ಅಂಕಣ

ಮುಟ್ಟಿ ನೋಡಿಕೊಳ್ಳಬೇಕಾದ ಪೆಟ್ಟು ಕೊಡಲು ಜನರೂ ಸಿದ್ಧರಾಗಿದ್ದಾರೆ ಸಿದ್ಧರಾಮಯ್ಯನವರೇ!

ಅಂತಿಮವಾಗಿ ನಾವು ಸಾಧಿಸಬೇಕಾಗಿರುವುದು ಏನು ಎಂಬುದು ನಮ್ಮ ಮನಸ್ಸಿನಲ್ಲಿದ್ದರೆ, ಸಾಗುವ ದಾರಿಗೆ ಅದೇ ದೀವಿಗೆ ಆಗಬಲ್ಲದು. ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ ಬಿ ಎಸ್ ಯಡಿಯೂರಪ್ಪನವರು 2018ರ ವಿಧಾನ ಸಭೆಯ ಚುನಾವಣೆಯಲ್ಲಿ 150 ಸೀಟು ಗೆಲ್ಲಬೇಕೆಂಬ ಮಹಾತ್ವಾಕಾಂಕ್ಷೆಯೊಂದಿಗೆ ಕಣಕ್ಕಿಳಿದಾಗ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಗೂ ಇದು ಸಾಧಿಸಲೇ ಬೇಕಾದದ್ದು ಅನ್ನಿಸಿದೆ. ದೇಶದೆಲ್ಲೆಡೆ 2014ರಲ್ಲಿ ಯಾವ ರೀತಿಯಲ್ಲಿ ಕಾಂಗ್ರೆಸ್ ವಿರೋಧಿ ವಾತಾವರಣವಿತ್ತೋ ಅದೇ ಸ್ಥಿತಿ ಇಂದು ಮತ್ತೆ ಕರ್ನಾಟಕದಲ್ಲಿ ನಿರ್ಮಾಣವಾಗಿದೆ. ಇದರ ಪರಿಣಾಮ ಈಗಲೇ ಗೋಚರವಾಗುತ್ತಿದ್ದು, ಆಡಳಿತಾರೂಢ ಕಾಂಗ್ರೆಸ್ಸಿನ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನಗಳು ವ್ಯರ್ಥವಾಗಲಿರುವುದು ಹಸ್ತಕ್ಕೆ ಅಪ್ರಿಯವೆನಿಸಿದರೂ ವಾಸ್ತವ.

ಯಾಂತ್ರಿಕ ಯುಗದಲ್ಲಿ ನಾಯಕತ್ವವೆಂಬುದೊಂದು ಹುದ್ದೆಯಾಗಿತ್ತಷ್ಟೆ, ಅಲ್ಲಿ ಯಾರನ್ನೋ ತಂದು ಕುಳ್ಳಿರಿಸಿದರೂ ನಡೆಯುತ್ತಿತ್ತು. ಆದರೆ ನಾವಿರುವುದು ಜ್ಞಾನಯುಗ, ಇಲ್ಲಿ ನಾಯಕತ್ವವೆಂಬುದು ಜವಾಬ್ಧಾರಿ – ಅದು ವ್ಯಕ್ತಿಯದೇ ಆಯ್ಕೆ. ಹಾಗೂ ಜ್ಞಾನಯುಗದಲ್ಲಿ ಫಲಿತಾಂಶದ ತೀವ್ರತೆ ಹಿಂದಿನ ದಿನಮಾನಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲದಷ್ಟು ಪ್ರಖರ. ಅಂಕಿ ಅಂಶಗಳ ಪ್ರಕಾರ ಈ ಪರಿಣಾಮ ಹತ್ತಲ್ಲ-ಇಪ್ಪತ್ತಲ್ಲ, ಬರೋಬ್ಬರೀ ಐವತ್ತು ಪಟ್ಟು ಹೆಚ್ಚು!

