ಅಂಕಣ

ಚಿತ್ರಗುಪ್ತನ ಕತೆಗಳು

  ‘ಚಿತ್ರಗುಪ್ತನ ಕತೆಗಳು’—(ಕತೆಗಳು)

ಲೇಖಕ; ಕೆ.ಸತ್ಯನಾರಾಯಣ

ಪ್ರಕಾಶಕರು: ಅಭಿನವ, 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಳ್ಳಿ, ಬೆಂಗಳೂರು-40

ಪ್ರಥಮ ಮುದ್ರಣ: 2015, ಪುಟಗಳು: 124, ಬೆಲೆ: ರೂ.100-00

                ಕೆ.ಸತ್ಯನಾರಾಯಣರ ಈ ಕಥಾ ಸಂಕಲನದಲ್ಲಿ ಮೂವತ್ತು ಕತೆಗಳಿವೆ. ಸಣ್ಣಕತೆಗಳ ಸಾಮಾನ್ಯವಾದ ಉದ್ದಳತೆಗಿಂತ ಈ ಕತೆಗಳು ಸಣ್ಣವು; ನಿರೂಪಣೆಯ ವಿವರಗಳಲ್ಲಿ ಕೂಡ,-ಶಾರ್ಟರ್ ಶಾರ್ಟ್ ಸ್ಟೋರೀಸ್ ಎಂದು ಕರೆಯಬಹುದಾದವು. ಇವು ಒಂದು, ಎರಡು, ಹೆಚ್ಚೆಂದರೆ ಮೂರು ಪುಟಗಳ ಮಿತಿಯಲ್ಲಿ ಮುಗಿದು ನಿಲ್ಲುತ್ತವೆ.  ಈ ಕತೆಗಳ ಕುರಿತು ಬರೆಯುವ ಮುನ್ನ ನನ್ನದೊಂದು ಕ್ಷಮಾಯಾಚನೆಯಿದೆ. 1-4-2016ರಂದು ಈ ಅಂಕಣದಲ್ಲಿ ಇದೇ ಕತೆಗಾರರ ‘ಹೆಗ್ಗುರುತು’ ಕಥಾಸಂಕಲನದ ಕುರಿತು ಬರೆಯುತ್ತ ಇವರು ಏಳು ಕಥಾಸಂಕಲನಗಳನ್ನು ತಂದಿದ್ದಾರೆ ಎಂದು ತಪ್ಪು ಮಾಹಿತಿ ನೀಡಿದ್ದೆ. ಆದರೆ ಈಗ ಸಿಕ್ಕಿರುವ ಮಾಹಿತಿಯನ್ವಯ ‘ಚಿತ್ರಗುಪ್ತನ ಕತೆಗಳು’ ಸತ್ಯನಾರಾಯಣರ ಹನ್ನೆರಡನೆಯ ಕಥಾ ಸಂಕಲನ. ಹನ್ನೆರಡರಲ್ಲಿ ಎರಡು ಆಯ್ದ ಕತೆಗಳ ಸಂಕಲನಗಳೂ ಸೇರಿವೆ. ಇವುಗಳಲ್ಲೊಂದು ಇವರ ಆಯ್ದ ಕತೆಗಳ ಮರಾಠೀ ಅನುವಾದ.

