ರಾಜಕಾರಣವೆಂದರೆ ಒಂದು ದೊಡ್ಡ ರಣತಂತ್ರ. ಭೇದಿಸಲಾಗದ ಚಕ್ರವ್ಯೂಹ. ಪ್ರತಿಯೊಂದು ನಡೆಯನ್ನು ಭವಿಷ್ಯತ್ತಿನ ಸ್ಪಷ್ಟ ಆಗುಹೋಗುಗಳನ್ನು ಗಮನದಲ್ಲಿಟ್ಟುಕೊಂಡು ಮನ್ನಡೆಯಬೇಕಾದ ರಂಗ. ಸ್ವಲ್ಪ ಯಾಮಾರಿದರೂ ಸುತ್ತಲೂ ಮುತ್ತಿಗೆ ಹಾಕಿ ಚದುರಂಗದ ಚೆಕ್-ಮೆಟ್’ನಂತಹ ಸಂದಿಗ್ಧಕ್ಕೆ ತಂದಿಡುವ ಕ್ಷೇತ್ರ. ಈ ಕ್ಷೇತ್ರದಲ್ಲಿ ರಾತ್ರೋರಾತ್ರಿ ಪ್ರಜ್ವಲಿಸಿದವರೂ ಇದ್ದಾರೆ. ಒಮ್ಮಿಂದೊಮ್ಮೆಗೇ ಪಾತಾಳ ಕಂಡವರೂ ಇದ್ದಾರೆ. ಮಣ್ಣಾಗಿ ಹೋದವರು ಮೈಕೊಡವಿ ಫಿನಿಕ್ಸ್ ಪಕ್ಷಿಯಂತೆ ಎದ್ದು ಬಂದವರು ಇದ್ದಾರೆ. ಪ್ರಾಮಾಣಿಕರಾಗಿ ಇರಬೇಕೆಂದರೂ ಇರಲು ಬಿಡದ ಕ್ಷೇತ್ರವದು. ಶಿವರಾಮ ಕಾರಂತರಂತ ವಿದ್ವಾಂಸರನ್ನೇ ಸೋಲು ಕಾಣುವಂತೆ ಮಾಡಿದ ಕ್ಷೇತ್ರ. ಮೋಸ್ಟ ವಾಂಟೆಡ್ ಛೆಂಬಲ್ ರಾಣಿಯನ್ನು ಹಿಡಿದ ನಂತರ ಅವಳನ್ನೇ MP ಮಾಡಿದ ಕೊಟ್ಟ ಕ್ಷೇತ್ರವದು. ಕೆಲವೊಮ್ಮೆ ನಮ್ಮತನವನ್ನು ಕಳೆದುಕೊಂಡು ಬದುಕಬೇಕಾಗುತ್ತದೆ. ಕೆಲವೊಮ್ಮೆ ವೈರಿಗಳದು ಸರಿ ಎಂದರೂ ಟೀಕಿಸಬೇಕಾಗುತ್ತೆ. ನಮ್ಮವರದು ತಪ್ಪೆಂದು ಗೊತ್ತಿದ್ದರೂ ಅವರನ್ನೇ ಬೆಂಬಲಿಸಿ ಆತ್ಮಸಾಕ್ಷಿಯನ್ನು ಕೊಂದುಕೊಂಡು ಬದುಕಬೇಕಾಗಬಹುದು. ರಾಜಕೀಯ ಕೊನೆಯ ಕ್ಷಣದವರೆಗೂ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತಿರುತ್ತದೆ.