ಪ್ರೇರಣೆ ಆಂತರ್ಯದಿಂದ ಬರಬೇಕಾದಂತಹುದು, ರಾಜ್ಯ ಕಾಂಗ್ರೆಸ್‍ಗೆ 2018ರ ಚುಣಾವಣೆಯನ್ನು ಗೆಲ್ಲಬೇಕೆಂಬ ಹಂಬಲವಾಗಲೀ, ಉತ್ಸಾಹವಾಗಲೀ ಕಾಣುತ್ತಿಲ್ಲ. ಅದರ ಮನಸ್ಥಿತಿ ಸಧ್ಯ ಒಂದೂ ಕಾಲು ವರ್ಷ ಹೇಗೋ ದೂಡಿದರೆ ಸಾಕೆಂಬಂತಿದೆ! ಮುಂಬರುವ ವಿಧಾನ ಸಭೆಯ ಚುಣಾವಣೆಯಲ್ಲಿ ತಂತ್ರಜ್ಞಾನದ ಬಳಕೆಗೆ ಕಾಂಗ್ರೆಸ್ 600ಕೋಟಿ ವೆಚ್ಚ ಮಾಡಲಿರುವ ಕುರಿತು ಚಿಂತನೆ ನಡೆಸಿರುವುದು ಕೆಲ ದಿನಗಳ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಉಳ್ಳವರು ಶಿವಾಲಯವ ಮಾಡುವರಯ್ಯ ಎಂಬ ಗಾದೆ ನೆನಪಾಗುತ್ತಿದೆ, ಆದರೆ ಕಟ್ಟ ಬೇಕಿರುವುದು ಶಿಲಾಮಯ ಶಿವಾಲಯವಾಗಿರಬೇಕೋ ಅಥವಾ ಕಾಂಕ್ರೀಟಿನದ್ದೋ ಎಂಬುದಾದರೂ ಗೊತ್ತಿರಬೇಕು. ಸುಮ್ಮನೆ ಕಟ್ಟಿದರೆ ಕಟ್ಟೆಯಾಗುತ್ತದೆ. ಸ್ಪೂರ್ತಿಯ ಬೆಳಕು ಒಳಗಿನಿಂದ ಬೆಳಗಬೇಕೇ ಹೊರತು, ಹೊರಗಿನಿಂದ ಯಾರೋ ಹಚ್ಚಿದರೆ ಅದು ಬೆಳಗುವ ಬದಲು ಕೆಲಕಾಲ ಉರಿಯುತ್ತದೆಯಷ್ಟೆ.

ಇವತ್ತಿನ ತಂತ್ರಜ್ಞಾನ ಸ್ನೇಹೀ ಯುವ ಮನಸ್ಸುಗಳು ತಮ್ಮದೇ ರಾಜಕೀಯ ಅಭಿಪ್ರಾಯವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮುಲಾಜಿಲ್ಲದೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವವರು ಕೆಲವರಾದರೆ, ಲೈಕು – ಕಾಮೆಂಟುಗಳ ಮೂಲಕ ಸಹಮತವೋ ಅಥವಾ ತಮ್ಮ ಅಭಿಪ್ರಾಯದೊಂದಿಗೆ ಪ್ರತಿಕ್ರಿಯಿಸುವ ಅವಕಾಶ ಮುಕ್ತವಾಗಿದೆ. ನಿರ್ಲಿಪ್ತವಾಗಿ ಸ್ಟೇಟಸ್ ಓದಿ ಮುಂದೆ ಹೋಗುವವರ ಮನದಲ್ಲಿಯೂ ಒಂದಿಲ್ಲೊಂದು ರಾಜಕೀಯ ಅಭಿಪ್ರಾಯ ಇದ್ದೇ ಇರುತ್ತದೆ.

