ಅಂಕಣ

ಕನ್ನಡ ಧಾರಾವಾಹಿಗಳು ಮತ್ತು ಗೋಳು: ಬಿಡಿಸಲಾಗದ ಬಂಧ

ನನ್ನ ಈ ಬರಹ ಕನ್ನಡದ ಧಾರಾವಾಹಿಗಳಿಗೆ ಮೀಸಲು. ನಾನು ಧಾರಾವಾಹಿಗಳನ್ನು ನೋಡ್ತೀನಿ ಅಂತ ತಪ್ಪು ತಿಳೀಬೇಡಿ. ಸಾಮಾನ್ಯವಾಗಿ ೨-೩ ತಿಂಗಳಿಗೊಮ್ಮೆ ಊರಿಗೆ ಹೋಗುತ್ತೇನೆ. ಅಲ್ಲಿ ಮೊಬೈಲ್ ನೆಟ್ವರ್ಕ್ ಸರಿಯಾಗಿ ಸಿಗದೇ ಇರುವ ಕಾರಣ, ಬೇಡವೆಂದರೂ ಈ ಧಾರಾವಾಹಿಗಳ ಮಾತು ಕೇಳಿಸಿಕೊಳ್ಳುವುದು, ಒಮ್ಮೊಮ್ಮೆ ನೋಡುವುದು ಅನಿವಾರ್ಯವಾಗುತ್ತದೆ. ಈ ಧಾರಾವಾಹಿಗಳಲ್ಲಿ ನಾನು ಗಮನಿಸಿದ ಕೆಲವು ಅಂಶಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಮನೆಯಲ್ಲಿ ಎಲ್ಲರೂ ‘ಈ ಟಿವಿ ಕನ್ನಡ’ದ ಭಕ್ತರಾದ ಕಾರಣ, ಅದು ‘ಕಲರ್ಸ್ ಕನ್ನಡ’ವಾಗಿ ಬದಲಾದರೂ, ‘ದೇವನೊಬ್ಬ ನಾಮ ಹಲವು’ ಅನ್ನೋ ಥರ ಕಲರ್ಸ್ ಕನ್ನಡದ ಧಾರಾವಾಹಿಗಳನ್ನೇ ನೋಡುತ್ತಾರೆ. ಆದ್ದರಿಂದ ನನ್ನ ಹೆಚ್ಚಿನ ಉದಾಹರಣೆಗಳು ಕಲರ್ಸ್ ಕನ್ನಡದ ಧಾರಾವಾಹಿಗಳದ್ದೇ ಇರುತ್ತವೆ, ಆದರೆ, ವಿಶ್ಲೇಷಣೆ ಎಲ್ಲಾ ವಾಹಿನಿಗಳ ಧಾರಾವಾಹಿಗಳಿಗೂ ಅನ್ವಯಿಸುತ್ತದೆ.