ದೆಹಲಿಯ ಸದ್ಯದ ಮುಖ್ಯಮಂತ್ರಿ ಕೇಜ್ರಿವಾಲರದು ರಾಜಕೀಯ ಜೀವನ ಪಾತಾಳದಿಂದ ಆಕಾಶದವರೆಗೆ ಎಲ್ಲವನ್ನೂ ನೋಡಿದೆ. ಒಮ್ಮೆ ಅಣ್ಣಾ ಹಜಾರೆಯವರ ಜೊತೆಗೆ ಕಾಣಿಸಿಕೊಂಡು ಅವರಿಂದ ಜನಪ್ರಿಯತೆ ಪಡೆದು ಚುನಾವಣೆಗೆ ನಿಂತರು. ಅಧಿಕಾರವನ್ನು ಪಡೆದರು. ಆದರೆ ಮತ್ತೆ ಅಧಿಕಾರ ವರ್ಚಸ್ಸು ಎರಡನ್ನೂ ಕಳೆದುಕೊಂಡರು. ಮುಂದೆ ಮತ್ತೊಂದು ವಿಧಾನಸಭೆ ಚುನಾವಣೆ ಬಂದಾಗ ಅವರು ಮೋದಿ ಅಲೆಯ ನಡುವೆ ಧೂಳಿಪಟವಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಒಮ್ಮಿಂದೊಮ್ಮೆ ಬಿಜೆಪಿ ದೆಹಲಿಯಲ್ಲಿ ಪ್ರಾದೇಶಿಕ ವರ್ಚಸ್ಸಿಲ್ಲದ ಕಿರಣ್ ಬೇಡಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ ಒಂದೇ ಒಂದು ತಪ್ಪು ನಿರ್ಧಾರಕ್ಕೆ ಆಫ್ ಜಯ ಗಳಿಸಿತು. ಅದೂ ೭೦ ರಲ್ಲಿ ೬೭ ಭರ್ಜರಿ ಜಯ.ಇದೊಂದು ಉದಾಹರಣೆ ಅಷ್ಟೇ ಹೀಗೆ ಚದುರಂಗದ ಒಂದು ಮೂವ್ ತಪ್ಪಾದರೆ ಹೇಗೆ ಆಟವೇ ಢೋಲಾಯಮಾನವಾಗುತ್ತೋ ಹಾಗೆಯೇ ಇದೂ ಕೂಡಾ. ಗೆದ್ದಿದ್ದೇನೋ ನಿಜ ಸಂಬಾಳಿಸುವುದು ಕಷ್ಟದ ಕೆಲಸ.
ಇತ್ತೀಚಿನ ದಿನಗಳ ದೆಹಲಿ ರಾಜಕಾರಣ ನೋಡಿದರೆ ತಿನ್ನುವ ಮೊದಲು ಜೀರ್ಣಶಕ್ತಿಯ ಸಾಮರ್ಥ್ಯ ಅರಿಯದೆ ತಿಂದರೆ ಇಡಿಯ ಜೀರ್ಣಾಂಗ ವ್ಯೂಹಕ್ಕೆ ಧಕ್ಕೆ ಎಂಬುದು ಮನದಟ್ಟಾಗಿದ್ದು ಬೇರೆಯ ವಿಷಯ. ಒಂದೊಮ್ಮೆ ಅಜೀರ್ಣವಾಗಿ ಉದರ ಶೂಲೆ ಶುರುವಾದಾಗ ಅಡಿಗೆ ಮಾಡಿದವರನ್ನೋ ದಿನಸಿ ಅಂಗಡಿಯವರನ್ನೋ ನಿಂದಿಸಿದಂತೆ ತನ್ನ ಎಲ್ಲ ವೈಫಲ್ಯಗಳಿಗೆ ಮೋದಿಯವರನ್ನು ತೆಗಳುತ್ತಿರುವುದು ಕೇಜ್ರಿವಾಲರ ಸಾಮರ್ಥ್ಯಶೂನ್ಯತೆ ಅಷ್ಟೆ. ಇತ್ತೀಚೆಗೆ ಅದೇ ಪಕ್ಷದ ಒಬ್ಬರು ಜೈನ ಮುನಿ ತರುಣಸಾಗರರ ಕುರಿತು ಅವಹೇಳನಕರವಾದ ಹೇಳಿಕೆ ನೀಡಿ. ಅದರ ಪ್ರತಿಫಲವನ್ನು ಜೀರ್ಣಿಸಿಕೊಳ್ಳಲಾಗದೇ ರಾಜಕೀಯದಿಂದ ನೇಪಥ್ಯಕ್ಕೆ ಸರಿದು ಬಿಡುವ ಮಾತಾಡಿದರು. ಒಂದು ವೇಳೆ ಅವನು ರಾಜಕಾರಣಕ್ಕೆ ಬಾರದಿದ್ದರೆ ಇಂಥ ಹೇಳಿಕೆ ಕೊಡುತ್ತಿರಲಿಲ್ಲ. ಅವನ ವಾಗ್ದಾಳಿ ಜೈನಮುನಿಗಳ ಮೇಲಾಗಿರಲಿಲ್ಲ ಬದಲಾಗಿ ಅವರನ್ನು ಸಭೆಗೆ ಆಹ್ವಾನಿಸಿದ ಪಕ್ಷದ ವಿರುದ್ಧವಾಗಿತ್ತು. ಆದರೆ ನೇರ ದಾಳಿ ಮಾಡದೆ ಮುನಿಗಳ ಹೆಸರು ಮಧ್ಯೆ ತಂದಿದ್ದಕ್ಕೆ ಒಂದು ಇಡೀ ಜನಾಂಗದ ನಿಂದನೆಗೆ ಒಳಗಾದರು.
ಒಂದು ಹೇಳಿಕೆ ಕೊಟ್ಟು ಸ್ವಂತ ಪಕ್ಷದವರಿಂದ ಮೆಚ್ಚುಗೆ ಸಿಗುತ್ತದೆಂಬ ಊಹೆ ಕೂಡಾ ಅವರ ಮನದಲ್ಲಿ ಇದ್ದೀತು. ಆದರೆ ಯಾವಾಗ ಅವರ ಪಕ್ಷದವರೇ ತರಾಟೆಗೆ ತೆಗೆದುಕೊಂಡರೋ ಆಗ u-turn ತೆಗೆದುಕೊಂಡು ರಾಜಕೀಯ ನಿವೃತ್ತಿಯ ಮಾತಾಡಿದರು. ಜೈನರು ಅಲ್ಪಸಂಖ್ಯಾತರು ಅವರ ವಿಷಯ ಬಂದಾಗಲೇ ಇಂಥ ಚರ್ಚೆಗಳ ಮಧ್ಯೆ ರಾಜಕಾರಣಿಯನ್ನು ಮಥಿಸಿ ಕ್ಷಮೆಯಾಚುವಂತೆ ಮಾಡಿದಾಗ ಇನ್ನು ಬಹುಸಂಖ್ಯಾತ ಧರ್ಮಗಳ ವಿಷಯ ಬಂದಾಗ ಸುಮ್ಮನಿರುತ್ತಾರಾ?
ಅದು ೧೯೯೨ ನೇಯ ಇಸವಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಮತ್ತು ರಾಮಮಂದಿರದ ನಡುವಿನ ವ್ಯಾಜ್ಯ ನಡೆಯುತ್ತಿತ್ತು. ಎರಡು ಕೋಮುಗಳು ಕೋರ್ಟು ಕಛೇರಿಯ ಮೆಟ್ಟಿಲೇರಿ ಬಂದ ತೀರ್ಪಿಗೆ ಅಸಂತುಷ್ಟರಾಗಿದ್ದರು. ಆಗಿನ ಪ್ರಧಾನಿ ಪಿ.ವ್ಹಿ.