ಅದು ಭಾರತ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಾಟ.
ಕ್ರಿಕೆಟ್ ಅಂದ್ಮೇಲೆ ಕೇಳ್ಬೇಕೆ ಅದರಲ್ಲೂ ಇಂಡೋ-ಪಾಕ್ ಮ್ಯಾಚ್ ಅಂದ್ರೆ ಮುಗಿತು
ಜನ ಹುಚ್ಚೆದ್ದು ಮುಗಿ ಬೀಳುತ್ತಾರೆ.
ಇಲ್ಲಿ ಕೂಡಾ ಹಾಗೇ
ಕುತೂಹಲಕರ ಘಟ್ಟದಲ್ಲಿ ಪಂದ್ಯಾಟ ಸಾಗುತ್ತಿದೆ
ಕೊನೆಯ ಓವರ್ ನಲ್ಲಿ ಭಾರತದ ಗೆಲುವಿಗೆ ಹನ್ನೆರಡು ರನ್ ಗಳ ಅವಶ್ಯಕತೆ ಇದೆ.
ವಿಕೆಟ್ ಉಳಿದಿರೊದು ಒಂದೇ ಒಂದು !!!
ಮೈದಾನ ತುಂಬಿ ತುಳುಕುತ್ತಿದೆ ಜನ ಕ್ಷಣಕ್ಷಣಕ್ಕೂ ಇಂಡಿಯಾ ಇಂಡಿಯಾ ಎನ್ನುತ್ತ ತಮ್ಮ ತಂಡವನ್ನು ಹುರಿದುಂಬಿಸುತ್ತಿದ್ದಾರೆ.
ಶಿಳ್ಳೆ,ಚಪ್ಪಾಳೆ ಕೇಕೆಗಳ ನಡುವೆ ಎರಡೂ ದೇಶದವರು ತುದಿಗಾಲಲ್ಲಿ ನಿಂತು ನೋಡುತ್ತಿರುವ ಪಂದ್ಯಾಟ ಅದು.
ಕೊನೆಯ ಓವರ್ ಪ್ರಾರಂಭವಾಗುತ್ತಲೆ ‘ವಿ ವಾಂಟ್ ಸಿಕ್ಸರ್’ ಎನ್ನುವ ಧ್ವನಿ ಮುಗಿಲು ಮುಟ್ಟುತ್ತಿದೆ.
ಕೋಟ್ಯಾಂತರ ಜನರ ಆಶಾಕಿರಣವಾಗಿ ಬ್ಯಾಟ್ಸಮನ್ ಸಿದ್ದನಾಗಿದ್ದಾನೆ.ಅವನು ನುರಿತ ಬ್ಯಾಟ್ಸಮನ್ ಅಲ್ಲವೆನ್ನುವುದು ನೋಡುವ ಪ್ರತಿಯೊಬ್ಬರಿಗೂ ಗೊತ್ತು. ಆದರೆ ಆಟ ಮುಗಿಯದೆ ಸೋಲು ಒಪ್ಪಿಕೊಳ್ಳುವ ಜಾಯಮಾನ ನಮ್ಮದಲ್ಲವಲ್ಲ. ಜಯ ನಮ್ಮದೇ ಎನ್ನುವ ಲೆಕ್ಕಚಾರ ಅವನು ಹೀಗೆ ಹೊಡೆಯಲಿ ಹಾಗೆ ರನ್ ತೆಗೆಯಲಿ ಎನ್ನುವ ನಮ್ಮೊಳಗಿನ ಚರ್ಚೆ,ಗೆಲ್ಲುವ ಆತ್ಮವಿಶ್ವಾಸ ಪ್ರತಿ ಪಂದ್ಯದಲ್ಲೂ ಇದ್ದೆ ಇರುತ್ತದೆ.
ಸರಿ ಸಿದ್ದನಾದ ಬೌಲರ್
ದೂರದಿಂದ ಓಡಿ ಬಂದು ಎಸೆದ ಚೆಂಡು ಕ್ರೀಸ್’ನಲ್ಲಿದ್ದ ಬ್ಯಾಟ್ಸಮನ್’ನನ್ನು ವಂಚಿಸಿ ನೇರವಾಗಿ ಕೀಪರ್ ಕೈ ಸೇರಿತು.
