ಅಂಕಣ

ದೊಡ್ಡಣ್ಣನಿಗೆ ಸವಾಲೊಡ್ಡಿದ ಕೆಚ್ಚೆದೆಯ ಸಾಹಸಿ ‘ಫಿಡೆಲ್ ಕ್ಯಾಸ್ಟ್ರೋ’

ಇವನ ಹೆಸರು ಕೇಳಿದೊಡನೆಯೇ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೇರಿಕಾ ಕೂಡಾ ಒಮ್ಮೆ ಬೆಚ್ಚಿ ಬೀಳುತ್ತದೆ. ನಿದ್ರೆಯಲ್ಲಿಯೂ ಕೂಡಾ ಈ ಹೆಸರು ಕೇಳಿದೊಡನೆ ಅಮೇರಿಕಾ ದೇಶ ತನ್ನ ನಿದ್ರೆಯನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಿಡುತ್ತದೆ. ಇಂತಹ ಅಪ್ರತಿಮ ವ್ಯಕ್ತಿ ಯಾರು ? ಎನ್ನುವ ಭಾವನೆ ನಿಮ್ಮಿಲ್ಲಿ ಬಂದಿರಬಹುದು. ಹೌದು ಆತನೇ ಪುಟ್ಟ ಕ್ಯೂಬಾ ರಾಷ್ಟ್ರದ ‘ಫಿಡೆಲ್ ಕ್ಯಾಸ್ಟ್ರೋ’. ಜಗತ್ತಿನ ದೊಡ್ಡಣ್ಣ ಎಂದು ಮೆರೆಯುತ್ತಿದ್ದ, ಅಮೇರಿಕ ರಾಷ್ಟ್ರಕ್ಕೇ ಸವಾಲೊಡ್ಡಿದಂತಹ ಕ್ರಾಂತಿಕಾರಿ, ದಿಟ್ಟೆದೆಯ ಹೋರಾಟಗಾರ ಈ ಫಿಡೆಲ್ ಕ್ಯಾಸ್ಟ್ರೋ.

ಕ್ಯೂಬಾದ ಬಿರಾನ್‍ನಲ್ಲಿ 1926 ರಂದು ಏಂಜಲ್ ಕ್ಯಾಸ್ಟ್ರೋ ಮತ್ತು ಲಿನ ರುಜ್ ದಂಪತಿಯ ಏಳು ಮಕ್ಕಳ ಪೈಕಿ ಒಬ್ಬರಾಗಿ ಜನಿಸಿದ ಫಿಡೆಲ್ ಅಲೆಕ್ಸಾಂಡ್ರೋ ಕ್ಯಾಸ್ಟ್ರೋ ರುಜ್ ನಂತರದ ದಿನಗಳಲ್ಲಿ ಫಿಡೆಲ್ ಕ್ಯಾಸ್ಟ್ರೋ ಎಂದೇ ಪ್ರಪಂಚದೆಲ್ಲೆಡೆ ಪ್ರಖ್ಯಾತರಾದವರು. ಸಾಂಟಿಯಾಗೋದ ಖಾಸಗಿ ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಆರಂಭಿಸಿದ ಕ್ಯಾಸ್ಟ್ರೋ 1945 ರಲ್ಲಿ ಹವಾನಾದ ಪ್ರತಿಷ್ಟಿತ ಕಾಲೇಜೊಂದರಲ್ಲಿ ಇತಿಹಾಸ ಮತ್ತು ಭೌಗೋಳಿಕ ಶಾಸ್ತ್ರ ವಿಷಯಗಳಲ್ಲಿ ಪದವಿ ಶಿಕ್ಷಣವನ್ನು ಪಡೆದರು. 1950 ರಲ್ಲಿ ಯುನಿವರ್ಸಿಟಿ ಆಫ್ ಹವಾನದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದರು.