            ಈಗಾಗಲೇ  ಸತ್ಯನಾರಾಯಣ ಸಾಹಿತ್ಯದ ಹೆಚ್ಚಿನ ಎಲ್ಲಾ ಪ್ರಕಾರಗಳಲ್ಲಿಯೂ ಬರೆದು ಸೈ ಎನ್ನಿಸಿಕೊಂಡವರು. ಇತ್ತೀಚೆಗಷ್ಟೆ ಇವರ ‘ವೈವಿಧ್ಯ’ ಎನ್ನುವ ಬೃಹತ್ ಪ್ರಬಂಧ ಸಂಕಲನ ಬಂದಿದೆ. ಕಾದಂಬರಿ, ಸಣ್ಣಕತೆ, ಪ್ರಬಂಧ, ವಿಮರ್ಶೆ-ಸಾಂಸ್ಕತಿಕ ಬರೆಹ, ಅಂಕಣ ಬರಹ, ಆತ್ಮಚರಿತ್ರೆ, ಪ್ರವಾಸ ಕಥನ, ಜೀವನ ಚಿತ್ರಣ, ಗ್ರಂಥ ಸಂಪಾದನೆ-ಹೀಗೆ ಎಲ್ಲ ಪ್ರಕಾರಗಳಲ್ಲಿಯೂ ಬರೆದು ಇವರು ಯಶಸ್ಸು ಕಂಡಿದ್ದಾರೆ. ಇಷ್ಟೊಂದು ವ್ಯಾಪಕವಾದ ಬರವಣಿಗೆ ಮಾಡಿದ ಲೇಖಕನೊಬ್ಬನಿಗೆ ತಾನು ಇಷ್ಟಪಟ್ಟು ಸವೆಸಿದ ದಾರಿಯಲ್ಲಿ ಮತ್ತೆ ಮತ್ತೆ ಸಾಗುವುದು ಬೇಡಾದರೆ ಆಶ್ಚರ್ಯವಲ್ಲ. ಜೊತೆಗೆ ತಾನೇ ಸವೆಸಿದ ದಾರಿಯಲ್ಲಿ ಹೊರಟ ಬರಹಗಾರ ಎಲ್ಲಿಗೆ ಸಾಗಿದ್ದಾನೆ ಎನ್ನುವ ಊಹೆ ಓದುಗನಿಗೆ ಸಲೀಸಾಗಿ ಬಿಡುತ್ತದೆ. ಬಹುಶಃ ಎಲ್ಲ ಬರಹಗಾರರಿಗೆ ತಾನು ಓದುಗನಿಗೆ ಊಹಾತೀತನಾಗಿರಬೇಕು-ಅನ್‍ಪ್ರೆಡಿಕ್ಟಬಲ್ ಆಗಿರಬೇಕು-ಎನ್ನುವ ಒಳ ತುಡಿತವೊಂದಿರುತ್ತದೆ. ಆದ್ದರಿಂದ ಆತ ಮತ್ತೊಂದೇ ದಾರಿಯ ಹುಡುಕಾಟದಲ್ಲಿ ನಿತ್ಯ ತತ್ಪರನಾಗಿರುತ್ತಾನೆ. ‘ಚಿತ್ರಗುಪ್ತನ ಕತೆಗಳು’ ಅಂತಹ ಹುಡುಕಾಟವೊಂದರ ಫಲಿತ ಎನ್ನುವುದು ನನ್ನ ಸದ್ಯದ ಅನಿಸಿಕೆ. ಹಾಗೆಯೇ, ಕಥನದ ವಿನ್ಯಾಸ ಬದಲಾಗದೆ ಕಥಾವಸ್ತುವಿನಲ್ಲಿ ಹೊಸ ಕಾಣ್ಕೆ ಸಾಧ್ಯವಿಲ್ಲ ಎನ್ನುವ ತಾತ್ವಿಕ ಮೀಮಾಂಸೆಯೂ ಸತ್ಯನಾರಾಯಣರ ಭಿನ್ನವಾದ ಈ ಕಥನ ತಂತ್ರದ ಹಿಂದೆ ಇದ್ದಿರಬಹುದು.

