ಅಂಕಣ

ಆರೋಗ್ಯದ ರೂವಾರಿ ಇ-ಬೈಕ್ ಸವಾರಿ

ಸೈಕಲ್ ಸವಾರಿ ನಮ್ಮಲ್ಲಿ ಬಹುತೇಕರ ಬಾಲ್ಯ ಹಾಗು ನವತಾರುಣ್ಯದ ನೆಚ್ಚಿನ ನೆನಪುಗಳಲ್ಲಿ ಬಹುಮುಖ್ಯವಾದದ್ದು. ಅದನ್ನು ಕಲಿಯುವಾಗ ಬಿದ್ದಾದ ಗಾಯ ಮಾಸಿದ್ದರೂ, ಮನೆಯಲ್ಲಿ ಹಠಮಾಡಿ ಮೊದಲ ಸೈಕಲ್ನ ಪಡೆದ ಖುಷಿ ಮರೆತಿಲ್ಲ. ಸ್ಕೂಲು, ಟ್ಯೂಶನ್ನು , ಗೆಳೆಯರ ಮನೆ ಎಲ್ಲೆಡೆಯೂ ನಮ್ಮದು ಸೈಕಲ್ ಸವಾರಿಯೇ ಆಗಿತ್ತು. ಆದರೆ ಬೆಂಗಳೂರಿನಂಥ ನಗರದ ರಸ್ತೆಗಳಲ್ಲಿ ಇತ್ತೀಚೆಗೆ ಸೈಕಲ್‍ಗಳನ್ನು ಕಾಣುವುದೇ ಅಪರೂಪವಾಗಿದೆ, ಇದಕ್ಕೆ ಎಲ್ಲೆಮೀರಿ ಹಬ್ಬುತ್ತಿರುವ ನಗರದಲ್ಲಿ ಮನೆ ಹಾಗೂ ಕಛೇರಿಗಳ ನಡುವಿನ ಅಂತರ ಒಂದು ಕಾರಣವಾದರೆ, ಬೆಂಗಳೂರಿನ ಕುಖ್ಯಾತ ಟ್ರಾಫಿಕ್, ವಾಯುಮಾಲಿನ್ಯ, ಸಮಯದ ಅಭಾವ, ಸೋಮಾರಿತನ ಹೀಗೆ ಇನ್ನಷ್ಟು ಮತ್ತಷ್ಟು ಕಾರಣಗಳಿವೆ.

ಡೆಕಾತ್ಲಾನ್ , ಬಮ್ಸ್ ಆನ್ ಸ್ಯಾಡಲ್, ಕ್ಯಾಡೆನ್ಸ್ ಮುಂತಾದ ಸೈಕಲ್ ಮಳಿಗೆಗಳು ನವೀನ ವಿನ್ಯಾಸದ , ಉತ್ತಮ ಗುಣಮಟ್ಟದ, ಸ್ವದೇಶಿ ಹಾಗೂ ಆಮದುಮಾಡಿದ ಸೈಕಲ್ಗಳನ್ನು ನಮಗೆ ಪರಿಚಯಿಸಿವೆ. ಇವು ತುಸು ದುಬಾರಿಯಾದರೂ, ಮಾರಾಟದ ಅಂಕಿ ಚೆನ್ನಾಗಿಯೇ ಇದೆ. ಹಾಗೂ ಈ ಅಂಕಿಯು ಹೊಸ ವರ್ಷದ ಆಸುಪಾಸಿಗೆ ಏರುವುದೂ ಹೌದು. ಆದರೆ ದಿನಗಳೆದಂತೆ ಹುಮ್ಮಸ್ಸು ಕರಗಿ ಸೈಕಲ್ ಮೂಲೆ ಸೇರುತ್ತದೆ, ನಾವು ಹೊಸ ವರ್ಷಕ್ಕೆ ಹಾಕಿಕೊಂಡ ಫಿಟ್ನೆಸ್ ಯೋಜನೆಗಳು ಮರೆತೇಹೋಗುತ್ತವೆ. ವ್ಯಾಯಾಮವನ್ನು ಊಟ, ನಿದ್ದೆಯಂತೆಯೇ ದಿನನಿತ್ಯದ ಒಂದು ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಾಗ ಮಾತ್ರ ನಮಗೆ ಉತ್ತಮ ಆರೋಗ್ಯ ಖಚಿತ.

