ಅಂಕಣ

ಅಂಕಿತಕ್ಕೆ ತಕ್ಕ ಉಕ್ಕಿನ ಮನುಷ್ಯ ….

      ಕೆಲವು ನಾಯಕರ ಬಗ್ಗೆ ದುರಾದೃಷ್ಟವಶಾತ್ ನಾವು ಪಠ್ಯದಲ್ಲಿ ಓದಲು ಆಗಲೇ ಇಲ್ಲ. ಅಂಥ ಅಪ್ರತಿಮ ನಾಯಕರ ಬಗ್ಗೆ ತಿಳಿಯಲು ಪ್ರಯತ್ನ ಪಡುತ್ತಲೇ ಇರುತ್ತೇವೆ. ಚಕ್ರವರ್ತಿ ಸೂಲಿಬೆಲೆಯವರ “ಸರದಾರ” ಪುಸ್ತಕ, ಬಹುಶಃ ಕನ್ನಡದಲ್ಲಿ ಪಟೇಲರನ್ನು ಸಂಪೂರ್ಣವಾಗಿ ಕಟ್ಟಿಕೊಟ್ಟ ಪ್ರಥಮ ಪುಸ್ತಕವೆಂದರೆ ತಪ್ಪಾಗಲಾರದು. ಪಟೇಲರ ಅಸಾಮಾನ್ಯ ವ್ಯಕ್ತಿತ್ವದ ಪರಿಣಾಮ ಅವರ ಬಗ್ಗೆ ಪುಸ್ತಕ ಓದುತ್ತಿದ್ದಂತೆ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳುವ ಹಂಬಲವಾಯಿತು. ಎಲ್ಲ ಕಡೆಯಿಂದ ಮಾಹಿತಿ ಸಂಗ್ರಹಿಸಿ ಅವರು ದೇಶಕ್ಕೆ ಕೊಟ್ಟ ಕೊಡುಗೆ ಮತ್ತು ಅವರ ಸಮುದ್ರ ಸಮಾನ ವ್ಯಕ್ತಿತ್ವವನ್ನು ಲೇಖನದ ಬೊಗಸೆಯಲ್ಲಿ ಹಿಡಿಯುವ ಅಸಾಧ್ಯ ಪ್ರಯತ್ನ ಮಾಡಿದ್ದೇನೆ. ನಾನು ಸಂಗ್ರಹಿಸಿದ ಮಾಹಿತಿಯ ಸಿಂಹಪಾಲು ಸೇರಬೇಕಾದ್ದು “ಸರದಾರ” ಪುಸ್ತಕಕ್ಕೆ. ಚಕ್ರವರ್ತಿ ಸೂಲಿಬೆಲೆಯವರಿಗೆ ಋಣಿಯಾಗುತ್ತಾ ಪಟೇಲರ ಬಗ್ಗೆ ಬರೆಯುತ್ತಿದ್ದೇನೆ. ತಾವೂ ಒಮ್ಮೆ ಆ ಪುಸ್ತಕ ಓದಿ.

