ಅಂಕಣ

ಕನ್ನಡ ಸಾರಸತ್ವ ಲೋಕ ಕಂಡ ಸರಸ್ವತಿಯ ಕಂದ – ಆನಂದ ಕಂದ

ಬೆಟಗೇರಿ ಕೃಷ್ಣಶರ್ಮರ ಕುರಿತು ತಿಳಿಯುವ ಉತ್ಕಟ ಅಪೇಕ್ಷೆಯಿಂದ ಅಂತರಜಾಲವನ್ನು ಜಾಲಾಡಿದಾಗ ನನಗೆ ನಿರಾಸೆ ಕಾದಿತ್ತು. ಎಲ್ಲಿಯೂ ಆನಂದ ಕಂದರ ಕುರಿತು ಪರಿಪೂರ್ಣ ಮಾಹಿತಿ ದೊರಕಲಿಲ್ಲ. ಅವರ ಆತ್ಮ ಕಥೆ ‘ನನ್ನ ನೆನಪುಗಳು’ ಹಾಗೂ ಅವರ ಇತರ ಪುಸ್ತಕಗಳ ಕುರಿತು ಆನ್ ಲೈನ್’ನಲ್ಲಿ ತಡಕಾಡಿದರೆ ಎಲ್ಲೂ ಪುಸ್ತಕಗಳು ಲಭ್ಯವಿರಲಿಲ್ಲ. ಅಚ್ಚರಿಯ ಸಂಗತಿಯೆಂದರೆ ಮೊನ್ನೆ ಹುಬ್ಬಳ್ಳಿಯಲ್ಲಿ ಸಪ್ನಾ,  ವಿಜಯ ಬುಕ್ ಹೌಸ್ ಹಾಗೂ ಸಕಲ ಸಾಹಿತ್ಯಿಕ ಪುಸ್ತಕಗಳ ಉಗ್ರಾಣವಾದ ‘ಸಾಹಿತ್ಯ ಭಂಡಾರ’ ದಲ್ಲಿಯೂ ಬೆಟಗೇರಿ ಕೃಷ್ಣಶರ್ಮರ ಯಾವುದೇ ಪುಸ್ತಕ ಸಿಗಲಿಲ್ಲ. ಸಾಹಿತ್ಯ ಲೋಕದಲ್ಲೇ ಆನಂದ ಕಂದರ ಸಾಧನೆಯನ್ನು   ಮರೆಮಾಚುವ ವ್ಯವಸ್ಥಿತ ಪಿತೂರಿ ಅಥವಾ ಹುನ್ನಾರವೇನಾದರೂ ನಡೆದಿದೆಯಾ!! ಎನ್ನುವ ಸಂಶಯ ನನ್ನನ್ನು ಕಾಡುತ್ತಿದೆ. ಬೆಟಗೇರಿ ಕೃಷ್ಣಶರ್ಮರು ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರಕ್ಕೆ ಅಪರಮಿತ ಕೊಡುಗೆ ನೀಡಿದ ಮಹಾನ್ ಚೇತನ, ಸಾಹಿತ್ಯದ ಸಕಲ ಆಯಾಮಗಳ ಸವಿಯನ್ನು ನೀಡುವ ಆನಂದ ಕಂದರ ಕೃತಿಗಳ  ಮಧು-ಮಕರಂದದಿಂದ   ಇಂದಿನ ಪೀಳಿಗೆಯ ಓದುಗರು ಹಾಗೂ ಕನ್ನಡ ಸಾಹಿತ್ಯ ಪ್ರೀಯರು ವಂಚಿತರಾಗುತ್ತಿದ್ದಾರೆ.