ಇ-ಬೈಕ್ ಇಂದಿನ ನಗರವಾಸಿಗಳಿಗೆ ಫಿಟ್ನೆಸ್ ದೃಷ್ಟಿಯಿಂದ ವರದಾನವಾಗಿದೆ. ಸಾಮಾನ್ಯ ಸೈಕಲ್ಗೆ ಒಂದು ಮೋಟಾರ್ ಜೋಡಿಸಿ ಚಲಾಯಿಸುವುದನ್ನು ನೀವು ಕೇಳಿರಬಹುದು, ಯೂಟ್ಯೂಬ್ನಲ್ಲೂ ಇಂಥ ಹಲವಾರು ವಿಡಿಯೋಗಳಿವೆ. ಇ-ಬೈಕ್ ಇಂಥಾ ಸೈಕಲ್-ಮೋಟಾರ್ಗಳ ಉತ್ತಮೀಕರಣವಾಗಿದೆ. ಸರಳವಾಗಿ ಹೇಳುವುದಾದರೆ ಮೋಟಾರ್, ನಿಯಂತ್ರಕ (ಕಂಟ್ರೋಲರ್), ಬ್ಯಾಟರಿ, ತ್ರಾಟಲ್ ಗಳನ್ನು ಒಂದು ಸಾಮಾನ್ಯ ಸೈಕಲ್‍ಗೆ ಜೋಡಿಸಿದರೆ ಅದು ಇ-ಸೈಕಲ್ ಅಥವಾ ಇ- ಬೈಕ್ ಆಗುತ್ತದೆ.

ಇ-ಬೈಕ್ ಪ್ರಯೋಜನಗಳು:

– ಕಡಿಮೆ ಪ್ರಯಾಸದಲ್ಲಿ ಹೆಚ್ಚು ದೂರ ಸಾಗಬಹುದು

– ಅತಿ ಕಡಿಮೆ ವೆಚ್ಚ : ಪ್ರತಿ ಕಿ.ಮೀ.ಗೆ ಸರಾಸರಿ 10- 30 ಪೈಸೆ

– 25 ಕಿ.ಮೀ. ವೇಗದಲ್ಲಿ ಸಾಗಬಹುದು (ಕಾನೂನು ನಿಯಂತ್ರಿತ)

– ಅಗತ್ಯಕ್ಕನುಗುಣವಾಗಿ ಮೋಟಾರಿನ ಸಹಾಯ ಪಡೆಯಬಹುದು

– ಸರಾಸರಿ 25 -40 ಕಿ.ಮೀ.ಗಳನ್ನು ಒಂದು ಬ್ಯಾಟರಿ ಚಾರ್ಜ್‍ನಲ್ಲಿ ಕ್ರಮಿಸಬಹುದು

– ಲೈಸೆನ್ಸ್ ಅಥವಾ ವಾಹನ ಚಾಲನ ಪರವಾನಗಿ ಅಗತ್ಯವಿಲ್ಲ

– ಮಕ್ಕಳೂ, ವೃದ್ಧರೂ, ವಯಸ್ಕರೂ ಬಳಸಬಹುದು

– ಅತಿ ಕಡಿಮೆ ಮಾಲಿನ್ಯ (ವಿದ್ಯುತ್ತನ್ನು ನವೀಕರಣ ಮೂಲಗಳಿಂದ ಉತ್ಪಾದಿಸಿದ್ದರೆ ಶೂನ್ಯಮಾಲಿನ್ಯ)

– ಉತ್ತಮ ಆರೋಗ್ಯ

– ದೂರದ ನೆಪ ಇನ್ನಿಲ್ಲ

ಇ-ಬೈಕ್ ಭಾಗಗಳು:

1. ಬ್ಯಾಟರಿ: ಮೋಟಾರ್ ಚಲಾಯಿಸಲು ಬೇಕಾಗುವ ವಿದ್ಯುತ್ತನ್ನು ಬ್ಯಾಟರಿ ನೀಡುತ್ತದೆ. ಬ್ಯಾಟರಿಯನ್ನು ಮೋಬೈಲ್ನಂತೆ ಚಾರ್ಜ್ ಮಾಡಬಹುದು. ಒಂದು ಪೂರ್ತಿ ಚಾರ್ಜ್ ಗೆ 60-90 ನಿಮಿಷ ಬೇಕು, ಹಾಗೂ ಸುಮಾರು 2-3 ರೂಪಾಯಿ ವೆಚ್ಚವಾಗುತ್ತದೆ. ಒಂದು ಪೂರ್ತಿ ಚಾರ್ಜನಲ್ಲಿ 25-40 ಕಿ.ಮೀ. ಕ್ರಮಿಸಬಹುದು.

2. ಮೋಟಾರ್: ಇದು ಬ್ಯಾಟರಿಯ ಚಾರ್ಜ್ ಬಳಸಿ ಕಾರ್ಯನಿರ್ವಹಿಸುತ್ತದೆ. ಇದು ಸಾಮಾನ್ಯವಾಗಿ ಸೈಕಲ್ನನ್ನು ತಳ್ಳಲು ಬಳಸಲಪಡುತ್ತದೆ, ಅಂದರೆ ಇದನ್ನು ಹಿಂದಿನ ಚಕ್ರದಲ್ಲಿ ಅಳವಡಿಸಲಾಗುತ್ತದೆ. ಆದರೆ ಚಿತ್ರದಲ್ಲಿರುವಂತೆ ಮುಂಗಾಲಿಯಲ್ಲಿ ಬಳಸುವ ಉದಾಹರಣೆಗಳೂ ಇವೆ.

3. ತ್ರಾಟಲ್: ಇದು ಸೈಕಲ್‍ನ ಹ್ಯಾಂಡಲ್ನಲ್ಲಿರುತ್ತದೆ. ಮೋಟಾರ್‍ಬೈಕ್ನಲ್ಲಿ ವೇಗನಿಯಂತ್ರಿಸುವಂತೆ ಇ-ಬೈಕ್ನಲ್ಲೂ ಮೋಟಾರಿನಿಂದ ಪಡೆಯುವ ಸಹಾಯವನ್ನು ನಿಯಂತ್ರಿಸಬಹುದು.

4. ನಿಯಂತ್ರಕ (ಕಂಟ್ರೋಲರ್): ಇದು ನಾವು ತ್ರಾಟಲ್‍ಗೆ ನೀಡುವ ತಿರುವಿಗೆ ಅನುಗುಣವಾಗಿ ಮೋಟಾರನ್ನು ನಿಯಂತ್ರಿಸುತ್ತದೆ.

5. ಕನ್ಸೋಲ್ : ಇದು ಒಂದು ದರ್ಶಕ. ಮೋಟಾರ್‍ನ, ಬ್ಯಾಟರಿಯಲ್ಲಿನ ಚಾರ್ಜಿನ , ವೇಗದ ಮಾಹಿತಿಯನ್ನು ತೋರಿಸುತ್ತದೆ.

6. ಪೆಡಲ್ ಅಸಿಸ್ಟ್ : ಇದು ಕೇವಲ ಅತ್ಯುನ್ನತ ದರ್ಜೆಯ ಇ-ಬೈಕ್‍ಗಳಲ್ಲಿ ಲಭ್ಯವಿರುತ್ತದೆ. ಇದು ಕಂಪ್ಯೂಟರ್‍ನಂತೆ, ಸೈಕಲ್ ಸವಾರನ ಶ್ರಮಕ್ಕೆ, ದಾರಿಯ ಏರಿಗೆ ಅನುಗುಣವಾಗಿ ಮೋಟಾರಿನಿಂದ ಶಕ್ತಿಯನ್ನು ಪಡೆಯುತ್ತದೆ.