ಜನ ಹೋ ಎಂದು ಕಿರುಚಿ ಮುಂದಿನ ಬಾಲ್ ಏನಾಗುತ್ತೊ ಎಂದು ಕಾದು ಹಿಂದಿನ ಬಾಲ್ ಮರೆತರೆ ಬ್ಯಾಟ್ಸಮನ್ ಮಾತ್ರ ಕ್ಷಣಾರ್ಧದಲ್ಲಿ ಮಿಸ್ ಆದ ಬಾಲ. ನ ಮರ್ಮ ಅರ್ಥ ಮಾಡಿಕೊಂಡು ಮುಂದಿನ ಬಾಲ್’ಗೆ ಸಿದ್ದನಾಗುತ್ತಾನೆ.
ಪ್ರೇಕ್ಷಕರ ಲೆಕ್ಕಚಾರ ಮತ್ತೆ ಶುರುವಾಗುತ್ತೆ. ಎಸತ್ಕೆರಡರಂತೆ ರನ್ ತೆಗೆದರೆ ಸಾಕು ಜಯ ನಮ್ಮದೆ ಎಂದುಕೊಂಡವರು ಮೊದಲ ಬಾಲ್ ಮಿಸ್ ಆದಾಗ ಬೈದುಕೊಂಡರೂ ಆತ್ಮವಿಶ್ವಾಸ ಕುಂದಿಲ್ಲ. ಇನ್ನುಳಿದ ಐದು ಬಾಲ್’ ನಲ್ಲಿ ನಾಲ್ಕರಲ್ಲಿ ಎರಡೆರಡು ರನ್ ಇನ್ನೊಂದರಲ್ಲಿ ಬೌಂಡರಿ ಬಂದರೆ ಸಾಕು. ನಾವೇ ವಿನ್..
ನೆಕ್ಸ್ಟ್ ಬಾಲ್ ಕೂಡಾ ಮತ್ತೆ ಮಿಸ್. ತಲೆ ಮೇಲೆ ಕೈ ಹೊತ್ತರೂ ಲೆಕ್ಕಚಾರ ಬಿಡೋರಲ್ಲ ನಾವು.ಇನ್ನುಳಿದ ನಾಲ್ಕರಲ್ಲಿ
ಎರಡು ಬೌಂಡರಿ’ ಇನ್ನೆರಡು ಡಬಲ್ ರನ್ ಮ್ಯಾಚ್ ನಮ್ಮದೆ.
ಮತ್ತೆ ಇನ್ನೆರಡು ಬಾಲ್ ಮಿಸ್ ಆದಾಗಲೂ ಸೋಲೊಪ್ಪುವ ಜಾಯಮಾನ ನಮ್ಮದಲ್ಲ ಉಳಿದೆರಡು ಬಾಲ್’ನಲ್ಲಿ ಸಿಕ್ಸರ್ ಬರುತ್ತದೆನ್ನುವ ಆಶಾವಾದ.
ಅಲ್ಲೂ ಮಿಸ್ ಆದರೆ ಮತ್ತೊಂದು ಆಸೆ ಮೂಲೆಯಲ್ಲಿ ಮುಂದಿನದು ನೋ ಬಾಲ್ ಆಗ್ಲಿ ಅಂತ. ಕೊನೆಯವರೆಗೂ ನೋಡುವ ಹೋರಾಟದಲ್ಲಿ ಸೋಲುವವರಲ್ಲ ನಾವು.
ನಿಜ ತಾನೆ??
ಗೆಲ್ಲಬೇಕೆನ್ನುವ ಹಠವೇ ಹಾಗೆ ಸುಮ್ಮನೆ ಸೋಲುವುದಿಲ್ಲ ಸೋಲಬಾರದು ಕೂಡ.ಒಮ್ಮೆ ಸೋತವರಿಗಷ್ಟೆ ಗೆಲುವಿನ ಗಮ್ಮತ್ತು ಅರ್ಥವಾಗುವುದು ಎನ್ನುವುದು ಕೇಳಕಷ್ಟೆ ಚೆನ್ನ. ಆದರೆ ಗೇಮ್ ನಲ್ಲಿ ಯಾರೂ ಸೋಲೊಕಂತ ಆಡಲ್ಲ ಅಲ್ವಾ.
ಅದೆಲ್ಲ ಸರಿ ಗೇಮ್’ನಲ್ಲಿ ಇರೋ ಇಂತಹ ವಿಶ್ವಾಸ,ಗೆಲ್ಲುವ ನಂಬಿಕೆ,ಎದುರಾಳಿ ಸಿಂಹಬಲನಾದರೂ ಗೆದ್ದೆ ಗೆಲ್ಲುವ ಛಲ, ಧೈರ್ಯ ಬದುಕಿನಲ್ಲಿ ಯಾಕಿಲ್ಲ ಎನ್ನುವುದಷ್ಟೆ ನನ್ನ ಪ್ರಶ್ನೆ. ಉತ್ತರಕ್ಕಾಗಿ ಅಲ್ಲಿ ಇಲ್ಲಿ ಯಾಕೆ ಹುಡುಕಬೇಕು ಹೇಳಿ ಅಂತರಂಗದ ಕನ್ನಡಿ ಮುಂದೆ ನಿಂತುಕೊಂಡರೆ ಎಲ್ಲೊ ಹುಡುಕುವ ನಮ್ಮ ಪ್ರಶ್ನೆಗೆ ನಮ್ಮಲ್ಲೆ ಇದೆ ಉತ್ತರಗಳು.
ಎಲ್ಲಾ ಓಕೆ ಲೈಫ್’ಗೂ ಕ್ರಿಕೆಟ್’ಗೂ ಏನ್ ಸಂಬಂಧ ಅಂತ ಕೇಳಿದ್ರಾ??
ಹುಡುಕ್ತಾ ಹೋದ್ರೆ ಭೂಮಿಯಲ್ಲಿನ ಪ್ರತಿಯೊಂದು ವಿಷಯವೂ ಕೂಡಾ ಬದುಕಿಗೆ ಸಂಬಂಧಿಸಿದ ಸಂಗತಿಗಳೆ ಅಲ್ಲವೇ..
ಎಲ್ಲದರಲ್ಲೂ ಒಂದೊಂದು ಪಾಠಗಳು ಒಂದೊಂದು ಜೀವನಾನುಭವಗಳು. ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹುಡುಕುತ್ತಿರುವ ನನ್ನ ಎಷ್ಟೋ ಜನ ಸ್ನೇಹಿತರು ಒಂದೆರಡು ಪ್ರಯತ್ನಗಳಿಗೆ ನಿರಾಸೆಗೊಂಡು ಬದುಕಲ್ಲಿ ಬೇರೆ ಅವಕಾಶಗಳೆ ಇಲ್ಲ ಎಂದುಕೊಂಡು ಕೊರಗಿದವರಿದ್ದಾರೆ. ನಿರುದ್ಯೋಗದ ಬಿಸಿಗೆ ಬಾಡಿ ಹೋದವರಿದ್ದಾರೆ. ಕಾಯುವ ತಾಳ್ಮೆ ಇಲ್ಲದೆ ಕಂಗಲಾಗಿ ಬೇರೇನೋ ಸಾಹಸ ಮಾಡಲು ಹೋಗಿ ಕೈಸುಟ್ಟುಕೊಂಡವರಿದ್ದಾರೆ. ಅಪರೂಪಕ್ಕೊಮ್ಮೆ ಸಾವಿರದಲ್ಲಿ ಕೆಲವರು ಗೆದ್ದವರೂ ಇದ್ದಾರೆ. ಜಗತ್ತು ಗೆದ್ದವರ ಜೊತೆಗಿರುತ್ತೆ ಅಲ್ವಾ ನಾವು ಸೋತವರ ಬಗ್ಗೆ ಯೋಚಿಸೋಣ ಬನ್ನಿ.
ಬದುಕೆಂದರೆ ಒಂದೆರಡು ಗಂಟೆಗಳಲ್ಲಿ ಮುಗಿದು ಹೋಗುವ ಟ್ವೆಂಟಿ ಟ್ವೆಂಟಿ ಮ್ಯಾಚ್ ಅಲ್ಲ ಎನ್ನುವುದು ನಮಗೆ ಗೊತ್ತಿರಬೇಕು.ಇದು ಕಾದಷ್ಟು ಫಲಕೊಡುವ ನಿಂತಷ್ಟು ನೆಲೆ ಕೊಡುವ ತಾಳ್ಮೆಯ ಪ್ರತಿರೂಪದಂತಿರುವ ಟೆಸ್ಟ್ ಮ್ಯಾಚ್ ನ ಹಾಗೆ. ವಿದ್ಯಾಭ್ಯಾಸ ಮುಗಿಸಿ ತನ್ನ ಲೋಕದಿಂದ ಉದ್ಯೋಗ ಲೋಕಕ್ಕೆ ಕೆಲಸ ಹುಡುಕುತ್ತಾ ಹೊರ ಬಂದ ವ್ಯಕ್ತಿಗೆ ಬದುಕೇ ಬಂದು ಕ್ರಿಕೆಟ್.