ಆನಂದ ಕಂದ ಎಂದಾಕ್ಷಣ ನೆನಪಿಗೆ ಬರುವುದು ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಎಂಬ ಕನ್ನಡ ನಾಡು ನುಡಿಯ ನಮನದ ಕವನ.  ಕನ್ನಡ ನಾಡು ಕಂಡ ಅತ್ಯಂತ ಪ್ರತಿಭಾನ್ವಿತ, ಕನ್ನಡ ಸಾರಸತ್ವ ಲೋಕದ ಕವಿ ಭೂಷಣ  ಆನಂದ ಕಂದ ಕಾವ್ಯನಾಮದಿಂದ ಚಿರಪರಿಚಿತರಾದವರೇ ಬೆಟಗೇರಿ ಕೃಷ್ಣಶರ್ಮರು. ಕವನ ,ಸಣ್ಣಕಥೆ,ಕಾದಂಬರಿ , ರೂಪಕ , ಚರಿತ್ರೆ ,ಶಿಶು ಸಾಹಿತ್ಯ, ಮೀಮಾಂಸೆ ,ವಿಮರ್ಶೆ, ಜಾನಪದ ಮತ್ತು ಪತ್ರಿಕಾ ಸಂಪಾದನೆಗಳಂತಹ ನಿರಂತರ ಕಾಯಕಗಳ ಮೂಲಕ ಕರ್ಮಯೋಗಿಯಾಗಿ ಕನ್ನಡದ ಪರಿಮಳವನ್ನು ನಾಡಿನಾದ್ಯಂತ ಪಸರಿಸಿದ ಕನ್ನಡದ ಕಂದ ಈ ನಮ್ಮ ಆನಂದ ಕಂದ. ಶ್ರೀನಿವಾಸರಾವ್ ಮತ್ತು ರಾಧಾಬಾಯಿ ಬಡ ದಂಪತಿಗಳಿಗೆ 19-04-1900 ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಜನಿಸಿ, ಬಾಲಕರಾಗಿರುವಾಗಲೇ ಮಾತಾಪಿತೃ ಹಾಗೂ ಭ್ರಾತೃ ವಿಯೋಗಕ್ಕೊಳಗಾದರು. ಖುದ್ದು ಕೃಷ್ಣಶರ್ಮರು 15ನೇ ವಯಸ್ಸಿನಲ್ಲಿ ವಿಷಮ ಶೀತ ಜ್ವರ ಹಾಗೂ ಪ್ಲೇಗ್’ಗೆ ತುತ್ತಾದರೂ ಪವಾಡ ಸದೃಶ್ಯರಾಗಿ ಬಹುಶಃ  ಕನ್ನಡ ನಾಡಿನ ಋಣ ತೀರಿಸಲು ಬದುಕುಳಿದರು.  ಇದರಿಂದ ಅವರ ಕೈ ಕಾಲುಗಳು ಜೀವನ ಪರ್ಯಂತ ದುರ್ಬಲವಾಗಿ, ಅವರಿಗೆ ನಡೆದಾಡುವಲ್ಲಿ ಹಾಗೂ ಬರೆಯುವಾಗ ಅಡಚಣೆಯುಂಟು ಮಾಡಿದವು. ಇದ್ಯಾವುದು ಅವರ ಜೀವನೋತ್ಸಾಹವನ್ನು ಕುಗ್ಗಿಸಲಿಲ್ಲ ಬದಲಿಗೆ ನವ ಚೈತನ್ಯದಿಂದ, ಅವಿರತ ಪರಿಶ್ರಮದಿಂದ ಸಾಧನೆಯ ಹಾದಿಯಲ್ಲಿ ಮುನ್ನಡೆದರು.

