ಅಂಕಣ

ಬಡತನ ನಿರ್ಮೂಲನೆ, ಪಟಾಕಿ ದುಡ್ಡು ಎಂಬ ಅಪ್ರಾಯೋಗಿಕ ಸಮೀಕರಣ

ದೀಪಾವಳಿ ಬರುತ್ತಿದ್ದಂತೆ ಎಲ್ಲ ಕಡೆಯಲ್ಲೂ ಪಟಾಕಿ ಹೊಡೆಯುವುದರ ಬಗ್ಗೆ ಮಾತು ಕೇಳಿಬರುತ್ತದೆ.  ಪಟಾಕಿ ಹೊಡೆಯುವ ದುಡ್ಡನ್ನು ಬಡವರಿಗೆ ಕೊಡಿ ಎಂಬ ಔದರ್ಯ ಕೆಲವರದಾದರೆ ಇನ್ನೂ ಕೆಲವರದು ಪಟಾಕಿಯಿಂದಾಗುವ ಪರಿಸರ ಮಾಲಿನ್ಯವಾಗುತ್ತೆ ಎಂಬ ಅಭಿಪ್ರಾಯ. ಇನ್ನೂ ಸ್ವಲ್ಪ ಜನ ಪಟಾಕಿಯ ಶಬ್ದದಿಂದ ದನ ಜಾನುವಾರುಗಳಿಗೆ ತೊಂದರೆಯಾಗುತ್ತದೆ ಎಂಬ ವಾದ. ಸರಿ ಇದೆಲ್ಲದರ ಹಿಂದೆ ಅದಷ್ಟೇ ಉದ್ದೇಶವಿದ್ದರೇ ಒಪ್ಪಿಕೊಳ್ಳೋಣ. ಆದರೆ ಕೆಲವರಿಗೆ ಹಿಂದೂ ಆಚರಣೆಗಳನ್ನು ದಿನೇದಿನೇ ಕ್ಷೀಣಿಸುವಂತೆ ಮಾಡಬೇಕು ಎಂಬ ಉದ್ದೇಶವಿದೆ ಅದನ್ನರಿಯದ ಕೆಲವರು ಈ ಹೇಳಿಕೆಯನ್ನು ಪ್ರೋತ್ಸಾಹಿಸಿದರೇ ಇನ್ನೂ ಕೆಲವರು ಅನ್ಯಧರ್ಮಗಳ ಆಚರಣೆಯ ಜೊತೆಗೆ ಅರ್ಥಹೀನ ಹೋಲಿಕೆ ಮಾಡಿ ವಿತಂಡವಾದಕ್ಕೆ ನಿಂತುಬಿಡುತ್ತಾರೆ. ಅವರವರಿಗೆ ಅವರವರು ಹೇಳುವ ಮಾತೇ ಸರಿ.

ಪಟಾಕಿ ನಿಷೇಧದಿಂದ ಬಡತನ ನಿರ್ಮೂಲಣೆ ಅಸಾಧ್ಯ. ಪರಿಸರ ಮಾಲಿನ್ಯವಾಗುತ್ತದೆ ಎಂಬುದು ಒಪ್ಪತಕ್ಕ ಮಾತು.

