ಅಂಕಣ

ಸ್ವದೇಶೀ ಚಿಂತನೆಯ ಬಿತ್ತಿ ಹೋದ ರಾಜೀವ..

ಭಾರತವನ್ನು ಶಕ್ತಿಯುತ, ಸ್ವಾವಲಂಬೀ ದೇಶವನ್ನಾಗಿ ಪುನರುತ್ಥಾನಗೊಳಿಸಿ ವಿಶ್ವಶಕ್ತಿಯನ್ನಾಗಿಸುವ ಕನಸುಗಳನ್ನು ಕಂಡಿದ್ದ ಮಹಾತ್ಮರನೇಕರು. ಹಿಂದೂಸ್ಥಾನದ ಸ್ಚಾತಂತ್ರ ಹೋರಾಟಕ್ಕಾಗಿ, ಧರ್ಮ ರಕ್ಷಣೆಗಾಗಿ, ನೆಲ, ಜಲ, ಸಂಸ್ಕತಿಯ ಅಭ್ಯುದಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ತಾಯಿ ಭಾರತಿಯ ಮಡಿಲಲ್ಲೇ ಸ್ಚಾರ್ಥರಹಿತವಾಗಿ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಮಾಡಿದವರು ‘ಶಹೀದ್’ ಅಥವಾ ‘ಹುತಾತ್ಮ’ರೆನಿಸಿಕೊಳ್ಳುತ್ತಾರೆ. ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ತಾಂತಿಯಾ ಟೋಪೆ, ಗಾಂಧೀಜಿ, ಲಾಲಾ ಲಜಪತ್ ರಾಯ್, ಉಧಾಮ್ ಸಿಂಗ್ ಮುಂತಾದ ಧೀರ ಹೋರಾಟಗಾರರಷ್ಟೇ ಅಲ್ಲದೆ, ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಈ ದೇಶದ ಗಡಿಯ ರಕ್ಷಣೆಗೆ ನಿಂತು ತಮ್ಮ ಪ್ರಾಣವನ್ನೇ ತಾಯಿ ಭಾರತಿಯ ಮಡಿಲಲ್ಲಿ ತೆತ್ತು ಬಲಿದಾನಗೈಯುತ್ತಿರುವ ಸೈನಿಕರೂ ಹುತಾತ್ಮರೇ!

ಅವನೊಬ್ಬ ಅಪ್ರತಿಮ ದೇಶಭಕ್ತನಷ್ಟೇ ಅಲ್ಲಾ, ತನ್ನ ದೇಶವನ್ನು ಸ್ವತಂತ್ರಗೊಳಿಸಲು ಕಂಕಣಬದ್ಧನಾಗಿ ತನ್ನ ಬದುಕನ್ನೇ ಆಹುತಿ ನೀಡಿ ಪ್ರಜ್ವಲಿಸಿದ ಹೋರಾಟಗಾರ! ತನ್ನ ದೇಶದ ಸರ್ವತೋಮುಖ ರಕ್ಷಣೆಯ “ದೀಕ್ಷೆ” ತೊಟ್ಟಿದ್ದ “ರಾಷ್ಟ್ರ ಬಂಧು”. ರಾಜೀವ ದೀಕ್ಷಿತರು ಭಾರತಮಾತೆಯ ಹೆಮ್ಮೆಯ ಪುತ್ರ! ತನ್ನ ಜೀವನವನ್ನೇ ತಾನು ನಂಬಿದ ಆದರ್ಶಗಳಿಗೆ ಅರ್ಪಿಸಿಕೊಂಡ ಮಹಾತ್ಮ!