ಬೆಟಗೇರಿ ಕೃಷ್ಣಶರ್ಮರು 5ನೆಯ ತರಗತಿವರೆಗೆ ಬೆಟಗೇರಿಯಲ್ಲೇ ಕಲಿತು ಮುಂದೆ ತಂದೆಯ ಅಕಾಲಿಕ ಮೃತ್ಯುವಿನಿಂದ ಕಂಪಿಸುವ ಕಾಲುಗಳಿಂದ ಮಮದಾಪುರಕ್ಕೆ ಹೋಗಿ ಶಿಕ್ಷಣವನ್ನು ಮುಂದುವರಿಸಿ 1917ರಲ್ಲಿ ಬೆಳಗಾವಿಗೆ ಹೋಗಿ ಮುಲ್ಕಿ (7ನೇ ತರಗತಿ) ಪರೀಕ್ಷೆ ಬರೆದದ್ದೇ ಅವರ ಕೊನೆ ಪರೀಕ್ಷೆ . ಅಲ್ಲಿಗೆ ಅವರ ಶಿಕ್ಷಣ ಮೊಟಕುಗೊಂಡಿದ್ದರೂ ಅವರ ಕಲಿಕೆಯ ಹಸಿವು ಹಾಗೂ ಜ್ಞಾನಾಕಾಂಕ್ಷೆ  ಹಿಂಗಿರಲಿಲ್ಲ, ಅವರ ಪ್ರಯತ್ನದ ಪ್ರತಿಫಲವೆಂಬಂತೆ  ಕನ್ನಡ, ಸಂಸ್ಕೃತ ಹಾಗೂ ಮರಾಠಿ ಭಾಷೆಗಳ ಮೇಲೆ  ಅಗಾಧ ಪಾಂಡಿತ್ಯ ಮತ್ತು ಪ್ರಭುತ್ವವನ್ನು ಹೊಂದಿದ್ದರು. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಅವರು ಕರಗತ ಮಾಡಿಕೊಂಡಿದ್ದರು. ಬೆಟಗೇರಿ ಕೃಷ್ಣಶರ್ಮರು ವೃತ್ತಿಜೀವನ ಪ್ರಾರಂಭಿಸಿದ್ದು ಬೆಳಗಾವಿಯ ಮುನಸಿಪಾಲಿಟಿಯ ಆರೋಗ್ಯ ಇಲಾಖೆಯಲ್ಲಿ, ಇಲಿಯ ಬಲೆಗಳನ್ನು ಜನರಿಗೆ ಹಂಚಿ ನಂತರ ಇಲಿಯ ಸಹಿತವಾಗಿ ಬಲೆಗಳನ್ನು ಮರಳಿ ತಂದು ಕೊಡುವದೇ ಇವರ ಕೆಲಸ! ಕೆಲ ದಿನಗಳಲ್ಲೇ ಈ ಕೆಲಸವನ್ನು ತ್ಯಜಿಸಿ ಬೆಳಗಾವಿಯ ರಾಷ್ಟ್ರೀಯ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಅಲ್ಲಿ ಶ್ರೀ ಗಂಗಾಧರರಾವ್ ದೇಶಪಾಂಡೆ ಹಾಗೂ ಮುಂತಾದ  ಗಣ್ಯರ ಸಂಪರ್ಕದಿಂದ ಬೆಟಗೇರಿ ಕೃಷ್ಣಶರ್ಮರು ರಾಷ್ಟ್ರೀಯತೆಯ ಕಹಳೆಯನ್ನು ಮೊಳಗಿಸಿ, ರಾಷ್ಟ್ರೀಯತೆ ಕುರಿತಾಗಿ ಅನೇಕ ಕವನಗಳನ್ನು ಬರೆಯುತ್ತಾರೆ. 1918ರಲ್ಲಿ ಬೆಟಗೇರಿ ಕೃಷ್ಣಶರ್ಮರ ಪ್ರಥಮ ಕವನ ‘ಭಕ್ತಿ ಕುಸುಮಾವಳಿ’ ಸುಪ್ರಭಾತ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇವರು ಬರೆದ ಭಾವನಾತ್ಮಕವಾದ  ಹಾಡುಗಳು ಜನರ ಮನದ ನಾಡಿಯ ಮೀಟಿ ರಾಷ್ಟ್ರೀಯತೆ ಮತ್ತು ದೇಶಾಭಿಮಾನವನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು. ಇಂತಹ ಕೆಲ ಹಾಡುಗಳು ರಾಷ್ಟ್ರೀಯ ಪಂದ್ಯಾವಳಿ, ಗಾಂಧೀ ಗೀತ ಸಪ್ತಕ , ರಾಷ್ಟ್ರೀಯ ಪದ್ಯಮಾಲೆ ಎಂಬ ಹೆಸರಿನಿಂದ 1921ರಲ್ಲಿ ಬೆಳಗಾವಿಯಲ್ಲಿ ಮುದ್ರಣಗೊಂಡವು. ಈ ಹಾಡುಗಳು ತಾಳಕ್ಕೆ ತಕ್ಕಂತೆ ಹೆಜ್ಜೆ  ಹಾಕಿ ಪಥಸಂಚಲನ ಮಾಡುವದಕ್ಕೆ  ಹೇಳಿ ಮಾಡಿಸಿದಂತಿದ್ದವು.ಹೀಗಾಗಿ ಇವುಗಳನ್ನು ಹೆಜ್ಜೆಯ ಹಾಡುಗಳೆಂದೂ ಕರೆಯುತ್ತಿದ್ದರು.