     ಮೊದಲಿಗೆ ಪಟೇಲರು ಒಬ್ಬ ಧೀಮಂತ ನಾಯಕರಾದರೂ ಅವರಿಗೆ ದೇಶದ ಪ್ರಧಾನಿ ಹುದ್ದೆ ದಕ್ಕಲಿಲ್ಲ. ಅದರ ಬಗ್ಗೆ ಹಲವು ಕಡೆ ಬೇರೆಯದೇ ಉಲ್ಲೇಖಗಳಿವೆ. ಹಲವರು ಗಾಂಧೀಜಿ ನಡೆಯನ್ನು ಹಲವು ಕಾರಣ ಕೊಟ್ಟು ಸಮರ್ಥಿಸಿಕೊಳ್ಳುತ್ತಾರೆ. ಇಂಥ ಒಬ್ಬ ಅಪ್ರತಿಮ ನಾಯಕ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಿದ್ದರಲ್ಲಿ ಹಲವರ ಕೈವಾಡವಿದೆ. ೧೯೨೯ ರಲ್ಲಿ ಮೋತಿಲಾಲರ ನಂತರ ಕಾಂಗ್ರೆಸ್ ಅಧ್ಯಕ್ಷರಾಗಲು ಆಯ್ಕೆ ಪ್ರಕ್ರಿಯೆ ನಡೆಯಿತು. ಪ್ರದೇಶ ಕಾಂಗ್ರೆಸ್ ಸಮಿತಿಯ ೫ ಜನ ಪಟೇಲರ ಹೆಸರು ಹೇಳಿದರೆ ೩ ಜನರು ನೆಹರೂ ಹೆಸರು ಹೇಳಿದರು. ಆ ಮೂವರಲ್ಲಿ ಇಬ್ಬರು ನೆಹರೂ ತವರೂರಾದ ಉತ್ತರಪ್ರದೇಶದವರಾಗಿದ್ದರು ಎಂಬುದು ಗಮನಾರ್ಹ ವಿಷಯ. ೧೯೨೯ ಎಂದರೆ ಸ್ವಾತಂತ್ರ್ಯ ಸಂಗ್ರಾಮ ಆಗಷ್ಟೇ ಗಾಂಧೀಜಿಯ ಅಧಿಪತ್ಯದಲ್ಲಿ ಕಾವೇರುತ್ತಿತ್ತು. ಅದಕ್ಕೊಂದು ಒಳ್ಳೆಯ ಸ್ವರೂಪ ಕೊಡಲು ಪಟೇಲರಿಗಿಂತ ಪರ್ಯಾಯ ನಾಯಕರು ಇರಲೇ ಇಲ್ಲ. ಆದರೂ ಮೋತಿಲಾಲರ ಒತ್ತಾಯದಿಂದ ಮೊದಲ ಬಾರಿಗೆ ಅಧಿಕಾರ ಅಪ್ಪನಿಂದ ಮಗನಿಗೆ ಹಸ್ತಾಂತರವಾಯಿತು. ಈಗಲೂ ಆ ಸಂಸ್ಕೃತಿ ಮುಂದುವರೆಯುತ್ತಾ ಬಂದಿದೆ. ಕುಟುಂಬ ರಾಜಕಾರಣ ಜಾರಿಯಲ್ಲಿದೆ. ೧೯೨೯ ರಿಂದ ೧೯೪೭ ಕ್ಕೆ ಸುಮಾರು ಎರಡು ದಶಕಗಳ ಅಂತರವಿದೆ ಆಗಿನ ಅಧ್ಯಕ್ಷ ಪ್ರಧಾನಿಯಾಗಿದ್ದು ಹೇಗೆ ಎಂಬ ಪ್ರಶ್ನೆ ಇದ್ದರೂ ನೆಹರೂವನ್ನು ದೇಶಕ್ಕೆ ಅನಿವಾರ್ಯ ಎನ್ನುವಂತೆ ಮಾಡಲು ಮತ್ತು ಒಬ್ಬ ನಾಯಕನಂತೆ ಬಿಂಬಿಸಲು ಗಾಂಧೀಜಿ ಇಟ್ಟ ಪ್ರಥಮ ಹೆಜ್ಜೆ ಎಂದರೆ ತಪ್ಪಾಗಲಾರದು. ಗಾಂಧೀಜಿ ಅವಕಾಶ ಸಿಕ್ಕಾಗಲೆಲ್ಲ ಪರೋಕ್ಷವಾಗಿ ನೆಹರೂ ಭವಿಷ್ಯದ ನಾಯಕನೆಂದು ಹೇಳುತ್ತಲೇ ಇದ್ದರು. ಅದಕ್ಕೆ ಉದಾಹರಣೆ ಎಂಬಂತೆ ೧೯೪೨ ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧಿವೇಶನದಲ್ಲಿ “ನಾನು ಹೋದ ಮೇಲೆ ಅವನೇ ನನ್ನ ಮಾತುಗಳನ್ನಾಡುತ್ತಾನೆ” ಎಂದು ನೆಹರೂ ಬಗ್ಗೆ ಬಹಿರಂಗವಾಗಿ ಮತ್ತು ಪರೋಕ್ಷವಾಗಿ ಅವರನ್ನು ದೇಶದ ಪ್ರಧಾನಿಯಂತೆ ಬಿಂಬಿಸಿದರು.

       ನೆಹರೂ ಅಂತ ಅಸಮರ್ಥರನ್ನು ಯಾಕೇ ಗಾಂಧೀಜಿ ಪ್ರಧಾನಿಯಾಗಿಸಿದರು? ಈ ಪ್ರಶ್ನೆಗೆ ಹಲವರು ಹಲವು ಕಾರಣಕೊಟ್ಟರೂ ಅವೆಲ್ಲ ಗಾಂಧೀಜಿಯ ನಡೆಯನ್ನು ಸಮರ್ಥವಾಗಿ ಸಮರ್ಥಿಸಿಕೊಳ್ಳುವುದಿಲ್ಲ. ನೆಹರೂ ಮಾತಿನ ಮೋಡಿಗಾರ, ಆಕರ್ಷಕ ವ್ಯಕ್ತಿತ್ವದ ವ್ಯಕ್ತಿಯಾದರೆ ಪಟೇಲರು ನಿಷ್ಟುರ ನುಡಿಯವರು. ಅದಲ್ಲದೆ ಪಟೇಲರಿಗೆ ನೆಹರೂಗಿಂತ ೧೪ ವರ್ಷ ಜಾಸ್ತಿ ವಯಸ್ಸಾಗಿದ್ದರಿಂದ ಅನಾರೋಗ್ಯ ಕಾಡುತ್ತಿತ್ತು. ಗಾಂಧೀಜಿಯವರು ಗುಜರಾತಿ ಅದಕ್ಕೆ ಗುಜರಾತಿನಿಂದ ಬಂದವನನ್ನೇ ಆರಿಸಿದರು ಎಂಬ ಆರೋಪ ಬರಬಹುದೆಂಬುದು ಗಾಂಧೀಜಿಯವರ ದೂರಾಲೋಚನೆಯಾಗಿತ್ತು.

“ಸಮಾಜ ದೇಶ ಕೆಟ್ಟಿದ್ದು ಕೆಟ್ಟವರ ಕೆಟ್ಟತನದಿಂದಲ್ಲ ಒಳ್ಳೆಯವರ ಮೌನದಿಂದ” ಎಂಬಂತೆ ಪಟೇಲರ ಮೌನವೂ ಇದಕ್ಕೆ ಕಾರಣವಿರಬಹುದು. ಆದರೆ ಗಾಂಧೀಜಿ ಕೊಟ್ಟ ಸಮರ್ಥನೆ ಎಂದರೆ “ಹಾರ್ವರ್ಡ್ ಹುಡುಗ ಪ್ರಧಾನಿಯಾದರೆ ಅಂತರರಾಷ್ಟ್ರೀಯ ಸಂಬಂಧಗಳು ಚೆನ್ನಾಗಿರುತ್ತವೆ.” ಎಂಬುದಷ್ಟೆ. ಆದರೂ ಆಗ ತಾನೇ ಹುಟ್ಟಿದ ಮಗುವಿಗೆ ಪೋಲಿಯೋ ಲಸಿಕೆ ಹಾಕದಿದ್ದರೆ ಅದು ಹೇಗೆ ಜನ್ಮ ಪೂರ್ತಿ ಕಾಲೆಳೆದುಕೊಂಡು ಬದುಕಬೇಕಾಗುತ್ತೋ ಹಾಗೆಯೇ ಗಾಂಧೀಜಿ ಆಗ ತಾನೇ ಸ್ವತಂತ್ರಗೊಂಡ ದೇಶಕ್ಕೆ ಯಾವುದೇ ರೋಗಗಳು ತಗಲದಂತೆ ಎಚ್ಚರಿಕೆ ವಹಿಸಿ ಪಟೇಲರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿ ಬಿಡಬೇಕಿತ್ತು. ಅವರ ಒಂದು ತಪ್ಪು ಹೆಜ್ಜೆಯ ಪರಿಣಾಮ ಭಾರತ ಇವತ್ತಿಗೂ ಕುಂಟುತ್ತಲೇ ಇದೆ. ಸ್ವತಂತ್ರಕ್ಕೆ ತುಂಬಾ ಹತ್ತಿರದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕೋಣ.೧೯೪೬ ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಾಗ ೧೬ ರಲ್ಲಿ ೧೩ ರಾಜ್ಯಗಳು ಪಟೇಲರನ್ನೇ ಆರಿಸಿದ್ದವು. ಆಗ ಭಾರತಕ್ಕೆ ಸ್ವತಂತ್ರ ಬರುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದವು.ಆಗ ಕಾಂಗ್ರೆಸ್ ಅಧ್ಯಕ್ಷರಾದವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗುವರು ಎಂಬುದೊಂದು ಮುಕ್ತಗೌಪ್ಯ (open secret) .ಅದನ್ನರಿತ ಗಾಂಧೀಜಿ ಪಟೇಲರು ಪ್ರಧಾನಿ ಹುದ್ದೆಯ ಚುನಾವಣೆಗೆ ನಿಲ್ಲದಂತೆ ಮನವೊಲಿಸಿಕೊಂಡರು. ನಂತರ ಮೌಲಾನಾ ಆಜಾದ್ ಮತ್ತೊಮ್ಮೆ ಕಾಂಗ್ರೆಸ್ ಅಧ್ಯಕ್ಷರಾಗುವೆನೆಂದು ಹೇಳಿಕೆ ಕೊಟ್ಟರು. ಆದರೆ ಗಾಂಧೀಜಿ “ಅಧ್ಯಕ್ಷರು ಎರಡನೇ ಅವಧಿಗೆ ಮುಂದುವರೆಯುವುದು ನನಗೆ ಸರಿಯಿಲ್ಲವೆನಿಸುತ್ತದೆ.” ಎಂದು ಬಿಟ್ಟರು.ಗಾಂಧೀಜಿ ತಮ್ಮ ಆಯ್ಕೆಗೆ ಮತ್ತೊಂದು ಸಮರ್ಥನೆಯನ್ನು ಸೇರಿಸಿದರು. ನೆಹರೂ ಯುವಕರಿಗೆ, ಎಡಪಂಥೀಯರಿಗೆ, ಮುಸ್ಲಿಂರಿಗೆ ಅಚ್ಚುಮೆಚ್ಚು. ಕಮ್ಯೂನಿಸ್ಟ್’ರೊಂದಿಗೆ ಕೂಡಾ ಅವರಿಗೆ ಮಧುರ ಬಾಂಧವ್ಯವಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಪಟೇಲರನ್ನು ಇವತ್ತಿಗೂ ಮುಸ್ಲಿಂ ವಿರೋಧಿ, ಕೋಮುವಾದಿ ಎಂಬ ಹಣೆಪಟ್ಟಿ ಇದೆ.  ಜುನಾಗಡದ ವಿಲೀನದ ನಂತರ ಸೌರಾಷ್ಟ್ರಕ್ಕೆ ಭೇಟಿ ನೀಡಿ ಸೋಮನಾಥ ದೇವಾಲಯದ ಪುನರ್ನಿರ್ಮಾಣ, ಜ್ಯೋತಿರ್ಲಿಂಗ ಪ್ರತಿಷ್ಟಾಪಣೆ ಮಾಡುವುದಾಗಿ ಹೇಳಿದರು. ಮೌಲಾನಾ ಅವರು ಇದಕ್ಕೆ ವಿರೋಧಿಸಿದರೆ. ಗಾಂಧೀಜಿಯವರು ಇದಕ್ಕೆ ಸಮ್ಮತಿಸಿದ್ದೂ ಅಲ್ಲದೆ ಸಾರ್ವಜನಿಕ ವೆಚ್ಚದಲ್ಲಿ ನಿರ್ಮಾಣವಾಗಲಿ ಎಂದು ಸಲಹೆಯನ್ನು ಇತ್ತರು.ಸಂಪುಟದ ಒಪ್ಪಿಗೆಯನ್ನು ಪಡೆದ ಪಟೇಲರು K.M.