             ‘ಚಿತ್ರಗುಪ್ತನ ಕತೆಗಳು’ ಕತೆಗಾರನಿಗೆ ಇಂತಹ ಹುಡುಕಾಟದ ನಡುವೆ ಆಕಸ್ಮಿಕವಾಗಿ ಹೊಳೆದು ಕಂಡು ಸಂಭವಿಸಿದ್ದು. ಈ ಸಂಭವದ ಆನಂದಾನುಭೂತಿಯಲ್ಲಿ ಮೂವತ್ತು ಕತೆಗಳನ್ನು ಆರೆಂಟು ತಿಂಗಳಲ್ಲಿ ಸತ್ಯನಾರಾಯಣ ಬರೆದಿದ್ದಾರೆ ಎನ್ನುವ ಮಾಹಿತಿಯೊಂದು ಸಿಕ್ಕಿದೆ. ಸಾಮಾನ್ಯ ಸಂದರ್ಭಗಳಲ್ಲಾದರೆ ಈ ಕತೆಗಳನ್ನು ಬರೆಯಲು ಮೂರು ವರ್ಷಗಳ ಸ್ಫೂರ್ತಿ ಬೇಕು. ಈ ಕತೆಗಳು ತಾವಾಗಿ ಆಗಿವೆ ಎನ್ನುವ ಧ್ವನಿ  ಈ ಕತೆಗಾರರ ಮಾತಿನಲ್ಲಿಯೂ ಇದೆ. “ಕೆಲವು ತಿಂಗಳುಗಳ ಹಿಂದೆ ಒಂದು ದಿನ ಹೀಗಾಯಿತು. ನಂತರ ಮತ್ತೆ ಮತ್ತೆ ಹೀಗಾಗಲು ಶುರುವಾಯಿತು,”-ಎಂದು ಇವರು “ಓದುಗರೊಡನೆ”ಯಲ್ಲಿ ಬಹಿರಂಗ ಪಡಿಸಿದ್ದಾರೆ. ತನ್ನ ಕತೆಗಳಿಂದ ಬದುಕಿನ ಕೆಲವಾದರೂ ಅಗೋಚರ ಸಂಗತಿಗಳು ದಾಖಲಾಗಬೇಕು ಎನ್ನುವುದು ಇವರ ಅಪೇಕ್ಷೆ. ಆದ್ದರಿಂದ ಈ ಕತೆಗಳಲ್ಲಿ ಬರುವ ಪಾತ್ರಗಳು ಮನುಷ್ಯನ ಬಹುಪಾಲು ಸಾಮಾನ್ಯತೆಯಿಂದ ಪ್ರತ್ಯೇಕಗೊಂಡು ನಮ್ಮ ಅಪ್ರಜ್ಞೆಯ ಪಾತಳಿಯಲ್ಲಿ ಮರುಕಳಿಸುತ್ತಲೇ ಇರುವ, ಆದರೆ ನಮ್ಮ ಅರಿವಿಗೆ ಬಂದಾಗ ಅನ್ಯವೆನ್ನಿಸುವ ಹಲವಾರು ಸಂಗತಿಗಳನ್ನು ಎದುರಾಗಿಸುತ್ತವೆ. ಹೀಗೆ ನಿಗೂಢಗಳನ್ನು ಎದುರಾಗಿಸುವವನು ಸಾಮಾನ್ಯ ಮನುಷ್ಯನಾಗಲಾರ, ಅವನು ಚಿತ್ರಗುಪ್ತನೇ. ಆದ್ದರಿಂದ ಇವು ಚಿತ್ರಗುಪ್ತನ ಕತೆಗಳು.

