ಅಂಕಣ ವಾಸ್ತವ

ಜನಸಾಮಾನ್ಯ ನಡೆಯೋದು ಬೇಡ್ವೇ?

ಓ ಅಲ್ಲಿ ಬಲಕ್ಕೆ ತಿರುಗಿ. ಅಲ್ಲೇ ಒಂದು ಬೋರ್ಡು ಕಾಣಿಸುತ್ತದೆ. ಸಿಟಿ ಬ್ಯಾಂಕಿದ್ದು. ಅದರ ಪಕ್ಕದಲ್ಲೇ ಎಡಕ್ಕೆ ತಿರುಗಿ. ಹಾಗೆ ಸರ್ತ ಬನ್ನಿ. ಅಲ್ಲೇ ಇದೆ ನಮ್ಮ ಆಫೀಸು….

ಹೀಗೆ ಸಾಗುತ್ತದೆ ದೂರವಾಣಿಯಲ್ಲಿ ದಾರಿ ಹೇಳುವ ಪರಿ.

ಬೆಳೆದ ಬೆಂಗಳೂರು, ಬೆಳೆಯುತ್ತಿರುವ ಮಂಗಳೂರು, ಬೆಳೆಯುವ ಹುಮ್ಮಸ್ಸಿನಲ್ಲಿರುವ ಬಂಟ್ವಾಳದಂಥ ಮೆಟ್ರೋ, ಮಹಾನಗರ, ನಗರದಲ್ಲಿ ನಿಮ್ಮ ಅಥವಾ ನೀವು ಕೆಲಸ ಮಾಡುತ್ತಿರುವ ಕಚೇರಿ ಅಡ್ರೆಸ್ ಹೇಳುತ್ತೀರಿ.

ನಿಮ್ಮ ಸ್ನೇಹಿತ ದೂರವಾಣಿ ಕರೆ ಸ್ವೀಕರಿಸಿ ಬರುತ್ತಾರಾದರೂ ಹೇಗೆ?ನಡೆದುಕೊಂಡು ಬರುತ್ತಾರೆ ಎಂದಾದರೆ ಫುಟ್ ಪಾತ್ ಇಲ್ಲ. ಬೈಕು, ಕಾರಿನಲ್ಲಿ ಬರುತ್ತಾರೆ ಎಂದಾದರೆ ಪಾರ್ಕಿಂಗ್ ಜಾಗ ಇಲ್ಲ.

ಹಾಗಾದರೆ ನಾವು ನಡೆಯುವ ದಾರಿ ಎಲ್ಲಿ ಹೋಯಿತು?

ಮಾಯವಾಯಿತೇ? ಮಹಾನಗರಗಳು ದೈತ್ಯಾಕಾರವಾಗಿ ಬೆಳೆಯುತ್ತಿರುವುದೇನೋ ನಿಜ. ಆದರೆ ಎಲ್ಲಿಯೂ ಪಾದಚಾರಿಗಳಿಗೆ ಅಸ್ತಿತ್ವವೇ ಇಲ್ಲವೆಂಬಂಥ ಪರಿಸ್ಥಿತಿ. ಎಲ್ಲಿ ನೋಡಿದರೂ ಭೂಕಬಳಿಕೆ. ನಡೆದಾಡಲೂ ಜಾಗವಿಲ್ಲ, ಬೈಕು ನಿಲ್ಲಿಸಲೂ ಜಾಗವಿಲ್ಲ, ಕಾರು ನಿಲ್ಲಿಸಲು ಜಾಗವೇ ಇಲ್ಲ.

ಇಂಥದ್ದಕ್ಕೆಲ್ಲ ಯಾರು ಹೊಣೆ ಎಂಬ ಪ್ರಶ್ನೆಗೆ ನಾವು ಕನ್ನಡಿ ನೋಡಬೇಕು. ಏಕೆಂದರೆ ಇಂಥ ಬೆಳವಣಿಗೆಗೆ ಪರೋಕ್ಷವಾಗಿ ನಾಗರಿಕರು ಎನಿಸಿಕೊಂಡ ನಾವೂ ಹೊಣೆ ಹೊರಬೇಕಾಗುತ್ತದೆ.

ಹೆಸರಿಗಷ್ಟೇ ಫುಟ್ ಪಾತ್. ಇದು ಕಾಲ್ನಡಿಗೆಯಲ್ಲಿ ಸಂಚರಿಸುವವರ ಹಕ್ಕಿನ ಜಾಗ. ಅಲ್ಲಿ ವ್ಯಾಪಾರಿಗಳು ತಮ್ಮ ಹಕ್ಕು ಸ್ಥಾಪಿಸಿ ನಿಲ್ಲುತ್ತಾರೆ. ಹಾಗಾದರೆ ನಾವು ಎಲ್ಲಿ ನಡೆದುಕೊಂಡು ಹೋಗಬೇಕು. ಮತ್ತೆ ಡಾಂಬರು ಅಥವಾ ಕಾಂಕ್ರೀಟ್ ರಸ್ತೆಗೆ ಕಾಲಿಡಬೇಕು.

