ಅಂಕಣ

ಇವತ್ತವರಿಗೆ ನಾವು ತಂದಿಟ್ಟ ಸ್ಥಿತಿ ನಾಳೆ ನಮಗೂ ಬಂದೀತು, ನೆನಪಿರಲಿ!

ಅಂದು ಭಯ ಎಲ್ಲರ ಮನದಲ್ಲಿ ಮನೆ ಮಾಡಿತ್ತು, ವರುಣನ ಆರ್ಭಟ ತೀವ್ರವಾಗಿತ್ತು, ಸಾವಿನ ಅಂಚಿನಲ್ಲಿ ಹೋರಾಡುತ್ತಿದ್ದರು, ಆ ತಾಯಿ ಕರಳು ತನ್ನ ಕಂದನ ಬರುವಿಕೆಗಾಗಿ ಹಾತೋರೆಯುತ್ತಿತ್ತು, ತಾಯಿ ಮಮತೆಗೆ ಆ ಬ್ರಹ್ಮನು ಕರಗಿ ನೀರಾಗಿದ್ದನು. 9 ತಿಂಗಳ ಫಲವಾಗಿ ಮಗುವಿನ ಜನನವಾಗಿತ್ತು. ಹೆತ್ತ ತಾಯಿ ಹೊತ್ತ ಮಡಿಲು ಸ್ವರ್ಗಕ್ಕಿಂತ ಮಿಗಿಲೆಂಬುದಕ್ಕೆ ಈ ಘಟನೆ ಸಾಕ್ಷಿಯಾಗಿತ್ತು, ತಾಯಿ ವಾತ್ಸಲ್ಯ ಒಂದೆಡೆಯಾದರೆ ತನ್ನ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ, ತಮ್ಮ ಜೀವನವನ್ನು ಧಾರೆ ಎರೆಯುವ, ಎದೆ ಮೇಲಿಟ್ಟು ಸಾಕಿ ಸಲಹುವ, ಮಕ್ಕಳ ಹಿತಕ್ಕಾಗಿ ತನ್ನೆಲ್ಲಾ ಸುಖವನ್ನು ತ್ಯಜಿಸುವ, ಪ್ರೀತಿ-ಸಹನೆ ಯಿಂದ ಮಕ್ಕಳ ತಪ್ಪನ್ನು ಮನ್ನಿಸುವ ತ್ಯಾಗ ಜೀವಿಗೆ ಮತೊಂದು ಹೆಸರೇ ಪಿತೃತ್ವ.

                   ಯಾಕೆ ಇಷ್ಟೆಲ್ಲಾ ಪೀಠಿಕೆ ಹಾಕುತ್ತಿದ್ದೇನೆ ಎಂಬ ಆಲೋಚನೆ ಬರಬಹುದು. ಅಂದೊಂದು ಕಾಲವಿತ್ತು ‘ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ, ನಿನ್ನ ಅಪ್ಪನು ತಾನೇ’, ‘ಅಮ್ಮ ನಿನ್ನ ಎದೆಯಾಳದಲ್ಲಿ ಹೀಗೆ ನಾನಾ ರೀತಿಯ ಅರ್ಥಪೂರ್ಣ ಹಾಡುಗಳಿಗೆ  ತಕ್ಕಂತೆ ಸಂಬಂಧಗಳಿಗೆ ಬೆಲೆ ಕೊಡುವ, ಭಾವನೆಗಳನ್ನು ಅರ್ಥೈಸುವ ಪ್ರವೃತ್ತಿ ಇತ್ತು. ಬೆಳಗಾದರೆ-ರಾತ್ರಿಯಾದರೆ ಅಮ್ಮನ ಕೈ ತುತ್ತು, ಅಪ್ಪನ ಅಪ್ಪುಗೆಗೆ ಹಂಬಲಿಸುವ ಬಾಂಧವ್ಯವಿತ್ತು. ಅಜ್ಜ-ಅಜ್ಜಿಯ ಆಚಾರ-ವಿಚಾರಗಳ ಪರಿ-ಪಾಠಿದೊಂದಿಗೆ, ಅಜ್ಜಿ ಹೇಳುವ ರಾಜಕುಮಾರನ ಕಥೆಯೊಂದಿಗೆ ನಿದ್ರಾದೇವಿ ಆವರಿಸುತ್ತಿದ್ದಳು. ಒಟ್ಟಿನಲ್ಲಿ ಹೇಳಬೇಕಾದರೆ ನಮ್ಮ ಭವಿಷ್ಯದ ಒಂದು ಬೆನ್ನಲುಬಾಗಿ ಒಂದು ತುಂಬು ಕುಟುಂಬವಿರುತ್ತಿತ್ತು.