ನರಸಿಂಹರಾವ್ ಅವರಿಗೆ ಎರಡು ಕೋಮುವಿನ ಪ್ರಮುಖರು, ಪತ್ರಕರ್ತರೆಲ್ಲಾ ಏನಾದರೊಂದು ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ದೇಶದಲ್ಲಿ ಇಂಥ ಅಲ್ಲೋಲಕಲ್ಲೋಲವಾದಾಗ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಸುಮ್ಮನಿರಬೇಡಿ ಎಂದರು. ಎಂಥ ಸಂದಿಗ್ಧ ಯಾರ ಪರವಾಗಿಯೂ ಮಾತಾಡಲು ಆಗದಂತಹ ಸ್ಥಿತಿ. ಆಗ ಪ್ರಧಾನಿಗಳ ನಿಲುವು ಹೇಗಿತ್ತೆಂದರೆ ಅವರು ಏನು ನಿರ್ಧಾರ ತೆಗೆದುಕೊಳ್ಳದಿರುವುದೂ ಕೂಡಾ ಒಂದು ನಿರ್ಧಾರ! ಎಂಬಂತಿತ್ತು. ಕೆಲವೊಮ್ಮೆ ಕೆಲವೊಂದಿಷ್ಟು ವಿಷಯಗಳನ್ನು ಕಾಲನ ನಿರ್ಧಾರಕ್ಕೆ ಬಿಟ್ಟು ನಡೆಯುತ್ತಿರುವ ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗಿ ತಾಟಸ್ಥ್ಯಕ್ಕೆ ಮೊರೆ ಹೋಗಬೇಕಾಗುತ್ತೆ. ಇದು ಒಬ್ಬ ಸಮರ್ಥ ಸತ್ಯಸಂಧ ರಾಜಕಾರಣಿ ಪಿ.ವ್ಹಿ. ನರಸಿಂಹರಾವ್ ಅವರಿಗೆ ಬಿಸಿ ತುಪ್ಪವಾಗಿತ್ತು. ಆಗ ಪ್ರಣಬ್ ಮುಖರ್ಜಿ ಅಯೋಧ್ಯೆಯ ಸಮಸ್ಯೆ ಪರಿಹರಿಸಲು ಪಿ.ವ್ಹಿ. ವಿಫಲರಾಗಿದ್ದಾರೆ ಎಂದರು. ಆದರೆ ಅದೇ ಪ್ರಣಬ್ ಮುಖರ್ಜಿ ಎಷ್ಟೋ ತಮ್ಮ ಪಕ್ಷದ ತಪ್ಪು ನಡೆಗಳನ್ನು ಬಹಿರಂಗವಾಗಿ ವಿರೋಧಿಸದೆ ಆತ್ಮಸಾಕ್ಷಿಗೆ ವಿರುದ್ಧವಾದ ತಲೆದೂಗಿದ್ದೂ ಇದೆ.
ಮನಮೋಹನ ಸಿಂಗ್ ಅರ್ಥಶಾಸ್ತ್ರಜ್ಞ ರಿಜರ್ವ್ ಬ್ಯಾಂಕಿನ ಗವರ್ನರ್ ಆದಂತಹ ಗೌರವಾನ್ವಿತ ವ್ಯಕ್ತಿ. ಸೋನಿಯಾ ಗಾಂಧಿ ಬಹುಮತ ಹೊಂದಿದ ಪಕ್ಷದ ಪ್ರಶ್ನಾತೀತ ನಾಯಕಿಯಾದರೂ ದೇಶಾದ್ಯಂತ ವಿದೇಶಿ ಪ್ರಧಾನಿ ಬೇಡ ಎಂಬ ಕೂಗಿಗೆ ಮತ್ತೊಬ್ಬರನ್ನು ಪ್ರಧಾನಿ ಮಾಡಲೇಬೇಕಾಯಿತು. ನಾಮ್ ಕೇ ವಾಸ್ತೆ ಎಂಬಂತೆ ಮನಮೋಹನ ಸಿಂಗರನ್ನು ಗದ್ದುಗೆಯಲ್ಲಿ ಕೂರಿಸಿದರು. ಅವರು ಆ ಹುದ್ದೆಯ ಆಕಾಂಕ್ಷಿಯೂ ಆಗಿರಲಿಲ್ಲ. ಹಾಗೆ ನೋಡಿದರೆ ಪ್ರಣಬ್ ಮುಖರ್ಜಿ ಆ ಸ್ಥಾನಕ್ಕೆ ಯೋಗ್ಯರೂ ಹೌದು ಮತ್ತು ಮೂಲ ಕಾಂಗ್ರೆಸ್ಸಿಗರ ಆಶಾಕಿರಣವೂ ಹೌದು. ಆದರೆ ಸೋನಿಯಾರಿಗೆ ತಮ್ಮ ಮಂತ್ರದಂಡದಿಂದ ನಿಯಂತ್ರಣದಲ್ಲಿಡಬಲ್ಲ ಪ್ರಧಾನಿ ಬೇಕಾಗಿತ್ತು. ಯಾವ ರೀತಿ ಯಡಿಯೂರಪ್ಪ ತಮಗೆ ಎದುರುತ್ತರ ಕೊಡದ ಉತ್ತರಾಧಿಕಾರಿಯಾಗಿ ಸದಾನಂದ ಗೌಡರನ್ನು ಕೂಡಿಸಿ ಹೋದರೋ ಹಾಗೆ ಸೋನಿಯಾರ ಆಯ್ಕೆ ಮನಮೋಹನರಾಗಿದ್ದರು. ಅದೊಂದು ಆಯ್ಕೆಯಿಂದ ಯು.ಪಿ.ಎ ಸರ್ಕಾರದ ಸಾಲು ಸಾಲು ಹಗರಣಗಳಿಗೆ ಮೂಕಸಾಕ್ಷಿಯಾದರು.
ಅದಕ್ಕೆ ಹಲವು ಜನ ಈ ಕ್ಷೇತ್ರವೆಂದರೆ ದೂರ ಸರಿದು ಬಿಡುತ್ತಾರೆ. ಇತ್ತೀಚೆಗೆ ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣಮೂರ್ತಿಯವರ ಪತ್ನಿ ಹೆಸರಾಂತ ಸಾಹಿತಿ ಸುಧಾಮೂರ್ತಿಯವರನ್ನು ರಾಜ್ಯಸಭಾ ಸದಸ್ಯರಾಗುವಂತೆ ಒಂದು ಪಕ್ಷ ಮನವಿ ಮಾಡಿತ್ತು. ಅದನ್ನು ತಿರಸ್ಕರಿಸಿದ ಅವರು ” ನಾವು ಯಾವ ಪಕ್ಷದಿಂದ ಆಯ್ಕೆಯಾಗಿದ್ದೇವೆ ಎಂಬುದನ್ನು ಜನ ಗಮನಿಸುತ್ತಾರೆ ಅದಲ್ಲದೆ ಜನಸೇವೆ ಮಾಡಲು ರಾಜಕೀಯಕ್ಕೇ ಸೇರಬೇಕಾದ ಅವಶ್ಯಕತೆ ಇಲ್ಲ. ನಾವು ಅದನ್ನು ಇನ್ಫೋಸಿಸ್ ಸಂಸ್ಥೆಯ ಮೂಲಕವೂ ಮಾಡಿ ತೋರಿಸಿದ್ದೇವೆ”ಎಂದು ಹೇಳಿದರು. ಕರ್ನಾಟಕದ ಪಾಲಿಗೆ ಐದು ದಶಕಗಳ ಕಾಲ ಸುಪರ್ ಸ್ಟಾರ್ ಆಗಿ ಮೆರೆದ ಡಾ.ರಾಜ್’ಕುಮಾರ್ ಅವರಿಗೆ ಹಲವು ಭಾರಿ ಹಲವು ರಾಜಕೀಯ ಪಕ್ಷಗಳಿಂದ ಆಹ್ವಾನ ಬಂದರೂ ಅದಕ್ಕೆ ಅವರು ಸಮ್ಮತಿಸಲಿಲ್ಲ.