ನಮ್ಮ ಮನೆಯಲ್ಲಿ ಸಂಜೆ ೬ ಗಂಟೆಗೆ ಟಿವಿ ಆನ್ ಆದರೆ, ಮತ್ತೆ ಆಫ಼್ ಆಗುವುದು ರಾತ್ರಿ ೯ಕ್ಕೆ. ಇದು ಬೇರೆಯವರ ಮನೆಗಳಿಗೆ ಹೋಲಿಸಿದರೆ ಸ್ವಲ್ಪ ಕಡಿಮೆಯೇ. ‘ಕಿನ್ನರಿ’ಯಲ್ಲಿ ಆ ಪುಟ್ಟ ಮಗು ಮಾತಾಡುವ ಥರ ನಾನೇನಾದರೂ ಮಾತಾಡಿದರೆ ‘ಭಾರೀ ಗೊತ್ತಿರೋ ಹಾಗೆ ಮಾತಾಡ್ತಾನೆ’ ಅಂತ ಜನರು ಮೂದಲಿಸುತ್ತಾರೇನೋ. ಕಳೆದ ಬಾರಿ ಮನೆಗೆ ಹೋದಾಗ ‘ಕುಲವಧು’ವಿನ ದಾದಾಜಿಯ ಬಳಿ ಮಾತಾಡುವ ಧೈರ್ಯ ಕೂಡ ಯಾರಿಗೂ ಇರಲಿಲ್ಲ. ಈ ಬಾರಿ ಹೋದಾಗ ಮನೆಯವರೆಲ್ಲ ದಾದಾಜಿಯ ಎದುರು ಏರುದನಿಯಲ್ಲಿಯೇ ಮಾತಾಡುತ್ತಿದ್ದರು! ಎಷ್ಟು ಬೇಗ ಎಷ್ಟೊಂದು ಬದಲಾವಣೆ ದಾದಾಜಿಯಲ್ಲಿ! (ಬದಲಾವಣೆ ಪಾತ್ರದಲ್ಲಿ, ಪಾತ್ರಧಾರಿಯಲ್ಲಲ್ಲ) ‘ಪುಟ್ಟಗೌರಿ ಮದುವೆ’ಯ ದೊಡ್ಡ ಗೌರಿಗೆ ಪುಟ್ಟ ಪಾಪು ಆಗುವ ಸಂದರ್ಭ ಬಂದಿದ್ದರೂ, ಆಕೆಗೆ ಕಣ್ಣೀರು ಸುರಿಸುವುದು ತಪ್ಪಿಲ್ಲ, ಟಿಆರ್‌ಪಿ ಕೆಳಗಿಳಿದಿಲ್ಲ. (ಅಂದ ಹಾಗೆ, ಪುಟ್ಟಗೌರಿ ಮಗು ತೀರಿ ಹೋಯ್ತು ಅಂತ ಫ಼ೇಸ್ಬುಕಲ್ಲಿ ನೋಡಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. ಹೌದಾದರೆ, ಕಣ್ಣೀರು ಇನ್ನೂ ಧಾರಾಕಾರವಾಗಿ ಹರಿಯುವುದರಲ್ಲಿ ಸಂಶಯವಿಲ್ಲ). ‘ಲಕ್ಷ್ಮೀ ಬಾರಮ್ಮ’ದಲ್ಲಿ ಲಕ್ಷ್ಮೀಯೇನೋ ಒಂದು ವರ್ಷದ ಮೊದಲೇ ಬಂದಿರುವ ನೆನಪಿದೆ, ಆದರೆ, ರೀಸೆಂಟಾಗಿ ಒಂದು ಪುಟ್ಟ ದೆವ್ವ ಕೂಡ ಬಂದಿದೆ! ಹಾಗಾಗಿ ಇದು ಹಾರರ್ ಸೀರಿಯಲ್ ಆಗಿ ಕನ್ವರ್ಟ್ ಆಗಿದೆ. ಕಳೆದ ಬಾರಿ ನಾನು ಬೆಂಗಳೂರಿಂದ ಊರಿಗೆ ಹೋದಾಗ, ‘ಅಗ್ನಿಸಾಕ್ಷಿ’ಯ ರಾಧಿಕ ಎಲ್ಲಿಂದಲೋ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದಳು. ಬಸ್ಸಿನಲ್ಲಿ ಅವಳ ಪಕ್ಕದಲ್ಲಿ ಕುಳಿತ, ‘ವೈಟ್ ಅಂಡ್ ವೈಟ್’ ಬಟ್ಟೆ ಹಾಕಿದ್ದ ವ್ಯಕ್ತಿಯೊಬ್ಬ ಆಕೆ ಇಂಗ್ಲಿಷ್‌ನಲ್ಲಿ ಬರೆದ ಅಡ್ರೆಸ್ ಓದಿ ಹೇಳಿದಳು ಅಂತ ಹೇಳಿದ ಹಾಗೆ ನೆನಪಿದೆ. ಆದರೆ ಈ ಬಾರಿ ಹೋದಾಗ, ಆಕೆ ಮಾತನಾಡದ ಚಿಕ್ಕ ಹುಡುಗಿಯಾಗಿ ಬಿಟ್ಟಿದ್ದಳು! ಇನ್ನು ‘ಅಕ್ಕ’, ಇದರಲ್ಲಿ ಎಲ್ಲವೂ ತರ್ಕಕ್ಕೆ ಮೀರಿದ್ದು. ಎಲ್ಲಾ ಘಟನೆಗಳೂ ಒಂದು ತರಹದ ಎಕ್ಸ್ಟ್ರೀಮ್ ಲೆವೆಲ್‌ನಲ್ಲಿ ಇರುತ್ತವೆ. ಇದು ಹೀಗೇ ಮುಂದುವರೆದರೆ, ವೀಕ್ಷಕರು ಮೈಕೈ ಪರಚಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ಹೀಗೆ ಪ್ರತಿಯೊಂದು ಧಾರಾವಾಹಿ ಕೂಡ ಒಂದೊಂದು ರೀತಿಯಲ್ಲಿ ಲಾಜಿಕ್‌ನಿಂದ ದೂರ ನಿಂತಿದೆ. ಆದರೆ ಒಂದು ವಿಚಾರದಲ್ಲಿ ಮಾತ್ರ ಈ ಎಲ್ಲಾ ಧಾರಾವಾಹಿಗಳಿಗೂ ತುಂಬಾ ಸಾಮ್ಯತೆ ಇದೆ. ಅದೇನೆಂದರೆ, ಯಾವ ಧಾರಾವಾಹಿಯೂ ನಿಮ್ಮ ಮುಖದಲ್ಲಿ ನಗುವನ್ನು ಮೂಡಿಸುವುದಿಲ್ಲ. ಪಾತ್ರಧಾರಿಗಳೂ ನಗುವುದಿಲ್ಲ, ವೀಕ್ಷಕರನ್ನೂ ನಗಿಸುವುದಿಲ್ಲ. ಯಾಕೆಂದರೆ, ಎಲ್ಲರೂ ಅತ್ತರೇನೇ ಅವರ ಟಿಆರ್‌ಪಿ ಎತ್ತರಕ್ಕೆ ಹೋಗುವುದು. ಬಹುಶಃ ಈ ಧಾರಾವಾಹಿಗಳು ಮಾತ್ರವಲ್ಲ, ಎಲ್ಲಾ ಧಾರಾವಾಹಿಗಳ (ಬೇರೆ ವಾಹಿನಿಗಳ ಧಾರಾವಾಹಿಗಳೂ ಸೇರಿ) ಸೂತ್ರವೂ ಇದೇ ಆಗಿದೆ. ಪ್ರತಿಯೊಂದು ಕಥೆಯೂ ಕುತಂತ್ರ, ದ್ವೇಷ, ಅಸೂಯೆಯದ್ದೇ ಹಾಗು ಬಹುತೇಕ ಕುತಂತ್ರಿಗಳು ಸ್ತ್ರೀಯರೇ ಆಗಿರುತ್ತಾರೆ! ಹೆಚ್ಚಿನ ಕಂತುಗಳಲ್ಲಿ ಗೆಲುವು ಸಿಗುವುದು ಕೂಡ ಈ ಕುತಂತ್ರಿಗಳಿಗೇ! ಒಂದು ಸಂಸಾರವನ್ನು ಒಡೆಯುವುದು ಹೇಗೆಂಬುದರ ಮೇಲೆ ಪಿಎಚ್‌ಡಿ ಮಾಡಿದವರ ರೀತಿ ಕಥೆ ಹೆಣೆದಿರುತ್ತಾರೆ. ಅಪ್ಪಿ ತಪ್ಪಿ ಸಾತ್ವಿಕರಿಗೇನಾದರೂ ಒಳ್ಳೆಯದಾದರೆ ನೋಡುಗರ ಮನೆಗಳಲ್ಲಿ ಹಬ್ಬದ ವಾತಾವರಣ. ಇವುಗಳು ರಾತ್ರಿ ಪ್ರಸಾರವಾಗುವುದರಿಂದ ಹಬ್ಬದೂಟ ಇರುವುದಿಲ್ಲವಷ್ಟೆ!