ಇವರ ಮೇರು ಕೃತಿಯಾದ  ‘ಎನಿತು ಇನಿದು ಈ ಕನ್ನಡ ನುಡಿಯು, ಮನವನು ತಣಿಸುವ ಮೋಹನ ಸುಧೆಯು’ ಮರಾಠಿಮೋಹಿತವಾದ ಬೆಳಗಾವಿಯಲ್ಲಿ ಕನ್ನಡದ ಕಿಚ್ಚನ್ನು ಹಚ್ಚಿ ಕನ್ನಡಿಗರಲ್ಲಿ ಕನ್ನಡದ ಜಾಗೃತಿಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಇದೆ ವೇಳೆ ‘ಮಾತೃಭೂಮಿ’ ಪತ್ರಿಕೆಯ ಸಂಪಾದಕರಾದರು. ನಂತರ  ಧಾರವಾಡಕ್ಕೆ ಬಂದು 1925ರಲ್ಲಿ ‘ಸ್ವಧರ್ಮ್’ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿದರು ಮುಂದೆ ‘ಜಯಕರ್ನಾಟಕ’ಪತ್ರಿಕೆಯ ಸಂಪಾದಕರೂ ಆದರು.ಕನ್ನಡದ ಏಳಿಗೆಗಾಗಿ ಧಾರವಾಡದಲ್ಲಿ ’ಮನೋಹರ ಗ್ರಂಥಮಾಲೆ’ ಪ್ರಾರಂಭಕ್ಕೆ ಪ್ರೇರಣೆಯಾದರು. ನವರಾತ್ರಿಯನ್ನು ನಾಡಹಬ್ಬವಾಗಿ ಆಚರಿಸುವಂತೆ ಕರೆ ಕೊಟ್ಟು ಕನ್ನಡದ  ಜಾಗೃತಿಯ ಕಾರ್ಯಕ್ಕೆ ಅಡಿಪಾಯವಿಟ್ಟರು.

ಧಾರವಾಡದ ರಾಷ್ಟ್ರೀಯ ಶಾಲೆ ಮುಚ್ಚಿದ ನಂತರ ಬೆಂಗಳೂರಿನ ಆರ್ಯ ವಿದ್ಯಾ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಂಡರು. ಅಲ್ಲಿ ದೇವುಡು, ಮಾಸ್ತಿ ಮುಂತಾದವರ ಪರಿಚಯ ಮತ್ತು ಒಡನಾಟದಿಂದ  ಅವರ ಪ್ರತಿಭೆ ಅರಳಿ ಪಾಂಡಿತ್ಯ ವೃಧ್ಧಿಸಿತು. ಈ ವೇಳೆಗಾಗಲೇ ಸಾಹಿತ್ಯ ಲೋಕದಲ್ಲಿ ಸಾಹಿತಿಗಳ ಬಳಗದಲ್ಲಿ ಆನಂದ ಕಂದರ  ಕೃತಿಗಳು ವಿಶೇಷ ಆಸಕ್ತಿ ಹುಟ್ಟಿಸುವಲ್ಲಿ ಯಶಸ್ವಿಯಾಗಿದ್ದವು. ಈ ಅವಧಿಯಲ್ಲಿ ‘ಮುದ್ದನ ಮಾತು’ ಮತ್ತು ‘ಅರುಣೋದಯ’ ಎಂಬೆರಡು ಕವನ ಸಂಕಲನಗಳನ್ನು ಪ್ರಕಟಿಸಿ ಸಾಹಿತ್ಯ ಪ್ರಿಯರ ಪ್ರಶಂಸೆಗೆ ಪಾತ್ರರಾಗಿ ಶ್ರೇಷ್ಠ ಕವಿಗಳ ಸಾಲಿಗೆ ಸೇರಿದರು. ಇವರ ವಿಶಿಷ್ಟ ಧ್ವನಿ ಮತ್ತು ಕಾವ್ಯ ವಾಚನದ ಶೈಲಿ ಸಾಹಿತ್ಯಾಸಕ್ತರನ್ನು ಆಕರ್ಷಿಸಿತ್ತು. 1931 ರಲ್ಲಿ ‘ಬಡತನದ ಬಾಳು’ ಎಂಬ ಸಣ್ಣಕಥೆಗಳ ಸಂಕಲನ ಮತ್ತು 1933ರಲ್ಲಿ ಇವರ ಪ್ರಥಮ ಕಾದಂಬರಿ ‘ಸುದರ್ಶನ’ ಪ್ರಕಟವಾದವು. ಈ ಕೃತಿಗಳು ಬೆಟಗೇರಿ ಕೃಷ್ಣಶರ್ಮರನ್ನು ಅಗ್ರಗಣ್ಯ ಸಾಹಿತಿಗಳ ಪಂಕ್ತಿಗೆ ಏರಿಸಿದವು.

