ಅಂಕಣ

ವೃತ್ತಿ ಬದುಕಿನ ಜಂಜಾಟದಲ್ಲಿ ನಮ್ಮವರ ಮರೆತ ಮನುಜರು ನಾವಿಲ್ಲಿ.

ಮಾನವ ಜೀವನ ಚಕ್ರದ ಮೊದಲ ಇಪ್ಪತ್ತೋ ಇಪ್ಪತ್ತೈದು ವರ್ಷಗಳನ್ನು ಶಿಕ್ಷಣದ ಹೆಸರಿನಲ್ಲಿ ಕೆಳೆಯುವ ನಾವು, ನಮ್ಮವರ ಬಗ್ಗೆ ಯೋಚಿಸುವುದು ತುಂಬಾ ಕಡಿಮೆ. ಅಪ್ಪ ಬದುಕಿರುವುದೇ ನಮಗೆ ದುಡ್ಡು ಕೊಡೋದಕ್ಕೆ, ಅಮ್ಮನ ಅಸ್ಥಿತ್ವ ಕೇವಲ ನಮಗೆ ಅಡುಗೆ ಮಾಡಿ ಬಡಿಸಲು ಮತ್ತು ಅಪ್ಪನ ಬೈಗುಳಗಳಿಂದ ತಪ್ಪಿಸಲು ಅಂತ ತಿಳಿಯುವ ನಾವು ಎಂದಿಗೂ ಕೂಡ ಅವರ ಅಸೆ ಆಕಾಂಕ್ಷೆಗಳ ಕಡೆ ಗಮನ ಕೊಡುವುದಿಲ್ಲ. ಪದವಿ ಪಡೆದು ಕೆಲಸಕ್ಕೆ ಸೇರಿದ ಮೇಲೆ ನಮ್ಮ ವೈಯ್ಯಕ್ತಿಕ ವೇಳಾಪಟ್ಟಿಯಲ್ಲಿ ಅಜಗಜಾಂತರ ಬದಲಾವಣೆಗಳಾಗುತ್ತವೆ, ಸರಿಯಾದ ಸಮಯಕ್ಕೆ ಊಟ ತಿಂಡಿ ಇಲ್ಲ, ನಿಗದಿತ ನಿದ್ದೆಯಿಲ್ಲ, ಅಪ್ಪ ಅಮ್ಮನ್ನ ಜೊತೆ ಮಾತನಾಡಲು ಕೂಡ ಸಮಯವಿಲ್ಲದಷ್ಟು ನಾವು ಕಾರ್ಯನಿರತರಾಗುತ್ತೇವೆ. ಪ್ರೆಸೆಂಟೇಷನ್, ಆಡಿಟ್, ತಿಂಗಳಾಂತ್ಯದ ಹೆಚ್ಚುವರಿ ಕೆಲಸಗಳು, ಹೀಗೆ ಹತ್ತು ಹಲವು ಕಾರಣಗಳೊಂದಿಗೆ ನಮ್ಮ ಸಂತೋಷ ಮತ್ತು ಮನೆಯವರ ಆಸೆಗಳಿಗೂ ತಣ್ಣೀರೆಚುತ್ತೇವೆ.

ಪದವಿಯ ನಂತರ ಮಗ/ಮಗಳು ದುಡಿಯಲಾರಂಭಿಸಿದರು ಅನ್ನೋ ಖುಷಿಗಿಂತ ನಮ್ಮನೆಲ್ಲಾ ದೂರ ಮಾಡುತ್ತಾರೆ ಅನ್ನೋ ಕೊರಗು ಪೋಷಕರಲ್ಲಿ ಕಾಡಲಾರಂಭಿಸುತ್ತದೆ. ತಿಂಗಳ ಕೊನೆಯಲ್ಲಿ ಸಿಗುವ ಐದಂಕಿಯ ಸಂಬಳಕ್ಕೆ ಮನೆಯವರ ಅಸೆ ಆಕಾಂಕ್ಷೆಗಳನ್ನು ಬಲಿಕೊಡಲು ಸಿದ್ಧರಾಗಿದ್ದೇವೆ. ವಯಸ್ಸು ಚಿಕ್ಕದು, ಹೆಚ್ಚಾಗಿ ದುಡಿಯಬೇಕು, ಕಂಪನಿಯಲ್ಲಿ ಗುರುತಿಸಿಕೊಳ್ಳಬೇಕು, ಬಹುಬೇಗ ಒಳ್ಳೆಯ ಸ್ಥಾನ ಮತ್ತು ಸಂಬಳವನ್ನು ಪಡೆಯಬೇಕು ಅನ್ನೋ ಅಸೆ ನಮ್ಮನ್ನು ಇಂಥ ಬದಲಾವಣೆಯತ್ತ ತಳ್ಳುತ್ತದೆ. ಒಂದನ್ನು ಪಡೆಯಲು ಮತ್ತೊಂದನ್ನು ತ್ಯಜಿಸು ಅನ್ನೋ ಗಾದೆ ಮಾತಿನ ಪ್ರಕಾರ ಮನೆಯವರ ಪ್ರೀತಿ ವಾತ್ಸಲ್ಯವನ್ನು ತ್ಯಜಿಸುವುದು ನ್ಯಾಯವೇ?