                 ಆದರೆ ಇಂದು ಸಮಾಜದ ಚಿತ್ರಣ ಬದಲಾಗಿದೆ, ತಮ್ಮ ಸರ್ವಸ್ವವನ್ನೇ ಮುಡಪಾಗಿಟ್ಟವರಿಗೆ ನಾವೇನು ನೀಡುತ್ತಿದ್ದೇವೆ? ಕಣ್ಣಲ್ಲಿ ಕಣ್ಣಿಟ್ಟು ಸಾಕಿಸಿ, ಉಣಿಸಿದವರಿಗೆ ನಾವು ಏನು ಸರ್ಮಪಿಸುತ್ತಿದೇವೆ ಎಂದು ಯೋಚಿಸಿದಾಗ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ಇದಕ್ಕೆ ಪ್ರತಿಯಾಗಿ ಆಧುನಿಕ ಜೀವಶೈಲಿಗೆ ಒಗ್ಗಿ ಹೋಗುತ್ತಿರುವ ನಮಗೆ ಹೆತ್ತವರು ಭಾರವಾಗುತ್ತಿದ್ದಾರೆ. ಆಚಾರ-ವಿಚಾರಗಳ ಚೌಕಟ್ಟನ್ನು ಹೇರುತ್ತಾರೆಂಬ ಮನೋಭಾವ ಜನ್ಮದಾತರನ್ನು ಬೀದಿಗಟ್ಟುವಂತೆ ಮಾಡುತ್ತಿದೆ.

                 ಯಾಂತ್ರಿಕ ಬಾಳ ಪಯಣದಲ್ಲಿ ಸಂಸಾರಗಳು ಮೂರ್ಬಟ್ಟೆಯಾಗುತ್ತಿದೆ. ಅವರ ಭಾವನೆಗಳಿಗೆ ಸ್ಪಂದಿಸದೇ, ಅವರ ಲಾಲನೆ-ಪಾಲನೆಗೆ ಕಿಂಚಿತ್ತೂ ಸಮಯಾವಾಕಾಶ ನೀಡದ ಸ್ಥಿತಿಗೆ ನಾವಿಂದು ಬಂದು ನಿಂತಿದ್ದೇವೆ, ಆಸ್ತಿ-ಪಾಸ್ತಿ, ಸ್ಥಾನ-ಮಾನ ಸಂಪಾದಿಸಬೇಕೆಂಬ ಗೋಜಲಿಗೆ ಬಿದ್ದು ಅವರ ಕ್ಷೇವiವನ್ನು ವಿಚಾರಿಸುವ ವ್ಯವದಾನ ಇಲ್ಲದಂತಾಗಿದೆ. ಇಷ್ಟಲ್ಲದೇ ಉದ್ಯೋಗವೆಂಬ ಹೆಸರಿನಲ್ಲಿ ಅವರ ಕ್ಷೇಮವನ್ನು ವಿಚಾರಿಸುವ ವ್ಯವದಾನ ಇಲ್ಲದಂತಾಗಿದೆ. ಇಷ್ಟಲ್ಲದೇ ಉದ್ಯೋಗವೆಂಬ ಹೆಸರಿನಲ್ಲಿ ತಾಯ್ನಾಡನ್ನು ಬಿಟ್ಟು , ಹೆತ್ತವರನ್ನು ಲೆಕ್ಕಿಸದೇ ವಿದೇಶಕ್ಕೆ ಹಾರುವ ಪ್ರವೃತ್ತಿ ಎಷ್ಟು ಸಮಂಜಸ?