ಮೊದಲನೆಯ ಮಾತು ಪಟಾಕಿಯ ದುಡ್ಡನ್ನು ಬಡವರಿಗೆ ಕೊಡೋಣ ಎಂಬುದರ ಬಗ್ಗೆ ಕೆಲವು ಅಂಕಿ ಅಂಶಗಳೊಂದಿಗೆ ವಿಮರ್ಶಿಸಬೇಕಿದೆ. ಈ ಹಿಂದೆ ವಿಶ್ವೇಶ್ವರ ಭಟ್ಟರು ತಮ್ಮ ಒಂದು ಲೇಖನದಲ್ಲಿ ಬರೆದಿದ್ದರು. ಅದರಲ್ಲಿ ತಾವು ಓದಿದ ಒಂದು ಪುಸ್ತಕದ ಉಲ್ಲೇಖ ಮಾಡಿದ್ದರು. “ಏನೇ ಆಗಲಿ ಒಳ್ಳೆಯದನ್ನೇ ಮಾಡಿ ಮಾಡುತ್ತಲೇ ಇರಿ” ಕೆಂಟ್ ಎಮ್ ಕೀತ್ ಅವರ Anyway ಪುಸ್ತಕವನ್ನು ರವಿ ಕೃಷ್ಣಾ ರೆಡ್ಡಿ ಅವರು ಕನ್ನಡಕ್ಕೆ ಅನುವಾದಿಸಿದ ಪುಸ್ತಕ. ಪ್ರಪಂಚದಲ್ಲಿ ಕುಸಿಯುತ್ತಿರುವ ಮೌಲ್ಯಗಳು ಮತ್ತಿತರ ವಿಚಿತ್ರ ವಿರೋಧಾಭಾಸ ವಿಷಯಗಳ ವೈಚಾರಿಕ ಮಂಡನೆ ಆ ಕೃತಿಯಲ್ಲಿತ್ತು. ಆ ಕೃತಿಯ ಬಗ್ಗೆ ಹೆಚ್ಚಿಗೆ ಚರ್ಚಿಸದೆ ಅದರಲ್ಲಿನ ಒಂದು ಅಂಶವನ್ನು ತೆಗೆದುಕೊಳ್ಳೋಣ.”ಈ ಭೂಗ್ರಹದ ಮೇಲಿನ ಪ್ರತಿಯೊಬ್ಬನಿಗೂ ಅಗತ್ಯವಾದಷ್ಟು ಆಹಾರ ನೀಡಲು ಎಷ್ಟು ಬೇಕೋ ಅದಕ್ಕಿಂತ ಹೆಚ್ಚಿನದನ್ನು ಇಂದು ಜಗತ್ತಿನಾದ್ಯಂತ ಉತ್ಪಾದಿಸಲಾಗುತ್ತಿದೆ. ಆದರೂ, ಹಸಿವಿನಿಂದ ಪ್ರತಿವರ್ಷವೂ ಲಕ್ಷಾಂತರ ಜನ ಸಾಯುತ್ತಿದ್ದಾರೆ. ಹಾಗೆಯೆ, ಪೌಷ್ಟಿಕಾಂಶದ ಕೊರತೆಯಿಂದ ನೂರು ಕೋಟಿಗೂ ಹೆಚ್ಚು ಜನ ಬಳಲುತ್ತಿದ್ದಾರೆ.” ಎಂದು ಉಲ್ಲೇಖಿಸಲಾಗಿದೆ. ಮುಂದುವರೆಯುತ್ತಾ “ಅಮೆರಿಕ ಪ್ರಪಂಚದಲ್ಲಿಯೆ ಅತ್ಯಂತ ಶ್ರೀಮಂತ ರಾಷ್ಟ್ರ. ಆದರೂ ,ಒಂದು ಕೋಟಿಗೂ ಹೆಚ್ಚಿನ ಮಕ್ಕಳು ಇಲ್ಲಿ ದಾರಿದ್ರ್ಯ ರೇಖೆಯ ಕೆಳಗೆ ಸಿಕ್ಕಿಬಿದ್ದಿದ್ದಾರೆ. ೧೯೮೦ ರಿಂದ ೧೯೯೦ರ ಅವಧಿಯಲ್ಲಿ ದಾರಿದ್ರ್ಯ ರೇಖೆಗಿಂತ ಕೆಳಗೆ ಜೀವಿಸುತ್ತಿರುವ ಐದು ವರ್ಷಕ್ಕಿಂತ ಕಮ್ಮಿ ವಯಸ್ಸಿನ ಮಕ್ಕಳು ಶೇ ೨೩ ರಷ್ಟು ಹೆಚ್ಚಾಗಿದ್ದಾರೆ.”