ಬೆಟಗೇರಿ ಕೃಷ್ಣಶರ್ಮರು ಬಡತನದ ಬೆಯ್ಗೆಯಲ್ಲಿ ಬೆಂದು ಬಾಡಿಗೆಯ ಮನೆಯಲ್ಲಿ ವಾಸ ಮಾಡಿದರೂ ಸಾಹಿತ್ಯದ ಕಾಯಕವನ್ನು ಮಾತ್ರ ದೈವ ಶ್ರದ್ಧೆಯಿಂದ ಮಾಡಿಕೊಂಡು ಬಂದರು.1938ರಲ್ಲಿ ‘ಜಯಂತಿ’ ಪತ್ರಿಕೆಯ ಸಂಪಾದಕರಾಗಿ 1961ರವರೆಗೂ ಅದನ್ನು ಮುನ್ನಡೆಸಿ ನವ ಲೇಖಕರನ್ನು ಪಳಗಿಸುವ ಮತ್ತು ನುರಿತ ಖ್ಯಾತ ನಾಮರಿಗೆ ಅಭಿವ್ಯಕ್ತಿಗೆ ವೇದಿಕೆ ಒದಗಿಸಿ ಕೊಟ್ಟರು. ‘ಜಯಂತಿ’ಯು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಗಳಲ್ಲಿ ಅತೀರಥ ಮಹಾರಥ ಸಾಹಿತಿ/ಲೇಖಕರಾದ ಎನ್ಕೆ, ಚೆನ್ನವೀರ ಕಣವಿ, ಮೊದಲಾದವರಿದ್ದಾರೆ. ‘ಜಯಂತಿ’ ಕೃಷ್ಣಶರ್ಮರ ಅವ್ಯಾಹತ ಪರಿಶ್ರಮ ಮತ್ತು ಧೃಡ ಸಂಕಲ್ಪಕ್ಕೆ   ಹಿಡಿದ ಕನ್ನಡಿಯಾಗಿತ್ತು.

ಜಾನಪದ ಕ್ಷೇತ್ರಕ್ಕೆ ಬೆಟಗೇರಿ ಕೃಷ್ಣಶರ್ಮರ ಕೊಡುಗೆ ಅಪಾರ. ಬಹುಶಃ ಬೇರೆ ಯಾವ  ವಿಸ್ಥಾಪಿತ,ಹೆಸರಾಂತ ಕವಿಯೂ ಸಲ್ಲಿಸಿದ  ಸೇವೆಯನ್ನು  ಇವರು ಜಾನಪದ ಕ್ಷೇತ್ರಕ್ಕೆ ಸಲ್ಲಿಸಿದ್ದಾರೆ. ‘ಬೀಸುವ ಕಲ್ಲಿನ ಹಾಡುಗಳು’, ನಾಗಮಂಗಲ’ ಹಾಗೂ ‘ಕನ್ನಡ ಜಾನಪದ ಸಾಹಿತ್ಯ’   ಬೆಟಗೇರಿ ಕೃಷ್ಣಶರ್ಮರ ಪ್ರಕಟಿತ ಜಾನಪದ ಕೃತಿಗಳು.ಇವರು ಬರವಣಿಗೆ ರೂಪದಲ್ಲದೇ ಮೌಖಿಕವಾಗಿ ಜಾನಪದ ಸಾಹಿತ್ಯಿಕ ಭಾಷಣ, ಚರ್ಚೆ, ವಿಚಾರ ವಿನಿಮಯ ಹಾಗೂ ಮಾರ್ಗದರ್ಶನಗಳ ರೂಪದಲ್ಲಿ ಕೈಗೊಂಡ ಕೈಂಕರ್ಯದ ವ್ಯಾಪ್ತಿ ಅಪರಿಮಿತ ಮತ್ತು ಅಗಾಧವಾದದ್ದು. ಜಾನಪದ ಕುರಿತ ಇವರ ಅಸಂಖ್ಯ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬೆಟಗೇರಿ ಕೃಷ್ಣಶರ್ಮರ ಎಷ್ಟೋ ಕೃತಿಗಳು ಇವರ ನಾಮಾಂಕಿತವಿಲ್ಲದೆ   ಜಾನಪದ ಸಾಹಿತ್ಯವಾಗಿಯೇ ಉಳಿದು ಹೋಗಿವೆ.

ಕನ್ನಡ ಪ್ರಾಥಮಿಕ ಮತ್ತ್ತು ಮಾಧ್ಯಮಿಕ ಶಾಲೆಯ ತರಗತಿಗಳಿಗಾಗಿ ಬೆಟಗೇರಿ ಕೃಷ್ಣಶರ್ಮರು ಬರೆದ ಚಂದ್ರಹಾಸ, ಭೀಷ್ಮ ,ಲವ- ಕುಶ ಕೃತಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿವೆ.  ಮಕ್ಕಳಿಗಾಗಿ ಇವರು ರಚಿಸಿದ ‘ಬಸವಣ್ಣನವರು’ ಕೃತಿ ಸಕಲ ಸಾಹಿತ್ಯಾಸಕ್ತರಿಂದ ಪ್ರಶಂಸೆಗೊಳಗಾಗಿದೆ.