               ನಮ್ಮನ್ನು ಹೆತ್ತ ತಪ್ಪಿಗೆ, ಒಬ್ಬಂಟಿ ಜೀವನವೇ ಸೂಕ್ತವೇ, ಸಾಕಿ-ಸಲುಹಿದ ಪ್ರತಿಯಾಗಿ ವೃದ್ಧಾಶ್ರಾಮವೆಂಬ ಬಳುವಳಿಯೇ? ಹಾಗಾದರೆ ಇಂತಹ ದುಸ್ಥಿತಿಗೆ ಕಾರಣವಾದರು ಏನು ಎಂದು ಹುಡುಕಿದಾಗ ಸಣ್ಣ-ಪುಟ್ಟ ಮನಸ್ತಾಪಗಳು, ಚಿಕ್ಕ-ಚಿಕ್ಕ ಸಂಗತಿಗಳು ಆದರೆ ಇದರ ಪರಿಣಾಮ ಯೋಚನೆಗೆ ನಿಲುಕದ್ದು!. ಮೊಮ್ಮಕಳನ್ನು ಆಡಿಸುತ್ತಾ ಜೀವನವನ್ನು ಸಾಗಿಸಬೇಕಾದವರು ವೃದ್ಧಾಶ್ರಾಮದ ದಾರಿ ಹಿಡಿಯುವಂತೆ ಮಾಡಿದೆ ಎಂತಹ ವಿಪರ್ಯಾಸ? ಇದಕ್ಕೆ ಬೆಲೆ ತೆರಬೇಕಾದವರು ನಾವೆಂಬುದು ಅರಿವು ನಮ್ಮಲ್ಲಿ ಇಲ್ಲದಂತಾಗಿದೆ.

              ಹೆತ್ತು-ಹೊತ್ತು, ಹೊಟ್ಟೆ-ಬಟ್ಟೆ ಕಟ್ಟಿ, ತಾವು ನೋವಿನಲ್ಲಿ ಬೆಂದರೂ, ನಮ್ಮನ್ನು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆಸಿದವರ ಕಷ್ಟ-ನೋವುಗಳನ್ನು ಆಲಿಸುವ ತಾಳ್ಮೆಯಾಗಲಿ-ವ್ಯವದಾನವಾಗಲಿ ನಮಗಿಲ್ಲ. ಪ್ರತಿಷ್ಟೆ-ವರ್ಚಸ್ಸು ಎಂಬ ಆಮಿಷಕ್ಕೆ ಬಲಿಯಾಗಿ ಹೆತ್ತವರಿಂದ ದೂರ ಸರಿಯುವ ಆತುರದ ನಿರ್ಧಾರವನ್ನು ಕೈಗೆತ್ತಿಕೊಳ್ಳುತ್ತಿದೇವೆ. ಇದಕ್ಕೆ ಕುಮ್ಮಕ್ಕು ನೀಡುವ ಶಕ್ತಿಯಾಗಿ ಹೆಣ್ಣು ಕೈ ಜೋಡಿಸುತ್ತಿದ್ದಾಳೆ. ಸ್ವತಂತ್ರ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಹೆಂಡತಿಯ ಮಾತಿಗೆ ಕೋಲೆ ಬಸವನಂತೆ ಗಂಡನಾದವನ್ನು ತಲೆಯಾಡಿಸುತ್ತಿದ್ದಾನೆ. ಅಂತಾದರೆ ನಿನ್ನೆ-ಮೊನ್ನೆ ಬಂದವಳ ಮಾತಿಗಿರುವ ಬೆಲೆ ಎದೆ ಮೇಲಿತ್ತು ಸಾಕಿದವರ ಪ್ರೀತಿ-ಭಾವನೆಗಳಿಗಿಲ್ಲವೆ ? ಆ ಸೊಸೆಯನ್ನು ಹೆತ್ತವಳು ಹೆಣ್ಣೆ ಅಲ್ಲವೇ? ಅವರು ನೆನಪಾಗಲಿಲ್ಲವೇ?. ಅವರಂತೆ ಇವರು ಅಲ್ಲವೇ? ಮನೆ ಬೆಳಗಲೆಂದು ತಂದ ದೀಪವೇ ನಂದಿಸುವ ಕೆಲಸ ಮಾಡಿದರೆ ಆ ವೃದ್ಧರ ಆಳಲನ್ನು ಕೇಳೋವವರಾರು?.

             ಇಂತಹ ದುಸ್ಥಿತಿ ಒಂದೆಡೆ ಬಂದೊದಗಿದ್ದರೆ, ಇಂದು ಅದೆಷ್ಟೋ ಮಕ್ಕಳು ಅಪ್ಪ-ಅಮ್ಮನ ಮಮಕಾರವಿಲ್ಲದೆ ಬಳಲುತ್ತಿದ್ದಾರೆ. ಮತ್ತೊಂದೆಡೆ ಅಜ್ಜ-ಅಜ್ಜಿಯ ವಾತ್ಸಲ್ಯವಿಲ್ಲದೆ ಕೊರಗುತ್ತಿದ್ದಾರೆ. ಸದಾ ಕೆಲಸ-ಕಾರ್ಯಗಳಲ್ಲಿ ಪ್ರವೃರ್ತರಾಗಿ, ಹಣದಾಸೆಗೆ ಬಲಿಯಾಗಿ, ಈ ಕಡೆ ಅಜ್ಜ-ಅಜ್ಜಿಯಿಂದ ದೂರಮಾಡಿ, ಅವರ ಸಾಮೀಪ್ಯದಿಂದ ವಂಚಿಸುತ್ತಿದ್ದಾರೆ. ಆಚಾರ-ವಿಚಾರಗಳ ಜ್ಞಾನವಿಲ್ಲದೆ, ಕಟ್ಟು-ನಿಟ್ಟಿನ ಸಂಪ್ರದಾಯವಿಲ್ಲದೆ ಪಾಶ್ಚಾತ್ಯ ಜೀವನ ಶೈಲಿಯತ್ತ ಸಾಗುತ್ತಿದ್ದಾರೆ. ಸರಿಯಾದ ಮಾರ್ಗದರ್ಶಕರಿಲ್ಲದೆ, ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಸ್ಥಿತಿಗೆ ಕಾರಣವಾದರು ಯಾರು? ನಾವೇ, ನಮ್ಮ ಮನೋಪ್ರವೃತ್ತಿ. ಮುಂದೊಂದಿನ ನಾವು ಮಾಡಿದ ತಪ್ಪೇ ನಮ್ಮನ್ನು ಆವರಿಸುತ್ತದೆ ಅನ್ನೋ ಪರಿಜ್ಞಾನವಿಲ್ಲದೆ ಜನ್ಮ ಕೊಟ್ಟವರಿಂದ ದೂರಾವಾಗುವ ಕೀಳುಮಟ್ಟದ ಆಲೋಚನೆ. ಎಲ್ಲಿಯವರೆಗು ಇಂತಹ ದುರಾಲೋಚನೆ ಕೊನೆಯಾಗುದಿಲ್ಲವೋ ಅಲ್ಲಿಯವರೆಗು ನಮ್ಮ ಬಾಳ ನೌಕೆ ಭಾವನೆಗಳರಿಯದವರ ನಡುವೆ ಸಾಗುತ್ತಿರುತ್ತದೆ.

             ಒಂದು ಕುಟುಂಬ ಸಂಪೂರ್ಣವಾಗಬೇಕಾದರೆ ಅಲ್ಲಿ ಹಿರಿತಲೆಗಳ ಸಂತತಿ ಇರಬೇಕು. ಹುಟ್ಟಿದಾಗಿನಿಂದ ಹಿಡಿದು, ಜೋಗುಳ ಹಾಡಿ, ಲಾಲನೆ-ಪಾಲನೆ ಮಾಡಿ ತಮ್ಮ ಎದೆ ಮಟ್ಟಕ್ಕೆ ಬೆಳಸಿದವರು ಮಗುವಂತೆ ಆದಾಗ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪನ ಮಾಡುವ ಜವಬ್ದಾರಿ ಪ್ರತಿಯೊಬ್ಬ ಮಗ-ಮಗಳದಾಗಿರುತ್ತದೆ.  ಒಂದು ನೆನಪಿನಲ್ಲಿರಲಿ, ನಮ್ಮ ತಂದೆ ತಾಯಿಯನ್ನು ನಾವೀಗ ಹಲವು ಕಾರಣಗಳನ್ನು ನೀಡಿ ದೂರ ಮಾಡಬಹುದು, ಆದರೆ ನಾಳೇ ನಾವೂ ಸಹ ತಂದೆ ತಾಯಿಯಾಗುತ್ತೇವಲ್ಲಾ? ನಮಗೂ ಅಂತಹಾ ಸ್ಥಿತಿ ಬರಬಾರದಲ್ಲಾ?

             ಇನ್ನಾದರು ನಿಲ್ಲಿಸೋಣ ಈ ತಪ್ಪು ಧೋರಣೆಯನ್ನ, ಕೈ ಹಿಡಿದು ನಡೆಸೋಣ ಜನ್ಮದಾತರನ್ನ, ನೀಡದಿರೋಣ ವಸ್ತುವೆಂಬ ಪ್ರತಿರೂಪವನ್ನ, ಮನಪೂರ್ವಕ ಪ್ರೀತಿಯಿಂದ ಋಣವನ್ನು ತೀರಿಸೋಣ.

ಸುಶ್ಮಿತ ಜೈನ್ ಹೆಚ್.ಜಿ

ಪ್ರಥಮ ಎಂ.ಸಿ.ಜೆ

ಎಸ್.ಡಿ.ಎಮ್ ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!