ಮುನ್ಷಿಯವರನ್ನು ಮುಂದಾಳುವಾಗಿಸಿ ಕಾರ್ಯವನ್ನು ಶುರು ಮಾಡಿದರು. ಆದರೆ ಮಂದಿರ ಉದ್ಘಾಟನೆಯ ವೇಳೆಗೆ ಪಟೇಲರು ಇಹದಿಂದ ನಿರ್ಗಮಿಸಿಯಾಗಿತ್ತು. ನೆಹರೂ ಅವರ ವಿರೋಧದ ನಡುವೆಯೂ ಮುನ್ಷಿಯವರು ಕಾರ್ಯವನ್ನು ಮುಂದುವರೆಸಿಕೊಂಡು ಹೋದರು. ಮುಂದೆ ಈ ಕಟ್ಟಡವನ್ನು ಬಾಬು ರಾಜೇಂದ್ರ ಪ್ರಸಾದವರು ನೆಹರೂ ಅವರ ತೀವ್ರ ವಿರೋಧದ ನಡುವೆಯೂ ಉದ್ಘಾಟಿಸಿದರು. ಮಂದಿರ ಪುನರ್ನಿರ್ಮಾಣ ಮತಾಂಧರಿಗೆ “ಪಟೇಲರಿಗೆ ಹಿಂದುಗಳ ಪರವಾಗಿ ಒಲವಿದೆ” ಎನ್ನಿಸಿತೇ ಹೊರತು ಒಂದು ಪುರಾತನ ಕಟ್ಟಡದ ಅಸ್ಮಿತೆಯನ್ನು ಉಳಿಸಿಕೊಳ್ಳಲು ಅವರು ಪಟ್ಟ ಪ್ರಯತ್ನವಾಗಿ ಕಾಣಲೇ ಇಲ್ಲ. ೧೯೪೨ರಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಮುಸ್ಲಿಂ ಲೀಗ್’ನ ಕೆಲವು ನಾಯಕರು ಬ್ರಿಟಿಷರ ಜೊತೆ ಕೈಜೋಡಿಸಿದ ಸುದ್ದಿಗಳು ಹರಡಿದ್ದವು.  ಜೈಲಿನಿಂದ ಹೊರ ಬರುವಾಗ ಪಟೇಲರು “We shall fight all those who came in the way of India’s freedom ” ಎಂದರು. ಈ ಮಾತಿನಲ್ಲಿ ರಾಷ್ಟ್ರೀಯವಾದವಿದೆಯೇ ಹೊರತು ಕೋಮುವಾದವಿಲ್ಲ ಎಂಬುದು ಸೂರ್ಯಸತ್ಯ. “ಆಫರೇಷನ್ ಫೋಲೋ” ಸಂದರ್ಭದಲ್ಲಿ ಜಿನ್ನಾ ಮರಣವಾಯಿತು. ಆಗ ಯಾರೋ ಒಬ್ಬರು ಧ್ವಜವನ್ನು ಅರ್ಧ ಹಾರಿಸಿದ್ದಕ್ಕೆ “ಸತ್ತವನೇನು ನಿನ್ನ ಮಾವನ ಮಗನೇ? ” ಎಂದು ಗದರಿದರು. ಒಂದು ಇಡಿಯ ಹಿಂಸೆ ಮತ್ತು ಹತ್ಯಾಕಾಂಡಕ್ಕೆ ಕಾರಣವಾಗಿ ನಮ್ಮ ದೇಶದ ಶಾಂತಿಯನ್ನೇ ಕದಡಿದ ವ್ಯಕ್ತಿಗೆ ಅಂತ ಮರ್ಯಾದೆ ಏಕೆ ಎಂಬುದು ಅವರ ಮಾತಿನ ತಾತ್ಪರ್ಯವೇ ಹೊರತು ಜಿನ್ನಾ ಮುಸ್ಲಿಂ ಎಂಬುದಕ್ಕೆ ಪಟೇಲರ ಆ ಮಾತಾಡಲಿಲ್ಲ. ಮೊದಮೊದಲು ದೇಶವಿಭಜನೆಗೆ ಒಪ್ಪದಿದ್ದ ಅವರು ನೌಖಾಲಿಯಲ್ಲಿ ಮುಸಲ್ಮಾನರ ಧಂಗೆ ಶುರುವಾಯಿತು. ದೇಶದಲ್ಲಿ ಇರಲು ಒಪ್ಪದವರನ್ನು ಇಟ್ಟುಕೊಂಡು ದೇಶ ಕಟ್ಟುವುದು ಅಸಾಧ್ಯವೆಂದು ಅರಿತು ದೇಶ ವಿಭಜನೆಗೆ ಸಮ್ಮತಿಸಿದರು. ಇದನ್ನೆಲ್ಲಾ ಇಟ್ಟುಕೊಂಡು ಅವರನ್ನು ಕೋಮುವಾದಿಯೆಂದು ಜರಿಯುವವರಿದ್ದಾರೆ. ಆದರೆ ವಿಭಜನೆಯ ನಂತರ ಹಿಂದೂಗಳ ಸಭೆಯಲ್ಲಿ ಪಟೇಲರು ” ಹಳೆಯದನ್ನು ಮರೆಯುವುದು ಮನುಷ್ಯತ್ವ ಮುಸಲ್ಮಾನರೂ ಈ ದೇಶದ ಪ್ರಜೆಗಳು ಅವರಿಗೂ ಇಲ್ಲಿನ ನಾಗರಿಕನಿಗಿರುವ ಎಲ್ಲ ಹಕ್ಕುಗಳಿವೆ. ” ಎಂದರು. ಅದಲ್ಲದೆ ಸ್ವಾತಂತ್ರ್ಯವಾದ ತಕ್ಷಣ ಪೂರ್ವ ಮತ್ತು ಪಶ್ಚಿಮ ಪಂಜಾಬುಗಳಲ್ಲಿ ಹಿಂದೂ ಮುಸಲ್ಮಾನರಿಬ್ಬರಿಗೂ ನರಕಯಾತನೆ ಇತ್ತು. ಭಾರತಕ್ಕೆ ಬರುತ್ತಿದ್ದ ಹಿಂದೂಗಳನ್ನು ಪಾಕಿಸ್ತಾನಿ ಮುಸ್ಲಿಂರು ಕೊಲ್ಲುತ್ತಿದ್ದರೇ ಅದನ್ನು ತಿಳಿದ ಉದ್ರಿಕ್ತ ಭಾರತೀಯ ಹಿಂದೂಗಳ ಪಾಕಿಸ್ತಾನಕ್ಕೆ ಹೊರಟು ನಿಂತ ಮುಸ್ಲಿಂರನ್ನು ಸಂಹರಿಸಲು ತಯಾರಾಗಿದ್ದರು.ಮುಸ್ಲಿಂರೆಲ್ಲ ಪಾಕಿಸ್ತಾನಕ್ಕೆ ಅಮೃತಸರ ಮಾರ್ಗವಾಗಿ ಗುಳೆ ಹೋಗಲು ಶುರು ಮಾಡಿದರು. ಮಾರಣಹೋಮಕ್ಕೆ ಸಜ್ಜಾಗಿದ್ದ ಸಿಖ್ಖರು, ಹಿಂದೂಗಳನ್ನು ಉದ್ದೇಶಿಸಿ ಪಟೇಲರು ಹೇಳಿದ್ದೇನೆಂದರೆ “ಹೊಡೆಯುವುದು, ಬಡಿಯುವುದು ಶೌರ್ಯವಲ್ಲ. ರಕ್ಷಿಸುವುದು ನಿಜವಾದ ಶೌರ್ಯ.”

           ಒಮ್ಮೆ ಹಿಂದೂ ಮತ್ತು ಸಿಖ್ಖರ ಮೇಲೆ ಮುಸ್ಲಿಂರು ಬರ್ಬರ ಹಲ್ಲೆ ನಡೆಸಿದ್ದನ್ನು ಸುಚೇತಾ ಕೃಪಲಾನಿ ಪ್ರಚೋದನಕಾರಿಯಾಗಿ ಬರೆದಾಗ ಜನ ಉದ್ರಿಕ್ತರಾದರೆ ಮುಸ್ಲಿಂರ ಗತಿಯೇನು ಎಂದು ಪಟೇಲರು ಬೈದಿದ್ದರು. ಅಷ್ಟೇ ಅಲ್ಲದೇ ಗಾಂಧಿಯವರು ಕೂಡಾ ಒಮ್ಮೆ ಮುಸ್ಲಿಂ ಸಭೆಯಲ್ಲಿ “ಪಟೇಲರ ಹೃದಯ ಅದೆಷ್ಟು ವಿಶಾಲವೆಂದರೆ ಅಲ್ಲಿ ಎಲ್ಲರಿಗೂ ಸ್ಥಳವಿದೆ. ಆತ ಖಂಡಿತ ಮುಸ್ಲಿಂ ವಿರೋಧಿಯಲ್ಲ.” ಎಂದು ಹೇಳಿಕೆ ಕೊಟ್ಟಿದ್ದರು. ಇದನ್ನೆಲ್ಲಾ ನೋಡಲಾಗಿ ಪಟೇಲರು ಜಾತಿ ಧರ್ಮಗಳಿಂದಾಚೆಗೆ ಬೆಳೆದ ನಾಯಕ ಎಂಬುದನ್ನು ಮತ್ತೆ ಹೇಳಬೇಕಾಗಿಲ್ಲ.