ಬಡತನವೆಂಬುದು ಕೆಂಟ್ ಎಮ್ ಕೀತ್ ಅವರ ಪುಸ್ತಕದ ಪ್ರಕಾರ ಅಮೆರಿಕಾದಂತ ಶ್ರೀಮಂತ ರಾಷ್ಟ್ರಕ್ಕೂ ಬಿಡದ ಪೀಡೆ. ದುಡ್ಡಿನ ಧ್ರುವೀಕರಣದಿಂದ ಬಡತನ ನಿರ್ಮಾಣವಾಗಿದೆಯೇ ಹೊರತು ಮತ್ಯಾವುದಕ್ಕೂ ಅಲ್ಲ. ಅನುಕೂಲಸ್ಥರು ತಮ್ಮ ಗಳಿಕೆಯ ಒಂದು ಅಂಶವನ್ನು ಬಡತನ ನಿರ್ಮೂಲನೆಗೆ ತೆಗೆದಿಟ್ಟರೆ ಮುಗಿದೇಹೋಯಿತು. ೧೦,೦೦೦ ಗಳಿಸಲಿ ೧,೦೦,೦೦೦ ಗಳಿಸಲಿ ತಿಂಗಳ ಕೊನೆಯಲ್ಲಿ ಖಾಲಿ ಕೈಯ ಫಕೀರರೆ ಅಲ್ಲಿಗೆ ಅವರವರ ಜೀವನ ಶೈಲಿಯನ್ನು ನೀವೇ ಊಹಿಸಿಕೊಳ್ಳಿ. ಅದ್ದೂರಿ ಬದುಕನ್ನು ಬಿಟ್ಟು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿ ನಿಮ್ಮ ಭವಿಷ್ಯತ್ತಿಗೆ ಎಷ್ಟು ಬೇಕೊ ಎತ್ತಿಟ್ಟು ಮಿಕ್ಕಿದ್ದನ್ನು ಬಡವರಿಗೆ ಕೊಟ್ಟು ಬಿಡಿ. ಪಟಾಕಿಯಿಂದ ಎಷ್ಟು ಜನರ ಹೊಟ್ಟೆ ತುಂಬೀತು. ಬಡವರ ಹೊಟ್ಟೆ ತುಂಬಿಸಲು ಪಟಾಕಿಯ ದುಡ್ಡೇ ಬೇಕೆ? ಅದೂ ಹಬ್ಬದಾಚರಣೆಯ ಪಟಾಕಿಯಿಂದಲೇ ಆಗಬೇಕೆ. ನಟನೊಬ್ಬನ ಸಿನಿಮಾ ರಿಲೀಸ್ ಆದಾಗ ಹೊಡೆಯವ ಪಟಾಕಿ, ಎಲೆಕ್ಷನ್‌ನಲ್ಲಿ ಆರಿಸಿ ಬಂದವನ ಕಡೆಯವರು ಹೊಡೆಯುವ ಪಟಾಕಿ, ಯಾವುದೇ ಕ್ರೀಡೆಗಳಲ್ಲಿ ಗೆದ್ದಾಗ ಹೊಡೆಯೋ ಪಟಾಕಿ ಉಳಿಸಿದರೂ ಹಲವರ ಹೊಟ್ಟೆ ತುಂಬಿಸಬಹುದು. ವರ್ಷಕ್ಕೊಮ್ಮೆ ಬಂದು ಹೋಗುವ ದೀಪಾವಳಿಗಿಂತ ದಿನವೂ ಆಚರಿಸುವ ಈ ವಿಜಯೋತ್ಸವಗಳಿಗೆ ಹಾರಿಸಲಾಗುವ ಪಟಾಕಿಗಳೇ ಹೆಚ್ಚಲ್ಲವೇ?

