ಕಾದು ಕುಂತಿದೆ ಕಾಲನ ಕುಣಿಕೆ
ಕಾಲ ಮೇಲೆ ಕಾಲು ಹಾಕಿಕೊಂಡು
ಕಟ್ಟ ಕಡೆಯ ಸರಹದ್ದಿನಲಿ
ಕಾವಲು ಕಾಯುವ ಸೈನಿಕನ ನೋಡಿ
ಕ್ರೂರ ನಗುವಿನ ಕರಾಳ ಮಾರ್ದನಿ
ಕೂಳ ಸಮಯದ ಕುತಂತ್ರ ಅನಿ
ಸುತ್ತ ಆವರಿಸಲು ಕುಲೋಚನ ಕಾಂತಿ
ಬರುತಿದೆ ಹತ್ತಿರತ್ತಿರ ಸಾವಿನ ಅಡಿ
ಸದ್ದು ಮಾಡುತಿರಲು ಸ್ಫೋಟದ ಆಟ
ಎದ್ದು ನಿಂತಿದೆ ಕಾವಲಿನ ನೋಟ
ಹೊತ್ತಿ ಉರಿಯುತಿರೆ ಹಿಮದ ಶಯನ
ಯೋಧ ಬಯಸಿಹನು ಶತ್ರುವಿನ ಪ್ರಾಣ
ಹೊಕ್ಕಿತೊಂದು ಲೋಹದ ಗುಂಡು
ವೀರ ಯೋಧನ ಎದೆಯ ಕಂಡು
ಕಿಕ್ಕಿರಿದು ನಗಲು ಕಾಲನ ಉರುಳು
ಸುತ್ತುವರಿಯಲು ಕೆಚ್ಚೆದೆಯ ಕೊರಳು
ಮುಗಿದಿಲ್ಲ ಇನ್ನೂ ಹೋರಾಟದ ಹಾದಿ
ಬೆಂಕಿ ಮಳೆಗರೆಯಲು ಬಂದೂಕಿನ ತುದಿ
ಭೋರ್ಗರೆದು ಹರಿಯಲು ಶತ್ರುರುದಿರ ನದಿ
ಕಾಲನೂ ಕರಗಿದನೊಮ್ಮೆ ಈ ಸಾಹಸದಿ
ಕೊನೆಗೂ ಕೆಳಗೆ ಬಿದ್ದಿತು ಆ ದೇಹ
ಬಿಟ್ಟು ಹೊರಟಿತು ಜನನಿಯ ಗೇಹ
ಮೌನವಾಯಿತು ಕಾಲನ ಕುಹಕ
ಸತ್ತು ಗೆದ್ದಿಹನು ಕಾಯುವ ಸೈನಿಕ
ಸತ್ತು ಗೆದ್ದಿಹನು ಕಾಯುವ ಸೈನಿಕ…