ಇದೇ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಮಿಲಿಟರಿ ಆಢಳಿತವನ್ನು ಕಿತ್ತೊಗೆಯುವ ಕ್ರಾಂತಿಯೊಂದು ನಡೆಯುತ್ತಿರುವುದು ಕ್ಯಾಸ್ಟ್ರೋ ಗಮನಕ್ಕೆ ಬಂದಿತು. ಇಂತಹ ಕ್ರಾಂತಿಕಾರರ ಜೊತೆ ಕೈಜೋಡಿಸಿದ ಕಾರಣಕ್ಕೆ ಕ್ಯಾಸ್ಟ್ರೋ ಬಂಧನಕ್ಕೊಳಗಾಗಬೇಕಾಯಿತು. ಕೆಲವೇ ದಿನಗಳಲ್ಲಿ ಸೆರೆವಾಸದಿಂದ ಹೊರ ಬಂದ ಕ್ಯಾಸ್ಟ್ರೋ ಹವಾನದಲ್ಲಿ ವಿದ್ಯಾರ್ಥಿ ಪ್ರತಿಭಟನೆಯೊಂದರ ನಾಯಕತ್ವ ವಹಿಸಿಕೊಂಡರು. ಇಲ್ಲಿ ಅವರಿಗೆ ಕಮ್ಯೂನಿಸ್ಟ್ ನಾಯಕರ ಪರಿಚಯ ಆಯಿತು. ಇಲ್ಲಿಂದ ಹಲವಾರು ಪ್ರತಿಭಟನೆಗಳ ಮೂಲಕವೇ ಕ್ಯಾಸ್ಟ್ರೋ ರಾಷ್ಟ್ರಜನತೆಯ ಗಮನವನ್ನು ತನ್ನತ್ತ ಸೆಳೆದರು.

ಇಲ್ಲಿಂದ ತನ್ನ ರಾಜಕೀಯ ಜೀವನವನ್ನು ಪ್ರಾರಂಭಿಸಿದ ಕ್ಯಾಸ್ಟ್ರೋ ಸರ್ಕಾರ ವಿರೋಧಿ ಚಳುವಳಿಗಳ ನೇತೃತ್ವವನ್ನು ವಹಿಸಿಕೊಂಡರು. ಇದೇ ಕಾರಣಕ್ಕಾಗಿ 1952ರಲ್ಲಿ ಚುನವಣೆಗೆ ಸ್ಪರ್ಧಿಸುವ ಯೋಜನೆ ರೂಪಿಸಿದ್ದರು. ಆದರೆ ಆ ವರ್ಷ ಚುನಾವಣೆಯು ಅಮಾನತುಗೊಂಡಿತು. ಇದರಿಂದಾಗಿ ಕ್ಯೂಬಾದಲ್ಲಿ ರಾಜಕೀಯ ಅಸ್ಥಿರತೆ ತಲೆದೂರಿತು. ಇದೇ ಸಂದರ್ಭದಲ್ಲಿ ಕ್ಯಾಸ್ಟ್ರೋ ಸಾಂಟಿಯಾಗೋದ ಸೇನಾ ನೆಲೆಗಳ ಮೇಲೆ ದಾಳಿಯನ್ನು ನಡೆಸಿದ್ದರಿಂದಾಗಿ ಬಂಧನಕ್ಕೊಳಗಾಗಬೇಕಾಯಿತು. 15 ವರ್ಷ ಸೆರೆವಾಸ ಇದ್ದರೂ ಕೂಡಾ ರಾಜಕೀಯ ಖೈದಿ ನೆಲೆಗಟ್ಟಿನಲ್ಲಿ 1955ರಲ್ಲಿ ಬಿಡುಗಡೆಗೊಂಡರು. ಇದು ಫಿಡೆಲ್‍ರ ರಾಜಕೀಯ ಜೀವನದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಯಿತು.