ವಿಷಯಾಂತರವೆನಿಸಿದರೂ ಹಸಿವನ್ನು ನೀಗಿಸುವ ಇನ್ನೊಂದು ವಿಧಾನವನ್ನು ಹೇಳಲೇಬೇಕು.  ಒಂದು ದೊಡ್ಡ ಮದುವೆಯಾದರೆ ಅದರಲ್ಲಿ ಉಳಿಯುವ ಅಡುಗೆ ಇನ್ನೊಂದು ಮದುವೆಗೆ ಬೇಕಾಗುವ ಊಟದ ಅವಶ್ಯಕತೆಯ ಅರ್ಧದಷ್ಟು ನಿಭಾಯಿಸಬಲ್ಲದು ಅದನ್ನು ಚೆಲ್ಲುವುದಕ್ಕಿಂತ ಇಲ್ಲದವರಿಗೆ ತಲುಪಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕಾಗಿದೆ. ಅದೇ ರೀತಿ ಹೋಟೆಲ್’ಗಳಲ್ಲಿ ಉಳಿಯುವ ಊಟವನ್ನು ಬಡವರಿಗೆ ತಲುಪಿಸಬಹುದು. ಅದ್ದೂರಿ ಮದುವೆಗಾಗುವ ಖರ್ಚನ್ನು ಉಳಿಸಿ ಅದರಲ್ಲಿ ದೀನರಿಗೆ ಬಟ್ಟೆ ಬರೆಗಳನ್ನು ಕೊಡಿಸಬಹುದು. ಅದೆಲ್ಲವೂ ಬೇಡ ಬರೀ ಬೆಂಗಳೂರು ಒಂದರಲ್ಲೇ ಹಾಕಲಾಗುವ ಪ್ಲೆಕ್ಸ್’ಗಳ ದುಡ್ಡನ್ನು ಉಳಿಸಿ ಇಲ್ಲದವರ ಒಳಿತಿಗೆ ಬಳಸಬಹುದು. ಇಂಥ ಉದಾಹರಣೆಗಳನ್ನು ಕೊಡುತ್ತಾ ಹೋದರೆ ನೂರಾರು ಕೊಡಬಹುದು. ಅದೆಲ್ಲವನ್ನೂ ಬಿಟ್ಟು ದೀಪಾವಳಿಯ(?) ಪಟಾಕಿಯ ದುಡ್ಡೇ ಬೇಕು ಎಂಬುದು ಅದ್ಯಾವ ಪರಿಯ “ಹಂಸಕ್ಷೀರ” ನ್ಯಾಯ? ದೇಶದ ಬಹುಸಂಖ್ಯಾತ ಧರ್ಮದ ಆಚರಣೆಗಳನ್ನು ಪ್ರಶ್ನಿಸುತ್ತಲೇ ಇರುವವರಿಗೆ ಬಡತನ ನಿರ್ಮೂಲನೆ ಎಂಬುದು ಬರೀ ನೆಪ ಮಾತ್ರ.

ಇನ್ನು ಪರಿಸರ ಮಾಲಿನ್ಯ ವಿಷಯಕ್ಕೆ ಬರೋಣ. WHO ಮಾಡಿದ ಅಧ್ಯಯನಗಳ ಪ್ರಕಾರ ಪಟಾಕಿಯಿಂದ ಸಲ್ಪರ್ ಡೈ ಆಕ್ಸೈಡ್ ಪ್ರಮಾಣ ಆರೋಗ್ಯಕರ ಮಿತಿಗಿಂತ ೨೦೦ ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅದು ಅಸ್ತಮಾದಂಥ ಹಾನಿಕಾರಕ ಖಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಇನ್ನೊಂದು ತರದ ಮಾಲಿನ್ಯ ಶಬ್ದಮಾಲಿನ್ಯ. ಪಟಾಕಿ ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125dBಗಿಂತ ಜಾಸ್ತಿ ಶಬ್ದ ಉತ್ಪತ್ತಿಯಾಗುತ್ತಿದ್ದರೆ ಅದನ್ನು ನಿಷೇಧಿಸಬೇಕೆಂಬ ನಿಯಮವಿದೆ.