01

ಯೂರೋಪ್‍ನಲ್ಲಿ ತರಹವಾರಿ ಇ-ಬೈಕ್‍ಗಳು ಬಳಕೆಯಲ್ಲಿವೆ. ವಯಸ್ಕರ ಮೋಜಿನಾಟ, ಚಾರಣ, ಮುಂತಾದ ವಿವಿಧ ಬಗೆಯ ಸೈಕಲ್ಗಳಿಂದ ಹಿಡಿದು, ವಯಸ್ಕರು ವಾಯುವಿಹಾರಕ್ಕಾಗಿ ಇಂತಹ ಇ-ಬೈಕ್‍ಗಳನ್ನು ಬಳಸುತ್ತಾರೆ. ಇಲ್ಲಿನ ಸೈಕಲ್‍ಗಳಿಗಾಗಿಯೇ ಮೀಸಲಿಟ್ಟ ಪಥಗಳಿವೆ ಆದ್ದರಿಂದ ಸೈಕಲ್ ಜನರ ಜೀವನದಲ್ಲಿ ಭದ್ರನೆಲೆ ಕಂಡಿದೆ. ಆಮ್ಸ್‍ಟರ್ಡಾಮ್ ನಗರದಲ್ಲಿ ಜನಸಂಖ್ಯೆಗಿಂತ ಹೆಚ್ಚು ಸೈಕಲ್‍ಗಳಿವೆ.  ಆದರೆ ಸದ್ಯಕ್ಕೆ ಇಂತಹ ಇ-ಬೈಕ್ ಭಾರತದಲ್ಲಿ ಸದ್ಯಕ್ಕೆ ಬಹಳ ವಿರಳ. ಮಾರುಕಟ್ಟೆ ದೊಡ್ಡದಿದ್ದರೂ ಜನರ ಅಭಿರುಚಿ, ಮೂಲಸೌಕರ್ಯಗಳ ಕೊರತೆ ಇದಕ್ಕೆ ಕಾರಣವಿರಬಹುದು. ಹೆಚ್ಚುತ್ತಿರುವ ವಾರಾಂತ್ಯದ ಸೈಕಲಿಗರು, ದಿನನಿತ್ಯದ ವಾಹನ ದಟ್ಟಣೆಯಲ್ಲಿಯೂ ಸೈಕಲ್ ತುಳಿಯುವ ಸಾಹಸಿಗರನ್ನು ಕಂಡಾಗ ಮುಂದೊದು ದಿನ ನಮ್ಮಲ್ಲೂ ಇಂತಹ ಅತ್ಯುನ್ನತ ಇ-ಬೈಕ್‍ಗಳು ತಯಾರಾಗಬಹುದು ಹಾಗು ದೊರೆಯಬಹುದೆಂಬ ಆಶಾಭಾವನೆ ಮೂಡುತ್ತದೆ.

ನಿದರ್ಶನ:

02

ಅಮೇರಿಕದ ಇಲಿನೋಯಿಸ್ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ, ಬೆಂಗಳೂರು ಮೂಲದ ರವೀಂದ್ರ ಕೆಂಪಯ್ಯರವರು ಸತತ 34 ದಿನಗಳ 8207 ಕಿ.ಮೀ.ಗಳ ಪ್ರಯಾಣಮುಗಿಸಿ ‘ಗಿನ್ನೀಸ್ ದಾಖಲೆ’ ರಚಿಸಿದ್ದಾರೆ. ಅವರ ಮಾತಲ್ಲಿ ‘ದಿನದಿಂದ ದಿನಕ್ಕೆ ಇ-ಬೈಕ್ ಬಳಕೆದಾರರು ಹೆಚ್ಚುತ್ತಿದ್ದಾರೆ, ಹೊಸ ಹೊಸ ವಿನ್ಯಾಸಗಳು, ಅವಿಷ್ಕಾರಗಳು ನಡೆಯುತ್ತಿವೆ. ಇ-ಬೈಕ್ ಸೋಮಾರಿಗಳ ಸಾಧನವಲ್ಲ ಆದರೆ ಹೊಸ ಸಾಧ್ಯತೆಗಳಿಗೆ ದಾರಿ’.