ನಿಗದಿತ ಅವಧಿಗಿಂತ ಹೆಚ್ಚು ಕೆಲಸ ಮಾಡು ಅಂತ  ಯಾವುದೇ ಕಂಪೆನಿಯಾಗಲಿ ಅಥವಾ ಬಾಸ್ ಆಗಲಿ ಹೇಳುವುದಿಲ್ಲ. ಇದು ಕೇವಲ ನಮ್ಮ ತಪ್ಪುಗಳಷ್ಟೇ. ವ್ಯಕ್ತಿತ್ವ ವಿಕಸನದ ಪಾಠದಲ್ಲಿ ಹೇಳುವ “Don’t procrastinate today’s work” ಮಾತನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅಂದಿನ ಕೆಲಸವನ್ನು ಅಂದೇ ಮುಗಿಸುವ ಬದಲು ಎಂದೂ ಬಾರದ ನಾಳೆಗಳಿಗೆ ಮುಂದೂಡುತ್ತೇವೆ. ಮತ್ತೆ ನಾಳಿನ ಕೆಲಸದ ಜೊತೆ ಈ ಕೆಲಸವನ್ನು ನಾಡಿದ್ದಿಗೆ ಮುಂದೂಡುತ್ತೇವೆ. ಹೀಗೆ ನಾವೇ ತೋಡಿದ ಕೂಪದಲ್ಲಿ ನಾವೇ ಬಿದ್ದು ಮಣ್ಣು ಮುಚ್ಚಿಕೊಳ್ಳುತ್ತೇವೆ.

ಐದಾರು ವರ್ಷಗಳ ಸೊ ಕಾಲ್ಡ್ ಹಗಲು ರಾತ್ರಿಯ ದುಡುಮೆಗೆ ಸಿಗುವ ಚಿಲ್ಲರೆ ಬಡ್ತಿ ಮತ್ತು ಸಂಬಳ ಹೆಚ್ಚಳದೊಂದಿಗೆ ನೂರಾರು ಕನಸು ಹೊತ್ತು ಮದುವೆಯಾಗುತ್ತೇವೆ. ಇಂದುವರೆಗೆ ಕೇವಲ ಹತ್ತವರಿಗಷ್ಟೇ ನೋವು ಕೊಟ್ಟ ನಾವು, ನೂರಾರು ಕನಸುಗಳ ಹೊತ್ತು ಬಂದ ಸಂಗಾತಿಗೂ ಕೂಡ ನಮಗೆ ತಿಳಿಯದೆ ನೋವು ಕೊಡಲು ಸಿದ್ಧರಾಗುತ್ತೇವೆ. ಅವಳ ವಾರಂತ್ಯದ ಸಿನಿಮಾ, ಹೋಟೆಲ್, ಶಾಪಿಂಗ್ ಕನಸುಗಳು ನಮ್ಮ ಕಛೇರಿ ಕೆಲಸಗಳ ಮುಂದೆ ಗೌಣವಾಗಿ ಕಾಣುತ್ತವೆ. ಯಾವುದೋ ಆನ್ಲೈನ್ ತಾಣದಲ್ಲಿ ವಸ್ತುಗಳನ್ನು ಖರೀದಿಸುವ ನಾವು ಮನೆಯವರ ನೆಮ್ಮದಿಯನ್ನು ಮಾರಾಟ ಮಾಡುತ್ತಿದ್ದೇವೆ.