ಅವರೊಬ್ಬ ಅದ್ಭುತ ಕನಸುಗಾರ! ಅವರ ಕನಸುಗಳು ಒಂದೇ ಎರಡೇ? ನೂರಾರು! ತನ್ನ ಬಾಲ್ಯದಿಂದಲೂ ಅವರಿಗೆ ಕಾಡುತ್ತಿದ್ದ ಪ್ರಶ್ನೆಗಳಲ್ಲಿ ಪ್ರಮುಖವಾದದ್ದು ಅದೊಂದು ಕಾಲದಲ್ಲಿ ತನ್ನದೇ ಪರಂಪರೆಯ ನೆಲೆಗಟ್ಟಿನಲ್ಲಿ ಆರ್ಥಿಕವಾಗಿ ಸಮೃದ್ಧಿಯಿಂದಿದ್ದು,  ತನ್ನ ಪ್ರಾಚೀನ ಋಷಿಗಳ ಪರಂಪರೆಯಿಂದ ಪಡೆದ ವಿಜ್ಞಾನ-ತಂತ್ರಜ್ಞಾನಗಳಿಂದ, ವಿಶ್ವವನ್ನೇ ಬೆರಗುಗೊಳಿಸಿದ್ದ ಭಾರತ ಇಂದೇನಾಗಿದೆ? ಚಾಣಕ್ಯರಂತಹ ಜ್ಞಾನಿಗಳ ಮಾರ್ಗದರ್ಶನದಲ್ಲಿ ಭರತದೇಶದ ಭಾಗ್ಯಕೋಶ ವಿಶ್ವದಲ್ಲೆಲ್ಲಾ ಪೂಜನೀಯ ಸ್ಥಾನ ಪಡೆಯಿತು. ಇಂತಹ ದೇಶದ ಕೀರ್ತಿಯನ್ನು ಸಹಿಸಲಾಗದ ಶಕ್ತಿಗಳು ಅದೇಕೆ ನೂರಾರು ವರ್ಷಗಳಿಂದ ವಿದೇಶೀ ಆಕ್ರಮಣಕಾರರ ದಾಳಿಗೊಳಗಾಗಿ ತನ್ನೆಲ್ಲಾ ಗರಿಮೆ ಕೀರ್ತಿ, ಐಶ್ವರ್ಯ, ನೆಲ-ಜಲಗಳನ್ನು ಕಳೆದುಕೊಂಡು ಏಕೆ ಬರಿದಾಯಿತು? ಆರ್ಥಿಕವಾಗಿ, ರಾಜಕೀಯವಾಗಿ, ಸಾಂಸ್ಕತಿಕವಾಗಿ ಅದೇಕೆ ಭಾರತವು ಅಧ:ಪತನದ ಹಾದಿಯಲ್ಲಿ ಸಾಗಿದೆ?

ಇದರ ಅಧ್ಯಯನಕ್ಕಾಗಿ ಸಾಧಾರಣ ಹಳ್ಳಿಯಲ್ಲಿ ರೈತರ ಕುಟುಂಬದಲ್ಲಿ ಜನಿಸಿ, ತನ್ನ ಇಚ್ಛಾಶಕ್ತಿ, ಪ್ರತಿಭೆಯಿಂದ ಭಾರತದ ಅತ್ಯಂತ ಪ್ರತಿಷ್ಠಿತ ಸಿ.ಎಸ್.ಐ.ಆರ್. ಸಂಸ್ಥೆಯಲ್ಲಿ ವಿಜ್ಞಾನಿಯಾಗಿ  ಕಾರ್ಯ ನಿರ್ವಹಿಸುತ್ತಿದ್ದ ರಾಜೀವ್ ದೀಕ್ಷಿತ್ ತನ್ನ ಕೆಲಸವನ್ನೇ ಬಿಟ್ಟು, ದೇಶದ ಸಮಸ್ಯೆಗಳ ಪರಿಹಾರ ಹುಡುಕುವ ನಿಟ್ಟಿನಲ್ಲಿ ತನ್ನ ಗುರುಗಳಾದ ಶ್ರೀ. ಧರ್ಮಪಾಲ್ ಮತ್ತು ಶತಾಯುಷಿ ಶ್ರೀ. ಸುಧಾಕರ ಚತುರ್ವೇದಿಯವರ ಮಾರ್ಗದರ್ಶನದಲ್ಲಿ ರಾಷ್ಟ್ರದ ಪುರ್ನನಿರ್ಮಾಣ ಮಾಡುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡರು.