ಹಾಗೆಯೇ ನಮಗೆ ಆದರ್ಶವಾಗಬೇಕಾದವರು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಆಜಾದ್, ತಿಲಕರು. ತದನಂತರದ ರಾಜಕಾರಣದಲ್ಲಿ ಸರ್ದಾರ್ ಪಟೇಲ್, ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಹಾಗೂ ವಾಜಪೇಯಿಯವರಂತಹ ಮುತ್ಸದ್ಧಿಗಳೇ ಹೊರತು ನೆಹರು ಅಲ್ಲ. ಈ ಬಗ್ಗೆ ಯುವ ಜನತೆಗೆ ಸ್ಪಷ್ಟತೆಯಿದೆ. ಒಂದು ಕುಟುಂಬದ ಸುತ್ತಲೇ ಗಿರಕಿ ಹೊಡೆವ ನಾಯಕರಿಂದ ಯುವಜನತೆ ಮಾರು ದೂರವಿದೆ.

ಕರ್ನಾಟಕದ ಜನತೆ ನಾವು ಯಾರನ್ನೂ ವಿನಾಕಾರಣ ಒಪ್ಪಿಕೊಂಡಿಲ್ಲ. ಅದರಲ್ಲೂ ಇತ್ತೀಚೆಗೆ ಪ್ರಧಾನಿ ಮೋದಿಯವರನ್ನ ಮೆಚ್ಚಿಕೊಳ್ಳುವ ಮುನ್ನ ಅವರ ಕೆಲಸವನ್ನು ನೋಡಿದ್ದೇವೆ. ನೂರಾರು ಯೋಜನೆಗಳು, ಅವುಗಳ ಅನುಷ್ಠಾನಕ್ಕೆ ವೇಗ, ಜನರನ್ನು ತಲುಪಲು ತೆಗೆದುಕೊಂಡ ಪರಿಣಾಮಕಾರಿ ನಿಲುವುಗಳು, ಆಡಳಿತ ಸುಧಾರಣೆಗೆ ತೆಗೆದುಕೊಂಡ ದಿಟ್ಟ ಕ್ರಮಗಳು, ಉತ್ತಮ ವಿದೇಶಿ ನೀತಿಯಿಂದ ಭಾರತ ಜಾಗತಿಕ ಮನ್ನಣೆ ಗಳಿಸುತ್ತಿರುವುದು ಮತ್ತು ಭೃಷ್ಟಾಚಾರ ರಹಿತ ಆಡಳಿತ ಇವೆಲ್ಲವೂ ಇಂದು ಯುವ ಜನತೆಯ ಗಮನಕ್ಕಿವೆ. ಅದರಲ್ಲೂ ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಸರ್ಕಾರ ಕಪ್ಪು ಹಣಕ್ಕೆ ಕಡಿವಾಣ ಹಾಕುವ ಮತ್ತು ಭಯೋತ್ಪಾದನೆಗೆ ಸಹಕಾರಿಯಾಗಿದ್ದ ಹವಾಲಾ ಹಣ ಸ್ಥಗಿತ ಗೊಳಿಸುವಲ್ಲಿ ತೆಗೆದುಕೊಂಡ ದಿಟ್ಟ ಕ್ರಮ 500-1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣ (ರದ್ಧತಿ) ದೇಶವ್ಯಾಪೀ ಪ್ರಶಂಸೆಗೊಳಗಾಗಿದೆ. ಇದು ಆರ್ಥಿಕ ಸುಧಾರಣೆಗೆಗಾಗಿ ನಡೆದ ಸರ್ಜಿಕಲ್ ಸ್ಟ್ರೈಕ್ ಎಂದೇ ಬಿಂಬಿತವಾಗುತ್ತಿದೆ! ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಮಾಡುತ್ತಿರುವುದೇನು? ಮೋದಿಯವರನ್ನು, ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ದೇಶದ್ರೋಹಿಗಳ ಬಗ್ಗೆ ಅಕ್ಕರೆ, ಉಗ್ರರ ಬಗ್ಗೆ ಅನುಕಂಪ ತೋರಿಸುತ್ತಿರುವುದು. ಸರ್ಜಿಕಲ್ ಸ್ಟ್ರೈಕ್‍ನಂತಹ ದಿಟ್ಟ ಕ್ರಮದ ಬಗ್ಗೆಯೂ ಕೇವಲವಾಗಿ ಮಾತನಾಡಿ ಇಂದು ಜನಾಕ್ರೋಶಕ್ಕೆ ತುತ್ತಾಗಿದೆ.