ಅವಳ ಸಣ್ಣ ಆಸೆಯನ್ನು ಈಡೇರಿಸದ ನಾವು, ಮುಂದಿನ ನಾಲ್ಕಾರು ದಶಕಗಳ ಬಗ್ಗೆ ಸಾವಿರಾರು ಕನಸು ಕಟ್ಟುತ್ತೇವೆ. ಆ ಕನಸುಗಳ ಈಡೇರಿಕೆಗಾಗಿ ಇಂದಿನ ಸುಂದರ ಕ್ಷಣಗಳನ್ನು ಅನುಭವಿಸುವಲ್ಲಿ ವಿಫಲರಾಗುತ್ತಿದ್ದೇವೆ. ಅವಳ ಬಯಕೆ ಐದು ವರ್ಷಗಳ ನಂತರ ನಾವು ಕೊಳ್ಳುವ ಕಾರು, ಮುಂದೊಂದು ದಿನ ಕಟ್ಟುವ ಎರಡು ಮಹಡಿಯ ಮನೆಯಲ್ಲ, ದಿನಕ್ಕೆ ಒಂದೆರೆಡು ಗಂಟೆ ಪ್ರೀತಿ ತುಂಬಿದ ನಮ್ಮ ಸಮಯ ಮತ್ತು ನಾಲ್ಕು ವಾತ್ಸಲ್ಯಭರಿತ ಮಾತುಗಳು. ನಮ್ಮ ಈ ಜಂಜಾಟ ಯಾವ ರೀತಿ ಬೆಳೆಯುತ್ತಿದೆ ಅಂದರೆ, ನಮ್ಮ ಜೊತೆ ನಮ್ಮ ಮಕ್ಕಳ್ಳನ್ನು ಕೂಡ ಅದೇ ಹಾದಿಯಲ್ಲಿ ಬೆಳೆಸುತ್ತಿದ್ದೇವೆ: ಮುಂಜಾನೆ ಎದ್ದ ಮಗುವಿಗೆ ಹತ್ತಾರು ಕಲಿಕೆಗಳು, ಮುಂಜಾನೆ ಕರಾಟೆ, ಸಂಗೀತ, ಕ್ರೀಡೆ ಅಂತಾ ದಣಿದು ಬಂದ ಮಗು ಮತ್ತೆ ಶಾಲೆಗೆ ಸಿದ್ದವಾಗುತ್ತದೆ. ವಯಸ್ಸಿಗೆ ಮೀರಿದ ಅಂಶಗಳನ್ನು ತಲೆಗೆ ತುಂಬುವ ಶಾಲೆಯಿಂದ ಮನೆಗೆ ಬಂದ ಮಗು ಮತ್ತೆ ಮನೆಪಾಠ ಅಥವಾ ಇನ್ಯಾವುದೋ ಕಲಿಕೆಗೆ ಹೊರಡುತ್ತದೆ. ರಾತ್ರಿ ಏಳಕ್ಕೋ ಎಂಟಕ್ಕೋ ಮನೆಗೆ ಬಂದ ಮಗು ಅಮ್ಮನ ಜೊತೆ ಒಂದೆರೆಡು ಧಾರಾವಾಹಿ ನೋಡಿ ಮಲಗುತ್ತದೆ. ಈ ಸಿಮೆಂಟು ಕಾಡಿನಲ್ಲಿ ನೂರಾರು ಕನಸುಗಳ ಹಿಂದೆ ಬಿದ್ದ ತಂದೆತಾಯಿಯರ ಮಗು ಬಾವಿಯೊಳಗಿನ ಕಪ್ಪೆಯಾಗಿ ಬದಲಾಗುತ್ತದೆ. ಅಜ್ಜ ಅಜ್ಜಿಯ ಕಥೆ, ಅಮ್ಮನ ಪ್ರೀತಿ, ಅಪ್ಪನ ಬೈಗುಳಗಳು ಎಲ್ಲ ಇಂದಿನ ಮಕ್ಕಳಿಗೆ ಕೇವಲ ಕನಸಾಗಿದೆ.