ಭಾರತದ ಇ-ಬೈಕ್‍ಗಳು:

ಭಾರತದಲ್ಲಿ ಪ್ರಮುಖವಾಗಿ ಮೂರು ಇ-ಬೈಕ್ ತಯಾರಕರಿದ್ದು, ಇವು ವ್ಯಾವಹಾರಿಕವಾಗಿ ಸಫಲಗೊಂಡಲ್ಲಿ ಇನ್ನೂ ಹೆಚ್ಚು ಇ-ಬೈಕ್‍ಗಳನ್ನು ಶೀಘ್ರದಲ್ಲಿ ಭಾರತ ರಸ್ತೆಗಳಲ್ಲಿ ಕಾಣಬಹುದು.

1. ಹೀರೋ ‘ಲೆಕ್ಟ್ರೋ’

ಭಾರತದ ಹೆಸರಾಂತ ದ್ವಿಚಕ್ರ ತಯಾರಕರಾದ ‘ಹೀರೋ’ ಕಂಪೆನಿಯವರಿಂದ ಶೀಘ್ರದಲ್ಲಿ ‘ಲೆಕ್ಟ್ರೋ’ ಇ-ಬೈಕ್ ಅನ್ನು ಪರಿಚಯಿಸುತ್ತಿದ್ದಾರೆ.

‘ಲೆಕ್ಟ್ರೋ’ ಇ-ಬೈಕ್ ಮೂರು ವಿನ್ಯಾಸಗಳಲ್ಲಿ ಲಭ್ಯವಿದೆ. ಇದರ ಬೆಲೆ ರೂ. 42,000 – 83,000ವರೆಗೆ. ಇದು ಪೆಡಲ್-ಅಸಿಸ್ಟ್ ಹೊಂದಿದ್ದು, ಸವಾರ ತನಗೆ ಅಗತ್ಯಕ್ಕೆ ತಕ್ಕಂತೆ ಮೋಟಾರಿನ ಸಹಾಯ ಪಡೆಯಬಹುದು.

03

ಕೃಪೆ: http://herocycles.com/lectro/

2. ಹುಲಿಕಲ್ ಇ-ಬೈಕ್ಸ್

ಹುಲಿಕಲ್ ಇ-ಬೈಕ್ಸ್ 6 ವಿನ್ಯಾಸಗಳಿದ್ದು, ಬೆಲೆ ಸುಮಾರು ರೂ. 35,000.

04

ಕೃಪೆ: http://www.hulikkal.com/

3. ಸ್ಪೆರೋ

ಇದು ಮಿಲ್‍ಟೆಕ್ಸ್ ಕಂಪೆನಿಯ ಉತ್ಪಾದನೆಯಾಗಿದ್ದು ಸದ್ಯಕ್ಕೆ ‘ಕ್ರೌಡ್-ಫಂಡಿಗೆ’ನಿಂದ ಮಾರುಕಟ್ಟೆಯಲ್ಲಿದೆ. ಇದರಲ್ಲಿ ಮೂರು ದರ್ಜೆಗಳಿದ್ದು ರೂ, 55,000-89,000ವರೆಗಿದೆ. ಸ್ಪೆರೋ ಇ-ಬೈಕ್ಗಳು 30-100ಕಿ.ಮೀ. ದೂರವನ್ನು ಒಂದು ಚಾರ್ಜ್‍ನಲ್ಲಿ ಕ್ರಮಿಸಬಲ್ಲವು.

05

ಕೃಪೆ: https://www.fueladream.com/home/campaign/125

– ನರೇಂದ್ರ ಕಶ್ಯಪ್

<kashyap.mech@yahoo.com>

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!