ಐನೂರು ವರ್ಷಗಳ ಹಿಂದಿನಿಂದಲೂ ಭರತದೇಶ ಮೇಲೆ ಆಕ್ರಮಣಗೈದ ಪೋರ್ಚುಗೀಸ್, ಫ್ರೆಂಚ್, ಮತ್ತು ಬ್ರಿಟೀಷರ ದಾಳಿಗಳನ್ನು ಎದುರಿಸಲಾಗದೆ ತತ್ತರಿಸಿದ್ದ ದೇಶ ಸ್ಚಾತಂತ್ರ ಪಡೆದ ನಂತರವೂ ನಿಜವಾದ ಅರ್ಥದಲ್ಲಿ ಸ್ಚತಂತ್ರವಾಗಿಲ್ಲವೆಂಬ ಅಂಶವನ್ನು ಮನಗಂಡ ರಾಜೀವರ ದೇಶ ಕಟ್ಟುಬೇಕೆಂಬುದು ಅಚಲ ನಿರ್ಧಾರವಾಗಿತ್ತು. ಬ್ರಿಟಿಷರ ದಾಸ್ಯದಿಂದ ಮುಕ್ತವಾದ ಭಾರತದಲ್ಲಿ ಅಭಿವೃದ್ಧಿಯ ಹಾದಿಗೆ ಕಲ್ಲಾಗಿ ಕಾಡುತ್ತಿದ್ದ ನಮ್ಮದೇ ‘ಮೆಕಾಲೇ’ ಮನಸ್ಸುಗಳು. ವಿವಿಧ ರೀತಿಯಲ್ಲಿ ನಡೆಯುತ್ತಿರುವ ಸಾಂಸ್ಕತಿಕ, ಚಾರಿತ್ರ್ಯದ ಆಕ್ರಮಣ! ರಾಜೀವ್ ದೀಕ್ಷಿತರ ಅನ್ವೇಷಣೆ ಆರಂಭವಾಯಿತು.

ದೇಶದ ಶತಮಾನಗಳ ಇತಿಹಾಸದ ಅಧ್ಯಯನ, ವಿದೇಶಗಳಲ್ಲಿನ ಅಭಿವೃದ್ಧಿಯ ಕಾರಣಗಳಿಗಾಗಿ, ರೀತಿ-ನೀತಿಗಳ ಅರಿವಿಗಾಗಿ ನಿರತ ಸಂಶೋಧನೆ. ಅದೊಂದು ಕಾಲದಲ್ಲಿ ವಿಶ್ವದೆಲ್ಲೆಡೆಯಿಂದ ಭಾರತಕ್ಕೆ ಬಂದು ಇಲ್ಲಿನ ಗುರುಕುಲಗಳಲ್ಲಿ ಸಂಸ್ಕತ, ಗಣಿತ, ವಿಜ್ಞಾನ, ಆಯುರ್ವೇದಗಳ ಅಧ್ಯಯನ ಮಾಡುತ್ತಿದ್ದರು. ಭಾರತವು ಎಂದಿಗೂ ಸಹಾಯಕ್ಕಾಗಿ ಯಾವುದೇ ದೇಶವನ್ನು ಯಾಚಿಸಿರಲಿಲ್ಲ! ವ್ಯಾಪಾರದ ನೆಪದಲ್ಲಿ ಭಾರತವನ್ನೇನೋ ವಿದೇಶೀ ಈಸ್ಟ್ ಇಂಡಿಯಾ ಕಂಪನಿ ಬಿಟ್ಟು ಹೋಗಿತ್ತು! ಹಾಗಿದ್ದಲ್ಲಿ ನಮ್ಮವರ ಆಳ್ವಿಕೆ ಆರಂಭವಾದ ನಂತರ ಕುಸಿದ ಅರ್ಥವ್ಯವಸ್ಥೆಗೆ ಕಾರಣ? ಭಾರತವು ವಿದೇಶೀ ಬ್ಯಾಂಕ್‍ಗಳಿಂದ, ವಿಶ್ವಬ್ಯಾಂಕಿನಿಂದ ಪಡೆದ ಕೋಟಿ ಕೋಟಿ ರೂಪಾಯಿಗಳ ಸಾಲದ ಫಲವಾಗಿ ಎದುರಾದ ನಮ್ಮದೇ ರೂಪಾಯಿಯ ಅಪಮೌಲ್ಯ. ನಮ್ಮ ದೇಶವು ಗಣತಂತ್ರದಿಂದ ರಚಿತವಾದ ಹೊಸ್ತಿಲಲ್ಲಿ ವ್ಯಾಪಾರದ ಹೆಸರಿನಲ್ಲಿ ಭಾರತಕ್ಕೆ ಬಂದಿದ್ದ ಕೆಲವೇ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳ ಸಂಖ್ಯೆ ಬೆಳೆಯುತ್ತಾ ಬೃಹತ್ತಾಗಿ, ರಕ್ತ ಬೀಜಾಸುರರಂತೆ ದೇಶದ ಅರ್ಥವ್ಯವಸ್ಥೆಯ ಮೇಲೆ ನಡೆಸುತ್ತಿರುವ ಆಕ್ರಮಣದ ವಿರುದ್ಧದ ಹೋರಾಟಕ್ಕಾಗಿ ರಾಜೀವರು ಸ್ವತಂತ್ರ ಅಂದರೆ ಆಚಾದಿಯ ಉಳಿವಿಗಾಗಿ ‘ಆಚಾದೀ ಬಚಾವೋ ಅಂದೋಲನದ’ ಮುಖ್ಯ ಪ್ರಭಾರಿಗಳಾಗಿ ತಮ್ಮ ಕಾರ್ಯ ಆರಂಭಿಸಿದರು.