ಹಾಲು ಎಲ್ಲಿ ಸಿಗುತ್ತದೆ ಅಂದರೆ ಪ್ಯಾಕೇಟಿನಿಂದ ಅನ್ನೋ ಈ ಕಾಲದ ಮಕ್ಕಳು ಅಪ್ಪ ಅಮ್ಮನ ಕೆಲಸದ ನಾಗಾಲೋಟದಲ್ಲಿ ನೂರಾರು ಅವಕಾಶಗಳಿಂದ ವಂಚಿತರಾಗುತ್ತಿವೆ. ಅಪ್ಪನ ಬಿಗಿಯಾದ ತೋಳಿನಲ್ಲಿ ಮುಂಜಾನೆಯ ಸೂರ್ಯನ ಕಿರಣಗಳು ಮೈ ತಾಕುತ್ತಿಲ್ಲ, ಅಜ್ಜಿ ಮಾಡಿಸುವ ಸ್ನಾನದ ಅನುಭವವಿಲ್ಲ, ಅಜ್ಜನ್ನ ಊರುಗೋಲಿಡಿದು ಮನೆ ಪಕ್ಕದ ಬೀದಿಯಲ್ಲಿ ಹೆಜ್ಜೆ ಹಾಕುತ್ತಿಲ್ಲ, ಅಮ್ಮನ ಸೆರಗು ಹಿಡಿದು ಹಿಂದೆ ಹಿಂದೆ ಓಡಾಡಿ ಕಾಡುವ ಸುಂದರ ನೆನಪುಗಳಿಲ್ಲ. ಪಕ್ಕದ ಮನೆಯ ಮಕ್ಕಳ ಜೊತೆ ಬೀದಿಯಲ್ಲಿ ಲಗೋರಿ, ಗೋಲಿ, ಕುಂಟೆಬಿಲ್ಲೆ ಆಡುವ ಅವಕಾಶಗಳೇ ಇಲ್ಲ. ಕೇವಲ ಕಂಪ್ಯೂಟರ್, ಮೊಬೈಲ್, ಟ್ಯಾಬಗಳಲ್ಲಿ ಆಡುವ ವಿಡಿಯೋ ಗೇಮಗಳು ಇಂದಿನ ಮಕ್ಕಳಿಗೆ ದೊಡ್ಡ ಆಟಗಳಾಗಿವೆ. ಬೀದಿಯಲ್ಲಿ ಸೈಕಲ್ ಓಡಿಸಲು ಹೋಗಿ ಯಾವುದೂ ಗೋಡೆಗೆ ಮರಕ್ಕೋ ಗುದ್ದಿ ಕೈ ಕಾಲುಗಳು ಗಾಯಗಳಾದ ಅನುಭವಗಳಿಲ್ಲ. ಹೆತ್ತವರ ನೋವು, ಕೈ ಹಿಡಿದು ಬಂದವಳ ಮರುಗಿದ ಕನಸುಗಳು, ಅವಕಾಶ ವಂಚಿತ ಮಕ್ಕಳು, ಇವರ ಈ ಎಲ್ಲ ಪರಿಸ್ಥಿತಿಗೆ ನಾವು ಮತ್ತು ನಮ್ಮ ಸೂ ಕಾಲ್ಡ್ ಕೆಲಸದ ಚಿಂತೆಗಳೇ ಕಾರಣ ಅನ್ನೋ ಸತ್ಯ ತಿಳಿಯ ಬೇಕಿದೆ.  ಕೇವಲ  ಪ್ರೆಸೆಂಟೇಷನ್, ಆಡಿಟ್, ತಿಂಗಳಾಂತ್ಯದ ಹೆಚ್ಚುವರಿ ಕೆಲಸಗಳು ಜೀವನದ ಕೊನೆಯಲ್ಲಿ ಕೈ ಹಿಡಿಯುವುದಿಲ್ಲ, ನಾವು ನಮ್ಮವರು, ಅವರ ಆಸೆ ಆಕಾಂಕ್ಷೆಗಳತ್ತ ಸ್ವಲ್ಪ ಗಮನಹಹಿಸಿದರೆ ಜೀವನ ಸುಖಮಯವಾಗುತ್ತದೆ.

– ವಿನಯ್ ಕೆಂಕೆರೆ

vyk1988@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!