ನನಗೊಂದು ಕುತೂಹಲ ಇದೆ. ಈ ಧಾರಾವಾಹಿಗಳನ್ನು ವೀಕ್ಷಿಸುತ್ತಿರುವಾಗ ಆ ವೀಕ್ಷಕರ ಬಿ.ಪಿ. ಪರೀಕ್ಷಿಸಬೇಕು ಎಂದು. ಬಹುಶಃ ಎಲ್ಲರದ್ದೂ ಡಬಲ್ ಸೆಂಚುರಿ ದಾಟಬಹುದು. ಸ್ವಲ್ಪ ಹಿರಿಯ ನಾಗರಿಕರಾದರೆ ಬಿ.ಪಿ. ಬಾಕ್ಸ್ ಸ್ಫೋಟ ಆದರೂ ಆಗಬಹುದು! ಯಾಕೆಂದರೆ, ಅವರೆಲ್ಲರೂ ಅಷ್ಟು ಮುಳುಗಿ ಹೋಗಿರುತ್ತಾರೆ ಈ ಧಾರಾವಾಹಿಗಳಲ್ಲಿ. ದೊಡ್ಡವರ ಮೇಲೇ ಇಷ್ಟು ಪ್ರಭಾವ ಬೀರುವಾಗ, ಇನ್ನು ಮಕ್ಕಳ ಗತಿಯೇನು? ಮನೆಯಲ್ಲಿನ ಹಿರಿಯರು ನೋಡುವ ಕಾರ್ಯಕ್ರಮಗಳನ್ನು ಸ್ವಾಭಾವಿಕವಾಗಿ ಮಕ್ಕಳೂ ಕೂಡ ನೋಡಿಯೇ ನೋಡುತ್ತಾರೆ. ಅವುಗಳಲ್ಲಿನ ಋಣಾತ್ಮಕ ಅಂಶಗಳು (ಇರುವುದೇ ಹೆಚ್ಚಾಗಿ ಋಣಾತ್ಮಕ ಅಂಶಗಳು) ಅವರ ಮುಗ್ಧ ಮನಸ್ಸುಗಳ ಮೇಲೆ ಯಾವ ಪರಿ ಪರಿಣಾಮ ಬೀರಬಹುದು? ‘ಶುಭಮಂಗಳ’ ಧಾರಾವಾಹಿ ಪ್ರಸಾರವಾಗುತ್ತಿದ್ದ ಸಮಯದಲ್ಲಿ, ನನ್ನ ಅಕ್ಕನ ಮಗಳು (ಆಗ ಅವಳಿಗೆ ೪ ವರ್ಷ) ‘ಮಾಯಿ’ ಪಾತ್ರಧಾರಿ ಬಂದ ತಕ್ಷಣ ‘ಹ್ಞಾಂ! ಮಾಯಿ ಬಂದ್ಲು’ ಎಂದು ಭಯಮಿಶ್ರಿತ ಧ್ವನಿಯಲ್ಲಿ ಹೇಳುತ್ತಿದ್ದಳು!