ಇದು 1986 ರ ಪರಿಸರ ಸಂರಕ್ಷಣಾ ಖಾಯ್ದೆಯಡಿಯಲ್ಲಿ 89ನೇಯ ನಿಯಮವಾಗಿ ಉಲ್ಲೇಖವಿದೆ. ಮತ್ತೊಂದು ಖಾಯ್ದೆ ಹೇಳುವ ಪ್ರಕಾರ ಪ್ರತಿಯೊಂದು ಪಟಾಕಿಯ ಉತ್ಪಾದಕ ಕಂಪನಿಗಳು ಒಂದು ಪಟಾಕಿ ತಯಾರಿಸಲು ಬಳಸುವ ರಾಸಾಯನಿಕಗಳು ಮತ್ತು ಅವುಗಳ ಪ್ರಮಾಣ ಹಾಗೂ ಒಂದು ಪಟಾಕಿ ಸಿಡಿಯುವಾಗ ಉಂಟಾಗುವ ಶಬ್ದದ ಪ್ರಮಾಣವನ್ನು ಪಟಾಕಿಯ ಬಾಕ್ಸ್ ಮೇಲೆ ಮುದ್ರಿಸಲೇಬೇಕು. ಆದರೆ ಈ ನಿಯಮಗಳನ್ನು ಪಾಲಿಸುವ ಪಟಾಕಿ ಉತ್ಪಾದಕರು ತುಂಬಾ ಕಡಿಮೆ. ಸಲ್ಪರ್ ಸಲ್ಪರೇಟ್ ಕ್ಲೋರೆಟ್ ಇರುವಂತ ಪಟಾಕಿಗಳನ್ನಂತೂ ಸರ್ಕಾರ ಎಂದೋ ನಿಷೇಧ ಹೇರಿದೆ. ಚೀನಾದಿಂದ ಉತ್ಪಾದನೆಯಾಗಿ ಬರುವ ಕೆಲವು ಪಟಾಕಿಗಳಲ್ಲಿ ಇವುಗಳ ಪ್ರಮಾಣ ಹೇರಳವಾಗಿರುತ್ತದೆ. ಡಿಪಾರ್ಟಮೆಂಟ್ ಆಫ್ ಎಕ್ಸಪ್ಲೋಸಿವ್ 10 ವರ್ಷದ ಹಿಂದೆ ಮಾಡಿರುವ ನಿಯಮದ ಪ್ರಕಾರ ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ಅಧಿಕ ಶಬ್ದ ಮಾಡುವ ಪಟಾಕಿಯನ್ನು ಹಾರಿಸುವಂತಿಲ್ಲ. ಆದರೆ ಇವೆಲ್ಲವೂ ಅಷ್ಟೊಂದು ಕಡ್ಡಾಯವಾಗದೇ ಇರುವ ಕಾರಣ ಯಾರ ಗಮನಕ್ಕೂ ಬರದೇ ಹೋಗಿವೆ. ಸುಪ್ರೀಂ ಕೋರ್ಟಿನ ತನಕ ಕೆಲವೊಮ್ಮೆ ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮನವಿಗಳು ಹೋದರೂ ಒಬ್ಬರ ಧಾರ್ಮಿಕ ಆಚರಣೆಗೆ ಧಕ್ಕೆ ಬರುವುದು ಎಂಬ ಕಾರಣ ಕೊಟ್ಟು ಸಂಪೂರ್ಣ ನಿಷೇಧವನ್ನು ತಿರಸ್ಕರಿಸಿದ್ದಲ್ಲದೇ ಸರ್ಕಾರಗಳು ಪಟಾಕಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಹೇಳಿದೆ. ಇದು ಬರೀ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ಎಲ್ಲ ಪ್ರಬುದ್ಧ ಪ್ರಜೆಗಳದೂ ಹೌದು. ಈ ಕುರಿತು ಗೆಳೆಯ, ಸಹಬರಹಗಾರಾದ ಲಕ್ಷ್ಮೀಶ ಅವರು ಬರೆದ ಒಂದು ಲೇಖನವನ್ನು ರೀಡೂ ಕನ್ನಡ ಬಳಗದವರು ಪ್ರಕಟಿಸಿದ್ದಾರೆ. ಅವರ ಲೇಖನ ಪ್ರಶಂಸನೀಯವಾಗಿದೆ ಮತ್ತು ಅದಕ್ಕೆ ನನ್ನ ಒಪ್ಪಿಗೆಯೂ ಇದೆ. ಅದರಲ್ಲಿರುವ ಸಂಸ್ಕಾರಯುತ ಜೀವಿಯ ಸಾಮಾಜಿಕ ಕಾಳಜಿ ಅತ್ಯಂತ ಗಮನಾರ್ಹ. ಪರಿಸರ ಮಾಲಿನ್ಯ ದೃಷ್ಟಿಯಿಂದ ಪಟಾಕಿಯನ್ನು ಸ್ವಲ್ಪ ಕಡಿಮೆ ಮಾಡುವುದು ಒಳಿತು.