ಇನ್ನು ಭಾರತೀಯರಿಗೆ ಆದರ್ಶವಾಗಿರಬೇಕಾದ ರಾಜರೆಂದರೆ ಅದು ಶಿವಾಜಿ ಮಹರಾಜರೋ, ಮಹಾರಾಣಾ ಪ್ರತಾಪರೋ ಹೊರತು, ಈಗ ರಾಜ್ಯ ಕಾಂಗ್ರೆಸ್ ಮುಂದಿಟ್ಟುಕೊಂಡು ಹೊರಟಿರುವ ಮತಾಂಧ ಟಿಪ್ಪು ಖಂಡಿತ ಅಲ್ಲ. ಆತನೊಬ್ಬ ರಕ್ತಪಿಪಾಸು, ಹಿಂದುಗಳ ಕಗ್ಗೊಲೆಗೈದ ನೀಚನೆಂಬುದು ಇತಿಹಾಸ ದಾಖಲಿಸಿರುವ ಸತ್ಯ. ನಾಡಿನ ಚಿಂತಕರು, ಹಿಂದೂ ಸಂಘಟನೆಗಳು, ಬಿಜೆಪಿ ಹಾಗೂ ರಾಜ್ಯದ ಜನತೆಯಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದ್ದರೂ ಅನಗತ್ಯ ಜಯಂತಿಯೊಂದರ ಆಚರಣೆಗೆ ಕಾಂಗ್ರೆಸ್ ಮುಂದಾಯಿತು. ಹೈಕೋರ್ಟ ಪೀಠ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ, ಆತನ ಜಯಂತಿ ಆಚರಣೆಯ ಅಗತ್ಯವೇನು ಎಂದು ಸರ್ಕಾರವನ್ನು ಪ್ರಶ್ನಿಸಿದರೂ ಸರ್ಕಾರ ತನ್ನ ಮೊಂಡುತನ ‘ಕೈ’ ಬಿಡಲಿಲ್ಲ. ಇಂತಿರಲು ರಾಯಚೂರಿನ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ಸಚಿವ ತನ್ವೀರ್ ಸೇಠ್ ತಮ್ಮ ಮೊಬೈಲಿನಲ್ಲಿ ಅಶ್ಲೀಲ ಚಿತ್ರ ನೋಡಿ ಸಿಕ್ಕಿ ಬಿದ್ದರು, ಕೂಡಲೆ ಸಚಿವರ ರಾಜೀನಾಮೆ ಪಡೆವ ಬದಲು ರಾಜ್ಯದ ಕಾಂಗ್ರೆಸ್ ನಾಯಕರು ತಪ್ಪಿತಸ್ಥ ಸಚಿವರ ಸಮರ್ಥನೆಗೆ ನಿಂತಿರುವುದು ನಾಚಿಕೆ ಗೇಡಿನ ಸಂಗತಿ.

ಕಾಂಗ್ರೆಸ್ ತಾನು ಹಿಂದಿನಿಂದಲೂ ನಂಬಿಕೊಂಡು ಬಂದಿರುವ ವಿಭಜನೆಯ ರಾಜಕೀಯ ತಂತ್ರದ ಮುಂದುವರೆದ ಭಾಗವಾಗಿ ಈ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದೆ. ಇದೊಂದು ಸೈದ್ಧಾಂತಿಕ ಸಂಘರ್ಷವಾಗಿದ್ದರೆ ಚರ್ಚೆಯಾಗಲಿ ಎಂದು ಭಾವಿಸಬಹುದಿತ್ತು, ಆದರೆ ಇದು ಸರ್ಕಾರೀ ಪೋಷಿತ ಅವಿವೇಕತನ. ಈ ರೀತಿಯ ಕೆಳಮಟ್ಟದ ತಂತ್ರಗಾರಿಕೆಯನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್‍ನ ಮತಗಳಿಕೆ ಪ್ರಮಾಣ ಮೊದಲು 1964ರ ಸಾರ್ವತ್ರಿಕ ಚುಣಾವಣೆಯಲ್ಲಿ, ನಂತರ 1984ರಲ್ಲಿ, ಈ ಹಿಂದೆ 2014ರಲ್ಲಿ ನೆಲಕಚ್ಚಿದೆ. ಇದೇ ಫಲಿತಾಂಶವು 2018ರ ವಿಧಾನ ಸಭೆಯ ಚುಣಾವಣೆಯಲ್ಲಿ ರಾಜ್ಯದಲ್ಲೂ ಮರುಕಳಿಸಲಿದೆ.

