುದು ಇದೇ ಅಟೋ ರಿಕ್ಷಾವನ್ನು. ಸಾರ್ವಜನಿಕರ ಮಾಹಿತಿಗಾಗಿ ಧ್ವನಿವರ್ದಕಗಳ ಮುಖಾಂತರ ಸಂದೇಶ ಕೊಡುವುದಿದ್ದರೆ ಇದಕ್ಕಿಂತ ಒಳ್ಳೆಯ ವಾಹನ ಮತ್ತೊಂದಿಲ್ಲ. ಪಲ್ಸ್ ಪೋಲಿಯೋದಂತಹ ಸರಕಾರದ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ಜನರಿಗೆ ಮುಟ್ಟಿ ಯಶಸ್ವಿಯಾಗಲು ಈ ಅಟೋರಿಕ್ಷಾಗಳ ಕೊಡುಗೆ ಮಹತ್ತರವಾದದ್ದೇ ಎಂಬುದು ನನ್ನ ಅನಿಸಿಕೆ. ಇನ್ನು ಮನರಂಜನೆಗಾಗಿರುವಂತಹ ಸರ್ಕಸ್, ಸಿನೆಮಾ ಇತ್ಯಾದಿಗಳ ಯಶಸ್ಸಿಗೂ ಅಟೋರಿಕ್ಷಾ ಬೇಕೇ ಬೇಕು.

‘ಜೇಬು ಖಾಲಿಯಿದ್ದರೂ ಪರವಾಗಿಲ್ಲ ಹೃದಯಶ್ರೀಮಂತಿಕೆಗೆ ಬರವಿಲ್ಲ’ ಎಂಬಂತೆ ಹಲವಾರು ಉಚಿತ ಸೇವೆಗಳ ಮೂಲಕ ಈ ವೃತ್ತಿಯನ್ನು ನೆಚ್ಚಿಕೊಂಡು ತಮ್ಮ ಸಮಾರ್ಥ್ಯಕ್ಕೆ ತಕ್ಕಂತೆ ಸಮಾಜ ಸೇವೆ ಮಾಡುವ ಆದರ್ಶ ಅಟೋ ಚಾಲಕರು ಇದ್ದಾರೆ. ಉದಾಹರಣೆಗೆ ಗರ್ಭಿಣಿ ಸ್ತ್ರೀಯರನ್ನು ಆಸ್ಪತ್ರೆಗೆ ಉಚಿತವಾಗಿ ಸಾಗಿಸುವುದು, ವೃದ್ಧರನ್ನು, ಅಂಗವಿಕಲರನ್ನು ಅಥವಾ ಶಾಲಾ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಕರೆದೊಯ್ಯುವುದು ಇತ್ಯಾದಿ. ರಸ್ತೆ ಅಪಘಾತದಂತಹ ಸಂದರ್ಭದಲ್ಲಿ ಆಸ್ಪತ್ರೆಗೆ ಸಾಗಲು ಮೊದಲು ನೆರವಾಗುವುವವರು ಇವರೇ. ಪ್ರಯಾಣಿಕರು ತಮ್ಮ ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ಮರೆತು ವಾಹನದಲ್ಲಿಯೇ ಬಿಟ್ಟು ಹೋದಾಗ ಅವರನ್ನು ಹುಡುಕಿಕೊಂಡು ಅವರಿಗೊಪ್ಪಿಸಿದ ಕೃತಾರ್ಥತೆ ಮೆರೆದ ಅದೆಷ್ಟೋ ಪ್ರಾಮಾಣಿಕ ಅಟೋ ಚಾಲಕರು ಕೂಡಾ ಇದ್ದಾರೆ. ಸಮಯ ಕಳೆದಂತೆ ಈ ವಾಹನದ ಸ್ವರೂಪದಲ್ಲಿ ಬದಲಾವಣೆಯಾದರೂ ಚಾಲಕರ ಆದರ್ಶ ಬದಲಾಗಲಿಲ್ಲ. (ಕೆಲವೊಂದು ಅಪವಾದ ಹೊರತುಪಡಿಸಿ).