ಮೊದಲೆಲ್ಲಾ ಇಷ್ಟು ಅತಿರೇಕದ ಧಾರಾವಾಹಿಗಳು ಇರಲಿಲ್ಲ. ಟಿ.ಎನ್. ಸೀತಾರಾಮ್‌ರ ಧಾರಾವಾಹಿಗಳಲ್ಲೂ ಕೂಡ ದುಃಖವಿರುತ್ತಿತ್ತು. ಆದರೆ ಅಲ್ಲಿ ಸಾಮಾಜಿಕ ಕಳಕಳಿ, ನೈಜತೆ ಇರುತ್ತಿತ್ತು. ಒಂದು ಧನಾತ್ಮಕ ಸಂದೇಶ ರವಾನೆಯಾಗುತ್ತಿತ್ತು. ಫಣಿರಾಮಚಂದ್ರರ ‘ದಂಡಪಿಂಡಗಳು’, ಸಿಹಿ ಕಹಿ ಚಂದ್ರುರವರ ‘ಪಾಪ ಪಾಂಡು’, ‘ಸಿಲ್ಲಿ ಲಲ್ಲಿ’ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ದಿನದ ಆಯಾಸಗಳನ್ನೆಲ್ಲ ದೂರ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದವು. ಆದರೆ ಇಂತಹ ಒಂದು ಧಾರಾವಾಹಿಯನ್ನೂ ನಾವೀಗ ನೋಡಲಾರೆವು. ವಾರದ ಕೊನೆಯಲ್ಲಿ ಬರುವ ಕೆಲವೊಂದು ರಿಯಾಲಿಟಿ ಶೋಗಳನ್ನು (ಮಜಾ ಟಾಕೀಸ್, ಸರಿಗಮಪ, ಡ್ರಾಮಾ ಜೂನಿಯರ್ಸ್, ವೀಕೆಂಡ್ ವಿತ್ ರಮೇಶ್, ಕಾಮಿಡಿ ಕಿಲಾಡಿಗಳು – ಇವುಗಳಲ್ಲಿ ಋಣಾತ್ಮಕ ಅಂಶಗಳಿಗಿಂತ ಧನಾತ್ಮಕ ಅಂಶಗಳು ಜಾಸ್ತಿ ಇವೆ ಎನ್ನುವುದು ನನ್ನ ಭಾವನೆ) ಹೊರತುಪಡಿಸಿ, ಎಲ್ಲವೂ ಬರಿಯ ಋಣಾತ್ಮಕ ಅಂಶಗಳನ್ನೇ ನಮಗೆ ನೀಡುತ್ತಿವೆ ಎಂದು ನನ್ನ ಭಾವನೆ.