ಸಾಲದ ಬಾಧೆಯಲ್ಲಿ ಕಂಗಾಲಾಗಿ ತನ್ನ ಪ್ರಾಣ ಕಳೆದುಕೊಳ್ಳುತ್ತಿರುವ ದೇಶದ ಬೆನ್ನೆಲುಬಾದ ರೈತನ ಉಳಿವಿಗಾಗಿ ವಿಶ್ವವ್ಯಾಪಾರ ಒಕ್ಕೂಟದ ನಿಲುವಿನ ವಿರುದ್ಧ, ಗ್ಯಾಟ್ ಒಪ್ಪಂದದ ವಿರುದ್ಧ, ವಿದೇಶೀ ಕಂಪನಿಗಳ ವಿರುದ್ಧದ ಅವರ ಹೋರಾಟವು ಪ್ರವಾಹದ ವಿರುದ್ಧದ ಸಮರವೆಂದು ಅರಿತಿದ್ದ ಅವರೆಂದೂ ಹೆದರಲಿಲ್ಲ! ಈ ದೇಶವನ್ನು ರಕ್ಷಿಸಲು ಸಾಧ್ಯವಿರುವುದು ಕೇವಲ ಸ್ವದೇಶೀ ಚಿಂತನೆ ಮತ್ತು ಭಾರತೀಯತೆಯಿಂದ ಮಾತ್ರ, ಆದರೆ ಇದರ ಜಾಗೃತಿ ಮೂಡಿಸುವುದು ಹೇಗೆ? ನಮ್ಮ ಆಚಾರ ವಿಚಾರಗಳನ್ನಷ್ಡೇ ಅಲ್ಲದೆ, ರಾಸಾಯನಿಕಯುಕ್ತ ಕೀಟನಾಶಕ, ಕೃಷಿಗೆ ಮಾರಕವಾಗಿರುವ ‘ಎಂಡೋಸಲ್ಫಾನ್’, ಫಾಸ್ಟ್ ಫುಡ್, ಪೆಪ್ಸಿ-ಕೋಕ್ ತಂಪು ಪಾನೀಯಗಳು ಅಂಧಾನುಕರಣೆಯಿಂದ ಹಾಳಾಗುತ್ತಿರುವ ಯುವಶಕ್ತಿಯ ಬದಲಾಗುತ್ತಿರುವ ನಿಲುವುಗಳನ್ನು ಬದಲಾಯಿಸಿ ಭಾರತೀಯತೆಯ ದಿಗ್ದರ್ಶನ ಮಾಡಿಸಲು ಇನ್ನುಳಿದದ್ದು ದೇಶದ ಉದ್ದಗಲಕ್ಕೂ ಸಂಚಾರ, ಸಹಸ್ರ ಸಂಖ್ಯೆಯಲ್ಲಿ ತನ್ನ ಉಪನ್ಯಾಸಗಳಿಂದ ಜಾಗೃತಿಯ ಪ್ರಯತ್ನ!