ಬೆಟಗೇರಿ ಕೃಷ್ಣಶರ್ಮರು 13 ಕವನ ಸಂಕಲನಗಳನ್ನು ರಚಿಸಿದ್ದಾರೆ. ಇವುಗಳಲ್ಲಿ 5(ರಾಷ್ಟ್ರೀಯ ಪದ್ಯಾವಳಿ,ಗಾಂಧಿ ಗೀತಪುಸ್ತಕ ಮುಂತಾದವುಗಳು) ರಾಷ್ಟ್ರೀಯತೆಯ  ಭಾವನೆಯನ್ನು ಜಾಗೃತಗೊಳಿಸಿ ದೇಶ ಸೇವೆ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಪ್ರಚೋದನೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಸ್ವಾತಂತ್ರ್ಯ ಯೋಧರಿಗೆ ಆನಂದ ಕಂದರ ಕವನಗಳು ಸಂವಾದ ಗೀತೆ ಹಾಗೂ  ಧ್ಯೇಯ ವಾಕ್ಯಗಳಾಗಿದ್ದವು.  ‘ಮುದ್ದನ ಮಾತು’, ‘ಅರುಣೋದಯ’, ‘ವಿರಹಿಣಿ’,’ಒಡನಾಡಿ’, ‘ನಾಲ್ವಾಡುಗಳು’, ‘ಉತ್ಸಾಹಗಾಥ’ ಅವು ಭಾವ ಗೀತೆಗಳ ಸಂಕಲನಗಳು.

1932ರಿಂದ ಸಣ್ಣಕಥೆಗಳ ಕೃಷಿ ಪ್ರಾರಂಭಿಸಿದ ಬೆಟಗೇರಿ ಕೃಷ್ಣಶರ್ಮರು ಬಡತನದ ಬಾಳು, ಸಂಸಾರ ಚಿತ್ರ , ನಮ್ಮ ಬದುಕು, ಜನಪದ ಜೀವನ, ಮಾತನಾಡುವ ಕಲ್ಲು, ಕಳ್ಳರ ಗುರು ಮತ್ತು ಇತರ ಕಥೆಗಳು ಎಂಬ ಆರು ಕಥಾ ಸಂಕಲನಗಳನ್ನು ಹೊರ ತಂದಿದ್ದಾರೆ. ಇವುಗಳಲ್ಲಿ ಹತ್ತು ಆಯ್ದ ಕಥೆಗಳನ್ನು ‘ದಶಮಂಜರಿ’ ಹೆಸರಿನಿಂದ ಪ್ರಕಟಿಸಿದ್ದಾರೆ. ಬೆಟಗೇರಿ ಕೃಷ್ಣಶರ್ಮರು ತಾವು ಕಂಡು೦ಡ ಅನುಭವಿಸಿದ ಜೀವನ  ಪ್ರಸಂಗಗಳನ್ನು, ಸಮಾಜದ  ಕುರಿತಾದ ತಮ್ಮ ದೃಷ್ಟಿಕೋನ ಮತ್ತು ಧೋರಣೆಗಳನ್ನು ಅಕ್ಷರರೂಪದಲ್ಲಿ ಸಾಕ್ಷೀಕರಿಸಿ ಕಥೆಗಳನ್ನು ರಚಿಸಿರುವದು ವೈಶಿಷ್ಟ್ಯ.

ಬೆಟಗೇರಿ ಕೃಷ್ಣಶರ್ಮರ 5 ಕಾದಂಬರಿಗಳು ಮಾತ್ರ ಪ್ರಕಟವಾಗಿವೆ. ಅವುಗಳಲ್ಲಿ ‘ಸುದರ್ಶನ’ ಮತ್ತು ‘ಮಗಳ ಮದುವೆ’ ಸಾಮಾಜಿಕ ಕಾದಂಬರಿಗಳಾಗಿದ್ದು , ‘ರಾಜಯೋಗಿ’,’ಅಶಾಂತಿಪರ್ವ’ ಮತ್ತು ‘ಮಲ್ಲಿಕಾರ್ಜುನ’ ವಿಜಯನಗರ ಸಾಮ್ರಾಜ್ಯದ ಕಥಾ ವಸ್ತುವನ್ನು ಹೊಂದಿದ್ದ  ಐತಿಹಾಸಿಕ ಕಾದಂಬರಿಗಳಾಗಿದ್ದವು. ಸಂಶೋಧನೆ, ಮೀಮಾಂಸೆ ಮತ್ತು ವಿಮರ್ಶೆಗೆ ಸಂಬ೦ಧಿಸಿದ ಬೆಟಗೇರಿ ಕೃಷ್ಣಶರ್ಮರ ‘ಕರ್ನಾಟಕ ಜೀವನ’,’ಸಾಹಿತ್ಯವು ಸಾಗಿರುವ ದಾರಿ’ , ‘ನಮ್ಮ ಸಂಸ್ಕೃತಿ ಪರಂಪರೆ’, ‘ಸಾಹಿತ್ಯ ವಿಹಾರ’ ಮೇರು ಕೃತಿಗಳಾಗಿವೆ.