ತಂದೆ ತಾಯಿಗಳ ಸಾವಿರ ನಿರೀಕ್ಷೆ ಗಳು,ಸ್ನೇಹಿತರ ಕುತೂಹಲಗಳು,ಸಂಬಂಧಿಕರ ಓರೆನೋಟಗಳು ಬದುಕಿನ ಕ್ರಿಕೆಟ್ ನಲ್ಲಿ ಕ್ರೀಸ್ ಗೆ ಇಳಿಯುವಾಗ ಮಾಮೂಲಿ. ಆದರೆ ಒಂದು ನೆನಪಿರಲಿ ಬದುಕಿನ ಕ್ರಿಕೆಟ್ ನ ವಿಶೇಷತೆ ಅಂದ್ರೆ ಇಲ್ಲಿ ವಿಕೆಟ್ ಗಳೆ ಇಲ್ಲ,ನಿಮ್ಮನ್ನು ಔಟ್ ಮಾಡಲು ಕಾಯುವ ಕೀಪರ್ ಕೂಡ ಇಲ್ಲ. ಹೆಚ್ಚೇನು ನಿಮ್ಮ ಸಾಧನೆಯ ಬೌಂಡರಿ,ಸಿಕ್ಸರ್ ಗಳ ತಡೆಯುವ ಫೀಲ್ಡರ್ ಕೂಡಾ ಇಲ್ಲ ಇರೋದು ಕೇವಲ ಅವಕಾಶ (ಚಾನ್ಸ್)ಎನ್ನುವ ಬೌಲರ್ ಮತ್ತು ಏನನ್ನಾದರೂ ಸಾಧಿಸುತ್ತೇನೆ ಎನ್ನುವ ಗುರಿ ಹೊತ್ತ ನೀವೆನ್ನುವ ನೀವು ಮಾತ್ರ.
ಸರಿ ನೀವು ಆಡಲು ಸಿದ್ದವಾಗಿದ್ದಿರಿ ಎದುರಿಗಿರುದು ಕಣ್ಮುಂದೆ ಕಾಣಿಸಿ ವಿಚಿತ್ರ ತಿರುವು ಪಡೆಯುವ ಅವಕಾಶವೆನ್ನುವ ಸ್ಪಿನ್ನರ್.ನೀವು ಮೊದಲ ಎಸೆತಕ್ಕೆ ಸಾಕಷ್ಟು ತಯಾರಿಯೊಂದಿಗೆ ಸಿದ್ದರಾಗಿದ್ದಿರಿ ನಿಮಗೆ ಕಾಣಿಸಬೇಕಿರುವುದು, ಕೇಳಿಸಬೇಕಿರುವುದು ಅಕ್ಕ ಪಕ್ಕದ ಗೌಜು ಗದ್ದಲಗಳಲ್ಲ,ಕೇಕೆ ಸದ್ದುಗಳಲ್ಲ,ಬದುಕಿಗೆ ತಿರುವು ಕೊಡುವ ಬಾಲ್ ಮಾತ್ರ.
ಆಫ್ ಸ್ಪಿನ್ ನ ನಿರೀಕ್ಷೆಯಲ್ಲಿ ಕಾಯುತ್ತಿದ್ದಾಗ ನಿಮಗೆ ಅದು ಲೆಗ್ ಸ್ಪಿನ್ ಆಗಿ ಮಿಸ್ ಆದರೆ ನಿಮಗೆ ನೆನಪಾಗಬೇಕಿರೊದು ಒಬ್ಬ ಬೆಸ್ಟ್ ಬ್ಯಾಟ್ಸಮನ್ ಆದವನು ಯಾವತ್ತೂ ಒಂದು ಎಸೆತ ಮಿಸ್ ಆದ ತಕ್ಷಣ ಅಯ್ಯೋ ಎಂದು ಕೈಯಲ್ಲಿದ್ದ ಗ್ಲೌಸ್ ಬಿಚ್ಚಿ ಹೊರ ನಡೆಯುದಿಲ್ಲ.