ರಾಜಕೀಯಕ್ಕೆ ಬಂದ ಮೇಲೆ ತಮ್ಮ ತಾರಾವರ್ಚಸ್ಸನ್ನು ಕಳೆದುಕೊಂಡ ಹಲವು ನಟನಟಿಯರಿದ್ದಾರೆ. ಒಂದು ಕಾಲದಲ್ಲಿ ಕನ್ನಡದ ನಂಬರ್ ೧ ನಟಿಯಾಗಿದ್ದ ಮೋಹಕತಾರೆ ರಮ್ಯಾ ಕೂಡಾ ಮಂಡ್ಯದ ಸಂಸದೆಯಾಗಿ ಆಯ್ಕೆಯಾದರು. ಅವರಿಗಿರುವ ರಾಜಕೀಯ ಕ್ಷೇತ್ರದ ಅಪ್ರಬುದ್ಧತೆಗೆ ನೊಗಭಾರದಂತಿರುವ ಮಾಜಿ ಸಂಸದೆಯೆಂಬ ಪಟ್ಟ ಅವರನ್ನು ಸುಮ್ಮನಿರಲು ಬಿಡಲಿಲ್ಲ. ತಮ್ಮದೂ ಒಂದು ಹೇಳಿಕೆಯಿರಲಿ ಅಂಥ ತೇಲಿ ಬಿಟ್ಟರು. ಅದು ಸಣ್ಣ ಪುಟ್ಟ ಮರಿಪುಢಾರಿಗಳ ಬಗ್ಗೆ ಅಥವಾ ತಮ್ಮದೇ ಜಿಲ್ಲೆಯ ಬಗ್ಗೆಯೋ ಹೇಳಿದ್ದರೆ ಪ್ರಕರಣ ದೊಡ್ಡದಾಗುತ್ತಿರಲಿಲ್ಲ. ಬಿಜೆಪಿಯಲ್ಲಿ ಹೆಸರು ಗಳಿಸಿರುವ ಮನೊಹರ್ ಪರಿಕರ್ ಅವರ ಹೇಳಿಕೆಯನ್ನೇ ಖಂಡಿಸಿದರು. ಪಕ್ಷಭೇದವಿಲ್ಲದೇ ಇಡೀ ರಾಷ್ಟ್ರಕ್ಕೆ ಶತ್ರುವಾದ ಪಾಕಿಸ್ತಾನದ ಗುಣಗಾನ ಮಾಡಿದರು. ಪರಿಕರ್ ಅವರ ಹೇಳಿಕೆ ಯಾವ ಆಯಾಮಕ್ಕೆ ಸೇರಿದ್ದು ಯಾವ ದೃಷ್ಟಿಕೋನದ್ದು ಎಂದರಿಯದೇ ತಮ್ಮ ಹೇಳಿಕೆಯನ್ನು ತೇಲಿ ಬಿಟ್ಟರು. ಯಾರನ್ನೋ ಖಂಡಿಸುವ ಭರದಲ್ಲಿ ತಮ್ಮ ಅಪ್ರಬುದ್ಧತೆಯನ್ನು ತಾವೇ ತೋರಿಸಿಕೊಟ್ಟರು. ಇದನ್ನೇ ಆಹಾರವಾಗಿಸಿಕೊಂಡ ಮಾಧ್ಯಮದ ಮಂದಿ ರಮ್ಯಾ ಅವರ ಕಂಠವನ್ನು ಬಂಧಿಸಿ ಹೊಸದೊಂದು ಹೇಳಿಕೆಯನ್ನು ಕಕ್ಕುವಂತೆ ಮಾಡಿದವು. ಅಲ್ಲಿಗೆ ಅವರಿಗಿದ್ದ ಅಲ್ಪಸ್ವಲ್ಪ. ತಾರಾವರ್ಚಸ್ಸೂ ಹೊರಟು ಹೋಯಿತು.