ಆನಂದ ಕಂದರ ಬಹುಮುಖ ಪ್ರತಿಭಾ ಕಾರಂಜಿಗೆ ಎಲ್ಲೆಯೇ ಇರಲಿಲ್ಲ ಎಂಬುದಕ್ಕೆ ನಿದರ್ಶನವೆಂದರೆ 1950ರಲ್ಲಿ ಬಾನುಲಿ ರೂಪಕಗಳನ್ನು ರಚಿಸಲು ಪ್ರಾರಂಭಿಸಿದ್ದು. ಒಟ್ಟು ಆಕಾಶವಾಣಿಯ ಬಾನುಲಿ ಕಾರ್ಯಕ್ರಮದಲ್ಲಿ ಬೆಟಗೇರಿ ಕೃಷ್ಣಶರ್ಮರ 37ರೂಪಕಗಳು ಪ್ರಸಾರಗೊಂಡಿವೆ.ಇವುಗಳಲ್ಲಿ ಬೆಳವಡಿ ಮಲ್ಲಮ್ಮ, ಬೆಂದ ಹೃದಯ, ಮುಂಡರಗಿ ಗಂಡುಗಲಿ, ಪಂಚಗಂಗಾ ಪ್ರಮುಖವಾದವುಗಳು.

ದಾಸ ಸಾಹಿತ್ಯ  ಮತ್ತು ಬೇರೆ ಕೆಲವು ಗ್ರಂಥಗಳನ್ನು ಬಹಳ ಶಾಸ್ತ್ರೀಯವಾಗಿ ಸಂಪಾದಿಸಿದ ಕೀರ್ತಿ ಬೆಟಗೇರಿ ಕೃಷ್ಣಶರ್ಮರಿಗೆ  ಸಲ್ಲುತ್ತದೆ. ಇವುಗಳಲ್ಲಿ ಪುರಂದರದಾಸರ ಸಮಗ್ರ ಸಾಹಿತ್ಯ ,ಕನಕದಾಸರ ಭಕ್ತಿಗೀತೆಗಳು ಪ್ರಮುಖ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ ಅತೀ ಕಡಿಮೆ ಅವಧಿಯಲ್ಲಿ ‘ಅಕ್ರೂರ ಚರಿತ್ರೆ’, ‘ಮೋಹನ ತರಂಗಿಣಿ’, ‘ಕುಮಾರವ್ಯಾಸ ಭಾರತ ‘ ಕೃತಿಗಳು ಪ್ರಕಟವಾಗುವಲ್ಲಿ ಪ್ರಮುಖ  ಪಾತ್ರ ವಹಿಸಿದರು. ತರುವಾಯ ‘ಪ್ರಸನ್ನ ವೆಂಕಟದಾಸರ ಭಾಗವತ’, ‘ಹರಿದಾಸ ಭಕ್ತಿ ಸಾಧನೆ’ ಎಂಬ ಎರಡು ಗ್ರಂಥಗಳನ್ನು ಪ್ರಕಟಿಸಿದರು.

ಬೆಟಗೇರಿ ಕೃಷ್ಣಶರ್ಮರು ಆರು ದಶಕಗಳಿಗೂ ಮಿಕ್ಕಿ  ಅವ್ಯಾಹತವಾಗಿ ಕನ್ನಡ ಸಾರಸತ್ವಲೋಕಕ್ಕೆ ನೀಡಿದ ಬಹುಮುಖ ಕೊಡುಗೆಗಳಿಗೆ ಅನೇಕ ಪ್ರಶಸ್ತಿ ಮತ್ತು ಗೌರವಗಳು ಸಂದಿವೆ. ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್,ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ,ಜಾನಪದ ಸಮ್ಮೇಳನ ಅಧ್ಯಕ್ಷತೆ ,ವೈದ್ಯಕೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದವುಗಳು  ಇವರನ್ನು ಅರಸಿಬಂದ  ಗೌರವಗಳು. ಯಾವುದೇ ಪ್ರಶಸ್ತಿಯ ಬೆನ್ನಟ್ಟದ ಬೆಟಗೇರಿ ಕೃಷ್ಣಶರ್ಮರು, ದೊರಕಿದ ಪ್ರಶಸ್ತಿಯ ಮೌಲ್ಯವನ್ನು, ಗೌರವವನ್ನು ಹೆಚ್ಚಿಸಿ ಪ್ರಶಸ್ತಿಗೆ ಮೆರಗು ತಂದುಕೊಟ್ಟರು