ನಮ್ಮಲ್ಲಿ ಬಹುತೇಕರು ಎರಡು ಕಾರಣಗಳಿಗಾಗಿ ಟಿವಿ ವೀಕ್ಷಿಸುತ್ತಾರೆ. ಒಂದು ವಾರ್ತೆಗಳಿಗಾಗಿ, ಇನ್ನೊಂದು ಮನೋರಂಜನೆಗಾಗಿ. ಸುದ್ದಿ ವಾಹಿನಿಗಳಲ್ಲಿ ನಮಗೆ ಸಿಗುವುದು ರಾಜಕೀಯ ಕೆಸರೆರೆಚಾಟ, ಕೊಲೆ, ದರೋಡೆ, ಅತ್ಯಾಚಾರ, ಹೊಡೆದಾಟ, ಯಾರದೋ ಮನೆಯವರ ಜಗಳ ಮುಂತಾದ ಋಣಾತ್ಮಕ ಸುದ್ದಿಗಳು ಮಾತ್ರ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂಥ, ಸ್ಪೂರ್ತಿ ತುಂಬುವಂಥ ಸುದ್ದಿಗಳು ಇವರಿಗೆ ಕಾಣಿಸುವುದಿಲ್ಲ. ಕಂಡರೂ ಪ್ರಸಾರ ಮಾಡುವುದಿಲ್ಲ, ಕಾರಣ, ಅವುಗಳು ಟಿಆರ್‌ಪಿಗೆ ಸಹಾಯಕವಲ್ಲ. ಇನ್ನು‌ ಮನೋರಂಜನೆಯ ಉದ್ದೇಶದಿಂದ ಪ್ರಸಾರವಾಗುವ ಧಾರಾವಾಹಿಗಳಲ್ಲೂ ಬರೀ ಕ್ರೌರ್ಯ, ಕುತಂತ್ರ, ದುಃಖಗಳೇ ತುಂಬಿ ಹೋದರೆ ಮುಂದಿನ ದಿನಗಳಲ್ಲಿ ನಮ್ಮ ಜನರ ಮೈಮನಸ್ಸುಗಳಲ್ಲಿ ಋಣಾತ್ಮಕ ಅಂಶಗಳೇ ತುಂಬಿ ಬಿಡುತ್ತವೆ.

ಇನ್ನಾದರೂ ಕನ್ನಡದಲ್ಲಿ ಸಾಮಾಜಿಕ ಕಳಕಳಿಯುಳ್ಳ, ಹಾಸ್ಯವಿರುವ, ಧನಾತ್ಮಕ ಅಂಶಗಳಿರುವ ಧಾರಾವಾಹಿಗಳು, ಕಾರ್ಯಕ್ರಮಗಳು ಪ್ರಸಾರವಾಗಲಿ. ಆ ಮೂಲಕ ಧನಾತ್ಮಕ ಚಿಂತನೆಗಳು ಬೆಳೆದು, ಕನ್ನಡ ಜನತೆ ಖಿನ್ನತೆಯಿಂದ ಬಳಲುವುದು ತಪ್ಪಲಿ ಎಂದು ಆಶಿಸುತ್ತೇನೆ.

-ಮನೋಜ್ ಭಾಗವತ

manu.bk001@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!