ಈ ವ್ಯಾಪಾರಿಗಳನ್ನು ಫುಟ್ ಪಾತ್ ವ್ಯಾಪಾರಿಗಳು ಎಂದೇ ಹೇಳುತ್ತಾರೆ. ಏನಾದರೂ ಯಾಕೆ ಸ್ವಾಮೀ ನಮಗೆ ನಡೆದಾಡಲು ಜಾಗ ಎಲ್ಲಿ ಎಂದು ನೀವು ಕೇಳಿದಿರಿ ಎಂದಾದರೆ ಕೇಳಿದ್ದೇ ತಪ್ಪು ಎಂಬಂತೆ ಒಂದಷ್ಟು ಜನ ಮೈಮೇಲೆ ಬರುತ್ತಾರೆ. ಅವರ ಬೆಂಬಲಕ್ಕೆ ಸಂಘಟನೆಗಳು ಬರುತ್ತವೆ. ಆದರೆ ಪಾದಚಾರಿಗಳ ಬೆಂಬಲಕ್ಕೆ ಯಾರು ನಿಲ್ಲುತ್ತಾರೆ?

ಅದೇ ಸ್ಥಿತಿ ವಾಣಿಜ್ಯ ಸಂಕೀರ್ಣಗಳಲ್ಲಿ ವ್ಯಾಪಾರಕ್ಕೆಂದು ಬರುವವರದ್ದು.

ಎಲ್ಲಿಯೂ ಪಾರ್ಕಿಂಗ್ ಗೆ ಜಾಗವಿಲ್ಲ. ಅಂದವಾದ ಕಟ್ಟಡವೇನೋ ನಿರ್ಮಾಣವಾಗುತ್ತದೆ. ಅದರ ಮುಂದೆ ನೋ ಪಾರ್ಕಿಂಗ್ ಬೋರ್ಡ್ ಇರುತ್ತದೆ. ಅದೇ ಕಟ್ಟಡಕ್ಕೆ ವ್ಯಾಪಾರಕ್ಕೆಂದು ಬರುವ ಗ್ರಾಹಕರು, ಕಚೇರಿಗೆಂದು ಬರುವವರು ಎಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬೇಕು? ಪ್ರತಿಯೊಂದು ಬಹುಮಹಡಿ ಕಟ್ಟಡದ ಕೆಳ ಅಂತಸ್ತು ಪಾರ್ಕಿಂಗ್ ಗೆ ಎಂದು ನಿಗದಿಯಾಗಬೇಕು. ಆದರೆ ಅವುಗಳಲ್ಲೆಲ್ಲ ವ್ಯಾಪಾರ ವಹಿವಾಟು ನಡೆಯುತ್ತದೆ. ಹೊರಭಾಗದಲ್ಲೂ ನಿಲ್ಲಲು ಜಾಗವಿಲ್ಲ, ಪಾರ್ಕಿಂಗ್ ಕೂಡ ಇಲ್ಲ. ಫುಟ್ ಪಾತ್ ಕೂಡ ಅತಿಕ್ರಮಣವಾಗಿರುತ್ತದೆ.

ಹಾಗಾದರೆ ಜನಸಾಮಾನ್ಯ ನಡೆಯುವುದು ಯಾವ ಜಾಗದಲ್ಲಿ, ವಾಹನ ಸವಾರರಿಗೆ ನಿಲ್ಲಿಸಲು ಎಲ್ಲಿದೆ ಜಾಗ

ಇಂಥ ಮೂಲಭೂತ ಪ್ರಶ್ನೆಗಳನ್ನು ಇಟ್ಟುಕೊಂಡು ಆಡಳಿತದ ಬಳಿ ಪ್ರಶ್ನಿಸಿದರೆ ಸಿದ್ಧ ಉತ್ತರ ಸಿಗುತ್ತದೆ. ಕಾದು ನೋಡಿ ಎಲ್ಲಾ ಸರಿಯಾಗುತ್ತದೆ. ಆದರೆ ಯಾವುದಕ್ಕೂ ಗಡುವು ಇಲ್ಲ. ಇಂಥ ಬಳಕೆದಾರರ ಪರ ಯಾರೂ ನಿಲ್ಲುವುದಿಲ್ಲ.

ಏಕೆಂದರೆ ಪಾದಚಾರಿಗಳಿಗೆ, ಪಾರ್ಕಿಂಗ್ ಗೆ ಪರದಾಡುವವರಿಗೆ ಸಂಘಟನೆಯೂ ಇಲ್ಲ, ಅವರು ಓಟ್ ಬ್ಯಾಂಕೂ ಅಲ್ಲ!

Facebook ಕಾಮೆಂಟ್ಸ್

ಲೇಖಕರ ಕುರಿತು

Harish mambady

ಕಳೆದ ಹದಿನಾರು ವರ್ಷಗಳಿಂದ ಹೊಸ ದಿಗಂತ, ಉದಯವಾಣಿ, ತರಂಗ, ಕನ್ನಡಪ್ರಭ ಹಾಗೂ ವಿಜಯವಾಣಿಯಲ್ಲಿ ಉಪಸಂಪಾದಕ, ವರದಿಗಾರ ಹಾಗೂ ಮುಖ್ಯ ಉಪಸಂಪಾದಕನ ಜವಾಬ್ದಾರಿ ನಿಭಾಯಿಸಿರುವ ಹರೀಶ ಮಾಂಬಾಡಿ ಸದ್ಯ ಫ್ರೀಲ್ಯಾನ್ಸ್ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಸಮಕಾಲೀನ ವಿದ್ಯಮಾನ,  ಸಿನಿಮಾ ಕುರಿತ ಲೇಖನಗಳು, ಬರೆಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.  ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್ ನಿವಾಸಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!