ಅವರು ಮಾಡಿದ ಸಾಹಿತ್ಯ ಕೃಷಿಗೆ ಜ್ಞಾನಪೀಠ ಪ್ರಶಸ್ತಿ ಎಂದೋ ದೊರಕಬೇಕಿತ್ತು, ಆದರೆ ಹಾಗಾಗಲಿಲ್ಲ…ಇತ್ತೀಚಿನ ದಿನಗಳಲ್ಲಿ  ಜಾತಿ,ರಾಜಕೀಯ ಲಾಬಿ ಇಲ್ಲದಿದ್ದರೆ  ಪ್ರಶಸ್ತಿ ದುರ್ಲಭವಾಗಿಬಿಟ್ಟಿದೆ. ಬಹುಶಃ ಮೋದಿಜಿಯವರು ಪದ್ಮ ಪ್ರಶಸ್ತಿಗಳ ಕುರಿತು ಸಾಮಾನ್ಯ ಜನತೆಯ ಅಭಿಪ್ರಾಯ ಕೇಳುವ ಪ್ರಕ್ರಿಯೆ ಪ್ರಾರಂಭಿಸಿದ೦ತೆ,  ಸಾಹಿತ್ಯಕ್ಕೆ ಸಂಬಂಧಿಸಿದ ಪ್ರಶಸ್ತಿಗಳ ಕುರಿತೂ ಓದುಗರ ಅಭಿಪ್ರಾಯ ಕೇಳಿದಲ್ಲಿ ಬೆಟಗೇರಿ ಕೃಷ್ಣಶರ್ಮರಿಗೆ ಹಾಗೂ ಎಸ್.ಎಲ್.ಭೈರಪ್ಪರಂಥವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬಹುದೇನೋ!! .

ವಿಪರ್ಯಾಸವೆಂದರೆ ಇಂಥ ಮಹನೀಯರ  ಕೃತಿಗಳು ಸಾಮಾನ್ಯರಿಗೆ ಎಟಕದೆ ದುರ್ಲಭವಾಗಿವೆ.ಬಹುತೇಕ ಪುಸ್ತಕ ಭಂಡಾರಗಳಲ್ಲಿ ಆನಂದ-ಕಂದರ ಪುಸ್ತಕಗಳು ಅಲಭ್ಯ, ಆನ್ ಲೈನ್ ನಲ್ಲೂ ತಡಕಾಡಿದರೂ ಕಾಣ ಸಿಗುವದಿಲ್ಲ. ಕನ್ನಡ ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಅನೇಕ ಅಪರಿಚಿತ ತಥಾಕಥಿತ ಸಾಹಿತಿಗಳ ಕುರಿತು ಮಾಹಿತಿ ಲಭ್ಯವಿದೆ ಆದರೆ ಬೆಟಗೇರಿ ಕೃಷ್ಣಶರ್ಮರ ಕುರಿತು ಪ್ರಸ್ತಾಪವೇ ಇಲ್ಲ.   ತಾರತಮ್ಯ ಧೋರಣೆ ತಾಳದೆ, ನಿರುತ್ಸಾಹ ತೋರದೆ ಸರಕಾರವೇ ಮುಂದಾಗಿ ಕನ್ನಡ ಸಂಸ್ಕೃತಿ ಇಲಾಖೆಯ ಮುಖಾಂತರ  ಇಂಥ ಮಹನೀಯರ ಕಾವ್ಯಗಳನ್ನು ಪ್ರಕಟಿಸಿ ಜನರಿಗೆ ತಲುಪಿಸಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗೆ ಕಟಿಬದ್ಧವಾಗಬೇಕು.

ಆನಂದ ಕಂದರ ಕುರಿತಾದ ಮಾಹಿತಿ –  ವಿವಿಧ ಮೂಲಗಳಿಂದ ಸಂಗ್ರಹಿಸಿದ್ದು

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!