ದೇವಿ: ಕಂದಾ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ನಿನಗೇನು ಬೇಕು ಕೇಳು.
ಭಕ್ತ: ಅಮ್ಮಾ, ಡಿಗ್ರಿ ಮುಗಿದ ತಕ್ಷಣ ಬೆಂಗ್ಳೂರಲ್ಲಿ ಒಂದು ಕೆಲಸ ಸಿಗುವ ಹಾಗೆ ಮಾಡು.
ದೇವಿ: ತಥಾಸ್ತು.
ಎರಡು ವರ್ಷದ ನಂತರ ಮತ್ತೆ ತಪಸ್ಸಿಗೆ ಕುಳಿತ.
ದೇವಿ: ಈಗೇನು ಬೇಕು ಕಂದ?
ಭಕ್ತ: ಬಸ್ಸಿನಲ್ಲಿ ಓಡಾಡಿ ಸಾಕಾಗಿದೆ, ನನಗೊಂದು ಬೈಕ್ ಬೇಕು ತಾಯಿ.
ದೇವಿ: ತಥಾಸ್ತು.
ಎರಡು ವರ್ಷದ ನಂತರ ಮತ್ತೆ ತಪಸ್ಸಿಗೆ ಕುಳಿತ.
ದೇವಿ: ಮತ್ತೇನು ಬೇಕು ಕಂದ?
ಭಕ್ತ: ಅಮ್ಮಾ, ನನಗೊಂದು ಕಾರ್ ಬೇಕು.
ದೇವಿ: ಓಡಾಡಲು ಬೈಕ್ ಇರುವಾಗ ಕಾರ್ ಏತಕೆ?
ಭಕ್ತ: ಅಮ್ಮಾ, ಮಳೆಯಲ್ಲಿ ಬಿಸಿಲಲ್ಲಿ ಬೈಕ್ನಲ್ಲಿ ಓಡಾಡೋದು ತುಂಬಾ ಕಷ್ಟ. ಹಾಗಾಗಿ ಕಾರ್ ಬೇಕು.
ದೇವಿ: ತಥಾಸ್ತು.
ಎರಡು ವರ್ಷದ ನಂತರ ಮತ್ತೆ ತಪಸ್ಸಿಗೆ ಕುಳಿತ.
ದೇವಿ: ಈಗೇನು ಬೇಕು ಕಂದ?
ಭಕ್ತ: ಅಮ್ಮಾ, ಬಾಡಿಗೆ ಮನೆಯಲ್ಲಿದ್ದು ಸಾಕಾಗಿದೆ, ನನಗೊಂದು ಸ್ವಂತ ಮನೆ ಬೇಕು.
ದೇವಿ: ತಥಾಸ್ತು.
ಎರಡು ವರ್ಷದ ನಂತರ ಮತ್ತೆ ತಪಸ್ಸಿಗೆ ಕುಳಿತ.
ದೇವಿ ಪ್ರತ್ಯಕ್ಷವಾಗಲಿಲ್ಲ, ಮತ್ತೂ ತಪಸ್ಸು ಮಾಡಿದ, ಆಗಲೂ ಬರಲಿಲ್ಲ. ಫ್ರೀ ಟೈಮ್ ಸಿಕ್ಕಾಗಲೆಲ್ಲ ತಪಸ್ಸಿಗೆ ಕುಳಿತ!
ಇವನ ಕಿರಿಕ್ ತಡೆಯಲಾರದೆ ದೇವಿ ಪ್ರತ್ಯಕ್ಷವಾದಳು.
ದೇವಿ ಈಗ ಭಕ್ತನಿಗೆ ಮಾತನಾಡಲು ಬಿಡಲಿಲ್ಲ.
ಕಂದ, ನಾನು ಇಷ್ಟೆಲ್ಲಾ ನಿನಗೆ ಕೊಟ್ಟೆ. ನೀನು ಬೆಂಗಳೂರಿಗೆ ಕೊನೆಗೆ ಕೊಟ್ಟದ್ದೇನು ಗೊತ್ತೇ? ಹೊಗೆ, ಶಬ್ಧ, ಟ್ರಾಫಿಕ್, ದೂಳು, ತ್ಯಾಜ್ಯ.
ಭಕ್ತ ಕೇಳುತ್ತಲೇ ಇದ್ದ ಅಷ್ಟರಲ್ಲಿ ದೇವಿ ಅದೃಶ್ಯಳಾದಳು
ಭಕ್ತ: ಅಮ್ಮಾ, ಅಮ್ಮಾ. ನನಗೆ ನೆಮ್ಮದಿ ಬೇಕು. ಎಲ್ಲಿ ಹೋದೆ.
ಅಶರೀರವಾಣಿ: ಹ್ಹ ಹ್ಹ ಹ್ಹ, ಮೊದಲು ನೆಮ್ಮದಿಯಾಗೇ ಇದ್ದೆಯಲ್ಲಾ ಮಗು.
ನೀನೇ ಕೇಳಿ ಪಡೆದುಕೊಂಡದ್ದು, ತಿರುಗಿ ನೀನೇ ಕೊಟ್ಟದ್ದು. ಅದರಲ್ಲೇ ನೆಮ್ಮದಿ ಪಡೆದುಕೋ ಹೋಗು.
– ಚೇತನ್ ಕೋಡುವಳ್ಳಿ