ಮೇಲೆ ಹೇಳಿದಂತೆ ಪಟಾಕಿಯ ದುಷ್ಪರಿಣಾಮಗಳನ್ನು ಉತ್ಪಾದನೆಯಾಗುವಾಗಲೇ ತಡೆಹಿಡಿಯುವ ಬಗ್ಗೆ ಸರ್ಕಾರ ಕಾಳಜಿವಹಿಸಬೇಕು. ಎರಡನೆಯದು ಅಪ್ಪಿತಪ್ಪಿ ಯಾವುದಾದರೂ ಪಟಾಕಿ ನಿಯಮಗಳನ್ನು ಮೀರಿ ಬಂದರೆ ಗ್ರಾಹಕರಾದರೂ ತೆಗೆದುಕೊಳ್ಳುವಾಗ ಅದನ್ನೊಮ್ಮೆ ಪರೀಕ್ಷಿಸಿ ತೆಗೆದುಕೊಳ್ಳಬೇಕು. ಆದಷ್ಟು ತಿಳುವಳಿಕೆಯಿಲ್ಲದ ಮಕ್ಕಳನ್ನು ತುಂಬಾ ಹಾನಿಕಾರಕ ಪಟಾಕಿಗಳಿಂದ ದೂರವಿಡಬೇಕು. ತಾವು ಹೊಡೆದ ಪಟಾಕಿಯಿಂದ ಉಂಟಾದ ಕಸವನ್ನು ತಾವೇ ತೆಗೆಯಬೇಕೆಂಬುದು ನಾಗರಿಕ ಪ್ರಜ್ಞೆ ಇಲ್ಲದಿದ್ದರೆ ನೀವೊಬ್ಬ ಅನಾಗರಿಕ ಸಂಪ್ರದಾಯವಾದಿಯಾಗುತ್ತೀರಿ. ಮತ್ತೊಂದು ವಿಚಾರ ಸಂಪ್ರದಾಯಿಕ ಆಚರಣೆ ಮತ್ತು ಸಾಮಾಜಿಕ ಜವಾಬ್ದಾರಿ ಎರಡನ್ನೂ ಸಮಾನವಾಗಿ ಸರಿದೂಗಿಸಿಕೊಂಡು ಹೋಗುವುದು ಪ್ರಜ್ಞಾವಂತರ ನಡೆ.ನಿಯಮದಂತೆ ರಾತ್ರಿ ಹೊತ್ತು ನಿಶ್ಯಬ್ದವಿದ್ದು ಸಾಮಾನ್ಯವಾಗಿ ವಿಶ್ರಾಂತಿಯ ಸಮಯವಾದ್ದರಿಂದ ಆ ಸಮಯದಲ್ಲಿ ಪಟಾಕಿಯನ್ನು ಹೊಡೆಯುವುದನ್ನು ಸ್ವಇಚ್ಛೆಯಿಂದ ಬಿಟ್ಟರೆ ಒಳಿತು. ಅದಲ್ಲದೆ ಹಿಂದೂ ಧರ್ಮ ತನ್ನ ಆಚರಣೆಗಳನ್ನು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗೊಳಿಸುತ್ತಾ ಬಂದಿದೆ. ಹಿಂದೂಗಳದು ಅನಾದಿಕಾಲದ ಕಂದಾಚಾರಗಳನ್ನೇ ನಂಬಿಕೊಂಡು ಬದುಕುವ ಧರ್ಮವಲ್ಲ.  ನನ್ನ ಲೇಖನದ ಒಟ್ಟು ಸಾರಾಂಶವಿಷ್ಟೆ ಪಟಾಕಿಯ ನಿಷೇಧದಿಂದ ಬಡತನ ನಿರ್ಮೂಲನೆ ಎಂಬುದು ಅಪ್ರಾಯೋಗಿಕ ಯಾಕೆಂದರೆ ಪಟಾಕಿ ಹೊಡೆಯುವುದು ಹಾಸುಹೊಕ್ಕಾಗಿ ನಮ್ಮಲ್ಲಿದೆ.ಅದರಿಂದ ಬಡತನ ನಿರ್ಮೂಲನೆ ಅಸಾಧ್ಯ. ಸಾಧ್ಯವಾದರೂ ಅದರ ಪ್ರಮಾಣ ನಗಣ್ಯ. ಇನ್ನೂ ಪಟಾಕಿಯನ್ನು ಹೊಡೆಯುವಾಗ ಸ್ವಲ್ಪ ಕಾಳಜಿ ವಹಿಸಿದರೆ ಮತ್ತು ಪಟಾಕಿಯ ಪ್ರಮಾಣವನ್ನು ಸ್ವಲ್ಪ ಕಡಿಮೆಮಾಡಿದರೆ ನಮ್ಮ ಸುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬಹುದು. ಸದಾಕಾಲ ನಿಮ್ಮ ಬಾಳಲ್ಲಿ ಬೆಳಕಿರಲಿ ಎಂದು ಹಾರೈಸುವೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!