ಇದೇ ಸಂದರ್ಭದಲ್ಲಿ ಮೆಕ್ಸಿಕೋದಲ್ಲಿ ನೆಲೆನಿಂತ ಕ್ಯಾಸ್ಟ್ರೋ ಮತ್ತು ಆತನ ಸಹೋದರ ಅಲ್ಲಿ ಅರ್ಜೆಂಟೇನಾದ ಫಿಸಿಷಿಯನ್ ಚಿ ಗುವೆರಾ ಅವರನ್ನು ಭೇಟಿಯಾದರು. ಮೂವರೂ ಸೇರಿ ಗೆರಿಲ್ಲ ಯುದ್ಧ ಗುಂಪನ್ನು ನಿರ್ಮಿಸಿಕೊಂಡು 1959 ರಲ್ಲಿ ಕ್ಯೂಬಾವನ್ನು ವಶಪಡಿಸಿಕೊಂಡ ಕ್ಯಾಸ್ಟ್ರೋ ಪ್ರಧಾನಿಯಾಗಿ ನೇಮಕಗೊಂಡರು. ಇದೇ ಸಂದರ್ಭದಲ್ಲಿ ಅಮೇರಿಕಾ ಕ್ಯಾಸ್ಟ್ರೋ ಬೆಳವಣಿಗೆಯನ್ನು ಸಹಿಸದೆ ಅವರ ಪದಚ್ಯುತಿಗೆ ಕುಮ್ಮಕ್ಕು ನೀಡತೊಡಗಿತು. ಇದನ್ನರಿತ ಕ್ಯಾಸ್ಟ್ರೋಗೆ ಅಮೇರಿಕ ಮೇಲೆ ದ್ವೇಷ ಬೆಳೆಯತೊಡಗಿತು.  ಇದರಿಂದಾಗಿ ಕ್ಯಾಸ್ಟ್ರೋ ಹವಾನಾದ ಅಮೇರಿಕಾ ರಾಯಭಾರಿ ಕಡಿತ ಮತ್ತು ಅಮೇರಿಕನ್ ಉದ್ಯಮಗಳನ್ನು ರಾಷ್ಟ್ರೀಕರಣಗೊಳಿಸಿ ಅಮೇರಿಕಾಕ್ಕೆ ಕ್ಯಾಸ್ಟ್ರೋ ಬಿಸಿ ಮುಟ್ಟಿಸಿದರು. ಇದರಿಂದಾಗಿ ಅಮೇರಿಕಾ ಮತ್ತು ಕ್ಯಾಸ್ಟ್ರೋ ನಡುವೆ ಶೀತಲ ಸಮರವೇ ಏರ್ಪಟ್ಟಿತು. ಇದರಿಂದಾಗಿ ಅಮೇರಿಕ ಕ್ಯೂಬಾದ ಮೇಲೆ ಆರ್ಥಿಕ ದಿಗ್ಭಂಧನವನ್ನು ಹೇರಿತು. ಇದೇ ವಿಷಯವನ್ನಿಟ್ಟುಕೊಂಡು ಜನಮನ್ನಣೆ ಗಳಿಸಿದ ಕ್ಯಾಸ್ಟ್ರೋ 1976 ರಲ್ಲಿ ಕ್ಯೂಬಾದ ಅಧ್ಯಕ್ಷರಾಗಿ ನೇಮಕಗೊಂಡರು. ಕಮ್ಯೂನಿಸ್ಟ್ ನಾಯಕನಾಗಿದ್ದ ಕ್ಯಾಸ್ಟ್ರೋಗೆ ರಷ್ಯಾದ ಬೆಂಬಲ ದೊರಕಿತು. ಇದರಿಂದಾಗಿ ಅಮೇರಿಕಕ್ಕೆ ಸೆಡ್ಡು ಹೊಡೆದ ಕ್ಯಾಸ್ಟ್ರೋ ಕ್ಯೂಬಾವನ್ನು ಏಕಪಕ್ಷೀಯ ಸಮಾಜವಾದಿ ರಾಷ್ಟ್ರವನ್ನಾಗಿ ರೂಪಿಸಿದರು.

ರಷ್ಯಾದೊಡನೆ ಸಂಬಂಧ ಹೊಂದಿದ್ದ ಕ್ಯಾಸ್ಟ್ರೋನನ್ನು  ಸಹಿಸದ ಅಮೇರಿಕ ಈತನಿಗೆ ಜೀವ ಬೆದರಿಕೆಯನ್ನು ಹಾಕಿತು. ಇಷ್ಟಾದರೂ ಅಮೇರಿಕಾಕ್ಕೆ ಹೆದರದ ಫಿಡೆಲ್ ಕ್ಯೂಬ ದೇಶವನ್ನು ಅಮೇರಿಕಾದ ಕಪಿ ಮುಷ್ಟಿಯಿಂದ ಬಿಡಿಸಿದರು. ಇಂತಹ ಪ್ರಪಂಚದ ದೊಡ್ಡಣ್ಣ ಅಮೇರಿಕಾ ದೇಶವನ್ನೆ ನಡುಗಿಸಿದ್ದ ಫಿಡೆಲ್ ಕ್ಯಾಸ್ಟ್ರೋ ತನ್ನ ತೊಂಬತ್ತನೆ ವಯಸ್ಸಿನಲ್ಲಿ ನಿಧನರಾದರು.

ಭರತ್ ಭಾರದ್ವಾಜ್, ಹೆಚ್ ಎಸ್

ದ್ವಿತೀಯ ಎಂಸಿಜೆ,

ಎಸ್‍ಡಿಎಂ ಕಾಲೇಜು, ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!