ದಲಿತೋದ್ಧಾರದ ಸುಳ್ಳು ಹೇಳಿ ಸುಧೀರ್ಘ ಅವಧಿಗೆ ಆಡಳಿತ ನಡೆಸಿ, ಡಾ. ಅಂಬೇಡ್ಕರರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ, ಅವರ ಚುಣಾವಣೆಯ ಸೋಲಿಗೆ ಹಾಗೂ ಅವರ ಸಾವಿನ ನಂತರ ಅಂತ್ಯಕ್ರಿಯೆಗೂ ತೊಂದರೆ ನೀಡಿರುವ ವಿಚಾರಗಳನ್ನು ಬಿಜೆಪಿ ಕಾರ್ಯಕರ್ತರು ಜನತೆಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಸಂಘಟನಾತ್ಮಕವಾಗಿ ಹುರಿಗೊಂಡಿರುವ ಬಿಜೆಪಿಯು ಲಿಂಗಸೂಗೂರಿನಲ್ಲಿ ರಾಜ್ಯ ಮಟ್ಟದ ಎಸ್‍ಟಿ ಸಮಾವೇಶವನ್ನು ಆಯೋಜಿಸಿ ಭಾರೀ ಯಶಸ್ಸು ಕಂಡಿದೆ. ಸಧ್ಯವೇ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶಕ್ಕೆ ಅಣಿಯಾಗುತ್ತಿದೆ.

ಇಂತಿರಲು ಮಾನ್ಯ ಮುಖ್ಯಮಂತ್ರಿಗಳು ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದಿದ್ದಾರೆ; ಇದು 2016ರ ವರ್ಷದ ಜೋಕು, ತಾನು ನಿಂತ ನೆಲ ಕುಸಿಯುತ್ತಿರುವ ಅನುಭವ ಆಗುತ್ತಿರುವಾಗ ಈ ತರಹದ ಹತಾಶೆಯ ಮಾತೆಲ್ಲ ಸಹಜ ಬಿಡಿ. ಕಾಂಗ್ರೆಸ್ ಎಂಬ ಮುಳುಗುವ ಹಡಗಿಗೆ ಕೊನೆಯ ಮೊಳೆ ಹೊಡೆಯಲು ‘ಕೈ’ ನಾಯಕರೇ ನಾಮುಂದು-ತಾಮುಂದು ಎಂದು ಹೊರಟಿರುವಂತಿದೆ. ಕೆಲವರು ವೈಯಕ್ತಿಕವಾಗಿ, ಇನ್ನು ಕೆಲವರು ಸರ್ಕಾರದ್ದೇ ಭಾಗವಾಗಿ. ಮುಟ್ಟಿ ನೋಡಿಕೊಳ್ಳಬೇಕಾದ ಪೆಟ್ಟು ಕೊಡಲು ಜನರೂ ಸಿದ್ಧರಾಗಿದ್ದಾರೆ ಸಿದ್ಧರಾಮಯ್ಯನವರೇ!

-ಗುರುಪ್ರಸಾದ ಹೆಗಡೆ,

ಸಾಫ್ಟವೇರ್ ಇಂಜಿನೀಯರ್

ಬಿಜೆಪಿ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು

prasad.hgd@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!