ಇತ್ತೀಚೆಗೆ ಅಟೋ ಚಾಲನೆಯ ವೃತ್ತಿಯಲ್ಲಿ ಜೀವಿತವನ್ನು ಕಂಡುಕೊಂಡು, ತನ್ನ ಸಂಸಾರವನ್ನು ಪೊರೆದು ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಪ್ರಾಮಾಣಿಕತೆಯಿಂದ, ವೃತ್ತಿನಿಷ್ಠೆ ಮೆರೆದ ನಮ್ಮ ಅತ್ಮೀಯರೊಬ್ಬರು ಹಠಾತ್ ಅನಾರೋಗ್ಯಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದರು. ವೈದ್ಯರಲ್ಲಿ ವಿಚಾರಿಸಿದರೆ ವಾಯುಮಾಲಿನ್ಯದ ಪರಿಣಾಮ ನೇರವಾಗಿ ಅವರ ಆರೋಗ್ಯದ ಮೇಲಾಗಿದೆ ಎಂಬುದು ತಿಳಿಯಿತು. ಈ ವೃತ್ತಿಯಲ್ಲಿರುವವರು ದಿನದ ಹೆಚ್ಚಿನ ಹೊತ್ತು ವಾಹನ ಚಾಲನೆಯಲ್ಲಿ ಕಳೆಯುವುದು ಮತ್ತು ಮಲಿನಗೊಂಡ ಗಾಳಿಯನ್ನೇ ಸೇವಿಸಬೇಕಾಗುವುದರಿಂದ ಅನಾರೋಗ್ಯಕ್ಕೆ ತುತ್ತಾಗುವುದು ಗಂಭೀರವಾದ ಸಮಸ್ಯೆಯೇ ಆಗಿದೆ. ಎಷ್ಟೇ ದೊಡ್ಡ ಶ್ರೀಮಂತನಿರಲಿ ಅಥವಾ ಕಡು ಬಡವನಿರಲಿ ಕೈ ತಟ್ಟಿ ಕೂಗಿದರೂ, ನಗುಮೊಗದಿಂದ ಓಡೋಡಿ ಬರವವರು ನೀವು. ವಾತಾವರಣದಲ್ಲಿ ದಿನ ಕಳೆದಂತೆ ವಾಹನಗಳು ಹೊರಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣ ಜಾಸ್ತಿ ಆಗುತ್ತಿರುವುದು ಆತಂಕದ ವಿಷಯವಾದರೆ ಈ ವಾಹನಗಳ ದಟ್ಟ ಹೊಗೆಯ ನಡುವೆ ಜೀವನ ಸಾಗಿಸುವ ಅಟೋ ಚಾಲಕರ ಆರೋಗ್ಯ ಕಾಪಾಡುವಲ್ಲಿ ಸಮಾಜದ ಜವಾಬ್ಧಾರಿ ಕೂಡ ಇದೆ. ಹೀಗಾಗಿ ಅಟೋ ಚಾಲಕರು ಆರೋಗ್ಯದತ್ತ ತುರ್ತಾಗಿ ಗಮನ ಕೊಡಬೇಕು. ದಿನದಲ್ಲಿ ಕೆಲಹೊತ್ತಾದರೂ ಪಾರ್ಕ್, ಸಮುದ್ರತೀರ ಅಥವಾ ಸ್ವಚ್ಛವಾದ ವಾತಾವರಣದಲ್ಲಿ ಅಡ್ಡಾಡುವ ಮೂಲಕ, ಮತ್ತು ಆರೋಗ್ಯವಂತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಜಾಗ್ರತೆ ವಹಿಸಬೇಕು. ಸರಕಾರವೂ ಕೂಡ ಈ ಅಟೋಚಾಲನ ವೃತ್ತಿಯಲ್ಲಿ ನಿರತರಾಗಿರುವವರ ಆರೋಗ್ಯ ಕಾಪಾಡುಕೊಳ್ಳುವಲ್ಲಿ ಅವರ ಜೀವನ ಮಟ್ಟ ಹೆಚ್ಚಿಸುವಲ್ಲಿ ಕಾರ್ಯಕ್ರಮ ರೂಪಿಸಬೇಕು. ಅಟೋ ವೃತ್ತಿಯಲ್ಲಿ ಸಂಘಟನೆಗೆ ಕೊರತೆ ಇಲ್ಲದಿದ್ದರೂ, ಆರೋಗ್ಯದ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸುವಲ್ಲಿ ಕಾರ್ಯಕ್ರಮ ನಿರೂಪಿಸಬೇಕಾಗಿದೆ.ಸುಃಖವಿರಲಿ ಕಷ್ಟವಿರಲಿ ಎಂಥಹಾ ಸಂದರ್ಭದಲ್ಲಿಯೂ ಜನ ಸಾಮಾನ್ಯರ ಕೈಗೆ ಸುಲಭವಾಗಿ ಸಿಗುವವರು ನೀವು. ನಿಮ್ಮ ಆರೊಗ್ಯದತ್ತ ಸ್ವಲ್ಪವಾದರೂ ಗಮನ ಕೊಡಬೇಕು ಮತ್ತು ಸಾಮಾನ್ಯ ಜನರಿಗೆ ನಿಮ್ಮ ಆದರ್ಶ ಸೇವೆಗಳು ಸಮಾಜಕ್ಕೆ ಇನ್ನೂ ಹೆಚ್ಚು ಸಿಗುವಂತಾಗಬೇಕು ಎಂಬುದು ಎಲ್ಲರ ಆಶಯ.

ಹರೀಶ ರಾವ್ ಅಲೆವೂರು

aharishrao@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!