ಮೊದಲ ಸಂದರ್ಶನದಲ್ಲಿ ವಿಫಲವಾದಾಗ ನಾವೆಲ್ಲರೂ ಕೂಡ ತಿಳಿಬೇಕಾದ ಸತ್ಯ ಇದು.ಮರು ಎಸೆತಕ್ಕೆ ಕಾಯುವಾಗ ನೀವು ಲೆಗ್ ಮತ್ತು ಆಫ್ ಎರಡಕ್ಕೂ ಸಿದ್ದರಾಗಿರುತ್ತಿರಿ.ನೇರ ಬಂದ ಎಸೆತ ಮತ್ತೆ ಮಿಸ್ ಆದರೆ ನೀವು ಮುಂದಿನ ಎಸೆತ ಬರುವಾಗ ಅದಕ್ಕೂ ಸಿದ್ದನಾಗಿರುತ್ತಿರಿ ತಾನೇ.ಅದು ಲೆಗ್,ಆಫ್,ಅಥವಾ ನೇರ ಬಂತು ಅಂತಾದ್ರೆ ಮುಗಿತು ನಿಮಗೆ ಗೊತ್ತಾಗಿ ಹೋಗುತ್ತೆ ಈ ಬೌಲರ್ ಗೆ ಬರೋದು ಇಷ್ಟೇ ತಂತ್ರಗಾರಿಕೆ.ಆಗ ನಿಮ್ಮೊಳಗಿನ ಆತ್ಮವಿಶ್ವಾಸ ತಾನೇ ತಾನಾಗಿ ಹೆಚ್ಚುತ್ತೆ. ಸೋಲಿನ ಬಾಗಿಲು ಮುಚ್ಚುತ್ತೆ.
ಬದುಕಿನಲೂ ಅಷ್ಟೇ ಒಂದೆರಡು ಚಾನ್ಸ್ ಮಿಸ್ ಆಯ್ತು ಅಂತಾದ್ರೆ ಯಾಕೆ ಮಿಸ್ ಆಯ್ತು ಅಂತ ಒಂದಿಷ್ಟು ಯೋಚಿಸಬೇಕು ನಂತರ ಇನ್ನೊಂದಿಷ್ಟು ತಯಾರಿಯೊಂದಿಗೆ ಸಿದ್ದವಾದರೆ ಸಕ್ಸಸ್ ನ ಸಿಕ್ಸರ್ ಗ್ಯಾರಂಟಿ ಅಲ್ವಾ. ನೀವು ಹೊಡದ ಬಾಲ್ ಬೌಂಡರಿ ಸೇರುವುದು ನಿಧಾನವಾಗಬಹುದು ಆದರೆ ಹೊಡೆದ ಬಾಲ್ ಯಾವತ್ತೂ ಹೊಡೆದಲ್ಲೆ ಗಿರಕಿಯಂತೂ ಹಾಕುದಿಲ್ಲ.ಮತ್ತೆ ಅದನ್ನು ತಡೆಯುವ ಫೀಲ್ಡರ್ ಕೂಡ ಬದುಕಿನಲ್ಲಿ ಇರೋದಿಲ್ಲ.ಒಮ್ಮೆ ಕ್ರೀಸ್ ಗೆ ಅಂಟಿಕೊಂಡರೆ ಮುಗಿಯಿತು. ಬೌಂಡರಿ,ಸಿಕ್ಸರ್ ಗಳ ಸುರಿಮಳೆ ಖಚಿತ. ನೆಟ್ಟ ಮರುದಿನವೇ ಕಲ್ಪವೃಕ್ಷ ಕಾಯಿ ಬಿಡಲಿ ಎನ್ನುವುದು, ಕುಂಡದಲ್ಲಿಟ್ಟ ತಕ್ಷಣ ಗಿಡ ಹೂ ಬಿಡಲಿ ಎನ್ನುವುದು ಸರಿಯಲ್ಲ ಎನ್ನುವುದು ನಮಗೂ ಗೊತ್ತು ನಿಮಗೂ ಗೊತ್ತು, ಈ ತಾಳ್ಮೆ ಬದುಕಿನಲ್ಲೂ ಇರಲಿ ಅಲ್ವಾ..