             ಈ ಕತೆಗಳಿಂದ ಮನುಷ್ಯರನ್ನು ಕಾಣಲೋಸುಗ ಕತೆಗಾರ ಇಲ್ಲಿ ವಾಸ್ತವದ ನೆಲೆಗಿಂತ ತುಸು ಎತ್ತರದಲ್ಲಿ, ತುಸು ದೂರದಲ್ಲಿ, ನಿಲ್ಲುತ್ತಾರೆ. ‘ಶೀಲವಂತರ ಅಫಿದಾವಿಟ್’, ಹಾಗೂ ‘ಫಾದರ್ಸ್ ಡೆ’ ಕತೆಗಳಲ್ಲಿ ನಾನಿದನ್ನು ಕಂಡಿದ್ದೇನೆ. ‘ಫಾದರ್ಸ್ ಡೆ’ಯಲ್ಲಿ ಒಂದು ನಿಬಂಧಸ್ಪರ್ಧೆ. ಅದರಲ್ಲಿ ಭಾಗವಹಿಸಲು ಜನರ ನೂಕುನುಗ್ಗಲಿದೆ. ಮೈಕಿನ ಮೂಲಕ ಸ್ಪರ್ಧೆಗೆ ಮೂರು ವಿಷಯಗಳನ್ನು ಘೋಷಿಸಲಾಗುತ್ತದೆ. ಸ್ಪರ್ಧೆಗೆ ಕೊಟ್ಟ ವಿಷಯಗಳನ್ನು ಕೇಳಿದಾಕ್ಷಣ ಹಲವರಿಗೆ ಅಸಹ್ಯದಿಂದ ವಾಂತಿಯಾಗುತ್ತದೆ, ಜನ ನುಗ್ಗಿ ವೇದಿಕೆಯನ್ನು ಧ್ವಂಸ ಮಾಡುತ್ತಾರೆ ಹಾಗೂ ಮನೆಗೆ ಓಡಿ ತಮ್ಮ ತಮ್ಮ ತಂದೆಯರ ಪಾದಪೂಜೆ ಮಾಡುತ್ತಾರೆ. ಒಂದೇ ಪುಟದ ಈ ಕತೆಯಲ್ಲಿ ತಂದೆಯರ ಕುರಿತು ಜನರಿಗೆ ಹಿಂದೆಂದೂ ಪ್ರಕಟವಾಗಿರದ ಭಾವನೆಗಳು ಪ್ರಕಟವಾಗುತ್ತವೆ. ‘ಶೀಲವಂತರ ಅಫಿದಾವಿಟ್’ ಕತೆಯ ಸ್ವಾರಸ್ಯ ಬೇರೆ. ಇದರಲ್ಲಿ, ಗುಣಶೀಲ ಶೆಟ್ಟರು ‘ನೋಡು, ಈಗ ನಮಗಿರುವ ಮೂರು ಮಕ್ಕಳು ಕೂಡ ನನ್ನದಲ್ಲ’ ಎನ್ನುವ ಮೂಲಕ ಹೆಂಡತಿಯನ್ನು ಗಾಬರಿಗೊಳಿಸಿಬಿಡುತ್ತಾರೆ. ಈ ಕತೆಯ ತರ್ಕದಲ್ಲಿ ಶೇಕಡಾ ತೊಂಬತ್ತರಷ್ಟು ಜನ ಸಿಕ್ಕಿ ಬೀಳುತ್ತೇವೆ. ನಾನು ಈ ಕತೆಗಳ ಮಜಕೂರನ್ನು ಮಾತ್ರ ಹೇಳುತ್ತಿದ್ದೇನೆ.  ಇವೇ ಈ ಸಂಕಲನದ ಬೆಸ್ಟ್ ಕತೆಗಳಲ್ಲ. ಸಂಕಲನದ ಮುಖ್ಯ  ಕತೆಗಳು ನಾನು ಕಾಣುವಂತೆ ‘ಭಾಷೆ ಮತ್ತು ನಗು’, ‘ಸಾವಿನ ಬಣ್ಣ’, ‘ಎಂ.ವಿ.ಕೊನೆಯ ಬಯಕೆ’, ‘ಶಿವಂಗಿ ಸ್ವಾಮಿ’, ‘ಪಾತ್ರ, ನಟ ಮತ್ತು ನಿಜ’,’ವೈಶಂಪಾಯನದಲ್ಲಿ ಪಾಲು’, ಮತ್ತು ‘ಸ್ವಾಮಿ ಮತ್ತು ನಾಯಿ’. ಹೆಚ್ಚಿನ ಕತೆಗಳು ನಡೆಯುವುದು ಇಲ್ಲಿ ಸ್ವಪ್ನಸದೃಶ ವಾಸ್ತವದಲ್ಲಿ. ಇದರ ಕುರುಹು ನನಗೆ ‘ಹೆಗ್ಗುರುತು’ ಸಂಕಲನದ ‘ಮಾಸ್ತಿಗನ್ನಡಿ’ಯಲ್ಲಿಯೇ ಕಂಡಿತ್ತು. ‘ಚಿತ್ರಗುಪ್ತನ ಕತೆಗಳ’  ಒಂದು ಇಡೀ ಕತೆ ಹೀಗಿದೆ:

                                ‘ದೃಷ್ಟಿ-ಅದೃಷ್ಟ’

                                   *************

“ಪಾಪನಾಶನಂ ವೆಂಕಟಾಚಲಂಗೆ ಡಯಾಬಿಟಿಸ್ ಶುರುವಾಯಿತು. ಶುರುವಾದದ್ದು ಜಾಸ್ತಿಯಾಗುತ್ತಾ, ಜಾಸ್ತಿಯಾಗುತ್ತಾನೇ ಹೋಯಿತು. ಒಂದು ಹಂತದಲ್ಲಿ ದೃಷ್ಟಿ ಹೋಯಿತು. ವಿಚಾರಿಸಲೆಂದು ಮನೆಯವರೆಲ್ಲಾ ಹೋದೆವು. ಕುರುಡರಾಗಿದ್ದರೂ ಲಾಭವಿಲ್ಲವೆಂದರು. ದೃಷ್ಟಿ ಹೋಗುವುದಕ್ಕೆ ಮುಂಚೆ ಕಂಡದ್ದು, ಕಾಣುತ್ತಿದ್ದುದೇ-ಮನಸ್ಸಿಗೆ ಬರುತ್ತಿದ್ದುದೇ ಈಗಲೂ ಮತ್ತೆ ಮತ್ತೆ ಮೂಡುತ್ತೆ. ಅದೇ ಮೂಡುತ್ತೆ. ಕುರುಡನಾದ ಮೇಲೂ ನನಗೆ ಅದೃಷ್ಟವಿಲ್ಲವೆಂದರು.”

             ಪುಟದ ಮಿತಿಯಿಲ್ಲದಿದ್ದರೆ ನಾನು ಇಂದಿನ ಅಂಕಣದಲ್ಲಿ ಈ ಕತೆಯ ಬದಲು ‘ಭಾಷೆ ಮತ್ತು ನಗು’ಕತೆಯನ್ನು ಪೂರ್ತಿ ಕೊಡುತ್ತಿದ್ದೆ. ಒಟ್ಟಿನಲ್ಲಿ ಕತೆಗಾರ ಕಥನದ ನೆಲೆ ಬದಲಿಸಿದ್ದರಿಂದ ಮತ್ತು, ನಿರೂಪಕ ತನಗೆ ಸಹಜವಾಗಿಯೇ ಪ್ರಾಪ್ತವಾಗುವ ಅಹಂಕಾರದಿಂದ ಬಿಡುಗಡೆ ಪಡೆದ ಕಾರಣ ಈ ಕತೆಗಳು ನಮಗೆ ನಮ್ಮ ಹೊಸ ಗುರುತುಗಳನ್ನು ತೋರಿಸಿಕೊಡಬಲ್ಲವಾಗಿವೆ. ಮುನ್ನುಡಿಯಲ್ಲಿ ಕೆ.ಪಿ.ಸುರೇಶ್ “ತಾನು ನೋಡುತ್ತಿರುವ ಸತ್ಯ ಇಷ್ಟು ದಿನ ಕಾಣದೇ ಇದ್ದದ್ದು ಎಂಬ ಅರಿವು ಈ ಕತೆಗಳನ್ನು ದಟ್ಟಗೊಳಿಸಿವೆ’ ಎನ್ನುತ್ತಾರೆ. ಈ ಮಾತಿನೊಡನೆ ನನಗೂ ಸಹಮತವಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

R D Hegade Aalmane

ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!