ಭವ್ಯ ಭಾರತದ ಭವಿಷ್ಯದ ಪ್ರಜೆಗಳಾದ ಯುವಜನತೆಯ ಶಕ್ತಿಯ ಅರಿವಿದ್ದ ಅವರು ಯುವಕರಿಗೆ ನೀಡಿದ ಸಂದೇಶ ‘ನಿಮ್ಮ ದೇಶ ಕರೆ ನೀಡಿದೆ, ಭಾರತ ಮಾತೆಯ ಈ ಕರೆಗೆ ಓಗೊಡಿ’ ಎಂದು. ನಮ್ಮ ನ್ಯಾಯಾಂಗ ವ್ಯವಸ್ಥೆ, ಬ್ರಿಟಿಷರು ಬಿಟ್ಟು ಹೋದ ಅರ್ಥವಿಲ್ಲದ ಕೆಲವು ಕಾನೂನುಗಳ ಮಾರ್ಪಾಟು, ನಮ್ಮ ಟ್ಯಾಕ್ಸ್ ಪದ್ಧತಿಯಲ್ಲಿನ ಬದಲಾವಣೆ, ಸಂಪತ್‍ಶಕ್ತಿಗಳ ವಿಕೇಂದ್ರೀಕರಣ, ಕೃಷಿ, ವನ, ಪಶುಪಾಲನ ವ್ಯವಸ್ಥೆಗಳಲ್ಲಿ ಬದಲಾವಣೆ ಮುಂತಾದ ಅನೇಕ ವಿಷಯಗಳಲ್ಲಿ ನಿಯಮಿತ ಯೋಜನೆಗಳು ರಾಜೀವ್ ದೀಕ್ಷಿತರ ವಿಚಾರಗಳು.  ಭಾರತ್ ಸ್ಚಾಭಿಮಾನ್ ಟ್ರಸ್ಟ್’ನ ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಜವಾಬ್ದಾರಿ ಕೈಗೊಂಡಾಗ ಅವರ ವಿಚಾರಗಳು ಇನ್ನೂ ತೀಕ್ಷ್ಣಗೊಂಡವು. ಭಾರತದ ಪ್ರತಿಭೆಗಳ ಪಲಾಯನ, ಆಯುರ್ವೇದ-ಹೋಮಿಯೋಪಥಿ ಚಿಕಿತ್ಸಾ ಪದ್ಧತಿ, ಗಾಂಧೀಜಿಯವರ ಖಾದೀ-ಗ್ರಾಮ ಸ್ಚರಾಜ್ಯಗಳ ಕಲ್ಪನೆ, ಗೋ-ಸಂರಕ್ಷಣೆ ಇವುಗಳ ಕುರಿತು ಆಲೋಚನೆಗಳು. ವಿದೇಶೀ ಸಾಲದಿಂದ ದೇಶವನ್ನು ಮುಕ್ತಗೊಳಿಸಲು ಕಪ್ಪು ಹಣ ವಾಪಸಾತಿಗಾಗಿ ಹಸ್ತಾಕ್ಷರ ಸಂಗ್ರಹ, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಹಾದಿಯಲ್ಲಿ ಲೋಕ್‍ಪಾಲ್‍ನಂತಹ ವ್ಯವಸ್ಥೆಯ ಅವಶ್ಯಕತೆ, ಮುಂತಾದ ಗಂಭೀರ ಚಿಂತನೆಗಳಷ್ಟೇ ಅಲ್ಲದೆ, ವಿದೇಶೀ ನೇರ ಬಂಡವಾಳ ಹೂಡಿಕೆಯಿಂದಾಗಿ ಭಾರತಕ್ಕೆ ಆಗಬಹುದಾದ ಅಪಾಯ ಮತ್ತು ಭ್ರಷ್ಟ ಆಳುಗರ ವಿರುದ್ಧ ನಾಗರೀಕರ ಹಕ್ಕುಗಳ ಕುರಿತು ;ರೈಟ್ ಟು ರಿಕಾಲ್’ ಮುಂತಾದವುಗಳ ಕುರಿತು ದಶಕಗಳ ಹಿಂದೆಯೇ ರಾಜೀವರು ಎಚ್ಚರಿಸಿದ್ದರು.

ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಲು ದೇಶೀ ತಳಿಯ ಗೋವುಗಳನ್ನು ರಕ್ಷಿಸಲು ಅವರು ಪದೇ ಪದೇ ರೈತರಿಗೆ ಹೇಳುತ್ತಿದ್ದ ಮಾತುಗಳು, “ಹಸು ಎಂದಿಗೂ ಹೊಗೆ ಉಗುಳುವುದಿಲ್ಲ, ಟ್ರ್ಯಾಕ್ಟರ್ ಎಂದೂ ಸಗಣಿ ಹಾಕುವುದಿಲ್ಲ’ ಎಂದು,

ತನ್ನ ಮಾತುಗಳಿಂದ ಯುವಜನತೆಯ ಮನಸ್ಸನ್ನು ಆಕರ್ಷಿಸಿದ್ದ “ಸ್ವದೇಶೀ ಐಕಾನ್” ರಾಜೀವ್ ದೀಕ್ಷಿತರು ಯುವಕರಿಗೆ ತಮ್ಮ ದೇಶವನ್ನು ನಾಡು-ನುಡಿಯನ್ನು ಪ್ರೀತಿಸಲು, ಸ್ವದೇಶೀ ಬಳಸಲು ಹೇಳುತ್ತಿದ್ದ ಮಾತುಗಳು ಐ.ಐ.ಟಿ. ಕಾನ್ಪುರದ ವಿದ್ಯಾರ್ಥಿಯಾಗಿದ್ದೂ, ವಿದೇಶಗಳನ್ನು ತನ್ನ ಅಪರಿಮಿತ ಮೇಧಾಶಕ್ತಿಯಿಂದ, ಸರಳತೆ, ವಿಷಯ ಮಂಡನೆಯ ಗಾಂಭೀರ್ಯ ಮತ್ತು ಶುದ್ಧ ಭಾರತೀಯ ಹಿಂದಿ ಅಥವಾ ತಮ್ಮ ಪ್ರವಾಸಗಳಲ್ಲಿ ಸ್ಥಳೀಯ ಭಾಷೆಯ ಬಳಕೆ ಈ ಎಲ್ಲವೂ ಇಂದಿನ ಯುವಜನತೆಗೆ ಅವರಿತ್ತ ಸಂದೇಶ.ನಾವು ಮರೆತ ಭಾರತವನ್ನು, ಅದರ ಸಂಸ್ಕತಿ, ಗರಿಮೆ ಇತಿಹಾಸವನ್ನೂ ನಮ್ಮ ಸ್ಮತಿಯಲ್ಲಿ ಅಳಿಯದಂತೆ ಚಿತ್ರಣ ನೀಡಿ ಅವರು ನುಡಿಯುತ್ತಿದ್ದದ್ದು ‘ಮೇರಾ ಭಾರತ್ ಮಹಾನ್’ ಎಂದು!

ರಾಜೀವ ದೀಕ್ಷಿತ್ ಜನ್ಮ ದಿನ ಮತ್ತು ದೇಶವನ್ನಗಲಿದ ದಿನ ನವೆಂಬರ್ 30. ಈ ದಿನವನ್ನು ಸ್ವದೇಶೀ ದಿನ ಎಂದು ದೇಶಭಕ್ತರು ಆಚರಿಸುತ್ತಾರೆ. ಸ್ವದೇಶೀ ಚಿಂತನೆಯ ಚಳುವಳಿಯನ್ನು ಹುಟ್ಟು ಹಾಕಿದ ನೇತಾರರೊಬ್ಬರು ತನ್ನ ಅಲ್ಪ ಜೀವಿತಾವಧಿಯಲ್ಲೇ ಭಾರತದ ಜನತೆಗೆ ಸ್ವದೇಶೀ ಚಿಂತನೆಗಳನ್ನು ಜಾಗೃತಗೊಳಿಸಿ, ಸಬಲ, ಸಶಕ್ತ ರಾಷ್ಟ್ರಕಟ್ಟುವ ಸಂಕಲ್ಪವೇ ಈ ಮಹಾನ್ ಚೇತನಕ್ಕೆ ನಾವು ನೀಡುವ ಗೌರವ!

ಮಯೂರ ಲಕ್ಷ್ಮಿ

writeforus@readoo.in

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!