    ಪಟೇಲರ ವ್ಯಕ್ತಿತ್ವವನ್ನು ಕಟ್ಟಿ ಕೊಡುವ ಇನ್ನೂ ಕೆಲವು ಘಟನೆಗಳಿವೆ. ಪಟೇಲರು ಅದೆಷ್ಟೊಂದು ಪ್ರಾಮಾಣಿಕರೆಂದರೆ ಅವರ ಅನಾರೋಗ್ಯದ ಸಂದರ್ಭದಲ್ಲಿ ಅವರನ್ನು ನೋಡಲು ಬಂದ ಮೊಮ್ಮಗನನ್ನು ಕೂಡಲೇ ಹೊರಡಲು ಹೇಳಿದ್ದರಂತೆ ಯಾಕೆಂದರೆ ಅವನ ಮೂಲಕ ಪ್ರಭಾವ ಬೀರಿ ಯಾರಾದರೂ ತಮ್ಮ ವೈಯುಕ್ತಿಕ ಕೆಲಸ ಮಾಡಿಸಿಕೊಂಡು ರಾಜಕೀಯ ಸ್ವಾಸ್ಥ್ಯ ಕೆಡಬಾರದೆಂಬ ಮುಂದಾಲೋಚನೆ ಅವರದಾಗಿತ್ತು. ಸಾರ್ವಜನಿಕ ಹಣವನ್ನು ಸ್ವಂತಕ್ಕೆ ಬಳಸಿಕೊಂಡ ಆರೋಪ ಅವರ ಮಗನ ಮೇಲೆ ಬಂದಾಗ ಅವರ ಮಗನ ಮನೆಗೆ ಹೋಗುವುದನ್ನೇ ಬಿಟ್ಟು ಬಿಟ್ಟಿದ್ದರಂತೆ ಅದಲ್ಲದೆ ಕಾಂಗ್ರೆಸ್ ಕಮಿಟಿ ಸದಸ್ಯರೊಂದಿಗೆ ಫೋನ್’ನಲ್ಲಿ ಮಾತಾಡಿದ ಎಲ್ಲ ಬಿಲ್ ತಮ್ಮ ಸಂಬಳದಿಂದಲೇ ಪಾವತಿಸುತ್ತಿದ್ದರು.

       ಪಟೇಲರು ಸಂಸ್ಥಾನಗಳನ್ನು ದೇಶಕ್ಕೆ  ವಿಲೀನಗೊಳಿಸಿದ ಪ್ರಕ್ರಿಯೆ ಸುಲಭದ ಕೆಲಸವಲ್ಲ. ಪಾಕಿಸ್ತಾನವನ್ನು ಬಿಟ್ಟುಕೊಟ್ಟ ಮೇಲೆ ತಮಗೂ ಸ್ವತಂತ್ರ ರಾಜ್ಯ ಬೇಕೆಂದು ಹಲವು ರಾಜರು ಹಠ ಮಾಡುವ ಸಾಧ್ಯತೆಗಳು ಇದ್ದವು. ಒಂದು ಕುಟುಂಬದ ಒಬ್ಬಿಬ್ಬರನ್ನು ಸಂಬಾಳಿಸುವುದೇ ಕಷ್ಟ ಇನ್ನೂ ಇಡಿಯ ದೇಶದ ಬೇರೆ ಬೇರೆ ವ್ಯಕ್ತಿತ್ವದ ,ಅಭಿಪ್ರಾಯ ಭಿನ್ನತೆ ಇರುವ ನಾಯಕರನ್ನು ಕರಗಿಸಿ ಭಾರತವೆಂಬ ಭೂಪಟದ ಅಚ್ಚಿಗೆ ಎರಕ ಹೊಯ್ಯುವ ಕೆಲಸ ಸುಲಭ ಸಾಧ್ಯವಲ್ಲ. ಭಾರತದ ಪ್ರತಿ ಪ್ರಜೆ ಭಾರತದ ಭೂಪಟ ಬರೆಯುವಾಗ ಸರದಾರರನ್ನೊಮ್ಮೆ ನೆನೆಯಲೇ ಬೇಕು. ಅದರ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!