ಹೆಸರಾಂತ ಮಾತುಗಾರ ಮತ್ತು ಬರಹಗಾರರಾದ ಶಿವ್ ಖೇರಾ ಎಂಬ ಹೆಸರಿನವರೊಬ್ಬರಿದ್ದಾರೆ. “How to win” ಎಂಬುದರ ಬಗೆಗಿನ ಅವರ ಭಾಷಣಗಳು ಸೋತವರಿಗೆ ಗೆಲುವಿನ ದಾರಿ ಕಂಡುಕೊಳ್ಳಲು ಪ್ರೇರಣೆಯಾಗಿವೆ. ಬರೀ ಭಾರತ ಮಾತ್ರವಲ್ಲದೆ ವಿಶ್ವದ ಹಲವು ಭಾಗಗಳಲ್ಲಿ ಗೆಲ್ಲುವುದರ ಬಗ್ಗೆಯೇ ಭಾಷಣ ಮಾಡಿ ಬರುತ್ತಿದ್ದರು. ಹಲವಾರು ಪುಸ್ತಕಗಳನ್ನು ಬರೆದು ಬಹು ಜನರನ್ನು ಪ್ರೇರೆಪಿಸಿದ್ದರು. ಅಂಥವರು ೨೦೦೪ರಲ್ಲಿ ದೆಹಲಿಯ ದಕ್ಷಿಣ ಭಾಗದಿಂದ ಚುನಾವಣೆಗೆ ನಿಂತು ಅತೀ ಹೀನವಾಗಿ ಸೋತು ಹೋದರು. ಬರೆಯೋದೇ ಬೇರೆ ಭಾಷಣವೇ ಬೇರೆ ರಾಜಕೀಯ ಕ್ಷೇತ್ರವೇ ಬೇರೆ. ಅಷ್ಟು ದೂರದ ಮಾತೇಕೆ ನಮ್ಮದೇ ರಾಜ್ಯದ ಪ್ರಖ್ಯಾತ ಬರಹಗಾರ ಪ್ರತಾಪ ಸಿಂಹ ಬರೀ ನಮ್ಮ ದೇಶದ ನಾಯಕರನ್ನಷ್ಟೇ ಅಲ್ಲ ಬೇರೆ ದೇಶದ ಪ್ರಖ್ಯಾತ ನಾಯಕರನ್ನು ತಮ್ಮ ಬರಹದ ವಸ್ತುವಾಗಿಸಿಕೊಂಡು ತಪ್ಪನ್ನು ಎತ್ತಿ ತೋರಿಸುತ್ತಿದ್ದರು. ಇವತ್ತಿಗೂ ನಾನು ಅವರ ಬರಹದ ಅಭಿಮಾನಿಯೇ. ಯಾವ ಬಿಜೆಪಿಯ ಪಕ್ಷದಿಂದ ಇವತ್ತು MP ಆಗಿದ್ದಾರೋ ಅದೇ ಬಿಜೆಪಿಯನ್ನು ತಮ್ಮ ಹರಿತವಾದ ಲೇಖನಿಯಿಂದ ಇರಿದಿದ್ದರು. ತಪ್ಪೆಂದರೆ ಯಾವುದೇ ಪಕ್ಷವನ್ನೂ ನೋಡದೇ ಬರೆದು ಬಿಡುತ್ತಿದ್ರು. ಆದರೆ ಈಗ ಅದು ಕಷ್ಟವಾಗುತ್ತಿದೆ. ಮಹದಾಯಿ ಸಮಸ್ಯೆಯ ಬಗೆಗಿನ ಲೇಖನದಲ್ಲಿ ಮೋದಿಯವರದು ಏನು ತಪ್ಪಿಲ್ಲ ಅಂತ ಸಮರ್ಥಿಸಿಕೊಂಡರೆ ಹೊರತು ಸಮಸ್ಯೆಯ ಬಗ್ಗೆ ಪೂರ್ವಾಪರಗಳನ್ನು ವಿಮರ್ಶಿಸಿ ಬರೆಯೋಕೆ ಆಗದ ಪರಿಸ್ಥಿತಿ ಅವರಿಗಿತ್ತು. ಇದೇ ಪ್ರತಾಪರು ಅಕಾಸ್ಮಾತ್ MP ಆಗಿರದೇ ಹೋಗಿದ್ದರೆ ಕಾವೇರಿ ವಿಷಯವಾಗಿ ಕಾಂಗ್ರೆಸ್ ನಾಯಕರು ಕರೆದ ಸರ್ವಪಕ್ಷ ಸಭೆಗೆ ಬಿಜೆಪಿ ಹೋಗದಿದ್ದನ್ನೆ ವಿಷಯ ವಸ್ತುವಾಗಿಸಿಕೊಂಡು ಒಂದು ವಾರದ ಲೇಖನ ಬರೆಯುತ್ತಿದ್ದರೋ ಏನೊ ಆದರೆ ಕಲ್ಲು ಹೊಡೆಯಲಾಗದ ರಾಜಕೀಯ ಪಕ್ಷದ ಗಾಜಿನಮನೆಯಲ್ಲಿ ಕುಳಿತ ಬರಹಗಾರನಿಗೆ ಅದು ಸಾಧ್ಯವಾಗಲಿಲ್ಲ. ಮೈಸೂರು ಮತ್ತು ಸುತ್ತಲಿನ ಭಾಗಕ್ಕೆ ಅವರು MPಯಾಗಿ ಕೆಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂಬುದು ಸ್ಥಳೀಯರ ಅಭಿಪ್ರಾಯ ,ಅವರೊಬ್ಬ ಪ್ರಾಮಾಣಿಕ ರಾಜಕಾರಣಿಯೂ ಆಗಿರಬಹುದು. ಆದರೆ ಪ್ರಾಮಾಣಿಕರಿಗೆ ರಾಜಕೀಯದಲ್ಲಿ ನೆಲೆಯಿಲ್ಲ ಎಂಬುದು ಅವರಿಗೆ ಮನದಟ್ಟು ಆಗಿರಲಿಕ್ಕೂ ಸಾಕು. ಈ ಹಿಂದೆ ಅವರು ಬರೆದ ಲೇಖನಗಳನ್ನೊಮ್ಮೆ ತಿರುವಿ ಹಾಕಿದರೆ ಬಹುಷಃ ಅವರಿಂದ ಟೀಕಿಸಲ್ಪಟ್ಟ ಎಲ್ಲಾ ನಾಯಕರಿಗೂ ಪ್ರತಾಪ್ ಅವರು ಸದ್ಯಕ್ಕೆ ಎದುರಿಸುತ್ತಿರುವ ಪರಿಸ್ಥಿತಿಯನ್ನೆ ಆ ನಾಯಕರು ಮೊದಲು ಅನುಭವಿಸಿದ್ದಾರೆ ಎಂಬುದನ್ನು ಅರಿತಿರಲಿಕ್ಕೂ ಸಾಕು.
ಕಮಲದ ಆಸೆಯಿಂದ ಅದರ ಹತ್ತಿರಕ್ಕೆ ಹಾರಿ ಬಂದ ರಾಜಹಂಸ ತನಗರಿವಿಲ್ಲದಂತೆಯೇ ಅಥವಾ ಅರಿತರು ಎನೂ ಮಾಡಲಾಗದೇಯೇ ಮೈಗೆ ಕೆಸರು ಮೆತ್ತಿಕೊಂಡಂತೆ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಹೆಸರಿಗೆ ಕಳಂಕ ತಂದುಕೊಂಡವರು ಸುಮಾರು ಜನ ಅವರ ಪಟ್ಟಿಗೆ ಅಂತ್ಯವಿಲ್ಲ. ಕೆಲವು ಜನ ಮುಂದಾಗುವುದನ್ನು ಅರಿತು ಈ ಕ್ಷೇತ್ರಕ್ಕೆ ಕಾಲಿಡದೇ ದೂರವುಳಿದಿದ್ದಾರೆ. ನಮಗೊಗ್ಗದ ಕ್ಷೇತ್ರಕ್ಕೆ ಬಂದು ಪರದಾಡುವುದಕ್ಕಿಂತ ದೂರವುಳಿಯುವುದೇ ಲೇಸು ಅಲ್ಲವೇ?